ಅವಳ ಕಣ್ಣಿಂದ ನೋಡಿದರೆ ಅಭಿವೃದ್ಧಿ ಮೀಮಾಂಸೆ ಹೇಗಿರುತ್ತದೆ?-ಕೆ.ಪಿ.ಸುರೇಶ
“ನಾನು ಒಂದು ಪಲ್ಲ ಅಕ್ಕಿ ಅನ್ನಮಾಡಿ ಬನ್ನೀ ಬನ್ನೀ ಅಂತದ್ರೂವೆ, ಗಂಡಸರನ್ನ ಅನ್ನಪೂರ್ಣೆ ಅಂತ ಕರ್ಯಲ್ಲ. ಅನ್ನ ಇಕ್ಕೋಳು ತಾಯಿ, ಭೂಮೀನ ತಾಯಿ ಅಂತೀವಿ, ಕಾಸು? ಅದೂ ಲಕ್ಷ್ಮಿ.. ನಾವು ನಡ್ಕೊಳ್ಳೊದೂಮಾರಮ್ಮಂಗೇ ಅಲ್ವೇ?” ಕನಕಪುರದ ಹಿರಿಯ ರೈತರೊಬ್ಬರು ಮಹಿಳೆಯರ ಕೃಷಿ ಸಶಕ್ತೀಕರಣದಲ್ಲಿ ಮಹಿಳೆಯರನ್ನು ಉದ್ದೇಶಿಸಿ ಹೇಳಿದ್ದ ಮಾತು.
ರೈತ ಸಂಘದ ಪ್ರಭಾವವಿದ್ದ ಪ್ರದೇಶ ಅದು. ಸಾಧಕ ರೈತರೆಂದು ಹೆಸರು ಗಳಿಸಿದ್ದ ಪುರುಷರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಕರೆಸಿದ್ದೆ. “ನಾವು ಮಾಡಿದ್ದು ಅಷ್ಟರಲ್ಲೇ ಇದೆ ಸಾರ್, ಎಲ್ಲಾ ನಮ್ಮನೆ ಹೆಂಗಸರ ಸಾಧನೆ” ಎಂದು ಮುಕ್ತವಾಗಿ ಅವರೆಲ್ಲಾ ಹೇಳಿದ್ದರು. ಮುಂದುವರಿದು, ‘ಹೆಣ್ಮಕ್ಕಳಿಗೆ ಬೇಸಾಯದಲ್ಲಿ ಹೇಳ್ಕೊಡೊಕೇನೂ ಇಲ್ಲ ಸಾರ್, ಅವರಿಂದಾನೇ ಕಲೀಬೇಕು , ಆದರೆ ನಮ್ಮ ಇಲಾಖೆ, ಬ್ಯಾಂಕು, ಕೃಷಿ ತಜ್ಞರೆಲ್ಲಾ ಅವ್ರನ್ನ ಲೆಕ್ಕಕ್ಕೇತೆಗಂಡಿಲ್ಲ. ಗಂಡಸರು ಓದ್‍ದಷ್ಟೂ ಹೆಣ್ಮಕ್ಳನ್ನ ಮೂಲೆಗೆ ತಳ್ಳೊದು ಜಾಸ್ತಿ ಆಗ್ಬುಟ್ಟದೆ ” ಎಂದರು. ಈ ತಪ್ಪೊಪ್ಪಿಗೆಯೂ ಹೆಣ್ಣನ್ನು ಹೊಗಳಿ ಇದ್ದಲ್ಲೇ ಇರಿಸುವ ಉಪಾಯದಂತೆ ನನಗೆ ಕಂಡಿದೆ. ಆದರೆ ಇಷ್ಟಾದರೂ ಅರಿವಿನ ಹೇಳಿಕೆ ಬರುವುದು ಮುಖ್ಯ.
ಮಹಿಳೆಯರ ಸ್ಥಿತಿಗತಿ ಬಗ್ಗೆ ವ್ಯಾಪಕವಾದ ಚರ್ಚೆಗೆ ಮಹಿಳಾ ದಿನ ನೆಪವಾಗಲಿದೆ. ಇದು ನಿರಂತರ ನಡೆಯಬೇಕಿದೆ. ಕಣ್ಣೆದುರು ಕಾಣುವ ಒಂದೆರಡು ಅಂಶಗಳನ್ನು ಮುಂದಿಡುವೆ. 1. ಪ್ರಾತಿನಿಧ್ಯ. 2. ಹಕ್ಕು ಸವಲತ್ತು. 3. ಜೀವನದ ಭದ್ರತೆ
ಸಂಸತ್ತಿನಲ್ಲಿ 1/3 ಕಾದಿರಿಸುವ ಪ್ರಸ್ತಾಪವನ್ನು ನಮ್ಮ ಎಲ್ಲಾ ಪಕ್ಷಗಳೂ ಜಾಣವಾಗಿ ಮರೆತಂತಿವೆ. ಎಲ್ಲಾ ಪಕ್ಷಗಳೂ ಪುರುಷಪ್ರಧಾನ ಎಂದು ಪ್ರತ್ಯೇಕ ಹೇಳಬೇಕಿಲ್ಲ. ಪ್ರಾತಿನಿಧ್ಯದ ವಿವರ ಗಮನಿಸಿದರೆ ನಮಗೇ ಮುಜುಗರಆಗಬೇಕು. ನಾವು ದ್ವೇಷಿಸುವ ಪಾಕಿಸ್ತಾನದಲ್ಲಿ ಈ ಪ್ರಾತಿನಿಧ್ಯ ಶೇ.20 ಚಿಲ್ಲರೆ. ನೆರೆಯ ಬಾಂಗ್ಲಾದಲ್ಲೂ ಇಷ್ಟೇ ಪ್ರಮಾಣ ಇದೆ. ನಮ್ಮಲ್ಲಿ ಮಾತ್ರಾ ಇದರ ಅರ್ಧ..!! ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕವೂ ಸೇರಿ ಹಲವು ರಾಜ್ಯಗಳು ಮಹಿಳೆಯರಿಗೆ ಸ್ಥಾನ ಮೀಸಲಿರಿಸಿವೆ. ಇವೆಲ್ಲಾ ಮೂಲತಃ ಹಣ್ಣಿನ ಬದಲು ಸಿಪ್ಪೆ ನೀಡುವ ಸಂಗತಿ. ಈ ಸಂಸ್ಥೆಗಳಿಗೆ ಯಾವ ಸ್ವಾಯತ್ತತೆಯೂ ಇಲ್ಲ.
ಇದಕ್ಕಿಂತ ಹೆಚ್ಚಾಗಿ ರಾಜಕೀಯ ಪ್ರಾತಿನಿಧ್ಯ ಪಡೆದಿರುವ ಮಹಿಳೆಯರೂ ಮಹಿಳಾ ದೃಷ್ಟಿಕೋನದ ಅಭಿವೃದ್ಧಿ ಪಾತಳಿ ಬಗ್ಗೆ ಮಾತಾಡಿದ ಕುರುಹೇ ಇಲ್ಲ. ಲಿಂಗದಲ್ಲಿ ಹೆಣ್ಣಾಗಿರುವುದು ಬಿಟ್ಟರೆ ಉಳಿದಂತೆ ಪುರುಷ ಪ್ರಧಾನ ಆಡಳಿತಸಂಹಿತೆಯ ಅಂಗವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪ್ರಾತಿನಿಧ್ಯದಲ್ಲಿ ಮಹಿಳಾ ದಿಕ್‍ಕಾಣ್ಕೆಯನ್ನು ಮುನ್ನೆಲೆಗೆ ತರುವ ಯಾವ ಕಿಂಡಿಗಳೂ ಇಲ್ಲವೆನ್ನುವುದು ನಾವು ಗಮನಿಸಬೇಕು. ಅನಿವಾರ್ಯ ಒತ್ತಡಕ್ಕೆ ನಮ್ಮಸರ್ಕಾರಗಳು ಮಾಮೂಲಿ ಅನುದಾನವನ್ನು ‘ಜೆಂಡರ್ ಬಜೆಟ್’ ಅನ್ನುವ ಬಣ್ಣದ ಕಾಗದದಲ್ಲಿ ಸುತ್ತಿ ಪ್ರಸ್ತುತಿ ಪಡಿಸುತ್ತಿದ್ದಾರೆ.
ಇತ್ತ, ಗ್ರಾಮ ಪಂಚಾಯತುಗಳಲ್ಲಿ ಗ್ರಾಮಸಭಾ ಎಂಬ ಕಡ್ಡಾಯ ಸಭೆ ಇರುತ್ತೆ. ಎಲ್ಲಾ ಯೋಜನೆಗಳೂ ಇಲ್ಲಿ ಪಾಸಾಗಬೇಕು. ಮಹಾರಾಷ್ಟ್ರದ ಸಂಘಟನೆಯೊಂದು “ಮಹಿಳೆಯರ ಆದ್ಯತೆಯನ್ನು ಈ ಪುರುಷ ಪ್ರಧಾನ ಪಂಚಾಯತುಗಳು ಗಮನಿಸುತ್ತಿಲ್ಲ” ಎಂದು ದೊಡ್ಡ ಪ್ರಮಾಣದ ಚಳವಳಿ ಎತ್ತಿಕೊಂಡ ಮೇಲೆ ಮಹಿಳಾ ಗ್ರಾಮಸಭೆಯನ್ನೂ ಅಲ್ಲಿನ ಸರ್ಕಾರ ( ಒಲ್ಲದ ಮನಸ್ಸಿನಿಂದ) ಕಡ್ಡಾಯಗೊಳಿಸಿತು. ಈ ಕಸರತ್ತು ಕರ್ನಾಟಕದಲ್ಲೂ ಇದೆ.
ಈ ಮಹಿಳಾ ಗ್ರಾಮಸಭೆಯನ್ನು ಗಮನಿಸಿದರೆ ಅಚ್ಚರಿಯ ಅಂಶ ಹೊರ ಬೀಳುತ್ತದೆ. ಸತತವಾಗಿ ಮಹಿಳೆಯರ ಅಭಿವೃದ್ಧಿ ಆದ್ಯತೆ ಪುರುಷರ ಆದ್ಯತೆಗಳಿಗಿಂತ ಭಿನ್ನವಾಗಿತ್ತು. ಪುರುಷರಿಗೆ ರಸ್ತೆ ಸಮುದಾಯ ಭವನ ಚರಂಡಿ ( ಇವೆಲ್ಲಾ ಆದಾಯದ ಮೂಲಗಳು!) ಮುಖ್ಯವಾದರೆ, ಮಹಿಳೆಯರಿಗೆ ನೀರು, ಶೌಚಾಲಯ, ಆಸ್ಪತ್ರೆ, ಬೀದಿ ದೀಪ, ಸುವ್ಯವಸ್ಥೆಯ ಶಾಲೆ, ಅಂಗನವಾಡಿಯ ವಿಸ್ತರಣೆ ಎಲ್ಲಾ ಮುಖ್ಯವಾಗಿತ್ತು. ಮಹಿಳೆಯರ ಈ ಪರ್ಯಾಯ ಲೋಕದೃಷ್ಟಿಯನ್ನು ಅನಾವರಣಗೊಳಿಸುವ ವೇದಿಕೆ ಪಂಚಾಯತ್ ಮಟ್ಟದಲ್ಲಿ ಇದೆ. ಆದರೆ ಅಧಿಕಾರದ ಏಣಿ ಏರಿದಂತೆಲ್ಲಾ, ( ಜಿಲ್ಲೆ, ರಾಜ್ಯ…ಹೀಗೆ) ಅಲ್ಲಿನ ಆಡಳಿತದ ಕಡಿವಾಣ ಹಿಡಿದ ವ್ಯವಸ್ಥೆಯೊಳಗೆ ಮಹಿಳಾ ಜನಾಗ್ರಹವನ್ನುಗುರುತಿಸುವ ಯಾವ ಸೂಚಿಯೂ ಇಲ್ಲ. ಇದರ ಫಲವಾಗಿ, ಮೆಟ್ರೋ ಓಡಿಸುವ ಮೊದಲ ಮಹಿಳೆ, ವಿಮಾನ ಹಾರಿಸಿದ ಮೊದಲ ಮಹಿಳೆ ಮುಂತಾದವೆಲ್ಲಾ ಮೆರುಗು ಪಡೆಯುತ್ತವೆ. ವೃತ್ತಿ, ಉದ್ಯೋಗದ ಮಜಲನ್ನು ನೋಡಿದರೆ ಅಲ್ಲೂ ಅಷ್ಟೇ. ಲೈಂಗಿಕ ಶೋಷಣೆಯ ಕಾನೂನು ಮಾಡಿದಾಗಲೂ, ಪ್ರಕರಣಗಳು ಸ್ಫೋಟವಾದಾಗ ಅದನ್ನು ಮುಚ್ಚಿ ಹಾಕಲು ಇರುವ ಧಾವಂತ ನ್ಯಾಯ ಕೊಡಿಸಲು ಇರುವುದಿಲ್ಲ.
ನಗರಗಳ ಕಛೇರಿ ಉದ್ದಿಮೆಗಳಲ್ಲಿ ಮಹಿಳೆಯರಿಗೆ ಆದ್ಯತೆ ಯಾಕೆಂದು ನಾನೊಮ್ಮೆ ಮಧ್ಯಮ ಉದ್ಯಮಿಯಲ್ಲಿ ಕೇಳಿದ್ದೆ. “ಅವರು ಹೇಳಿದ ಹಾಗೆ ಕೇಳುತ್ತಾರೆ” ಎಂದು ನಿರಾಮಯವಾಗಿ ಹೇಳಿದ್ದರು. ಕೆಲಸ ಕಲಿಯದಿದ್ದರೆ ತಾತ್ಸಾರ. ಕಲಿತರೆ ಅಭದ್ರತೆ, ಕೀಳರಿಮೆಯ ವ್ಯಂಗ್ಯವನ್ನು ಮಹಿಳೆಯರು ಅನುಭವಿಸುತ್ತಲೇ ಬಂದಿದ್ದಾರೆ.
ಆದರೆ ನನಗೆ ವಿಷಾದ ತಂದಿದ್ದು ಉದ್ಯೋಗದ ರಂಗಕ್ಕೆ ಕಾಲಿಡಲು ತಯಾರಾಗುತ್ತಿರುವ ಉನ್ನತ ಶಿಕ್ಷಣದ ಹಂತದಲ್ಲಿರುವ ಹುಡುಗಿಯರನ್ನು ಕಂಡಾಗ. ನಾನು ಮುಖಾಮುಖಿಯಾದ ಕಾಲೇಜುಗಳ ಬಹುತೇಕ ಹುಡುಗಿಯರು ಕನಿಷ್ಠ ಅಸ್ಮಿತೆಯನ್ನೂ ವ್ಯಕ್ತಪಡಿಸಿರಲಿಲ್ಲ. ಅವರ ರಾಜಕೀಯ, ಸಾಹಿತ್ಯದ ಜ್ಞಾನ ಕೂಡಾ ಆತಂಕ ಹುಟ್ಟುವಷ್ಟು ಕಳಪೆಯಾಗಿತ್ತು. ಉದ್ಯೋಗದ ಎಕ್ಸಾಮುಗಳಿಗೆ “ಜಿಕೆ” ಎನ್ನುವ ಪುಸ್ತಕ ಓದಿಕೊಳ್ಳುವುದೇ ಪರಮ ಸಾಧನೆಎಂಬಂತೆ ಇದ್ದರು. ಮದುವೆ ಆಗುವ ಧಾವಂತ ಮತ್ತು ಅದರ ಖುಷಿಯ ಕನಸು ಕಾಣುವ ಸಂಖ್ಯೆಯೂ ದೊಡ್ಡದಿದೆ ಎಂದು ಒಬ್ಬರು ಹೇಳಿದ್ದು ಕಿವಿಯಲ್ಲಿ ಇನ್ನೂ ಅನುರಣನಗೊಳ್ಳುತ್ತಿದೆ. ಇಂಥಾ ಮಹಿಳೆಯರೇ ಉದ್ಯಮಪತಿಗಳಿಗೆ ಪರಮ ಖುಷಿಯ ಆಯ್ಕೆ. ಸಾಮಾಜಿಕ ಪ್ರಜ್ಞೆಯನ್ನು ಉನ್ನತ ಶಿಕ್ಷಣ ಮೊಂಡಾಗಿಸುವ ಕಾಲಘಟ್ಟದಲ್ಲಿ ನಾವಿದ್ದೇವೆಯೇ?
ಇದನ್ನು ಕರ್ನಾಟಕ ಕಳೆದ ಮೂರು ವರ್ಷಗಳಲ್ಲಿ ಕಂಡ ಮುಖ್ಯ ಹೋರಾಟಗಳೊಂದಿಗೆ ಹೋಲಿಸಿ. ಈ ಮೂರು ಹೋರಾಟಗಳನ್ನು ನಡೆಸಿದ್ದು ಮಹಿಳೆಯರು. ರಾಯಚೂರಿನ ಮದ್ಯನಿಷೇಧ ಆಂದೋಲನ, ಪಿಎಫ್ ಕಡ್ಡಿಯಾಟದವಿರುದ್ಧ ಗಾರ್ಮೆಂಟ್ ಕಾರ್ಮಿಕ ಮಹಿಳೆಯರು ಮತ್ತು ಉದ್ಯೋಗ ಸುಭದ್ರತೆ ಕುರಿತು ಅಂಗನವಾಡಿ ತಾಯಂದಿರ ಚಳವಳಿಗಳು, ಮೂಲತಃ ನಮ್ಮ ಬಹುಸಂಖ್ಯಾತ ಮಹಿಳೆಯರ ದಿಕ್ಕಾಣ್ಕೆಯನ್ನು ನಮಗೆ ತೋರಿಸಿಕೊಟ್ಟಿದೆ. ಈ ಮೂರೂ ಚಳವಳಿಗಳ ಸಾವಿರಾರು ತಾಯಂದಿರು, ಅಧಿಕೃತ ಮಾನದಂಡಗಳ ಪ್ರಕಾರ ಅರೆ ಶಿಕ್ಷಣ ಪಡೆದವರು. ಉದ್ಯೋಗ ಭದ್ರತೆ ಇಲ್ಲದವರು. ಸಂಸಾರ ನಿರ್ವಹಣೆಗೆ ಅವಿರತ ದುಡಿಯುವವರು. ಮಾಮೂಲಿ ಗ್ರಹಿಕೆ ಪ್ರಕಾರ ಇವರು ತುಟಿಕ್ ಪಿಟಕ್ಕೆನ್ನದೇ ಇರಬೇಕಾಗಿತ್ತು. ಆದರೆ ಹೋರಾಟದ ಕೆಚ್ಚು, ಸ್ಥೈರ್ಯ ತೋರಿದ್ದು ಇವರು.
***
ಗ್ರಾಮೀಣ ಮಹಿಳೆಯರ ಆರೋಗ್ಯದ ಸ್ಥಿತಿ-ಗತಿ, ಅವಕಾಶಗಳ ಲಭ್ಯತೆ ಇತ್ಯಾದಿಗಳನ್ನು ಗಮನಿಸಿದರೆ ಪಿಚ್ಚೆನ್ನಿಸುತ್ತದೆ. ಶೇ.50ರಷ್ಟು ಮಹಿಳೆಯರಲ್ಲಿ ರಕ್ತಹೀನತೆ ಇದೆ. ಅಪೌಷ್ಟಿಕತೆ ಇದೆ. ಆದರೆ ಯಾವ ಹಳ್ಳಿಗೆ ಹೋದರೂ; ಕ್ಷಣವೂ ಕೂರದೇ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿರುವ ಮಹಿಳೆಯರನ್ನು ಕಾಣಬಹುದು. ಹಾಗೇ ಗಂಡಸರು ಠಳಾಯಿಸಿಕೊಂಡು ಇರುವ ಚಿತ್ರ ಮಾಮೂಲಿ. ( ರಹಮತ್ ತರೀಕರೆ ತಮ್ಮ ಒಂದು ಲೇಖನದಲ್ಲಿ ಇದನ್ನು ಸ್ಪರ್ಶಿಯಾಗಿ ಚಿತ್ರಿಸಿದ್ದಾರೆ)
ಜೀವನೋಪಾಯಕ್ಕೆ ಸ್ವಸಹಾಯ ಸಂಘ ಮಾಡಿಕೊಂಡು ಹಾಗೂ ಹೀಗೂ ಉಳಿತಾಯ ಮಾಡಿ, ಆರಂಭದಿಂದ ಹಿಡಿದು ಹಬ್ಬ ಹರಿದಿನದವರೆಗೆ ಕಾಸು ಹೊಂಚಿಕೊಂಡು ಒದ್ದಾಡುವವರು ಮಹಿಳೆಯರೇ. ಇದರೊಂದಿಗೇಪಾಳೆಗಾರಿಕೆಯ ಪುರುಷಪ್ರಧಾನ ನಿಯಂತ್ರಣವನ್ನು ಗಮನಿಸಿದರೆ ಇಡೀ ಗ್ರಾಮೀಣ ಪ್ರದೇಶವೇ ಬಯಲು ಬಂದೀಖಾನೆಯಂತೆ ಕಾಣುತ್ತದೆ. ಇವರಿಗೆಲ್ಲಾ ಕೃಷಿ, ಕೃಷಿಯೇತರ ಉತ್ಪನ್ನಗಳ ಮೌಲ್ಯವರ್ಧನೆ ಇತ್ಯಾದಿ ಮಾಡಿಸಲು ಬಂಡವಾಳ ನೀಡುವ ಕ್ರಮ ಕೈಗೊಂಡಿದ್ದೇವೆ ಎಂದು ಹೇಳುವ ಸರ್ಕಾರದ ವಿವರ ಬೆಂಬತ್ತಿದರೆ ಹತ್ತೊ ಇಪ್ಪತ್ತೊ ಸಾವಿರ ಕೊಟ್ಟು ಕೈತೊಳಕೊಂಡ ಉದಾಹರಣೆಗಳೇ ದೊರಕುತ್ತವೆ.
ಈ ಮಹಿಳೆಯರ ಸುಭದ್ರ ಜೀವನದ ಕನಸು; ಅದಕ್ಕೆದುರಾಗಿ ಅವರು ಎದುರಿಸುತ್ತಿರುವ ಕಷ್ಟ ಕೋಟಲೆಗಳು ನಮ್ಮ ಸಂವಾದ, ಚರ್ಚೆ, ವಾದ ಮತ್ತು ಮಧ್ಯಪ್ರವೇಶದ ಭೂಮಿಕೆಯಾಗಿಲ್ಲ. ಹೆಚ್ಚೆಂದರೆ ಶಾಲೆ, ಆಸ್ಪತ್ರೆ ಕುಡಿಯುವನೀರಿಗೆ ನಮ್ಮ ಪರಿಹಾರ ನಿಲ್ಲುತ್ತದೆ. ನಮ್ಮ ಗ್ರಾಮೀಣ ಲೋಕ ನಿಂತಿರುವುದೇ ಈ ಮಹಿಳೆಯರಿಂದ. ಅವರ ಕಣ್ಣಿಂದ ನೋಡಿದರೆ ಒಂದು ಅಭಿವೃದ್ಧಿ ಮೀಮಾಂಸೆ ಹೇಗಿರುತ್ತದೆ ಎಂದು ನಾವ್ಯಾರೂ ಚಿಂತಿಸಿಲ್ಲ. ಉದಾ: ಬಾಂಗ್ಲಾದೇಶದಲ್ಲಿ ಎರಡು ದಶಕಗಳ ಹಿಂದೆಯೇ ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ಮಹಿಳೆಯರು ಒಪ್ಪುವುದಿಲ್ಲ ಎಂಬ ಅಧ್ಯಯನ ಬಂದಿದೆ. ಕೃಷಿ, ಶಿಕ್ಷಣ, ಬಾಳಿನ ಚೌಕಟ್ಟು, ಆರ್ಥಿಕ ಸಬಲತೆ ಎಲ್ಲದರಲ್ಲೂ ಮಹಿಳೆಯದೃಷ್ಟಿಕೋನ ಈಗಿರುವ ಅಭಿವೃದ್ಧಿ ಪಾತಳಿಗಿಂತ ಭಿನ್ನವಾಗಿದೆ. ಹಕ್ಕು ಸವಲತ್ತು ಸ್ವಾತಂತ್ರ್ಯಗಳು ಈ ಬದುಕಿನ ಸುಸ್ಥಿರತೆಯ ಪರಿಕಲ್ಪನೆಯೊಂದಿಗೆ ಹೆಣೆದುಕೊಳ್ಳದಿದ್ದರೆ ಏನು ಬಂತು?
ಹಕ್ಕು ಆಧಾರಿತ ಒತ್ತಾಯಗಳ ಯುಗದಲ್ಲಿ ನಾವಿದ್ದೇವೆ. ಅಭಿವ್ಯಕ್ತಿಯ ಹಕ್ಕು, ಆಯ್ಕೆಯ ಹಕ್ಕು, ಘನತೆಯ ಹಕ್ಕು ಹೀಗೆ. ಸಮಾಜದ ದೋಷಗಳನ್ನು ತಿದ್ದಿ ಸರಿಪಡಿಸಲು ಇದು ಸರಿಯಾದ ಸಂವಿಧಾನಾತ್ಮಕ ಮಾರ್ಗ. ಆದರೆ ಇದುಎಲ್ಲರನ್ನೂ ಒಳಗೊಳ್ಳುವಷ್ಟು ವಿಶಾಲವಾಗಬೇಕಿದೆ. ಚುಕ್ಕಿ ನಂಜುಂಡಸ್ವಾಮಿಯವರು ಕೃಷಿ ಲೋಕದಲ್ಲೇ ರೈತ ಮಹಿಳಾವಾದ ದಕ್ಷಿಣ ಅಮೆರಿಕೆಯಲ್ಲಿ ಹುಟ್ಟಿರುವುದನ್ನು ಉದಾಹರಿಸುತ್ತಾರೆ.
ರಾಜಸ್ತಾನದ ಬನ್ಸ್‍ವಾರಾದಲ್ಲಿ ಕೆಲವು ಸಾವಿರ ಹೆಣ್ಣುಮಕ್ಕಳು ಪುಟ್ಟ ಕೌಟುಂಬಿಕ ಕ್ರಾಂತಿ ಮಾಡುತ್ತಿದ್ದಾರೆ. ಏನಪ್ಪಾ ಅಂದರೆ ಸೆರಗಲ್ಲಿ ಮುಖ ಮುಚ್ಚಿಕೊಳ್ಳುವ ರೂಢಿಗತ ಸಂಪ್ರದಾಯ ಮುರಿದಿದ್ದಾರೆ. ಎರಡನೆಯದಾಗಿ, ಕುಟುಂಬದ ಎಲ್ಲರೂ ಜೊತೆಯಾಗಿ ಉಣ್ಣುವಂತೆ ಒತ್ತಾಯಿಸುತ್ತಿದ್ದಾರೆ. ನಗು ಬರುತ್ತಿದೆ ಅಲ್ಲವೇ? ನಮ್ಮ ಗ್ರಾಮೀಣ ಪರಿಸರದಲ್ಲಿ ಹೆಣ್ಣು ಮಗಳು ಕೊನೆಗೆ ಊಟ ಮಾಡುತ್ತಾಳೆ. ಅಳಿಕೆ ಪಳಿಕೆ ತಿನ್ನಬೇಕು ಅವಳು. ಬಿಸಿ ಊಟ, ರೊಟ್ಟಿ ಗಂಡನಿಗೂ ಗಂಡುಮಕ್ಕಳಿಗೂ. ಈ ಹಟ ಹಿಡಿದಬದಲಾವಣೆಯಿಂದಾಗಿ ಹೆಣ್ಣುಮಕ್ಕಳು ಈ ತಾಯಂದಿರೊಂದಿಗೆ ಬಿಸಿ ರೊಟ್ಟಿ ಹೊಟ್ಟೆ ತುಂಬಾ ಉಣ್ಣುತ್ತಿದ್ದಾರೆ.
ಈ ಕ್ರಾಂತಿಯೂ ವ್ಯಾಪಕವಾಗಿಲ್ಲ. ಇದಕ್ಕೂ ಹುಬ್ಬು ಗಂಟಿಕ್ಕಿ ನಮ್ಮ ಸಂಪ್ರದಾಯ ಸಂಸ್ಕೃತಿ ಎಕ್ಕುಟ್ಟು ಹೋಯಿತು ಎಂದು ಹುಯಿಲಿಟ್ಟವರಿದ್ದಾರೆ. ಕಾನೂನು ಸವಲತ್ತುಗಳ ಸೌಲಭ್ಯದ ಮೂಲಕ ಹೋರಾಟ ನಡೆಸುವುದು ಒಂದುಮಾದರಿ. ಜೀವನೋಪಾಯಗಳ ಸುಭದ್ರತೆಯ ಬಗ್ಗೆ ಕೈಜೋಡಿಸುವ ಮತ್ತು ಕೌಟುಂಬಿಕ ಕಪಿಮುಷ್ಠಿಯ ವಿರುದ್ಧ ಸಾಮುದಾಯಿಕ ಅರಿವು ಮೂಡಿಸುವ ಕ್ರಿಯಾಶೀಲತೆ ನಮ್ಮದಾಗಬೇಕು. ಅಂಚಿಗೆ ಸರಿದಿರುವ ಬೃಹತ್ಸಮುದಾಯದ ಬದುಕಿನ ಬವಣೆಯ ಬಗ್ಗೆಯೂ ನಮ್ಮ ಮಹಿಳಾ ದಿನಾಚರಣೆ ಕ್ರಿಯಾಶೀಲವಾಗಬೇಕು. ಓದಿದ ನಮ್ಮ ದಿಟ್ಟ ಮಹಿಳೆಯರು ಗಾಣದೆತ್ತಾಗಿರುವ ಮೂಕ ಮಹಿಳಾ ಜನಸ್ತೋಮದ ಪರವಾಗಿ ಹೆಚ್ಚು ಮಾತಾಡಬೇಕಿದೆ. ಅವರ ಜೀವನ ಮಟ್ಟ, ಆರ್ಥಿಕ ಅವಕಾಶಗಳು, ಅವರನ್ನು ಮುರುಟಿಸುತ್ತಿರುವ ಸಾಂಪ್ರದಾಯಿಕ ಕೋಟಲೆಗಳು, ಅವರ ಸಾಂಸ್ಕೃತಿಕ ಆಸೆಗಳು- ಇವೆಲ್ಲವೂ ಚರ್ಚೆಯ ಮುಂಚೂಣಿಗೆ ಬರಬೇಕಿದೆ.
ಮಂಜೇಶ್ವರ ಗೋವಿಂದ ಪೈಯವರ ಸಾನೆಟ್ “ಶ್ವಪಚನನು ಒಳಗೊಳದೆ ದಿವಕೇರ್ವೆನೆಂತು..? ಎಂಬ ಸಾಲು ಹೊಂದಿದೆ. ತೀವ್ರ ಆತ್ಮವಿಮರ್ಶೆಯ ಗಾಂಧೀಯ ಪ್ರಭಾವದ ಸಾಲು ಅದು. ಅದನ್ನೇ ಸ್ವಲ್ಪ ಬದಲಾಯಿಸಿ, “ಮಹಿಳೆಯನ್ನು ಒಳಗೊಳದೇ..” ಎಂದು ಓದಿಕೊಂಡರೆ ನಮ್ಮ ಕಾಲದ ಹೆಜ್ಜೆ-ಗತಿ ಸುಲಭ.