ಅಮಾಸ -ದೇವನೂರ ಮಹಾದೇವ
(1973ರಲ್ಲಿ ಬರೆದ ಕತೆ. ದ್ಯಾವನೂರು ಸಂಕಲನದಲ್ಲಿ ದಾಖಲಾಗಿದೆ. ನಮ್ಮ ಮರು ಓದಿಗಾಗಿ…)
ಅಮಾಸ ಎಂಬುದು ಅಮಾಸನ ಹೆಸರು. ಅವನು ಕಪ್ಪುಗಿದ್ದುದಕ್ಕೋ ಅಮಾವಾಸೆ ದಿನ ಹುಟ್ಟಿದ್ದಕ್ಕೊ ಅವನಿಗೆ ಅಮಾಸ ಹೆಸರು ನಿಂತಿದೆ. ಅಮಾಸ ಹೆಸರು ಯಾಕೆ ಬಂತು ಎಂದು ಅವನ ಅಪ್ಪ, ಅವ್ವ ಬದುಕಿದ್ದರೆ ಕೇಳಬಹುದಿತ್ತು. ಆದರೆ ಅವನು ಹುಟ್ಟಿದ ಮೇಲೆ ನಡೆದಾಡೊ ವೇಳೆಗೆ ಅವನನ್ನು ಹೆತ್ತವಳು ಹುಟ್ಟಿಸಿದವನು ನಾನಾ ನಿಮಿತ್ತವಾಗಿ ದೈವಾಧೀನರಾದರು. ಆಗಲೀಗ ಅಮಾಸನಿಗೆ ಮಾರಿಗುಡಿ ಅಂದರೆ ಅಮಾಸ, ಅಮಾಸ ಅಂದರೆ ಮಾರಿಗುಡಿ ಎಂಬಂತಾಯ್ತು. ಮಾರಿಗುಡಿ ಎಂದ ಮಾತ್ರಕ್ಕೆ ದಿಕ್ಕುದೆಸೆ ಇಲ್ಲ ಅಂತೇನಲ್ಲ. ಅಮಾಸನಂಥ ಎಷ್ಟೋ ಜನಕ್ಕೆ ಮಾರಿಗುಡಿ ನೆರಳು ನೀಡುತ್ತ ಬಂದಿದೆ. ಬೇಸಿಗೆಯಲ್ಲಂತೂ ದಗೆಗೆ ಜನ ಅಲ್ಲಿ ಜಾತ್ರೆಯಾಗುವುದು. ಅದರಲಿ, ಅಲ್ಲಿ ಅಮಾಸನನ್ನು ಬಿಟ್ರೆ ಒಂದು ಹಳೆ ತಲೆಯ ವಾಸವಿದೆ. ಹಳ ತಲೆ ಅಂದರೆ ಅಂತು ಅವನ ಮಯ್ಯಿಕಯ್ಯಿತಲೆ ಅನ್ನದೆ ಕೂದಲು ಇದ್ದಷ್ಟೂ ಬೆಳ್ಳಗಾಗಿ ಅವನ ದೇಹ ತುಂಬ ಹರಿದಿವೆ. ಇದುವರೆಗೆ ಕಂಡಂತೆ ಅವನು ಕುಂತಲ್ಲಿಂದ ಎದ್ದುದನ್ನು ಯಾರೂ ಕಂಡಂತಿಲ್ಲ. ಮಾರಿಗುಡಿಯ ಮೂಲೆಗೆ ಸೇರಿದಂತೆ ಒಂದು ಮೂಲೇಲಿ ಒಂದು ಕಡೆ ಒಂದು ಕಪ್ಪು ಕಂಬಳಿ, ಯಾವ ಕಾಲದ್ದೋ ಅಂತು ಹಾಸಿದೆ. ಅದರ ಮೇಲೆ ಅವನು ಕಾಲು ಚಾಚಿಯೊ ಪಕ್ಕದ ಕಂಬಕ್ಕೊರಗಿಯೊ ಅಥವಾ ಕೈಗಳ ಹಿಂದಕ್ಕಾನಿಸಿಯೋ ಕೂತೇ ಇರುವನು. ಅವಗೆ ಇಂಥ ಮೂರು ನಾಲ್ಕು ಭಂಗಿಗಳನ್ನು ಬಿಟ್ಟರೆ ಬೇರೆಯದು ಇದ್ದಂತೂ ಇದ್ದಿಲ್ಲ. ಅವ ಅಂತೆ ಕುಂತಾಗೆಲ್ಲ ಅರೆಗಣ್ಣು ಮುಚ್ಚಿ ಕೂರುವುದು ಹಿಂದಿನಿಂದಲೂ ಹೇಗೊ ಬಂದುಬಿಟ್ಟಿದೆ. ಅದ ಬಿಟ್ಟು ಅವ ಕೂತಂತೂ ಇಲ್ಲ. ಅವನ ಈ ಸ್ಥಿತಿಯ ಕಂಡರೆ ಏನನ್ನೋ ಧೇನಿಸುತ್ತ ಕುಂತಂತೆ ಗೋಚರಿಸುತ್ತೆ, ಸುಕ್ಕುಗಳಿಂದಲೆ ಮಾಡಿದ ಅವನ ಮೊಖ ಮೇಲಿನ ರೀತಿ ಅನ್ನಿಸಲು ಕಾರಣ ಇದ್ದೀತು. ಅಥವಾ ಆ ಸುಕ್ಕು ಮೊಖಕ್ಕೆ ಒಪ್ಪುವ, ಕತ್ತಿನವರೆಗೂ ಬೆಳ್ಳಗೆ ಇಳಿಬಿದ್ದಿರುವ ರಟ್ಟೆ ಗಾತ್ರದ ಮೀಸೆಯೂ ಕಾರಣವೆ. ಒಟ್ಟಲ್ಲಿ ಅವ ಏನನ್ನೋ ಧೇನಿಸುತ್ತ ಕುಂತಂತೆ ಗೋಚರಿಸುತ್ತದೆ. ಅಲ್ಲವನ ಪಕ್ಕಕ್ಕೆ ಸೇರಿದಂತೆ ಆಳೆತ್ತರದ ಬಿದಿರು ಗಳ ಸದಾ ಇದ್ದುದೆ. ಅವನು ಅತ್ತ ಇತ್ತ ಚಲಿಸಬೇಕಾದಾಗೆಲ್ಲ ಅಮಾಸ ಕೈಗಿರುವುದರಿಂದ ಆ ಬಿದಿರು ಗಳದ ಬಳಕೆ ಅಷ್ಟೇನು ಈಗಿಲ್ಲ. ಆದರೆ ಕೋಳಿ ಕುರಿ ಆಡುಮರಿ ಮುಂತಾದವು ಸುತ್ತುವರಿದರೆ ಆದ್ದರಿಸುವುದಕ್ಕೆ ಅದು ಆಗಾಗ ಬೇಕಾಗುತ್ತದೆ. ಇಷ್ಟೂ ಹೇಳಿ ಅವನ ಹೆಸರು ಹೇಳುವುದೆ ತಪ್ಪಿತು. ಸಣ್ಣವರಿಂದ ಹಿಡಿದು ದೊಡ್ಡವರವರೆಗೆ ಅವನನ್ನು ಕುರಿಯಯ್ಯ ಕುರಿಯಯ್ಯ ಎನ್ನುವರು. ಅದೇನು ಅವನ ಹುಟ್ಟಿದ ಹೆಸರೆ?
ಪ್ರಶ್ನೆ ನಮಗು ಬೇಡ, ನಿಮಗು ಬೇಡ. ಇಷ್ಟಂತು ಕಂಡುದೆ- ಅವ ಬುದ್ಧಿ ಬಲ್ಲವನಾದಾಗಲಿಂದ ಹಿಡಿದು ಅವನ ತೊಡೆಗಳು ನಡೆದಾಡೋದ ಕಳೆದುಕೊಳ್ಳುವವರೆಗೆ ಊರ ಗೌಡರ ಹಟ್ಟಿ ಕುರಿಗಳ ಕಾಯ್ದುಕೊಂಡು ಬಂದುದು. ಈಗಲೂ ಮೇಲಿನ ರೀತೀಲಿ ಅರೆಗಣ್ಣು ಮುಚ್ಚಿಕೊಂಡಾಗ ಬೆರಳನ್ನು ಒಂದೊಂದು ಕುರಿ ಮಾಡಿಕೊಂಡೇನೂ ತಂತಾನು ಎಣಿಸುತ್ತ ಹೋಗುವನು. ದಿನಾ ಆರೇಳು ಸಲ ಹೀಗೆ ಇದು ತಪ್ಪಿದ್ದಲ್ಲ. ಇದ ಯಾವ ದಿನವೂ ತಪ್ಪಿಸಿಕೊಂಡೂ ಹೋಗಿಲ್ಲ. ಅಮಾಸನು ಹೀಗೆ ಕುರಿಯಯ್ಯನ ಕಣ್ಣುಮಟಾರದಲ್ಲಿ ಬೆಳೆಯತೊಡಗಿದನು. ಈಗ ಅವನ ವಯಸ್ಸು ಹತ್ತೊ ಹನ್ನೊಂದೂ ನಡೆಯುತ್ತಿದೆ. ಕುರಿಯಯ್ಯನು ಅಮಾಸ ಅಂದಾಗ ಆ್ಞ ಅಂತ ದನಿ ಕೊಡೋದು ಅಮಾಸನ ಹಗಲು ಕೆಲಸ ಅನ್ನಬಹುದು.
ಊರಿಗೆ ಕತ್ತಲು ಇಳಿಯಲು ತೊಡಗಿದಾಗಲೆ ಅಮಾಸನು ಕುರಿಯಯ್ಯನೂ ಮಠದ ಬೆಲ್ಲು ಆಗುವುದನ್ನೇ ನೆಟ್ಟಗೆ ಕಾಯುವರು. ಮಠದ ಬೆಲ್ಲು ಹೊಡೆದ ತಡವೆ ಅಮಾಸನು ಕುರಿಯಯ್ಯನ ಕಿದ್ದಂಡೆಯಲ್ಲಿ ಮಡಗಿರುವ ತಟ್ಟೆ ಗ್ಲಾಸು ತಗದುಕೊಂಡು ಲಗುಬಗ ಓಡುವನು. ಅಷ್ಟಕ್ಕಾಗಲೆ ಸಂಪೂರ್ಣ ಕತ್ತಲು ಹಿಡಿದು ಗವ್ವಗಿರುವುದರಿಂದ ಅಮಾಸ ಓಡುವುದೇನೂ ಕಾಣಿಸುವುದಿಲ್ಲ. ಕಣ್ಣು ಸೀಳಿಸಿಕೊಂಡು ನೋಡಿದರೆ ಅವ ಓಡುವ ಓಟಕ್ಕೆ ಕತ್ತಲು ಕಲಕುತ್ತಿರುವಂತೆ ಹೊಳೆಯುತ್ತದೆ. ಹಾಗೆ ಅವನು ಹೋದವನು ತಿರುಗ ಯಾವಾಗ ಬಂದ ಎಂಬುದೂ ತಿಳಿಯದು. ಬಂದವ ‘ಅಯ್ಯಾ’ ಅಂದುದು ಕತ್ತಲನ್ನು ಅಲುಗಾಡಿಸುತ್ತ ಮೂಡುವಾಗಲೇ ತಿಳಿಯುವುದು. ಆಗ ಕುರಿಯಯ್ಯ ಮಲಗಿದ್ದರೆ ಎದ್ದು ಮಲಗಿ ಕೂರುವನು. ರೂಢಿಯಂತೆ ಆ ಕತ್ತಲಲ್ಲೆ ಮಠದ ಹಿಟ್ಟು ಸಾರು ಉಂಡು ಆಮೇಲ ಅಮಾಸ ಮಲಗಿ ಬಿಡುವನು. ಅಷ್ಟೊತ್ತಿಗೆಲ್ಲ ಆ ಹಿಡಿದ ಕತ್ತಲಿಗೆ ಊರು ತನ್ನ ದನಿ ಅಡಗಿಸಿಕೊಂಡು ಮಲಗಿದರೂ ಆಗಾಗ ಅಲ್ಲಲ್ಲಿ ನಾಯಿಗಳ ಕಿರುಚಾಟವೋ ಗೂಗೆಯ ಗೂಕ್ಕೊ ಮೆಲುಕಾಕುತ್ತಲೆ ಇರುವುದು. ಮುದುಕ ನಿದ್ದೆ ಬಾರದ್ದಕ್ಕೆ ಕಣ್ಣು ಬಿಟ್ಟು ಕಣ್ಣಿಗೆಟಕುವಷ್ಟು ನೋಡುತ್ತಲೋ ಎಚ್ಚರಿರುವಷ್ಟು ಕಾಲ ಏನನ್ನಾರೂ ತನ್ನೊಳಗೆ ಮಾತಾಡುತ್ತಲೋ ಇದ್ದು ‘ಅಮಾಸ ಅಮಾಸ’ ಎಂದು ಎರಡು ಮೂರು ಸಲ ಅಂದು ಮರುತ್ತರ ಬಾರದಿದ್ದರೆ ಅವನೂ ಮಲಗುವನು.
ಆ ಅಜುಬಾಜುಗೆಲ್ಲ ವರ್ಷಕ್ಕೊಂದಾವರ್ತಿ ಎಲ್ಲ ಊರಿಗೂ ಬರುವ ಹಾಗೆಯೇ ಅಲ್ಲಿಗೂ ಮಾರಿಹಬ್ಬ ಬರುವುದು. ಆಗ ಮಾತ್ರವೇ ಕುರಿಯಯ್ಯ ತನ್ನ ಸ್ಥಾನವ ಬೇರೆ ಸ್ಥಳಕ್ಕೆ ಪಲ್ಲಟಿಸಬೇಕಾಗುತ್ತದೆ. ಆಗ ಮಾರಿಗುಡಿಗೆ ದುಂಬುದೂಳು ತೊಡೆದು ಸುಣ್ಣ ಕೆಮ್ಮಣ್ಣು ಬಣ್ಣವ ತುಂಬಿ ಕಣ್ಣಿಗೆ ಗುದ್ದುವಂತೆ ಮಾಡುವರು.
ಈಗ ಸುಣ್ಣ ಕೆಮ್ಮಣ್ಣು ಪಟ್ಟೆ ಹೊಡೆದು ಎಲ್ಲ ಕಡೆಗು ಮುಗಿದಿದ್ದು ಆಗ ಬೀಳುತ್ತಿದ್ದ ಎಳೆ ಬಿಸಿಲು ಅವುಗಳ ಮೇಲೆ ಬಿದ್ದು ಅದು ಹೆಚ್ಚು ಕಾಂತಿ ಬೀರುತ್ತಿತ್ತು. ಅಲ್ಲಿಗೆಲ್ಲ ಕುರಿಯಯ್ಯನ ಸುತ್ತುಮುತ್ತು ಮಾತ್ರವೆ ಮೊದಲಂತೆ ಉಳಿದಿದ್ದು ಉಳಿದ ಕಡೆಲ್ಲ ಬೆಳ್ಳಾಗಿದ್ದರಿಂದ ಅದು ಮತ್ತೂ ಕಂದಾಗಿತ್ತು. ಅಲ್ಲಿ ಹಜಾರ ತುಂಬ ಹತ್ತೆಂಟಾಳು ಅತ್ತಗೊಂದು ಕಡೆ ಇತ್ತಗೊಂದು ಕಡೆ ಓಡಾಡುತ್ತ ಪಂಜು ರಡಿ ಮಾಡುವುದು ಬಣ್ಣ ಬಣ್ಣದ ಕಾಗದ ಕತ್ತರಿಸಿ ಅಂಗಳ ಅಂದ ಮಾಡಲು ಸರ ಮಾಡುವುದು ಮುಂತಾಗಿ ಚಿತ್ರ ವಿಚಿತ್ರ ಮಾಡುತ್ತಿದ್ದರು. ಹೆಚ್ಚ ಕಮ್ಮಿ ಎಲ್ಲರೂ ಅಲ್ಲಿ ಹೊಸ ಹೊಸ ಬಿಳಿ ಬಟ್ಟೆ ಹಾಕಿದ್ದರಿಂದ ಮಾರಿಗುಡಿ ತುಂಬ ಬಿಳಿ ಹೊಳಪು ವಡೀತಿತ್ತು. ಅಲ್ಲಿದ್ದ ಬಸಣ್ಣ ಎಂಬುವವನು ಫ್ರೆಂಚು ಮೀಸೆಬಿಟ್ಟು ಕಪ್ಪಗೆ ಗಿಡ್ಡಕ್ಕೆ ಇದ್ದನು. ಅವನೂ ಬಿಳಿಬಟ್ಟೆ ತೊಟ್ಟಿದ್ದರಿಂದ ಮತ್ತೂ ಹೆಚ್ಚು ಕಪ್ಪಾಗಿ ಹೊಳೆಯುತ್ತಿದ್ದನು. ಅವನು ಬಾಯಿ ಬಿಡದಿದ್ದರೂ ಅವನ ಹಳದಿ ಬಾಚಿ ಹಲ್ಲುಗಳು ಬಿಳಿಬಟ್ಟೆ ದೆಸೆಯಿಂದ ಅವೂ ಹೊಳೆಯುತ್ತ ಹೊರಗೇ ಇದ್ದುವು. ಅವನ ಕಯ್ಯಲ್ಲಿ ಒಂದು ಹಿಡಗಲು ಇತ್ತು. ಬಸಣ್ಣನು ದಪ ದಪ ಹೆಜ್ಜೆ ಹಾಕಿ ಕುರಿಯಯ್ಯನ ಮೂಲೆಗೆ ಬಂದು ‘ಅಯ್ಯಾ’ ಎಂದು ಜೋರಾಗಿ ಕಿರುಚಿದನು. ಕುರಿಯಯ್ಯನನ್ನು ಎರಡು ಸಲವಾರು ಮಾತಾಡಿಸಿದರೆ ಮಾತ್ರವೇ ಆ್ಞಾಅಅ ಅಂತಿದ್ದರಿಂದ ಎಲ್ಲರು ಮೊದಲೇ ಕೂಗಿಕೊಂಡು ಮಾತಾಡುವರು. ಬಸಣ್ಣನ ದನಿಗೆ ಕುರಿಯಯ್ಯ ನಿಧಾನ ಕಣ್ಣು ತೆಗೆದು ಬಹಳ ನಿಧಾನವಾಗಿ ನೋಡಿದನು. ಅವನು ತನ್ನೆದುರು ಬೆಳ್ಳಗೆ ಮೂಡುತ್ತ ಓಡಾಡುತ್ತ ಇದ್ದ ಆಕೃತಿಗಳನ್ನು ನೋಡುತ್ತ, ಅವನು ಹಾಗೆ ನೋಡುತ್ತ ಹೋದಂತೆ ಅವನಿಗೆ ಹಿಂದಣ ನೆನಪುಗಳು ಕೆಂದುತ್ತ ಕಣ್ಣ ಮುಂದೆ ಓಡಾಡತೊಡಗಿದವು. ಮಾರಿಹಬ್ಬ ಅಂದರೆ ಹುಲಿಯಾಸ, ಅಂದರೆ ಅವನೆ. ಅವನ ಪ್ರಾಯದಲ್ಲಿ ಅವನಿಲ್ಲದೆ ಹುಲಿಯಾಸ ಇದ್ದುದಿಲ್ಲ. ಹುಲಿಯಾಸ ಕಣ್ಣಳ ಮುಂದೆ ಕುಣಿಯತೊಡಗಿತು. ತಮ್ಮಟೆಯ ಸದ್ದೂ ಬಂದು ಕಿವಿಗೆ ಚಚ್ಚತೊಡಗಿತು. ಆಗ ದೊಡ್ಡಗೌಡರು ಬದುಕಿದ್ದ ಕಾಲ. ಕುರಿಯಯ್ಯ ಅಮಾಸನಷ್ಟುದ್ದದ ಹೈದನು. ಕುರಿಯಯ್ಯನ ಹುಲಿಯಾಸದ ಥೇಟಿಗೆ ದೊಡ್ಡಗೌಡರು ತಲೆದೂಗಿಬಿಟ್ಟರು. ಅಂಗಿಬಟ್ಟೆ ಇನಾಮು ಕೊಡುತ್ತ ‘ನೀ ಇರೋಷ್ಟು ಕಾಲ ನಮ್ಮ ಹಟ್ಟೀಲೆ ಇರು. ನೀನು ಉಂಡ ಊಟ, ಹಾಕೊಂಡ ಬಟ್ಟೆ, ಒಂದಿಷ್ಟು ಕುರಿ ನೋಡ್ಕೊ ಅಷ್ಟೇನೆ’. ಅವನ ಸುಕ್ಕುಮೊಖದ ಪ್ರತಿನರಿಗೆಯೂ ಮಾರಿಗುಡಿಯ ಬಿಳಿಬಣ್ಣದಿಂದೊ ಅಲ್ಲಿದ್ದ ಗುಂಪು ತೊಟ್ಟಿದ್ದ ಬಿಳಿ ಬಟ್ಟೆ ದೆಸೆಯಿಂದೋ ಬೆಳ್ಳಗೆ ಅಗಲವಾಗಿ ಅರಳತೊಡಗಿತು…. ಬಸಣ್ಣನು ಇನ್ನೂ ಒಂದು ಸಲ ಜೋರಾಗಿಯೇ ‘ಅಯ್ಯಾ’ ಅಂದನು. ಕುರಿಯಯ್ಯ ಕತ್ತ ಎತ್ತಿ ಅವನ ಅವಲೋಕಿಸಿದನು. ಬಸಣ್ಣ ನಿಂತ ಠೀವಿಗೆ ಅವ ಬಂದದ್ದು ಹೊಳೆಯಿತು. ಕುರಿಯಯ್ಯ ಬಲಗೈಲಿ ಬಿದಿರು ಗಳ ಹಿಡಿದು ಇನ್ನೊಂದು ಕಯ್ಯ ಮೆಲು ನೀಡಿದನು. ನೀಡಿದ ಕಯ್ಯ ಬಸಣ್ಣ ಹಿಡಕಂಡ ಮೇಲೆ ಅದರ ಮೇಲೆ ಬಲ ಹಾಕಿ ಎದ್ದು ನಿಂತು ಬಿದಿರು ಗಳ ಊರುತ್ತ ನಡೆಯುತ್ತ ಆ ಮೂಲೆ ಸೇರಿ ಕುಂತನು. ಅಲ್ಲಿ ಹಾಸಿದ್ದ ಕಂಬಳಿಯನ್ನು ಬಸಣ್ಣನು ಒಂದೆರಡು ಸಲ ಜಾಡಿಸಿ ವದರಿ ಕುರಿಯಯ್ಯ ಕುಂತ ಮೂಲೆಗೆ ತಂದು ಹಾಸಿದನು. ಕಂಬಳಿಯ ಜಾಡಿಸಿ ವದರಿದ ಬಿರುಸಿಗೆ ಕಂಬಳಿಯಲ್ಲಿದ್ದ ಧೂಳು ಕಸವೆಲ್ಲ ಎಳೆ ಬಿಸಿಲಿಗೆ ಹಾರಿ ಗಾಳೀಲಿ ಈಜತೊಡಗಿದವು. ಕಂಬಳಿಯನ್ನು ಮೊದಲು ಹಾಸಿದ್ದ ಅಷ್ಟಗಲಕ್ಕೆ ಅಂಗೈ ಮಟ್ಟದ ಕಂದು ಬಣ್ಣಕ್ಕೆ ತಿರುಗಿದ್ದ ಧೂಳು ಕಸಕಡ್ಡಿ ಪವಡಿಸಿತ್ತು. ಅದರ ಮೇಲಕ್ಕು ಆಗ ಎಳೆ ಬಿಸಿಲು ಬಿದ್ದು ಅದಕ್ಕೂ ಬಿಳಿ ಬಣ್ಣವೆ ಹಿಡಕಂಡಂತೆ ತೋರುತ್ತಿತ್ತು.
ಅತ್ತಗೆ ಆಡಿಕೊಳ್ಳುವುದಕ್ಕೆ ಅಂತ ಎತ್ತೆತ್ತಗೂ ಹೋಗಿದ್ದ ಅಮಾಸನು ಮಧ್ಯಾಹ್ನ ಮಾಡಿಕೊಂಡೆ ಮಾರಿಗುಡಿಗೆ ಬಂದುದು. ಬಂದು ನೋಡುತ್ತಾನೆ, ನೋಡಿದರೆ ಕಣ್ಣಿಗೆ ಹಿಡಿಸಲಾರದಷ್ಟು ಅಲ್ಲಿ ಏನೇನೋ ತುಂಬಿಕೊಂಡಿತ್ತು. ಹಸಿ ಸುಣ್ಣ ಕೆಮ್ಮಣ್ಣು ನೆಲ ತಾರಿಸಿದ ಹಸಿ ತೊಪ್ಪೆ ವಾಸನೆಗಳೆಲ್ಲ ಒಂದರ ಮೇಲೊಂದು ಬಿದ್ದು ಮೂಗಿಗೆ ಮುತ್ತುತ್ತ ಮಾರಿಗುಡಿ ಗಮಲೆ ಒಂದಾಗಿತ್ತು. ಕುರಿಯಯ್ಯ ಈ ಮೂಲೆಯಿಂದ ಆ ಮೂಲೆಗೆ ಸ್ಥಳಾಂತರಿಸಿ ಮೊದಲಂತೆ ಕೂತಿದ್ದನು. ಹಜಾರದಲ್ಲಿ ನಡುವೆ ರೌಂಡಾಗಿ ಒಂದಿಷ್ಟು ಜನ ಗುಂಪುಗೂಡಿ ನಿಗರಿ ನಿಗರಿ ಏನೋ ನೋಡುತ್ತಿದ್ದರು. ಗುಂಪಿನ ಒಳಗೆ ಒಬ್ಬ ಏನೋ ಮಾಡುತ್ತಿದ್ದನು. ತವಕ್ಕಂತ ಅಲ್ಲಿಗೆ ಅಮಾಸ ಹಾರಿ ಇಣುಕಿದನು. ಕಂಡದ್ದು- ಬಣ್ಣ ಬಣ್ಣದ ಬ್ರಿಂಗದ ಕಾಗದದಲ್ಲಿ ಗಂಡಭೇರುಂಡ ಕಿರೀಟ ಮುಂತಾದ ಅವಚವಿ ಕೊರೆಯುತ್ತಿದ್ದುದು. ಅಲ್ಲಿ ಮಾಡಿಟ್ಟದ್ದೆಲ್ಲ ಕಣ್ಣಿಗೆ ಅಚ್ಚುಮೆಚ್ಚಾಗಿತ್ತು.ಅಲ್ಲಿ ಅವ ಚಿತ್ರ ಕೊರೆಯುತ್ತಿದ್ದಂತೆಲ್ಲ ಸುತ್ತಗೆ ನೆರಕೊಂಡವರು ಹಾಗಿರಬೇಕು ಹೀಗಿರಬೇಕು ಆ್ಞ ಹಾಗೆ, ಇ್ಞ ಹೀಗೆ ಭೇಷ್ ಅಂತೆಲ್ಲ ತಲಾ ಒಂದು ಮಾತಾಡುತ್ತಿದ್ದರು. ನೋಡಿ ನೋಡಿ ಅವೆಲ್ಲ ಕಣ್ಣಿಗಿಳಿದ ಮೇಲೆ ಅಮಾಸನು ಅಲ್ಲಿಂದ ನೆಗೆದು ಕುರಿಯಯ್ಯನ ಪಕ್ಕಕ್ಕೆ ಬಂದು ಕೂತನು. ಎದುರಾ ಅಂಗಳದಲ್ಲಿ ಗೋಡೆಗೆ ಸೇರಿದ ಹಾಗೆ ದೊಡ್ಡ ದೊಡ್ಡದ ಕೆಂಪು ಬಿಳಿ ಬಣ್ಣದ ದೇವರ ಚತ್ರಿ ಚಾಮರಗಳನ್ನು ಹೊರತೆಗೆದು ಬಿಸಿಲಿಗೆ ಒಣ ಹಾಕಿ ಸಾಲಾಗಿ ನಿಲ್ಲಿಸಿದ್ದರು. ಅವಕ್ಕೆ ಹತ್ತಿರದ ಮೂಲೇಲಿ ಬಾನ ಎಟುಕಿಸಲು ತೆಂಗಿನ ಮರ ನಿಗುರುತ್ತ ವಾಲಾಡುತ್ತಿತ್ತು. ಅದರ ಮೇಲಕ್ಕೆ ಕಣ್ಣು ಹತ್ತಿಸಿ ಅಮಾನ ಕಣ್ಣು ಹೋದಷ್ಟು ದೂರ ಏರಿಸಿದನು. ಆರೇಳು ಬಲವಾದ ಗೊನೆಗಳ ಕಾಯಿ ಭಾರಕ್ಕೆ ಮರ ಜಗ್ಗುತ್ತಿತ್ತು. ಬುಡಕ್ಕೆ ಕಣ್ಣು ಇಳಿಸಿದರೆ ಅಲ್ಲಿ ಅದಕ್ಕೆ ಸುಣ್ಣ ಕೆಮ್ಮಣ್ಣು ಬಣ್ಣವ, ಮರದ ಬುಡದ ತುಂಬಾ ಯಾರೋ ಬಳಿದಿದ್ದರು. ಕಂಡ ಅಮಾಸ ಕುರಿಯಯ್ಯನ ಪಕ್ಕಕ್ಕೆ ಮತ್ತೂ ತವದು ‘ಅಯ್ಯಾ’ ಅನ್ನಲು ಏನ ಎಂಬಂತೆ ಅವ ನೋಡಲು ‘ನೋಡಯ್ಯ ನೋಡಯ್ಯ ನಿನ್ನ ತಿಗನ ಮರ್ಕ ಯಾರಕಣ ಸುಣ್ಣ ಬಣ್ಣ ಬಳದವರೆ’ ಅಂತು. ಕುರಿಯಯ್ಯ ನೋಡಲು ಅಷ್ಟು ದೂರ ಕಾಣಿಸಿ ಆಮೇಲ ಕಣ್ಣು ಮಂಜು ಮಂಜಾಗಿ ಬಿಡುತ್ತ ಏನೂ ಕಾಣಲಿಲ್ಲ. ಅವನಿಗೆ ಕಂಡ್ತು: ಮಾಟ್ನ ಮಾಡಿ ಯಾರೊ ಸುಡುಗಾಡಲ್ಲಿ ತೆಂಗಿನಕಾಯಿ ಹೂತಿದ್ದು, ಅದು ಸಸಿಯಾಗಿ ಕೆಂದಿ, ಭೂಮಿ ಸೀಳಿ ಬಂದದ್ದು ಕಿತ್ತು ತಂದು ತನ್ನದು ಅಂತಾರು ಇರ್ಲಿ ಅಂತ ಮಾರಿಗುಡಿ ಮೂಲೇಲಿ ನೆಟ್ಟಿದ್ದು. ಅದು ತನ್ನ ಕಣ್ಣು ಮಟಾರದಲ್ಲೇ ಗರಿ ಕಳಚ್ತ, ಕಳಚಿದಲ್ಲಿ ಕಳಚಿದ ಗುರುತ ಉಳಿಸ್ತ, ಗರಿ ಕಳಚ್ತ ಕಳಚಿದಲ್ಲಿ ಗುರುತ ಮಯ್ಯಲ್ಲಿ ಉಳಿಸ್ತ, ಬೆಳೀತ ಬೆಳೀತ ಮೇಲಕ್ಕೆ ಮೇಲಕ್ಕೆ ಅಂತ ಇನ್ನೂ ಮೇಲಕ್ಕೆ ಬೆಳೆದು ನಿಂತಿತು.
ಹಬ್ಬದಂದು ನೆಲಕ್ಕೆ ಹೊತ್ತು ಇಳಿಯುತ್ತಿದ್ದಂತೆಲ್ಲ ಪರಸ್ಥಳದಿಂದ ನೆಂಟರಿಷ್ಠರು ಊರಿಗೆ ಒಬ್ಬೊಬ್ಬರಾಗಿ ಇಳಿಯುವುದು ಏರತೊಡಗಿತು. ಬಂದವರು ರೂಢಿಯಂತೆ ಮಾರಿಗುಡಿಗೆ ಮೊಖಹಾಕಿಯೆ ಆಮೇಲಿನದು ಮಾಡುತ್ತಿದ್ದರು. ಕೆಲವರು ಅಲ್ಲಿ ಕುಂತು ಎಲ್ಲಾ ಮರೆತು ಲಾ ವಡೆಯುವಲ್ಲಿ ಲೀನವಾಗಿದ್ದರು. ಅವರವರ ಊರಲ್ಲಿ ಆದ ಹಿಂದಲ ಜಗಳನೆಲ್ಲ ಕೆದಕಿ ಹೆಂಗಾಯ್ತು ಎನ್ಕಥೆ ಎಂಬುದೆ ಅವರ ಬಾಯಿಗೆ ಮುಖ್ಯವಸ್ತುವಾಗಿತ್ತು. ಅಂಥ ಸಂದರ್ಭದಲ್ಲೇ ಹೊರಗೆ ಜೋಳದಕಂತೆ ಕತ್ತಿಸಿ ಬಸಣ್ಣನು ತಮ್ಮಟೆ ಕಾಯಿಸುತ್ತ ಅದರ ದನಿ ಬಿಗಿ ಮಾಡುತ್ತಿದ್ದನು. ಅವನ ಸುತ್ತ ವಾನರಸೇನೆಯಂತೆ ಐಕಲು ಮಕ್ಕಳು ಸುತ್ತಿದ್ದವು. ಅದರೊಳಗೆ ಅಮಾಸನು ಒಬ್ಬನಾಗಿದ್ದನು. ಬಸಣ್ಣ ತಮ್ಮಟೆಯನ್ನು ಎದೆಗೆ ಏರಿಸಿ ಚಡ್ ಚಡ್ ನಕುನ, ನಕುನ ನಕುನ ಬಾರಿಸಲು ಕಂಚಿಗೆ ಬಡಿದಂತೆ ತಮ್ಮಟೆ ದನಿಯು ಊರ ನಾಕ ಮೂಲೆ ಮುಟ್ಟತೊಡಗಿತು. ಸುತ್ತ ಇದ್ದ ಐಕಳು ಸುಮ್ಮನಿರದೆ ಕುಣಿಯತೊಡಗಿದವು. ಬಸಣ್ಣನಿಗೂ ಹುಮ್ಮಸ್ಸು ಬಂದು ಢಂಗ್ ಢಂಗು, ಢಂಗು ಚುಕ್ಕಿ ವಡೀತ ಅವನೂ ಕುಣಿದನು.
ಅದಕ್ಕೆ ಕುಣಿಯೋಕೆ ಐಕಳಿಗೂ ಹೆಜ್ಜೆ ಸಿಕ್ಕಿ ಐಕಳೂ ಕುಣೀತ ಬಸಣ್ಣನೂ ಕುಣೀತ ಹೋಗವರು ಬರುವರು ಸೇರಿ ಒಬ್ಬರ ಮೇಲೆ ಒಬ್ಬರು ಬಿದ್ದು ನಿಂತರು. ಅಮಾಸನಿಗೆ ಯಾರು ಹೇಳಿಕೊಟ್ಟಿದ್ದರೊ ಎನ ಕಥೆಯೊ. ಎಲ್ಲರಿಗಿಂತಲು ವೈನಾಗಿ ಹೆಜ್ಜೆ ಹಾಕುತ್ತಿದ್ದನು. ಎಲ್ಲರು ಬೆರಗಿನಿಂದ ಎಲಾ ಇವ್ನ ಅಂದುಕೊಂಡು ಅಮಾಸನನ್ನೇ ನೋಡುವುದು ಮಾಡುತ್ತಿದ್ದರು. ಅಷ್ಟಕ್ಕೆ ಅಲ್ಲಿಗೆ ಹೆಂಗಸೂ ಅನ್ನದೆ ಬಂದು ನಿಂತು ನೋಡುವುದಕ್ಕೆ ಬಂದುಬಿಟ್ಟಿತ್ತು. ಬಂಗಾರಿಗಂತು ಅಮಾಸನಿಂದ ಕಣ್ಣು ಕೀಳುವುದಕ್ಕೆ ಆಗಲಿಲ್ಲ. ಅಮಾಸನನ್ನು ನೋಡುತ್ತ ನೋಡುತ್ತ ಮತ್ತೆ ಅವಳೊಳಗೆ ಕಂಕುಳಿಗೆ ಒಂದು ಕಂದ ಅಂತ ಬೇಕು ಎಂಬಂಥ ಅತ್ಯುಗ್ರ ಆಸೆ ಉಂಟಾಯಿತು. ಅವಳಿಗೆ ಮದುವೆಯಾಗಿ ಆರೇಳು ವರ್ಷ ಆಗಿದ್ದೂ ಏನೂ ಫಲ ಕಂಡಿರಲಿಲ್ಲ. ಅವರಿವರು ಅಡೊ ಮಾತಿಗೆ ಅವಳ ಘಟ ರೋಸಿ ಆ ಕಿಚ್ಚಿಗೇ ಮಾಡಬಾರದ್ದನ್ನೆಲ್ಲ ಮಾಡಿಯೂ ನೋಡಿದಳು. ಆದರೂ ಫಲ ಕಾಣಲಿಲ್ಲ. ಅವಳ ವಾರಿಗೆಯವರು ಮುವ್ವತ್ತರ ಸುತ್ತಿಗೆ ಮುಪ್ಪು ಹಿಡಿಸಿಕೊಂಡಿದ್ದರೂ ಅವಳೊ ಇನ್ನೊಂದು ಮದುವೆ ಮಾಡಿಕಳಿಸುವಂತೆ ಇದ್ದಳು. ಅವಳ ಕಂಡವರಿಗೆ ಅರಗಳಿಗೆಯಾರು ಅಸೆಯಾಗುವಂಥ ಬಿನ್ನಾಣ ಅವಳಿಗಿತ್ತು. ಆದಿರಲಿ, ಆದರೂ ಫಲ ಕಾಣಲಿಲ್ಲ. ಆದರೆ ಅವಳ ರೀತಿಯೂ ಹೆಚ್ಚು ದಿನ ಮುಂದುವರೆದುಕೊಂಡೂ ಹೋಗಲಿಲ್ಲ. ರಾತ್ರಿಯಾಯ್ತು ಅಂದರೆ ಹಟ್ಟಿಗೆ ಒಂದೊಂದಾಗಿ ಕಲ್ಲು ಬೀಳಲು ತೊಡಗಿದವು. ಅವಳ ಗಂಡ ಬಂಗಾರಿ ಬೆನ್ನಿಗೆ ಬಾಸುಂಡೆ ಬರಿಸಿ ತಲೆ ಚಚ್ಚಿಕೊಂಡು ಹೊರಕ್ಕೆ ಮೊಖ ಹಾಕದೆ ಕುಂತನು. ಅಮೇಲ ಕಲ್ಲು ಬೀಳುವುದು ನಿಂತು ಈಗ ಮರೆತುಹೋಗುವಷ್ಟು ಆಗಿತ್ತು. ಅವಳ ಕಣ್ಣುಗಳ ಒಳಗೆ ಅಮಾಸ ಥರಾವರಿ ಕುಣಿಯುತ್ತಿತ್ತು.
ಮೇಲಿನಂತೆ ಆಗುತ್ತಿದ್ದ ಸಂದರ್ಭದಲ್ಲೇ ಇಬ್ಬರು ಯಜಮಾನರು ಕೊಬ್ಬಿದ ಎರಡು ಹೋತಗಳನ್ನು ಅಲ್ಲಿಗೆ ಸೆಳತಂದರು. ಆಗ ಅಲ್ಲಿದ್ದ ಗುಂಪು ಎರಡಾಗಿ ಸೀಳಿತು. ಐಕಳು ಮಕ್ಕಳು ಅತ್ತಗು ಇತ್ತಗು ಚಲ್ಲಿಕೊಂಡವು. ಹೋತಗಳೂ ತಮ್ಮಟೆ ಬಿರುಸಿಗೆ ದಿಕ್ಕಾಪಾಲು ಎಳೆಯತೊಡಗಿದವು. ಆ ಬಲಕ್ಕೆ ಹಿಡಿದವರು ಅಲ್ಲಾಡಲು ಮತ್ತೂ ಇಬ್ಬರು ಸೇರಿ ಅವ ಹಿಡಕಂಡು ಮಿಸುಕಾಡದಂತೆ ಮಾಡಿ ಮಾರಿಗುಡಿ ಮುಂದೆ ತಂದು ನೇರಕೆ ನಿಲ್ಲಿಸಿದರು. ಹೊರಗೆ ಹುಮ್ಮಸ್ಸಿನಿಂದ ತಮ್ಮಟೆ ಬಡಿಯುತ್ತಿತ್ತು. ಹೋತಗಳು ಅಲುಗದೆ ಮಿಸುಕದೆ ಕಣ್ಣುಗಳನ್ನು ಮಾತ್ರವೆ ಸುತ್ತು ತಿರುಗಿಸುತ್ತಿದ್ದವು. ಎದುರಾ ಗುಡಿ ಬಾಗಿಲು ತೆರದಿದ್ದು ಬೆಳ್ಳಿ ದೇವರು ಹೊಳೆಯುತ್ತಿತ್ತು. ಗುಡಿ ಒಳಗಿಂದ ಪೊದೆಯಾಗಿ ಊದುಬತ್ತಿ ಹೊಗೆ ಹೊರಕ್ಕೆ ತೇಲಿಕೊಂಡು ಬರುತ್ತಿತ್ತು. ಒಳಗಿದ್ದ ಸೊಂಟದಿಂದ ಕೆಳಕ್ಕೆ ಮಂಡಿಯಿಂದ ಮೇಲಕ್ಕೆ ಬಟ್ಟೆ ಸುತ್ತಿದ್ದ ಒಬ್ಬನು ತೀರುತ ಮಾರು ಹೂವ ತಂದು ಹೋತಗಳ ಮುಂದೆ ನೆಟ್ಟಗೆ ನಿಂತು, ಕ್ಷಣ ಕಣ್ಣು ಮುಚ್ಚಿ ತುಟಿ ಅಲುಗಿಸುತ್ತ ವಟ ವಟ ಆರಂಭಿಸಿದನು. ಅವನ ಮಯ್ಯಿ ಕಪ್ಪುಗಿದ್ದು ಮೈಯ್ಗೆಲ್ಲ ನರ ನರವೆ ಹಬ್ಬಿತ್ತು. ವಟಗುಟ್ಟುವುದಕ್ಕೆ ತಕ್ಕಂತೆ ಅವು ಹಿಗ್ಗುತ್ತ ಕುಗ್ಗುತ್ತ ಇದ್ದವು. ಆಮೇಲ ಅವ ಹೂವ ಎರಡು ಮಾಡಿ ಹೋತಗಳ ಕೊರಳಿಗೆ ಬಿಗಿದನು. ಅದಾದ ಮೇಲ ಬಿಡಿ ಹೂವ ಹೋತಗಳೆರಡರ ನೆತ್ತಿಯ ಮೇಲೆ ಇಟ್ಟು ತೀರುತವನ್ನು ಮೈಮೇಲೆಲ್ಲ ಎರಚಿ ಕೈ ಮುಗಿದು ‘ಏನಾರ ತಪ್ಪಿದ್ದರ ಹೊಟ್ಟ ಒಳಕ ಹಾಕವ್ವ ಒಪ್ಪಿಗೆ ಕೊಡು’ ಅಂದನು. ಅವನ ಆ ಚೂಪು ದನಿ ಮಾರಿಗುಡಿ ತುಂಬ ದನಿಗುಟ್ಟಿತು. ದೂರದಲ್ಲಿ ಗಲಭೆ ಬಿಟ್ಟರೆ ಮಾರಿಗುಡಿ ಒಳಗ ಎಲ್ಲರು ಉಸುರುಕಟ್ಟಿ ನಿಂತಿದ್ದರು. ಅವರು ಹಾಗೆ ನಿಂತಿರುವುದು ಹೋತಗಳು ಕಣ್ಣುಗಳನ್ನು ಮಾತ್ರವೆ ಸುತ್ತಗು ತಿರುವಿಸುತ್ತ ನೋಡುವುದು ಸ್ವಲ್ಪ ಹೊತ್ತು ನಡೆಯಿತು. ಆಮೇಲ ಹೋತಗಳು ಒಂದೆ ಸಮಕ್ಕೆ ತಲಮಯ್ಯಿ ವದರಿದವು. ತಮ್ಮಟೆ ದನಿಯು ಅಲ್ಲಿಂದ ಏಳುತ್ತಿದ್ದ ಗಲಗು ಗದ್ದಲವನ್ನು ನುಂಗಲು ಆರಂಭಿಸಿತು. ಒಂದಿಷ್ಟು ಐಕಳೂ ಅಮಾಸನೂ ದೊಡ್ಡವರು ಗದರಿಸಿದರೂ ಅವರು ಅತ್ತ ತಿರುಗಿದಾಗ ಇತ್ತ ಚಿಗಿದು ಮುತ್ತುತ್ತಿದ್ದವು. ಕೊಂಟಿನ ಪಕ್ಕವೆ ಬಲವಾಗಿದ್ದ ಒಬ್ಬನು ಚೂರಿ ಹಿಡಿದು ಲೀಲಾಜಾಲವಾಗಿ ನಿಂತಿದ್ದನು. ಇಬ್ಬರು ಹೋತಕ್ಕೆ ಹಿಂಗಾಲು ಮುಂಗಾಲು ಮಾಡಿ ಬಿಮ್ಮಗೆ ಹಿಡಿದು ಅದರ ಕತ್ತನ್ನು ಕೊಂಟಿಗೆ ತರುತ್ತಲೆ ಕಾಯುತ್ತಿದ್ದ ಚೂರಿಯವ ಚಕ್ಕನೆ ಹೋತದ ಕತ್ತಿಗೆ ಚೂರಿಯಿಂದ ಒಂದೇಟು ಹಾಕಿ ಚುರು ಚುರು ಅನ್ನಿಸಿಬಿಟ್ಟಾಗ ದೇಹ ತಲೆ ಎರಡಾದವು. ಕತ್ತರಿಸಿ ಒಕ್ಕಡೆ ಬಿದ್ದ ತಲೆಯ ಬಾಯಿಗೆ ಒಬ್ಬ ನೀರು ಹಾಕಿದನು. ಒಂದೆರಡು ಸಲ ಬಾಯಿ ಪಕ ಪಕ ಅಂದು ಮುಚ್ಚಿತು. ಆ ಕಡೆ ಅದರ ದೇಹ ಎಷ್ಟೆಷ್ಟೋ ಒದ್ದಾಡಲು ಒದ್ದಾಡುತ್ತಿತ್ತು. ತಲೆ ಮಾತ್ರ ಕಣ್ಣುಗಳ ಮೇಲಕ್ಕೆ ಅಗಲಿಸಿ ಆಗಲೆ ಸ್ತಬ್ದವಾಗಿಬಿಟ್ಟಿತ್ತು. ಒದ್ದಾಡುವ ದೇಹದಿಂದ ರಕ್ತ ಚಲಚಲನೆ ಚಿಮ್ಮುತ್ತ ನೆಲಕ್ಕೆ ದೊದದೊದನೆ ಸುತ್ತಲೂ ಕೆಂಪಗಾವರಿಸಿತು. ಯಾರೊ ಒಂದು ಹೈದ ತವಕನೆ ಓಡಿ ಹೋತಗಳ ಕತ್ತಿಗೆ ಸುತ್ತಿದ್ದ ರಕ್ತ ಸೋರುತ್ತಿದ್ದ ಹೂವಸರವ ತಂದುಬಿಟ್ಟನು. ಅವ ಸುಮ್ಮನಿರದೆ ಅದ ಅಮಾಸನ ಕತ್ತಿಗೆ ಸುತ್ತಿಬಿಟ್ಟು ಕುಣಿ ಅಂತಂದನು. ಅಮಾಸನಿಗೆ ಕತ್ತಿನ ಸುತ್ತೆಲ್ಲ ತಣ್ಣಗುಟ್ಟಿ ಅವನ ಕತ್ತಿನಿಂದಲೂ ರಕ್ತ ತೊಟ್ಟಿಕ್ಕುತ್ತ ಅಮಾಸ ಬೆದರಿ ಬೆಚ್ಚಿ ಅಲ್ಲಿಂದ ಕಂಬಿಕಿತ್ತನು. ಅವನಂತೆಯೆ ಒಂದಿಬ್ಬರು ಹಾಗೆ ಮಾಡಿದರು. ಮಲಗಿದರೂ ಎಷ್ಟೋ ಹೊತ್ತಿನವರೆಗೆ ಇದೇನೆ ಅಮಾಸನ ಕಣ್ಣಿಗೆ ಕಟ್ಟಿತ್ತು. ಅದರೊಳಗೇ ಅವನು ಬೆಚ್ಚಿ ಬೆದರಿ ಎಷ್ಟೋ ಸಲ ಎದ್ದು ಕೂತನು. ಅವತ್ತು ರಾತ್ರಿಯೆಲ್ಲ ಬೆಳಕು ಹಚ್ಚಿದ್ದರು. ಪರ ಊರಿನವರು ಹೆಚ್ಚಾಗಿ ಬಿಳಿ ದುಪ್ಪಟಿ ಹೊದ್ದು ಮಾರಿಗುಡಿ ತುಂಬಾ ಏಕಾ ಮಲಗಿದ್ದರು. ಅದೆಲ್ಲ ಸೇರಿಕೊಂಡು ಮಾರಿಗುಡಿಗೆ ಮಾರಿಗುಡಿಯೇ ಬೆಳ್ಳಗಿತ್ತು .
ಆ ರಾತ್ರ ರೈಲ್ವೆ ಗ್ಯಾಂಗ್‌ಮೆನ್ನು ಸಿದ್ದಪ್ಪನು ವೋವರಾಗಿ ಹೊಟ್ಟೆ ತುಂಬ ಪರಮಾತ್ಮನನ್ನು ಹಾಕೊಂಡು ಬಂದಿದ್ದನು. ಅವನ ತಪ್ಪಲ್ಲದಿದ್ದರೂ ಅದು ಅವನನ್ನು ಆ ರಾತ್ರಿ ತುಂಬ ಆಡಿಸತೊಡಗಿತು. ಅವನಿಗೋ ಕಣ್ಣು ಮುಚ್ಚಿದರೆ ಪ್ರಳಯ ಆಗುತ್ತಿತ್ತು. ಅದಕ್ಕೇ ಅವನು ಕಣ್ಣುಮುಚ್ಚದೆ ತೂರಾಡುವ ಹಾದಿ ಒಳಗ, ಹಿಡಿದಿದ್ದ ಕೋಲು ಊರುತ್ತ ದಿಕ್ಕಾಪಾಲು ನಡೆದಾಡತೊಡಗಿದನು. ಹಾಗೆ ನಡೆದಾಡುತ್ತಿರುವರಲ್ಲಿ ಉರಿಯೊ ಲೈಟುಕಂಬ ಕಂಡುಬಂದಲ್ಲಿ ಅವನಿಗೆ ರೋಷ ಹೊಮ್ಮುತ್ತಿತ್ತು. ಝಾಡಿಸಿ ಅದಕ್ಕೆ ಒದ್ದು ಬಿದ್ದು ಕೋಲಲ್ಲಿ ಜೋರು ಬಡಿಯುವನು. ಅಲ್ಲಾಗುವ ಸದ್ದು ಸುತ್ತಮುತ್ತನ್ನೆಲ್ಲ ನಡುಗಿಸುತ್ತ ಏಳುತ್ತಿತ್ತು. ಅಷ್ಟಕ್ಕೂ ಮುಗಿಸದೆ ಹಾಹೊ ಚೀರುತ್ತ ಅದನ್ನು ರಾಜಕಾರಣಿಯನ್ನೋ ಕಂಟ್ರಾಕ್ಟರನ್ನೋ ರೈಲ್ವೇ ಬಾಸನ್ನೊ ಆಣೆ ಬಡ್ಡಿ ಸಾಲ ಕೊಡೊ ಮಾದಪ್ಪನನ್ನೋ ಮಾಡಿಕೊಂಡು- ‘ಥೂ ಸೂಳೆಮಗ್ನ. ಬಿಳಿ ಬಟ್ಟ ಹಾಕ್ಕೊಂಡು ದೇಸ ಸುತ್ತಿ ದೊಡ್ಡವ ಆಗ್ತಿ ಏನ್ಲೇ? ನನ್ನ ಕಂಡ್ರ ನೀನು ಮೂಗ ಮುಚ್ಕೊಳ್ತೀಯ? ನಾವಾದ್ರ ಪರದೇಸಿಗಳಪ್ಪ. ಎಲ್ಲಂದ್ರ ಅಲ್ಲಿ ಬೀದಿಲಿ ಬಿದ್ದಿರ್ತಿವಿ’- ವೊ ಎಂದು ದೊಡ್ಡದಾಗಿ ಬಾಯಿ ದನಿ ತೆಗೆದು ಗೋಳೋ ಎಂದು ಅತ್ತನು. ಮತ್ತೂ ಮಾತು ಜೋರು ಮುಂದುವರಿಸಿದನು- ನಿಮ್ಮ ಕಾರ ನಮ್ಮ ಮೇಲ ಬುಡಬೇಡ್ರಪ್ಪೋ ನನ್ಮಾತ ಕೇಳಿ ನಗ್ತಾನೆ ನೋಡ್ರಪ್ಪೋ. ನಗಪ್ಪಾ ನಗು. ನಿಂಗ ನಗೊ ಕಾಲ. ನೀ ಏನ ಮಾಡ್ತಿ ನಗ್ದೆ’. ನಗು ಮಗ್ನ. ಬಡವ್ರ ಉದ್ಧಾರ ಮಾಡವ ನೀನು. ನಗು ಮಗ್ನ. ಕಮುನಿಸಮು ಬರ್ಬೇಕು, ಆಗ ನೀ ನಗೋದು ಹೋಗ್ಬೇಕು. ಅಲ್ಲಿಗಂಟಾನು ನೀ ನಗ್ತಿ. ನಗಪ್ಪೋ ನಗು – ಅಲ್ಲೆ ಅಲ್ಲೋಲ ಕಲ್ಲೋಲ ಏಳಿಸುತ್ತ ಅವನ ಮಾತು ನಗು ಎಲ್ಲವು ಬೀದಿ ತುಂಬೆಲ್ಲ ಬಿದ್ದು ಎದ್ದು ಆ ಕೊರೆಯುವ ರಾತ್ರಿ ಕತ್ತಲ ಒಳಗ ಒದ್ದಾಡುತ್ತಿದ್ದವು. ಆ ಮಾತು ನಗುಗೆಲ್ಲ ನಿದ್ದೆ ಬಾರದಿದ್ದ ಅಮಾಸ ಬೆಚ್ಚಿ ಬೆಚ್ಚಿ ಕೂರುತ್ತಿದ್ದನು. ಹೀಗೆ ಎಷ್ಟೋ ಹೊತ್ತು ನಡೆದು ಆಮೇಲ ಸಿದ್ದಪ್ಪನ ದೇಹ ಎಲ್ಲಿ ಬಿತ್ತೋ ಹೇಗೆ ಬಿತ್ತೊ ಏನು ಕಥೆಯೊ ಅವನ ಮಾತು ಅವನ ನಗು ನಿಂತವು.
ಮಾರನೆ ದಿನ ಬಂತಲ್ಲ. ಅವತ್ತು ಊರು ಆಕಳಿಸುತ್ತ ಕಳೆಯಿತು. ಯಾವಾಗ ಜಗುಲಿ ನೋಡಿದರೂ ಜನವೆ ತುಂಬಿತ್ತು. ಅಷ್ಟಕ್ಕೂ ಎಷ್ಟೋ ಜನ ಇನ್ನೂವೆ ಎದ್ದೆ ಇರಲಿಲ್ಲ, ಉದಾ: ಸಿದ್ದಪ್ಪ. ಮಧ್ಯಾಹ್ನ ಬಂತಲೆ ಹುಲಿಯಾಸದವರಿಂದ ಚಲನ ವಲನ ಮಾರಿಗುಡಿಗೆ ಬಂತು. ಗೌಡರ ಜೀತದಾಳು ಬಂದು ‘ಗೌಡ್ರ ಹಟ್ಟಿಗೆ ತಿಂಗ್ನ ಕಾಯಿ ಬೇಕಂತೆ’ ಎಂದು ಅಂದು ಕುರಿಯಯ್ಯ ಕಿತ್ಕೊ ಅಂತಲೆ ಅವ್ನು ಮರವ ನಿಮಿಷಕ್ಕೆ ಹತ್ತಿ ಉದುರಿಸಿಕೊಂಡು ಹೋದನು. ಅತ್ತ ಹಟ್ಟಿಗಳ ಒಳಗ ಹೆಂಗಸರು ಚೆಂದಾಗಿ ತಲೆಬಾಚ್ಕೊಂಡು ಹೂ ಮುಡ್ಕಂಡು ಹೊರಕ್ಕು ಒಳಕ್ಕು ಓಡಾಡುತ್ತಿದ್ದರು. ಪ್ರಾಯದ ಹುಡುಗರಂತು ಆಗೀಗ ಅಡೋ ತುಡುಗು ಹುಡಿಗೇರ ರೇಗಿಸುತ್ತ ಅವುಗಳಿಂದ ಬೈಸಿಕೊಳ್ಳುತ್ತ ಇದ್ದವು. ಮಾರಿಗುಡೀಲಿ ಹುಲಿಯಾಸದ ತಮ್ಮಟ ಸದ್ದು ಎಲ್ಲರನ್ನು ಒಕ್ಕಡೆಗೆ ಸೆಳೆಯುತ್ತಿತ್ತು. ಎಲ್ಲರು ಬರೊ ಹುಲಿಗಳನ್ನೇ ಕಾಯುತ್ತ ಕಾದಿದ್ದರು. ಹಾಗೆ ಇದ್ದು ಒಮ್ಮೆಗೆ ಹುಲಿಮನೆ ಬಾಗಿಲು ತೆರಕೊಂಡಿತು. ಎಲ್ಲರ ಕಣ್ಣುಗಳೂ ದಬ ದಬ ಅಲ್ಲಿಗೆ ಬಿದ್ದವು. ಒಂದು ದೊಡ್ಡಯಾಸದ ಹುಲಿ ನಿಂಬೆಹಣ್ಣ ಬಾಯಲ್ಲಿ ಕಚ್ಚಿ ಒಳಗಿನಿಂದ ಹೊರಕ್ಕೆ ನೆಗೆದು ಬಂತು. ಬರುತ್ತಲೆ ಜನವೆಲ್ಲ ಹೌಹಾರಿ ಚದುರಿ ಸರಿದು ಸರಿದು ಅಲ್ಲೆ ರೌಂಡಾಗಿ ಜಾಗವಾಯ್ತು. ಅದಾದ ಮೇಲ ನಾಕಾರು ದೊಡ್ಡ ಹುಲಿಗಳು, ಕತ್ತೆ ಕಿರುಬ, ನಗುಸೊ ಕೋಡಂಗಿ ಒಂದಾದ ಮೇಲೊಂದು ಬಂದುವು. ಬಂದವುಗಳಲ್ಲಿ ಒಂದು ಮರಿ ಹುಲಿಯೂ ಇತ್ತು. ಎಲ್ಲ ಬಂದಾದ ಮೇಲ ಸಾಲಾಗಿ ನಿಂತು ದೇವರಿಗೆ ಕೈ ಜೋಡಿಸಿ ತೀರುತ ತಕ್ಕಂದರು. ಆಮೇಲ ಅಲ್ಲಿಂದಲೆ ಕುಣಿತ ಆರಂಭ ಆಯ್ತು. ಕತ್ತೆ ಕಿರುಬನು ಎಲ್ಲರಿಗಿಂತಲು ಜೋರಾಗಿ ಮಜಬೂತವಾಗಿದ್ದು ಅವನಿಗೆ ಯಾಸ ಥೇಟಾಗಿತ್ತು. ಅವ್ನು ಮರಿ ಕಡಿಯುವಾಗ ಲೀಲಾಜಾಲವಾಗಿ ಕತ್ತಿ ಹಿಡಿದು ನಿಂತಿದ್ನಲ್ಲ ಅವ್ನು. ಅವ, ತಮ್ಮಟೆ ದನಿಗೆ ಹೆಜ್ಜೆ ಹಾಕುತ್ತ ಬಂದ ಅಂದರೆ ಜನಕ್ಕೆ ಜನವೆ ಫರ್ಲಾಂಗು ದೂರ ಚೆಗಿಯುತ್ತಿತ್ತು. ಕುಣಿತ ಬೀದಿಗೆ ಬಂದಾಗ ಹೆಂಗ್ಸು ಮಕ್ಕಳು ಜಗಲಿ ಇಳಿದೇನೆ ಜೀವ ಹಿಡಕಂಡು ನೋಡುತ್ತಿದ್ದರು. ಏನಾರು ಕುಣಿತ ಅವರ ದಿಕ್ಕ ಬಂದರೆ ಗುಡಕ್ಕಂತ ಒಳಕ್ಕೋಗಿ ಚಿಲಕ ಹಾಕ್ಕೊಂಡುಬುಡುವರು. ಸಣ್ಣ ಹೈಕಳಂತು ದೂರ ದೂರವೆ ಇದ್ದು ಕುಣಿತ ಹೋದತ್ತ ಹೋದವು. ಹಾಗೆ ಕುಣಿತ ನಡೆದು ಒಕ್ಕಲಗೇರಿಗು ಬಂದು ಅಲ್ಲಿ ಚಾವಡಿ ಮುಂದ ಕುಣೀತು. ಕುಣಿತಕ್ಕೆ ಗೌಡರು ಶಾನುಭೋಗರು ಎನ್ನದೆ ಮುಂತಾದ ಮೇಲು ಜಾತಿ ಮೊಖಂಡರು ಸೇರಿದ್ದರು. ಅವರೆಲ್ಲ ಕುಣಿತದವರಿಗೆ ತಂತಮ್ಮ ಸ್ಥಾನಮಾನಕ್ಕೆ ತಕ್ಕಂತ ಇನಾಮು ಕೊಟ್ಟು ಶಭಾಷಗಿರಿ ಪಡಕಂಡರು. ಊರ ಮೇಲಕ್ಕೆ ಕತ್ತಲು ಬಿದ್ದು ಕುಣಿತ ಮುಗಿದರೂ ಆದರೂ ಊರವರ ಕಣ್ಣು ಎತ್ತ ಹೋದರೂ ನಿದ್ದೆ ಮಾಡಲು ಕಣ್ಣು ಮುಚ್ಚಿದರೂ ಅಥವಾ ಹೆಂಡ್ತಿಗೆ ಸೀರೆ ಬಿಚ್ಚಿ ಬೆತ್ತಲೆ ಮಾಡಿ ನೋಡಿದರೂ ಕುಣಿತವೇ ಢಂಗು ಢಂಗು ಢಂಗುಚುಕ್ಕಿ ತಮ್ಮಟೆ ದನಿ ಜೊತೆಲೇನೆ ಕಾಣುತ್ತಿತ್ತು.
ಗೌಡರು ಮಲಗಿದರೂ ನಿದ್ದೆ ಬಾರದ್ದಕ್ಕೆ ಅಡ್ಡಾಡಲು ಬಂದರು. ಅವರ ಹಟ್ಟಿ ಜೀತಗಾರನು ಎಚ್ಚರವಾಗೆ ಇದ್ದುದರಿಂದ ಗೌಡರು ಬಂತಲೆ ಎದ್ದು ಕುಂತನು. ಗೌಡರು ಬೀಡೀನ ಬಾಯಿಗೆ ಸಿಕ್ಕಿಸಿ ಕಡ್ಡಿಗೀರಲು ಆ ಬೆಳಕಿಗೆ ಆ ಕತ್ತಲಿಗೆ ಅವರ ಮುಖದಷ್ಟು ಕೆಂಪಗೆ ಕಂಡು ನಂದಿತು. ಗೌಡರು ಹೊಗೆ ನುಂಗುತ್ತ ಇದ್ದು ಆಮೇಲ ಜೀತಗಾರನ ದಿಕ್ಕ ತಿರುಗಿ ‘ಅದೇ ಆ ಮರಿ ಹುಲಿ ಮಾಡಿತ್ತಲ್ಲ. ಆ ಹೈದ ಯಾರ್ದ’ ಎಂದರು. ಜೀತಗಾರ ‘ಅದೇಅಳಿ, ಅಮಾಸ ಅಂತ’ ಅಂದನು.
‘ಅಮಾಸ ಅಂದ್ರ?’ ಎಂದು ಮತ್ತೂ ಕೇಳಿದರು.
ಅದಕ್ಕವ ‘ಅದೇ ಅಳಿ, ಆ ಕುರಿಯಯ್ಯನ ಜೊತೇಲಿ ಒಂದು ತಾಯಿ ತಂದ ಇಲ್ಲ ತಬ್ಬಲಿ ಹೈದ ಇತ್ತಲ್ಲ ಬುದ್ದಿ, ಅದೇನೆ’ ಅಂದನು. ಗೌಡರು ಕೇಳಿದವರೆ ಅತ್ಯಾಶ್ಚರ್ಯ ಅದರು. ‘ಎಲಾ ಅನ್ನ, ಆ ಮಠದ ಮುಂದ ಹೋಗ್ ಬರೋರ ಕಾಸ್ ಕೇಳ್ತ ನಿಂತ್ಕಳೋ ಆ ಅಬ್ಬೇಪಾರಿನ!
ಹುಲಿಯಾಸ್ದಲ್ಲಿ ಎಷ್ಟು ಬೆಳೆದಂಗೆ ಕಾಣ್ತನೆ ನೋಡು’ ಅಂದರು. ಗೌಡರ ಕಣ್ಣುಗಳ ಮುಂದಕ್ಕೆ ಅಮಾಸ ಹುಲಿಯಾಸ ಹಾಕಿ ಬಗೆಬಗೆಯಾಗಿ ಕುಣಿಯುತ್ತ ಬಂತೊ.