ಆತುಕೊಂಡ ಮಳೆ ಹನಿ-ಶೀನಿವಾಸ ಶೆಟ್ಟಿ (ವೀವೆಂಶ್ರೀ)

[ದೇವನೂರ ಮಹಾದೇವ ಅವರ ಭದ್ರತೆಗಾಗಿ ನಿಯೋಜನೆಗೊಂಡಿರುವ ಪೊಲೀಸ್ ಇಲಾಖೆಯ ಶ್ರೀನಿವಾಸ್ ಅವರಿಗೆ ಸಾಹಿತ್ಯದ ಓದಿನಲ್ಲಿ ಅಪರಿಮಿತ ಆಸಕ್ತಿ. ಲೇಖನ, ಕವನಗಳನ್ನೂ ಬರೆದಿದ್ದಾರೆ. ಜುಲೈ 2024ರ  “ಆರಕ್ಷಕ ಲಹರಿ” ಮಾಸಿಕದಲ್ಲಿ ಪ್ರಕಟವಾದ ಅವರದೊಂದು ಕವಿತೆ ನಮ್ಮ ಓದಿಗಾಗಿ…]

 

ಆತುಕೊಂಡ ಮಳೆ ಹನಿ
ಹುಡುಕುತ್ತಲೇ ಬಂದೆ, ಕಂಡೂ ಕಂಡೂ,
ಇವರ್ಯಾರೋ
ಎದುರಾದೊಡನೆ ಇವರೇನಾ.?!
ಹಣೆಮುಟ್ಟಿ ಕವಡೆ ಬಿಟ್ಟಂತೆ ನುಡಿವ ದ್ಯಾವರ ಗುಡ್ಡಪ್ಪ
ತಡಕಿದೆ,
ಕಂಡಿದ್ದು ಬರೀ ದೇಹ,
ದಡಕ್ಕೆ ಅಪ್ಪಳಿಸಿದ ಅಲೆ ಅಲೆಯ ಕ್ರಾಪು,
ಬೆರಳಕಡ್ಡಿಗೆ ಧೂಮ, ಒಡಲು ತುಂಬಿದ ಸಂಕಟ,
ಮುಂಜಾವಿನಂತಿದ್ದ ಇಳಿಸಂಜೆ.
ಕಂಡಷ್ಟು ಕೆದಕಿದೆ,
ಮೊದಲೇ ಕತ್ತಲ ತಿರುವಿನ ನಸುಬೆಳಕು,
ಕಂಡೇ,
ಮಾರಿಕೊಂಡ ಗ್ರಸ್ತರಲ್ಲಿ,
ದಹಿಸಿದ ಡಾಂಬರಿನಲ್ಲಿ, ಹಸಿದ ಅಮಾಸನಲ್ಲಿ,
ಒಣಗಿ-ಸದ್ದಡಗಿದ ಗಂಟಲಲ್ಲಿ,
ಬಲಿಗಿತ್ತ ಆಡಿನ ಕಂಗಳಲ್ಲಿ,
ತಳಬೆಂದು ಕುದಿದ ಒಡಲಾಳದಲ್ಲಿ,
ಎಷ್ಟೆಲ್ಲಾ ಒಟ್ಟುಗೂಡಿಸಿದೆ,
ಆಗಲೇ ಅಲ್ಲೀ…,
ಎದೆಗೆ ಬಿದ್ದ ಅಕ್ಷರದಲ್ಲಿ,
ಭೂಮಿ ಆತುಕೊಂಡ
ಮಳೆಹನಿಯಂತೆ.!
ಶೀನಿವಾಸ ಶೆಟ್ಟಿ (ವೀವೆಂಶ್ರೀ)