ಅಕ್ಷರಗಳು ಅನಾವರಣಗೊಳಿಸುವ ಸತ್ಯ-ಸುಧಾ ಆಡುಕಳ. 

[ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕುರಿತು  23 ಮೇ 2022 ರಂದು ಕೆಂಡಸಂಪಿಗೆ ವೆಬ್ ಪೋರ್ಟಲ್ ಗೆ ಸುಧಾ ಆಡುಕಳ ಅವರು ಬರೆದ ಬರಹ ನಮ್ಮ ಮರು ಓದಿಗಾಗಿ…. https://www.kendasampige.com/%e0%b2%85%e0%b2%95%e0%b3%8d%e0%b2%b7%e0%b2%b0%e0%b2%97%e0%b2%b3%e0%b3%81-%e0%b2%85%e0%b2%a8%e0%b2%be%e0%b2%b5%e0%b2%b0%e0%b2%a3%e0%b2%97%e0%b3%8a%e0%b2%b3%e0%b2%bf%e0%b2%b8%e0%b3%81%e0%b2%b5-%e0%b2%b8/]
ಅಕ್ಷರಗಳು ಅನಾವರಣಗೊಳಿಸುವ ಸತ್ಯ

ಸಮಾಜದ ಶ್ರೇಣಿಯಲ್ಲಿ ಮೇಲಿನ ಸ್ಥರದಲ್ಲಿ ನಿಂತ ನಮಗೆ ಕೆಳಗೆ ಕಣ್ಣುಹಾಯಿಸಿದಾಗ ಕಂಡುದಷ್ಟೇ ಸತ್ಯ ಎಂಬ ನಮ್ಮ ಭ್ರಮೆಯನ್ನು ಇಲ್ಲಿನ ಪ್ರತಿಯೊಂದು ಸಾಲುಗಳೂ ‘ಚಿತ್’ ಮಾಡುತ್ತಲೇ ಹೋಗುತ್ತವೆ. ನಮ್ಮ ಭ್ರಮಾಲೋಕ ಕಳಚಿದೊಡನೆ ‘ವಾಸ್ತವದ ಕಹಿಸತ್ಯ’ವನ್ನು ಒಂದಿನಿತೂ ಉತ್ಪ್ರೇಕ್ಷೆಯಿಲ್ಲದೆ ನಮ್ಮೆದುರು ತೆರೆದಿಡುತ್ತದೆ. ‘ಇದು ಸತ್ಯ, ಇದು ವಾಸ್ತವ. ನೀನು ಗ್ರಹಿಸಬೇಕಾದುದು ಹೀಗೆ. ಈ ಗ್ರಹಿಕೆಯೊಂದೇ ಸಮಾನತೆಯೆಡೆಗೆ ನಿನ್ನನ್ನೂ, ನನ್ನನ್ನೂ ಕರೆದೊಯ್ಯಬಲ್ಲುದು. ಸಾಧ್ಯವೇನು ನಿನಗೆ?’ ಎಂಬಂತೆ ತಣ್ಣಗೆ ಪ್ರಶ್ನಿಸುತ್ತವೆ.
ದೇವನೂರ ಮಹಾದೇವ ಬರೆದ “ಎದೆಗೆ ಬಿದ್ದ ಅಕ್ಷರ” ಕೃತಿಯ ಕುರಿತು ಸುಧಾ ಆಡುಕಳ ಬರಹ

 

 

ಅಕ್ಷರಗಳ ಕಲಿಕೆ ನಮ್ಮಲ್ಲಿ ಅರಿವಿನ ವಿಸ್ತಾರವನ್ನು ಮಾಡುತ್ತದೆ, ತಿಳಿದುಕೊಳ್ಳುವ ಮಾರ್ಗಗಳನ್ನು ತೆರೆದಿಡುತ್ತದೆ. ಇತರರ ಅನುಭವಗಳನ್ನು ಅರ್ಥಮಾಡಿಕೊಳ್ಳುವ ವಿಧಾನಗಳನ್ನು ತಿಳಿಸುತ್ತದೆ. ಆದರೆ ಅಕ್ಷರಗಳು ಎದೆಗಿಳಿದಾಗ ಏನಾಗುತ್ತದೆ? ಅದು ಅನುಭವಗಳನ್ನು ದರ್ಶನವಾಗಿಸುತ್ತದೆ. ದೇವನೂರು ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ’ ಪುಸ್ತಕವನ್ನು ಓದುತ್ತಲೇ ನಾನು ಕಂಡುಕೊಂಡದ್ದು ಇಲ್ಲಿರುವ ಅಕ್ಷರಗಳು ಕೇವಲ ಅನುಭವಗಳಲ್ಲ, ಅವು ಸಮಾನತೆಯನ್ನು ನಮ್ಮೆದುರು ತೆರೆದಿಡುವ ದರ್ಶನಗಳು ಎಂಬ ಸತ್ಯವನ್ನು.

(ದೇವನೂರ ಮಹಾದೇವ)

ಸಮಾಜದ ಶ್ರೇಣಿಯಲ್ಲಿ ಮೇಲಿನ ಸ್ಥರದಲ್ಲಿ ನಿಂತ ನಮಗೆ ಕೆಳಗೆ ಕಣ್ಣುಹಾಯಿಸಿದಾಗ ಕಂಡುದಷ್ಟೇ ಸತ್ಯ ಎಂಬ ನಮ್ಮ ಭ್ರಮೆಯನ್ನು ಇಲ್ಲಿನ ಪ್ರತಿಯೊಂದು ಸಾಲುಗಳೂ ‘ಚಿತ್’ ಮಾಡುತ್ತಲೇ ಹೋಗುತ್ತವೆ. ನಮ್ಮ ಭ್ರಮಾಲೋಕ ಕಳಚಿದೊಡನೆ ‘ವಾಸ್ತವದ ಕಹಿಸತ್ಯ’ವನ್ನು ಒಂದಿನಿತೂ ಉತ್ಪ್ರೇಕ್ಷೆಯಿಲ್ಲದೆ ನಮ್ಮೆದುರು ತೆರೆದಿಡುತ್ತದೆ. ‘ಇದು ಸತ್ಯ, ಇದು ವಾಸ್ತವ. ನೀನು ಗ್ರಹಿಸಬೇಕಾದುದು ಹೀಗೆ. ಈ ಗ್ರಹಿಕೆಯೊಂದೇ ಸಮಾನತೆಯೆಡೆಗೆ ನಿನ್ನನ್ನೂ, ನನ್ನನ್ನೂ ಕರೆದೊಯ್ಯಬಲ್ಲುದು. ಸಾಧ್ಯವೇನು ನಿನಗೆ?’ ಎಂಬಂತೆ ತಣ್ಣಗೆ ಪ್ರಶ್ನಿಸುತ್ತವೆ. ಹಾಗೆ ಹೇಳುವ ಸಿದ್ಧಿ ಲೇಖಕರಿಗೆ ಅನುಭವಗಳನ್ನು ಅನುಭಾವವಾಗಿಸಿದ ಶರಣರ ನಡೆಯಿಂದ ಬಂದದ್ದು, ವಿಷವನ್ನು ನುಂಗಿ ನಗುವ ಶಿವನಿಂದ ಎರವಲು ಪಡೆದದ್ದು ಮತ್ತು ಜೀವಕಾರುಣ್ಯದ ಮೂರ್ತಿ ಬುದ್ಧನ ಪ್ರಜ್ಞೆಯಿಂದ ಮರಳಿದ್ದು. ಇಲ್ಲವಾದಲ್ಲಿ ಈ ಪುಸ್ತಕದ ಪ್ರಕಾಶಕರು ತಮ್ಮ ನುಡಿಯಲ್ಲಿ ಹೇಳಿದಂತೆ, ‘ಎಂದೋ ಬರೆದ ಇಲ್ಲಿಯ ಬರಹ, ಭಾಷಣಗಳನ್ನು ತಿದ್ದುವಾಗಲೂ ಲೇಖಕರು ಯಾಕೆ ಅಷ್ಟೊಂದು ಬಳಲಬೇಕು? ಹಿಂಸೆ ಪಟ್ಟುಕೊಳ್ಳಬೇಕು? ಹಿಂಸೆಯ ಕುರಿತು ಬರೆಯುವಾಗಲೆಲ್ಲ ಅವರು ಅದನ್ನು ಮತ್ತೆ, ಮತ್ತೆ ಅನುಭವಿಸುವ ಕಾರಣವಲ್ಲದೇ ಬೇರೇನನ್ನು ಹೇಳಲಾದೀತು?’ ದೇವನೂರರ ಪುಸ್ತಕದ ಅಕ್ಷರಗಳನ್ನು ಧಾವಂತವಿಲ್ಲದೇ ಓದುತ್ತಲೇ ಅದು ತೆರೆದಿಡುವ ಕೆಲವು ದರ್ಶನಗಳನ್ನಷ್ಟೇ ನಾನು ನಿಮ್ಮೆದುರು ತೆರೆದಿಡಲು ಸಾಧ್ಯ. ನನ್ನ ಕಣ್ಣು ತೆರೆಸಿದ ಬೆಳಕು ನಿಮ್ಮೊಳಗೂ ಇಳಿದೀತೆಂಬ ಆಶಯದಿಂದ.

ಎದೆಗೆ ಅಕ್ಷರ ಬಿದ್ದರೆ ಏನಾಗುತ್ತದೆ? ಅಕ್ಷರ ನೀಡುವ ಅರಿವಿನಿಂದ ಸುತ್ತಲಿನ ವಿದ್ಯಮಾನಗಳೊಳಗಿನ ಸತ್ಯ ಅನಾವರಣಗೊಳ್ಳುತ್ತ ಹೋಗುತ್ತದೆ. ವ್ಯಕ್ತಿ ಸಂವೇದನಾಶೀಲನಾಗುತ್ತ ಸಾಗುತ್ತಾನೆ. ಸಾಮಾನ್ಯರಿಗೇನೋ ಇದು ಸಹಕಾರಿಯೆ. ಆದರೆ ಒಬ್ಬ ಆದಿಜನಾಂಗದವನು ಸಂವೇದನಾಶೀಲನಾದರೆ? ದೇವನೂರು ಹೇಳುತ್ತಾರೆ, ‘ಅದೊಂದು ರೌರವ ನರಕ. ಹಿಂಸೆಯೆಂದರೆ ದೈಹಿಕವಾದುದು ಮಾತ್ರ ಎಂಬ ಪರಿಧಿಯನ್ನು ಅದು ದಾಟಿಸಿಬಿಡುತ್ತದೆ. ಅವನಿಗೆ ಕಾಣುತ್ತೆ- ತನ್ನ ಸಂಬಂಧಿಗಳು ಹಸಿವಿನಿಂದ ಸಾಯ್ತ ಇರೋದು, ಬೀದೀಲಿ ಭಿಕ್ಷೆ ಬೇಡೋದು, ಜೀವಂತ ಸುಡಿಸಿಕೊಳ್ಳೋದು, ಪಶು ಥರ ದುಡಿಯೋದು, ಅವ ದುಡಿಯೋದು ಅವಗೆ ದಕ್ಕದೇ ಇರೋದು, ಇದರ ಜೊತೆಗೇನೆ ಹುಟ್ಟಿದ ತಪ್ಪಿಗೆ ಥೂ ಛೀ ಅನಿಸಿಕೊಳ್ಳೋದು ಕೂಡ. ಅಸ್ಪೃಷ್ಯತೆಯ ತಾರತಮ್ಯಕ್ಕೆ ಒಳಗಾದವರು ಆ ನೋವನ್ನು ‘ಬದುಕುವ ರೀತಿ’ ಎಂದುಕೊಂಡರೆ ಅದು ಸ್ಥೂಲವಾಗಿ ದೈಹಿಕವಾಗಿರುತ್ತದೆ. ಅದೇ ಆ ನೋವು ತಾರತಮ್ಯಗಳು ‘ಗಾಯ’ ಎಂದು ಅರಿವಿಗೆ ಬಂದರೆ ಅವು ಸೂಕ್ಷ್ಮವಾಗಿ ಮನೋಮಯವಾಗಿ ಕ್ಷಣಕ್ಷಣವೂ ಹಿಂಸಿಸುತ್ತದೆ.’ ಎದೆಯ ನೋವಿಗೆ ಬಿಡುಗಡೆಯಾಗಿ ಒದಗಬೇಕಾದ ಅಕ್ಷರಗಳ ಅರಿವು ಶೋಷಿತ ಜನಾಂಗದ ಸಂವೇದನಾಶೀಲನೊಬ್ಬನಿಗೆ ಅನುದಿನದ ನೋವಾಗಿ ಕಾಡುವ ಪರಿಯಿದು.

ಪ್ರಸಿದ್ಧ ಮನಶಾಸ್ರ್ತಜ್ಞರೊಬ್ಬರ ಮಾತನ್ನು ಉಲ್ಲೇಖಿಸುತ್ತಾ ದೇವನೂರು ಹೇಳುತ್ತಾರೆ, ‘ನಾವು ಪ್ರತ್ಯಕ್ಷವಾಗಿ ನೋಡದಿದ್ದಾಗ್ಯೂ ಕೂಡ ನಮ್ಮ ಸುತ್ತಲಿನ ಜೀವಿಗೆ ಉಂಟಾಗುವ ದುಃಖ, ಸುಖದ ಭಾವಗಳೆಲ್ಲ ಪರಿಸರದಲ್ಲಿ ಉಸಿರಾಡುತ್ತ ಸುತ್ತಲಿರುವ ಸಹಜೀವಿಗಳಲ್ಲಿ ಕಂಪನವನ್ನು ಉಂಟುಮಾಡುತ್ತದೆ. ಈ ಅನುಕಂಪನದ ನಿಜವು ಇಡಿಯ ಜೀವಸಂಕುಲವನ್ನೇ ಒಂದು ಎಂದು ಸಾರುತ್ತದೆ.’ ಹಾಗಾದರೆ ಶತಮಾನಗಳಿಂದ ನಮ್ಮ ಸಹಜೀವಿಗಳು ಉಸಿರಾಡುವ ಅಸಮಾನತೆಯ ನೋವು ನಮ್ಮನ್ನು ತಟ್ಟಲಿಲ್ಲವೇಕೆ? ಅಥವಾ ನಾವೆಲ್ಲರೂ ಅಷ್ಟು ಸಂವೇದನಾರಹಿತರಾದೆವೆ? ಹೀಗೆ ನಮ್ಮನ್ನು ಕಾಡದಿರಲೆಂದೇ ಅವರನ್ನು ಊರಾಚೆಗೆ ತಳ್ಳಿ ನಿರಾಳರಾದೆವೆ? ಇದನ್ನೇ ದೇವನೂರು ಕಾರುಣ್ಯವು ಮೂರ್ಛಾವಸ್ಥೆಯಲ್ಲಿದೆ ಎನ್ನುತ್ತಾರೆ.

‘ಪ್ರಸಿದ್ಧ ಕಾದಂಬರಿಕಾರ ದಾಸ್ತೋವೆಸ್ಕಿಯ ಕಾದಂಬರಿಯ ನಾಯಕ ಅತಿದುಷ್ಟೆಯಾದ ಮುದಿಹೆಂಗಸೊಬ್ಬಳನ್ನು ಉದ್ಧೇಶಪೂರ್ವಕವಾಗಿ ಕೊಲೆಗೈಯ್ಯುತ್ತಾನೆ. ಅದನ್ನು ನೋಡಿದಳೆಂಬ ಕಾರಣಕ್ಕೆ ಕರುಣಾಮಯಿಯಾದ ಅವಳ ತಂಗಿಯನ್ನೂ ಕೊಲೆಗೈಯ್ಯುತ್ತಾನೆ. ಆದರೆ ಅವನಿಗೆ ಆ ಮುದುಕಿಯನ್ನು ಕೊಂದ ಪಾಪಪ್ರಜ್ಞೆಯೇ ಎಡೆಬಿಡದೇ ಕಾಡುತ್ತದೆ. ಏಕೆಂದರೆ ಮೊದಲ ಕೊಲೆ ಉದ್ದೇಶಪೂರ್ವಕವಾಗಿ ಆಯೋಜಿಸಲ್ಪಟ್ಟದ್ದು. ಮನಸ್ಸಿನೊಳಗಿನ ಹಿಂಸೆ ಅದನ್ನು ಪ್ರಚೋದಿಸಿದ್ದು. ಎರಡನೆಯ ಕೊಲೆ ಅಚಾನಕ್ಕಾಗಿ ನಡೆದುಹೋದದ್ದು. ಹಿಂಸೆಯನ್ನು ತಾತ್ವಿಕಗೊಳಿಸಿದ ಈ ಒಂದು ಕೊಲೆ ಉದ್ದೇಶರಹಿತವಾದ ನೂರಾರು ಕೊಲೆಗಳಿಗೆ ಸಮ.’ ಇದನ್ನು ಓದುತ್ತಿರುವಾಗ ನನಗನಿಸಿದ್ದು ನಮ್ಮ ನಮ್ಮೊಳಗೆ ಎಷ್ಟೊಂದು ಅಸಮಾನತೆಗಳಿವೆಯಲ್ಲವೆ? ಎಂದು ಬೊಟ್ಟು ತೋರಿಸುವ ಮೊದಲು ನಮಗೆ ಅರಿವಿರಬೇಕಾದುದು ಅಸ್ಪೃಶ್ಯತೆಯೆಂಬುದು ಅನೇಕ ಶತಮಾನಗಳಿಂದ ನಾವು ತಾತ್ವಿಕಗೊಳಿಸಿದ ಅಸಮಾನತೆ. ಉಳಿದವುಗಳೆಲ್ಲ ಆಯಾ ಕಾಲದ ಯೋಜಿತವಲ್ಲದ ತರತಮಗಳು ಮಾತ್ರ. ಇದು ನಮಗೆ ಅರ್ಥವಾದ ದಿನ ಮಾತ್ರವೇ ಉದ್ಧೇಶಿತ ಕೊಲೆಯಂತೆ ಅದು ನಮ್ಮನ್ನು ಕಾಡಬಲ್ಲುದು.

ಎಷ್ಟು ಯೋಚಿಸಿದರೂ ನಾವು ಬದುಕಿಲ್ಲದ ಸಂಕಟವನ್ನು ನಮ್ಮದಾಗಿಸಿಕೊಳ್ಳಲಾರವೇನೊ? ಮನಸ್ಸಿನಿಂದ ಜಾತೀಯತೆಯ ವಿಷಬೀಜವನ್ನು ಕಿತ್ತೆಸೆದ ಆಲನಹಳ್ಳಿಯಂತಹ ಅಪ್ಪಟ ಸ್ನೇಹಿತರಿಗೂ ಅರ್ಥವಾಗಬೇಕಾದ ಸತ್ಯಗಳು ಇನ್ನೂ ಇವೆಯೇ? ‘ಹೌದು’ ಎನ್ನುತ್ತಾರೆ ದೇವನೂರು. ತಮ್ಮ ತೋಟದಲ್ಲಿ ಕೆಲಸ ಮಾಡುವ ಹಳ್ಳಿಯ ಜನರನ್ನು ಅವರಿಗೆ ಬೇಸರವಾಗಬಾರದೆಂಬ ಕಾರಣಕ್ಕಾಗಿ ಸಲಿಗೆಯಿಂದ “ಲೋ ಬಾರ್ಲಾ”, “ಲೇ ಬಾರಮ್ಮಿ” ಅಂತಾ ಕರೆದು ಖುಶಿಗೊಳಿಸುತ್ತಿದ್ದರು ಆಲನಹಳ್ಳಿ. ಅಂಥವರಿಗೆ ದೇವರಾಜು ಅರಸು ಅವರ ಮಡದಿ, “ನೀನೇನು ಎತ್ತೇಗೌಡ್ನ ಮೊಮ್ಮಗನೇನ್ಲಾ?” ಅಂತ ಪರಿಚಯ ಕೇಳಿದ ಕೂಡಲೇ ಅವಳು ‘ಅನ್‍ಕಲ್ಚರ್ಡ್ ಲೇಡಿ’ ಅನಿಸಿಬಿಡುತ್ತದೆ. ಬದಲಾಗಿ ತನಗೆ ಬೇಸರವಾಗದಿರಲೆಂದು ಅವರು ಹಾಗೆ ಪರಿಚಯ ಕೇಳಿರಬಹುದು ಅನಿಸುವುದಿಲ್ಲ. ಬಹುಶಃ ಗುರುದೇವ ರವೀಂದ್ರನಾಥ ಟ್ಯಾಗೋರರು ಹೇಳುವ ‘ಒಂದು ಇನ್ನೊಂದಾಗುವ’ ರೂಪಾಂತರವಾಗದ ಹೊರತು ಈ ತಳಮಳಗಳನ್ನು ಅರ್ಥೈಸಲಾಗದು ಅನಿಸುತ್ತದೆ. ಇಲ್ಲವಾದಲ್ಲಿ ಎಂಥಹ ವಿಚಾರವಾದಿಯಾದರೂ ಅವರ ಯೋಚನಾಧಾರೆ ಪರಿವರ್ತನೆಯ ಪರಿಧಿಯ ಈಚೆಗೆ ನಿಂತುಬಿಡುತ್ತದೆ. ಇದಕ್ಕೊಂದು ಉತ್ತಮ ನಿದರ್ಶನವನ್ನು ದೇವನೂರು ಇಲ್ಲಿ ಚಿತ್ರಿಸಿದ್ದಾರೆ.

ಹಾಗಾದರೆ ಶತಮಾನಗಳಿಂದ ನಮ್ಮ ಸಹಜೀವಿಗಳು ಉಸಿರಾಡುವ ಅಸಮಾನತೆಯ ನೋವು ನಮ್ಮನ್ನು ತಟ್ಟಲಿಲ್ಲವೇಕೆ? ಅಥವಾ ನಾವೆಲ್ಲರೂ ಅಷ್ಟು ಸಂವೇದನಾರಹಿತರಾದೆವೆ? ಹೀಗೆ ನಮ್ಮನ್ನು ಕಾಡದಿರಲೆಂದೇ ಅವರನ್ನು ಊರಾಚೆಗೆ ತಳ್ಳಿ ನಿರಾಳರಾದೆವೆ? ಇದನ್ನೇ ದೇವನೂರು ಕಾರುಣ್ಯವು ಮೂರ್ಛಾವಸ್ಥೆಯಲ್ಲಿದೆ ಎನ್ನುತ್ತಾರೆ.

ಅನಾರೋಗ್ಯದಿಂದ ಆಸ್ಪತ್ರೆ ಸೇರಿ, ಅರೆಪ್ರಜ್ಞಾವಸ್ಥೆಯಲ್ಲಿರುವ ಅನಂತಮೂರ್ತಿಯವರಿಗೆ ತಾನು ದೇವನೂರು ಅವರಿಗೆ ಗಾಯತ್ರಿ ಮಂತ್ರ ಹೇಳಿಕೊಟ್ಟಂತೆ ಬೋಧೆಯಾಯಿತಂತೆ. ಅದಕ್ಕೆ ದೇವನೂರರ ಪ್ರತಿಕ್ರಿಯೆ, “ಸಾರ್ ಇದು ಮಾಮೂಲಿ ನಡಿಗೆ. ಅರೆಪ್ರಜ್ಞಾವಸ್ಥೆಯಲ್ಲಿಯಾದರೂ ನಾನು ನಿಮಗೆ ಗಾಯತ್ರಿಮಂತ್ರ ಹೇಳಿಕೊಟ್ಟಂತೆ ಬೋಧೆಯಾಗಿದ್ದರೆ ಭಾರತದ ಮನಸ್ಸಿಗೆ ಚಲನೆ ಬರುತ್ತಿತ್ತಲ್ಲವೆ?” ಹಾಗಾದರೆ ಅರೆಪ್ರಜ್ಞಾವಸ್ಥೆಯಲ್ಲಿಯೂ ನಮ್ಮನ್ನು ದಾಟದಂತೆ ಬಂಧಿಸಿಟ್ಟ ಚೌಕಟ್ಟಾದರೂ ಯಾವುದು? ಮತ್ತು “ನಾನು ಮಡಿ ಬಿಟ್ಟೆ, ಮೈಲಿಗೆಯಾದೆ. ಹಾಗಾಗಿ ಲೇಖಕನಾದೆ” ಎಂದು ಹೇಳಿದ ಅನಂತಮೂರ್ತಿಯವರಿಗೂ ಚಾಲನೆ ನೀಡಲಾಗದಷ್ಟು ಜಡವಾಗಿದೆಯೆ ಅಸಮಾನತೆಯೆಂಬ ನಡಿಗೆ? ನಾವೆಲ್ಲರೂ ಎದೆಗಿಳಿಸಿಕೊಳ್ಳಬೇಕಾದ ಪ್ರಶ್ನೆಗಳಿವು.

ಸ್ಪರ್ಶ ಅಥವಾ ಮುಟ್ಟುವಿಕೆಯೆಂಬುದು ಏನು ಎಂಬುದನ್ನು ಅರ್ಥಮಾಡಿಸುವ ಅನೇಕ ದರ್ಶನಗಳನ್ನು ನಮ್ಮೆದುರು ಈ ಕೃತಿ ತೆರೆದಿಡುತ್ತದೆ. ಮಹಾನ್ ಚಿತ್ರ ಕಲಾವಿದ ವ್ಯಾನ್‌ಗೋ ಒಂದು ಕಡೆಯಲ್ಲಿ ಹೇಳುತ್ತಾನೆ, “ನೀನೊಬ್ಬ ಕಲಾವಿದನಲ್ಲ ಅನಿಸಿದಾಗ ನೀನು ಕಲಾಸೃಷ್ಟಿಯನ್ನು ಆರಂಭಿಸು. ಆಗ ನಿನ್ನೊಳಗೊಬ್ಬ ಕಲಾವಿದ ಹುಟ್ಟಿಕೊಳ್ಳುತ್ತಾನೆ.” ಇಲ್ಲವಾದಲ್ಲಿ ನಡೆದು ರೂಢಿಯಾದ ಜಾಡಿನಲ್ಲಿ ಕಣ್ಮುಚ್ಚಿ ನಡೆದುಬಿಡುವಂತೆ ಅದೇ ದಾರಿಯಲ್ಲಿ ನಡೆಯುತ್ತಲೇ ಇರುತ್ತೇವೆ. ಜಾಡಿನಿಂದ ತಪ್ಪಿಸಿಕೊಂಡು ಕಕ್ಕಾಬಿಕ್ಕಿಯಾದಾಗಲೇ ಹೊಸಹುಟ್ಟು ಸಾಧ್ಯವಾಗುವುದು. ಎಲ್ಲ ಕಲೆಗಳ ಹುಟ್ಟು ಕೂಡ ಹೀಗೆಯೇ ಸಾಗುತ್ತದೆ. ಇದು ಲೇಖಕನ ವಿಷಯದಲ್ಲಿಯೂ ಸತ್ಯ. ಲೇಖಕ ತನ್ನ ಆಳಕ್ಕೆ ಇಳಿದಂತೆಲ್ಲ ತನ್ನ ಹೊರಗಿನ ಪೊರೆಯನ್ನು ಕಳಚಿಕೊಳ್ಳುತ್ತಾ, ಮಾನವೀಯವಾಗಿ ಜೀವಸಂಕುಲದ ಸ್ಪಂದನವಾಗಿ ನಿಲ್ಲಬಹುದು. ಆಗ ಇರುವುದೆಲ್ಲ ಒಂದೇ ಜೀವ ಎನಿಸಿಬಿಡಬಹುದು. ಅಥವಾ ಕೃತಿಯ ಸೃಷ್ಟಿಕ್ರಿಯೆಯಲ್ಲಿ ತನ್ನೊಳಗೆ ಇನ್ನೊಂದು ಜೀವವನ್ನು ಕಾಣುತ್ತ, ಬದಲಾಗುತ್ತ, ಊರಾಚೆಯ ದಲಿತನನ್ನೂ ತನ್ನೊಳಗೆ ಬಿಟ್ಟುಕೊಳ್ಳಬಹುದು. ಇಲ್ಲವಾದಲ್ಲಿ ಅಲ್ಲಿ ಹುಟ್ಟು ಇರುವುದಿಲ್ಲ. ಮಡಿಯಿದ್ದಾಗ ಮಡಿದ ಸ್ಥಿತಿಯಾಗಿಬಿಡುತ್ತದೆ. ಹೀಗೆ ಸತ್ಯದ ಆಳಕ್ಕೆ ಇಳಿಯುವ ಕ್ರಿಯೆ ಮಾತ್ರವೇ ಮುಟ್ಟಿಸಿಕೊಳ್ಳುವುದಾಗುತ್ತದೆ. ಬಸ್ಸು, ರೈಲುಗಳಲ್ಲಿ ಪ್ರಯಾಣಿಸುವ ಮಾತ್ರಕ್ಕೆ ಅಕ್ಕಪಕ್ಕದಲ್ಲಿ ಕುಳಿತರೆ, ಸಹಭೋಜನವೆಂಬುದು ಹೋಟೆಲ್ಲಿಗೆ ಮಾತ್ರ ಸೀಮಿತವಾದರೆ, ನೌಕರಿಯ ಕಾರಣಕ್ಕಾಗಿ ಮಾತ್ರ ಒಟ್ಟಿಗೆ ಒಡನಾಡಿದರೆ ಅದು ಕೇವಲ ಬಹಿರಂಗದ ಕ್ರಿಯೆ ಮಾತ್ರ. ಅಂತರಂಗದ ಕತ್ತಲು ಹಾಗೆಯೇ ಇರುವುದು ಎನ್ನುತ್ತಾರೆ ದೇವನೂರು. ಒಡಲಾಳದ ಸಾಕವ್ವನ ಬಗ್ಗೆ ಬ್ರಾಹ್ಮಣ ಉಪನ್ಯಾಸಕರೊಬ್ಬರ ಹೇಳುತ್ತಾರೆ, “ನಾನು ತುಂಬ ಸಂಪ್ರದಾಯಸ್ಥ. ಯಾರೊಬ್ಬ ಅಸ್ಪೃಶ್ಯನನ್ನೂ ಮುಟ್ಟಿಸಿಕೊಂಡಂಥವನಲ್ಲ. ಒಡಲಾಳ ಓದಿದೆ. ಈ ಸಾಕವ್ವ ನನ್ನ ಅಜ್ಜಿ ಅನಿಸಿಬಿಟ್ಟಳು. ನನ್ನೊಳಗೆ ನೆಲಸಿಬಿಟ್ಟಳು.” ಮುಟ್ಟುವುದೆಂದರೆ ಬಹುಶಃ ಹೀಗೆ ಅಲ್ಲವೆ? ಎನ್ನುತ್ತಾರೆ ದೇವನೂರು. ಸಮಾನತೆಯ ಬಗ್ಗೆ ಪುಟಗಟ್ಟಲೆ ಭಾಷಣ ಮಾಡಿ, ಮನೆಯೊಳಗೆ ಬರುತ್ತಲೇ, “ಯಾರ್ಯಾರು ಎಲ್ಲೆಲ್ಲಿರಬೇಕೋ ಅಲ್ಲಲ್ಲಿದ್ದರೆ ಚಂದ” ಎನ್ನುವವರ ಎದೆಯೊಳಗೆ ಈ ಮಾತುಗಳು ತುರ್ತಾಗಿ ಇಳಿಯಬೇಕಿದೆ.

ಮುಟ್ಟಿಸುಕೊಳ್ಳುವಿಕೆಯ ಆ ನೇವರಿಕೆಯ ಸುಖವಾದರೂ ಎಂಥದ್ದು? ಅಂಥ ಕ್ಷಣಗಳನ್ನೆಲ್ಲ ಫಳಕ್ಕನೆ ಮಿಂಚುವ ಮಿಂಚುಹುಳದ ಬೆಳಕಿನ ದಿವ್ಯತೆಯಂತೆ ಸೆರೆಹಿಡಿದಿದ್ದಾರೆ ದೇವನೂರು. ಕುವೆಂಪು ಅವರ ಯಾವುದೋ ಮಾತಿಗೆ ಕುಪಿತಗೊಂಡ ಬ್ರಾಹ್ಮಣರು ಮೈಸೂರಿನ ಶಂಕರ ಮಠದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುತ್ತಾರೆ. ಅವರಿಗೆ ಸತ್ಯಸಂಗತಿಯನ್ನು ತಿಳಿಸಿಕೊಡಲು ಆಲನಹಳ್ಳಿಯವರೊಂದಿಗೆ ದೇವನೂರು ಕೂಡ ಹೋಗಿರುತ್ತಾರೆ. ನಿರೀಕ್ಷೆಯಂತೆ ಇವರ ಸಮಜಾಯಿಸಿ ಅವರಿಗೆ ವಿರೋಧವೆನಿಸಿ ದೊಡ್ಡ ಗಲಾಟೆಯೇ ನಡೆಯುತ್ತದೆ. ಹಿರಿಯರೊಬ್ಬರು ಇವರನ್ನು ರಕ್ಷಿಸುವ ಸಲುವಾಗಿ ಮಠದ ಒಳಗೆ ಇವರನ್ನು ಸೇರಿಸಿ ಬಾಗಿಲು ಮುಚ್ಚುತ್ತಾರೆ. ಹೊರಗೆ ಇವರ ಕ್ಷಮಾಪಣೆಗಾಗಿ ಗಲಾಟೆ ನಡೆಯುತ್ತಿರುವಂತೆಯೇ ವ್ಯಕ್ತಿಯೊಬ್ಬರು ಬಂದು ಕಿಟಕಿಯಲ್ಲಿ ಕೈತೂರಿಸಿ, “ನಾನು ನಿಮ್ಮ ತಮ್ಮ ಶಂಕರನ ಕ್ಲಾಸ್‌ಮೇಟ್” ಎಂದು ಪ್ರೀತಿಯಿಂದ ಕೈಕುಲುಕುತ್ತಾರೆ. ಆಗ ದೇವನೂರರ ಪ್ರತಿಕ್ರಿಯೆ, “ನನಗಾಗ ಅವರ ಕೈಗೆ ಮುತ್ತಿಕ್ಕಬೇಕು ಅನಿಸಿತು!” ಎಂಥಹ ಕಹಿ ಸನ್ನಿವೇಶದಲ್ಲೂ ಒಂದು ಪ್ರೀತಿಯ ಸ್ಪರ್ಶ ತಂದ ಪುಲಕ ಅದು.

80ರ ದಶಕದಲ್ಲಿ ನಡೆದ ಮೀಸಲಾತಿ ಸೆಮಿನಾರ್‌ನಲ್ಲಿ ಮಾತನಾಡುತ್ತಾ ಲಂಕೇಶ್ ಹೇಳುತ್ತಾರೆ, “ದಲಿತರು ಈ ಸಮಾಜದ ಕಡೆಗೆ ನೋಡುತ್ತಿರುವುದು ಪ್ರೀತಿಗಾಗಿ ಕೂಡ. ಇದಕ್ಕೆ ಒಂದು ಮುಗುಳ್ನಗೆ ಸಾಕು” ಲಂಕೇಶರ ಮುಗುಳ್ನಗೆ ದೇವನೂರರ ಕಣ್ಣಲ್ಲಿ ಶಾಶ್ವತ ದಾಖಲೆಯಾಗಿ ಉಳಿದುಬಿಡುತ್ತದೆ. ಇವೆಲ್ಲವೂ ಆಗಬೇಕು ಎಂದಾದರೆ ಕುವೆಂಪು ಹೇಳುವಂತೆ, ‘ಎದೆಯ ಗೂಡಿನೊಳಗೊಂದು ತೊಟ್ಟಿಲ ಕಟ್ಟಿ ಅದರೊಳಗೆ ಪುಟ್ಟ ಮಗುವೊಂದನ್ನಿಟ್ಟು ತೂಗುತ್ತಿರಬೇಕು.’ ಬಿದ್ದ ಗೆಳೆಯನ ಗಾಯದಿಂದ ಸುರಿದ ರಕ್ತ ಕತೆಯಾಗಬೇಕೆಂದರೆ ಅವನ ಗಾಯ, ನೋವು ಎಲ್ಲವೂ ನಮ್ಮದೂ ಆಗಬೇಕು. ಬೇಡ ಕ್ರೌಂಚ ಪಕ್ಷಿಗೆ ಬಾಣ ಬಿಟ್ಟ. ಒಂದು ಸತ್ತು ಇನ್ನೊಂದು ರೋಧಿಸಿತು. ಈ ಅಗಲಿಕೆಯ ಅನುಭವವನ್ನಷ್ಟೇ ವಾಲ್ಮೀಕಿ ಬರೆದರೆ ಅದೊಂದು ಭಾವಗೀತೆಯೋ, ಶೋಕಗೀತೆಯೋ ಆಗಬಲ್ಲುದಷ್ಟೆ. ಆ ಅಗಲುವಿಕೆಯ ಭಾವವನ್ನು ಭೂಮಿ ಒಳಗೆ ಹರಿಯುವ ಅಂತರಗಂಗೆಯಾಗಿಸಿ ಅದಕ್ಕೆ ಭೂಮಿ ಮೇಲಿನ ಅಗಲಿಕೆಯ ವಿದ್ಯಮಾನಗಳನ್ನು ಕೂಡಿಸಿದಾಗ ಅದು ಮಹಾಕಾವ್ಯವಾಯ್ತು. ಬೇಂದ್ರೆ ತಾವು ತಮ್ಮ ಬಾಲ್ಯವನ್ನು ಕಳೆದ ಜಾಗವನ್ನು, ಘಟನೆಗಳನ್ನು ಅತೀವ ಉತ್ಸಾಹದಿಂದ ಗೆಳೆಯನಿಗೆ ವಿವರಿಸುವಾಗ ಗೆಳೆಯ ಕೇಳದನಂತೆ, “ಇವೆಲ್ಲಾ ನಿಮ್ಮ ಪದ್ಯಗಳಲ್ಲಿ ಇಲ್ಲವಲ್ಲ” ಅದಕ್ಕೆ ಬೇಂದ್ರೆ ಹೇಳಿದ ಮಾತು, “ಆ ವಿವರಗಳನ್ನೆಲ್ಲ ಸುಟ್ಟು ಎನರ್ಜಿ ಮಾಡಿ ಕಾವ್ಯ ಮಾಡಿದ್ದು” ಈ ಅಕ್ಷರಗಳನ್ನು ಓದುತ್ತಾ ಹೋದಂತೆ ನನಗನಿಸಿದ್ದು ದೇವನೂರು ಕೂಡ ಅದನ್ನೇ ಮಾಡುತ್ತಿದ್ದಾರೆ!

ರೇಗೆಯವರ ಕಾದಂಬರಿ ಸಾವಿತ್ರಿಯಲ್ಲಿ ಒಂದು ಮಾತು ಬರುತ್ತದೆ. “ಯಾವಾಗಲೂ ನೀನು ಸಂತೋಷವಾಗಿರುವಿಯಲ್ಲ, ನಿನಗೆ ಯಾರೂ ಕೆಟ್ಟವರು ಸಿಕ್ಕೇ ಇಲ್ಲವೇನು?” ಇದಕ್ಕೆ ಉತ್ತರವಾಗಿ ಸಾವಿತ್ರಿ ಹೇಳುತ್ತಾಳೆ, “ನನ್ನ ಜೀವನದಲ್ಲಿ ನಾನು ‘ಬರಿಯ ಕೆಟ್ಟವರ’ನ್ನು ನೋಡಲೇ ಇಲ್ಲ.” ನಾನು ಮತ್ತು ಅನ್ಯ ಎಂಬ ಬೇಧವಳಿದ ಜಗತ್ತಿನಲ್ಲಿ ಮಾತ್ರವೇ ಕಂಡುಕೊಳ್ಳಬಹುದಾದ ದರ್ಶನವಿದು. ಕೆಳವರ್ಗದ ಹುಡುಗನೊಬ್ಬ ತನಗಿಂತಲೂ ಕೆಳಜಾತಿಯ ಹುಡುಗನಿಗೆ ಬೊಗಸೆಯಲ್ಲಿ ನೀರೆರೆಯುವುದನ್ನು ನೋಡಿ ನೊಂದ ದೇವನೂರು ಈ ಘಟನೆಯ ಹಿಂದಿನ ತಾತ್ವಿಕತೆಯನ್ನು ಹುಡುಕುತ್ತಾ ಹೋಗುತ್ತಾರೆ. ಸವರ್ಣೀಯರು ತನ್ನ ಕೈಗೆ ನೀರೆರೆಯುವಾಗ ಅವಮಾನ ಅನುಭವಿಸಿದವನೊಬ್ಬ ಅದನ್ನೇ ತಾನು ಇನ್ನೊಬ್ಬನಿಗೆ ಮಾಡುವುದಾದರೂ ಹೇಗೆ? ಆ ಕ್ರಿಯೆಯನ್ನು ಪ್ರಾಣಿಸಹಜವಾದ ಕೋಪದಿಂದ ವಿರೋಧಿಸಿದಾಗ ಮಾತ್ರ ಇಂಥದ್ದನ್ನು ತಾನೇ ಮಾಡಲು ಸಾಧ್ಯ. ಅದೊಂದು ತಾತ್ವಿಕ ಕೋಪವಾಗಿ ಬದಲಾದಾಗ ಕೆಳವರ್ಗದ ಹುಡುಗನೊಬ್ಬ ಸವರ್ಣೀಯನ ಕೈಗೆ ನೀರೆರೆದಾಗಲೂ ಆ ಘಟನೆ ನಮ್ಮ ಧೃತಿಗೆಡಿಸುತ್ತದೆ. ಪ್ರಾಣಿ ಸಹಜವಾದ ಕೋಪ ತಾತ್ವಿಕ ಕೋಪವಾಗಿ ಪರಿವರ್ತನೆಯಾದಾಗ ನಡೆಯುವ ಪವಾಡವಿದು. ಯಾವುದೇ ಐಡೆಂಟಿಟಿಯ ನಡಿಗೆ, ತಾನೊಂದು ಅಸಮಾನತೆಗೆ ಒಳಗಾದ ಝರಿ, ತಾನು ಇರುವುದೇ ಸಮಾನತೆಯ ನದಿಗೆ ಕೂಡುವುದಕ್ಕಾಗಿ ಎಂಬಂತೆ ತನ್ನ ಆಶಯಗಳ ಇತರ ಝರಿಗಳ ಜೊತೆಗೆ ಕೂಡಿಕೊಳ್ಳುತ್ತಾ, ಸಮಾನತೆಯ ನದಿಯ ಕಡೆ ಚಲಿಸಬೇಕಾಗುತ್ತದೆ ಎನ್ನುತ್ತಾರೆ ದೇವನೂರು. ಎಲ್ಲ ಚಳುವಳಿಗಳು ಸಾಗಬೇಕಾದ ದಾರಿಯನ್ನು ಇದಕ್ಕಿಂತ ಭಿನ್ನವಾಗಿ ಮತ್ತು ಮಾನವೀಯವಾಗಿ ಯಾರು ತಾನೆ ವ್ಯಾಖ್ಯಾನಿಸಲು ಸಾಧ್ಯ?

ಅಂಬೇಡ್ಕರ್ ಮತ್ತು ಗಾಂಧಿ ಇಲ್ಲಿ ಸಂಧಿಸುವ ರೀತಿಯೇ ಭಿನ್ನಬಗೆಯದು, ಮತ್ತದು ಇಂದಿಗೆ ಬೇಕಾದ ರೀತಿಯದ್ದು. ‘ಸಾಯಲು ಮಾನಸಿಕವಾಗಿ ದೃಢವಾಗಿ ಸಿದ್ಧನಾದವನು ಮಾತ್ರ ಗಾಂಧಿಯಾಗಬಲ್ಲ. ಹೇಡಿಯಾದವನು ಅಹಿಂಸಾವಾದಿಯಾಗಲು ಖಂಡಿತ ಸಾಧ್ಯವಿಲ್ಲ. ಗಾಂಧಿಯನ್ನು ಅಪಮೌಲ್ಯಗೊಳಿಸಿದದ್ದು ಅಹಿಂಸಾವಾದಿಯಾಗಲು ಸಾಧ್ಯವಾಗದ ನಮ್ಮೊಳಗಿನ ಹೇಡಿತನ. ಗಾಂಧೀಜಿಯವರ ನಡಿಗೆಯ ಪ್ರತಿಹೆಜ್ಜೆಯೂ ದೇವರನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳುವವನೊಬ್ಬ ಮಾಡುವ ಪ್ರಯತ್ನ. ಹೀಗೆ ನಡೆಯುವವನಿಗೆ ಐಕ್ಯತೆ ದೈವದಂತೆ, ಭಿನ್ನತೆ ದೆವ್ವದಂತೆ ಕಾಣುತ್ತದೆ. ಹೀಗೆ ಭಾವಿಸಿದಾಗ ಮಾತ್ರವೇ ಉಪವಾಸ ಸತ್ಯಾಗ್ರಹವಾಗುತ್ತದೆ. ಹಾಗಾಗಲು ಎದುರಾಳಿ ತನ್ನವನೆಂಬ ಭಾವನೆ ಅಗತ್ಯ. ತಾನು ಇನ್ನೊಬ್ಬನಾಗಿಬಿಡುವ ರೂಪಾಂತರದ ಜರೂರಿಯಿದೆ. ದಲಿತರ ನವಪೀಳಿಗೆ ಅಂಬೇಡ್ಕರ್ ಫೋಟೋವನ್ನು ಮಾತ್ರ ಇಟ್ಟುಕೊಂಡರೆ ದಲಿತರ ಹಿಂದಿನ ತಲೆಮಾರು ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರ ಫೋಟೋಗಳನ್ನೂ ಇಟ್ಟುಕೊಂಡಿತ್ತು. ಅವರಿಬ್ಬರೂ ಮಕ್ಕಳ ಹಿತಕ್ಕಾಗಿ ಜಗಳವಾಡುವ ಅಪ್ಪ ಅಮ್ಮಂದಿರಂತೆ. ಹೀಗೆ ಅರ್ಥೈಸಿಕೊಂಡಾಗ ಪೂನಾ ಒಪ್ಪಂದವೂ ಕೂಡ, “ನನ್ನಲ್ಲಿ ತಪ್ಪಿದೆ ನಿಜ. ಹಾಗಂತ ಡೈವೋರ್ಸ ಕೊಡಬೇಡ” ಎಂಬಂತಿದೆ. ಗಾಂಧಿ ಅಸಮಾನತೆಯ ಹಿಂದೂ ಧರ್ಮ ಎಂಬ ಬಚ್ಚಲ ಕೊಳಕು ನೀರನ್ನು ಭಟ್ಟಿ ಇಳಿಸುತ್ತ ತಿಳಿಗೊಳಿಸುತ್ತಿದ್ದರು. ಇದು ಚಿಟ್ಟೆಯಾಗಲಾರದ ಬಚ್ಚಲು ಹುಳಗಳಿಗೆ ಉಸಿರು ಕಟ್ಟಿಸುತ್ತಿತ್ತು. ಹಿಂದೂ ಧರ್ಮ ಎಂಬ ಮನೆಯೊಳಗೆ ಭಿನ್ನಭಾವ ಜಾತಿ ತಾರತಮ್ಯದ ಕಂಬಗಳನ್ನು ಒಳಗೊಳಗೇ ಕೊಯ್ಯುವವನಂತೆ ಗಾಂಧಿ ಕಾಣಿಸುತ್ತಾರೆ. ಅದೇ ಅಂಬೇಡ್ಕರ್ ಹೊರಗಿನಿಂದ ಆ ಅಸಮಾನತೆಯ ಮನೆಗೆ ಕಲ್ಲೆಸೆಯುವವನಂತೆ ಕಾಣಿಸುತ್ತಾರೆ. ಈ ಪ್ರಕ್ರಿಯೆಯಿಂದಾಗಿ ಅಂಬೇಡ್ಕರ್ ಎಸೆದ ಕಲ್ಲು ಗಾಂಧಿಗೂ ಬಿದ್ದು ರಕ್ತ ಚೆಲ್ಲಿರಬಹದು. ಇದನ್ನು ಕಂಡು ಹೊರಲೋಕವು ಅಂಬೇಡ್ಕರ್ ಅವರಿಗೂ, ಗಾಂಧಿಗೂ ಮಾರಾಮಾರಿ ಹೊಡೆದಾಟ ಎನ್ನಬಹುದು. ಆದರೆ ಇಬ್ಬರೂ ಮಾಡುತ್ತಿದ್ದುದು ಹೆಚ್ಚೂಕಮ್ಮಿ ಒಂದೇ ಕೆಲಸವನ್ನಲ್ಲವೆ?’ ದೇವನೂರು ಬರೆದ ಮೇಲಿನ ಸಾಲುಗಳನ್ನು ಓದುವಾಗ ಚರಿತ್ರೆಯನ್ನು ನಾವು ಓದಬೇಕಾದ ರೀತಿ ಇದೇ ಅಲ್ಲವೆ ಎಂದು ಯಾರಿಗಾದರೂ ಅನಿಸದಿರದು.

ಇಷ್ಟಾಗಿಯೂ ಗಾಂಧಿ ಅಪಾರ್ಥಕ್ಕೆ ಒಳಗಾಗಿದ್ದೇಕೆ? ದೇವನೂರರ ಸೂಕ್ಷ್ಮತೆ ಕೆಲಸ ಮಾಡುವುದೇ ಇಲ್ಲಿ. ‘ಗಾಂಧಿ ಅಸ್ಪೃಶ್ಯರನ್ನು ಮಕ್ಕಳು ಎಂಬಂತೆ ಭಾವಿಸಿ ವರ್ತಿಸುತ್ತಿದ್ದರು. ಈ ವರ್ತನೆಯನ್ನು ಉಲ್ಟಾ ಮಾಡಿದರೆ, ಅಂದರೆ ಗಾಂಧಿ ಅಸ್ಪೃಶ್ಯರನ್ನು ಪಿತೃಗಳೆಂಬಂತೆ ಭಾವಿಸಿ ವರ್ತಿಸಿದ್ದರೆ ಈ ಅಪಾರ್ಥದಿಂದ ತಪ್ಪಿಸಿಕೊಳ್ಳಬಹುದಿತ್ತು. ಇದು ಮೇಲ್ನೋಟಕ್ಕೆ ಒಂದೇ ಎಂಬಂತೆ ಕಂಡರೂ ಈ ನೋಟವು ನಡಾವಳಿಯನ್ನೇ ಬದಲಿಸಿಬಿಡುತ್ತದೆ. ಉದಾಹರಣೆಗೆ ಅಸ್ಪೃಷ್ಯರಿಗೂ ಸವರ್ಣೀಯರಿಗೂ ಸ್ಪರ್ಧೆ ಸವಾಲು ಬಂದಾಗ –ಮಕ್ಕಳಂತೆ ಭಾವಿಸಿದ ಮನಸ್ಥಿತಿ ಇದ್ದರೆ ‘ಎಲಾ, ನಾನು ಸಾಕಿದವನ ಕೊಬ್ಬೆ’ ಎಂದು ಕ್ರೋಧ, ಅಸಹನೆ ಉಂಟಾಗುತ್ತದೆ. ಅದೇ ತಂದೆ ತಾಯಿಯರಂತೆ ಭಾವಿಸಿದ ಮನಸ್ಥಿತಿ ಇದ್ದರೆ ‘ನನ್ನನ್ನು ಸಾಕಿದವನು; ನಾನೆ ಸೋತರೆ ಏನಾಯ್ತು?’ ಎಂಬ ಭಾವನೆ ಉಂಟಾಗುತ್ತದೆ. ದಲಿತರು ಆದಿಮ ಜನಾಂಗವಾದ್ದರಿಂದ ಈ ಪಿತೃ ಭಾವನೆಯೇ ಚಾರಿತ್ರಿಕವಾಗಿಯೂ ಸರಿ ಅನಿಸುತ್ತದೆ. ಗಾಂಧಿಯನ್ನು ಇಂದಿಗೆ ಅರ್ಥೈಸುವ ಬಗೆಯೆಂತು? ನಿನ್ನೆಯ ಗಾಂಧಿ ಇಂದಿಗೆ ಬದಲಾಯಿಸಿರುತ್ತಾನೆ, ಇಂದಿನ ಗಾಂಧಿ ನಾಳೆಗೆ ಬದಲಾಯಿಸಿರುತ್ತಾನೆ. ಈ ನಡಿಗೆಯ ಕ್ರಮದಲ್ಲೇ ಗಾಂಧಿಯ ಆಸೆ-ಚಿಂತನೆಗಳಿಗೂ ನಡಿಗೆ ಇದೆ. ತನ್ನ ಜತೆಯಲ್ಲೇ ಕರೆಕೊಯ್ಯುವವನ ಕಷ್ಟ ಇದಾಗಿರಬಹುದು. ಇಂದಿನ ಗಾಂಧಿಯನ್ನು ನಿರೂಪಿಸಿಕೊಳ್ಳಲು ಲೋಹಿಯಾರ ಚಿಂತನೆ ಸಹಕಾರಿಯಾಗಿದೆ. ಗಾಂಧಿ ಮುಂದಿನ ಜನ್ಮದಲ್ಲಿ ಹರಿಜನನಾಗಿ ಹುಟ್ಟಲು ಬಯಸಿದವರಾದ್ದರಿಂದ ಅವರನ್ನು ಸಂಪಾದಿಸಿ ಇಟ್ಟುಕೊಳ್ಳಬೇಕಾದ್ದು ಜಗತ್ತಿನ ಹಿತವೂ ಕೂಡ. ಹೀಗೆ ಗಾಂಧಿ, ಲೋಹಿಯಾ ಮತ್ತು ಅಂಬೇಡ್ಕರ್ ಅವರನ್ನು ಒಂದುಗೂಡಿಸಿ ಒಂದು ಸಾಮರಸ್ಯ ಪಡೆಯಬಹದು.’ ಯಾರನ್ನೂ, ಯಾವುದನ್ನೂ ನಿರಾಕರಿಸದೇ, ಒಳಿತನ್ನು ಎಲ್ಲ ಕಡೆಯಿಂದಲೂ ಜೊತೆಗೂಡಿಸಿ ನಡೆಯಬೇಕಾದ ಬಗೆಯನ್ನು ಇದಕ್ಕಿಂತ ಸರಳವಾಗಿ ಹೇಗೆ ವ್ಯಾಖ್ಯಾನಿಸುವುದು?

 

ಒಂದು ಸಭೆಯಲ್ಲಿ ನಡೆದ ಎರಡು ದಿನಗಳ ಭಾಷಣದಲ್ಲಿ ಎಲ್ಲವೂ ಚರ್ಚೆಗಳೇ ಆಗಿ, ಏನೂ ತೀರ್ಮಾನವಾಗದೇ ಹತಾಶೆಯ ಹಂತ ತಲುಪಿದ ಸ್ಥಿತಿಯಲ್ಲಿ ದೇವನೂರು ಒಂದ ಸಮಾರೋಪ ಭಾಷಣವನ್ನು ಮಾಡುತ್ತಾರೆ. ‘ಗಾಂಧಿ- ಕಾಠಿಣ್ಯದ ತಂದೆಯಂತೆ, ಜೆ.ಪಿ.- ಅಸಹಾಯಕ ತಾಯಿ, ವಿನೋಭಾ-ಮದುವೆಯಾಗದ ವೃತನಿಷ್ಟ ಅಕ್ಕನಂತೆ, ಲೋಹಿಯಾ- ಊರೂರು ಅಲೆಯುವ ಮನೆಸೇರದ ಅಲೆಮಾರಿ ಮಗ, ಅಂಬೇಡ್ಕರ್- ತಾರತಮ್ಯಕ್ಕೆ ಒಳಗಾಗಿ ಮುನಿಸಿಕೊಂಡು ಮನೆಯ ಹೊರಗೆ ಇರುವ ಮಗ. ಇದು ನಮ್ಮ ಕುಟುಂಬ, ನಾವು ಇಲ್ಲಿ ಸಂತಾನ. ಹೇಳಿ, ನಾವೀಗ ಏನು ಮಾಡಬೇಕು?’ ಸಮಾರೋಪದ ನಂತರ ಕಾರ್ಯಕ್ರಮ ಮುಗಿಯಲಿಲ್ಲ. ಇದನ್ನು ಹೇಳುತ್ತಲೇ ದೇವನೂರು ಯುವಜನರಿಗೆ ಈ ಎಲ್ಲ ನಾಯಕರು ಅನುಸರಿಸುತ್ತಿದ್ದ ಮೇಲ್ಪಂಕ್ತಿಯ ಬಗ್ಗೆ ಎಚ್ಚರಿಸುವುದು ಹೀಗೆ. ‘ಬುದ್ಧ, ಬಸವ, ಅಲ್ಲಮ, ಗಾಂಧಿಯಂತವರು ತಮ್ಮ ಶತ್ರು ತಮ್ಮ ಒಳಗೂ ಇದ್ದಾನೆ ಎಂದು ಭಾವಿಸಿ ಹೆಣಗುತ್ತಿದ್ದರು. ಆಸೆ, ದ್ವೇಷ, ಅಸೂಯೆ, ನಾನತ್ವ ಇಂಥವು ತಮ್ಮ ಒಳಗಿನ ಶತ್ರು ಎಂದು ಭಾವಿಸುತ್ತಿದ್ದರು. ಈ ಅರಿವಿಲ್ಲವಾದಲ್ಲಿ ಇಂದಿನ ಭ್ರಷ್ಟಾಚಾರ ವಿರೋಧಿಯೇ ನಾಳೆ ಭ್ರಷ್ಟ ಎಂಬಲ್ಲಿಗೆ ನಾವು ಬಂದು ನಿಲ್ಲುತ್ತೇವೆ.’ ನಾವೆಲ್ಲರೂ ಇಂದು ಅಲ್ಲಿಗೇ ಹೊರಟಿದ್ದೇವೆಯೆ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ.

(ಕೃತಿ: ಎದೆಗೆ ಬಿದ್ದ ಅಕ್ಷರ, ಲೇಖಕರು: ದೇವನೂರ ಮಹಾದೇವ, ಪ್ರಕಾಶಕರು: ಅಭಿನವ ಪ್ರಕಾಶನ, ಬೆಲೆ: 250/-)

[ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.]