ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತ ದೇವನೂರ ಮಹಾದೇವ ಅವರ ಅಭಿಪ್ರಾಯ
[ಬಂಜಗೆರೆ ಜಯಪ್ರಕಾಶ್ ಅವರ ಕೃತಿ ‘ಆನುದೇವಾ. ಹೊರಗಣವನು’ ಮುಟ್ಟುಗೋಲಿನ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ನೀಡಿದ ಅಭಿಪ್ರಾಯ ಲಡಾಯಿ ಪ್ರಕಾಶನ 2013ರಲ್ಲಿ ಹೊರ ತಂದಿರುವ “ಅಭಿವ್ಯಕ್ತಿ ಸ್ವಾತಂತ್ರ್ಯ ವಿವಿಧ ಆಯಾಮಗಳು” ಕೃತಿಯಲ್ಲಿ ದಾಖಲಾಗಿರುವಂತೆ….]
ಈಗ ನಮ್ಮಲ್ಲಿ ಬಹಳ ಜನರಿಗೆ ‘ಆವರಣ’ ಕಾದಂಬರಿ ಇಷ್ಟ ಇಲ್ಲ. ಹಾಗಂತ ಅದನ್ನು ಮುಟ್ಟುಗೋಲು ಹಾಕಿಕೊಳ್ಳಿ ಅಂತ ಯಾರೂ ಹೇಳಲಿಲ್ಲ. ಹಾಗೆಯೇ ‘ಆನುದೇವಾ..’ ಕೃತಿಯ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು. ಆದರೆ ಮುಟ್ಟುಗೋಲಿನ ಪರವಾಗಿ ಅಭಿಪ್ರಾಯ ಹೇಳೋದು ಸರಿಯೇ? ಒಂದು ಪುಸ್ತಕ, ಚಿಂತನೆಗೆ ಉತ್ತರ ಅದೇ ರೂಪದಲ್ಲಿರಬೇಕೇ ಹೊರತು ಮುಟ್ಟುಗೋಲಿನ ರೂಪದಲ್ಲಿ ಅಲ್ಲ.
ಈ ದೇಶದ ದಲಿತರ ಬಗ್ಗೆ, ಶೂದ್ರರ ಬಗ್ಗೆ ಧರ್ಮಗ್ರಂಥಗಳಲ್ಲಿ, ಶಾಸ್ತ್ರಗಳಲ್ಲಿ, ಪುರಾಣಗಳಲ್ಲಿ ಮನುಷ್ಯರೇ ಅಲ್ಲ ಎಂಬಂತಹ ಅಭಿಪ್ರಾಯಗಳಿವೆ. ಹಾಗಂತ ಸಂವಿಧಾನ ಬಂದ ಮೇಲೆ ಅದನ್ನೆಲ್ಲಾ ಮುಟ್ಟುಗೋಲು ಹಾಕಿ ಎಂದು ಹೇಳೋದು ಒಳ್ಳೆಯದಲ್ಲಾ. ಅದು ಅವರ ಅಭಿಪ್ರಾಯ. ಹಾಗಿದೆ. ಅದಕ್ಕೆ ಪ್ರತಿಯಾದ ಇನ್ನೊಂದು ಚಿಂತನೆ, ಅಭಿಪ್ರಾಯ, ಪ್ರತಿವಾದ ಇದೆ ಎಂದು ತಿಳಿದು ನಡೆಯುವುದೇ ಸಹಬಾಳ್ವೆ.
ಒಬ್ಬ ವ್ಯಕ್ತಿ ಇಷ್ಟ ಇಲ್ಲದಿದ್ದರೆ ಆತನನ್ನು ಕೊಲೆ ಮಾಡಬೇಕು ಎನ್ನುವ ಭಾವನೆ ಬರುತ್ತಲ್ಲಾ ಅಷ್ಟೇ ಅಪಾಯಕಾರಿಯಾದ ಅಂಥದ್ದೇ ಭಾವನೆ ಇಷ್ಟವಿಲ್ಲದ ಕೃತಿಯ ಮುಟ್ಟುಗೋಲು. ಸರ್ಕಾರ ಹೀಗೆ ಮಾಡುವುದರಿಂದ ಮುಂದೆ ಸಣ್ಣಪುಟ್ಟದ್ದಕ್ಕೆಲ್ಲಾ ಮುಟ್ಟುಗೋಲು ಹಾಕಿ ಎನ್ನುವ ಟ್ರೆಂಡ್ ಕ್ರಿಯೇಟ್ ಆಗುತ್ತೆ. ಸರ್ಕಾರದ ನಿಲುವು ರಾಜಕೀಯ ಪ್ರೇರಿತವಾಗಿದೆ. ಬಂಜಗೆರೆ ಕೃತಿಯನ್ನು ತಾತ್ಕಾಲಿಕವಾಗಿ ಹಿಂದೆ ಪಡೆದಿದ್ದರು. ಆದರೂ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಅಂದರೆ ಇದು ಒಂದು ದುಷ್ಟ ಮನಸ್ಸಿನ ಲಾಬಿಗೆ ಮಣೆ ಹಾಕಿದಂತೆ. ಇದು ಒಳ್ಳೆಯದಲ್ಲ.
[ಲಡಾಯಿ ಪ್ರಕಾಶನ 2013ರಲ್ಲಿ ಹೊರ ತಂದಿರುವ “ಅಭಿವ್ಯಕ್ತಿ ಸ್ವಾತಂತ್ರ್ಯ ವಿವಿಧ ಆಯಾಮಗಳು” ಕೃತಿಯಿಂದ…..]