ಅಶೋಕ್ ಶೆಟ್ಟರ್ ಕಾಲಂ : “ಎದೆಗೆ ಬಿದ್ದ ಅಕ್ಷರ” ಗಳಿಂದೆದ್ದು ಬಂದ ದಾರ್ಶನಿಕ…

[ 29.1.2014ರಂದು ಅವಧಿ ವೆಬ್ ಪೋರ್ಟಲ್ ನಲ್ಲಿ ಅಶೋಕ ಶೆಟ್ಟರ್ ಅವರು ಬರೆಯುತ್ತಿದ್ದ ಅಂಕಣದಲ್ಲಿ ದೇವನೂರ ಮಹಾದೇವ ಅವರ ಕುರಿತು ಬರೆದಿದ್ದ ಬರಹ ನಮ್ಮ ಮರು ಓದಿಗಾಗಿ… ]

ಪಠ್ಯಪುಸ್ತಕಗಳಲ್ಲಿ ರಮ್ಯ ಸಂಪ್ರದಾಯದ ಕವಿತೆ ಪ್ರಬಂಧ ಓದಿಕೊಂಡಿದ್ದ ನಾನು ೧೯೭೦ರ ದಶಕದ ಮಧ್ಯಭಾಗದಲ್ಲಿ ಧಾರವಾಡಕ್ಕೆ ಬಂದ ಒಂದೆರಡು ವರ್ಷಗಳಲ್ಲಿ ಬೇರೆಯದೇ ಬಗೆಯ ಸಾಹಿತ್ಯ ಕೃತಿಗಳಿಗೆ ತೆರೆದುಕೊಂಡೆ. ಲಂಕೇಶ್, ಅನಂತಮೂರ್ತಿ, ರಾಘವೇಂದ್ರ ಖಾಸನೀಸ್, ಕೃಷ್ಣ ಆಲನಹಳ್ಳಿ ಮತ್ತು ದೇವನೂರು ಮಹಾದೇವರಂಥವರ ಕತೆ-ಕಾದಂಬರಿಗಳಲ್ಲಿ ಅನಾವರಣಗೊಳ್ಳುತ್ತಿದ್ದ ಲೋಕ ನಮ್ಮ ಸಂವೇದನೆಗಳನ್ನು ಬೇರೆಯದೇ ಆದ ರೀತಿಯಲ್ಲಿ ತಟ್ಟತೊಡಗಿತ್ತು. ಆ ದಿನಗಳಲ್ಲಿ ಪಿ. ಲಂಕೇಶ್ “ಪಾಂಚಾಲಿ” ಎಂಬ ವಿಶೇಷ ಸಾಹಿತ್ಯ ಸಂಚಿಕೆಯೊಂದನ್ನು ಪ್ರಕಟಿಸಿದರು. ಅದರಲ್ಲಿ ನಾನು ದೇವನೂರರ ಕತೆಯೊಂದನ್ನು ಓದಿದೆ. ಅವರನ್ನು ಓದಬೇಕೆಂಬ ಓದುಗರ ಹಸಿವಿಗೆ ತಕ್ಕಷ್ಟು ಅವರು ಬರೆಯಲಿಲ್ಲ. ಶುದ್ಧವಾಗಿ ’ಸಾಹಿತ್ಯಸೇವೆ’ ಮಾಡಿಕೊಂಡಿದ್ದರೆ ಬಹುಶ: ಪುಂಖಾನುಪುಂಖವಾಗಿ ಅನ್ನುತ್ತಾರಲ್ಲ, ಹಾಗೆ ಬರೆಯುತ್ತಿದ್ದರೇನೋ. ಆದರೆ ಅವರ ಅಂತ:ಕರಣ ಅವರನ್ನು ಹಲವು ಇತರ ಚಟುವಟಿಕೆ ಚಿಂತನೆಗಳತ್ತ ಕೊಂಡೊಯ್ದಿತು. ಎಷ್ಟು ಬರೆದರೋ ಅಷ್ಟು ಓದುಗರ ಮನದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವಂಥದನ್ನು ಬರೆದರು. ಅವರ ದ್ಯಾವನೂರು, ಒಡಲಾಳ, ಕುಸುಮಬಾಲೆ ಕೃತಿಗಳು ಕನ್ನಡದಲ್ಲಿ ನವ್ಯ-ನವ್ಯೋತ್ತರದ ಸ್ಥಿತ್ಯಂತರದ ಸಂದರ್ಭದ ವಿಶಿಷ್ಟ ಕೃತಿಗಳಾಗಿ ಉಳಿದುಕೊಂಡವು.

ಓದುಗನಾಗಿಯೋ ಬರಹಗಾರನಾಗಿಯೋ ಸಾಹಿತ್ಯಲೋಕದ ಸಂಪರ್ಕಕ್ಕೆ ಬಂದು ಮೂವತ್ತೈದು ವರ್ಷಗಳಾಗಿದ್ದರೂ ನಾನು ಪ್ರತ್ಯಕ್ಷವಾಗಿ ಭೇಟಿಯಾಗಿರದಿದ್ದ, ಕೊನೇಪಕ್ಷ ದೂರದಿಂದ ಅವರು ವೇದಿಕೆಯ ಮೇಲೆ ಕುಳಿತ ರೂಪದಲ್ಲಾದರೂ ಸರಿ, ನಾನು ನೋಡಿರದೇ ಇದ್ದ ಕೆಲವೇ ಸಾಹಿತಿಗಳಲ್ಲಿ ದೇವನೂರು ಮಹಾದೇವ ಒಬ್ಬರಾಗಿದ್ದರು. ದೇವನೂರರ ಅಮಾಸ, ಮೂಡಲಸೀಮೆಲಿ ಕೊಲೆ ಗಿಲೆ ಮುಂತಾಗಿ, ಡಾಂಬರು ಬಂದದು, ಮಾರಿಕೊಂಡವರು ಮುಂತಾದ ಕತೆಗಳನ್ನು ಓದಿಕೊಂಡಿದ್ದ ನನಗೆ ಅವರ “ಒಡಲಾಳ” ಒಂದು ಬಗೆಯ ಅನುಭೂತಿಯನ್ನುಂಟು ಮಾಡಿದ್ದರೆ “ಕುಸುಮಬಾಲೆ” ಒಂದು ಪುಟ್ಟ ಮಹಾಕಾವ್ಯದಂತೆ ಭಾಸವಾಗಿತ್ತು. ಕುಸುಮಬಾಲೆಯ ಕುರಿತು ಒಮ್ಮೆ ಚಂದ್ರಶೇಖರ ಪಾಟೀಲರ ಜೊತೆ ತೀವ್ರವಾಗಿ ವಾಗ್ವಾದ ಮಾಡಿದ್ದು ನೆನಪಾಗುತ್ತಿದೆ.

ಅದರಲ್ಲಿ ಬರುವ ಪಾತ್ರಗಳು ಮಾತನಾಡುವ ಭಾಷೆಯಷ್ಟೇ ಅಲ್ಲದೇ ಅದರ ನಿರೂಪಣೆ ಕೂಡ ಮೈಸೂರಿನ ನಂಜನಗೂಡು ಸೀಮೆಯ ದಲಿತ ಸಮುದಾಯದ ಆಡುಮಾತಿನ ಒಂದು ಪ್ರಾದೇಶಿಕ ನುಡಿಗಟ್ಟಿನಲ್ಲಿದೆಯಷ್ಟೇ. ಆ ಕಾರಣಕ್ಕೆ ಅದನ್ನು ಓದುವದು ಮೌಂಟ್ ಎವರೆಸ್ಟ್ ಏರಿದಷ್ಟು ಕಠಿಣವೆಂಬಂಥ ಧರ್ತಿಯಲ್ಲಿ ಚಂಪಾ ಮಾತನಾಡಿದ್ದು ಮತ್ತು ಬರೆದದ್ದು ನನಗೆ ಸರಿ ಕಂಡಿರಲಿಲ್ಲ. ವಿಶ್ವವಿದ್ಯಾಲಯದ ಸ್ನಾತಕೋತ್ತರ ಇಂಗ್ಲೀಷ್ ವಿಭಾಗದಲ್ಲಿ ಧ್ವನಿಶಾಸ್ತ್ರ ಮತ್ತು ಸಾಹಿತ್ಯ ಬೋಧಿಸುತ್ತಿದ್ದ ಮತ್ತು ಸ್ವತ: ಕವಿ-ನಾಟಕಾರರಾಗಿದ್ದ ಹಾಗೂ ತಮ್ಮ ಬರವಣಿಗೆಯಲ್ಲಿ ಉತ್ತರ ಕರ್ನಾಟಕದ ಪ್ರಾದೇಶಿಕ ನುಡಿಗಟ್ಟನ್ನು ಬಳಸುತ್ತಿದ್ದ ಚಂಪಾ ದೇವನೂರರ ಕುಸುಮಬಾಲೆಯಲ್ಲಿಯ ಪ್ರಾದೇಶಿಕ ಭಾಷಾ ಬಳಕೆಯ ಕುರಿತು ತಳೆದ ಪರಿಹಾಸ್ಯದ ಮತ್ತು ನಕಾರಾತ್ಮಕ ನಿಲುವಿನ ಕುರಿತು ಅವರ ಜೊತೆ ಒಂದು ಸಲ ಇಂಗ್ಲಿಷ್ ಡಿಪಾರ್ಟಮೆಂಟಿನ ಅವರ ಕೋಣೆಗೆ ಹೋಗಿ ಜಗಳ ತೆಗೆದಿದ್ದೆ.

ಅಲ್ಲಿ ಅವರ ಸಹೋದ್ಯೋಗಿ ಗಿರಡ್ಡಿ ಗೋವಿಂದರಾಜರೂ ಚರ್ಚೆಯಲ್ಲಿ ಜೊತೆಗೂಡಿದರು. ಉತ್ತರ ಕರ್ನಾಟಕದ ಪ್ರಾದೇಶಿಕವಾದ ಭಾಷೆಯನ್ನು ಕತೆಕಾದಂಬರಿಗಳಲ್ಲಿ ಬಳಸುವ ನಮಗೆ ಕುಸುಮಬಾಲೆಯಲ್ಲಿಯ ಒಂದು ಪ್ರಾದೇಶಿಕ ಭಾಷಾ ನುಡಿಗಟ್ಟಿನ ಬಳಕೆಯ ಕುರಿತು ಆಕ್ಷೇಪಿಸುವ ಹಕ್ಕೇ ಇಲ್ಲ ಎಂದು ಗಿರಡ್ಡಿ ಕೂಡ ಹೇಳಿದರೂ ಚಂಪಾ ಒಪ್ಪಲಿಲ್ಲ. ಮೊದ ಮೊದಲು ಸರಾಗವಾಗಿ ಓದುವಲ್ಲಿ ಸ್ವಲ್ಪ ತಡೆಯಾಗುವ ಆ ಭಾಷೆಗೆ- ಅದರ ನಿರೂಪಣಾಕ್ರಮದ ಧ್ವನಿ ಮತ್ತು ಇಡಿಯಂ ಗೆ- ನಾಲ್ಕಾರು ಪುಟಗಳನ್ನು ಓದುವಷ್ಟರಲ್ಲಿ ಹೊಂದಿಕೊಂಡ ನನ್ನನ್ನು ಆ ಮೇಲೆ ಆ ಪುಸ್ತಕ ತಾನೇ ಸರಾಗವಾಗಿ ಓದಿಸಿಕೊಂಡು ಹೋಗಿತ್ತಷ್ಟೇ ಅಲ್ಲ, ಆ ಭಾಷೆಯನ್ನು ಅದರಿಂದ ತೆಗೆದು ಹಾಕಿ ಗ್ರಾಂಥಿಕ ನಿರೂಪಣೆಯಲ್ಲಿ ಅದನ್ನು ಕಥನಿಸಿದ್ದರೆ ಆ ಕೃತಿಯ ಸೌಂದರ್ಯ ಅರ್ಧಕ್ಕರ್ಧ ಮುಕ್ಕಾಗುತ್ತಿತ್ತು ಎಂದೂ ಅನ್ನಿಸಿತ್ತು. ಹೀಗಾಗಿ ಅದರ ಓದಿನ ಕಷ್ಟವನ್ನು ಚಂಪಾ ಉತ್ಪ್ರೇಕ್ಷಿಸುತ್ತಿದ್ದಾರೆಂಬುದು ನನ್ನ ಭಾವನೆಯಾಗಿತ್ತು.

“ಅಶೋಕ್, ಆ ಪುಸ್ತಕಾ ಓದೂ ಪ್ರಯತ್ನ ಮಾಡಿ ಓದಾಕಾಗದೇ ಬಿಟ್ಟೇನಿ ಅಂತ ಸಾಕಷ್ಟು ವಿನಯದಿಂದ ನಿಮಗ ಹೇಳ್ತೇನಿ” ಎಂದರು ಚಂಪಾ ಕೊನೆಗೆ..! ವಿಚಿತ್ರವೆಂದರೆ ದೇವನೂರರ ಕತೆಕಾದಂಬರಿಗಳನ್ನು ಒಟ್ಟಾಗಿಸಿ ಪುಸ್ತಕ ಪ್ರಕಟಿಸಿದ ಲಂಕೇಶ್ ಅವರೂ ಕುಸುಮಬಾಲೆಯ ಸಂವಹನಸಾಧ್ಯತೆಯ ಕುರಿತು ನಿರುತ್ಸಾಹದ ಪ್ರತಿಕ್ರಿಯೆಯನ್ನೇ ಹೊಂದಿದ್ದರು.

ಒಬ್ಬ ವ್ಯಕ್ತಿಯಾಗಿ ದೇವನೂರರನ್ನು ನೋಡುವ ಅವಕಾಶವೇ ಬಂದಿರಲಿಲ್ಲ. ಬಹಳಷ್ಟು ವರ್ಷಗಳ ಹಿಂದೆ, ಬಹುಶ: 1985-86ರ ಸುಮಾರಿಗೆ ಒಮ್ಮೆ ನಾನು ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಿಸ್ಟರಿ ಪ್ರೊಫೆಸರಾಗಿದ್ದ ಡಾ. ಎಸ್.ಚಂದ್ರಶೇಖರ್ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಹೋಗುತ್ತಿರಬೇಕಾದರೆ ಸ್ಕೂಟರಿನಲ್ಲಿ ಬರುತ್ತಿದ್ದ ಒಬ್ಬರು ಸ್ಕೂಟರ್ ನಿಲ್ಲಿಸಿ, ಅವಸರವಸರವಾಗಿ ಸ್ಟ್ಯಾಂಡ್ ಹಾಕಿ ಚಂದ್ರಶೇಖರ್ ಜೊತೆ ಮಾತಾಡುತ್ತಿರಬೇಕಾದರೆ, ಇವರನ್ನೆಲ್ಲೋ ನೋಡಿದಂತಿದೆಯಲ್ಲಾ ಎಂದು ನಾನು ಅಂದುಕೊಳ್ಳುವಷ್ಟರಲ್ಲಿ ಅವಸರವಸರವಾಗಿ ಮಾತು ಮುಗಿಸಿ ಸ್ಕೂಟರ್ ಏರಿ ಹೋದರು ಆ ವ್ಯಕ್ತಿ. ಅವರು ಹೋದ ಮೇಲೆ “ಯಾರು ಅಂತ ಗೊತ್ತಾಗ್ಲಿಲ್ವೇನೋ” ಎಂದು ಚಂದ್ರಶೇಖರ್ ಕೇಳಿದಾಗ ಇಲ್ಲ ಅಂದೆ. “ಏ ದೇವನೂರು ಮಹಾದೇವ ಕಣೋ” ಅಂದಾಗ ಹೌದಾ ಗೊತ್ತಾಗ್ಲಿಲ್ಲ ಅಂದಿದ್ದೆ.

ಕಳೆದ ವರ್ಷ ಅಂದರೆ 2013ರ ಪ್ರಾರಂಭದಲ್ಲಿ ಒಮ್ಮೆ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ವಿಶೇಷ ಧನಸಹಾಯ ಯೋಜನೆಗೆ ಒಳಪಟ್ಟ ನಮ್ಮ ಸ್ನಾತಕೋತ್ತರ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದಲ್ಲಿ ಆ ಯೋಜನೆಯ ಭಾಗವಾಗಿ ರಾಷ್ಟ್ರೀಯ ವಿಚಾರಸಂಕಿರಣವೊಂದನ್ನು ಏರ್ಪಡಿಸಬೇಕಾದ ಸಂದರ್ಭದಲ್ಲಿ ನಾನು ಅದರ ಸಂಯೋಜಕನಾಗಿದ್ದೆ. ನಮ್ಮ ಅಧ್ಯಯನ ಯೋಜನೆಯ ವಿಷಯಗಳಲ್ಲೊಂದಕ್ಕೆ ಪ್ರಸ್ತುತವೆನ್ನಿಸುವ ಕರ್ನಾಟಕದ ದಲಿತ ಮತ್ತು ಹಿಂದುಳಿದ ವರ್ಗಗಳ ಆಂದೋಲನದ ಕುರಿತು ವಿಚಾರ ಸಂಕಿರಣ ನಡೆಸಬಹುದೆಂದಾಗ ನಮ್ಮ ವಿಭಾಗದ ಡಾ, ರವಿ ಕೋರಿಶೆಟ್ಟರ್ ನಾವು ಬಯಸಿದರೆ ತಮಗೂ ದೇವನೂರ್ ಅವರಿಗೂ ಸ್ನೇಹಿತರಾಗಿರುವ ಒಬ್ಬರ ಮೂಲಕ ದೇವನೂರು ಇದರಲ್ಲಿ ಭಾಗವಹಿಸುವಂತೆ ತಾವು ಮಾಡುವದಾಗಿ ಹೇಳಿ ಒಂದು ಪತ್ರ ಸಿದ್ಧ ಪಡಿಸುವಂತೆ ಹೇಳಿದಾಗ ನಾನು ಮತ್ತು ಇನ್ನೊಬ್ಬ ಸಂಯೋಜಕ ಎಸ್.ಕೆ,ಕಲ್ಲೋಳಿಕರ್ ಸೇರಿ ಒಂದು ಒಕ್ಕಣೆಯನ್ನು ಸಿದ್ಧ ಪಡಿಸಿ ಕೊಟ್ಟೆವು.

ಬರಲು ದೇವನೂರು ಒಪ್ಪಲಿಕ್ಕಿಲ್ಲವೆಂದೇ ನನ್ನ ಭಾವನೆಯಾಗಿತ್ತು ಆದರೆ ಅವರು ಬಂದರು. ವಿಶ್ವವಿದ್ಯಾಲಯದ ಗೋಲ್ಡನ್ ಜುಬಿಲಿ ಹಾಲ್ ನಲ್ಲಿ ನಾನು ಬೆಳಿಗ್ಗೆ ಉದ್ಘಾಟಣಾ ಕಾರ್ಯಕ್ರಮದ ಸಿದ್ಧತೆಯಲ್ಲಿ ಇದ್ದಾಗ ರವಿಯವರು ಫೋನ್ ಮಾಡಿ ದೇವನೂರು ಮಹಾದೇವ ಅವರು ನಮ್ಮ ಮನೆಯಲ್ಲಿದ್ದಾರೆ, ಆಮೇಲೆ ನಾವು ಕುಲಪತಿಗಳ ಬಳಿ ಹೋಗಿ ನಂತರ ನೇರವಾಗಿ ಸಭಾಂಗಣಕ್ಕೆ ಬರುತ್ತೇವೆ, ನಾಳೆ ಮಹಾದೇವ ಅವರು ಬಾದಾಮಿ ಐಹೊಳೆಗೆ ಹೋಗಬಯಸಿರುವದರಿಂದ ನೀವು ಸ್ವಲ್ಪ ಹೊತ್ತು ಅವರ ಜೊತೆ ಮಾತಾಡಬೇಕೆಂದರೆ ಈಗಲೇ ಮನೆಗೆ ಬನ್ನಿ ಎಂದರು. ಹೋದೆ. ಇವರು ಅಶೋಕ್ ಶೆಟ್ಟರ್ ಅಂತ, ನಮ್ಮ ಕಲೀಗ್, ಇವರೂ ಬರಹಗಾರರು, ನಿಮಗೆ ಗೊತ್ತಿರಬೇಕಲ್ಲ ಎಂದು ರವಿಯವರು ಕೇಳಿದಾಗ ಇಲ್ಲ ಎಂದರು ಮಹಾದೇವ. ತಿಂಡಿ ಕಾಫಿ ಎಲ್ಲ ಆದ ಮೇಲೆ ಹಾಗೇ ಮಾತಾಡುತ್ತಿರಬೇಕಾದರೆ ನೀವು ಈ ಮುಂಚೆ ಯಾವಾಗಲೂ ಧಾರವಾಡಕ್ಕೆ ಬಂದಂತಿಲ್ಲ, ನಾನಿಲ್ಲಿರುವ ಮೂರು ದಶಕಕ್ಕೂ ಮಿಕ್ಕಿದ ಅವಧಿಯಲ್ಲಿ ನೀವಿಲ್ಲಿಗೆ ಬಂದದ್ದು ನನಗೆ ಗೊತ್ತಿಲ್ಲ ಎಂದು ನಾನು ಕೇಳಿದಾಗ ’ಇಲ್ಲ, ತುಂಬಾ ಹಿಂದೆ ಜೇಪಿ ಚಳುವಳಿ ನಡೆಯುತ್ತಿದ್ದಾಗ ಕರ್ನಾಟಕ ನವನಿರ್ಮಾಣ ಕ್ರಾಂತಿಯ ಚಟುವಟಿಕೆಗಳ ಸಂದರ್ಭದಲ್ಲಿ ಬಂದಿದ್ದೆ” ಎಂದರು.

ಅವರನ್ನು ಸ್ವಾಗತಿಸುವ ಪರಿಚಯಿಸುವ ಕೆಲಸ ನನ್ನದೇ ಆದುದರಿಂದ ನಾನು ಕೆಲವು ಮಾತುಗಳನ್ನು ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ ಒಟ್ಟಾರೆ ಭಾರತದ ಸಂದರ್ಭದಲ್ಲಿ ವೈವಿಧ್ಯಮಯವಾದ ಚೆಹರೆಗಳನ್ನು ಅಳಿಸಿ ಹಾಕಿ ಏಕರೂಪಿಯಾಗಿಸುವ ಆಕ್ರಮಣಕಾರಿ ಪ್ರವೃತ್ತಿಗಳು ಚಾರಿತ್ರಿಕವಾಗಿ ನಮ್ಮ ಸಮಾಜದ ಎದ್ದು ಕಾಣುವ ಲಕ್ಷಣವಾದ ಬಹುಮುಖಿ ಸ್ವರೂಪಕ್ಕೆ ಅಪಾಯಕಾರಿಯಾಗಿರುವ, ಅದೇ ಕಾಲಕ್ಕೆ ನಮ್ಮ ಚರಿತ್ರೆಯ ಹಾಸುಹೊಕ್ಕುಗಳಲ್ಲಿ ಏಕತೆಯ ಎಳೆಗಳೂ ಇದ್ದು ಬಹುಮುಖತೆಯನ್ನು ಬಿಂಬಿಸುವ ಭರದಲ್ಲಿ ಏಕತೆಯ ಆ ಎಳೆಗಳನ್ನು ತುಂಡರಿಸುವ ಪ್ರವೃತ್ತಿಗಳೂ ಕಂಡು ಬರುತ್ತಿರುವ ನಿಟ್ಟಿನಲ್ಲಿ ನಮ್ಮ ವಿಚಾರಸಂಕಿರಣದ ಪ್ರಸ್ತುತತೆಯ ಕುರಿತು ಮಾತನಾಡಿದ ನಾನು ದೇವನೂರರ ಕುರಿತು ಸಾಂಪ್ರದಾಯಿಕವಾಗಿ ಅವರೊಬ್ಬ ಸಂತ ಎಂಬಂಥ ಮಾತನ್ನು ಒಪ್ಪಲು ನಿರಾಕರಿಸಿದೆ.

ಕರ್ನಾಟಕದ ಪ್ರಗತಿಪರ ಸಾಮಾಜಿಕ ಸಾಂಸ್ಕೃತಿಕ ಆಂದೋಲನಗಳು ತಮ್ಮ ಬೆಳವಣಿಗೆಯ ಅಗತ್ಯದ ಒಂದು ಭಾಗವಾಗಿ ಒಂದು ಆರಂಭಿಕ ಹಂತದಲ್ಲಿ ಅವರನ್ನು ದಲಿತ ಲೇಖಕ ಎಂಬುದಾಗಿ ಗುರುತಿಸಿದ್ದರೂ ಕೂಡ ಅವರನ್ನು ಈಗಲೂ ಹಾಗೆ ನೋಡುವದು ನಾವು ಕನ್ನಡ ಸಾಹಿತ್ಯ ಪರಂಪರೆಗೂ ದೇವನೂರು ಮಹಾದೇವ ಅವರಿಗೂ ಸಮಾನವಾಗಿಯೇ ಮಾಡುವ ಅಪಚಾರ, ಅವರು ಕನ್ನಡದ ಕರ್ನಾಟಕದ ಕಾದಂಬರಿಕಾರ, ಚಿಂತಕ ಎಂದೆ. ಬರಿದೇ ಬರಹಗಾರರು, ಚಿಂತಕರು ಆಗಿರುವವರು ನಮ್ಮಲ್ಲಿ ಹಲವರಿದ್ದಾರೆ. ಅದರೆ ದೇವನೂರ್ ಅವರು ಒಬ್ಬ ದಾರ್ಶನಿಕನ ಗುಣಗಳನ್ನು ಕೂಡ ಉಳ್ಳವರು. ಇತ್ತೀಚೆಗೆ ಪ್ರಕಟವಾದ ಅವರ ಬರಹ ಭಾಷಣಗಳ ಸಂಕಲಿತ ರೂಪವಾದ “ಎದೆಗೆ ಬಿದ್ದ ಅಕ್ಷರ” ದ ಪುಟಪುಟಗಳಲ್ಲಿ ಅವರ ಆ ದಾರ್ಶನಿಕನ ಗುಣಗಳನ್ನು ನೋಡ್ತೇವೆ. ಹೀಗಾಗಿ ಜನಾಂದೋಲನಗಳ ಜೊತೆಗಿದ್ದೂ ಅವುಗಳ ಜೊತೆ ಒಂದು ವಿಮರ್ಶಾತ್ಮಕ ಅಂತರವನ್ನೂ ಅವರು ಉಳಿಸಿಕೊಂಡು ಅವುಗಳ ಮುನ್ನಡೆಗೆ ಒಂದು ನೆಲೆಯಲ್ಲಿ ಪ್ರೇರಣೆಯಾಗುತ್ತ ಇನ್ನೊಂದೆಡೆ ಎಚ್ಚರದಿಂದ ಅವುಗಳನ್ನು ಕಾಯುತ್ತ ಇರುವಂಥ ಅವರ ಮನೋಭಾವದ ಕುರಿತು ಮಾತಾಡಿದೆ.

ದೇವನೂರು ಮಹಾದೇವ ಅವರು “ಏನೇನೋ ಮಾತಾಡಬೇಕೆಂದು ಬಂದಿದ್ದೆ, ನೀವು ತೊಡಿಸಿದ ಈ ಶಾಲು, ಹಾಕಿದ ಹಾರ ತುರಾಯಿಗಳಲ್ಲಿ ಎಲ್ಲ ಎಲ್ಲೋ ಎಗರಿಹೋಯಿತು” ಎಂದು ಹತ್ತು ನಿಮಿಷ ಮಾತಾಡಿದರು. ಆಮೇಲೆ ಅತಿಥಿಗಳಾಗಿ ಆಗಮಿಸಿದ ಪತ್ರಕರ್ತ ಗೆಳೆಯ ದಿನೇಶ್ ಅಮೀನ್ ಮಟ್ಟು ಮಾತನಾಡುವಾಗ ಮಹದೇವ ಅವರಿಗೆ ಒಂದೆರಡು ಕಿವಿಮಾತು ಹೇಳಿದರು. ಒಂದು: ದೇವನೂರು ಮಹದೇವ ಇಂಥ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೆಚ್ಚುಹೆಚ್ಚಾಗಿ ಪಾಲ್ಗೊಳ್ಳಬೇಕು, ಎರಡು: ಸ್ವಲ್ಪ ಸುದೀರ್ಘ ಅವಧಿಯ ವರೆಗೆ ಮಾತನಾಡಬೇಕು…!

ಅದಾದ ಒಂದೆರಡು ತಿಂಗಳಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ದೇವನೂರು ಮಹಾದೇವ ಅವರ ವ್ಯಕ್ತಿತ್ವ ಸಾಹಿತ್ಯ ತತ್ವಗಳ ಕುರಿತು ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಿದಾಗ ಬಿ.ಎಂ.ಪುಟ್ಟಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯೊಂದರಲ್ಲಿ “ನಾನು ಎದೆಗೆ ಬಿದ್ದ” ಅಕ್ಷರ ಕೃತಿಯನ್ನು ದೃಷ್ಟಿಯಲ್ಲ್ಲಿಟ್ಟುಕೊಂಡು ದೇವನೂರರ ತಾತ್ವಿಕತೆಯ ಬಗ್ಗೆ ಕೆಲವು ಮಾತುಗಳನ್ನಾಡಿದ್ದೆ. ದೇವನೂರರು ಉದ್ಘಾಟಣೆ ಕಾರ್ಯಕ್ರಮದ ನಂತರ ನಿರ್ಗಮಿಸಿದ್ದು ನೋಡಿದ್ದೆ. ಅವರು ಮತ್ತೆ ಬಂದು ಕುಳಿತದ್ದು ನೋಡಿರಲಿಲ್ಲ. ಬಂದು ಯಾವಾಗಲೋ ಹಿಂದಿನ ಸಾಲಿನಲ್ಲಿ ಪ್ರೇಕ್ಷಕರ ಮಧ್ಯೆ ಕುಳಿತಿದ್ದರಂತೆ. ನಿಮ್ಮ ಮಾತುಗಳನ್ನು ಕೇಳಿದೆ, ಚೆನ್ನಾಗಿ ಮಾತನಾಡಿದಿರಿ ಎಂದರು. ಒಂದೆರಡು ತಿಂಗಳ ಹಿಂದಷ್ಟೇ ಧಾರವಾಡಕ್ಕೆ ಬಂದಿದ್ದಿರಿ, ಈಗ ಮತ್ತೆ ಬಂದಿದ್ದೀರಿ, ಹಿಂದೆ ಅನಾವೃಷ್ಟಿ, ಈಗ ಅತಿವೃಷ್ಟಿ. ನೀವು ಹ್ಞೂಂ ಎಂದರೆ ಅತಿವೃಷ್ಟಿಗೆ ನಾವು ರೆಡಿ ಎಂದೆ. ನಕ್ಕರು.

ಇಷ್ಟು ಪೀಠಿಕೆ, ಮುಂದಿನ ವಾರ ದೇವನೂರರ “ಎದೆಗೆ ಬಿದ್ದ ಅಕ್ಷರ” ಪುಸ್ತಕದ ಕುರಿತು ನಾನು ಬರೆಯಲಿರುವ “ಅವಧಿ”ಯ ನನ್ನ ಅಂಕಣ ಬರಹಕ್ಕೆ…!