ಅಲ್ಲೆಲ್ಲೋ ಯಾರಿಗೇನೋ ಆದರೆ ನಾವಿಲ್ಲಿ ಮಿಡಿಯುವ ಸೋಜಿಗ -ಕೆ ಎನ್ ಗಣೇಶಯ್ಯ
ತೊಡೆಯ ಮೇಲೆ ಮಲಗಿದ್ದ ಮಗಳ ಕಣ್ಣೀರು ಪ್ಯಾಂಟಿನ ಮೂಲಕ ನನ್ನ ತೊಡೆಯನ್ನು ತೇವಗೊಳಿಸಿದಾಗ ಆಶ್ಚರ್ಯಗೊಂಡು ಸರಕ್ಕನೆ ಹಾಡುವುದನ್ನು ನಿಲ್ಲಿಸಿದ್ದೆ. ಹೌದು ಅವಳು ಅಳುತ್ತಿದ್ದಳು.
`ನಿನ್ನ ಮುಖ ಅರವಿಂದ; ನಿನ್ನ ನಗೆ ಶ್ರೀಗಂಧ; ಮುದ್ದು ಕಂದಾ.. ನಿನ್ನ ಮಂದಹಾಸವೆ ಮಾತೆಗೆ ಆನಂದ. ಜೋ.. ಜೋ.. ಜೋ ಕಂದ..’
ಐದು ವರ್ಷದವಳಾದ್ದಾಗಿನಿಂದಲೂ ನಾನು ಈ ಹಾಡನ್ನು ಅವಳಿಗಾಗಿ ಹಾಡುವುದು ರೂಡಿಯಾಗಿತ್ತು. ಅದನ್ನು ಕೇಳುತ್ತ ಉತ್ಕಟವಾದ ಆನಂದದಲ್ಲಿ ತಲ್ಲೀನಳಾಗುತ್ತಿದ್ದಳು. ಅವಳು ಬೆಳೆದಂತೆ, ವಿಧ್ಯಾಬ್ಯಾಸಕ್ಕೆಂದು ನಮ್ಮಿಂದ ದೂರದೂರ ಹೋದಷ್ಟೂ ಅದನ್ನು ಕೇಳುವ ಕಾತುರ ಅವಳಲ್ಲಿ ಹೆಚ್ಚಾಗುತ್ತಲೇ ಹೋಗಿತ್ತು. ಹಾಗಾಗಿ ಪಿ ಹೆಚ್ ಡಿ ಗೆಂದು ನೆದರ್ಲ್ಯಾಂಡ್‍ಗೆ ಹೋಗಿದ್ದವಳು ಕಾರಣಾಂತರದಿಂದ ನಾವು ಜರ್ಮನಿಗೆ ಹೋದಾಗ ನಮ್ಮನ್ನು ನೋಡಲೆಂದು ಬಂದು ಅಲ್ಲಿದ್ದ ಮೂರು ದಿನಗಳ ಪ್ರತಿ ರಾತ್ರಿಯೂ ತೊಡೆಯ ಮೇಲೆ ಮಲಗಿ ಆ ಹಾಡು ಹಾಡುವಂತೆ ಒತ್ತಾಯಿಸುತ್ತಿದ್ದಳು. ಕೊನೆಯ ದಿನ ಹಿಂದಿರುಗುವ ಮುನ್ನ, ಆ ಹಾಡನ್ನು ಕೇಳುವಾಗ ನನ್ನ ತೊಡೆಯನ್ನು ತೇವಗೊಳಿಸಿದ್ದ ಅವಳ ಕಣ್ಣೀರು ನನ್ನಲ್ಲೂ ಕಣ್ಣೀರು ತರಿಸಿತ್ತು. ಅದನ್ನು ತೋರಗೊಡದೆ ಅವಳನ್ನು ಬೀಳ್ಕೊಟ್ಟಮೇಲೆ ವೀಣಾಳನ್ನು ಕೇಳಿದ್ದೆ: ಈ ಭಾವನೆಗಳು ಬಂಧನಗಳು ಏಕೆ ಹೀಗೆ? ಪುಣ್ಯಳ ಬದಲಿಗೆ ಬೇರಿನ್ನಾವುದೋ ಮಗು ಹಾಗೆ ಕಣ್ಣೀರು ಸುರಿಸಿದ್ದರೆ ನನ್ನ ಮನವೇಕೆ ಹಾಗೆ ಮಿಡಿಯುತ್ತಿರಲಿಲ್ಲ? ನಮ್ಮ ಮಕ್ಕಳಿಗೆ ಮಾತ್ರ ಮಿಡಿಯುವ ನಾವು ಸ್ವಾರ್ಥಿಗಳಲ್ಲವೆ ಎಂದು. ಆದರೆ ಅವಳ ಉತ್ತರ ನನ್ನನ್ನು ದಿಗ್ಭ್ರಮೆಗೊಳಿಸಿತ್ತು.
`ಪುಣ್ಯ ನಿಮ್ಮ ಅನುವಂಶಿಕ ಮಗಳಲ್ಲದಿದ್ದರೂ ನಿಮ್ಮ ಮನಸ್ಸು ಹಾಗೆಯೇ ಮಿಡಿಯುತ್ತಿತ್ತು. ನಿಮ್ಮ ಸ್ಪಂಧನೆ ಅವಳು ನಿಮ್ಮ ಮಗಳೆಂಬ ಕಾರಣದಿಂದ ಮಾತ್ರವೇ ಸ್ಪುಟಗೊಂಡದ್ದಲ್ಲ. ಬದಲಿಗೆ ನೀವೇ ಬೆಳೆಸಿದ ಜೀವ ಎಂದಷ್ಟೆ. ಇಪ್ಪತ್ತೈದು ವರ್ಷಗಳ ಕಾಲ ನಾವು ಯಾರನ್ನೇ ಬೆಳೆಸಿದ್ದರೂ ನಮ್ಮ ಮನಸ್ಸು ಹಾಗೆಯೇ ಮಿಡಿಯುತ್ತದೆ. ಅದು ಮಾನವನ ದೌರ್ಬಲ್ಯ’ ಎಂದಿದ್ದಳು.
ಆದರೆ ಈ ಉತ್ತರ ನನಗೊಂದು ಪ್ರಶ್ನೆಯಾಗಿ ಕೊರೆಯತೊಡಗಿತು. ಕಾರಣ ವಿಕಾಸವಾದದ ದೃಷ್ಟಿಯಲ್ಲಿ ನನ್ನ ಅನುವಂಶಿಕ ಧಾತುಗಳನ್ನು ಹೊತ್ತಿಲ್ಲದ ಜೀವಕ್ಕೆ ನಾನು ಮಿಡಿಯುವುದು ವ್ಯರ್ಥವೇ ಸರಿ. ಹಾಗಿದ್ದಲ್ಲಿ ನನ್ನ ಅನುವಂಶಿಕವಲ್ಲದ ಮಕ್ಕಳಿಗೆ ನಾವೇಕೆ ಸ್ಪಂಧಿಸುತ್ತೇವೆ? ನನ್ನ ಆಶ್ಚರ್ಯವನ್ನು ಕಂಡ ವೀಣಾ `ನನ್ನ ವಾದಕ್ಕೆ ಸಾಕ್ಷಿ ಬೇಕಿದ್ದರೆ ನಾಯಿ ಸಾಕಿದವರನ್ನು ಕೇಳಿ’-ಎಂದಳು. ಹೌದು. ನಾಯಿ ಸಾಕಿದ್ದವರು ಅದಕ್ಕೆ ತೋರುವ ಪ್ರೀತಿ, ಆರೈಕೆ, ಅದು ವಯಸ್ಸಾದಂತೆ ಆರೋಗ್ಯ ಕೆಟ್ಟಾಗ ಅವರು ತೋರುವ ಕಾಳಜಿ, ಅನುಭವಿಸಿದ ನೋವು ಎಲ್ಲವೂ ತಿಳಿದಿತ್ತು. ಹಾಗೆಂದೆ ವೀಣಾಳ ಈ ವಾದ ನನ್ನನ್ನು ಮತ್ತೂ ಚಕಿತಗೊಳಿಸಿತ್ತು. ನಾವೇಕೆ ನಾಯಿಗೆ ಅಥವ ಅನವಂಶಿಕವಾಗಿ ನಮ್ಮವರಲ್ಲದವರ ಬಗ್ಗೆ ಅನುಕಂಪ ತೋರುತ್ತೇವೆ. ವಿಕಾಸದ ಹಾದಿಯಲ್ಲಿ ಅಂತಹ ಅನುಕಂಪ ಬೆಳೆಯಲು ಅವಕಾಶವೇ ಇಲ್ಲ. ಆದರೂ ಅದು ವಿಕಾಸಗೊಂಡಿದೆ ಎನ್ನುವುದನ್ನು ನಾವು ಪ್ರತಿ ನಿತ್ಯ, ನಮ್ಮ ಸುತ್ತಲೂ ಕಾಣಬಹುದು. ಬಸ್ಸಿನಲ್ಲಿ ಹೋಗುವಾಗ ಯಾವುದೋ ಮಗು ನಮ್ಮನ್ನು ನೋಡಿ ನಕ್ಕರೆ ಅದನ್ನು ನಮ್ಮ ಮಗುವಿನಂತೆಯೇ ಆಡಿಸುತ್ತೇವೆ. ಪ್ರವಾಹದಲ್ಲಿ ಅಥವ ತ್ಸುನಾಮಿಯಲ್ಲಿ ಜನ ಆಘಾತಕ್ಕೀಡಾದಾಗ ಇಡೀ ಜನಸ್ತೋಮ ಸ್ಪಂಧಿಸುತ್ತದೆ. ಅಂದರೆ ಎಲ್ಲೋ ವಿಕಾಸವಾದಕ್ಕೆ ವಿರುದ್ದವಾಗಿ ನಾವು ರೂಪುಗೊಂಡಿದ್ದೇವೆ ಎಂದೆ? ಈ ಅನುಮಾನಗಳನ್ನು ನನ್ನ ಕಾಫಿ ಗ್ಯಾಂಗಿನ ಮುಂದಿಟ್ಟೆ. ಸ್ವಲ್ಪ ಹೊತ್ತು ಯೋಚಿಸಿದ ಡಾ ಚಂದ್ರಶೇಖರ್ ಹೇಳಿದರು.
`ವಿಕಾಸಕ್ರಿಯೆ ಯಾವಾಗಲೂ ಸಂಪೂರ್ಣವಾಗಿ ಸ್ವಾರ್ಥವನ್ನೇ ಪ್ರೇರೇಷಿಸಿದ್ದರೆ ಮಾನವರಲ್ಲಿ ಮಾನವತ್ವವೇ ಉಳಿಯುತ್ತಿರಲಿಲ್ಲ ಅಲ್ಲವೆ?’ ಎಂದರು-ಗಂಭೀರವಾಗಿ.
ವಿಕಾಸವಾದದ ಮೂಲತತ್ವವನ್ನೆ ಪ್ರಶ್ನಿಸುವಂತಿತ್ತು ಅವರ ಪ್ರಶ್ನೆ. ಮರದ ತೊಗಟೆ ಅಥವ ಎಲೆಗಳಿಂದ ಕೆರೆದ ಪುಡಿಯಿಂದ ಕಾಗದದಂತಹ ತೆಳುವಾದ ಗೋಡೆಗಳ ಗೂಡುಗಳನ್ನು ನಿರ್ಮಿಸಿ, ಅದರೊಳಗೆ ಮೊಟ್ಟೆಗಳನ್ನಿಟ್ಟು ಸಾಕುವ ಸಣ್ಣದಾದ ಕಣಜಗಳಲ್ಲಿನ ಸಾಮಾಜಿಕ ಜೀವನದ ಮೇಲೆ ಪಿಹೆಚ್ ಡಿ ಮಾಡಿದ್ದ ಅವರು ತಮ್ಮ ಸಂಶೋಧನೆಯ ಉದ್ದಕ್ಕೂ ಸ್ವಾರ್ಥ ಧಾತುಗಳ ಹಾಗು ಸ್ವಾರ್ಥ ಗುಣಗಳ ವಿಕಾಸದ ಬಗ್ಗೆ ಕುತೂಹಲಕರವಾಗಿ ಮಾತನಾಡುತ್ತಿದ್ದವರು ಇಂದು ಇದ್ದಕ್ಕಿದ್ದಂತೆ ನಿಸ್ವಾರ್ಥ ಸೇವೆಯೂ ವಿಕಾಸಗೊಳ್ಳಲು ಸಾಧ್ಯ ಎಂದು ವಾದಿಸುತ್ತಿರುವುದು ಆಶ್ಚರ್ಯವಾಗಿ ಕಂಡಿತ್ತು. ಅವರು ಮುಂದುವರಿಸಿದರು.
`ಅಂಡಮಾನಿನ ನಿಕೋಬಾರ್ ದ್ವೀಪಗಳ ಶೋಂಪೇನ್ ಜನಾಂಗದ ಕೆಲವು ಘಟನೆಗಳು ಇದಕ್ಕೆ ದೃಷ್ಟಾಂತ ಎನ್ನಬಹುದು. ತ್ಸುನಾಮಿ ಬಡಿದಾಗ ಅದರ ಭೀಭತ್ಸತೆಯಿಂದ ಅನಾಥರಾದ ಮಕ್ಕಳನ್ನು ಸಾಕಿ ಸಲಹುವ ಜವಾಬ್ದಾರಿಯನ್ನು ಸರಕಾರ ವಹಿಸಿಕೊಳ್ಳುವುದಾಗಿ ತಿಳಿಸಿ ಅಂತಹ ಮಕ್ಕಳನ್ನು ಗುರುತಿಸಲು ತಿಳಿಸಿದಾಗ ಅವರು ತಮ್ಮಲ್ಲಿಯೇ ಚರ್ಚಿಸಿದ ನಂತರ `ಅನಾಥರು ಎಂದರೆ ಯಾರು?’ ಎಂದು ಮರು ಪ್ರಶ್ನಿಸಿದ್ದರಂತೆ. ಕಾರಣ, ಒಂದೇ ಕುಟುಂಬದಂತೆ ಜೀವಿಸುವ ಆ ಜನಾಂಗದ ಪ್ರತಿಗುಂಪಿನಲ್ಲಿಯೂ ಎಲ್ಲ ಹಿರಿಯರೂ ಎಲ್ಲ ಮಕ್ಕಳ ತಂದೆ ತಾಯಂದಿರು. ಸಮುದ್ರ ದಡದಲ್ಲಿ ಯಾವುದೇ ಮಗು ಅಳುತ್ತಿದ್ದರೆ ಅಲ್ಲಿ ಹಾದುಹೋಗುವ ಯಾವುದೇ ಹೆಣ್ಣು ಅದನ್ನು ಅನಾಮತ್ತಾಗಿ ಎತ್ತಿ ಹೆಗಲಿಗೇರಿಸಿಕೊಳ್ಳುತ್ತಾಳೆ -ತನ್ನದೇ ಮಗು ಎಂಬಂತೆ; ಆ ಮಗುವೂ ಅಳು ನಿಲ್ಲಿಸಿ ನಗುತ್ತದೆ ತನ್ನದೆ ತಾಯಿಯನ್ನು ಪಡೆದಂತೆ. ಎಲ್ಲ ಮಕ್ಕಳನ್ನೂ ಎಲ್ಲ ಹಿರಿಯರೂ ತಮ್ಮ ಮಕ್ಕಳಂತೆಯೇ ನೋಡಿಕೊಳ್ಳುವ ಆ ಸಮಾಜದಲ್ಲಿ ಅನಾಥರೆ ಇಲ್ಲ. ಹಾಗಾಗಿ ಆ ಪದವೇ ಅವರ ಭಾಷೆಯಲ್ಲಿಲ್ಲ.’
‘ಅಂದರೆ ತಮ್ಮದಲ್ಲದ ಧಾತುಗಳನ್ನು ಹೊತ್ತ ಮಕ್ಕಳನ್ನೂ ಅವರು ಸಾಕುತ್ತಾರೆಯೆ? ಇದು ವಿಕಾಸವಾದಕ್ಕೆ ವಿರುದ್ದವಲ್ಲವೆ?’ ನನ್ನ ಹುಚ್ಚು ಪ್ರಶ್ನೆಯನ್ನೇ ಮುಂದುವರೆಸಿದೆ.
‘ಇಲ್ಲ. ನಮಗೆ ಜನಿಸಿದ ಮಕ್ಕಳನ್ನು ನಾವು ಹೆಚ್ಚಾಗಿ ಪ್ರೀತಿಸಿ, ಪೋಷಿಸಿ, ಬೆಳೆಸುತ್ತೇವೆ ನಿಜ. ವಿಕಾಸವಾದದ ಪ್ರಕಾರ, ಇದಕ್ಕೆ ಕಾರಣ ನಮ್ಮದೇ ಮಕ್ಕಳ ಮೂಲಕ ಮಾತ್ರವೆ ನಮ್ಮ ಅನುವಂಶಿಕ ಧಾತುಗಳು ಮುಂದಿನ ಜನಾಂಗಕ್ಕೆ ಹರಿದು ವೃದ್ದಿಯಾಗುತ್ತವೆ ಎನ್ನುವುದು. ಯಾರು ಅಂತಹ ಸ್ವಾರ್ಥವನ್ನು ತೋರುತ್ತಾರೆಯೋ ಅವರ ಧಾತುಗಳು ಹೆಚ್ಚಾಗಿ ಉಳಿದು ಬೆಳೆದು ವೃದ್ದಿಯಾಗುತ್ತವೆ; ಹಾಗೆ ಸ್ವಾರ್ಥ ತೋರದವರ ಧಾತುಗಳು ಸರಿಯಾದ , ಪೋಷಣೆ ಸಿಗದೆ ನಶಿಸಿಹೋಗುತ್ತವೆ. ಹಾಗಾಗಿ ಅಂತಿಮವಾಗಿ ಸ್ವಾರ್ಥವೇ ಹರಡಿ ಗಟ್ಟಿಯಾಗಿ ನೆಲೆಗೊಳ್ಳುತ್ತದೆ ಎಂದು ವಿಕಾಸವಾದ ಹೇಳುತ್ತದೆ. ಅದು ಸತ್ಯವೆ. ಆದರೆ ಈ ಸತ್ಯದಲ್ಲಿಯೂ ಒಂದು ರಹಸ್ಯ ನಿಮಗೆ ಕಾಣದಂತೆ ಅಡಗಿ ಕುಳಿತಿದೆ. ನಿಮ್ಮ ಮಗಳನ್ನೆ ತೆಗೆದುಕೊಳ್ಳಿ. ಅವಳಲ್ಲಿ ನಿಮ್ಮ ಧಾತುಗಳ ಜೊತೆಗೆ ನಿಮ್ಮ ಪತ್ನಿಯ ಧಾತುಗಳೂ ಇವೆಯಲ್ಲವೆ?”
`ಹೌದು ಅರ್ಧದಷ್ಟು ವೀಣಾಳ ಧಾತುಗಳೂ ಇವೆ.’
‘ಮದುವೆಯಾಗುವ ಮುನ್ನ ವೀಣಾ ಯಾರೋ ನೀವು ಯಾರೋ. ಹಾಗಿರುವಾಗ ನಿಮ್ಮ ಮಗಳನ್ನು ಪ್ರೀತಿಸಿ, ಪೋಷಿಸಿ ಬೆಳೆಸುವಲ್ಲಿ, ನಿಮ್ಮ ಧಾತುಗಳಷ್ಟೆ ಪ್ರಮಾಣದಲ್ಲಿ ನಿಮ್ಮದಲ್ಲದ, ವೀಣಾ ಅವರ, ಧಾತುಗಳನ್ನೂ ನೀವು ಪ್ರೀತಿಸಿ ಪೋಷಿಸಿ ಬೆಳೆಸುತ್ತೀರಿ ಎಂದರ್ಥ ಅಲ್ಲವೆ? ಹಾಗೆಯೇ ನಿಮ್ಮಲ್ಲಿರುವ ನಿಮ್ಮ ತಂದೆ ತಾಯಿಯ ಧಾತುಗಳು ನಿಮ್ಮ ತಮ್ಮನಲ್ಲೂ ಇವೆ. ಹಾಗಾಗಿ ಅವನ ಮಕ್ಕಳಲ್ಲೂ ನಿಮ್ಮದೇ ಧಾತುಗಳು ಒಂದಷ್ಟು ಪ್ರಮಾಣದಲ್ಲಿರಲೇ ಬೇಕು. ನಿಮ್ಮ ಧಾತುಗಳನ್ನು ಅರ್ಧದಷ್ಟು ಮಾತ್ರ ಹೊತ್ತ ಮಗಳನ್ನು ಪ್ರೀತಿಸುವ ನೀವು ತಮ್ಮನ ಮಕ್ಕಳನ್ನೂ ಪ್ರೀತಿಸುವುದರಲ್ಲಿ ಆಶ್ಚರ್ಯವೇ ಇಲ್ಲ. ಕಾರಣ ಅವರಲ್ಲೂ ಒಂದಷ್ಟು ಪ್ರಮಾಣದಲ್ಲಿ ನಿಮ್ಮದೇ ಧಾತುಗಳಿವೆ. ಹಾಗೆಯೇ ನಿಮ್ಮ ಅಕ್ಕನ, ಭಾವನ, ಸೋದರಕ್ಕನ, .. ಕೊನೆಗೆ ಹಾಗೆಯೇ ಸಂಬಂಧಗಳನ್ನು ಹೆಣೆಯುತ್ತಾ ಹೋದರೆ ಇಡೀ ಮನುಕುಲದಲ್ಲಿಯೇ ನಮ್ಮ ನಿಮ್ಮೆಲ್ಲರ ಧಾತುಗಳು ಒಂದಷ್ಟು ಪ್ರಮಾಣದಲ್ಲಿರಲೇ ಬೇಕು. ಹಾಗೆಂದೆ ದುರಂತಗಳು ಬಡಿದಾಗ ಮಾನವ ಮಾನವೀಯತೆಯಿಂದ ಸ್ಪಂಧಿಸುವುದು. ಜಾತಿ, ಮತಗಳನ್ನು ನೋಡದೆ, ದೇಶ ರಾಜ್ಯಗಳ ಗಡಿಗಳನ್ನು ಮೀರಿ ಸಹಾಯಕ್ಕೆ ನಿಲ್ಲುವುದು. ಒಟ್ಟಿನಲ್ಲಿ ಇಡೀ ಮಾನವಜಾತಿ ಈ ಸ್ವಾರ್ಥ ಧಾತುಗಳ ಕೊಂಡಿಯಿಂದ ಬೆಸಯಲ್ಪಟ್ಟ ಒಂದು ದೊಡ್ಡ ಕುಟುಂಬ- ವಸುದೈವ ಕುಟುಂಬ.’
‘ಹೋ ಹಾಗೆಂದೆ ಶೋಂಪೇನರಲ್ಲಿ ಎಲ್ಲ ಮಕ್ಕಳನ್ನೂ ಪ್ರೀತಿಸುವ ಭಾವ ಬೆಳೆದಿರುವುದು?’
`ಹೌದು. ಒಂದು ಅವಿಭಕ್ತ ಕುಟುಂಬದಂತೆ ಜೀವಿಸುವ ಅವರ ಗುಂಪಿನಲ್ಲಿ ಎಲ್ಲರೂ ಎಲ್ಲ ಮಕ್ಕಳ ತಂದೆ ತಾಯಿಗಳು- ನಿಜವಾದ ವಸುದೈವ ಕುಟುಂಬ. ವಿಚಿತ್ರವೆಂದರೆ, ಇಡೀ ಪ್ರಪಂಚದಿಂದಲೇ ನಾವು ಬೇರೆಯಾಗಿದ್ದೇವೆ ಎನ್ನುವಂತೆ `ಗೇಟೆಡ್ ಕಮ್ಯೂನಿಟಿ’ಗಳನ್ನು ಸೃಷ್ಟಿಸಿಕೊಂಡು ಅದರೊಳಗೆ ಪಕ್ಕದ ಮನೆಯವರ ಬಗ್ಗೆಯೂ ತಿಳಿಯದೆ ಬದುಕುವ ಲಕ್ಷಾಂತರ ಕಮ್ಯೂನಿಟಿಗಳ ಕೋಟ್ಯಾಂತರ `ನಾಗರಿಕ ಮಾನವ’ರು ಶೋಮ್ಪೇನರಂತಹ `ಅನಾಗರಿಕ ಆದಿವಾಸಿ’ಗಳಿಂದ ಕಲಿಯಬೇಕಾದದ್ದು ಬಹಳಷ್ಟೆ ಇದೆ.’ ಅವರ ಮಾತಿಗೆ ತಲೆದೂಗುತ್ತ ನನ್ನನ್ನು ಕಾಡಿದ್ದ ಮತ್ತೊಂದು ಪ್ರಶ್ನೆಯತ್ತ ಗಮನ ಸೆಳೆದೆ.
`ಆದರೆ ವೀಣಾ ಹೇಳಿದಂತೆ ನಾವೇಕೆ ಸಾಕಿದ ನಾಯಿಗೂ ಅಷ್ಟು ಸೋಲುತ್ತೇವೆ?’ ಅದನ್ನೂ ನಮ್ಮ ಸ್ವಾರ್ಥಧಾತುಗಳ ಪ್ರಭಾವ ಎನ್ನಲು ಸಾಧ್ಯವಿಲ್ಲವಲ್ಲ?’
`ಇದನ್ನು ಬಹುಷಃ ಅಭ್ಯಾಸ ಬಲ ಎನ್ನಬಹುದು; ಮಾನವ ನಿರ್ಮಾಣದ ಅನಿವಾರ್ಯ ಪರಿಣಾಮ. ಉದಾಹರಣೆಗೆ ಎಂಜಿನಿಯರ್‍ಗಳು ಹಣ್ಣಾದ ಟೊಮಾಟೊಗಳನ್ನು ಮಾತ್ರ ಕೀಳಲು ಒಂದು ಯಂತ್ರ ತಯಾರಿಸಿದ್ದಾರೆ ಎಂದುಕೊಳ್ಳೋಣ. ಕೆಂಪಗೆ ಸುಮಾರು ದುಂಡಗೆ ಮುಷ್ಟಿಗಾತ್ರ ಇರುವ ವಸ್ತುಗಳನ್ನು ಹುಡುಕುವಂತೆ ಪ್ರೋಗ್ರಾಮ್ ಮಾಡಿರುವ ಆ ಯಂತ್ರ ಹಾಗೆ ಕಂಡ ಯಾವುದನ್ನೇ ಆಗಲಿ ಕಿತ್ತು ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತದೆ. ಹಾಗೆಯೇ ತಾವೇ ಬೆಳೆಸುವ ಜೀವಗಳನ್ನು ಹೆಚ್ಚು ಹೆಚ್ಚು ಪ್ರೀತಿಸುವಂತೆ ತಯಾರಾದ ಮಾನವ-ಭಾವನಾಯಂತ್ರ ತಮ್ಮದೆ ಆರೈಕೆಯಲ್ಲಿ ಬೆಳೆದ ನಾಯಿ, ಬೆಕ್ಕುಗಳನ್ನೂ ಪ್ರೀತಿಸುವುದು ಪ್ರೋಗ್ರಾಮಿಂಗ್ ಎರ್ರರ್ ಅಥವ ಡಿಫಾಲ್ಟ್ ಆಫ್ಶನ್ ಎನ್ನಬಹುದು. ಅದು ನಮ್ಮ ಬಳಿ ಬೆಳೆದವರನ್ನು ಪ್ರೀತಿಸುವಂತೆ ತಯಾರಿಗೊಂಡಿರುವ ಭಾವನಾ ಲೋಕದ ಅಭ್ಯಾಸ ಬಲದ ಅಡ್ಡ ಪರಿಣಾಮ. ಬಹುಪಾಲು ಯೂರೊಪಿನ ದೇಶಗಳಲ್ಲಿ ಯುವಜೋಡಿಗಳಲ್ಲಿ ಇತ್ತೀಚೆಗೆ ಅತಿಯಾಗಿ ಕಂಡು ಬರುವ ನಾಯಿ ಸಾಕುವ ಗುಣವೂ ಈ ಅಬ್ಯಾಸ ಬಲದ ಸೈಡ್ ಎಫೆಕ್ಟ್ ಎನ್ನಬಹುದು. ಜನನ ಸಂಖ್ಯೆ ಕ್ಷೀಣಗೊಳ್ಳುತ್ತಿರುವ ಆ ದೇಶಗಳಲ್ಲಿ, ಮಕ್ಕಳನ್ನು ಸಾಕಿ ಖುಷಿ ಪಡುವಂತೆ ವಿಕಾಸಗೊಂಡಿರುವ ನಮ್ಮ ಅಂತರಿಕ ಚಟವನ್ನು ತೀರಿಸಿಕೊಳ್ಳಲೆಂದೇ ಬಹುಷಃ ಅವರು ನಾಯಿ ಸಾಕುವ ಅಭ್ಯಾಸ ಬೆಳೆಸಿಕೊಂಡಿರುವ ಸಾಧ್ಯತೆ ಇದೆ’ ಎಂದರು.
‘ಅಂದರೆ ನಾವು ಬೇರೆಯವರ ಬಗ್ಗೆ ತೋರುವ, ಕರುಣೆ, ಪ್ರೀತಿ, ಅನುಕಂಪ, ದಯಾಭಾವ, ಎಲ್ಲವೂ ನಮ್ಮಲ್ಲಿ ಸ್ವಾರ್ಥವನ್ನು ಬೆಳೆಸಿದ ವಿಕಾಸಕ್ರಿಯೆಯ ಸೈಡ್ ಎಫೆಕ್ಟ್ ಮಾತ್ರವಷ್ಟೆ ಹೊರತು ನಿಸ್ವಾರ್ಥತೆಯಿಂದ ಸ್ಪುರಿದ ಭಾವನೆಗಳಲ್ಲ ಎಂದೆ?’
‘ನಾವೆಲ್ಲರೂ ವಿಕಾಸಕ್ರಿಯೆಯಿಂದ ರೂಪುಗೊಂಡ ಭಾವನಾಯಂತ್ರಗಳಷ್ಟೆ. ನಾವು ತೋರುವ ಮಾನವೀಯ ಗುಣಗಳೆಲ್ಲವೂ ಅಂತರಾಳದಲ್ಲಿ ಸ್ವಾರ್ಥವನ್ನು ಬಚ್ಚಿಟ್ಟುಕೊಂಡು ನಿಸ್ವಾರ್ಥಥೆಯ ಮುಖವಾಡ ಧರಿಸಿರುವ ಸೋಗು ವರ್ತನೆಗಳು.’
ಅದನ್ನು ಕೇಳುತ್ತಿದ್ದಂತೆ ಪುಣ್ಯಳ ಮೇಲಿನ ನನ್ನ ಪ್ರೀತಿಯ ಬಗ್ಗೆ ವೀಣಾ ಹೇಳಿದ ಮಾತುಗಳು ಮತ್ತೆ ನೆನಪಾಗಿ ಕೊರೆಯತೊಡಗಿದವು: `ಪುಣ್ಯ ನಿಮ್ಮ ಅನುವಂಶಿಕ ಮಗಳಲ್ಲದಿದ್ದರೂ ನಿಮ್ಮ ಮನಸ್ಸು ಹಾಗೆಯೇ ಮಿಡಿಯುತ್ತಿತ್ತು.. . . ಇಪ್ಪತ್ತೈದು ವರ್ಷಗಳ ಕಾಲ ನಾವು ಯಾರನ್ನೇ ಬೆಳೆಸಿದ್ದರೂ ನಮ್ಮ ಮನಸ್ಸು ಹಾಗೆಯೇ ಮಿಡಿಯುತ್ತದೆ. ಅದು ಮಾನವನ ದೌರ್ಬಲ್ಯ.’
ಅಂದರೆ ನಾವೆಲ್ಲರೂ ವಿಕಾಸಕ್ರಿಯೆಯ ದುರಂತ ಬಂಧಿಗಳು. ಮೇಲುನೋಟಕ್ಕೆ, ತನ್ನವರು, ಬೇರೆಯವರು, ಬಂಧುಗಳು, ಮಿತ್ರರು, ಶತ್ರುಗಳು ಎಂಬ ವಿಂಗಡಣೆ ಕಂಡರೂ, ವಿಕಾಸ ಕ್ರಿಯೆಯ ಅಂತರಾಳದಲ್ಲಿ ಹೊಕ್ಕು ನೋಡಿದಾಗ, ನಾವೆಲ್ಲರೂ ಒಂದೇ ಕರುಳ ಬಳ್ಳಿಯ ಕುಡಿಗಳು; ಪ್ರತಿ ಕುಡಿಯೂ ತನ್ನದೇ ಉಳಿವಿಗಾಗಿ ದುಡಿಯುವ ಮೂಲಕ ಇಡೀ ಬಳ್ಳಿಯ ಉಳಿವಿಗಾಗಿ ಶ್ರಮಿಸುತ್ತಿದೆ ಅಷ್ಟೆ. ಈ ಸತ್ಯದ ಅರಿವಿನ ಬೆನ್ನಲ್ಲಿಯೇ ನನಗೆ ಭಗವದ್ಗೀತೆಯೆ ಶ್ಲೋಕವೊಂದು ನೆನಪಾಗುತ್ತದೆ:
ಉದ್ದರೇಧಾತ್ಮನಾತ್ಮಾನಮ್| ನಾತ್ಮಾನಮವ ಸಾದಯೇತ್|| ಆತ್ಮೈವಹ್ಯಾತ್ಮನೋ ಬಂಧು-| ರಾತ್ಮೈವರಿಪುರಾತ್ಮನಃ||