ಅಂಬೇಡ್ಕರ್ ಫೋಟೋ ತೆರವು: ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಲು ದೇವನೂರು ನಿರ್ಧಾರ
ರಾಯಚೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಗಣರಾಜ್ಯೋತ್ಸವದಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋವನ್ನು ತೆರವು ಮಾಡಿಸಿದ ವಿವಾದ ಸಂಬಂಧ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಲು ಹಿರಿಯ ಸಾಹಿತಿ ದೇವನೂರ ಮಹಾದೇವ ಮುಂದಾಗಿದ್ದಾರೆ.
“ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವದಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆಯುವಂತೆ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ಸೂಚಿಸಿದ ಪ್ರಕರಣ ಸಂಬಂಧ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಲು ದೇವನೂರ ಮಹಾದೇವ ಅವರು ನಿರ್ಧಾರಿಸಿದ್ದಾರೆ” ಎಂದು ಮೈಸೂರಿನ ಪ್ರಾದೇಶಿಕ ಪತ್ರಿಕೆ ‘ಆಂದೋಲನ’ ವರದಿ ಮಾಡಿದೆ.
“ರಾಯಚೂರಿನಲ್ಲಿ ನಡೆದ ಘಟನೆ ಸಂಬಂಧ ಹೈಕೋರ್ಟ್ನಲ್ಲಿ ವಕಾಲತ್ತು ಹಾಕಲು ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವವರ್ಮ ಕುಮಾರ್ ಅವರ ಬಳಿ ಚರ್ಚೆ ನಡೆಸಿದ್ದೇನೆ. ಮತ್ತೆ ಯಾರಾದರೂ ವಕಾಲತ್ತು ಹಾಕುವವರಿದ್ದರೆ ಅವರನ್ನೂ ಸೇರಿಸಿಕೊಳ್ಳಿ ಎಂದು ಕೇಳಿಕೊಂಡಿದ್ದೇನೆ” ಎಂದು ದೇವನೂರರು ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.
ಅಂಬೇಡ್ಕರ್ ಫೋಟೋ ತೆರವು ವಿವಾದ ಭಾರಿ ಆಕ್ರೋಶಕ್ಕೆ ಕಾರಣವಾದ ಬಳಿಕ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಪ್ರತಿಕ್ರಿಯೆ ನೀಡಿದ್ದರು. ’ಡಾ. ಬಿ.ಅರ್. ಅಂಬೇಡ್ಕರವರ ಫೋಟೋ ತೆಗೆದುಕೊಂಡು ಬಂದು ಇಟ್ಟಿದ್ದು, ವಾಪಸ್ ತೆಗೆದುಕೊಂಡು ಹೋಗಿರುವುದನ್ನು ನಾನು ನೋಡಿಲ್ಲ’ ಎಂದು ನ್ಯಾಯಾಧೀಶರು ಹೇಳಿದ್ದರು.
“ಅಂದು ಮುಂಜಾನೆ 8.15 ರ ಸುಮಾರಿಗೆ ನಮ್ಮ ಸಿಬ್ಬಂದಿಯವರು ನನ್ನ ಕೊಠಡಿಗೆ ಬಂದು ಕೆಲವು ವಕೀಲರು ಮಹಾತ್ಮ ಗಾಂಧಿಯವರ ಫೋಟೋ ಜೊತೆ ಡಾ. ಬಿ.ಆರ್. ಅಂಬೇಡ್ಕರ್ ರವರ ಫೋಟೋವನ್ನು ಸಹ ಇಟ್ಟು ಗಣರಾಜ್ಯೋತ್ಸವ ಆಚರಿಸಬೇಕೆಂದು ಸರಕಾರದ ಸುತ್ತೋಲೆ ಇದೆ ಅಂತಾ ಹೇಳುತ್ತಿದ್ದಾರೆ ಅಂತಾ ತಿಳಿಸಿದರು. ಅನಂತರ ಕೆಲ ವಕೀಲರು ಬಂದು ನನಗೆ ಸರಕಾರದ ಸುತ್ತೋಲೆಯ ಪ್ರಕಾರ ಡಾ. ಬಿ.ಆರ್. ಅಂಬೇಡ್ಕರ್ ರವರ ಫೋಟೋವನ್ನು ಇಟ್ಟು ಗಣರಾಜ್ಯೋತ್ಸವ ಆಚರಿಸಬೇಕು ಅಂತಾ ಒತ್ತಾಯಿಸಿದರು. ಆಗ ನಾನು ಆ ಸುತ್ತೋಲೆಯನ್ನು ಘನ ಉಚ್ಚ ನ್ಯಾಯಾಲಯದ ಫು಼ಲ್ ಕೋರ್ಟ್ ಮುಂದೆ ಪರಿಗಣೆನೆಗೆ ಇರುವ ಕಾರಣ ನಾವು ಕಾಯಬೇಕು ಎಂದು ಉಚ್ಚ ನ್ಯಾಯಾಲಯದ ವಿಲೇಖನಾಧಿಕಾರಿಗಳು ನಮ್ಮ ಲೀಡರ್ಸ್ ಗುಂಪಿನಲ್ಲಿ ತಿಳಿಸಿದ್ದಾರೆ. ಆದ ಕಾರಣ ಒತ್ತಾಯಿಸಬೇಡಿ ಎಂದು ವಿನಂತಿಸಿಕೊಂಡೆ” ಎಂದು ಹೇಳಿದ್ದರು.
ಗಾಂಧೀಜಿಯವರ ಫೋಟೋ ಜೊತೆಗೆ ಅಂಬೇಡ್ಕರ್ ಫೋಟೋ ಇಡಬಾರದೆಂದು ಎಲ್ಲಿಯೂ ಹೇಳಿಲ್ಲ ಎಂದು ನ್ಯಾಯಾಂಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. “ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಯ ದಿನ ಯಾರ ಫೋಟೋವನ್ನು ಇಡಬಾರದು ಎಂಬ ಆದೇಶ ಎಲ್ಲಿಯೂ ಇಲ್ಲ. ಅಂತಹ ಸಂದರ್ಭದಲ್ಲಿ ಮಹಾತ್ಮ ಗಾಂಧೀಯವರ ಫೋಟೋ ಅವಕಾಶ ಇದ್ದರೆ, ಅಂಬೇಡ್ಕರ್ ಫೋಟೋ ಯಾಕೆ ಇಡಬಾರದು. ಬಿ.ಆರ್.ಅಂಬೇಡ್ಕರ್ ಅವರು ನಮ್ಮ ದೇಶದ ರಚನಾ ಸಭೆಯಲ್ಲಿ ಮಹತ್ತ್ರವಾದ ಪಾತ್ರವಹಿಸಿದ್ದಾರೆ” ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ನಾಗಮೋಹನ ದಾಸ್ ಅಭಿಪ್ರಾಯಪಡುತ್ತಾರೆ.