ಅರಿವು ಮುನ್ನಡೆಯಲಿ-ಸ.ಉಷಾ
ಕಳೆದ ಏಳೆಂಟು ತಿಂಗಳುಗಳಿಂದ ನಮ್ಮ ಶಿವಮೊಗ್ಗೆಗೆ ಒಕ್ಕೂಟದಲ್ಲಿರುವ ಬೆಂಕಿಯ ಚೂರಿನಂತ ಹುಡುಗಿಯರು ಅರಿವಿನ ಬೆಳಕನ್ನು ಹರಡಿದ್ದಾರೆ. ಅವರ ಜೊತೆಗೆ ಶಿವಮೊಗ್ಗೆಯ ಹುಡುಗಿಯರೂ ಬೆರೆತು ದುಡಿದಿದ್ದಾರೆ. ನಾನು ಆಕ್ಟಿವಿಸ್ಟ್ ಅಲ್ಲ. ನನ್ನ ಹೋರಾಟ ಅಧ್ಯಯನ, ಅಧ್ಯಾಪನ, ಬರವಣೆಗೆ ಮತ್ತು ತುಂಬಾ ತುಂಬಾ ಪ್ರೀತಿಯದು. ಈ ಗೆಳತಿಯರ ಪ್ರೀತಿಗೆ ಮಣಿದು ನಾನು ಈ ವೇದಿಕೆಯ ಗೌರವವನ್ನು ಒಪ್ಪಿಕೊಂಡಿದ್ದೇನೆ. ಅಷ್ಟೇ ಹೊರತು ನನ್ನ ಹೋರಾಟದ ಶಕ್ತಿಯ ಬಗೆಗೆ ನನಗೆ ಭ್ರಮೆಗಳೇನೂ ಇಲ್ಲ. ಈ ಒಕ್ಕೂಟದಲ್ಲಿ ಅನೇಕ ಸಂಘಟನೆಗಳಿವೆ. ಒಕ್ಕೂಟದ ಗೆಳತಿಯರು ತಮ್ಮದು ಪ್ರೀತಿಯ ರಾಜಕಾರಣ ಎಂದು ಹೇಳುತ್ತಾರೆ. ಸೂಕ್ಷ್ಮ ಪುರುಷನ ಬಗ್ಗೆ ಅವರಿಗೆ ಪ್ರೀತಿ ಗೌರವಗಳಿವೆ. ಹಾಗಾಗಿ ಅವರು ತಮ್ಮ ಸಹ ಹೋರಾಟಗಾರರನ್ನು ಗೌರವದಿಂದ ಕಾಣುತ್ತಾ ತಮ್ಮ ಹಕ್ಕೊತ್ತಾಯಗಳನ್ನು ಸಮಾಜದ ಮುಖ್ಯಧಾರೆಯ ಎದುರು ಇಡುತ್ತಿದ್ದಾರೆ. ಒಕ್ಕೂಟಕ್ಕೆ ಇದು ಆರನೆಯ ವರ್ಷ. ನಾನು ಕಂಡಂತೆ ಅಕ್ಟೋಬರ್ನಿಂದಲೇ ಶಿವಮೊಗ್ಗ ಜಿಲ್ಲೆಯ ಬೇರೆ ಬೇರೆ ಊರುಗಳಲ್ಲಿ ಈ ಸಹೋದರಿಯರು ದುಡಿದಿದ್ದಾರೆ. ಬುದ್ಧಿವಂತಿಕೆ, ಸೌಂದರ್ಯ, ಒಳ್ಳೆಯ ಸ್ಪರ್ಶ, ಒಳ್ಳೆಯದಲ್ಲದ ಸ್ಪರ್ಶ…. ಈ ರೀತಿಯ ವಿಷಯಗಳ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ಅರಿವಿನ ಪಯಣ ಕೊಟ್ಟಿರುವ ತಿಳಿವಳಿಕೆ ದೊಡ್ಡದು. ಹಾಡು, ನಾಟಕ, ಘೋಷಣೆಗಳ ಮೂಲಕ ಈ ಗೆಳತಿಯರು ಹೇಳಿದ್ದು ಪೋಷಕರು ಅಥವಾ ಅಧ್ಯಾಪಕರು ಹೇಳುವುದಕ್ಕಿಂತಲೂ ಹೆಚ್ಚಾಗಿ ಮನಸ್ಸನ್ನು ತಟ್ಟುತ್ತದೆ. ಯಾವ ಊರಿನ ಯಾವ ಶಾಲೆಯಲ್ಲಿ ನಾಳಿನ ಹೋರಾಟಗಾರ್ತಿಯರು ಬೆಳೆಯುತ್ತಿದ್ದಾರೋ ಯಾರಿಗೆ ಗೊತ್ತು? ಮುಟ್ಟಿನ ಬಗ್ಗೆ ಈ ಸೋದರಿಯರು ಮಾಡುತ್ತಿರುವ ಪ್ರಚಾರಾಂದೋಲನ ಸಹ ಸಾಮಾಜಿಕ ಆರೋಗ್ಯಕ್ಕೆ ತುಂಬಾ ಮಹತ್ವಪೂರ್ಣವಾದುದು. 2015ರ ಮಹಿಳಾದಿನದ ಆಚರಣೆಗೆ ಸಂಬಂಧಿಸಿದಂತೆ ಒಕ್ಕೂಟವು ಮುಂದಿಟ್ಟ ಹದಿನೆಂಟು ಹಕ್ಕೊತ್ತಾಯಗಳು ಇಂದಿಗೂ ಕೂಡ ಪ್ರಸ್ತುತವಾಗಿವೆ.
ನಮ್ಮ ಸಮಾಜದ ಬೆಳವಣಿಗೆಯಲ್ಲಿ ಫ್ಯೂಡಲ್ ಸಮಾಜದ. ಬಂಡವಾಳಶಾಹಿ ಸಮಾಜದ, ವಸಾಹತುಶಾಹಿ, ನವವಸಾಹತುಶಾಹಿ ಸಮಾಜಗಳು ಹಾಕಿಕೊಟ್ಟ ಮೌಲ್ಯಗಳು ಮತ್ತು ಆಲೋಚನೆಗಳು ಎಂಥಹ ಹೋರಾಟಗಾರರ ಮನಸ್ಸಿನಲ್ಲೂ ಅಷ್ಟಿಷ್ಟು ಉಳಿದುಕೊಂಡು ಸಮತೆಯ ಬದುಕನ್ನು ದುಸ್ತರವಾಗಿಸಿವೆ. ಪುರುಷ ರಾಜಕಾರಣ ಎಂದು ಯಾವುದನ್ನು ಕರೆಯುತ್ತೇವೆಯೋ ಅದರ ತಂತ್ರಗಳು ಪ್ರತಿತಂತ್ರ ಉಪಯೋಗದಲ್ಲಿ ಮಹಿಳೆಯರೇನೂ ಹಿಂದೆ ಬಿದ್ದಿಲ್ಲ. ಅದೇ ರೀತಿ ಮಹಿಳೆಯರ ಹೋರಾಟಕ್ಕೆ, ಸಮಾನತೆಯ ತತ್ವಗಳಿಗೆ ಸೂಕ್ಷ್ಮ ಮನಸ್ಸಿನ ಪುರುಷರು ಕೊಟ್ಟಿರುವ ಕಾಣಿಕೆಯನ್ನು ಇಲ್ಲಿ ಅಲ್ಲಗಳೆಯುವಂತಿಲ್ಲ.
ಕೊನೆಯದಾಗಿ ಒಂದು ಮಾತು ಹೇಳಬಹುದು. ನಾವು ಸಾವಿತ್ರಿಯರ ಕತೆಗಳನ್ನು ಕೇಳಿದ್ದೇವೆ. ಆದರೆ ಪುರಾಣದಲ್ಲಿ ರುರುವಿನ ಕತೆಯೂ ಇದೆ. ಇಂದಿನ ಸೂಕ್ಷ್ಮ ಪುರುಷ ನಾಗವಿಷದ ಪ್ರಭಾವದಿಂದ ತನ್ನ ಮಡದಿ-ಪ್ರಿಯತಮೆಯನ್ನು ಬದುಕಿಸಿಕೊಂಡ ರುರುವೂ ಆಗಿದ್ದಾನೆ. ನನ್ನ ಕಣ್ಣೆದುರು ನಮ್ಮ ಶಿವಮೊಗ್ಗೆಯಲ್ಲೇ ಬರಹಗಾರರು, ಹೋರಾಟಗಾರರು, ಹಾಡುಗಾರರು, ಧಾರ್ಮಿಕ ನಾಯಕರು-ನಮ್ಮೊಡನೆ ಮಾನವ ಸರಪಳಿಯಾಗಿ ನಮಗೆ ಬೆಂಬಲ ಕೊಟ್ಟಿದ್ದಾರೆ. ಇನ್ನೇನು ಹೇಳಲಿ? ಆರನೆಯ ವರ್ಷದ ಈ ಹೋರಾಟದಲ್ಲಿ, ಅರಿವಿನ ಪಯಣದಲ್ಲಿ ಅರಿವು ಮುನ್ನಡೆಯಲಿ- ಹೋರಾಟಕ್ಕೆ ಅಂತ್ಯವಿಲ್ಲ. ಆರಂಭ ಮಾತ್ರ ಇದೆ. ಎಲ್ಲರಿಗೂ ತುಂಬಾ ತುಂಬಾ ಪ್ರೀತಿ.