ಅನ್ನಿಸಿದಂತೆ ಪ್ರಾಮಾಣಿಕವಾಗಿ ಬರೆವ ನಿಜವಾದ ಬಂಡಾಯಕಾರ ದೇವನೂರ ಮಹಾದೇವ.
[ 24 ಆಗಸ್ಟ್, 1994ರ ಲಂಕೇಶ್ ಪತ್ರಿಕೆಯಲ್ಲಿ ಆರ್.ನಿರ್ಮಲಾ ಅವರು ನಡೆಸಿದ ದೇವನೂರ ಮಹಾದೇವ ಅವರ ಸಂದರ್ಶನ ನಮ್ಮ ಮರು ಓದಿಗಾಗಿ]
(ಒಂದು ಶೋಷಿತ ಜನಸಮುದಾಯದ ಅವ್ಯಕ್ತ ಭಾವನೆಗಳಿಗೆ ಅಭಿವ್ಯಕ್ತಿ ಒದಗಿಸಿದ ದೇವನೂರ ಮಹಾದೇವ ಅವರು, ನಮ್ಮ ಸಂದರ್ಶಕರು ಭೇಟಿ ಮಾಡಿದಾಗ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ತಮ್ಮ ಗ್ರಹಿಕೆಯನ್ನು ವಿವರಿಸಿದರು…..ಸಂ)
‘ಕುಸುಮಬಾಲೆ’ ಕೃತಿಯ ಮೂಲಕ ಗಂಭೀರ ಚರ್ಚೆಗೆ ಒಳಗಾದ ಲೇಖಕ ದೇವನೂರ ಮಹಾದೇವ. ತಮ್ಮ ವ್ಯಕ್ತಿತ್ವ ಮತ್ತು ಸಾಹಿತ್ಯದ ಅಂತಃಸತ್ವದಿಂದ ಸಮಕಾಲೀನ ಸಾಹಿತ್ಯ ಸಂದರ್ಭದಲ್ಲಿ ದೇವನೂರರ ಪ್ರಸ್ತಾಪ ಅನಿವಾರ್ಯವಾಗಿದೆ. ಸಂಕೋಚ ಸ್ವಭಾವದ ಮಿತಭಾಷಿ ದೇವನೂರ ಮಹಾದೇವ ಅವರು ತಮ್ಮ ದಟ್ಟವಾದ ಗಟ್ಟಿ ಅನುಭವ ಹಾಗೂ ಅಭಿವ್ಯಕ್ತಿಯ ಹೊಸನೆಲೆಗಳ ಅನನ್ಯತೆಯಿಂದಾಗಿ ಎಲ್ಲರ ಗಮನ ಸೆಳೆದ ಬೆರಗಿನ ಲೇಖಕ. ಸಾಮಾಜಿಕ ಕಾಳಜಿಯ ಅನೇಕ ಲೇಖನಗಳನ್ನು ಪ್ರಕಟಿಸಿರುವ ಇವರ ಸಾಹಿತ್ಯ ಕೃತಿಗಳು ಮೂರು- ದ್ಯಾವನೂರು (ಕಥಾಸಂಕಲನ), ಒಡಲಾಳ ಮತ್ತು ಕುಸುಮಬಾಲೆ (ಕಾದಂಬರಿಗಳು) 1948ರಲ್ಲಿ, ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮದ ದಲಿತ ಕುಟುಂಬವೊಂದರಲ್ಲಿ ಜನನ. ದೇವನೂರು ಹುಣಸೂರುಗಳಲ್ಲಿ ಪ್ರಾಥಮಿಕ ಶಿಕ್ಷಣ: ಮಹಾರಾಜಾ ಕಾಲೇಜಿನಿಂದ ಬಿ.ಎ. ಪದವಿ; ಮಾನಸ ಗಂಗೋತ್ರಿಯ ಕನ್ನಡ ಆಧ್ಯಯನ ಸಂಸ್ಥೆಯಿಂದ ಕನ್ನಡ ಎಂ.ಎ. ಪದವಿ, 1984ರಲ್ಲಿ ‘ಒಡಲಾಳ’ ಕಾದಂಬರಿಗೆ ಕಲ್ಕತ್ತಾದ ಭಾರತೀಯ ಪರಿಷತ್ ಸಂಸ್ಥೆಯಿಂದ ‘ಉತ್ತಮ ಸೃಜನಶೀಲ ಕೃತಿ’ ಗೌರವ: ರಾಜ್ಯೋತ್ಸವ ಪ್ರಶಸ್ತಿಯ ಮನ್ನಣೆ, 1989ರಲ್ಲಿ ಅಮೇರಿಕಾ ದೇಶದ ಅಯೋವದಲ್ಲಿ ನಡೆದ ಇಂಟರ್ನ್ಯಾಷನಲ್ ರೈಟಿಂಗ್ ಪ್ರೋಗ್ರಾಂನಲ್ಲಿ ಭಾಗವಹಿಸುವ ಅವಕಾಶ: 1991ರಲ್ಲಿ ‘ಕುಸುಮಬಾಲೆ’ಗೆ ಕೇಂದ್ರ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ಮೈಸೂರಿನ ಭಾರತೀಯ ಭಾಷಾಸಂಸ್ಥಾನದಲ್ಲಿ ಕೆಲ ವರ್ಷಗಳ ಆಧ್ಯಾಪಕ ವೃತ್ತಿಯ ನಂತರ ರಾಜೀನಾಮೆ: ಪ್ರಸ್ತುತ ಮೈಸೂರು ಸಮೀಪದಲ್ಲಿ ವ್ಯವಸಾಯ ನಿರತ. ವ್ಯವಸಾಯದ ನೆಲವನ್ನು ‘ಭೂಮಿ’ ಎಂದು ಆತ್ಮೀಯತೆಯಿಂದ ಕರೆಯುವ ಸಹಜ ಕೃಷಿಯ ಸಂತ, ಸೂಫಿಬ್ಯಾರಿಯವರ ಶಿಷ್ಯನಂತೆ ಸಡಗರಿಸುತ್ತಿರುವ ಭಾವುಕ. ವಿದ್ಯಾರ್ಥಿ ದೆಸೆಯಿಂದಲೇ ತಮ್ಮ ಸಾಮಾಜಿಕ ಸಾಹಿತ್ಯಕ ಕಾಳಜಿಯಿಂದ ಸಮಾಜವಾದಿ ಚಳವಳಿಗಳ ಜೊತೆ ತಮ್ಮನ್ನು ಗುರುತಿಸಿಕೊಂಡ ಮಹಾದೇವ ಅವರು ಸೃಜನಶೀಲತೆಯ ಸೂಕ್ಷ್ಮ ಸಂವೇದನೆಗಳ ಜೊತೆಗೆ ಮಾನವೀಯತೆಯನ್ನು ಮೈಗೂಡಿಸಿಕೊಂಡಿದ್ದಾರೆ. ದಲಿತ ಚಳವಳಿಯ ತೀವ್ರತೆಗೆ ಮಾನವ ಪ್ರೀತಿಯನ್ನು ತುಂಬುವ ಹಂಬಲದಲ್ಲಿ ಗಾಂಧೀವಾದಿ ಎಂದು ಬ್ರಾಂಡ್ ಆಗಿದ್ದಾರೆ.
ಪ್ರಶ್ನೆ-ಮಹಾದೇವ್ ಅವರೇ ನಿಮ್ಮನ್ನು ಗಾಢವಾಗಿ ಕಾಡಿಸಿದ ಕೃತಿ ಯಾವುದು? ಸಾಹಿತಿ ಯಾರು?
ಉತ್ತರ- ನಾನು ಹೈಸ್ಕೂಲಿನಲ್ಲಿದ್ದಾಗಲೇ ಓದಿ ಈಗಲೂ ನೆನಪಾಗುವ ಕೃತಿ ‘ನೊಂದಜೀವಿ’ [ಮಿಸರಬಲ್, ಲೇ-ವಿಕ್ಟರ್ ಹ್ಯೂಗೋ] ಚೇತರಿಸಿಕೊಳ್ಳಲೂ ಆಗದಷ್ಟು ಸುಸ್ತು ಮಾಡಿದ ಕೃತಿ. ಟಾಲ್ಸ್ಟಾಯ್ನ ತರ್ಕಾತೀತ ಬದುಕಿನ ಬಗೆ; ಶೇಕ್ಸ್ಪಿಯರ್ನ ಕಾವ್ಯದಲ್ಲಿ, ಬದುಕು ತನ್ನೊಳಗೆ ಅರ್ಥ ಹುದುಗಿಸಿಕೊಂಡು ಹೊಳೆವ ಬಗೆ, ನನ್ನನ್ನು ಬೆರಗಾಗಿಸುತ್ತದೆ,
ಪ್ರ- ಕನ್ನಡ ಖಾಹಿತ್ಯದಲ್ಲಿ ನಿಮ್ಮ ಮೆಚ್ಚುಗೆಯ ಲೇಖಕರು ಯಾರು? ನಿಮ್ಮ ಮೇಲೆ ಅವರ ಪ್ರಭಾವ ಯಾವ ರೀತಿಯದು?
ಉ-‘ಕುವೆಂಪು ಗದ್ಯ, ಗದ್ಯವನ್ನೇ ಹಿಗ್ಗಿಸಿದೆ; ಬೇಂದ್ರೆ ಪದ್ಯ ಪದ್ಯವನ್ನೇ ಹಿಗ್ಗಿಸಿದೆ’- ಅನಿಸುವಂತಿದೆ. ಹೀಗೆ ಅನಿಸುವಂತವು ಹೇಗೆ ಪ್ರಭಾವ ಬೀರುತ್ತವೋ ಯಾರಿಗೆ ಗೊತ್ತು? ನಾನು ಬರವಣಿಗೆ ಆರಂಭಿಸಿದಾಗ ಅನಂತಮೂರ್ತಿ, ಲಂಕೇಶ್, ಕಂಬಾರ, ತೇಜಸ್ವಿ, ಆಲನಹಳ್ಳಿ ನನ್ನ ಕಣ್ಣ ಮುಂದೆ ಇದ್ದರು. ತೇಜಸ್ವಿಯವರ ‘ಅಬಚೂರಿನ ಪೋಸ್ಟ್ ಆಫೀಸು’ ಬಂದ ಮೇಲೆ ನಾನು, ‘ಡಾಂಬರು ಬಂದುದು’ ಕಥೆ ಬರೆದುದರಿಂದ ಇದು ನನ್ನ ಬರವಣಿಗೆಯ ಗತಿಯನ್ನು ಬದಲಿಸಿತೆನ್ನಿಸುತ್ತದೆ.
ಹಳಗನ್ನಡದಲ್ಲಿ ನನ್ನ ಓದು ಕಮ್ಮಿ. ವಚನ ನನಗೆ ಹಳೆಯದು ಎನಿಸುವುದಿಲ್ಲ; ನಮ್ಮ ನಾಳಿನ ಕಾವ್ಯ ಅನಿಸುತ್ತದೆ. ಪಂಪನನ್ನು ಓದಿಲ್ಲವಾದರೂ ಕುಮಾರವ್ಯಾಸನನ್ನು ಅಷ್ಟೋ ಇಷ್ಟೋ ಓದಿದ್ದುಂಟು. ಇಂಥವು ರಕ್ತದೊಳಗೆ ಸೇರಿಕೊಂಡು ನಮ್ಮ ಅರಿವಿಗೆ ಬಾರದೆ ಪ್ರಧಾವಿಸುವಂಥವು, ಹೀಗೇ ಜೀಮೂತವಾಹನನ ಕಥೆ, ಕರ್ನಾಟಕ ಕಾದಂಬರಿ, ವಡ್ಡಾರಾಧನೆ ಕೃತಿಗಳು.
ಪ್ರ-ಮಹಾದೇವ್ ಅವರೇ, ನಿಮ್ಮನ್ನು ನವ್ಯ ಬಂಡಾಯ ದಲಿತ ಸಾಹಿತ್ಯದಲ್ಲಿ ಎಲ್ಲಿ ಗುರುತಿಸುವುದೂ ನನಗೆ ಕಷ್ಟವಾಗುತ್ತಿದೆ. ನೀವು ಏನು ಹೇಳ್ತಿರಿ?
ಉ-ನಾನು ನವ್ಯ ಕಾಲಕ್ಕೂ ಆಮೇಲಿನ ಕಾಲಕ್ಕೂ ಕೊಂಡಿಯಂತಿರುವೆ. ಅಂದರೆ, ನವ್ಯರಿಗೆ ಕಿರಿತಮ್ಮ, ಬಂಡಾಯದವರಿಗೆ ಹಿರಿಯಣ್ಣ. ಹಾಗಾಗಿ ನನ್ನ ಹುಟ್ಟಿನಲ್ಲೇ ಬಿಕ್ಕಟ್ಟು. ಆದರೆ ಬರೆಯುವಾಗ ನನ್ನಿಂದ ಬರೆಸಿಕೊಳ್ಳುವ ವಸ್ತುವೇ ನನ್ನನ್ನು ಹೆಚ್ಚಾಗಿ ನಿಯಂತ್ರಿಸುವುದರಿಂದ, ಅದು ಏನಾಗುತ್ತದೋ ಅದೇ ಹೊರತು, ನವ್ಯ ಬಂಡಾಯ ತಲೆಬರಹಗಳು ನನ್ನ ತಲೆಗೆ ಅಂಟಲಿಲ್ಲವೇನೋ. ಮೊದಲು ಕಲೆ, ಆಮೇಲೆ ಉಳಿದುದೆಲ್ಲ. ಹಾಗಾಗಿ ಏನೋ, ನಾನು ಎಲ್ಲ ಗುಂಪಲ್ಲೂ ಇಷ್ಟಿಷ್ಟು ಇದೀನಲ್ಲ!
ಪ್ರ-ಕಾದಂಬರಿಗಳ ಸಂಭಾಷಣೆಯಲ್ಲಿ ಮಾತ್ರ ಬಳಕೆಯಾಗುತ್ತಿದ್ದ ಆಡು ಮಾತನ್ನು ನಿರೂಪಣಾ ಶೈಲಿಯನ್ನಾಗಿ, ನಿಮ್ಮ ಕೃತಿಗಳಲ್ಲಿ ಬಳಸಿದ್ದು ಉದ್ದೇಶಪೂರ್ವಕವೆ? ಇದರಿಂದ ನೀವು ಸಾಮಾನ್ಯ ಓದುಗರಿಂದ ದೂರಸರಿದಂತಾಗಲಿಲ್ಲವೇ?
ಉ-ನಾನು ಏನನ್ನು ಬರೆಯಲು ಪ್ರಯತ್ನಿಸುವೆನೋ ಅದಕ್ಕೂ ಒಂದು ಭಾಷೆಯಿದೆ; ಅದರಲ್ಲೇ ಅದನ್ನು ನುಡಿಸಬೇಕು ಎಂಬ ನನ್ನ ಅನಿಸಿಕೆಯಿಂದ ನಾನು ಅದರ ದಾರಿ ಹಿಡಿಯುವೆ. ಆರಂಭದಲ್ಲಿ ಉದ್ದೇಶಪೂರ್ವಕವೇ, ಆಮೇಲೆ ನನ್ನ ಭಾಷೆ ಯಾವುದೆಂದು ತಿಳಿಯದಷ್ಟು ಮುಳುಗಿಹೋಗುವೆ. ಇದು ಬಿಟ್ಟು ಬೇರೆ ರೀತಿ ಬರೆದರೆ ನನಗೆ ಅಸಹಜ ಅನಿಸತೊಡಗುತ್ತದೆ. ಜನ ಮರುಳೋ ಜಾತ್ರೆ ಮರುಳೋ ಏನನ್ನೋಣ?
ಪ್ರ-‘ಕುಸುಮಬಾಲೆ’ಯನ್ನು ಓದುವುದೇ ಕಷ್ಟ ಎಂದು ಕೆಲವು ಸಹೃದಯರೂ ಹೇಳುತ್ತಾರಲ್ಲ?
ಉ-ಹಿಂದೆಯೂ ಈ ಪ್ರಶ್ನೆ ಕೇಳಿದ್ದರು. ಅದಕ್ಕೆ ನಾನು ‘ನನಗೂ ಕುಸುಮಬಾಲೆ ಒಂದಿಷ್ಟು ಪುಟ ಓದುವವರೆಗೆ ಕಷ್ಟ’- ಎಂದಿದ್ದೆ.
ಪ್ರ-ಕುಸುಮಬಾಲೆಯ ವಾಚನ ಮತ್ತು ರಂಗಪ್ರಯೋಗದ ಬಗ್ಗೆ?
ಉ-ಓದಲು ಕಷ್ಟ ಅನ್ನುವವರಲ್ಲಿ ಆಸಕ್ತಿ ಹುಟ್ಟಿಸಿತು, ಜನಪ್ರಿಯತೆಗೆ ಕಾರಣವಾಯಿತು ಎನ್ನಲೇ?
ಪ್ರ-ಕಾವ್ಯಮಯ ಭಾಷೆಯಲ್ಲಿ ಕಥೆ ಬರೆಯುವ ನೀವು ಕಾವ್ಯಮಾಧ್ಯಮವನ್ನು ಯಾಕೆ ಆಯ್ಕೆ ಮಾಡಿಕೊಳ್ಳಲಿಲ್ಲ?
ಉ-ಕಲಾಮಾಧ್ಯಮ ಬಿಟ್ಟು ಕಾವ್ಯಮಾಧ್ಯಮ ‘ಕೈಹಿಡಿಯಲು’, ನಾನಂತೂ ರೆಡಿ. ಆದರೆ ‘ಅದು’ ಒಪ್ಪಬೇಕಲ್ಲ.
ಪ್ರ-ನಿಮಗಿಂತ ಹಿರಿಯರಿಗೆ ಸಿಗದೆ, ನಿಮಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಾಗ ನಿಮಗೇನನ್ನಿಸಿತು?
ಉ-ನಿರೀಕ್ಷಿಸಿರಲಿಲ್ಲ; ಆಶ್ಚರ್ಯ, ಸಂಕೋಚ ಆಯ್ತು,
ಪ್ರ-ನೀವು ಸೃಷ್ಟಿಸಿದ ಪಾತ್ರಗಳಲ್ಲಿ ನಿಮಗೆ ಇಷ್ಟವಾದದ್ದು ಯಾವುದು?
ಉ-ನನಗೆ ಅಲ್ಲಿ, ಇಲ್ಲಿ ಇಷ್ಟವಾಗುತ್ತವೆ. ಪುಟಗೌರಿ (ಒಡಲಾಳ) ಚನ್ನನ ಅಪ್ಪ, ಪಕಾಳಯ್ಯ (ಕುಸುಮಬಾಲೆ) ಇಂಥವು ಹತ್ತಾರು ಸಾಲುಗಳಲ್ಲಿ ಒಂದು ಪಾತ್ರವಾಗಿ ಬಿಡುತ್ತವೆ. ಇಂತ ಸಣ್ಣ ಪುಟ್ಟ ಪಾತ್ರಗಳೇ ನನಗೆ ಇಷ್ಟ.
ಪ್ರ-ನಿಮ್ಮ ಮೂರೂ ಕೃತಿಗಳ ಒಡಲಾಳದಲ್ಲಿ, ಒಂದು ನೋವಿನ ಒಳದನಿ ಹರಡಿಕೊಂಡಿದೆ. ಇದು ಆಕ್ರೋಶವಾಗದೇ ಜೀವನಪ್ರೀತಿಯಾಗಿ ಬಂದಿದೆಯಲ್ಲ, ಇದನ್ನು ಹೇಗೆ ಸಾಧಿಸಿದಿರಿ?
ಉ- ನಾನು ಯಾವುದನ್ನು ನನ್ನ ಮಾದ್ಯಮ ಅಂದುಕೊಂಡಿದ್ದೇನೋ, ಆ ಮಾಧ್ಯಮ ಅರಗಿಸಿಕೊಳ್ಳುವಷ್ಟನ್ನು ಮಾತ್ರ ಅಂದರೆ- ಆ ಕ್ಷಣದಲ್ಲಿ ಎಷ್ಟು ಮಾತ್ರ ಕಲೆ ಅಗಬಹುದೋ ಅದಷ್ಟನ್ನೇ ಕೊಟ್ಟರೆ ಮಾತ್ರ ಬಚಾವು ಎಂಬ ಅರಿವು ನನಗಿರುವುದೇ ಕಾರಣ ಇರಬಹುದು.
ಪ್ರ-ಮಹಾದೇವ್ ಅವರೇ, ನೀವು ಸರ್ಕಾರಿ ಕೆಲಸಕ್ಕೆ ರಾಜಿನಾಮೆ ಕೊಟ್ಟದ್ದು ಯಾಕೆ?
ಉ-ಕುರ್ಚಿ ಮೇಲೆ ಕೂರಲು ಕಷ್ಟವಾಯಿತು.
ಪ್ರ-ನೀವು ಹೆಚ್ಚು ಬರೆಯದೇ ಇರಲು, ನಿಮ್ಮ ಸ್ವಭಾವದೊಳಗಿನ ಸಂಕೋಚ ಕಾರಣವೋ, ಸೋಮಾರಿತನ ಕಾರಣವೋ?
ಉ-ನಿಮ್ಮ ಕಾರಣವನ್ನು ನಿರಾಕರಿಸುವುದು ಕಪ್ಪ, ಆದರೂ ಅದೇ ಕಾರಣ ಅಲ್ಲ.
ಪ್ರ-ನಿಮಗೆ ರಾಜಕೀಯ ಅವಕಾಶಗಳಿದ್ದರೂ, ನಿರಾಕರಿಸಲು ನಿಮ್ಮ ಸಂಕೋಚವೇ ಕಾರಣವೇ?
ಉ-ಹಾಗೇನಿಲ್ಲ, ಜಿದ್ದಾಜಿದ್ದಿಯಿಂದ ನಿಭಾಯಿಸುವ ಛಾತಿ ನನಗಿಲ್ಲ. ಇಂಥ ಕಡೆ ನನ್ನ ಮನಸ್ಸು ಹೆಚ್ಚು ಬಳಲುತ್ತದೆ.
ಪ್ರ-ಹಾಗಾದರೆ ನಿಮ್ಮನ್ನು ‘ಗಾಂಧೀವಾದಿ’ ಅಂತ ಗುರುತಿಸೋದು ಸರಿಯಾಗೇ ಇದೆ.
ಉ-ಬ್ರಹ್ಮಚರ್ಯವ್ರತ, ಬಡತನವ್ರತ, ಹುಡುಗಾಟ ಅಂದುಕೊಂಡಿದ್ದೀರಾ ಮೇಡಂ?
ಪ್ರ-ದಲಿತ/ಬಂಡಾಯ ಸಾಹಿತ್ಯದ ಬಗ್ಗೆ ನಿಮ್ಮ ಅನಿಸಿಕೆ ಏನು?
ಉ-ದಲಿತ ಬಂಡಾಯದ ಗೆಳೆಯರು ತಾವು ಏನು ಮಾಡಬೇಕೆಂಬುದನ್ನು ಸರಿಯಾಗಿ ಅರಿತುಕೊಳ್ಳದೆಯೇ ದಾರಿ ತಪ್ಪಿದರು ಅನಿಸುತ್ತದೆ. ಉದಾಹರಣೆಗೆ ಈಗ ‘ಬಲವಿದ್ದವನು ಬದುಕುವನು’ ಎಂಬ ಖಾಸಗೀಕರಣದ ಹುಲಿ ಬೆನ್ನ ಮೇಲೆ, ಕಾಲ ಓಡುತ್ತಿದೆ. ನಾಗರಿಕತೆ, ಪ್ರಗತಿ ಹೆಸರಿನಲ್ಲಿ ಮನುಷ್ಯ ಇಂದು ಪ್ರಾಣಿಯಾಗ್ತಿದ್ದಾನೆ. ಇಂಥಲ್ಲಿ ದಲಿತ ಬಂಡಾಯದ ಲೇಖಕರ ಕಾರ್ಯವೇನು? ಬೀದಿಗಿಳಿದು ಪ್ರತಿಭಟಿಸುವುದು, ಎಂದರೆ, ಅವರ ಕೆಲಸವನ್ನು ಅವರು ಮಾಡಿದಂತಾಗುವುದಿಲ್ಲ, ಬದಲಾಗಿ ನಮ್ಮ ಜಾನಪದದಲ್ಲಿ ಇರುವಂತೆ ಕಿರಿಯವನು, ಕೈಲಾಗದವನು, ನತದೃಷ್ಟರು ಉಳಿಯುವ ಆಶಯದ ಸುಳಿವುಗಳನ್ನು ಎಷ್ಟಾಗುತ್ತೋ ಅಷ್ಟನ್ನು ಕಲೆ ಮಾಡಿ ಬಿತ್ತುವಂಥದ್ದೇ.
ಪ್ರ- ದಲಿತ ಸಂಘರ್ಷ ಸಮಿತಿಯ ಮುಂದಿನ ದಾರಿ ಯಾವುದಿರಬೇಕೆಂದು. ನಿಮ್ಮ ಅಭಿಪ್ರಾಯ?
ಉ-ಗಾಂಧಿಯನ್ನು ದ್ವೇಷಿಸದೆ, ತಮ್ಮ ಕೊನೆಗಾಲದಲ್ಲಿ ಅಂಬೇಡ್ಕರ್, ಲೋಹಿಯಾರವರು ಜೊತೆಗೂಡಿ ಕಟ್ಟಬೇಕೆಂದು ಆಶಿಸಿದ್ದ ಕನಸನ್ನು ನಿಜವಾಗಿಸುವತ್ತ ವಚನಕಾರರ ಆಂದೋಲನದ ಮುಂದುವರಿಕೆಯಂತೆ ನಡೆಯುವುದು. ಇಡೀ ಜನತೆಯ ಬಿಡುಗಡೆ ನಮ್ಮ ಮೇಲೆ ಇದೆ ಎಂಬುದನ್ನು ಕಷ್ಟವಾದರೂ ಸಾಧಿಸಲು ಪ್ರಯತ್ನಿಸುವುದು.
ಪ್ರ-ನೀವು ತಾತ್ವಿಕ ಚಿಂತನೆಯಲ್ಲಿ ತೊಡಗಿದ್ದೀರಿ, ಆದರೆ ದ.ಸಂ.ಸ ಈಗ ಬಿ.ಎಸ್.ಪಿಗೆ ಬೆಂಬಲ ಕೊಡುತ್ತಿದೆ. ಈ ಬಗ್ಗೆ ನಿಮ್ಮದು ಭಿನ್ನಾಭಿಪ್ರಾಯವೇ?
ಉ- ಹಾಗಲ್ಲ. ಆ ರೀತಿ ನಾವು ಬಯಸುವ ಪಕ್ಷ ಕಟ್ಟಿ ಚುನಾವಣೆ ಎದುರಿಸುವ ಪರಿಸ್ಥಿತಿ ಈಗ ಇಲ್ಲ. ಜನತಾದಳಕ್ಕೆ ಬೆಂಬಲಿಸುವ ಬದಲು ಬಿಎಸ್ಪಿ ಕಟ್ಟುವುದು ಹೆಚ್ಚು ಅನುಕೂಲಕರ ಎಂದೇ ನನಗೂ ಅನಿಸುತ್ತಿದೆ. ಈ ನಡುವೆಯೂ ಹಾಲಿ ರಾಜಕಾರಣದ ಹೆಂಡ, ಹಣ, ಪ್ರಚಾರ ಪರಿಕರ ತ್ಯಜಿಸಿ, ಆಂದೋಲನ ಮತ್ತು ರಾಜಕಾರಣ ಕೂಡಿಸಿ, ಏನಾದರೂ ಸಣ್ಣ ಪ್ರಯತ್ನ ನಡೆಸಿದರೂ ಅದನ್ನೇ ದೊಡ್ಡದು ಅಂದುಕೊಳ್ಳುತ್ತೇನೆ. ಇಂಥದಕ್ಕೂ ಅವಕಾಶವಿರಬೇಕೆಂದು ನಾನು ದ.ಸಂ.ಸ ಗೆಳೆಯರಲ್ಲಿ ವಿನಂತಿಸುವೆ.
ಪ್ರ-ಈ ವಿಚಾರದ ಪತ್ರಿಕಾ ವರದಿಗಳು ನಿಮ್ಮನ್ನು ಬಹಳ ಕಾಡಿದಂತಿದೆ.
ಉ-ಅದು ನಮ್ಮ ‘ಲಂಕೇಶ್ ಪತ್ರಿಕೆ’ಯ ವರದಿಯೇ. ಆ ವರದಿ ನನಗೆ ಸಂಕಟ ಉಂಟುಮಾಡಿತು. ಬಿ.ಕೃಷ್ಣಪ್ಪನವರನ್ನು ಕ್ರಿಮಿ.. ಇತ್ಯಾದಿ ಬರೆದಿದ್ದಾರೆ. ಅವರು ಕ್ರಿಮಿಯಾಗುವುದಾದರೆ, ನಾನೂ, ನೀವೂ, ನಿಮ್ಮ ಪತಿರಾಯ ಕೆ.ರಾಮದಾಸ್ ಅವರೂ, ಲಂಕೇಶ್ ಅವರೂ ಕ್ರಿಮಿಯೇ. ಕೃಷ್ಣಪ್ಪನವರ ಬಗ್ಗೆ ಬರೆದಿರುವುದೆಲ್ಲಾ ನಮಗೆಲ್ಲಾ ಅಂಟಿಕೊಳ್ಳುತ್ತದೆ. ನಮ್ಮ ದೃಷ್ಟಿಯಲ್ಲಿ ಒಳ್ಳೆಯದನ್ನು, ಒಳ್ಳೆಯವರನ್ನು ಹುಡುಕಿ, ಹುಡುಕಿ, ಉಳಿಸಬೇಕಾದ್ದು, ಅದರಿಂದ ನಾವು ಉಳಿಯಬೇಕಾದ್ದು, ಪತ್ರಿಕೋದ್ಯಮ ಮಾಡಬಹುದಾದ ವಿವೇಕದ ಕೆಲಸ. ಆದರೆ ವರದಿಗಾರರು ಈ ಅರಿವಿಲ್ಲದೆ, ತಮ್ಮ ವರದಿಯಿಂದ, ತಮ್ಮ ಅಭಿರುಚಿ ಆಯ್ಕೆಯೇ ಬಯಲಾಗುವಂಥದು ಎಂಬ ತಿಳಿವಳಿಕೆಯು ಇಲ್ಲದೆ ಕುರುಡುಗೂಳಿಯಂತೆ ಬರೆದಿದ್ದಾರೆ. ಈ ನನ್ನ ಎಳೆಯ ಗೆಳೆಯರಾದ ವರದಿಗಾರರೆಲ್ಲ ‘ಲಂಕೇಶ್ ಪತ್ರಿಕೆ ವರದಿಗಾರ’ ಎಂಬುದನ್ನು ಮತ್ತು ಬರಿಸುವ ಮದ್ಯ ಎಂದು ಭಾವಿಸಿಕೊಂಡಂತಿದೆ. ಇದರಿಂದ ಅವರಿಗೂ ಒಳ್ಳೆಯದಾಗುವುದಿಲ್ಲ, ಪತ್ರಿಕೆಗೂ ಒಳ್ಳೆಯದಾಗುವುದಿಲ್ಲ. ತಿಳಿದು ಬರೆಯಬೇಕೆಂಬ ಆಶೆ, ನಮ್ರತೆ ಕಳೆದುಕೊಂಡರೆ ಏನುಳಿಯುತ್ತದೆ?