ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ -ದೇವನೂರ ಮಹಾದೇವ
(1973ರಲ್ಲಿ ಬರೆದ ಈ ಕತೆಯು, ‘ದ್ಯಾವನೂರು’ ಕಥಾ ಸಂಕಲನದಲ್ಲಿ ದಾಖಲಾಗಿದೆ. ನಮ್ಮ ಮರು ಓದಿಗಾಗಿ ಹಾಗೂ ಯೂಟ್ಯೂಬ್ ಮೂಲಕ ನಮ್ಮ ಮರು ಆಲಿಸುವಿಕೆಗಾಗಿ… )
೧
ಮೂಡಲ ಸೀಮೆಯು ಕೊಲೆಗೂ ದರೋಡೆಗೂ ಪ್ರಸಿದ್ಧಿಯಾಗಿದೆ ಎಂಬ ಮಾತು- ಪ್ರಚಲಿತದಲ್ಲಿದೆ. ಆ ಸೀಮೆಯ ಜನ ಒರಟರು ಎಂದು ಯಾರನ್ನೇ ಕೇಳಿದರೂ ಹೇಳಬಹುದು. ಆ ಸೀಮೆಯ ಅಂಚಿಗೆ ಸೇರಿದ ಹಾಗೆಯೆ ಒಂದು ಊರಿದೆ. ಅಲ್ಲೊಬ್ಬ ರಂಗಪ್ಪ ಅಂತವನೆ. ಅವನನ್ನು ರಂಗ ರಂಗಪ್ಪ ರಂಗಸ್ವಾಮಿ- ಹೀಗೆ ತಮಗೆ ತಕ್ಕ ಹಾಗೆ ಆ ಊರಿನ ಜನ ಕರೆಯುವರು. ಅವನ ಅಪ್ಪ ಅವ್ವ ಎತ್ತಲವರೊ ಏನೊ. ಅವನಂತೂ ಎರಡು ಬೇಳೆ ಪೈರಿನಿಂದಲೂ ಆ ಸೀಮೆಯ ಮಣ್ಣನ್ನೆ ಮಯ್ಯಿ ಕಯ್ಯಿಗೆ ಮೆತ್ತಿಕೊಂಡು ಬೆಳದಂಥವನು. ಅವನಿಗೆ ಅಪ್ಪನಪ್ಪನ ಕಾಲದಿಂದಲೂ ಅವನದಾದ ಆಸ್ತಿ ಎಂಬುದಿಲ್ಲ. ಒಂದು ಜೋಪಡಿ, ಒಂದು ಹೆಂಡತಿ, ಒಂದು ಆರೇಳು ವರ್ಷದ ಮಗ ಅದಷ್ಟು ಇದ್ದು ಅದಷ್ಟೆ ಅವನ ಆಸ್ತಿ ಎಂಬಂತಿದೆ. ಅಂದರೆ ತಂದರೆ ಉಂಟು, ತರದಿದ್ದರೆ ಇಲ್ಲ. ಅವನು ಹುಟ್ಟಿದಾರಭ್ಯ ದಿನಂಪ್ರತಿ ಆ ಊರ ಗೌಡರ ಹೊಲದಲ್ಲಿ ಹಗಲು ಮಾಡುತ್ತ ಬಂದಿರುವನು. ಅವನು ಮಾಡೊ ಉಳುಮೆಗೆ ಗೌಡರ ಹಟ್ಟಿಕಂಬ ನಿಂತಿದೆ ನೋಡಿ ಅಂತ ಊರವರು ಅಂತಾರೆ. ಅಂತೆ ಅವನ ಜೋಪಡಿ ಅವನ ಹೆಂಡತಿ ಅವನ ಮಗ ಅವನ ರಟ್ಟೆಯ ಬಲದ ಮೇಲೆ ನಿಂತಿವೆ. ಆದರೆ ಅವನೊ ಹಾಗಂದುಕೊಂಡಿಲ್ಲ. ಗೌಡರು ಕಣ್ಣು ಬುಟ್ಟರೆ ತನ್ನ ಹೊಟ್ಟೆ ಒಳಗ ಜೀವ ಆಡುತ್ತೆ ಅಂತ ಅವ.
ಅಂಥ ರಂಗಪ್ಪನ ಜೋಪಡಿ ಊರಿಂದ ಚೂರು ಅತ್ತತ್ತ ಅನ್ನುವ ಹಾಗಿದೆ. ಅಲ್ಲಿ ಅವ ಯಾಕೊ ಕೈ ಚಲ್ಲಿಕೊಂಡು ಕುಂತುಬುಟ್ಟಿದ್ದನು. ಅವನ ಎದುರಿಗೆ ಹೆಂಡತಿಯು ಮಗನ ಹರಿದ ಚಡ್ಡಿಗೆ ಸೂಜಿ ಚುಚ್ತಾ ತಗೀತ ಹೊಲಿಯೋದರಲ್ಲಿ ಮುಳುಗಿದ್ದಳು. ಅಲ್ಲೆ ಅವ್ವಗೆ ಕಪಿಮರಿ ಹಂಗೆ ಅಂಟುಕೊಂಡಿದ್ದ ಏಳು ವರ್ಷದ ಮಗ ತೂಕಡಿಗೆ ವಡೀತಾ ಇತ್ತು. ಈಗ ಹೊತ್ತು ಮುಳುಗೋಕೆ ಮಾರುದೂರ ಇದ್ದರೂ ಗುಡಾರದಂಥ ಹಟ್ಟಿಯಾದ್ದರಿಂದ ಆಗಲೇನೆ ಅಲ್ಲಿ ಕವಳ ಕವುಚಿಕೊಂಡು ತವಕನೆ ಒಳಗೆ ಬಂದವರಿಗೆ ಒಳಗಿದ್ದ ಅವರಾರು ಬಡಪೆಟ್ಟಿಗೆ ಖಂಡಿತಕ್ಕೂ ಕಾಣುತ್ತಿರಲಿಲ್ಲ. ಆ ಮಸಕು ಕತ್ತಲಿಗೆ ಕಣ್ಣು ಸೀಳುತ್ತ ನೋಡಿದರೆ ನಿಧಾನ ಅವ, ಅವನ ಹೆಂಡತಿ, ಅವನ ಮಗ ಮೂಡಬಹುದಿತ್ತು. ಅಲ್ಲೆ ಜೋಪಡಿ ಹುಲ್ಲು ಅತ್ತಗು ಇತ್ತಗು ಸರಕೊಂಡು ನಾಕ ಕಡೆ ಕಿಂಡಿ ಬುಟ್ಟುಕೊಂಡು ಬಾನ ಕಾಣಿಸುತ್ತಿದ್ದಿತಷ್ಟೇ. ಆ ದಿಕ್ಕಿಂದ ಒಳಗಿಣುಕುವ ಬೆಳಕು ಅಲ್ಲಿ ಇಲ್ಲಿ ಅಲ್ಲೆ ಬಿದ್ದು ಓಡಾಡುತ್ತಿತ್ತು. ಹೆಂಡತಿ- ಬರೋದು ಮಳೆಗಾಲ, ಮಲಿಕಳಾಕ ಒಂದು ತಾವು ಅಂತಾರು ಇಲ್ಲ. ಹುಲ್ಲುತಂದು ಚಾವಣಿಗೆ ಹಾಕಿ- ಅಂತ ಗಂಡನಿಗೆ ಹೇಳಿ ಹೇಳಿ ಗಂಡನ ಊ್ಞ ಊ್ಞ ಕೇಳಿ ಕೇಳಿ ಅವಳಿಗೂ ರೋಸಿ ಈಗಂತು ಸುಮ್ಮನಾಗಿಬಿಟ್ಟಿದ್ದಳು.
ಅಲ್ಲಿ ರಂಗಪ್ಪ ತನ್ನ ಜೋಬ ಅತ್ತಗ ಇತ್ತಗ ತಡಕುವುದರಿಂದ ಒಂಥರ ಚಲನೆ ಆರಂಭವಾಯ್ತು. ಹೆಂಡತಿ ಗಂಡನ ತಡಬಡವ ತಿಳಿದುಕೊಂಡು ಅಂಟುಕೊಂಡಿದ್ದ ಮಗನನ್ನು ಮೆಲ್ಲಕೆ ನೆಲದ ಮೇಲೆ ಮಲಗಿಸಿ ಬೀಡಿಗೆ ಬೆಂಕಿ ತರುವ ಅಂತ ಮೇಲೆದ್ದಳು. ಮಗನ ಕತ್ತು ಹಿಂದಕ್ಕೂ ಮುಂದಕ್ಕೂ ಬತ್ತಾ ಹೋಗ್ತ ವಾಲಾಡ್ತ ಇದ್ದುದು ಆಗ ನಿಂತು ಕೊಕ್ಕರಿಸಿಕೊಂಡು ತೆಪ್ಪಗೆ ಮಲಿಕತ್ತು. ರಂಗಪ್ಪ ಮಗನಿಗೆ ಕಣ್ಣು ಸಿಕ್ಕಿಸಿ ‘ಎಂಥದಮ್ಮಿ ನಿನ್ನ ಮಗಂಗೆ ಮುಸ್ಸಂಜಲೆ ನಿದ್ದೆ ಹಿಡಕಂಡದೆ’ ಅಂದನು. ಅದಕ್ಕವಳು ‘ಒಂದು ಚಡ್ಡಿ ಬೇಕು ಅಂತ ಚಂಡಿ ಹಿಡ್ಡಿತ್ತು. ಅಳ್ತ ಮಲಿಕತ್ತು’ ಎಂದು ವಸಿ ನಿಂತಿದ್ದು ಹೋಗಿ ಬಂದು ಬಿಂಕಿ ಚಾಚಿ ಹಿಡಿದು ‘ಮುಂದ್ನವಾರ ಸಂತಗಿಂತಗ ಹೋದ್ರ ತನ್ನಿ ಒಂದ’ ಅಂದಳು. ಅದಕ್ಕವ ಆ್ಞ ಅನ್ನಲು ಇಲ್ಲ. ಊ್ಞ ಅನ್ನಲು ಇಲ್ಲ. ಆವಾಗಲೂ ಎಷ್ಟು ಹುಡುಕಿದರೂ ಬೀಡಿ ಸಿಗದೆ ಅಂದರೆ ಇಲ್ಲದೆ ಥುತ್ತೇರಿ ಅನ್ನಿಸಿತು. ಇಲ್ಲಕಣ ಬಿಂಕಿ ಇಟ್ಬುಡು ಅಂದನು. ಅವಳು ಗಂಟಲೊಳಗೆ ಗೊಣಗಿಕೊಂಡು ಬಿಂಕಿ ಇಟ್ಟು ಬಂದು ಮೊದಲಂಗೆ ಕುಂತಳು. ಮಗನ ಕಡೆ ನೋಡುತ್ತಿದ್ದವ ನೋಡುತ್ತಲೆ ಏನಾರು ಉಣ್ತ ಅಂತಲೆ, ಮಧ್ಯಾಹ್ನದ್ದೆ ತಂಗಳು ಅಂದಳು. ಮಾಡಾಕತಾನೆ ಏನು ಇದ್ದುದು ಅಂತ ಅವಳೇನು ಮೊಖ ಸಿಂಡಿರಿಸಿಕೊಂಡು ಹೇಳಬೇಕಾಗಿರಲಿಲ್ಲ. ಅವ ಬಾಗಲ ಕಡದು ಇರುವ ಆಚಲ ನೋಡಲು ತೊಡಗಿದನು. ಮತ್ತೆ ತಿರುಗಿದಾಗ ತನ್ನ ಕಡೆಗೆ ನೋಡುತ್ತಿದ್ದ ಹೆಂಡತಿ, ತಾನು ಅವಳತ್ತ ನೋಡುತ್ತಲೆ ಎತ್ತಲೊ ಕಣ್ಣು ಕತ್ತು ತಿರುಗಿಸಿದಳು. ಅವ ವಸಿ ಗೌಡರ್ನಾರು ನೋಡ್ಕಂದು ಬತ್ತೀನಿ ಎಂದು ಎದ್ದನು.
೨
ಗೌಡರು ನಂಜನಗೂಡಲ ದಿಕ್ಕಿಗೆ ಪಯಣ ಬೆಳೆಸಿದವರು ಬಂದವರೊ ಬಂದಿಲ್ಲವೊ ಎಂಬ ಅನುಮಾನ ರಂಗಪ್ಪನಿಗೂ ಇದ್ದುದೆ. ಕಳೆದ ವಾರ ನರ್ಸಮ್ಮನಿಗೆ ವರ್ಗವಂತೆ ಅಂತ ಊರೆಲ್ಲ ಮಾತಾಯಿತು. ಈಗ ಗೌಡರು ಬಂದಿದ್ದರೆ ಅವರೊಡನೆ ವರ್ಗ ಇಲ್ವಂತೆ ಕೂಡ ಇರುತ್ತಿತ್ತು. ವರ್ಷದ ಕೆಳಗೆ ಊರಿಗೆ ಒಂದು ನರ್ಸು ಬೇಕು ಅಂತ ಮೇಲಿನವರೊಡನೆ ಹೊಡೆದಾಡಿ ತಂದವರು ಅವರೆ. ಅವರು ಮತ್ತು ಅವರಂಥವರು ಊರು ಒಂದು ಕೊಂಪೆ ಅಂತ ಆಚೀಚಲವರು ಅಂದುಕೊಂಡರೆ ಒಂದಿಷ್ಟೂ ಸಹಿಸರು. ನರ್ಸಮ್ಮ ಬಂದಾಗ ಕಿರಸ್ತಾನದವಳು ಅಂತ ಯಾರೂ ಮನೆ ಕೊಡದಿದ್ದ ಪ್ರಸಂಗವನ್ನೆ ನೋಡಬಹುದು. ಗೌಡರೆ ತಮ್ಮ ಜಗಲಿಮನೇಗೆ ಬಾಡಿಗೇನು ಬೇಡ ಏನೂ ಬೇಡ ಅಂತಂತ ಬಿಟ್ಟುಕೊಟ್ಟುಬಿಟ್ಟರು. ಅವಳು ಬಂದವಳೆ ಊರಿಗೊಂದಾಗಿ ಬಿಟ್ಟಳು. ಆಮೇಲ ಊರು ಅಂದರೆ ಮುಖ್ಯವಾಗಿ ಆ ಜಾತಿ ಈ ಜಾತಿ ಅನ್ನದೆ ಪಡ್ಡೆ ಹೆಣ್ಣು ಮಕ್ಕಳು ಅವಳಂತಾಗಲು ತೆವಳುತ್ತಿದ್ದವು. ಅದು ಹಾಗಿರಲಿ, ಇಂದು ಊರಿಗೆ ಊರೆ ಲೈಟು ಬರೊ ಸಂಭ್ರಮದಲ್ಲಿ ಬೀಗುತ್ತಿದೆ. ಅದಕ್ಕೆ ಕಾರಣಪುರುಷರು ಗೌಡರು. ವಾರದಲ್ಲಿ ಒಂದು ದಿನ ಅವರು ಊರಲ್ಲಿ ಇದ್ದರೆ ಅವರಿಗೆ ಅದು ಹೆಚ್ಚು. ಅವರು ಹೋದ ದಿಕ್ಕಿಗೆಲ್ಲ ಕೆಲಸಗಳು ತಂತಾನೆ ಹುಟ್ಟುಕೊಳ್ಳುತ್ತವೆ – ಹೀಗೆ ಗೌಡರು ಬಂದವರೊ ಬಂದಿಲ್ಲವೊ.
ಗೌಡರು ಏನಾರು ಬಂದಿದ್ದರೆ ದೊಡ್ಡ ಹಟ್ಟಿ ಜಗಲಿ ಮೇಲೆ ಅವರದೇ ಠೀವೀಲಿ ಅವರು ಕುಂತಂಥ ವೈಖರಿಯು ನೋಡಿದವರ ಕಣ್ಣಲ್ಲಿ ಠಸ್ಸೆ ಹೊಡೆಯುತ್ತದೆ. ವಾರದ ಹಿಂದೆ ಆದುದ ನೋಡುವ: ನೋಡಿದರೆ ಗೌಡರು ಹಾಗೆಯೇ ಕುಂತಿದ್ದರು. ರಂಗಪ್ಪ ಅವರ ಎದುರ ಮಯ್ಯ ಕುಗ್ಗಿಸಿಕೊಂಡು ಮಾಮೂಲಿ ನಿಂತಿದ್ದನು. ನಾಕು ಸೇರು ಜೋಳ ತಂದಿಟ್ಟ ಗೌರವ್ವರು ಮೊಖ ತಿರುವಿಸಿಕೊಂಡು ಹೋಗಿಬಿಟ್ಟರು. ಆಮೇಲಂತು ರಂಗಪ್ಪನಿಗೆ ಮುಖವೆ ಹೊಯ್ತು. ಗೌಡರು ಕಂಡೀಷನ್ನಾಗಿ ಇನ್ನು ಫಸಲು ಬರಗಂಟ ಕೇಳಬೇಡ ಇವ್ನೆ ಎಂದು ಅಂದವರೆ ಸರ್ರನವರೂ ಹೋದರು. ನಡೆವಾಗ, ಗೌಡರ ಮಾತು ಗೌರವ್ವರ ರೀತಿ ಕೂಡಿ ಹೆಣಭಾರ ವಡೀತಿತ್ತು ಹೆಣಭಾರ.
ಇಂದು ಯಾವ ಮೊಖ ಹೊತ್ತು ಅವರ ಕಂಡು ಕೇಳಲಿ ಎಂಬುದು ಹೆಜ್ಜೆ ಇಟ್ಟಂತೆಲ್ಲ ರಂಗಪ್ಪನ ಮೇಲೆಯೇ ಎಗರಿ ಬೀಳುತ್ತಿತ್ತು. ಹಸಿದು ಮಲಗಿರೊ ಮಗ, ಬಿಳುಚಿಕೊಂಡು ಕುಂತು ಮಾತಾಡದೆ ಆ್ಞ ಊ್ಞ ಅನ್ನೊ ಹೆಂಡತಿ ತಲೆ ಒಳಗ ಕುಂತು ಹಿಂಸಿಸುತ್ತಿದ್ದರು. ಹುಟ್ಟಿದಾಗಲಿಂದಲೂ ಎಷ್ಟೇ ಹೆಂಗೇ ಅವಚವಿಯಾಗಿ ಗೇದರೂ ಹೊಟ್ಟೆ ತುಂಬ ಹೊಂದಿಸಾಕೆ ಇದುವರೆಗೆ ಅದ್ದಿಲ್ಲ. ಅಲ್ಲಿ ದುಡಿಬೇಕು, ಇಲ್ಲಿ ಕೊಡಬೇಕು, ಕೊಟ್ಟದ್ದು ಈಸಕಂಡು ಬಂದು ಹೊಟ್ಟೆಯಾಪ್ತಿ ನಡೆಸಬೇಕು. ಆಮೇಲೆ ಕಣ್ಣು ಬಾಯಿ ಕೈ ಇದ್ದುದೆ, ಆಷ್ಟುಬಿಟ್ಟು ಅವನ ಬದುಕಲ್ಲಿ ಇನ್ನೇನಾರ ಆಗಿದೆಯಾ? ಅಂದರೆ ಅಂಥದ್ದೇನೂ ಇಲ್ಲ ಅಂತಾನೆ ಹೇಳಬಹುದು. ಆದರೆ ಒಂದು ಮಾತು- ಭೂಮತಾಯಿ ಸೀಳ್ಕಂಡು ಒಂದ್ಸಲಕ ತನ್ನ ಹೊಟ್ಟ ಒಳಕ ಎಲ್ಲಾನು ಹಾಕೊಂಡು ಬುಟ್ಟರ ಎಷ್ಟೊ ನೆಮ್ಮದಿ ಎಂದು ಅವ ಬಾಳ ಅಂದುಕೊಂಡರೂ ಹಾಗೇನೂ ಆಗುವುದಿಲ್ಲ. ನಾವು ನೀವು ಕಂಡಂತೆಯೇ ಇದುವರೆಗೂ ಹಾಗೇನೂ ಆಗಿಲ್ಲ.
೩
ಗಂಡ ಹೋದ ಮೇಲ ಪಾರೋತಿಗೆ ಏನ ಮಾಡಬೇಕು ಅಂತ ತಿಳೀದೆ ಮುಪ್ಪಾಗಿ ಕುಂತಳು. ಆಗ ಎಲ್ಲಕ್ಕು ಕತ್ತಲಿಡೀತಾ ಇತ್ತು. ಅಲ್ಲೆ ಮಲಗಿದ್ದ ಮಗ ಗದ್ದರಿಸಿ ಎದ್ದು ತಡವರಿಸುತ್ತ ಕಣ್ಣು ಮುಚ್ಚಿಕೊಂಡೆ ಕೂತುಕೊಂಡಿತು. ಪಾರೋತಿ ತಲೆ ಸವರಿ ‘ಯಾಕ ರಾಜ, ಯಾಕಪ್ಪ, ಕನ್ಸ ಕಂಡ್ಯ’ ಅಂದಲು. ರಾಜ ಕಣ್ಣು ಬುಟ್ಟು ದೊಡ್ಡತಗೆ ನೋಡಿತು. ಅವ್ವ ಎದುರಿಗಿದ್ದಳು. ರಾಜ ಉ್ಞ ಅಂತ ತಲೆ ಕುಣಿಸಿತು. ಏನ ಕಂಡ್ಯ ಹೇಳು ಮತ್ತ ಅಂದಲು. ಹಾಗಂತಲೆ ರಾಜ ಮೊಂಡು ಮೊಖ ಮಾಡ್ಕಂಡು ‘ನೋಡವ್ವ ನೋಡವ್ವ, ಪಟೇಲ್ರ ಶಂಭಪ್ಪ ಅವಲ್ಲ. ಅವ ಅವ ನನ್ನ ರಾಜ ಅನ್ನಕಿಲ್ವಂತೆ” ಅಂದ. ಪಾರೋತಿ ಯಾಕಂತ? ಅಂತಂತಲೆ ರಾಜ ‘ಶಂಭಪ್ಪ ಇಸ್ಕುಲು ಬುಡ್ತಲೆ ಅಂದ. ನೀವು ವಲಾರ್ರು ಕಲಾ. ಅದ್ಕ ನಿನ್ನ ರಾಜ ಅನ್ನಾಕಿಲ್ಲ, ಗೀಜ ಅಂತೀನಿ ಅಂದ’ ಎಂದು ಅವ್ವನ್ನೆ ನೋಡುತ್ತ, ಅವ್ವ ಏನ ಹೇಳಬಹುದು ಅಂತೇನೊ ಅದರ ಕಣ್ಣು ಅಗಲಿಸಿಕೊಂಡಿತ್ತು. ಪಾರೋತಿ ಅವನ ಗಲ್ಲ ಅದುಮುತ್ತ ‘ನೀ ಜಾಣಕಪ್ಪ. ಅವ್ರ ಸಿಂತಗೆಲ್ಲ ಹೋಗ್ಬೇಡ’ ಅಂದು ಇನ್ನೆಂಥದೂ ಹೇಳಾಕೆ ತಿಳಿದೇನೆ ಅವನ ಬೆನ್ನ ಸವರುತ್ತ ಕುಂತಳು. ರಾಜ ಅವ್ವನ ಹತ್ರಕ್ಕ ಮತ್ತೂ ತವದು ಅವಳ ಕಿವಿ ಹತ್ರಕ್ಕ ಬಾಯಿ ತಂದು ‘ಬಾ ಇಲ್ಲಿ ಒಂದು ಮಾತೇಳ್ತಿನಿ’ ಅಂತು. ಪಾರೋತಿಗೆ ಅವನ ವರಸೆಗೆ ನಗು ಬಂತು. ಅದೇನ ಹೇಳಪ್ಪು ಮತ್ತೆ ಅಂದಲು. ‘ಅದೇ ನಮ್ಮ ಹೊಸ ಮೇಸ್ಟ್ರ ನೋಡಿದ್ದಿ?’. ‘ಉ್ಞಂ’. ‘ಅವ್ರು ಅವ್ರು ನಮ್ಮ ಜಾತೀನಂತೆ!”. ‘ಅದು ನಂಗು ಗೊತ್ತು’. ‘ಅಯ್ಯೋ ನಿಂಗೂ ಗೊತ್ತ!’ ಎಂದು ಬೆರಗಾಗಿ ದಿಕ್ಕುಗಾಣದೆ ನಿಲ್ಲಿಸಿ ಆಮೇಲೆ ‘ಆಮೇಲ ಆಮೇಲ’ ಎಂದು ಸುರುಮಾಡಿದನು. ಅವಳು ‘ಏನಾಮೇಲ?’ ಅಂತಲೆ ಅವ ‘ಅದೇ ಅವ್ರು’. ‘ಉ್ಞ’. ‘ದೊಡ್ಡ ಮೇಸ್ಟ್ರ ಹಟ್ಟೀಲಿ’. ‘ಉ್ಞ’. ‘ಅವರ ಗಳಾಸ್ಲೆ’ ಅಂದು ಎಳೆದಾಗ ಅವಳು ಉ್ಞಕಳಲಿಲ್ಲ. ಅದೇನ ಕಟಿಕಟ್ನ ಹೇಳಪ್ಪು ಅಂದಲು. ಅಂತಲೆ ಅವ ತಟವಟನೆ ‘ಅದೇ ಅವ್ರು ಗಳಾಸ್ಲೆ ನೀರ್ನು ಕುಡಿತಾರೆ. ಆಮೇಲ ಆಮೇಲ ಅವರ ಜಗಲಿ ಮೇಕ್ಕು ಹೋಯ್ತಾರೆ’ ಎಂದು ಅವ್ವನ ಮೊಖದಲ್ಲಿ ಏನಾಗಬಹುದು ಅಂತ ನೋಡೋ ರೀತಿಗೆ ತುಟಿ ಅರಳಿಸಿ ‘ಅದೂನು ನಂಗು ಗೊತ್ತು’ ಅಂದಲು. ಅವಳು ಹಾಗಂತ ಅಂದಾಗ್ಲಂತು ರಾಜನಿಗೆ ಇನ್ನೇನ ಅಳೂನೆ ತವಕನೆ ಬಂದಂತಾಯಿತು. ‘ಥು ಹೋಗು. ನಿಂಗ ಎಲ್ಲಾನು ಗೊತ್ತು’ ಎಂದು ಅವ್ವನಿಗೆ ನೇತಾಕಿಕೊಂಡು ಜಗ್ಗಲು ತೊಡಗಿತು.
ಇನ್ನೆನಾರು ಹೊಟ್ಟ ಹಸೀತದ ಅಂತ ಅವ ಚಂಡಿ ಹಿಡಿದರ ಏನಪ್ಪಗತಿ ಸಿವ್ನ ಅಂತ ಪಾರೋತಿ ಅವನ ಮೊದ್ದಿಸುತ್ತ ‘ಇಲ್ಲ, ಇಲ್ಲ, ನೀ ಅಂತ್ಲೆ ನಂಗೊತಾಯ್ತು ಕಣ, ನೀ ಜಾಣಕನಂತೆ, ಮೋಕಪ್ಪ’- ಅಂದಲು.
೪
ತಿರುಗಿದರೆ ಮೇಷ್ಟ್ರ ಹಟ್ಟಿ ಸಿಗುತ್ತೆ ಅಂತಿರೊ ಅಷ್ಟರಲ್ಲಿ ರಂಗಪ್ಪನಿಗೆ ಐಸಾ ಐಸಾ ಕೇಳಿಸಿತು. ಇದೇನಪ್ಪ ಎಂದು ಹತ್ತುಮಾರು ಮುಂದೆ ಬಂದು ನೋಡುತ್ತಲೆ ಎಂಟತ್ತಾಳು ಮೇಸ್ಟರ ಮನೆ ಮುಂದಲು ಗುಳಿತವಕೆ ಲೈಟು ಕಂಬ ಎಳೀತಿದ್ದರು. ಒಬ್ಬ ಅಲ್ಲಿಂದಲೇ ಕೈಬೀಸಿ ಬಾ ರಂಗೊ ಅಂತ ಉಸುರ ಹಿಡಕಂಡು ಕೂಗಿದ. ಊರೊಟ್ಟಿನ ಕೆಲ್ಸ ಎಷ್ಟಾದ್ರು ಅಂದುಕೊಂಡು ರಂಗಪ್ಪ ಕಂಬ ಎಳೀತಿದ್ದಲ್ಲಿಗ ಕಾಲೆಳೆದು ಬಂದಾಗ ಒಬ್ಬ ಬಯ್ಯ ವಸಿ ಹೆಗಲ ಕೊಡು ಅಂತಲೆ ರಂಗಪ್ಪ ಹೆಗಲು ಕೊಟ್ಟು ನಿಂತನು. ಒಂದೊಂದೆ ಹೆಜ್ಜೆ ಅಂತ ಎಳ್ದು ಎಳ್ದು ಐಸ ಐಸ ಅಂದೂ ಅಂದು ಗುಳಿ ತಲುಪಿಸೊ ಹೊತ್ತಿಗಂತು ಎಲ್ಲರಿಗೂ ಬೆವರು ಕಿತ್ತೋಯ್ತು. ಎಲ್ಲರು ಕೈ ಚಲ್ಲಿಕೊಂಡು ಕೆಳಕು ಮೇಲಕು ಉಸುರು ಬುಡುತ್ತ ನಿಂತುಕೊಂಡರು.
ಎದುರಾ ಶಾಸ್ತ್ರಿ ಮೇಸ್ಟರ ಮನೆ ಇತ್ತು. ರಂಗಪ್ಪನಿಗೆ ಹೆಚ್ಚು ಕಮ್ಮಿ ಮೊನ್ನೆಯಿಂದಲೂ ಹೊಟ್ಟೆಗೆ ಏನೂ ಕಾಣದ್ದಕ್ಕೇನೊ ಮಯ್ಯಿ ಕಯ್ಯಿ ಸ್ವಾಧೀನ ತಪ್ಪಿದಂಗಾಯ್ತು. ನೀರು ನೀರು ಅನ್ನಿಸಿ ಅತ್ತ ನೋಡಿದಾಗ ಮೇಷ್ಟ್ರು ಕುಂತಿದ್ದರು. ಅವರ ದಿಕ್ಕಾನೆ ಮೊಕ ಹಾಕೊಂಡು ಹೊಸ ಮೇಸ್ಟ್ರುವಿ ಕುಂತಿದ್ದರು. ಅವರ ಕೈಲಿನ ಉರಿಯೊ ಸಿಕರೋಟು ಹೊಗೆ ಆಡಸ್ತ ಇತ್ತು. ಅವರ ತಲೆ ಬಾಚಿಕೊಂಡು ನೇರ ಕೆಟ್ಟಿರಲಿಲ್ಲ. ಕೆಳಕು ಮೇಕು ಬಿಳೀ ಬಟ್ಟೇನೆ ಹಾಕಿಕೊಂಡಿದ್ದರಿಂದ ಅವರು ಒಂಥರಾ ಹೊಳಪು ವಡೀತಿದ್ದರು. ವಯಸ್ಸೇನು ಮದ್ವೆ ಗಿದ್ವೆ ಆದಂತಿಲ್ಲ. ಅವರ ನೋಡಕೋತ ರಂಗಪ್ಪ ಹತ್ತಿರ ಆದನು.
ಏನಯ್ಯ ರಂಗಯ್ಯ ಹೇಗಿದ್ದಿ ಎಂದು ಶಾಸ್ತ್ರಿ ಮೇಸ್ಟರು ಮಾತನಾಡಿಸಿದರು. ಅದಕ್ಕೆ ಅವ ಹಿಂಗಿವ್ನಿ ಬುದ್ಧಿ ಎಂದು-ವಸಿ ಕುಡಿಯಾಕ ನೀರು ಬೇಕಿತ್ತು ಅಳಿ-ಅಂದ. ಅವರು ಏರಿಸಿದ ದನೀಲಿ-ನೋಡೆ ಶಾರ್ದು ಸ್ವಲ್ಪ ನೀರ್ನಂತೆ ರಂಗನಿಗಂತೆ ಕುಡಿಯಾಕಂತೆ ಅಂತಂತ ಮಾತ ಹಿಡ್ಡು ಹಿಡ್ಡು ಆಡಿದರು. ಆ ಕ್ಷಣವೇ ತಿರುಗಿ ಹೊಸ ಮೇಸ್ಟರ ಕಡೆ ಕಣ್ಣಿಟ್ಟು-ನೋಡಿ ಇವ್ರೆ ನಮ್ಮ ರಂಗಪ್ಪ ಅಂತಂದ್ರೆ ವ್ಯವಸಾಯದಲ್ಲಿ ನಿಸ್ಸಿಮ-ಎಂದು ಮತ್ತೆ ರಂಗಪ್ಪನ ಕಡೆಗೆ ತಿರುಗಿ-ಮತ್ತೇನಯ್ಯ ರಂಗಯ್ಯಾ ಈ ಸಲ ಮಳೆ ಬೆಳೆ ಹೇಗನ್ಸುತ್ತೆ-ಅಂದರು. ಅದಕ್ಕವ ಹೆಂಗೇಳಕಾಗುತ್ತೆ ಹೇಳಿ ಬುದ್ಧಿ ಎಲ್ಲ ಅವನಿಚ್ಛೆ ನೋಡಿ- ಎಂದು ಮುಗಿಸಿ ತಡೆದು ಮತ್ತೆ-ಹೋದಸಲವಂತು ಅರ್ಧಕ್ಕರ್ಧ ಕೈಗತ್ತಲಿಲ್ಲಾಅಳಿ. ಅಂಥದ್ರಲ್ಲಿ ಕಂಡವರ ಹೊಲ ನೆಚ್ಕಂಡು ಹೊಟ್ಟೆ ಹಿಡ್ಕೊಂಡಿರೊ ನಾವು ಎತ್ತಾಗ ಹೋಗ್ಬೇಕಲಿಳಿ ಎಂದು ಅಂದು ಆಗಲೇನೆ ಯಾಕಾರು ಅಂದೆ ಅನ್ನಿಸಿ ಸುಮ್ಮನಾದನು.
ಮಾತಿಲ್ಲದೆ ಕಥಿಲ್ಲದೆ ವಸಿ ಹೊತ್ತು ಎಲ್ಲರು ಸುಮ್ಮನಿದ್ದರು. ಶಾಸ್ತ್ರಿಮೇಸ್ಟರು ಉಗುಳ ನುಂಗಿ ಸರಾಗವಾಗಿ ನೀ ಅನ್ನೋದು ಸರಿ ಅನ್ನು ಸರಿ ಅನ್ನು ಎಂದು ರಂಗಪ್ಪ ಆಡಿದ ಮಾತಿಗೆ ಸಂಬಂಧ ಕೂಡಿಸಿದರು. ಅಷ್ಟೊತ್ತಿಗೆ ಚೆಂಬಲ್ಲಿ ನೀರು ಹಿಡಕಂಡು ಶಾರದ ಬಂದು ನಿಂತಳು. ಎಷ್ಟೊ ಉದ್ದ ಬೆಳೆದು ಬಳುಕುವ ಹಾಗೆ ನಿಂತಿದ್ದಳು. ಅವಳ ತುದಿಗಾಲಿಂದ ಹಿಡಿದು ಅವಳ ಮಯ್ಯಿಕಯ್ಯೆಲ್ಲ ಆಗ ತಾನೇ ಹೆಣ್ಣಾಗುತ್ತಿತ್ತು.
ರಂಗಪ್ಪ ಕಯ್ಯ ಬೊಗಸೆ ಮಾಡಿಕೊಂಡು ದೂರ ಹೋಗಿ ಬಾಯಿಗೆ ಕೊಟ್ಟು ನಿಲ್ಲುತಲೆ ಶಾರದ ನೀರು ಸುರುವುತ್ತಾ ಅವ ತಲೆಯಾಡಿಸಿದ ಮೇಲೆ ನಿಲ್ಲಿಸಿ ಆಮೇಲ ತಲೆ ತಗ್ಗಿಸಿ ಆತ್ತಗೂ ನೋಡದೆ ಇತ್ತಗೂ ನೋಡದೆ ಸರಸರ ಒಳಕ್ಕೆ ನಡೆದಳು. ನೀರು ಕುಡಿದ ಮೇಲೆ ರಂಗಪ್ಪನಿಗೆ ಎಷ್ಟೋ ನಿಂಬಳ ಆಯ್ತು. ಹತ್ತಿರಕ್ಕೆ ಬಂದು ‘ಸಾರ್ದವ್ವರ ಮದ್ವ ಯಾವಾಗ್ಲ ಅಳಿ’ ಅಂದ. ಶಾಸ್ತ್ರಿ ಮೇಸ್ಟರು ‘ಕೂಡಿ ಬರಬೇಕು ನೋಡು’ ಅಂದು, ಆ್ಞ ಅಂದುಕೊಂಡು ಹೊಸ ಮೇಸ್ಟರ ಜೊತೆಗೆ ಬಾಯಾಡಿಸಿದರು. ಅವರು ಈ ಊರಿಗೆ ವರ್ಗವಾಗಿ ಬಂದಾಗಲಿಂದ ಹಿಡಿದು ಅವರು ಮನೆ ಕಟ್ಟಿಕೊಂಡಿದ್ದು ಬಂತು. ಊರ ಹಬ್ಬ ಹರಿದಿನ ಮದ್ದೆ ಮುಂಜಿಯಿಂದ ಯಂತ್ರಗಿಂತ್ರಕ್ಕೆಲ್ಲ ಊರಿಗೆಲ್ಲ ತಾವೇ ತಾವು ಆದುದು ಬಂತು. ಒಂದಿಷ್ಟು ಹೊಲ ಅಂಥ ಮಾಡಿಕೊಂಡದ್ದು ಬಂತು. ಹಾಗೂ ಹೀಗೂ ಮಾಡಿ ಬಾವಿ ತೆಗೆಸಿದ್ದು ಬಂತು. ರಂಗಪ್ಪನಿಗೆ ಹೊತ್ತಾಯ್ತು ಅನ್ನಿಸಿ ‘ನಾ ಬತ್ತೀನಿ ಬುದ್ದೇರ. ವಸಿ ಗೌಡ್ರಟ್ಟಿತಂಕ’ ಅಂತಲೆ ‘ಒಳ್ಳೇದಪ್ಪ ಒಳ್ಳೇದು’ ಅಂದರು.
೫
ಕೆಕೇಕೆ ಅಂತ ಊರಾಚೆ ಕೆರೆಕಟ್ಟೆ ಮೇಲೆ ಕುಂತು ಸಂಜೆ ಮಾಡುತ್ತಿದ್ದ ಶಿವರಾಮು ಮತ್ತವನ ಎಡಗೈ ಬಲಗೈಗಳು ನಗೋದ ಬಹಳ ಹೊತ್ತು ನಿಲ್ಲಿಸಲೆ ಇಲ್ಲ. ಶಿವರಾಮು ಮಟಮಟ ನೋಡುತ್ತಿದ್ದನು. ಒಬ್ಬನಂತು ಹೊಟ್ಟೆ ಹಿಡ್ಕಂಡೆ ಇನ್ನು ಕುಲು ಕುಲು ಅಂತಿದ್ದನು. ನಿನ್ನೆ ದಿನ ಹೊತ್ತು ಮುಳುಗೊ ಪ್ರೇತ್ತಲ್ಲಿ ಶಿವರಾಮು ಬಾವಿಕಲ್ಲಿನ ಮೇಲೆ ತನ್ನಷ್ಟಕ್ಕೆ ತಾನು ಬೀಡಿ ಸೇದಿಕೋತ ಕುಂತಿದ್ನಂತೆ, ನೀರಿಗೆ ಅಂತ ನರ್ಸಮ್ಮ ಮತ್ತವಳ ಜೊತೆಗೇನೆ ಇರೊ ಕಡಸಿನ ಥರ ಇರೊ ಹೆಣ್ಣೂವಿ ಬಂದರಂತೆ. ಚಲುಗಕ್ಕೆ ಹಗ್ಗ ಕಟ್ಟಿ ಬಾವಿಗೆ ಬಿಟ್ಟಾಗ ಶಿವರಾಮು ನರ್ಸಮ್ಮನ್ನೇ ನೋಡ್ದನಂತೆ. ಅವಳು ಬಾವಿ ಒಳಕ್ಕ ಹೋಗೊ ಚಲುಗ ನೋಡ್ತಾ ಇದ್ದಂತೆ. ಸರಿ ಅಂತ ಇವ ಸುಮ್ನಿರ್ಲಾರ್ದೆ ನೆ ಅತ್ತಗ ತಿರಿಕಂಡು, ಬಾರೆ ಬಾರೆ ಚಂದದ ಚಲುವಿನ ತಾರೆ ಹೇಳೋಕೆ ಸುರು ಮಾಡ್ದನಂತೆ. ನರ್ಸಮ್ಮನಿಗೆ ನಗು ಬಂದು ನಕ್ಕೂ ನಕ್ಕು, ನಗು ತಡಿಲಾರ್ದೇನೆ ನಿಲ್ಲಕ್ಕೂ ಆಗ್ದೇನೆ ನೀರನ್ನು ತಕ್ಕಳ್ದೇನೆ ಹೋದ್ಲಂತೆ. ಆಮೇಲಂತು.
ತನ್ನ ಕಥೆಗೆ ತನ್ನ ಮಿತ್ರರು ಅಷ್ಟೊಂದು ನಕ್ಕದ್ದು ಶಿವರಾಮುಗೆ ಸರಿಕಾಣಲಿಲ್ಲ. ಮೊಖನೆಲ್ಲ ಸಿಡಿಸಿಕೊಂಡು ‘ಅದ್ಯಾನ ಕಂಡ್ರಯ್ಯ. ಅಷ್ಟೊಂದು ನಗಾಕ’ ಅಂತಲೂ ಅವರಿಗೆ ನಗೂನೆ ಬಂತು. ಆದರೆ ನಗೋದು ಚೆಂದಾಗಿಲ್ಲ ಅಂತ ತುಳುಕೊ ನಗುವ ತುಂಬಿಕೊಂಡು ಒಬ್ಬೊಬ್ಬರು ಒಂದೊಂದು ದಿಕ್ಕು ನೋಡತೊಡಗಿದರು. ಹಾಗೆಯೇ ಎಲ್ಲರೂ ವಸಿ ಹೊತ್ತು ತಣ್ಣಗಿದ್ದ ಮೇಲ ರಾಮಣ್ಣ ‘ಅದೇ ವಾರ ವಾರ ಅವಳ ತವಕ ಬತ್ತಾನಲ್ಲ, ಅವ ಅವಳ ಅಣ್ಣ ಅಲ್ವಂತೆ. ಅವ್ನ ಮಡಿಕಂಡವಳಂತೆ’ ಎಂದು ವಸ್ತು ಬದಲಿಸಿ ಸೀರಿಯಸ್ಸು ಮಾಡಿದ. ಅದೆಂದೊ ನಂಗ ಗೊತ್ತಿತ್ತು ಬುಡು ಎಂದು ಶಿವರಾಮು ಅಂದ. ತನಗೆ ಗೊತ್ತಿಲ್ಲದೆ ಜಗತ್ತಿನೊಳಗೆ ಉಳಿಯೋದು ಯಾವುದೂ ಇಲ್ಲ ಅನ್ನೋ ಗತ್ತು ಅವನ ದನಿ ಒಳಗಿಂದ ಉಕ್ತಾ ಇತ್ತು. ಅದಕ್ಕೆ ಇನ್ನೊಬ್ಬ ‘ಅಷ್ಟೆ ಅಲ್ಲಕಯ್ಯಾ. ಗೌಡ್ರ ಹಟ್ಟೀಲಿ ತಾನೇ ಅವ್ಳು ಇರೋದು. ಗೌಡ್ರುವಿ ಅವ್ಳುವಿ ಚಲ್ಲಾಟ ಆಡೋದ ನಮ್ಮಟ್ಟಿ ಜೀತಗಾರ ಕಂಡ್ನಂತೆ’ ಎಂದು ಆ್ಯಡ್ ಮಾಡಿದ. ಆಮೇಲ ತಾವು ಎಷ್ಟೇ ಓದಿದ್ರು ಆ ಇಂಗ್ಲಿಷ್ ಬರಕಿಲ್ವಲ್ಲ. ಅವಳು ಹೆಂಗೆ ಆ ನನ್ನ ಮಗ್ನ ಇಂಗ್ಲಿಷ ಔಲು ಸಿಡಿಯೊ ಥರ ಮಾತಾಡೀಳು! ಅನ್ನುವ ಟಾಪಿಕ್ಕು ಬಂತು. ಅದಿರಲಿ, ತಿಂಗಳಾನುಗಟ್ಟಲೆ ಮೂರು ಕಾಸಿನ ಗೇಮಿಲ್ಲ, ಆದರೂ ಇನ್ನೂರು ಮುನ್ನೂರು ರೂಪಾಯಿ ತಕ್ಕಳೊ ಅವಳ ಲಕ್ಕಿನ ವಿಚಾರ ಬಂತು. ಅದು ಏನಾರು ಹಾಳಾಗಲಪ್ಪ, ಕತ್ತಲಾಗೊ ಮುಂಚೇನೆ ಅವಳ ಮೊಖ ದರ್ಶನ ಮಾಡಿಕೊಂಡು ರಾತ್ರೀಲಿ ಸುಖನಿದ್ರೆ ಮಾಡಬೇಕು ಎಂಬ ಮಾತಿಗೆ ಬಹುಮತ ಸಿಕ್ಕು ಎಲ್ಲರೂ ಎದ್ದರು. ಎದ್ದರು ಪದಕ್ಕೆ ಆಶ್ಚರ್ಯ ಚಿಹ್ನೆ ಹಾಕ್ಕೊಳ್ಳಬೇಕು.
೬
ರಂಗಪ್ಪನ ಎದುರಾ ಮೈತಾಳಿಕೊಂಡು ನಿಂತ ಕಣ್ಣಿದ್ದಷ್ಟೂ ತುಂಬಿಕೊಳ್ಳುವ ಗೌಡರ ಹಟ್ಟಿ ಕಣ್ಣಿಗೆ ರಾಚಿತು. ಅದು ಯಾವ ತಲೆಯದೊ ಏನೊ. ಅರೆಊರ ಆವರಿಸಿಕೊಂಡದು ನಿಂತಿದೆ. ನಿಂತ ನಿಲುವಿಗೆ ಗುಡುಗು ಸಿಡಿಲು ಅಂಜುವುವು. ಆಗಲಿಂದಲು ಈಗಲುವರೆಗೆ ಊರಿಗೆ ಊರನ್ನೆ ಹಿಡಿದುಕೊಂಡಿದೆ. ಅಥವಾ ಊರೆ ಆ ಹಟ್ಟಿಯನ್ನು ಹಿಡಿದುಕೊಂಡಿದೆ ಎಂದಾರು ಹೇಳಬಹುದು. ಆ ಹಟ್ಟಿಗೆ ತಕ್ಕ ಹಾಗೆಯೆ ಅಲ್ಲಿನ ಮನೆಮಂದಿ ಹುಟ್ಟೋದು ಇರೋದು ನಡೆಯೋದು ಸಾಯೋದೂ ಕೂಡ. ಗೌಡರ ಅಪ್ಪ ಅಜ್ಜಂದಿರು ಹಾಗಿದ್ದರು ಹೀಗಿದ್ದರು ಅಂತ ಇರೋ ಕಥೆಗಳು ಊರ ಯಾವ ಹಟ್ಟಿದಾರಂದ ತೆಗೆದರೂ ಹಿಂಡು ಹಿಂಡು ಹೊರಬರುತ್ತವೆ. ಗೌಡರಂತು. ನಡೆದಾಡಿದರೇನೆ ಬೀದೀನೆ ತುಂಬಿಕೊಂಡಿತೇನೊ ಎಂಬಷ್ಟು ಎಂಬಂತೆ. ಅವರಿವರು ಅಂತಾರೆ – ಕಿರುಬನ ಮುಚ್ಚಿ ಗೌಡರ ತೋರಿಸಬಹುದು. ಗೌಡರ ಮುಚ್ಚಿ ಕಿರುಬನ ತೋರಿಸಬಹುದು. ಅವರು ಮೊಖದ ತುಂಬ ಇರೊ ಸಿಡುಬಿನ ಕುಳಿಗಳನ್ನು ಮುಚ್ಚಿಕೋತ ಅತ್ತಗಷ್ಟು ಇತ್ತಗಷ್ಟು ಪೊದೆಯಂಥ ಮೀಸೆ ದಿಕ್ಕಾಪಾಲು ಹೋಗಿ ಅವರು ನಕ್ಕರೂ ಅದು ಕಾಣದು. ಅದಿರಲಿ.
ಆಗ ಹೊತ್ತು ಬಿಟ್ಟೋದ ಬೆಳಕು ಭೂಮಿಮೇಲ ಆಡುತ್ತಿತ್ತು. ಜಗಲಿ ಮನೇಲಿದ್ದ ನರ್ಸಮ್ಮ ವಸ್ತಿಲ ಬಳಿ ಪುಸ್ತಕ ಹಿಡಿದು ಕುಂತಿದ್ದಳು. ಆಗಲೆ ತಲೆದಪ್ಪದ ಗಳಾಸು ದೀಪ ಹಚ್ಚಿದರು. ದೀಪದ ಬೆಳಕು ಅವಳ ಮೊಖಕ್ಕೆ ಬಿದ್ದು ಸೂರ್ಯ ಒಂದ್ಕಡೆ, ಚಂದ್ರ ಒಂದ್ಕಡೆ ಹೊಳೆಯೊ ಥರಾನೆ ಇದ್ದಳು. ಅವಳು ಅಪರೂಪಕ್ಕೆ ಉಡುವಂಥ ಬಣ್ಣ ಎರಚುವ ಸೀರೆ ಅವಳಿಗಂಟಿಕೊಂಡಿತ್ತು. ಅವಳು ತಲೆ ಎತ್ತಿದಾಗ ರಂಗಪ್ಪ ಕಣ್ಣಿಗೆ ಬಿದ್ದು “ಏನು ರಂಗಪ್ಪ ಅಪರೂಪ” ಅಂದಳು. ಅವಳೆ ನಡುಬಾಯಾಕಿ “ಯಾಕೆ ರಂಗಪ್ಪ ಇಷ್ಟೊಂದು ಹಣ್ಣು ಹಿಡಿದಿದ್ದಿ’ ಅಂತಲೆ ಒಂದು ಹ್ಯಾಪನಗೆ ನಕ್ಕನು. ಹೊರಗಿನ ಸದ್ದು ಕೇಳಿಯೊ ಅಥವಾ ಲೋಕಾಭಿರಾಮವಾಗೊ ಗೌರವ್ವರು ಬಂದರು. ಅವರು ಉಟ್ಟಿದ್ದ ಹೊಸ ಗರಿಗರಿ ಹಸಿರು ಸೀರೆ ಸುಮ್ಮನಿರದೆ ನಿಂತರು ಕುಂತರು ಸರಸರ ಮಾಡ್ತ ಇತ್ತು. ಮೊಳಕಯ್ಯವರೆಗೂ ಬಳೆ ತೊಟ್ಟಿದ್ದ ಕಯ್ಯ ಆಡಿಸಿ – ಅವ್ರು ಇಲ್ವಲ್ಲ ರಂಗ, ಬಂದೇ ಇಲ್ಲ. ಎಂದು ಬತ್ತಾರೊ ಏನಪ್ಪ- ಅಂದು ಅವರೆ ಏನ್ಬಂದೆ ಅಂದರು. ಹಟ್ಟಿದಿಕ್ಕ ಅಂಗರ್ತು ಏನಿಲ್ಲ ಅಳಿ. ಏನಾರು ಜೋಳ ಗೀಳ ಅಂತ ಅವನು ಅಂದು ಮುಗಿಸೋಕು ಮೊದಲೆ – ಅದೊಳ್ಳೆ ಸರಿಕ ಇವ್ನೆ. ಎಲ್ಲಿಂದ ತಾನೆ ನಾವು ತರುವ? ನಾವೆ ಮಾನವಾಗಿ ಬದಿಕಂಡು ಹೋಗೋದು ಕಷ್ಟ ಆಗದೆ -ಎಂದು ನಿಡಿದು ಉಸುರುಬಿಟ್ಟು ಸುಮ್ಮನಾದರು. ರಂಗಪ್ಪನಿಗೂ ಆಗ ಮಾತುಗಳು ಹೊಟ್ಟ ಒಳಗಿಂದ ಹೊರಕ್ಕೆ ಬರಲಿಲ್ಲ.
ಅವನು ಸುಮ್ಮನಾದನು. ಎಷ್ಟೋ ಹೊತ್ತು ಸುಮ್ಮನಾಗೆ ಇತ್ತು. ಗೌರವ್ವಗೆ ನೆಪ್ಪು ತವಕನೆ ಬಂದು- ಇವ್ನೆ ಒಂದು ಸೌದೆ ಕೊಂಟಿದೆ. ಸೌದೇನೆ ಇಲ್ಲ. ವಸಿ ವಡಕೊಡು – ಅಂದರು. ಜೀತದ ಹೈದ ಕೊಳ್ಳಿ ಕೊಂಟು ತಂದು ಅಂಗಳಕ್ಕೆ ಇಟ್ಟು ಒಳಕ್ಕೆ ಹೋತು. ರಂಗಪ್ಪ ಕೊಳ್ಳಿ ಹಿಡಕಂಡು ಸೌದಕೊಂಟ ಹದಕ್ಕೆ ಮಲಗಿಸೋಕೆ ಬಾಳಹೊತ್ತು, ಅತ್ತಿತ್ತ ಅಲುಗ್ಸುತ ಅಲುಗ್ಸತ ಆ ಕೊಂಟಂತು ಮಗಂದು ಗಂಟುಗಂಟಾಗಿತ್ತು. ಗೌರವ್ವರು ನರ್ಸಮ್ಮರು ಮಾತಿಗೆ ತೊಡಗಿದ್ದರು. ಅವರು ಏನೋ ಹೇಳೋದು ಅದಕ್ಕಿವರು ಏನೊ ಹೇಳೋದು ಆಗುತ್ತಿತ್ತು. ಗೌರವ್ವರು ಕಯ್ಯನು ಎತ್ತಿದರ ಇಳಿಸಿದರ ಬಳೆ ಜಲ್ಲಂತ ಮಾತಿಗೆ ದನಿ ಕೊಡ್ತಾ ಇತ್ತು. ನರ್ಸಮ್ಮ – ಹಳ್ಳಿನೆ ಒಂಥರಾ ಚೆನ್ನಾರಿ. ಎತ್ತಕಡೆ ನೋಡಿದ್ರೂ ಹಸಿರು ಹಸಿರಾಗಿರುತ್ತೆ. ಕಾಳುಕಡ್ಡಿ ಅಂಥ ಕೊಳ್ಳಾಗಿಲ್ಲ. ಸಿಟಿಲಾದ್ರೆ – ಅಂತ ಏನೊ ಹೇಳಿದ್ಲು. ಗೌರವ್ವರು ಕಯ್ಯಾಡಿಸಿಕೋತ ಅದಕ್ಕೇನೊ ಹೇಳಿದರು. ಅವರು ಹೇಳಿದ್ದು ಏನು ಎಂಬುದು ಬಳೆ ಸದ್ದೊಳಗೆ ಅಡಗಿಹೋತು. ಇತ್ತ ರಂಗಪ್ಪ ಅಂಗಳದಲ್ಲಿ ಕೊಳ್ಳಿ ಎತ್ತಿ ಇದ್ದ ಬದ್ದ ಬಲನೆಲ್ಲ ಬಿಟ್ಟು ಕೊಂಟಿಗೆ ಏಟು ಕೊಡುತಾ ಅದ್ಯಾಕೊ ಬತ್ತಾ ಬತ್ತಾ ಅವನ ಕಣ್ಣು ಮಂಜಾಗುತ್ತಿತ್ತು. ಕಣ್ಣು ಮಂಜಾದಂತೆಲ್ಲ ಒಂದೊಂದು ಸಲ ರಂಗಪ್ಪನಿಗೆ ಸರ್ಕಸ್ಸಲ್ಲಿ ಬಂದಂತೆ ಗೌಡ್ರು ಗೌರವ್ವರು ನರ್ಸಮ್ಮ ಶಾಸ್ತ್ರಿ ಮೇಸ್ಟ್ರು ಹೊಸ ಮೇಸ್ಟ್ರು ಎಲ್ಲ ಕೊಂಟಿನಲ್ಲಿಯೆ ಮೂಡುತ್ತಿದ್ದಂತೆಯೆ ಆಗುತ್ತ ಮೈತುಂಬ ಸುಸ್ತು ಹಿಡ್ಡು ಆಗಲೀಗ ನೆಲಕ್ಕೆ ಕಯ್ಯೂರಿ ನಿಧಾನವಾಗಿ ಕೂತನು. ಬಾನಿಂದ ಕತ್ತಲು ಭೂಮಿಗೆ ತಾರಮಾರ ದುಮುಕ್ತ ನೆಲ ಸೇರ್ತ ಇತ್ತು.
ಅಷ್ಟೊತ್ತಿಗೆ ಶಿವರಾಮು ಮತ್ತು ಮಿತ್ರವೃಂದ ಸಿಳ್ಳು ಹಾಕೊಂಡು ಹಾದು ಹೋಯಿತು. ಮಾತೊಳಗೆ ಬೆರೆತು ಹೋಗಿದ್ದ ಗೌರವ್ವ ನರಸಮ್ಮನವರಿಗೆ ಮಾತೆ ಸರ್ವಸ್ವ ಆಗಿತ್ತು. ತವಕನೆ ತಿರುಗಿ ನೋಡಿದಾಗ ರಂಗಪ್ಪ ನೆಲಕ್ಕೆ ಊರಿದ್ದ ಕಯ್ಯ ಊರಿಕೊಂಡೆ ಕುಂತಿದ್ದನು. ಇದಕಂಡ ಗೌರವ್ವರು ಅಲ್ಲಿಂದಲೆ – ಯಾಕ? ಏನಾಯ್ತು ಇವ್ನೆ – ಅಂದರು. ರಂಗಪ್ಪ ಮೆತ್ತಗಲ ದನೀಲಿ-ಅದ್ಯಾಕೂ ಆಗಕಿಲ್ಲ ಅಳಿ-ಅಂದನು. ಅಷ್ಟು ಹೇಳೋಕೆ ತಾಯಿ ಹೊಟ್ಟ ಒಳಗಿಂದ ಇನ್ನೊಂದ್ಸಲ ಜನ್ಮ ಕಂಡಂಗಾಯ್ತು. ಗೌರವ್ವರು ಎದ್ದು “ಅಯ್ಯೋ ಸಿವ್ನ. ಸೌದೇನೆ ಇಲ್ದೆ ಇವತ್ತು ಏನಪ್ಪ ಮಾಡದು. ದನ ತಿನ್ನೊ ಜೋಳದ ಕಡ್ಡೀನೆ ಗತಿಯಾತಲ್ಲ” ಎಂದು ಒಳಕ್ಕೆ ಹೋದರು. ಅವರು ಬಾಳ ಒಳಕ್ಕೆ ಹೋಗುವವರೆಗೂ ಅವರ ಸೀರೆಯ ಸದ್ದು ಕೇಳಿಸುತ್ತಿತ್ತು. ಆಮೇಲ ಅಂಗಳ ತುಂಬಾ ಬಣ ಬಣ ಅಂತು. ರಂಗಪ್ಪ ನೆಲಕ್ಕೂರಿದ್ದ ಕಯ್ಯ ಬಲದಿಂದಲೆ ಮೇಲಕ್ಕೆದ್ದನು. ಹೆಜ್ಜೆಯನ್ನು ಕಿತ್ತು ಕಿತ್ತು ಇಟ್ಟಂತೆಲ್ಲ ಅವನ ಮಗ ಅವನ ಹೆಂಡತಿ ಅವನ ಜೋಪಡಿ ಹತ್ತತ್ತಿರ ಬಂತು.