ವೈಕಂ: ಶತಮಾನದ ಮಹಾಮಾರ್ಗ-ಚ.ಹ.ರಘುನಾಥ

[18.12.2024ರ ಪ್ರಜಾವಾಣಿ “ಪಡಸಾಲೆ” ಅಂಕಣದಲ್ಲಿ ಚ.ಹ.ರಘುನಾಥ ಅವರ ಬರಹ ]
ಭಾರತದ ಜಾತಿವ್ಯವಸ್ಥೆಯ ಕರಾಳ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವ ದಿಸೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಾಗ ಬಳಸುವ ‘ಬಾವಿಯ ನೀರಿನ ರೂಪಕ’ ಮುಖ್ಯವಾದುದು. ಬಾವಿಯ ನೀರಿನ ಮೇಲಿನ ಕಸವನ್ನು ಬಿಂದಿಗೆಯಿಂದ ಅತ್ತಿತ್ತ ಸರಿಸಿದಾಗ ನೀರು ತಿಳಿಗೊಳ್ಳುತ್ತದೆ. ಸ್ವಲ್ಪ ಸಮಯದ ಅನಂತರ ನೀರನ್ನು ಕಸ ಮತ್ತೆ ಆವರಿಸಿಕೊಳ್ಳುತ್ತದೆ. ಗಾಂಧಿ, ಬಸವಣ್ಣನವರಂಥ ಸಮಾಜ ಸುಧಾರಕರ ಜಾತಿ ನಿರ್ಮೂಲನದ ಪ್ರಯತ್ನಗಳೂ ಬಾವಿ ನೀರು ತಿಳಿಯಾಗುವ ಅಲ್ಪಕಾಲಿಕ ಪ್ರಯತ್ನಗಳಷ್ಟೇ ಎನ್ನುವುದು ಸಿದ್ದರಾಮಯ್ಯನವರು ಕಟ್ಟಿಕೊಡುವ ರೂಪಕದ ಧ್ವನಿ. ಹೀಗೆ ಜಾತಿ ಕಸವನ್ನು ಸರಿಸಲು ಪ್ರಯತ್ನಿಸಿದ ಆಧುನಿಕ ಭಾರತದ ಬಹು ಮುಖ್ಯ ವಿದ್ಯ ಮಾನಗಳಲ್ಲೊಂದು ಕೇರಳ ನೆಲದ ‘ವೈಕಂ ಸತ್ಯಾಗ್ರಹ.’
ನೂರು ವರ್ಷಗಳ ಹಿಂದಿನ ಕೇರಳದ ತಿರುವಾಂಕೂರು ವಿರೋಧಾಭಾಸಗಳ ಸಮೀಕರಣದಂತಿದ್ದ ಸಂಸ್ಥಾನ. ಒಂದೆಡೆ, ದೇಶದಲ್ಲೇ ಅತಿ ಹೆಚ್ಚಿನ ಸಾಕ್ಷರತೆ ಹಾಗೂ ಆರೋಗ್ಯ ಜಾಗೃತಿಯು ಸಂಸ್ಥಾನಕ್ಕೆ ಹೆಮ್ಮೆಯ ಸಂಗತಿಯಾಗಿತ್ತು. ಅದೇಕಾಲಕ್ಕೆ, ಅಲ್ಲಿನ ಜಾತಿವ್ಯವಸ್ಥೆಯು ಸಾಮಾಜಿಕವಾಗಿ ದುರ್ಬಲವಾದ ವರ್ಗಗಳ ಉಸಿರುಗಟ್ಟಿಸುವಂತಿತ್ತು. ಜಾತಿವ್ಯಸನದ ರಾಡಿಯಿಂದಾಗಿಯೇ ವಿವೇಕಾನಂದರ ಕಣ್ಣಿಗೆ ಇಡೀ ಕೇರಳ ಹುಚ್ಚಾಸ್ಪತ್ರೆಯಾಗಿ ಕಾಣಿಸಿತ್ತು.
ಕೇರಳದ ವೈಕಂನಲ್ಲಿನ ಶಿವ ದೇಗುಲ ಧರ್ಮದ ಹೆಸರಿನಲ್ಲಿ ಜಾತಿ ತಾರತಮ್ಯವನ್ನು ಆಚರಿಸುವವರಿಗೆ ಪ್ರಯೋಗಶಾಲೆಯಂತಿದ್ದ ಸ್ಥಳ. ಮಂದಿರಕ್ಕೆ ಪ್ರವೇಶ ಮಾತ್ರವಲ್ಲ, ದೇಗುಲವನ್ನು ಸಂಪರ್ಕಿಸುವ ರಸ್ತೆಗಳನ್ನು ಪ್ರವೇಶಿಸಲೂ ಅಸ್ಪೃಶ್ಯರಿಗೆ ಅವಕಾಶವಿರಲಿಲ್ಲ. 1865ರಲ್ಲಿ ಜಾತಿ–ಧರ್ಮದ ಭೇದವಿಲ್ಲದೆ ಎಲ್ಲ ನಾಗರಿಕರೂ ಸಾರ್ವಜನಿಕ ರಸ್ತೆಗಳನ್ನು ಬಳಸಬಹುದೆಂದು ತಿರುವಾಂಕೂರು ಸರ್ಕಾರ ಆದೇಶ ನೀಡಿತು. ಆದರೆ, ಸರ್ಕಾರದ ನಿರ್ಧಾರವನ್ನು ಸಂಪ್ರದಾಯವಾದಿಗಳು ವಿರೋಧಿಸಿದರು. ಜಾತಿಪದ್ಧತಿ ತಿಳಿಗೊಳಿಸುವ ಆದೇಶಗಳನ್ನು ಉಲ್ಲಂಘಿಸುವ ಸಂಪ್ರದಾಯವಾದಿಗಳಿಗೆ ಶಿಕ್ಷೆ–ದಂಡ ವಿಧಿಸುವ ಸರ್ಕಾರದ ಪ್ರಯತ್ನಗಳೂ ಫಲಕೊಡಲಿಲ್ಲ. ಪರ–ವಿರೋಧದ ಹಗ್ಗಜಗ್ಗಾಟದ ನಡುವೆ 1884ರಲ್ಲಿ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು. ಸಾರ್ವಜನಿಕ ರಸ್ತೆಗಳನ್ನು ‘ರಾಜ ಮಾರ್ಗ’ ಹಾಗೂ ‘ಗ್ರಾಮ ಮಾರ್ಗ’ಗಳೆಂದು ಪ್ರತ್ಯೇಕಿಸಿದ ನ್ಯಾಯಾಲಯ, ರಾಜ ಮಾರ್ಗಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶ ನಿರ್ಬಂಧಿಸಿತು. ಹೈಕೋರ್ಟ್‌ನ ರಾಜಿವ್ಯವಸ್ಥೆಯೂ ಸಂಪ್ರದಾಯವಾದಿಗಳಿಗೆ ಸಮಾಧಾನ ತರಲಿಲ್ಲ.
ಸರ್ಕಾರದ ಅಧೀನದಲ್ಲಿದ್ದ ಹಾಗೂ ನಂಬೂದಿರಿ ಬ್ರಾಹ್ಮಣರು ನಿರ್ವಹಿಸುತ್ತಿದ್ದ ವೈಕಂ ದೇಗುಲದ ಸುತ್ತಮುತ್ತಲಿನ ರಸ್ತೆಗಳಿಗೆ, ‘ಇಲ್ಲಿಂದ ಮುಂದೆ ಕೆಳವರ್ಗದ ಜನ ಪ್ರವೇಶವಿಲ್ಲ’ ಎಂದು ಸೂಚನಾಫಲಕ ಹಾಕುವುದರೊಂದಿಗೆ ಜಾತಿವಾದಿಗಳ ಅಸಹನೆ ಸ್ಫೋಟಗೊಂಡಿತು. ಇದರ ಇನ್ನೊಂದು ತುದಿಗೆ, ಜಾತಿ ದೌರ್ಜನ್ಯಗಳನ್ನು ವಿರೋಧಿಸುವವರು ಸಂಘಟನೆ ಗೊಳ್ಳತೊಡಗಿದರು. 1904ರ ವೇಳೆಗೆ ‘ಶ್ರೀ ಮೂಲಂ ಪ್ರಜಾಸಭಾ’ ಅಸೆಂಬ್ಲಿಯಲ್ಲಿ ಜಾತಿ ತಾರತಮ್ಯ ವಿರೋಧದ ದನಿಗಳು ಮೊಳಗಿದವು. ಕುಮಾರನ್ ಅಶಾನ್, ಸಿ.ವಿ. ಕುಂಜಿರಾಮನ್, ಟಿ.ಕೆ. ಮಾಧವನ್, ಅಯ್ಯನ್ ಕಾಳಿ, ಟಿ.ಟಿ. ಕೇಶವನ್ ಶಾಸ್ತ್ರಿಗಳಂಥವರು ಅಸೆಂಬ್ಲಿಯ ಭಾಗ ವಾದುದರಿಂದಾಗಿ, ಜಾತಿಶೋಷಣೆಯ ಧ್ವನಿ ಅಧಿಕಾರ ಕೇಂದ್ರದೊಳಗೂ ಗಟ್ಟಿಯಾಗಿ ಕೇಳುವಂತಾಯಿತು.
ಕಾಂಗ್ರೆಸ್ ಹಾಗೂ ಗಾಂಧೀಜಿ ಪ್ರವೇಶದೊಂದಿಗೆ ವೈಕಂ ಸತ್ಯಾಗ್ರಹಕ್ಕೆ ರಾಜಕೀಯ ಶಕ್ತಿ ದೊರಕಿತು. 1923ರ ಡಿ. 23ರಂದು ಕಾಕಿನಾಡದಲ್ಲಿ ನಡೆದ‌ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ವೈಕಂ ಸತ್ಯಾಗ್ರಹದ ಕುರಿತು ಟಿ.ಕೆ. ಮಾಧವನ್ ಮಾತನಾಡಿದರು. ಸತ್ಯಾಗ್ರಹ ವನ್ನು ಬೆಂಬಲಿಸುವ ನಿರ್ಣಯವನ್ನು ಸಭೆ ಕೈಗೊಂಡಿತು.
ವೈಕಂ ಸತ್ಯಾಗ್ರಹ ಅಹಿಂಸೆಯಿಂದ ಕೂಡಿರಬೇಕೆಂದು ಗಾಂಧೀಜಿ ನಿರ್ದೇಶಿಸಿದ್ದರು. ಸ್ವಾತಂತ್ರ್ಯ ಚಳವಳಿಯ ಅಸಹಕಾರ ಹಾಗೂ ಸತ್ಯಾಗ್ರಹ ಗುಣಗಳು ವೈಕಂ ಚಳವಳಿಯ ಭಾಗವೂ ಆದವು. 1924ರ ಮಾರ್ಚ್ 30ರಂದು ಸತ್ಯಾಗ್ರಹ ಅಧಿಕೃತವಾಗಿ ಆರಂಭಗೊಂಡಿತು. ಏಪ್ರಿಲ್ 12ರಂದು ತಮಿಳುನಾಡಿನ ಪೆರಿಯಾರ್ (ಎ.ವಿ. ರಾಮಸ್ವಾಮಿ) ವೈಕಂಗೆ ಆಗಮಿಸಿ, ಸತ್ಯಾಗ್ರಹದ ತೀವ್ರತೆ ಹೆಚ್ಚಿಸಿದರು. 1925ರ ಮಾರ್ಚ್‌ನಲ್ಲಿ ಕೇರಳಕ್ಕೆ ಭೇಟಿ ನೀಡಿದ ಗಾಂಧೀಜಿ, ರಾಜಕುಟುಂಬದ ಸದಸ್ಯರು, ನಾರಾಯಣಗುರುಗಳು ಹಾಗೂ ಆಡಳಿತ ಪ್ರತಿನಿಧಿಗಳು ಸೇರಿದಂತೆ ಹಲವರೊಂದಿಗೆ ಮಾತುಕತೆ ನಡೆಸಿದರು.
ಹಲವರ ಸತತ ಪ್ರಯತ್ನಗಳಿಂದಾಗಿ ಸರ್ಕಾರ ಹಾಗೂ ಸಂಪ್ರದಾಯವಾದಿಗಳು ತಮ್ಮ ಪಟ್ಟು ಸಡಿಲಿಸುವುದು ಅನಿವಾರ್ಯವಾಯಿತು. ದೇಗುಲದ ರಸ್ತೆಗಳನ್ನು ದಲಿತರಿಗೆ ನಿರ್ಬಂಧಿಸುವ ಫಲಕಗಳನ್ನು ತೆಗೆದುಹಾಕಲಾಯಿತು. ‘603 ದಿನಗಳ ವೈಕಂ ಸತ್ಯಾಗ್ರಹ ಯಶಸ್ವಿಯಾಗಿದೆ’ ಎಂದು 1925ರ ನವೆಂಬರ್ 23ರಂದು ‘ಸತ್ಯಾಗ್ರಹ ಆಶ್ರಮ’ ಪ್ರಕಟಣೆ ಹೊರಡಿಸುವುದರೊಂದಿಗೆ ಬಹು ದೊಡ್ಡ ಆಂದೋಲನವೊಂದು ಕೊನೆಗೊಂಡಿತು.
ಅಸ್ಪೃಶ್ಯತೆ ನಿವಾರಣೆಯ ಆಶಯವನ್ನು ಸ್ವಾತಂತ್ರ್ಯ ಚಳವಳಿಯ ಭಾಗವಾಗಿಸಿದ ವೈಕಂ ಸತ್ಯಾಗ್ರಹವು ದೇಶದ ವಿವಿಧ ಭಾಗಗಳಲ್ಲಿ ದಲಿತರಿಗೆ ದೇವಾಲಯಗಳ ಪ್ರವೇಶ ದೊರಕಿಸಿಕೊಡುವ ಚಳವಳಿಗಳಿಗೆ ಮುನ್ನುಡಿ ಬರೆಯಿತು. ಕೆಲವು ಮಿತಿಗಳ ನಡುವೆಯೂ ‘ವೈಕಂ ಸತ್ಯಾಗ್ರಹ’ಕ್ಕೆ ಚಾರಿತ್ರಿಕ ಮಹತ್ವವಿದೆ. ಈ ಸತ್ಯಾಗ್ರಹವು ಮುಂದಿನ ದಿನಗಳಲ್ಲೂ ದೇಶದ ವಿವಿಧ ಭಾಗಗಳಲ್ಲಿ ಜಾತಿ ವಿರೋಧದ ದನಿಗಳು ಕೇಳಿಸಲಿಕ್ಕೆ ಪ್ರೇರಣೆ ಒದಗಿಸಿದ್ದನ್ನು ಗಮನಿಸಬೇಕಾಗಿದೆ. ಆಧುನಿಕ ಭಾರತದ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಮೊದಲ ದನಿಯಾಗಿ, ಈಗಲೂ ಅನುರಣನಗೊಳ್ಳುತ್ತಿರುವ ದನಿಯಾಗಿ ‘ವೈಕಂ ಸತ್ಯಾಗ್ರಹ’ ಮುಖ್ಯವಾದುದು.
ವೈಕಂ ಸತ್ಯಾಗ್ರಹದ ಶತಮಾನೋತ್ಸವ ಸ್ಮರಣೆಗಾಗಿ ತಮಿಳುನಾಡು ಸರ್ಕಾರ ನೀಡಿದ ಪ್ರಶಸ್ತಿ ಕನ್ನಡ ಲೇಖಕ ದೇವನೂರ ಮಹಾದೇವ ಅವರಿಗೆ ಸಂದಿರುವುದು ಕುತೂಹಲಕರ ವಿದ್ಯಮಾನ. ಸಮಾಜ ಸುಧಾರಣೆ ಹಂಬಲದ ಶತಮಾನ ಪ್ರಾಯದ ಕಳ್ಳುಬಳ್ಳಿ ನಂಟೊಂದು ಕೇರಳ, ತಮಿಳುನಾಡುಗಳನ್ನು ಸುತ್ತಿಕೊಂಡು ಕನ್ನಡ ನೆಲದ‌ ಬರಹಗಾರನನ್ನು ತಬ್ಬಿಕೊಂಡಿರುವುದು ‘ಸಂಬಂಜ ಅನ್ನೋದು ದೊಡ್ಡದು ಕನಾ’ ಎನ್ನುವ ದೇವನೂರರದೇ ಮಾತನ್ನು ನೆನಪಿಸುವಂತಿದೆ.
ಜನರ ಗಮನವನ್ನು ಸೆಳೆಯುವ ಬಹುತೇಕ ಪ್ರಶಸ್ತಿಗಳು ಸಂಭ್ರಮದಲ್ಲೇ ಕೊನೆಗೊಳ್ಳುತ್ತಿರುವ ದಿನಗಳಿವು. ಕೆಲವು ಪುರಸ್ಕಾರಗಳಷ್ಟೇ ಅರಿವು, ಆತ್ಮಾಭಿಮಾನದ ಸಂಕೇತವಾಗಿ ಒದಗಿಬರುತ್ತವೆ. ವೈಕಂ ಪ್ರಶಸ್ತಿಯ ಅಗ್ಗ ಳಿಕೆಯಿರುವುದು ಅದು ಪ್ರತಿನಿಧಿಸುತ್ತಿರುವ ಮೌಲ್ಯಗಳಲ್ಲಿ ಹಾಗೂ ಆ ಗೌರವ ಸಂದಿರುವ ವ್ಯಕ್ತಿಯೂ ವೈಕಂ ಅರಿವಿನ ಪಥಪರಂಪರೆಯ ಸಮರ್ಥ ಕೊಂಡಿಯಾಗಿರುವುದರಲ್ಲಿ.
ನಿಟಿಲು ನಿಟಿಲೆನ್ನುವ ದುರ್ಬಲ ಮೂಳೆಗಳನ್ನು ಹೊಂದಿರುವ ಕನ್ನಡ ಶಾಲೆಗಳ ನಿಟ್ಟುಸಿರಿನ ನಡುವೆ ನಡೆಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಸಂಭ್ರಮದ ಭಾಗವಾಗಲಾರೆ ಎನ್ನುವ ನಿಲುವು ತಾಳಿರುವ ಮಹಾದೇವ, ತಮ್ಮ ಊರುಕೇರಿಗೆ ಸಮೀಪದಲ್ಲೇ ಸಾಹಿತ್ಯ ಸಮ್ಮೇಳನವೊಂದು ನಡೆಯುತ್ತಿರುವ ಸಂದರ್ಭದಲ್ಲಿ ವೈಕಂ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ದೇವರು ಧರ್ಮದ ಹೆಸರಿನಲ್ಲಿ ಈಗಲೂ ಅಸ್ಪೃಶ್ಯತೆ ಆಚರಣೆಯಲ್ಲಿರುವ ಪ್ರಕರಣಗಳು ವರದಿಯಾಗುತ್ತಿರುವಾಗ, ದೇವನೂರರು ವೈಕಂ ಪ್ರಶಸ್ತಿಯನ್ನು ಸ್ವೀಕರಿಸಿರುವುದು ಕೆಲವರಿಗೆ ದ್ವಂದ್ವವಾಗಿ ಕಾಣಬಹುದು. ಆದರೆ, ಸಾಹಿತ್ಯ ಸಮ್ಮೇಳನ ಅಥವಾ ನೃಪತುಂಗ ಪ್ರಶಸ್ತಿಯ ಕೇಂದ್ರದಲ್ಲಿರುವ ಜಾತ್ರೆಯ ಸಂಭ್ರಮ ‘ವೈಕಂ ಪ್ರಶಸ್ತಿ’ಯಲ್ಲಿಲ್ಲ. ಈ ಪ್ರಶಸ್ತಿಯ ಎದೆ ಯಲ್ಲಿರುವುದು ಸಮಸಮಾಜದ ಹಂಬಲ ಹಾಗೂ ಅದು ಪೂರ್ಣರೂಪದಲ್ಲಿ ಸಾಧ್ಯವಾಗದಿರುವುದರ ಕುರಿತ ಗಾಢ ವಿಷಾದ. ಅರಿವು ಮತ್ತು ವಿಷಾದವೇ ಮುಖ್ಯವಾದ ಪ್ರಶಸ್ತಿಯ ಜೊತೆಯಲ್ಲಿ ಕಾಣಿಸಿಕೊಳ್ಳುವ ಸಂಭ್ರಮ ಕೇವಲ ಆನುಷಂಗಿಕವಷ್ಟೇ.
ನೂರು ವರ್ಷಗಳ ಹಿಂದೆ, ಕೇರಳದಲ್ಲಿ ನಡೆದ ವೈಕಂ ಸತ್ಯಾಗ್ರಹ ಕೊನೆಗೊಂಡಾಗ ‘ಸತ್ಯಾಗ್ರಹ ಆಶ್ರಮ’ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿನ ಒಂದು ಮಾತು ಹೀಗಿದೆ: ‘ರಸ್ತೆಯನ್ನು ಪ್ರವೇಶಿಸುವ ಸ್ವಾತಂತ್ರ್ಯವಷ್ಟೇ ದೊರೆತಿದೆ, ಅಸ್ಪೃಶ್ಯತೆ ಹಾಗೆಯೇ ಮುಂದುವರೆದಿದೆ’. ಈ ಮಾತಿನಲ್ಲಿ ಹೆಚ್ಚೇನೂ ಬದಲಾವಣೆ ಆಗದಿರುವುದಕ್ಕೆ ವರ್ತಮಾನ ಪ್ರತಿದಿನವೂ ಉದಾಹರಣೆಗಳನ್ನು ಒದಗಿಸುತ್ತಿದೆ. ಅಂಥದೊಂದು ಹೊಸ ಉದಾಹರಣೆ, ಅಂಬೇಡ್ಕರ್ ಜಪದ ಬದಲು ದೇವರನ್ನಾದರೂ ಜಪಿಸಿದರೆ ಸ್ವರ್ಗ ದೊರೆಯುತ್ತದೆನ್ನುವ ಕೇಂದ್ರ ಗೃಹ ಸಚಿವ ಅಮಿತಾ ಶಾ ಅವರ ಮಾತು. ಅಂಬೇಡ್ಕರ್‌ ಜಪವನ್ನು ವಿಡಂಬನೆಯಂತೆ ಕಾಣುವ ಮನಃಸ್ಥಿತಿಯೇ ‘ವೈಕಂ’ಮಾರ್ಗ ನಿರಂತರವಾದುದು ಎನ್ನುವುದರ ಸೂಚನೆಯಂತಿದೆ.