ಅಂಬೇಡ್ಕರ್ ಓದು ಸರಣಿಯ100ರ ಕಂತಿನಲ್ಲಿ -ದೇವನೂರ ಮಹಾದೇವ
[ಅಂತರ್ಜಾಲದಲ್ಲಿ ಅಂಬೇಡ್ಕರ್ ಹುಡುಕಾಟ ಮಾಡುವವರಿಗೆ ಕನ್ನಡದಲ್ಲಿ ಅವರ ಆಯ್ದ ಬರಹ-ಭಾಷಣಗಳ ಆಡಿಯೋ-ವೀಡಿಯೋ ರೂಪ ಸಿಗಬೇಕಿದೆ. ಹಾಗಾಗಿ ಅಂಬೇಡ್ಕರ್ ಚಿಂತನೆಯಲ್ಲಿ ನಂಬುಗೆ ಇಟ್ಟವರಿಂದ ಅಂಬೇಡ್ಕರ್ ಬರಹ-ಭಾಷಣದ ಆಯ್ದ ಭಾಗಗಳನ್ನು ಓದಿಸಿ ಯೂಟ್ಯೂಬ್ ಗೆ ಹಾಕುವ ಕೆಲಸವನ್ನು ಡಾ.ಅರುಣ್ ಜೋಳದಕೂಡ್ಲಗಿಯವರು ಮಾಡುತ್ತಿದ್ದಾರೆ. ಅಂಬೇಡ್ಕರ್ ಚಿಂತನೆಯನ್ನು ಸಾಧ್ಯವಾದಷ್ಟು ಸಾಮಾನ್ಯ ಜನರಿಗೆ ವಿಸ್ತರಿಸುವ ಕನಸು ಈ ಸರಣಿಯ ಹಿಂದಿದೆ. ಬಾಬಾಸಾಹೇಬರ ಚಿಂತನೆಯಲ್ಲಿ ನಂಬಿಕೆ ಇಟ್ಟವರ ಸಹಭಾಗಿತ್ವದಿಂದ ಈ ಕನಸು ನನಸಾಗಿಸುವ ಪ್ರಯತ್ನ ಅವರದು. ಅಂತೆಯೇ ಬಾಬಾಸಾಹೇಬರ ಚಿಂತನೆಯ ಆಡಿಯೋ ರೂಪದ ಆರ್ಕೈವ್ ರೂಪಿಸುವ ಉದ್ದೇಶ ಕೂಡ ಇವರಿಗಿದೆ. ಈ ಅಂಬೇಡ್ಕರ್ ಓದು ಸರಣಿಯ 100ನೆಯ ಕಂತನ್ನು ದೇವನೂರ ಮಹಾದೇವ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನವಾದ 6.12.2020ರಂದು ಪ್ರಸ್ತುತಪಡಿಸಿದ್ದು ಅದನ್ನು ಯೂಟ್ಯೂಬ್ ಗೆ ಹಾಕಲಾಗಿದೆ. ಅವರ ಮಾತುಗಳ ಕೊಂಡಿ ಮತ್ತು ಬರಹ ಹಾಗೂ ಈ ಸರಣಿಯ ಕುರಿತು ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿಯ ತುಣುಕು ನಮಗಾಗಿ ಇಲ್ಲಿದೆ.]
[ಡಾ.ಅರುಣ್ ಜೋಳದಕೂಡ್ಲಿಗಿ ಅವರ ಮಾತುಗಳು….#ಅಂಬೇಡ್ಕರ್_ಓದು_ಸರಣಿ_100
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲಿ ಒಬ್ಬರಾದ ದೇವನೂರ ಮಹಾದೇವ ದಲಿತ ಸಂವೇದನೆಗೆ ಶಕ್ತ ರೂಪಕಶಕ್ತಿ ಕೊಟ್ಟ ಭಾರತದ ಬಹಳ ಮುಖ್ಯ ಲೇಖಕರು. ಬರಹವಷ್ಟೇ ಅಲ್ಲದೆ ಕಾಲಕಾಲಕ್ಕೆ ಸಾಮಾಜಿಕ ವಿಷಮತೆಗಳು ತಲೆದೋರಿದಾಗ ಹೋರಾಟ ಚಳವಳಿಯ ಮುಂಚೂಣಿಯಲ್ಲಿದ್ದು ಧ್ವನಿ ಎತ್ತಬಲ್ಲರು. ರಾಜಕೀಯವಾಗಿಯೂ ಸರ್ವೋದಯ ಕರ್ನಾಟಕದ ಮೂಲಕ ಹೊಸ ಕನಸಿನ ಹಾದಿಯಲ್ಲಿದ್ದಾರೆ. ’ಕುಸುಮಬಾಲೆ’ ಕೃತಿಗಾಗಿ 1990 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಭಾಜನರಾಗಿರುವ ದೇವನೂರ ಮಹದೇವ ’ದ್ಯಾವನೂರು’, ’ಒಡಲಾಳ’, ’ಎದೆಗೆ ಬಿದ್ದ ಅಕ್ಷರ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ದೇವನೂರ ಮಹಾದೇವ ಅವರು ಅಂಬೇಡ್ಕರ್ ಓದು ಸರಣಿಯ ನೂರನೆ ಸರಣಿಗಾಗಿ ಓದಿದ ಬರಹ ಹೀಗಿದೆ]
ಈಗ ನಾನು ಸಂವಿಧಾನದ ಮೂರನೆ ಸುತ್ತಿನ ಕರಡು ಪಠಣದಲ್ಲಿ ಅಂಬೇಡ್ಕರ್ ಅವರು ನುಡಿದ ಜ್ವಲಂತ ನುಡಿಗಳನ್ನು ಓದುವೆ. ಆ ಸಂವಿಧಾನದ ಸಭೆ, ದಿನಾಂಕ 17, ನವೆಂಬರ್ 1949ರಲ್ಲಿ ಜರುಗುತ್ತದೆ. ಆಗ ನಾನು ಅಂಬೆಗಾಲಿಡುವ ಕೂಸಾಗಿದ್ದೆ.
ಈಗ ಓದುತ್ತಿರುವ ಭಾಗವನ್ನು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿರುವ- “ಡಾ.ಬಿ.ಆರ್.ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು” ಗ್ರಂಥದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಇದು ಸಂಪುಟ 13, ಮೂರನೆ ಮುದ್ರಣದ 529ನೇ ಪುಟದಲ್ಲಿದೆ. ಇದು ತುಂಬಾ ಅಂದ್ರೆ ತುಂಬಾನೆ ಸಣ್ಣದು. ಇರಬಹುದು. ಆದರಿಲ್ಲಿ ಇಡೀ ಜೀವ ಸಂಕುಲವನ್ನು ತನ್ನೊಳಗೆ ತುಂಬಿಕೊಂಡವನೊಬ್ಬನ ಒಡಲಿನಿಂದ ಆ ಮಾತುಗಳು ಒಡಮೂಡಿದಂತಿವೆ.
ಈಗ ಅಂಬೇಡ್ಕರ್ ಅವರ ಆ ಮಾತುಗಳು:
“ಚರಿತ್ರೆ ಮತ್ತೆ ಮರುಕಳಿಸುತ್ತದೆಯೇ? ಈ ಯೋಚನೆ ನನ್ನಲ್ಲಿ ಆತಂಕ ಮೂಡಿಸುತ್ತದೆ. ನಮಗೆ ಈಗಾಗಲೇ ಇದ್ದ ಹಳೆಯ ಶತ್ರುಗಳಾದ ಜಾತಿ ಮತ ಪಂಗಡಗಳ ಜೊತೆಗೆ ಇನ್ನು ಮುಂದೆ ವಿಭಿನ್ನ ಮತ್ತು ವಿರೋಧಿ ರಾಜಕೀಯ ಸಿದ್ಧಾಂತಗಳ ಹಲವು ರಾಜಕೀಯ ಪಕ್ಷಗಳೂ ಸೇರಿಕೊಳ್ಳುತ್ತವೆ. ಈ ವಾಸ್ತವ ಅರಿವಾದ ಕೂಡಲೆ ನನ್ನ ಆತಂಕ ಇನ್ನೂ ತೀವ್ರವಾಗುತ್ತದೆ. ಭಾರತೀಯರು ತಮ್ಮ ಜಾತಿ ಮತ ಪಂಗಡಗಳಿಗಿಂತ ದೇಶವನ್ನು ಮುಖ್ಯವೆಂದು ಭಾವಿಸುತ್ತಾರೆಯೋ ಅಥವಾ ಅವರಿಗೆ ತಮ್ಮ ದೇಶಕ್ಕಿಂತ ತಮ್ಮ ಜಾತಿ ಮತ ಪಂಗಡಗಳೇ ಹೆಚ್ಚು ಮುಖ್ಯವಾಗುತ್ತದೋ? ನನಗೆ ಗೊತ್ತಾಗುತ್ತಿಲ್ಲ. ಆದರೆ ಇಷ್ಟಂತೂ ಖಚಿತ. ರಾಜಕೀಯ ಪಕ್ಷಗಳು, ಜಾತಿ ಮತ ಪಂಗಡಗಳನ್ನು ದೇಶಕ್ಕಿಂತ ಮುಖ್ಯ ಎಂದು ಭಾವಿಸಿದರೆ ನಮ್ಮ ಸ್ವಾತಂತ್ರ್ಯಕ್ಕೆ ಎರಡನೇ ಬಾರಿ ಗಂಡಾಂತರ ಬಂದಂತೆ. ಹಾಗೇನಾದರೂ ಆದರೆ ಬಹುಶಃ ಸ್ವಾತಂತ್ರ್ಯ ಅನ್ನುವುದು ನಮಗೆ ಮತ್ತೆ ಸಿಗುವುದಿಲ್ಲ. ಅದನ್ನು ಶಾಶ್ವತವಾಗಿ ಕಳೆದುಕೊಂಡು ಬಿಡುತ್ತೇವೆ. ಇದರ ವಿರುದ್ಧ ನಾವೆಲ್ಲರೂ ಅಚಲವಾಗಿ ನಿಲ್ಲಬೇಕು. ನಮ್ಮಲ್ಲಿ ಕೊನೆಯ ಹನಿ ರಕ್ತ ಇರುವವರೆಗೆ ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ದೃಢಸಂಕಲ್ಪ ಮಾಡಬೇಕು.”
ಅಂಬೇಡ್ಕರ್ ಅವರ ಈ ಮಾತುಗಳನ್ನು ಓದಿದಾಗಿಲಿಂದಲೂ ಅವು ನನ್ನನ್ನು ಹಿಂಬಾಲಿಸುತ್ತಿವೆ. ಜೊತೆಗೆ ಒಂದು ಪ್ರಶ್ನೆಯೂ ಬೆಂಬಿಡದೆ ಕಾಡುತ್ತದೆ 1949ನೇ ಇಸವಿಯ ಅಂಬೇಡ್ಕರ್ ಅವರ ಮಾತುಗಳು ಆ ಕಾಲಕ್ಕೆ ಹೆಚ್ಚಿಗೆ ಸಲ್ಲುತ್ತವೊ ಅಥವಾ 2021 ನೇ ಇಸವಿಗೆ ಹೆಚ್ಚಿಗೆ ಸಲ್ಲುತ್ತವೊ? ಈ ಪ್ರಶ್ನೆ ಬಂದಾಗಲೆಲ್ಲ ಅಂದಿಗಿಂತ ಇಂದಿಗೇನೆ ಹೆಚ್ಚಿಗೆ ಸಲ್ಲುತ್ತವೆ ಎಂದು ಅನ್ನಿಸುತ್ತಲೇ ಬಂದಿದೆ. ಆ ಮಾತುಗಳೊಳಗಿನ ಆತಂಕ, ವಿವೇಕ, ಎಚ್ಚರಗಳು ಇಂದು ನಮ್ಮನ್ನು ಕೈ ಹಿಡಿದು ನಡೆಸಲು ಇರುವ ಬೆಳಕಿನಂತೆ ಗೋಚರಿಸುತ್ತದೆ.
-ದೇವನೂರ ಮಹಾದೇವ