ಅಶೋಕ ಶೆಟ್ಟರ್ ಕಾಲಂ : ‘ಎದೆಗೆ ಬಿದ್ದ ಅಕ್ಷರ’ ಲೋಕದಲಿ ಒಂದಿಷ್ಟು…
[ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕೃತಿ ಕುರಿತು 5.2.2014ರಂದು ಅವಧಿ ವೆಬ್ ಪೋರ್ಟಲ್ ನಲ್ಲಿ ಅಶೋಕ ಶೆಟ್ಟರ್ ಅವರು ಬರೆಯುತ್ತಿದ್ದ ಅಂಕಣದಲ್ಲಿ ಬರೆದಿದ್ದ ಬರಹ ನಮ್ಮ ಮರು ಓದಿಗಾಗಿ ]
“ಕೆಲ ವರ್ಷಗಳ ಹಿಂದೆ ನನಗೆ ಗೊತ್ತಿದ್ದ ದಲಿತ ಸಂಘಟನೆಯಲ್ಲಿದ್ದ ಸ್ನೇಹಿತನೊಬ್ಬನ ಕೊಲೆಯಾಯಿತು. ಆತ ಕೊಲೆಯಾದ ಸ್ಥಳಕ್ಕೆ ಹೋಗಿ ನೋಡಿದರೆ ಆ ಸ್ಥಳದಲ್ಲಿದ್ದ ಗೋಡೆಗಳಿಗೆ ಸುಣ್ಣ ಬಳಿಯಲಾಗಿತ್ತು. ಅಲ್ಲಿದ್ದ ಒಬ್ಬ ಮುದುಕಿ ’ನೀವು ಎರಡು ದಿನ ಮುಂಚೆ ಬಂದಿದ್ದರೆ ರಕ್ತದ ಕಲೆಗಳನ್ನು ನೋಡಬಹುದಿತ್ತು’ ಎಂದಳು. ಆ ಕ್ಷಣ ನನಗೆ ’ಗೋಡೆಗೆ ಸುಣ್ಣ ಬಳಿದ ಮಾತ್ರಕ್ಕೆ ರಕ್ತದ ಕಲೆಗಳು ಉಳಿಯುವುದಿಲ್ಲವೇ?’ ಅನ್ನಿಸಿ ಅದು ಒಳಗೇ ಬೆಳೆಯತೊಡಗಿತು” ತನ್ನ ಕಥೆಗಳಲ್ಲಿ ತಾನೆಲ್ಲಿರಬಹುದು? ಎಂಬ ಹುಡುಕಾಟದಲ್ಲಿ ತಮ್ಮ “ಕುಸುಮಬಾಲೆ” ತಮ್ಮೊಳಗೆ ರೂಪುಗೊಂಡ ಎಳೆಗಳಲ್ಲೊಂದರ ಕುರಿತು ಹೇಳುತ್ತ ದೇವನೂರು ಮಹಾದೇವ ಬರೆದ ಬರಹವೊಂದರ ಸಾಲುಗಳಿವು. ಸಾಹಿತಿ ಯು.ಆರ್.ಅನಂತಮೂರ್ತಿಯವರಿಗೆ ಎಂಬತ್ತು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಅವರ ಗೌರವಾರ್ಥ ಬೆಂಗಳೂರಿನ “ಅಭಿನವ” ಪ್ರಕಾಶನ ಯೋಜಿಸಿದ ಗ್ರಂಥ ಮಾಲೆಯ ಮೊದಲ ಪ್ರಕಟಣೆಯಾಗಿ ಬಂದ ಪುಸ್ತಕ “ಎದೆಗೆ ಬಿದ್ದ ಅಕ್ಷರ”. ಈ ಪುಸ್ತಕ ದೇವನೂರು ಮಹಾದೇವರ ಬರಹ ಭಾಷಣಗಳ, ಸಮಗ್ರ ಎನ್ನಬಹುದಾದ, ಏಕೈಕ ಸಂಕಲನವೂ ಹೌದು. 2012ರ ಕೊನೆಯಲ್ಲಿ ಪ್ರಕಟವಾದ ಈ ಕೃತಿ ದೇವನೂರರ ಚಿಂತನೆ, ಗ್ರಹಿಕೆ, ಆಶೆ, ನಿರಾಶೆ, ಭರವಸೆ, ನೋವು, ಆತಂಕ, ತಮಾಷೆ, ಗೊಂದಲಗಳನ್ನೆಲ್ಲ ಕಟ್ಟಿಕೊಡುವ ಕೃತಿ. ಈ ಪುಸ್ತಕದಲ್ಲಿರುವ ಬರಹವೊಂದರಲ್ಲಿ ಮೇಲ್ಕಂಡ ಸಾಲುಗಳಿವೆ..
ಈ ಪುಸ್ತಕದಲ್ಲಿ ತಮಿಳ್ನಾಡಿನ ಮೀನಾಕ್ಷಿಪುರಂ ಎಂಬಲ್ಲಿ ನಡೆದ ದಲಿತರ ಮತಾಂತರದ ಸಂದರ್ಭದಲ್ಲಿ ನಡೆದ ವಿದ್ಯಮಾನಗಳ ಸಂದರ್ಭದಲ್ಲಿ ಬರೆದ ಇನ್ನೊಂದು ಬರಹ ಹೀಗೆ ಪ್ರಾರಂಭವಾಗುತ್ತದೆ: (ಇದು ಇಲ್ಲಿರುವ ಬರಹಗಳ ಶೈಲಿಗಳಲ್ಲೊಂದರ ಸ್ಯಾಂಪಲ್ಲೂ ಹೌದು): “ಕಾಲನು, ಭಾರತಮಾತೆಯ ಹಣೆಯಲ್ಲಿ ತಮಿಳುನಾಡಿನ ಮೀನಾಕ್ಷಿಪುರಂ ಎಂಬ ಊರಿನ ಹೆಸರನ್ನು ರಹಮತ್ ನಗರ್ ಎಂದು ತಿದ್ದಿ ಆ ಬರಹಾ ಬರೆದು ಮುಂದಿನ ನಡಿಗೆಗೆ ಕಣ್ಸನ್ನೆ ಮಾಡಿ ಹೋದನು.ಮೀನಾಕ್ಷಿಪುರಂ ರಹಮತ್ ನಗರವಾಗುವ ಮುನ್ನ ಗುಜರಾತ್ ಬೆಂಕಿ ಸುಡುತ್ತಿತ್ತು. ಇದಾಗುವಾಗ ಇಲ್ಲಿ ಹೊಳೆನರಸಿಪುರದಲ್ಲಿ ಹಿಂದೂ ಮತ್ತು ದಲಿತರ ಗಲಾಟೆ..” ಆ ಗಲಾಟೆಯ ಸತ್ಯಶೋಧನೆಗೆ ಹೋದಾಗ ಅಲ್ಲಿ ದೈವಭಕ್ತನಾಗಿದ್ದವನೊಬ್ಬ “ಮುಸ್ಲಿಮರಾಗದೇ ದಲಿತರಿಗೆ ಉಳಿಗಾಲವಿಲ್ಲ” ಎಂದುದನ್ನು ಒಪ್ಪದೇ “ಧರ್ಮಗಳಲ್ಲ ನಮಗೆ ಬೇಕಿರುವದು, ಎಲ್ಲ ಧರ್ಮಗಳನ್ನು ವಿರೋಧಿಸಬೇಕು” ಎಂದು ಇವರೆಂದರೆ “ಅದಕ್ಕಾದರೂ ಮೊದಲು ನಾವು ಉಳೀಬೇಕಲ್ಲ, ಉಳಿಯುವದಕ್ಕೆ ಮುಸ್ಲಿಮರಾಗಬೇಕು” ಎನ್ನುತ್ತಾನೆ ಅವನು.
ಅದನ್ನು ಒಪ್ಪದೇ ಹೋದರೂ ಅದರಲ್ಲಿನ ಕಟುಸತ್ಯ ಇವರ ಮನಸನ್ನು ಕೊರೆಯುತ್ತದೆ. ಏಕೆಂದರೆ ವಾಸ್ತವ ಕಣ್ಣು ಮುಂದಿದೆ. ದೇವನೂರು ಬರೆಯುತ್ತಾರೆ: “ದಲಿತರು ನೋಡಲು ಚೆನ್ನಾಗಿದ್ದಾರೆ ಎಂಬುದಕ್ಕೆ ಹೊಡೆತ ತಿಂದಿದ್ದರು. ಸವರ್ಣೀಯ ಹುಡುಗೀನ ಪ್ರೀತಿಸಿದ್ದಕ್ಕೆ ಕೊಲೆಯಾಗಿದ್ದರು. ಪಂಚಾಯ್ತಿ ಅಧ್ಯಕ್ಷರಾಗಿದ್ದಕ್ಕೆ ಜೀವ ತೆತ್ತಿದ್ದರು. ಅಸ್ಪೃಶ್ಯರ ದೇಹಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ, ಆ ಉರಿಯುವ ದೇಹವು ಸವರ್ಣೀಯ ಸಸ್ಯಾಹಾರಿ ಅಹಿಂಸಾವಾದಿಗಳಿಗೆ ಆಹಾರವಾಗಿತ್ತು. ಗಂಗಾಜಲ ತರುತ್ತಿದ್ದ ಅಸ್ಪೃಶ್ಯರನ್ನು ಕೊಲ್ಲಿಸಲು ವಿಪ್ರನು ಡಕಾಯಿತರೊಡನೆ ಅಡ್ಡಗಟ್ಟಿ,ಡಕಾಯಿತರೇ ಕೊಲೆ ಮಾಡಲು ಹಿಂದೆಗೆಯುತ್ತಿದ್ದಾಗ ಕ್ರೂರ ವಿಪ್ರನು ’ಧರ್ಮ ಉಳಿಸುವದಕ್ಕಾಗಿ” ಎಂದು ಕೊಲ್ಲಿಸಿದ್ದನು. ಊರಾಚೆಯವರ ಮದುವೆ ದಿಬ್ಬಣ ಊರೊಳಕ್ಕೆ ಬಂದುದಕ್ಕಾಗಿ ಹದಿನಾಲ್ಕು ಜನ ಜೀವ ತೆತ್ತು, ರಕ್ತವು ಬಿಹಾರದ ಬೆಲ್ಚಿ ಹತ್ಯಾಕಾಂಡಕ್ಕಿಂತ ಕ್ರೂರವಾಗಿ ಚೆಲ್ಲಾಡಿತ್ತು.” ಆಮೇಲೆ ತಣ್ಣಗಿನ ದನಿಯಲ್ಲಿ ಮಹಾದೇವ ಹೇಳುವದು: “ಪ್ರಾಣಿದಯಾಸಂಘದವರಾದರೂ ಈ ಬಗ್ಗೆ ಮಾತಾಡಲಿಲ್ಲ. ಇದನ್ನು ಎಲ್ಲರೂ ತುಂಬ ಸಹಜವೆಂಬಂತೆ ಸಹಜವಾಗಿ ಮರೆತರು.”ಮತ್ತೆ ಯಥಾಪ್ರಕಾರದ ಗೊಂದಲ-ಗೋಜಲುಗಳ ವಾಸ್ತವಗಳ ಯೋಚನೆ ಇವರನ್ನು ಮುತ್ತುತ್ತದೆ. ಮೀನಾಕ್ಷಿಪುರಂ ರಹಮತ್ ನಗರವಾಗುವದು ನಮ್ಮ ಪ್ರಾಣದ ಉಳಿವಿಗೆ ಒಂದು ಆಶೆ ಎನಿಸುವದರ ಜೊತೆಗೇ ಸರಳಭಾವುಕರಾದ ಮುಸ್ಲಿಮರ, ಅವರ ಸೋದರತೆಯ ಬಗ್ಗೆ ಪ್ರೀತಿ ಇದ್ದರೂ ಅವರ ಮತನಿಷ್ಠೆ ಮತ್ತು ಇಸ್ಲಾಂ ಧರ್ಮದ ಹಿಡಿತದ ಆತಂಕ, ಖೋಮೇನಿ ಕನಸಲ್ಲಿ ಬಂದು “ಸೋಷಲಿಸ್ಟರೇ ನೀವೇ ನನ್ನ ಮೊದಲ ಬಲಿ” ಅನ್ನುತ್ತಿರುವಂಥ ಭೀತಿ, ತಮಗೆ ಪ್ರಿಯವಾದ ಬೌದ್ಧ ಧರ್ಮದೆಡೆಗೆ ನೋಡಿದರೆ ಗುಜರಾತ, ಮಹಾರಾಷ್ಟ್ರದಲ್ಲಿ ದಲಿತರ ದೇಹ ಬೌದ್ಧರಾಗೂ ಅಸ್ಪೃಶ್ಯ ಎಂದು ಸುಡಿಸಿಕೊಳ್ಳುವ ವಸ್ತುವಾಗಿರುವದು..,ಈ ಎಲ್ಲ ಯೋಚನೆಗಳ ನಡುವೆ ಮತಾಂತರಕ್ಕೆ ಅಭ್ಯಂತರವಿಲ್ಲೆಂದು ದಲಿತ ಸಂಘರ್ಷ ಸಮಿತಿ ಕೈಗೊಂಡ ನಿರ್ಧಾರ, ಇನ್ನೊಂದೆಡೆ ಹರಿವ ನೀರನು ತಡೆಯಲು ಚಡ್ಡಿ ಧರಿಸಿಕೊಂಡು ಒಂದು ಕೈಲಿ ಲಾಠಿ ಹಿಡಿದು ಇನ್ನೊಂದು ಕೈಲಿ ರಾಖಿ ಹಿಡಿದು ಓಡಾಡುತ್ತಿರುವ ದೊಣ್ಣೆ ನಾಯಕರು..”ಹೀಗಾಗಿ ಯಾವ ಮತವೂ ಬೇಡ ಅನ್ನುವ ನನ್ನ ನಾಲಿಗೆಯು ನನ್ನ ಜನರ ಪ್ರಾಣಪಕ್ಷಿ ಮತ್ತು ಛಿದ್ರರಾಗಿರುವ ದಲಿತ ಸಮುದಾಯಗಳು ಕನಿಷ್ಠ ಹೀಗಾದರೂ ಒಂದಾಗಬಹುದಾದ ಆಶೆಯಿಂದಾಗಿ ಮತಾಂತರ ಬೇಡ ಎಂದು ನುಡಿಯದಂತಾಗಿದೆ.” ಎಂದು ಕೊನೆಗೊಳ್ಳುವ ಈ ಪುಸ್ತಕದ ಹಲವು ಬರಹಗಳು ಭಾರತದ ಸಮಾಜ,ಸಾಮಾಜಿಕ ಚರಿತ್ರೆಯ ಒಂದು ಕುರೂಪಿ ಮುಖದ ಕುರಿತ ನೋವಿನ ಭಾಷ್ಯಗಳೂ ಹೌದು.
ಇಲ್ಲಿಯ ಕೆಲವು ಆರಂಭಿಕ ಬರಹಗಳ ಆಯುಷ್ಯ ಸುಮಾರು ನಲವತ್ತು ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ. ’ಹಿಂದಿನ’ ಬರಹಗಳನ್ನು ಪುಸ್ತಕರೂಪದಲ್ಲಿ ಸಂಕಲಿಸಿದ್ದನ್ನೇ ಕೆಲವರು ಇದು ಮಾನವನು ಆಸ್ಟ್ರೆಲೊಪಿಥೆಕಸ್ ಎರೆಕ್ಟಸ್ ಎಂಬ ಯಾವುದೋ ಆದಿಮ ಹಳೇಶಿಲಾಯುಗದ ಅಥವಾ ಅದರ ಮುಂಚಿನ ಹಂತದಲ್ಲಿ ಇದ್ದ ಕುರಿತಾಗಿ ಮಹಾದೇವರು ಬರೆದ ಬರಹಗಳ ಸಂಗ್ರಹವೋ ಎಂಬಂತೆ ಅದನ್ನೇ ಈ ಪುಸ್ತಕದ ಕುರಿತ ಟೀಕೆಯ ಪ್ರಶಸ್ತ ಅಂಶವನ್ನಾಗಿ ಮಾಡಿಕೊಂಡದ್ದೂ ಉಂಟು. ವಾಸ್ತವವೇನೆಂದರೆ ಮಹಾದೇವ ಬರೆದ ಈ ಬರಹಗಳು ಹಾಗೂ ಮಾಡಿದ ಭಾಷಣಗಳೆಲ್ಲವೂ ಸ್ವಾತಂತ್ರ್ಯೋತ್ತರ ಭಾರತದ ಸಾಮಾಜಿಕ ಸ್ಥಿತಿಗತಿಗಳ ಕುರಿತ ಚಿಂತೆ-ಚಿಂತನೆಗಳು!. (ಸ್ವಾತಂತ್ರ್ಯೋತ್ತರ ಭಾರತದ ಕುರಿತ ಮಾತು ಯಾವಾಗ ಹಿಂದಿನದಾಗಿ ಅಪ್ರಸ್ತುತವಾಗಿ ಹೋಯಿತೋ ನಾ ಕಾಣೆ!). ಒಂದು ನಿಟ್ಟಿನಲ್ಲಿ ವಾಸ್ತವದ ಚೌಕಟ್ಟಿನಲ್ಲಿ ಭೂತ-ವರ್ತಮಾನ-ಭವಿಷ್ಯಗಳ ಕುರಿತು ತಮ್ಮೊಂದಿಗೆ ತಾವೇ ಮಾತಾಡಿಕೊಂಡಂತೆ ಮತ್ತು ಇನ್ನೊಂದು ನಿಟ್ಟಿನಲ್ಲಿ ಇತರರೊಂದಿಗೆ ನಡೆಸಲೆಳಸಿದ ಸಂವಾದಗಳಂತೆ ಇವೆ ಇಲ್ಲಿಯ ಬರಹಗಳು. ತಮ್ಮ ಅನುಭವ-ಅಧ್ಯಯನಗಳಿಂದ ಸಾಧ್ಯವಾದ ಗ್ರಹಿಕೆಗಳ ಆಧಾರದ ಮೇಲೆ ಎಳೆಯರಿಗೆ, ತರುಣರಿಗೆ ನೀಡಿದ ಮಾರ್ಗದರ್ಶನದ, ಸಲಹೆ-ಸೂಚನೆಗಳ ಸ್ವರೂಪದ ಬರಹಗಳೂ ಇಲ್ಲಿವೆ. ಎಂ.ಎ.ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಂಥ ಅತ್ಯಂತ ಪುಟ್ಟ ಕಾರ್ಯಕ್ರಮದಲ್ಲಿ ಪಂಪನ ಬಗ್ಗೆ ಅವನ ಕೃತಿಗಳ ಬಗ್ಗೆ ಅರೆ ಗಾಂಭೀರ್ಯ ಅರೆ ತಮಾಷೆಯಿಂದ ಅವರು ಆಡಿದ ಮಾತುಗಳ ಬರಹ ರೂಪದಿಂದ ಹಿಡಿದು ಸಂಸ್ಕೃತಿಯ ಕುರಿತು ಚಿಂತನೆ ನಡೆಸುವ ಸೆಮಿನಾರ್ ಗಳಲ್ಲಿ ಮಾಡಿದ ಉದ್ಘಾಟಣಾ ಭಾಷಣಗಳ ವರೆಗೆ ಹಲವು ವೈವಿಧ್ಯಮಯ ಸಂದರ್ಭಗಳನ್ನು ಇಲ್ಲಿಯ ಬರಹಗಳು ದಾಖಲಿಸುತ್ತವೆ. ಅವೆಲ್ಲ ಸಾಂದರ್ಭಿಕವಾದ್ದರಿಂದ ಅಕೆಡಮಿಕ್ ಬರವಣಿಗೆಯ ಕ್ರಮದಿಂದಲೂ ಹಂಗಿನಿಂದಲೂ ಮುಕ್ತವಾಗಿವೆ. ಅದರ ಬಗ್ಗೆ ದೇವನೂರರು ಸ್ಪಷ್ಟವಾಗಿದ್ದಾರೆ. “ಬುದ್ಧನೆಡೆಗೆ ಒಂದು ನಡಿಗೆ” ಎಂಬ ಬರಹದಲ್ಲಿ ಹೇಳುವಂತೆ “ಈ ಪ್ರಶ್ನೆ ಬಂದಾಗಲೆಲ್ಲಾ “ಬೌದ್ಧರಾದರೆ ಅಸ್ಪೃಶ್ಯತೆ ಹೋಗುತ್ತದಾ?” ಎಂಬ ಪುರಾತನ ಪ್ರಶ್ನೆಯೂ ಎದ್ದೇಳುತ್ತದೆ. ಇದರ ಬಗ್ಗೆ ಸಂಶೋಧನೆ ಮಾಡುವದು ಸಂಶೋಧಕರಿಗೆ ಬಿಟ್ಟದ್ದು”
ದೇವನೂರರಿಗೆ ಸುದೀರ್ಘವಾಗಿ ಮಾತನಾಡುವದರಲ್ಲಿ, ಬರೆಯುವದರಲ್ಲಿ ನಂಬಿಕೆ ಇಲ್ಲವೇನೋ ಎಂಬಂತೆ ಬಹುಪಾಲು ಬರಹಗಳು ತುಂಬ ಕ್ಲುಪ್ತವಾಗಿವೆ. ಒಂದು, ಒಂದೂವರೆ ಅಥವಾ ಎರಡು ಪುಟದಲ್ಲಿ ಮುಗಿದು ಹೋಗಿರುವಂಥವು ಬಹಳ ಇವೆ. ಇಲ್ಲಿ ಯಾವುದೇ ವಾದವನ್ನು ಬೆಳೆಸುವ, ವಿವರವಾಗಿ ವಿಶ್ಲೇಷಿಸುವ ಯತ್ನ ಕಂಡು ಬರುವದಿಲ್ಲ. ಆದರೆ ಅವುಗಳ ಬಂಧ ಸಾಂದ್ರವಾಗಿರುವದಷ್ಟೇ ಅಲ್ಲ ಸತ್ವವೂ ಗಟ್ಟಿಯಾಗಿದೆ. ಕಥೆಗಳ, ರೂಪಕಗಳ, ಸಂಕೇತಗಳ ಬಳಕೆಯ ಸೃಜನಶೀಲ ಭಾಷೆಯ ಜೀವದೃವ್ಯ ಉಳ್ಳ ಅವು ತಮ್ಮ ಕುರಿತು ಧ್ಯಾನಿಸುವ ಯೋಚಿಸುವ ಅನಿವಾರ್ಯತೆಯನ್ನು ಉಂಟುಮಾಡುತ್ತವೆ. ಕೆಲವು ಅತಿಭಾವುಕ, ಕೆಲವು ವಾಸ್ತವ, ಕೆಲವು ಅತೀ ಆದರ್ಶವಾದಿ ಹೀಗೆ ವಿವಿಧ ಹೊಳಹುಗಳನ್ನು ಅವರ ಯೋಚನೆಗಳು ಮೂಡಿಸುತ್ತವೆ. ಆದರೆ ಯಾವುದು ಮಾನವವಿರೋಧಿ, ಜೀವವಿರೋಧಿ, ಯಾವುದು ಜೀವಪರ, ಕರುಣಾರ್ದ್ರವೆಂಬುದು ಅವರಿಗೆ ಸ್ಪಷ್ಟ. ಹೀಗಾಗಿ ದೇವನೂರರಿಗೆ ತಮ್ಮ ಆಯ್ಕೆ ಆದ್ಯತೆಗಳ ಕುರಿತು ಗೊಂದಲಗಳಿಲ್ಲ. “ದಯೆಗಾಗಿ ನೆಲ ಒಣಗಿದೆ” ಎಂಬ ಚಿಕ್ಕ ಬರಹ “ಬುದ್ಧನಂತೂ ಯಾವ ಸಹಸ್ರಮಾನವನ್ನೂ ಮೀರಿದವನು”ಎಂದು ಪ್ರಾರಂಭವಾಗುತ್ತದೆ. ಆಮೇಲೆ ಒಬ್ಬೊಬ್ಬರಾಗಿ ಉಳಿದವರು ಬರುತ್ತಾರೆ- ಯಾರ ದೇಹದ ದಯೆಯ ರಕ್ತ ಭೂಮಿಗೆ ಬಿದ್ದು ಎರಡು ಸಾವಿರ ವರ್ಷವಾಯಿತೋ ಆ ಕ್ರಿಸ್ತ ಮತ್ತು ಅವನ ದಯೆ. ಆಮೇಲೆ ಎರಡನೆ ಸಹಸ್ರಮಾನದೊಳಗೆ ಅವರಿಗೆ ಕಾಣುವದು-ಹುಡುಕಿದರೂ ಜಗತ್ತಿನಲ್ಲೇ ಕರ್ನಾಟಕದ ಈ ಮಾದರಿ ಎಲ್ಲೂ ಸಿಗುವದಿಲ್ಲವೇನೋ ಅನ್ನಿಸುವಂಥ- ಹನ್ನೆರಡನೆ ಶತಮಾನದ ವಚನ ಆಂದೋಲನದ ಆ ಇಪ್ಪತ್ತೈದು ವರ್ಷಗಳು. (“ಈ ವಚನಧರ್ಮವನ್ನು ಜಾತಿಯ ಬಚ್ಚಲಿನಿಂದ ಮೇಲೆತ್ತಿ ರಕ್ಷಿಸಿದರೆ ಇದು ಜಗತ್ತಿಗೇ ಬೆಳಕಾಗಬಹುದೇನೋ. ಇದು ಜಾತಿಯಾದರೆ ಕೆಟ್ಟ ಜಾತಿ; ಧರ್ಮವಾದರೆ ಮಹೋನ್ನತ ಧರ್ಮ”). ಆಮೇಲೆ ಒಂದು ದೇಹ ಮನಸು ಅದೆಷ್ಟು ಮಾಧ್ಯಮವಾಗಬಹುದೋ ಅದಷ್ಟೂ ಯಾವ ಒಬ್ಬನಲ್ಲೇ ಸಂಭವಿಸಿತೋ ಆ ಪರಮಹಂಸ, ಯಾವುದನ್ನೂ ಕೊಲ್ಲದೇ, ಒಳಿತುಗಳನ್ನೇ ಕೂಡಿಸುತ್ತ ಕೂಡಿಸುತ್ತ ಹೋದ ಪರಮಹಂಸ. ಆಮೇಲೆ ಒಂದು ಜೀವಿತದಲ್ಲಿ ಇರಬಹುದಾದ ಗಳಿಗೆ ಗಳಿಗೆಗಳನ್ನು ಬದುಕುತ್ತಾ ಗಳಿಗೆಯಿಂದ ಗಳಿಗೆಗೆ ಎಡವುತ್ತ ಸತ್ಯ ಸಮಾನತೆಗಳ ಕಡೆಗೆ ನಡೆಯುತ್ತ ಸಮಷ್ಟಿಯೇ ಆದ ಗಾಂಧಿ ಜೊತೆಗೆ ಅಂಬೇಡ್ಕರರ ಆರ್ತತೆ ಹಾಗೂ ಋಷಿ ಐನ್ ಸ್ಟೈನ್. ಆಮೇಲೆ ಕಾವ್ಯಸಾಹಿತ್ಯ ಪರಂಪರೆಯ ಕೆಲವರು, ಎಲ್ಲಾ ಶತಮಾನಗಳ ಜೊತೆಗೆ ಬೆಳೆಯುತ್ತಲೇ ಇರುವ ವ್ಯಾಸ, ಹಾಗೇ ಟಾಲ್ ಸ್ಟಾಯ್, ನಮ್ಮದೇ ನೆಲದ ಪಂಪ, ಕುಮಾರವ್ಯಾಸ, ಕವಿ ಬೇಂದ್ರೆಯವರ ಒಂದಷ್ಟು ಕವಿತೆ, ಕುವೆಂಪುರವರ ’ಮಲೆಗಳಲ್ಲಿ ಮದುಮಗಳು’ ಇವೆಲ್ಲ “ಪುಣ್ಯದಂತೆ ನನಗೆ ಕಾಣಿಸುತ್ತವೆ” ಎನ್ನುತ್ತಾರೆ ಮಹದೇವ. ನಿಮಗೂ ಹಾಗೆ ಕಾಣಿಸುತ್ತವಾ? ಅದು ಮಹದೇವರ ಸಮಸ್ಯೆಯಲ್ಲ, ತಮಗೆ ಕಂಡ ಹಾಗೆ ನಿಮಗೂ ಕಾಣಬೇಕೆಂದು ಅವರು ಈ ಬರಹದಲ್ಲಾಗಲೀ ಅಥವಾ ಬೇರಾವುದೇ ಬರಹದಲ್ಲಾಗಲೀ ಯಾರನ್ನೂ ಒತ್ತಾಯಿಸುವದೂ ಇಲ್ಲ. ಅವರು ಸಾಮಾನ್ಯವಾಗಿ ಬಳಸುವ ಶಬ್ದಗಳು ನುಡಿಗಟ್ಟುಗಳು ಹೀಗಿರುತ್ತವೆ:
“ಬುದ್ಧನ ಕಾರುಣ್ಯ ಇಲ್ಲಿಂದಲೇ ಮೂಡಿರಬಹುದು”
“ನನಗೆ ಇನ್ನೂ ಅರ್ಥವಾಗದ್ದು ಎಂದರೆ ಅಸ್ಪೃಶ್ಯರ ಬಗ್ಗೆ ಕಾರಣವೇ ಇಲ್ಲದೇ ಅಸಹನೆ ಪಡುವ ಜಾತ್ಯಸ್ಥರ ಮನದಾಳವೇನು ಎಂಬುದು. ಇದಕ್ಕೆ ಚಾಂಡಾಲರ ಕಡೆಗೆ ನೋಡುವೆ. ಯಾಕೆಂದರೆ ಚಾಂಡಾಲರಾದ ಅಸ್ಪೃಶ್ಯರು ಬ್ರಾಹ್ಮಣ ಹೆಣ್ಣು ಮತ್ತು ಶೂದ್ರಾದಿ ಗಂಡಿನ ಮಕ್ಕಳಂತೆ. ಈ ಪುರಾತನ ಅಸಹನೆ ಜಾತ್ಯಸ್ಥ ಹಿಂದೂ ರಕ್ತದಲ್ಲಿ ಉಳಿದು ಹರಿಯುತ್ತಿರಬಹುದೇ? ಹುಟ್ಟಿದ ಮಕ್ಕಳದೇನು ತಪ್ಪು? ಈಗಲಾದರೂ ಇದನ್ನು ನಾವು ಅಂದುಕೊಳ್ಳಬೇಕಾಗಿದೆ.”
“ಅಹಿಂಸೆಯ ಬಗ್ಗೆ ತಾತ್ವಿಕ ಜಿಜ್ಞಾಸೆಯನ್ನು ನಾನಿಲ್ಲಿ ಮಾಡುವದಿಲ್ಲ. ಬದಲಾಗಿ ನನ್ನ ಅಸ್ಪಷ್ಟ ಗೊಂದಲದ ಮನಸ್ಸಿನೊಳಗೆ ಅಹಿಂಸೆ ಹೇಗೆ ರೂಪ ತಳೆಯಿತು ಎಂಬುದನ್ನು ಕಾಣಲು ಯತ್ನಿಸುವೆ”
“ಮನುಷ್ಯನಾಗಿ ಹುಟ್ಟಿದ ಮನುಷ್ಯ- ಮನುಷ್ಯನಾಗೇ ಉಳಿಯಲು ಎಷ್ಟೊಂದು ಕಷ್ಟ ಅನ್ನಿಸಿ ಸುಸ್ತಾಗುತ್ತದೆ”
“ಒಬ್ಬ ವ್ಯಕ್ತಿಗೆ ಇರುವ ಸೂಕ್ಷ್ಮತೆ, ಅಂತ:ಕರಣ, ಸಹಾನುಭೂತಿ, ಕಾಣುವ ಕಣ್ಣು ಹಾಗೂ ಆತ ನಿಂತ ನೆಲೆ ಇವುಗಳಿಂದಾಗಿ ಒಂದೇ ವಸ್ತು-ವಿಚಾರಗಳು ಹೇಗೆ ಯಜಮಾನ್ಯವೋ ಪ್ರತಿಭಟಣೆಯೋ ಬಂಡಾಯವೋ ಆಗಿ ಪರಿಣಮಿಸುವ ರೀತಿಯನ್ನು ಒಂದು ಉದಾಹರಣೆಯ ಮೂಲಕ ಮನದಟ್ಟು ಮಾಡಲು ಪ್ರಯತ್ನಿಸುವೆ.”
“ಅಹಿಂಸೆ ಹಿಡಿದುಕೊಂಡು ದೇವರು ಧರ್ಮಕ್ಕೆ ಒಳೇಟು ಕೊಡುತ್ತಿದ್ದಾನೆಂದು ನಿಮಗೆ ಅನ್ನಿಸಿದರೆ ಕ್ಷಮೆ ಇರಲಿ. ಒಂದು ಧರ್ಮದಲ್ಲಿ ಧರ್ಮ ಉಂಟೋ ಇಲ್ಲವೋ ಎಂಬ ಅಳತೆಯನ್ನು ಅಹಿಂಸೆ ಇಲ್ಲವೇ ಐಕ್ಯತೆಯಿಂದ ಅಳೆಯಬೇಕು ಎಂಬುದಷ್ಟೇ ನನ್ನ ಕಾಂಕ್ಷೆ”
ಅಂದರೆ ಬಹುಮಟ್ಟಿಗೆ ಅವರು ತಮ್ಮ ಗೊಂದಲ, ಅಸ್ಪಷ್ಟತೆ, ಪ್ರಯತ್ನ, ಬಯಕೆ, ಸಂದೇಹ, ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರುವ ಧ್ವನಿಯೇ ಇಲ್ಲಿ ಪ್ರಧಾನವೆನ್ನಿಸುತ್ತದೆ. ಹಾಗಂತ ಎಲ್ಲವೂ ಅಡ್ಡಗೋಡೆಯ ಮೇಲಿನ ದೀಪಗಳಲ್ಲ. ಅವರಿಗೆ ಮನದಟ್ಟಾದ ವಿಷಯಗಳನ್ನು ಡೆಫಿನಿಟಿವ್ಹ್ ತೀರ್ಮಾನಗಳನ್ನಾಗಿ ಇಡುವದರಲ್ಲಿ ಅವರಿಗೆ ಹಿಂಜರಿಕೆಯಿಲ್ಲ. ಉದಾ: ಜಾತಿಯ ಅಸ್ಪೃಶ್ಯತೆಯ ಭೀಕರತೆಯ ಬಗೆಗೆ. “ತಮಟೆ ಬಡಿಯುವ ರೂಢಿಯನ್ನು ದಲಿತರು ನಿರಾಕರಿಸಿದರೆ ಅವರ ಚರ್ಮದಿಂದಲೇ ತಮಟೆ ಮಾಡಿ ಬಡಿಯುವಷ್ಟು ಕ್ರೂರತೆ ಸವರ್ಣೀಯ ಮನಸ್ಸಲ್ಲಿದೆ. ನಮ್ಮ ಭಾರತದಲ್ಲಿ ಸಾಮರಸ್ಯ ಇದ್ದರೆ ಅದು ಜಾತಿ ರೂಢಿಗಳನ್ನು ಸುತ್ತಿರುವ ಅಮಾನವೀಯ, ಅವಮಾನಕರವಾದ ಸಂಬಂಧಗಳ ಸಾಮರಸ್ಯ. ಆದರೆ ನಮಗೆ ಬೇಕಾಗಿರುವದು ಜಾತಿ ಮತಗಳ ರೂಢಿಗಳನ್ನು ಕಿತ್ತ ಮಾನವೀಯ ಘನತೆಯ ಸಂಬಂಧ. ಎಲ್ಲಿವರೆಗೆ ಎಂದರೆ ಹಳ್ಳೀಲಿ ಬೇರೆಬೇರೆ ಕೋಮಿನ ಗಂಡುಹೆಣ್ಣಿಗೆ ಊರೊಟ್ಟಿನವರೆಲ್ಲ ಸೇರಿ ಮದುವೆ ಮಾಡುವವರೆಗೆ”.
ಜಾತಿಯಿಂದ ಸಕಾರಾತ್ಮಕವಾದುದು ಎಂಥದೂ ಸಾಧ್ಯವಿಲ್ಲ ಎಂಬುದು ಇಲ್ಲಿಯ ಎಲ್ಲ ಯೋಚನೆಗಳಲ್ಲಿ ಅಂತಸ್ಥವಾಗಿರುವ ಅಂಶ. ಜಾತಿಯ ಪ್ರಶ್ನೆ,ದಲಿತರ ಸಮಸ್ಯೆ ಅವಮಾನಗಳ ಬಗ್ಗೆ ಸ್ವತ: ಆ ಅನುಭವಲೋಕದ ಭಾಗವಾಗಿರುವ ಅವರಿಗೆ ಸ್ವಾಭಾವಿಕವಾಗೇ ನೋವಿದೆ. ಒಂದು ಹಂತದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರೂ ಆಗಿದ್ದ ಅವರಿಗೆ ಕಳೆದ ಒಂದೆರಡು ದಶಕಗಳಲ್ಲಿ ಉಂಟಾಗುತ್ತ ಬಂದಿರುವ ಒಡಕುಗಳ ಬಗ್ಗೆ ಇನ್ನೂ ಹೆಚ್ಚಿನ ನೋವಿದೆ. ತುಂಬ ಗೋಜಲಾಗಿರುವ ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಮುಟ್ಟಹೊರಟಿರುವ ಅವಮಾನಿತ ಹಿನ್ನೆಲೆಯ ನಮಗೆ ವಿವೇಕ, ಎಚ್ಚರ ದಾರಿಯಾಗಬೇಕು, ಐಕ್ಯತೆ ಗುರಿಯಾಗಬೇಕೆಂದು ಹೇಳುತ್ತಲೇ ಒಂದು ಕುತೂಹಲಕರ ಪ್ರತಿಪಾದನೆಯನ್ನು ಮುಂದಿಡುತ್ತಾರೆ, ಅದೆಂದರೆ “ಬ್ರಾಹ್ಮಣರು ಸಾಂಸ್ಕೃತಿಕವಾಗಿ ಮುಂದುವರೆದವರೆಂಬ ಭಾವನೆ ಶೂದ್ರರಿಗೂ ದಲಿತರಿಗೂ ಇದೆ. ಹಾಗೆಯೇ ಶೂದ್ರರು ಸಾಮಾಜಿಕವಾಗಿ ಮುಂದುವರಿದವರೆಂಬ ಭಾವನೆ ದಲಿತರಲ್ಲಿ ಇದೆ, ಈ ಭಾವನೆ ಇರುವದರಿಂದಾಗಿ ಬ್ರಾಹ್ಮಣರು ಸಂಸ್ಕೃತಿಯನ್ನೆಲ್ಲ ತಮ್ಮಲ್ಲೇ ಗುಡ್ಡೆ ಹಾಕಿಕೊಂಡಿರುವಂತೆ ನಮಗೆ ಕಾಣಿಸುತ್ತದೆ. ಹೀಗೆ ಕಾಣಿಸುವದರಿಂದ ಅವರನ್ನು ದ್ವೇಷಿಸತೊಡಗುತ್ತೇವೆ ಅಥವಾ ಅವರಂತಾಗಲು ಬಯಸಿ ಕೀಳರಿಮೆಯ ರೋಗಕ್ಕೆ ತುತ್ತಾಗಿ ನರಳುತ್ತೇವೆ. ಹಿಂದೆ ವಿದ್ಯಾವಂತರೆನ್ನಿಸಿಕೊಂಡವರು ಆಚರಣೆಗಳನ್ನೇ ಧರ್ಮ ಸಂಸ್ಕೃತಿಯನ್ನು ಮಾಡಿಕೊಂಡು ನೀರನ್ನು ಎಡಗೈಯಿಂದ ಕುಡಿಯುವದೋ ಅಥವಾ ಬಲಗೈಯಿಂದ ಕುಡಿಯುವದೋ? ಅದನ್ನು ಮೂರು ಸಲ ತೊಳೆಯುವದೋ ಅಥವಾ ನಾಲ್ಕು ಸಲ ತೊಳೆಯುವದೋ? ಬಾಯನ್ನು ಐದು ಸಲ ಮುಕ್ಕಳಿಸುವದೋ ಆರು ಸಲ ಮುಕ್ಕಳಿಸುವದೋ? ಎಂದು ಚರ್ಚಿಸುತ್ತ ಕಾಲ ಕಳೆದರು. ಇದನ್ನು ನೋಡಿದಾಗ ಹೇಗನ್ನಿಸುತ್ತದೆ? ಇದೇನು ಸಂಸ್ಕೃತಿಯೆ? ನಾವು ಇದಾಗಬೇಕೆ? ಇದಕ್ಕಾಗಿ ಯಾಕೆ ಸ್ಪರ್ಧೆ? ಯಾಕಾಗಿ ದ್ವೇಷ ಅಸೂಯೆ ಕೀಳರಿಮೆ ಮೇಲರಿಮೆ? ಅಂತ ಬೆಚ್ಚಬೇಕಾಗುತ್ತದೆ. ಹೊರನೋಟಕ್ಕೆ ಸಂಸ್ಕೃತಿಯಂತೆ ಕಂಡು ಬಂದುದು ಸಾಂಸ್ಕೃತಿಕ ಅದ:ಪತನವಾಗಿ ಕಾಣತೊಡಗುತ್ತದೆ.”
ಈ ಹಿನ್ನೆಲೆಯಲ್ಲಿ ದೇವನೂರರ ಭಾವನೆ ಇಷ್ಟು: ಮೇಲರಿಮೆಯ ರೋಗದ ಸವರ್ಣೀಯರು ಸಮಾಜವನ್ನು ಸುಡುತ್ತಿದ್ದರೆ, ಕೀಳರಿಮೆ ರೋಗದ ದಲಿತರು ತಮ್ಮನ್ನು ತಾವು ಸುಟ್ಟುಕೊಳ್ಳುವದು ಕಾಣುತ್ತದೆ. ಆದ್ದರಿಂದ ಚಿಕಿತ್ಸೆ ಯಾರಿಗೆ ಬೇಕಾಗಿದೆ? ಎಂದು ಕೇಳಿಕೊಂಡು ಅವರು ಹೇಳುವದು: “ಅದು ನಮ್ಮ ಸಮಾಜದ ಸ್ವಾಸ್ಥ್ಯಕ್ಕೇ ಬೇಕಾಗಿದೆ”. ಅದಕ್ಕೆ ಅತ್ಯಗತ್ಯವಾಗಿರುವದು, ಬ್ರಾಹ್ಮಣರಿಗೆ ಸಾಂಸ್ಕೃತಿಕ ಚಿಕಿತ್ಸೆ ಕೊಟ್ಟು ಉದ್ಧಾರ ಮಾಡಬೇಕಾಗಿದೆ. ಹಾಗೇ ಶೂದ್ರರನ್ನು ಸಾಮಾಜಿಕವಾಗಿ ನಾಗರಿಕರನ್ನಾಗಿಸಬೇಕಾಗಿದೆ. ಇಲ್ಲಿ ದಲಿತರಿಗೆ ಆರ್ಥಿಕ ಆಸರೆಯಾಗಬೇಕಾಗಿದೆ. ದಲಿತ ಸಂಘಟಣೆಗಳು ತಮ್ಮ ’ಕೀಳುಹುಚ್ಚು’ ರೋಗದಿಂದ ಬಿಡುಗಡೆ ಪಡೆದು ”ಮೇಲುಹುಚ್ಚು’ ರೋಗದವರನ್ನೂ ವಿಮೋಚನೆಗೊಳಿಸಬೇಕಾಗಿದೆ. ಇಷ್ಟು ಹೇಳಿ ದೇವನೂರು ಮಹಾದೇವ ಕೇಳುತ್ತಾರೆ: “ಈಗ ಹೇಳಿ, ನಾವು ಆಗಬೇಕಾದ್ದು ರೋಗಿಯೋ ಅಥವಾ ವೈದ್ಯರೋ? ಅದು ನಮ್ಮ ಕೈಲೇ ಇದೆ”
ಇದನ್ನು ಒಪ್ಪಬಹುದು, ನಿರಾಕರಿಸಬಹುದು, ಪ್ರತಿಭಟಿಸಬಹುದು, ಬ್ರಾಹ್ಮಣರು ತಮ್ಮ ಸಂಸ್ಕೃತಿಯ ಕುರಿತು ದೇವನೂರು ಹೊಂದಿರುವ ಗ್ರಹಿಕೆ ಆಂಶಿಕ ಎನ್ನಬಹುದು, ಅವಿವೇಕದ್ದು ಎನ್ನಬಹುದು. ದಲಿತರು ಇದು ಸಾರಾಸಗಟು ಸರಳೀಕರಣ ಎನ್ನಬಹುದು. ಆದರೆ ದೇವನೂರು ಮಾತನಾಡುತ್ತಿರುವದು ಅವಮಾನಿತ ದಲಿತ ತನ್ನ ಕೀಳರಿಮೆಯಿಂದ ಬಿಡಿಸಿಕೊಂಡು ಒಳಗಣ್ಣಿಂದ ನೋಡತೊಡಗಿದಾಗ ಬೇರೆಯಾಗಿಯೇ ದಕ್ಕುವ ವಸ್ತುಸ್ಥಿತಿಯ ಬಗ್ಗೆ. ಏನಿದ್ದರೂ ಪ್ರಮೇಯ ಚಿಂತನಾರ್ಹವಾಗಿದೆ. ಅದು ಐಕ್ಯತೆಯದ್ದು. ಏಕೆಂದರೆ “ಐಕ್ಯತೆಯ ಮನಸ್ಸಿಲ್ಲದೆ ಯಾರು ಯಾವುದನ್ನು ಮುಟ್ಟಿದರೂ ಅದು ಧ್ವಂಸವಾಗಿ ಬಿಡುತ್ತದೆ”.