ದೇವನೂರರಿಗೆ ವೈಕಂ ಪ್ರಶಸ್ತಿ- ಪ್ರೊ.ರಾಜೇಂದ್ರ ಚೆನ್ನಿ
[‘ನ್ಯಾಯಪಥ’ ಡಿಸೆಂಬರ್ 16-ಜನವರಿ 15, 2025 ಸಂಚಿಕೆಯಲ್ಲಿ ಪ್ರಕಟವಾದ ಪ್ರೊ.ರಾಜೇಂದ್ರ ಚೆನ್ನಿ ಅವರ ಬರಹ]
ತಮಿಳುನಾಡು ಸರಕಾರವು ದೇವನೂರ ಮಹಾದೇವರಿಗೆ ವೈಕಂ ಪ್ರಶಸ್ತಿಯನ್ನು ನೀಡಿದ್ದು ನನ್ನ ದೃಷ್ಟಿಯಲ್ಲಿ ಅರ್ಥಪೂರ್ಣವಾಗಿದೆ ಹಾಗೂ ಸಾಂಕೇತಿಕವೂ ಆಗಿದೆ. ಏಕೆಂದರೆ ವೈಕಂ ಸತ್ಯಾಗ್ರಹದ ಸುದೀರ್ಘ ಹೋರಾಟದಲ್ಲಿ ಕೇರಳ ಮತ್ತು ತಮಿಳುನಾಡು ರಾಜ್ಯಗಳು(ಅಂದಿನ ಪ್ರಾಂತಗಳು) ಒಂದುಗೂಡಿದ್ದವು. ಇಂದಿನ ಕೇರಳದ ಅಂದಿನ ಅನೇಕ ಸ್ಥಳಗಳಿಂದ ಹೋರಾಟಗಾರರು ಮಾತ್ರವಲ್ಲ ರಾಜಕೀಯ ಮುಂದಾಳುಗಳು, ವೈಚಾರಿಕರು, ಕ್ರಿಯಾಶೀಲರು ಭಾಗವಹಿಸಿದರು. ತಮಿಳುನಾಡಿನ ಪೆರಿಯಾರ್ ಇ.ವಿ.ರಾಮಸ್ವಾಮಿಯವರು ಭಾಗವಹಿಸಿದ್ದು ಮಾತ್ರವಲ್ಲ ಆ ಚಳವಳಿಗೆ ಕ್ರಾಂತಿಕಾರಿ ಪ್ರೇರಣೆಯನ್ನು ನೀಡಿದರು. ತಮ್ಮ ಪತ್ನಿ ಹಾಗೂ ಸಂಬಂಧಿಕ ಮಹಿಳೆಯರನ್ನು ಕರೆತಂದು ಮಹಿಳೆಯರನ್ನು ಹೋರಾಟದಲ್ಲಿ ತೊಡಗಿಸಿದರು. ಇವೆಲ್ಲಾ ಘಟನೆಗಳು ನಡೆಯುತ್ತಿದ್ದಾಗ ಅಂದಿನ ಕರ್ನಾಟಕದಲ್ಲಿ ಕೂಡ ಹಿಂದುಳಿದ ವರ್ಗಗಳು ಹಾಗೂ ದಲಿತ ವರ್ಗಗಳಲ್ಲಿ ತಮ್ಮ ಸಾಮಾಜಿಕ ಅಸ್ತಿತ್ವದ ಅವಸ್ಥೆಯ ಬಗ್ಗೆ ಎಚ್ಚರ ಉಂಟಾಗಿತ್ತು. ಮಹಾರಾಷ್ಟ್ರ, ತಮಿಳುನಾಡು, ಕೇರಳದಲ್ಲಿ ನಡೆದಂತಹ ರ‍್ಯಾಡಿಕಲ್ ಚಳವಳಿಗಳು ಇಲ್ಲಿ ನಡೆಯದಿದ್ದರೂ ಮೈಸೂರು ರಾಜ್ಯದಲ್ಲಿ ಬ್ರಾಹ್ಮಣೇತರ ವರ್ಗಗಳು ರಾಜಕೀಯವಾಗಿ ತಮ್ಮ ಹಕ್ಕುಗಳನ್ನು ಮಂಡಿಸತೊಡಗಿದ್ದವು. ಇದಕ್ಕೆ ಪೂರಕವಾಗಿ ಮೈಸೂರಿನ ಮಹಾರಾಜರು ಮತ್ತು ಕೆಲವು ದಿವಾನರು ರಾಜಕೀಯವಾಗಿ ಅಲ್ಲದಿದ್ದರೂ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಅವರಿಗೆ ಅವಕಾಶ ಕಲ್ಪಿಸಲು ಸಿದ್ಧರಾಗಿದ್ದರು. ವೈಕಂ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಒಂದು ಕಡೆ ಭೂ ಒಡೆತನ ಮತ್ತು ಜಮೀನ್ದಾರಿ ಪದ್ಧತಿಯ ಶೋಷಣೆಗಳಿದ್ದರೆ ಇನ್ನೊಂದು ಕಡೆಗೆ ಅಸ್ಪೃಶ್ಯತೆಯ ಬಹುದೊಡ್ಡ ಪ್ರಶ್ನೆಯೂ ಇತ್ತು. ತ್ರಾವಣಕೋರ್ ಸಂಸ್ಥಾನವು ಸಾರ್ವಜನಿಕ ಬೀದಿಗಳನ್ನು ಎಲ್ಲರಿಗೂ ಮುಕ್ತಗೊಳಿಸಿದ್ದರೂ ಸನಾತನವಾದಿಗಳು ಉಗ್ರವಾಗಿ ಅದನ್ನು ವಿರೋಧಿಸಿದರು. ಅಲ್ಲದೆ ನ್ಯಾಯಾಲಯದಿಂದ ಬಂದ ತೀರ್ಪನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು ಅವರ್ಣೀಯರು ದೇವಸ್ಥಾನದ ಬೀದಿಗಳ ಮೇಲೆ, ಮುಖ್ಯ ಬೀದಿಗಳ ಮೇಲೆ ಬರದಂತೆ ನಿರ್ಬಂಧ ಹೇರಿದರು. ಕ್ರಾಂತಿಕಾರಿ ಅಯ್ಯನ್ ಕಾಳಿ ನಿರ್ಬಂಧಿತ ರಸ್ತೆಯ ಮೇಲೆ ಎತ್ತಿನ ಗಾಡಿಗಳನ್ನು ಓಡಿಸಿ ಇದನ್ನು ವಿರೋಧಿಸಿದರು.
ಕ್ರಮೇಣವಾಗಿ ಈ ಹೋರಾಟಕ್ಕೆ ಕಾಂಗ್ರೆಸ್ಸಿನ ಮತ್ತು ಶಿಕ್ಷಿತ ಮಧ್ಯಮ ವರ್ಗದ ಬೆಂಬಲವು ದೊರೆಯಿತು. ಆದರೆ ತ್ರಾವಣಕೋರ್ ಸಂಸ್ಥಾನವು ಹಿಂದೆ ಸರಿಯತೊಡಗಿತು. ಅಲ್ಲದೆ ಪ್ರತಿಭಟನಾಕಾರರ ಮೇಲೆ ಹಲ್ಲೆ, ದಸ್ತಗಿರಿ, ಜೈಲುವಾಸ ಇವುಗಳನ್ನು ಉಪಯೋಗಿಸಲಾಯಿತು. ಆ ಕಾಲದಲ್ಲಿ ಹರಿಜನ ಉದ್ಧಾರದ ಕಾರ್ಯಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ಆರಂಭಿಸಿದ್ದ ಗಾಂಧಿ ಕೂಡ ವೈಕಂ ಚಳವಳಿಯಲ್ಲಿ ಪ್ರಧಾನ ಪಾತ್ರವಹಿಸಿದರು. ಆದರೆ ಇದು ಹಿಂದು ಧರ್ಮದ ಆಂತರಿಕ ಸಮಸ್ಯೆ, ಇತರ ಧರ್ಮಿಯರು ಭಾಗವಹಿಸುವುದು ಬೇಡ, ಉಪವಾಸ ಸತ್ಯಾಗ್ರಹ ಬೇಡ, ಇಂಥ ನಿಬಂಧನೆಗಳನ್ನು ಅವರು ಒಡ್ಡಿದ್ದರಿಂದ ಚಳವಳಿ ಕ್ಷೀಣವಾಗಿ ಹೋಯಿತು. ಪೆರಿಯಾರ್ ಮತ್ತು ಅನೇಕ ಹೋರಾಟಗಾರರ ಶ್ರಮದಿಂದಾಗಿ ಕೊನೇ ಪಕ್ಷ ಕಾನೂನಾತ್ಮಕವಾಗಿ ಬೀದಿಗಳನ್ನು, ರಸ್ತೆಗಳನ್ನು ಮುಕ್ತಗೊಳಿಸಲಾಯಿತು.
ವೈಕಂ ಸತ್ಯಾಗ್ರಹವು ಸ್ಥಳೀಯವಾಗಿದ್ದರೂ ಅದು ಅಸಮಾನತೆ, ಅಸ್ಪೃಶ್ಯತೆ, ವರ್ಣ ವ್ಯವಸ್ಥೆಗಳ ಬಗ್ಗೆ ಮೂಲಭೂತವಾದ ಪ್ರಶ್ನೆಗಳನ್ನು ಮುಂದಿಟ್ಟಿತು. ಹಿಂದುಳಿದವರ, ದಲಿತರ ನಾಗರಿಕ ಹಾಗೂ ಸಾಮಾಜಿಕ ಹಕ್ಕುಗಳ ಪರವಾಗಿ ಅನೇಕ ಮುಂದಣ ಹೋರಾಟಗಳಿಗೆ ಮಾದರಿಯು ಆಯಿತು. ಈ ಹಿನ್ನೆಲೆಯಲ್ಲಿ ಈಗ ದೇವನೂರ ಮಹಾದೇವರಿಗೆ ವೈಕಂ ಪ್ರಶಸ್ತಿ ಬಂದಿದ್ದರಿಂದ ದಕ್ಷಿಣ ಭಾರತದ ಇನ್ನೊಂದು ರಾಜ್ಯವಾದ ಕರ್ನಾಟಕವೂ ಈ ಹೋರಾಟಗಳ ವಾರಸುದಾರಿಕೆಯನ್ನು ಪಡೆದಿದೆ ಎನ್ನುವುದರ ಸಾಂಕೇತಿಕ ಅಭಿವ್ಯಕ್ತಿಯೂ ಆಗಿದೆ. ಏಕೆಂದರೆ ಮಹಾರಾಷ್ಟ್ರದ ದಲಿತ ಪ್ಯಾಂಥರ್ ಹಾಗೂ ಇತರ ದಲಿತ ಸಂಘರ್ಷ ಸಮಿತಿಯ ಹೋರಾಟಗಳು ಅತ್ಯಂತ ಮಹತ್ವದ್ದಾಗಿವೆ. ಆಧುನಿಕ ಭಾರತದ ಚರಿತ್ರೆಯಲ್ಲಿ ಬಹು ಮಹತ್ವದ್ದಾಗಿವೆ. ಮಹಾದೇವರಿಗೆ ದೊರೆತ ಪ್ರಶಸ್ತಿ ಕರ್ನಾಟಕದ ದಲಿತ ಹೋರಾಟಗಳಿಗೆ ದೊರೆತ ಮನ್ನಣೆಯಾಗಿದೆ. ಕನ್ನಡದ ದಲಿತ ಸಾಹಿತ್ಯವು ಭಾರತೀಯ ಸಾಹಿತ್ಯದ ಶ್ರೇಷ್ಠ ಸಾಧನೆಗಳಲ್ಲಿ ಒಂದಾಗಿದೆಯೆಂದು ನಾನು ನಂಬಿದ್ದೇನೆ. ಮಹಾದೇವರ ಸೃಜನೇತರ ಬರಹಗಳು ದಲಿತ ಪ್ರೇಕ್ಷ್ಯದಿಂದ ಕೋಮುವಾದವನ್ನು ವಿರೋಧಿಸುವ ವೈಚಾರಿಕ ಮಾದರಿ ಒಂದನ್ನು ರೂಪಿಸಿವೆ. “ಎದೆಗೆ ಬಿದ್ದ ಅಕ್ಷರ” ಕೃತಿಯ ಬರಹಗಳು, ‘ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಕೃತಿ ಇವುಗಳು ಈ ವೈಚಾರಿಕ ಮಾದರಿಯ ಶಕ್ತಿಶಾಲಿ ಉದಾಹರಣೆಗಳಾಗಿವೆ. ಇತ್ತೀಚಿನ ವಿದ್ಯಮಾನಗಳು ಸ್ಪಷ್ಟಗೊಳಿಸಿದಂತೆ ಬಲಪಂಥೀಯ ರಾಜಕಾರಣದ ಮೊದಲ ಹಾಗೂ ಅಂತಿಮ ಗುರಿಯು ದಲಿತರನ್ನು ಕೂಡ ಮುಸ್ಲಿಮ್‌ರಂತೆ ಇಲ್ಲದಂತಾಗಿಸುವುದೇ ಆಗಿದೆ. ಈ ಪಂಥದ ಮೂಲ ಸಂಸ್ಥೆಯು ಸ್ಥಾಪನೆಗೊಂಡ ನೂರು ವರ್ಷಗಳಲ್ಲಿ ಒಂದೇ ಒಂದು ಸಾರಿಯು ಈ ದಲಿತ ದ್ವೇಷವನ್ನು ತ್ಯಜಿಸಿಲ್ಲ. ಎಲ್ಲಾ ಹಿಂದುಗಳು ಒಂದೇ ಎನ್ನುವುದು ಕೇವಲ ಸಂಖ್ಯಾಬಲದ ಲೆಕ್ಕಚಾರದಿಂದ. ಮೂಲತಃ ವರ್ಣ ವ್ಯವಸ್ಥೆ, ಜಾತಿ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ಬಲಪಂಥೀಯ ವೈಚಾರಿಕತೆಯು ದಲಿತರನ್ನು ಸಿನಿಕತನದಿಂದ ಬಳಸಿಕೊಳ್ಳಬಲ್ಲದೇ ಹೊರತು ತನ್ನ ಮಾನಸಿಕ ಅಸ್ಪೃಶ್ಯತೆಯನ್ನು ಎಂದೂ ತ್ಯಜಿಸುವುದಿಲ್ಲ. ಹೀಗಾಗಿ ವೈಕಂ ಸತ್ಯಾಗ್ರಹದ ಮೂಲಕ ಅಂಥ ಹೋರಾಟಗಳ ಮೂಲಕ, ರೂಪುಗೊಂಡ ದಲಿತ ಪ್ರಜ್ಞೆಯು ಇಂದು ತನ್ನ ಶತ್ರುವಾದ ಬಲಪಂಥೀಯ ವೈಚಾರಿಕತೆಯನ್ನು, ಕೋಮುವಾದವನ್ನು ಧಿಕ್ಕರಿಸಿ ಈಗ ಇನ್ನೊಂದು ಅರ್ಥಪೂರ್ಣ ಹಂತವನ್ನು ತಲುಪಬೇಕಾಗಿದೆ. ಇಂಥ ಅವಶ್ಯಕವಾದ ದಲಿತ ಪ್ರಜ್ಞೆಯ ಒಂದು ಮುಖ್ಯ ಆಕರವೆಂದರೆ ಮಹಾದೇವರ ಬರಹ, ವ್ಯಕ್ತಿತ್ವ ಮತ್ತು ಹೋರಾಟಗಳು. ಹಾಗೆಂದ ಮಾತ್ರಕ್ಕೆ ಮಹಾದೇವರನ್ನು ಏಕನಾಯಕರು ಎಂದು ನಾನು ಪರಿಗಣಿಸುವುದಿಲ್ಲ. ಕರ್ನಾಟಕದ ದಲಿತ ಹೋರಾಟಗಳು ಯಾವಾಗಲೂ ಸಮುದಾಯ ಕೇಂದ್ರಿತವಾಗಿಯೇ ಬೆಳೆದುಕೊಂಡಿವೆ. ಹೀಗಾಗಿ ನನಗೆ ಅನ್ನಿಸುವುದೆಂದರೆ ವೈಕಂ ಸತ್ಯಗ್ರಹದಿಂದ ಇಲ್ಲಿಯವರೆಗಿನ ಅಸಮಾನತೆಯ ವಿರುದ್ಧದ ಹೋರಾಟದಲ್ಲಿ ಮಹಾದೇವರು ಪ್ರತಿನಿಧಿಸುವ ಕನ್ನಡ ದಲಿತ ಪ್ರಜ್ಞೆಯು ಒಂದು ಕೊಂಡಿ. ನಮ್ಮ ಸಾಂಸ್ಕೃತಿಕ ನೆನಪುಗಳು ಕಳೆದುಹೋಗದಿದ್ದರೆ ಚರಿತ್ರೆಯ ಅನೇಕ ಧಾರೆಗಳು ನಮ್ಮೆದುರಿಗೆ ತೆರೆದುಕೊಳ್ಳುತ್ತದೆ.
ಬಾಬಾ ಸಾಹೇಬರು ಮಹಾಡ್ ಕೆರೆಯ ಹೋರಾಟದಲ್ಲಿ ಕೂಡ ತಾತ್ವಿಕವಾಗಿ ಅಸ್ಪೃಷ್ಯತೆಯ ವಿರುದ್ಧ ಹಾಗೂ ದಲಿತರ ನಾಗರಿಕ ಹಕ್ಕುಗಳ ಪರವಾಗಿ(Civil Rights) ಅದನ್ನು ರೂಪಿಸಿದರು. ಅಂದರೆ ನಾಗರಿಕರೂ ಅಲ್ಲ, ಮನುಷ್ಯ ಜೀವಿಗಳು ಅಲ್ಲ ಎನ್ನುವಂತೆ ಸಾವಿರಾರು ವರ್ಷಗಳಿಂದ ಅದೃಶ್ಯವಾಗಿಸಲ್ಪಟ್ಟ ಸಮುದಾಯಗಳು ತಾವು ನಾಗರಿಕರು ತಮಗೂ ನಾಗರಿಕ ಹಕ್ಕುಗಳಿವೆ ಎನ್ನುವುದನ್ನು ಅನುಭವಿಸಿದ್ದು ಭಾರತದಲ್ಲಿ ವಸಾಹತುಶಾಹಿಯು ತಂದ ಬದಲಾವಣೆಗಳಿಂದ, ಇಲ್ಲಿಯ ಅನುಭಾವಿ ಪರಂಪರೆಗಳು ಪರಿಕಲ್ಪಿಸಿದ ಆಧ್ಯಾತ್ಮಿಕ ಸಮಾನತೆಯ ಪರಿಭಾಷೆಯೇ ಬೇರೆಯಾಗಿತ್ತು. ವೈಕಂ ಚಳವಳಿ, ಮಹಾಡ್ ಸತ್ಯಾಗ್ರಹ ಇವೆರಡೂ ಪ್ರಧಾನವಾಗಿ ಬಳಸಿಕೊಂಡಿದ್ದು ನಾಗರಿಕ ಹಕ್ಕುಗಳ ಪರಿಭಾಷೆಯನ್ನೇ. ಮಹಾಡ್ ಕೆರೆ ಸಾರ್ವಜನಿಕವೆಂದು ವಸಾಹತುಶಾಹಿ ನ್ಯಾಯ ವ್ಯವಸ್ಥೆಯು ಘೋಷಿಸಿತ್ತು. ಮುಂದೆ ಸನಾತನಿಗಳು ಇದನ್ನು ಖಾಸಗಿ ಎಂದು ಪರಿಷ್ಕರಣೆ ಮಾಡಿಸಿಕೊಂಡರು. ನಾಸಿಕ್‌ನ ಕಾಳಾರಾಮ್ ದೇವಾಲಯ ಹೋರಾಟದಲ್ಲಿ ದೇವಾಲಯಕ್ಕೆ ಹೋಗುವ ರಸ್ತೆ ಖಾಸಗಿ ಎಂದು ವಾದಿಸಲಾಯಿತು. ವೈಕಂನಲ್ಲಿ ಕೂಡ ಈ ಪರಿಭಾಷೆಯಲ್ಲಿಯೇ ವಾದವಿವಾದಗಳು ನಡೆದವು. ಸನಾತನಿಗಳಿಗೆ ಅರ್ಥವಾಗಿದ್ದೆಂದರೆ ಆಧುನಿಕ ನ್ಯಾಯವ್ಯವಸ್ಥೆಯೊಳಗೆಯೆ ನಾಗರಿಕ ಹಕ್ಕುಗಳಿಗೆ ಒತ್ತಾಯಿಸುವ ಅವಕಾಶಗಳಿದ್ದವು. ತಾರ್ಕಿಕವಾಗಿ ಇವು ಅಸಮಾನತೆಯ ಸನಾತನ ಸಂಪ್ರದಾಯಗಳನ್ನು ಪ್ರಶ್ನಿಸುವ ಶಕ್ತಿ ಹೊಂದಿದ್ದವು. ಆದ್ದರಿಂದ ಎರಡೂ ಚಳವಳಿಗಳಲ್ಲಿ ಸನಾತನಿಗಳು ಹಿಂಸೆಯನ್ನು ಬಳಸಿಕೊಂಡರು. ಇಂದಿಗೂ ಬಲಪಂಥೀಯರು ಸಂವಿಧಾನವನ್ನು ಬದಲಾಯಿಸಲು ಅಥವಾ ನಿಷ್ಕ್ರಿಯಗೊಳಿಸಲು ಮಾಡುತ್ತಿರುವ ಪ್ರಯತ್ನದ ಹಿಂದೆ ಇದೇ ಬಗೆಯ ಧೋರಣೆ ಇದೆ. ಸಂವಿಧಾನದೊಳಗೆ ಅಡಕವಾಗಿರುವ ಮೌಲ್ಯಗಳು ಮತಾಂಧತೆ, ಕೋಮುವಾದಗಳಿಗೆ ವಿರುದ್ಧವಾಗಿವೆ. ಅಮಿತ್ ಶಾಗೆ ಅಂಬೇಡ್ಕರ್ ಮೇಲೆ ಸಿಟ್ಟು ಬರುವುದು ಏಕೆ ಎಂಬುದನ್ನು ಇದು ವಿವರಿಸುತ್ತದೆ. ಭಾರತೀಯ ಸಂವಿಧಾನವು ಸಾಮಾಜಿಕ ನ್ಯಾಯ ಹಾಗೂ ಸಮಾನತೆಗಳನ್ನು ನಾಗರಿಕ ಹಕ್ಕುಗಳ ಪರಿಭಾಷೆಯಲ್ಲಿಯೇ ವಿವರಿಸುತ್ತದೆ.
“ಈಗ ಭಾರತದಲ್ಲಿ ವರ್ತಮಾನದ ಸಂವಿಧಾನವೇನೋ ಪಾಪದವರನ್ನು ಮೇಲೆತ್ತಲು ಕೈಚಾಚಿದೆ. ಆದರೆ ಭೂತಕಾಲದ ಸಂವಿಧಾನ ಕಾಲೆಳೆಯುತ್ತದೆ. ಈ ಪಾಪದವರೂ ಎಚ್ಚರದಲ್ಲಿಲ್ಲ. ಸಂವಿಧಾನದ ಆಶಯಗಳ ಕಾಲೆಳೆಯುವ ಪಾಪಿಷ್ಠರಾದರೋ ಸಮಾಜದಲ್ಲಿ ಗಣ್ಯರೆನಿಸಿಕೊಂಡಿದ್ದಾರೆ. ಇವರ ವಂಶಸ್ಥರೇ ಇವರ ಪ್ರಭಾವದಲ್ಲಿರುವವರೇ ನಿರ್ಧರಿಸುವವರು ನಿರ್ವಹಿಸುವವರು ಆಗಿದ್ದಾರೆ. ಸಂವಿಧಾನದ ಆಸೆಗಳು ಈಡೇರುವುದಾದರೂ ಹೇಗೆ” (ಎದೆಗೆ ಬಿದ್ದ ಅಕ್ಷರ- ಪು.285)
ವೈಕಂ ಸತ್ಯಾಗ್ರಹದ ಏಳುಬೀಳುಗಳನ್ನು ನೆನಪಿಸಿಕೊಂಡಾಗ ಅನೇಕ ವೈರುಧ್ಯಗಳು ಕಂಡು ಬರುತ್ತವೆ. ಅಲ್ಲದೆ ಚಳವಳಿಗಳ ಸೋಲು ಕೂಡ. ಕೇರಳದ ಆ ಕಾಲದ ಚಳವಳಿಗಳಲ್ಲಿ ಮೂಲಭೂತ ಪ್ರಶ್ನೆ ಭೂಮಿಯ ಒಡೆತನದ್ದಾಗಿತ್ತು. ಏಕೆಂದರೆ ಅಸ್ಪೃಶ್ಯತೆಯನ್ನು ಧರ್ಮವಾಗಿ ಆಚರಿಸುತ್ತಿದ್ದ ಬ್ರಾಹ್ಮಣ ವರ್ಗವು ಅಲ್ಲಿ ಭೂಒಡೆತನವನ್ನು ಹೊಂದಿತ್ತು. ದಲಿತರು ಭೂರಹಿತರಾಗಿದ್ದರು. ಭಾರತೀಯ ಇತಿಹಾಸದ ಅನೇಕ ಹಂತಗಳಲ್ಲಿ ಕಂಡ ಹಾಗೆ ಆ ಸಂದರ್ಭದಲ್ಲಿ ಕೂಡ ಧಾರ್ಮಿಕ ಅಧಿಕಾರ, ವರ್ಣ ಶ್ರೇಷ್ಠತೆ ಇವುಗಳ ಬುನಾದಿಯಲ್ಲಿ ಇದ್ದದ್ದು ಭೂಒಡೆತನವೇ. ಆದರೆ ಸಾಮಾಜಿಕ ಸಮಾನತೆಯ ಹೋರಾಟದಲ್ಲಿ ಈ ಸಮಸ್ಯೆಯು ಹಿಂದೆ ಸರಿಯಿತೆ? ಕೇರಳ ಪ್ರಾದೇಶಿಕ ಕಾಂಗ್ರೆಸ್ಸು ಸಮಾಜದ ಮೂಲ ರಚನೆಯನ್ನು ಬದಲಾಯಿಸುವ ಕಲ್ಪನೆಯನ್ನೇ ಹೊಂದಿರದಿದ್ದರೂ ಅಸ್ಪೃಶ್ಯತೆಯ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿತ್ತು. ಸವರ್ಣೀಯರ ಮನಃಪರಿವರ್ತನೆಯ ಗಾಂಧಿ ಮಾದರಿಯೂ ಇಲ್ಲಿ ಕೆಲಸ ಮಾಡಲಿಲ್ಲ. ಹೀಗಾಗಿ ಈ ಹೋರಾಟಗಳು, Culturalist ಎಂದು ಕರೆಯಬಹುದಾದ ಸೀಮಿತ ವಲಯದಲ್ಲಿಯೇ ಕೆಲಸ ಮಾಡಿದವೇ? ಅದೇ ಹೊತ್ತಿಗೆ ಸಾಮಾಜಿಕ ಸಮಾನತೆಯ ಸಾಮುದಾಯಿಕ ಆಶಯಗಳಿಗೂ ಸಾಮಾಜಿಕ ಬದಲಾವಣೆಯ ಚಾಲಕ ಶಕ್ತಿ ಇರುತ್ತದೆಯಲ್ಲವೆ? ಇದು ಸುಲಭವಾಗಿ ಬಗೆಹರಿಯುವ ಪ್ರಶ್ನೆ ಅಲ್ಲ. ಏಕೆಂದರೆ ವೈಕಂ ಸತ್ಯಾಗ್ರಹದ ಸಂದರ್ಭದಲ್ಲಿ ಗಾಂಧಿಯವರೊಂದಿಗೆ ಸಂಭಾಷಣೆ ನಡೆಸಿದ ನಾರಾಯಣ ಗುರು ಅವರು ಒಬ್ಬ ಸಂತರಾಗಿಯೇ ಹಿಂದುಳಿದ ವರ್ಗಗಳಿಗೆ ನೀಡಿದ ಸಾಮಾಜಿಕ ಅಸ್ಪೃಶ್ಯತೆಯು ಇಂದಿಗೂ ಕ್ರಿಯಾಶೀಲವಾದ ಚಾಲಕ ಶಕ್ತಿಯಾಗಿದೆ. ವಿವೇಕಾನಂದರನ್ನು ಹಿಂದುತ್ವದ ಹರಿಕಾರರು ಎಂದು ಬಿಂಬಿಸುವ ದುಷ್ಟ ಪ್ರಯತ್ನವನ್ನು ಆಚೆಗಿಟ್ಟು ನೋಡಿದರೆ ಅವರ ಚಿಂತನೆಯು ಶೂದ್ರ ಸಮುದಾಯಗಳಿಗೆ ನೀಡಿದ ಚೈತನ್ಯವೂ ಸಾಮಾಜಿಕ ಬದಲಾವಣೆಯ ಚಾಲಕ ಶಕ್ತಿಯಾಗಿತ್ತು.
ಹಾಗೆಯೇ ಕರ್ನಾಟಕದಲ್ಲಿ ದಲಿತ ಅಸ್ಮಿತೆಯನ್ನು ರೂಪಿಸಿದ ಪ್ರಮುಖರಲ್ಲಿ ಮಹಾದೇವರು ವಿಶಿಷ್ಟವಾಗಿದ್ದಾರೆ. ಅವರ ಸೃಜನಶೀಲ ಬರಹಗಳಲ್ಲಿ ದಲಿತರು ಕೇವಲ ಶೋಷಿತ ಬಲಿಪಶುಗಳು ಮಾತ್ರವಲ್ಲ, ಅಪಾರವಾದ ಕ್ರಿಯಾಶೀಲತೆಯುಳ್ಳ ಅದ್ಭುತ ಮನುಷ್ಯ ವ್ಯಕ್ತಿಗಳಾಗಿದ್ದಾರೆ. ದಲಿತರನ್ನಾಗಿಸಿದ ಸಾಮಾಜಿಕ ಅನಿಷ್ಟಗಳನ್ನು ಕಡೆಗಾಣಿಸದೇ ಆ ಅವಸ್ಥೆಯನ್ನು ಮಿರುವ ಸಾಧ್ಯತೆಗಳನ್ನು ಶೋಧಿಸಿದ್ದಾರೆ. ಗಾರ ಸಿದ್ದಮಾವನು ದಲಿತ ನಾಯಕರಿಗೆ ಸವಾಲಾಗುವುದು ಈ ಕಾರಣಕ್ಕಾಗಿಯೇ. ಹಾಗೆಯೆ ಗಾಂಧಿಯನ್ನು ಪ್ರಶ್ನಿಸುತ್ತಲೇ ಅವರು ಸಾಂಕೇತಿಸುವ ಸಾಧ್ಯತೆಗಳನ್ನು ಮಹಾದೇವ ಪರೀಕ್ಷಿಸಬಲ್ಲರು. ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ಆಳಕ್ಕಿಳಿದು ವಿಮರ್ಶಿಸಬಲ್ಲರು. ಅವರನ್ನು ಕನ್ನಡದ Public intellectual ಎಂದು ಕರೆದಿರುವುದು ಆ ಪದಕ್ಕಿರುವ ಅರ್ಥಗಳ ಆಚೆಗೆ ನಮ್ಮನ್ನು ಕರೆದೊಯ್ಯುತ್ತದೆ.
ನಮ್ಮ ಸಾಹಿತ್ಯವೆನ್ನುವ ಸಂಸ್ಥೆ, ಚರಿತ್ರೆಯ ಬರಹಗಳು, ವಿಶ್ವವಿದ್ಯಾಲಯಗಳು, ನಾಗರಿಕ ಸಮುದಾಯ ಇವೆಲ್ಲವು ಸೇರಿ ಮಾಡುತ್ತಿರುವುದೆಂದರೆ ದಲಿತ ಹೋರಾಟಗಳನ್ನು ಅದೃಶ್ಯಗೊಳಿಸುವ ಅಂಚಿಗೆ ತಳ್ಳುವ ಪ್ರಯತ್ನವಾಗಿದೆ. ಆದ್ದರಿಂದ ಜ್ಯೋತಿಬಾ ಫುಲೆ, ವೈಕಂ ಸತ್ಯಾಗ್ರಹ, ಮಹಾರಾಷ್ಟçದ ದಲಿತ ಚಳವಳಿಗಳು, ದಲಿತ ಸಂಘರ್ಷ ಸಮಿತಿ, ಬಿ.ಕೃಷ್ಣಪ್ಪ, ಸಿದ್ಧಲಿಂಗಯ್ಯ, ಮಹಾದೇವ ಇವರೆಲ್ಲ ಸಹಭಾಗಿಗಳಾಗಿರುವ ಈ ಇನ್ನೊಂದು ಚರಿತ್ರೆಯನ್ನು ಮುನ್ನಲೆಗೆ ತರುತ್ತಲೇ ಇರಬೇಕಾಗಿರುತ್ತದೆ. ಆ ಕೆಲಸಕ್ಕೆ ಮಹಾದೇವರಿಗೆ ಬಂದ ಪ್ರಶಸ್ತಿ ಒಂದು ಪ್ರೇರಣೆ ಆಗಲಿ.