“ಅಮೃತ”…

[6.6.2018ರಂದು ರಂಗಕರ್ಮಿ ಹಾಗೂ ಬರಹಗಾರ ಪ್ರಸಾದ್ ರಕ್ಷಿದಿ ಅವರು ತಮ್ಮ ಫೇಸ್ಬುಕ್ ಪೋಸ್ಟ್ ಮೂಲಕ ಹಂಚಿಕೊಂಡ ಒಂದು ಆತ್ಮೀಯ ಬರಹ ನಮ್ಮ ಮರು ಓದಿಗಾಗಿ… ]
https://www.facebook.com/share/p/NqLxywALNHjWMUDx/
 ಎರಡು  ವರ್ಷಗಳಿಂದ ಮಾದೇವ  ಅಮೃತಾಳನ್ನು ಒಮ್ಮೆ ನೋಡಬೇಕು ಎಂದು ಹಲವು ಬಾರಿ ಹೇಳಿದ್ದರು. ಆದರೆ ಸಂದರ್ಭವಾಗಿರಲಿಲ್ಲ. ಮಾದೇವರಿಗೆ ಅಮೃತಾಳ ಆರೋಗ್ಯದ ಸಮಸ್ಯೆ ತಿಳಿದಿತ್ತು.  ಕಳೆದ ಜುಲೈಯ ಕೊನೆಯಭಾಗದಲ್ಲಿ  ಅಮೃತಾಳ ಬಯಕೆಯಂತೆ ನಾವು ಕೊಯಮತ್ತೂರಿಗೆ ಹೋಗಿದ್ದೆವು. ವಾಪಸ್ ಬರುವಾಗ, ಮೈಸೂರಿನಲ್ಲಿ, ಅಮೃತ “ಅಪ್ಪ ಈ ಸಾರಿ ಆದರೆ  ಮಾದೇವರ ಮನೆಗೆ ಹೋಗೋಣ ಅವರತ್ರ ನಾನೊಂದು ಪ್ರಶ್ನೆ ಕೇಳಕ್ಕಿದೆ” ಎಂದಳು.  ಸರಿ ನೋಡೋಣ ಎಂದೆ.
 ಮರುದಿನ ಬೆಳಗ್ಗೆ ನವಿಲು ರಸ್ತೆಯ ಮಾದೇವರ ಮನೆಗೆ ಹೋದೆ ಮಾದೇವ ಮನೆಲ್ಲಿದ್ದರು. ಟೀ ಕುಡಿಯುತ್ತ  ಸ್ವರಾಜ್ ಇಂಡಿಯಾದ ಬಗ್ಗೆ ಮಾತಾಡಿದೆವು. ನಂತರ ಮಗಳು ಹೇಗಿದ್ದಾಳೆ? ಎಂದರು. ಬಂದಿದ್ದಾಳೆ ಇಲ್ಲೇ ಇದ್ದಾಳೆ, ಕರೆದು ಕೊಂಡು ಬರಲೇ” ಎಂದೆ. “ಇಲ್ಲ ನನಗೆ ಈಗ ಮೀಟಿಂಗಿದೆ ಹನ್ನೊಂದು ಗಂಟೆಗೆ ನಿಮ್ಮ ಮನೆಯ ಕಡೆ ನಾನೇ ಬರುತ್ತೇನೆ” ಎಂದರು ಮಾದೇವ. ಮೈಸೂರಿನಲ್ಲಿ ನನ್ನ ಅಕ್ಕನ ಮನೆಯಿದೆ ಮಾದೇವರ ಮನೆಗೆ ಐದು ನಿಮಿಷದ ದಾರಿ. ಅಷ್ಟರಲ್ಲೇ ಯಾರೋ ಬಂದು ಮಾದೇವರನ್ನು ಕರೆದೊಯ್ದರು. ನಾನು ಮನೆಗೆ ಬಂದೆ. ನಡೆದ ವಿಚಾರವನ್ನು ನನ್ನ ಪತ್ನಿಗೆ ತಿಳಿಸಿದ, ಮಾದೇವ  ಇದ್ದಾರೆ ಏನೋ ಮೀಟಿಂಗಂತೆ  ನಂತರ ಅವರೇ  ಇಲ್ಲಿಗೆ ಬರುತ್ತಾರಂತೆ, ಗೊತ್ತಿಲ್ಲ ಅವರು ಹೊರಗೆ ಹೋದನಂತರ  ಇವತ್ತು ನಮಗೆ ಸಿಗುವುದು ಕಷ್ಟ ಎಂದೆ.
ಸರಿಯಾಗಿ ಹನ್ನೊಂದು ಗಂಟೆಗೆ ಮಾದೇವ ಫೋನ್ ಮಾಡಿದರು. ಹೊರಗೆ ಬಂದು ನೋಡಿದಾಗ  ನಮ್ಮ ಅಕ್ಕನ  ಮನೆಯ ಮುಂದೇ ನಿಂತಿದ್ದರು.
ಮಾದೇವ ಮತ್ತು ಅಮೃತಾಳ ಮೊದಲ ಭೇಟಿ ಹೀಗೆ ಆಯಿತು. ಮಾದೇವ ಅವಳ  ಚಿತ್ರಗಳನ್ನು ನೋಡಿದರು, ಏನಮ್ಮ ನಿಂಗೆ ವ್ಯಾನ್ ಗಾಗ್ ತುಂಬ ಇಷ್ಟನಾ? ಎಂದರು. ಬರಹಗಳ ಬಗ್ಗೆ ಕೇಳಿದರು. ಪುಸ್ತಕ ಬಿಡುಗಡೆಗೆ ನೀವೇ ಬನ್ನಿ ಎಂದು ಅಮೃತಾ ಹೇಳಿದಾಗ,  “ಪುಸ್ತಕ ಬಿಡುಗಡೆಗೆ ಅಲ್ಲದಿದ್ದರೂ ಆ ದಿನ ಒಬ್ಬ ಪ್ರೇಕ್ಷಕನಾಗಿ ನಿನ್ನ ಮುಂದೆ ಖಂಡಿತ ಕೂತಿರುತ್ತೇನೆ” ಎಂದರು.  ಮಾದೇವ ಅವಳೊಡನೆ  ಯಾವುದೋ ಮಾತಿಗೆ. “ಜಗತ್ತು ಕಣಗಳಿಂದಾಗಿರುವುದು ಗೊತ್ತಲ್ಲ” ಎಂದರು    ಕೂಡಲೇ ಅಮೃತ “ಅದು ನೋಡಿ ಸರ್ ಕ್ವಾಟಂ ಫಿಸಿಕ್ಸ್, ಅದು ಹೀಗೆ ವಿವರಿಸುತ್ತದೆ ಎಂದು, ಹದಿನೈದು ನಿಮಿಷಗಳ ಕಾಲ ಅವರಿಗೇ  ಕಣ ಸಿದ್ಧಾಂತದ ಬಗ್ಗೆ ವಿವರಿಸಿದಳು. ಅಷ್ಟೂ   ಹೊತ್ತು ಮಾದೇವ ಮೌನವಾಗಿ ಕುಳಿತಿದ್ದರು. ನಂತರ ಏನೋ ಕೇಳ್ಬೇಕು ಅಂದ್ಯಲ್ಲ  ಕೇಳಮ್ಮ ಎಂದರು. “ಸರ್ ನನಗೊಂದು ಅನುಮಾನ ಇದೆ ಎಲ್ಲರೂ ಹೇಳುತ್ತಾರೆ  ಟೆಕ್ನಿಕಲಿ  ಪರ್ಫೆಕ್ಟಾಗಿರಬೇಕು ಅಂತ, ಉದಾಹರಣೆಗೆ ಚಿತ್ರಗಳಲ್ಲಿ , ಕಲೆಯಲ್ಲಿ ಹೀಗೆ, ಅಪ್ಪನ ಕೇಳಿದ್ರೆ ಏನೇನೋ ಉದಾಹರಣೆ ಕೊಟ್ಟು ಹೇಳ್ತಾರೆ “ನೋಡು  ಶ್ರವಣ ಬೆಳಗೊಳದ ಗೊಮ್ಮಟ ಇದ್ದಾನಲ್ಲ ಅದು ಶಿಲ್ಪ ಶಾಸ್ತ್ರದ ಪ್ರಕಾರ ಪರ್ಫೆಕ್ಟ್ ಅಲ್ಲ, ಆದರೆ  ಅದನ್ನು ಅದ್ಭುತ ಕಲಾಕೃತಿ ಅಂತ ಪ್ರಪಂಚ ಒಪ್ಪಿಲ್ವ?” ಅಂತಾರೆ ನನಗೆ  ಸಮಾಧಾನವೇ ಆಗ್ತಿಲ್ಲ, ಹೇಳಿ ಸರ್ ಈ ಪರ್ಫೆಕ್ಷನ್  ಅಂದ್ರೆ ಏನು?” ಎಂದಳು.
ಆಗ ಮಾದೇವ “ನೋಡಮ್ಮ ಕೋಳಿ ಮೊಟ್ಟೆ ಯಾವ ಆಕಾರ ಇರುತ್ತೆ?” ಎಂದರು,
“ಅದು ಎಲಿಪ್ಸ್ , ದೀರ್ಘ ವೃತ್ತ  ಗೋಳ” ಎಂದಳು ಅಮೃತಾ.
ಹೌದಲ್ಲ ನೋಡು ಜಗತ್ತಿನಲ್ಲಿ ಪರ್ಫೆಕ್ಟ್ ಶೇಪ್  ಅನ್ಬೋದು ಯಾಕೆಂದ್ರೆ ಜಗತ್ತು ಅದೇ ಆಕಾರದಲ್ಲಿದೆ ಅಂತ ವಿಜ್ಞಾನ ಹೇಳುತ್ತೆ, ಗ್ರಹಗಳ ಚಲನೆ, ಅಣುವಿನ ರಚನೆ ಚಲನೆ ಎಲ್ಲವೂ ದೀರ್ಘವೃತ್ತವೇ, ಅದೇ ಆಕಾರದ   ಕೋಳಿಮೊಟ್ಟೆ ಅಂದರೆ  ಅದರೆ ಹೊರಕವಚ- ಶೆಲ್ ಅದು ಪರ್ಫೆಕ್ಟ್, ಆದರೆ ಅದಕ್ಕೆ ಜೀವ ಇಲ್ಲ. ಆದರೆ ಅದರೊಳಗಿರುವ ಮರಿಗೆ ಜೀವ ಇದೆ. ಅದು ಹೊರಕ್ಕೆ ಬರಬೇಕಾದರೆ ಪರ್ಫೆಕ್ಟಾ  ಆದರೆ ಜೀವ ಇಲ್ಲದ ಶೆಲ್ಲನ್ನು ಒಡೆದು ಹೊರಬೇಕು. ಆದರೆ ಮರಿ ಟೆಕ್ನಿಕಲಿ ಪರ್ಫೆಕ್ಟ್ ಇರೋದಿಲ್ಲ ಇರಬೇಕಾಗಿಲ್ಲ, ಆದರೆ  ಅದಕ್ಕೆ ಜೀವ ಇದೆ , ನೋಡು ಜೀವವಿಲ್ಲದ ವಸ್ತುಗಳು ಟೆಕ್ನಿಕಲಿ ಪರ್ಫೆಕ್ಟಾಗುತ್ತವೆ, ಅವು ಯಾಂತ್ರಿಕ ವಾಗಿರುತ್ತವೆ. ಜೀವ ಇರುವಂಥವು ಟೆಕ್ನಿಕಲಿ ಪರ್ಫೆಕ್ಟ್ ಆಗಿರಬೇಕಾಗಿಲ್ಲ, ಗೊತ್ತಾಯ್ತಲ್ಲಮ್ಮ”  ಎಂದರು. ನಂತರ ಅಮೃತಾ  ಏನನ್ನೂ ಹೇಳದೆ ಸುಮ್ಮನೆ ಕುಳಿತಳು. ಎರಡು ನಿಮಿಷದ ಮೌನದ ನಂತರ,
ಸರ್  ನನ್ನ ಹತ್ತು ವರ್ಷದ ಪ್ರಶ್ನೆಗೆ ಉತ್ತರ ಸಿಕ್ಕಿತು, ನನಗೆ ಸಮಾಧಾನವಾಯ್ತು, ಎಂದಳು.
ಮಾದೇವ ಹೋದ ನಂತರ ಅಮೃತಾ  “ಅಪ್ಪ ನನಗೀಗ ತುಂಬ ಸಮಾಧಾನವಾಯ್ತು, ಆ ಶಕ್ತಿ ಅವರಿಗೆ ಹೇಗೆ ಬಂತಪ್ಪ” ಎಂದಳು “ಅದು ಬುದ್ಧನ ಶಕ್ತಿ ಪುಟ್ಟು” ಎಂದೆ.  ಆ ಬೇಟಿಯೇ ಅವರ ಕೊನೆಯ ಬೇಟಿಯೂ ಆಯಿತು. ನಂತರ ಕೇವಲ ಒಂದು ತಿಂಗಳು ಮಾತ್ರ ಅಮೃತಾ  ನಮ್ಮೊಂದಿಗಿದ್ದಳು. ಮಾದೇವ ಕೊಟ್ಟ ಮಾತಿನಂತೆ ಮೈಸೂರಿನಲ್ಲಿ “ಅಮೃತಯಾನ” ಬಿಡುಗಡೆಗೆ ಬಂದು ಪುಸ್ತಕವನ್ನು ಸ್ವೀಕರಿಸಿದರು.   “ಕೊನೆಗೂ ಅಮೃತಳನ್ನು ನೋಡಿದ ಮಾತಾಡಿದ ಸಮಾಧಾನ ನನಗೆ” ಎಂದರು  ಮಾದೇವ.
    ಇಂದು ಅಮೃತಾಳ ಜನ್ಮದಿನ, ವಿಷಯ ತಿಳಿಯದ ಕೆಲವರು ಶುಭ ಕೋರುತ್ತಲೇ ಇದ್ದಾರೆ.
    ಹೌದು ಆರೋಗ್ಯದಲ್ಲಿ  ಅವಳು  “ಟೆಕ್ನಿಕಲಿ ಪರ್ಫೆಕ್ಟ್”  ಆಗಿರಲಿಲ್ಲ….  ಆದರೆ….  ಜೀವದ್ರವ್ಯ………..