ಒಂದು ದಹನದ ಕಥೆ -ದೇವನೂರ ಮಹಾದೇವ
[1970ರಲ್ಲಿ ಬರೆದ ಈ ಕತೆಯು “ದ್ಯಾವನೂರು” ಸಂಕಲನದಲ್ಲಿ ದಾಖಲಾಗಿದೆ. ನಮ್ಮ ಮರು ಓದಿಗಾಗಿ ಹಾಗೂ ಯೂಟ್ಯೂಬ್ ಮೂಲಕ ನಮ್ಮ ಮರು ಆಲಿಸುವಿಕೆಗಾಗಿ…]
ಬಿಟ್ಟ ಕಣ್ಣ ಬಿಟ್ಟಹಾಗೆ ಬಿಟ್ಟು ಮಲಗಿದ್ದೆ. ಗೋಡೆಯ ಮೇಲೆ ಹರಡಿಕೊಂಡಿದ್ದ ಅಡ್ಡಾದಿಡ್ಡಿ ಗೆರೆಗಳ ಮೇಲೆ ದೃಷ್ಟಿ ನೆಟ್ಟಿತ್ತು. ನಿಧಾನವಾಗಿ ಕಪ್ಪುಗಟ್ಟುತ್ತಿದ್ದ ಲಾಟೀನ ಬೆಳಕಿಗೆ ಗೆರೆಗಳು ಕ್ಷಣ ಕಳೆದಂತೆ ಮಸುಕಾಗುತ್ತಿದ್ದವು. ನೋಡುತ್ತ ನೋಡುತ್ತ ನೋಡುತ್ತಿದ್ದಂತೆ ಗೆರೆಗಳಿಗೆ ರೂಪ ಬಂದಂತೆ. ಬಂದ ರೂಪವನ್ನು ಎಲ್ಲೋ ನೋಡಿದ್ದ ಹಾಗೆ. ಅದಕ್ಕೆ ಎಲ್ಲಿಲ್ಲದ ಆವೇಶ ಬಂದಂತೆ. ಹೆದರಿ ಕಣ್ಣು ಮುಚ್ಚಿದರೆ ಭಯಂಕರ ಬೆಳೆದು ಮನೆ ತುಂಬ ನಿಂತು ಅಲ್ಲಾಡಿಸಿ ಕುಣಿದು ಅಂಗಳಕ್ಕೆ ಧುಮುಕಿ ಅಲ್ಲಿ ಉರಿಯುತ್ತಿದ್ದ ಸೌದೆ ಸೀಳು ಹಿಡಿದು ಮತ್ತೂ ಕುಣಿಯತೊಡಗಿದರೆ ಅದರ ಸುತ್ತ ಅದರಂತೆ ನಾಲ್ಕಾರು ರೂಪಗಳು. ಕಣ್ಣುಗಳು ಭೊಗ ಭೊಗ ಉರಿದಂತೆ ಅನಿಸಿ ಬೆದರಿ ಕಣ್ಣು ಬಿಟ್ಟರೆ ಮತ್ತೆ ಅದೇ ಗೋಡೆ ಮೇಲಿನ ಗೆರೆಗಳು.
ಯಾಕೆ ಹೀಗೆ? ಬೆಚ್ಚಗೆ ಕಂಬಳಿ ಹೊದ್ದು ಮಲಗಿಸಿ ಮೈ ತಟ್ಟುತ್ತ ಅಜ್ಜಿ ಹೇಳುತ್ತಿದ್ದ ಅಡವಿ ಅರಣ್ಯ ಕತೆಯಲ್ಲಿ ದಿಕ್ಕು ತಪ್ಪಿದ ಹಾಗೆ. ಹಟ್ಟಿತುಂಬ ಅಂಗಳತುಂಬ ದನಿ ತುಂಬಿಕೊಂಡ ಹಾಗೆ. ವಾಸನೆ ಹೋಗಲಿ ಅಂತ ಪೊಟ್ಟಣಗಟ್ಟಲೆ ಹಚ್ಚಿದ್ದ ಊದುಬತ್ತಿ ವಾಸನೆಯೆ ವಾಂತಿ ಬರಿಸುತ್ತಿತ್ತು. ಅಂಗಳದಿಂದ ಬರುವ ಸೌದೆಸೀಳಿನ ಹೊಗೆ ಉಸಿರು ಸಿಕ್ಕಿಸುತ್ತಿತ್ತು. ನಿಂತರೂ ಕುಂತರೂ ಎಂಥದೊ ಚಡಪಡಿಕೆ. ದೇಹ ಪೂರ್ತ ತಳಮಳಿಸುತ್ತಿತ್ತು. ಹೊರಗಾದರೂ ಹೋಗಿ ಕೆಂಡ ಕಾರುವ ಬೆಂಕಿ ನೋಡುತ್ತಾ ಇಲ್ಲವೆ ಸೊರಟಿಗೊಂಡು ಜಗಲಿ ಮೇಲೆ ತಣ್ಣಗೆ ಮಲಗಿರುವ ಅಜ್ಜಿಯ ದೇಹ ನೋಡುತ್ತ ಕೂರಬೇಕೆನಿಸಿತು. ಮನಸ್ಸಾದರೂ ಹಾಗೆ ಮಾಡಲಾಗುತ್ತಿಲ್ಲ. ಇಲ್ಲೆ, ಈ ಮಂಚದ ಮೇಲೆಯೆ ಅಂಟಿಸಿಬಿಟ್ಟಂತಾಗಿದೆ. ಗೋಡೆ ಗೆರೆಗಳು ಹೊರಗೆ ಹೋಗಲು ಬಿಡದೆ ಸುತ್ತುಗಟ್ಟಿವೆ ಅನಿಸುತ್ತದೆ. ಹನ್ನೆರಡು ವರ್ಷದಿಂದ ಕೊಳೆತು ಮುಗ್ಗಲುಗಟ್ಟಿರುವ ಹಟ್ಟಿ ತನ್ನೊಳಗೇ ಒಂದು ಕಾಡನ್ನು ಸೃಷ್ಟಿಸಿಕೊಂಡು ಅಲ್ಲಿಂದ ಇಲ್ಲಿಯವರೆಗೆ ಪೂರ್ವಿಕರು ಮಾಡಿದ ಪಾಪದ ಹಾಗೆ-ಮೂಲೆಯಲ್ಲಿ ಒಂದೆರಡು ನನ್ನುದ್ದದ ಎಕ್ಕದ ಗಿಡಗಳು. ಅದರ ಪಕ್ಕದಲ್ಲಿ ಮಂಡಿ ಉದ್ದದ ಹುತ್ತ. ಮನೆ ತುಂಬ ಬಲೆ ನೇದಿರುವ ಜೇಡಗಳು. ಮೇಲಿಂದ ಕೆಳಕ್ಕೆ ಕಪ್ಪಗೆ ಇಳಿಬಿದ್ದಿರುವ ಎಂಥದೊ ದಾರದ ಥರ. ತೊಟ್ಟಿಯ ಪಕ್ಕ ಉದುರಿ ಉದುರಿ ಚಿಂದಿ ಹಿಡಿದು ನೆಲಕ್ಕಂಟಿದ ತೊಂಬಗಳ ಅವಶೇಷ. ಸುತ್ತಮುತ್ತ ಸಕತ್ತು ಚೂರುಪಾರು ಹೆಂಚು. ಅದರ ಮೇಲೆ ಕವುಚಿ ಅಂಗೈ ಮಂದದ ಬೂದುದೂಳು. ಕುಟ್ಟ, ಹಿಡಿದು ಹಳದಿ ಪುಡಿ ಉದುರಿಸುತ್ತ ಒಟ್ಟಿನಲ್ಲಿ ನಿಂತ ಮುಂಡಿಗೆ ಕಂಬಗಳು. ಮನೆ ತುಂಬ ಇಲಿಗಳು ದರಿಕೊರೆದು ಹೊರಕ್ಕೆ ಕೆಡವಿದ ರಾಶಿ ಮಣ್ಣು. ಚಿಕ್ಕಂದಿನ ನಾನು ಹುಟ್ಟಿ ಬೆಳೆದ ಹಟ್ಟಿ ಕಣ್ಣಲ್ಲಿ ಇಳಿದು ಇದು ಹೌದೆ ಅಂತ ಅನುಮಾನ ಹುಟ್ಟಿಸುತ್ತದೆ. ಹೊರಗೆ ತಮಟೆ ಸದ್ದು “ನ್ಯಾಯಕ್ಕೆ ಬನ್ನಿ. ಎಲ್ಲಾ ಸೇರ್ತಾ ಅವ್ರೇ” ಎಂದು ಅನ್ನುತ್ತ ಚಕ್ರ ನಮ್ಮ ಹಟ್ಟಿ ಮುಂದೂ ಹಾದುಹೋದುದ ಕಿಟಕಿ ತೆರೆದು ಕಣ್ಣು ಹೊರ ಹಾಕಿದ್ದರೆ ನೋಡಬಹುದಿತ್ತು.
….ಮುಖದಲ್ಲಿ ಕೆಲಸ ಸಿಕ್ಕಿದ ಕಳೆ ಹೊತ್ತು ಊರಿಗೆ ಬಂದರೆ ದೊಡ್ಡಪ್ಪ ಅಳೆದು ಸುರಿದು ನೋಡಿದ. ಒಳಗೊಳಗೇ ಅಳುಕು. ಅಚ್ಚರಿ ಹುಟ್ಟಿಸುವ ಹಾಗೆ ಅಜ್ಜಿ ಬಾಯಿಕಟ್ಟಿ ಕುಳಿತಿದ್ದಳು. “ಕೆಲ್ಸ ಏನೋ ಸಿಕ್ತು. ಆದ್ರೆ ತುಂಬಾ ದೂರ” ಅಂದೆ. ಯಾರೂ ಮಾತೇ ಇಲ್ಲ. ಮತ್ತೂ ಅದೇ ಅವರ ವಕ್ರದೃಷ್ಟಿ ಸಹಿಸಲಾಗಲಿಲ್ಲ. ಚಿಮ್ಮಿದಂತೆ “ಏನಾಗಿದೆ ನಿಮಗೆಲ್ಲ” ಅಂದೆ. ದೃಷ್ಟಿ ತೆಗೆಯದೆ ದೊಡ್ಡಪ್ಪ ಸರಾಗವಾಗಿ ‘ಚೆನ್ನಾಗಿದೆ’ ಅಂದ. ಉಸಿರು ಕಟ್ಟತೊಡಗಿ ದೊಡ್ಡತಗೆ ಉಸಿರು ಬಿಟ್ಟು ಪೆಟ್ಟಿಗೆ ಮೇಲೆ ಕೂತು “ಅಲ್ಲಾ” ಅಂತ ದೊಡ್ಡಪ್ಪ ಅಂದಾಗ ತಿರುಗಿ ಅವನನ್ನೇ ನೋಡಿದಾಗ ಕೆಮ್ಮಿ “ದೇವರು ಬಂದಂಗೆ ಊರಿಗೆ ಬರ್ತಿದ್ದವ, ಇಂದೇ ಬರಬೇಕಿತ್ತ” ಅಂದ. ಏನಾಯ್ತು ಏನಾಗಿದೆ ಮುಖದಿಂದ ಮನೆ ಸುತ್ತ ಕಣ್ಣಾಡಿಸಿ ಮತ್ತೆ ದೊಡ್ಡಪ್ಪನ್ನೆ ನೋಡಿದೆ. “ನಾವೆಲ್ಲ ಮೊಖ ಎತ್ತಿ ತಿರಗದಂಗೆ ಮಾಡ್ಡೆ. ಅಪ್ಪ ಅವ್ವ ಇಲ್ಲದ ತಬ್ಬಲಿ ಅಂತ ನಿನ್ಗಾಗಿ ಅತ್ತೇರೂ ಜೀವ ತೇದದ್ದಕ್ಕೆ, ನಾನೂ ಅಷ್ಟು ಇಷ್ಟು ನನ್ನ ಕೈಲಾದ ಸಹಾಯ ಮಾಡಿದ್ದಕ್ಕೆ ಸರಿಯಾಗೆ ಮಾಡ್ದೆ! ಇನ್ನೇನ ತಕ್ಕೊ. ನೀ ಯಾನ ಇಲ್ಲೆ ಇರ್ತಿದ್ಯಾ. ಅನುಭೋಸವರು ನಾವು ತಾನೆ?”. ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ಮಾತುಗಳು. ಅಸಹ್ಯವನ್ನು ಹೊಟ್ಟೆಯಲ್ಲಿ ತುಂಬಿಟ್ಟುಕೊಂಡಹಾಗೆ ಕೂತೆ.
ಅಷ್ಟು ಹೊತ್ತಿಗೆ ಹೊರಕ್ಕೆ ಹೋಗಿದ್ದ ದೊಡ್ಡವ್ವ, ಅಕ್ಕ, ನಾಗಿ ಒಬ್ಬೊಬ್ಬರೆ ಒಳ ಬಂದರು. ಕಂಡವಳೆ ದೊಡ್ಡವ್ವ “ಈಗ ಬಂದ್ಯಾ” ಅಂದು ಮಿನುಗುಡುತ್ತಿದ್ದ ದೀಪ ಬೆಳಕು ಎತ್ತರಿಸ ಹೋದಳು. ನಾಗಿ ನನ್ನ ಕಡೆ ನೋಡಿ ಸರಕ್ಕನೆ ಕಣ್ಣು ಬದಲಾಯಿಸಿ ನಡುಮನೆ ಹೊಸ್ತಿಲ ಬಳಿ ಕೂತು ದೀಪದ ಬೆಳಕ ದೊಡ್ಡದು ಮಾಡುತ್ತಿದ್ದ ದೊಡ್ಡವ್ವನನ್ನೇ ನೋಡಿದಳು. ಇವರೆಲ್ಲ ಹೀಗೆ ನಡೆದುಕೊಳ್ಳುತ್ತಿರುವುದು ಒಂದೂ ಅರ್ಥವಾಗುತ್ತಿಲ್ಲ. ದೊಡ್ಡಪ್ಪ ದನಿ ತೆಗೆದು “ಇವೊತ್ತು ನ್ಯಾಯ” ಅಂದ. ಸುಮ್ಮನೆ ನೋಡಿದೆ. ಮುಂದಕ್ಕೆ ಮಾತಾಡದ್ದ ಕಂಡು “ಯಾಕೆ ನ್ಯಾಯ” ಅಂದೆ. ಸೀಳಿದ ಹಾಗೆ “ಯಾಕೆ? ಅಂತ ಬೇರೆ ಕೇಳ್ತಿ ಅಲ್ಲಯ್ಯಾ! ನೀ ಮಾಡ್ದ ಅತಂತ್ರಕ್ಕೆ, ನಾ ಏನಾದ್ರೂ ಇಲ್ದಿದ್ರೆ ನಿನ್ನ ಮಾನಾನೂ ಇಲ್ಲ. ನನ್ನ ಮಾನಾನೂ ಇಲ್ಲ. ಆ ನಿನ್ನ ಕಮ್ಲಿ ಬೆಂಮನ್ಸೆಯಾಗವ್ಳೆ. ಜಾತಿಯಲ್ಲದ ಜಾತಿ, ಓದ್ದೋವ ನೀನು. ತಿಳುವಳ್ಕೆ ಇಲ್ದವನ ಹಂಗೆ ಚೆ ಚೆ ತಗಿ ತಗಿ” ಎಂದು ದೊಡ್ಡಪ್ಪ ಸುಸ್ತಾದವನಂತೆ ಉಸಿರು ಬಿಟ್ಟು ಮೇಲಕ್ಕೂ ಕೆಳಕ್ಕೂ ನೋಡಿ ಕೊನೆಗೆ ತೊಟ್ಟಿ ಬಾಯಿಂದ ಕಾಣುವ ಆಕಾಶ ನೋಡುತ್ತ ಕೂತಾಗ ಕಕ್ಕಾವಿಕ್ಕಿ ಆಯಿತು. ತಳಮಳಿಸತೊಡಗಿ ಕೂರಲಾಗದೆ ಸಿಗರೇಟನ್ನಾದರೂ ಸೇದಬೇಕೆಂದೆನಿಸಿ ಮೇಲಕ್ಕೆ ಎದ್ದಾಗ ದೊಡ್ಡಪ್ಪ ನನ್ನ ಕಡೆ ನೋಡಿ “ಈಗೇನು ಆಗಿಲ್ಲ ತಕ್ಕೊ. ಅವರ ಜಾತೀಲೆ ಒಬ್ಬ ಕಾರಣ ಅಂತ ಒಪ್ಪಿಸಿಬಿಟ್ಟಿವಿನಿ. ಆ ಕಾಟವೇ ಇಲ್ಲ” ಅಂದು ಮಾತು ನಿಲ್ಲಿಸಿ ಮತ್ತೆ ಆರಂಭಿಸಿ ತಡೆದೂ ತಡೆದೂ “ಅಂದಹಾಗೆ ಜಾತಕ ಕೂಡಿ ಬಂತು, ಹೆಂಗೂ ಎಲ್ರೂ ಒಪ್ಪವ್ರೆ. ಲಗ್ನ ಕಟ್ಟಾಯ್ತು. ನನ್ನ ಆಸ್ತಿ ಇನ್ನಾರಿಗೆ ಸೇರಬೇಕು ಹೇಳು. ನಮಗ್ಯಾವ ಗಂಡು ಮಕ್ಕಳು ಇದ್ದಾವು? ಏನೆ ಆಗ್ಲಿ ಕಾಡು ಮಾಡಕ್ಕೆ ಆಗೋಲ್ಲ ನೋಡು” ಎಂದು ನನ್ನ ನೋಡಿದಾಗ ನಡುಕ ಬಂದಂತೆ, ಕಣ್ಣಿಗೆ ಕತ್ತಲು ಹಿಡಿದಂತೆ, ತಡಬಡಾಯಿಸಿಕೊಂಡು ಹೊರಕ್ಕೆ ಬಂದೆ. ಕಡ್ಡಿ ಕೊರೆದು ಸಿಗರೇಟು ಹಚ್ಚಿ, ಹಚ್ಚಿದ ಬೆಳಕಲ್ಲೆ ನನ್ನ ಮುಖ ನೋಡಿಕೊಳ್ಳಬೇಕೆನಿಸಿತು…
ಯಾವ ಕಡೆ ಹೊರಳಿದರೂ ಗೆರೆಗಳು. ನೋಡುನೋಡುತ್ತಿದ್ದಂತೆಯೇ ರೂಪು ಪಡೆದುಕೊಳ್ಳುವ ಜೀವ ಪಡೆದುಕೊಳ್ಳುವ ಗೆರೆಗಳು. ಇದಕ್ಕೆ ಕೊನೆಯೆ ಇಲ್ಲವೆ. ಮೊಗ್ಗಲು ಬದಲಾಯಿಸಿದೆ. ಮಯ್ಯಿ ಹೆಣಬಾರ. ಶಕ್ತಿ ಎಲ್ಲಾ ಎಲ್ಲೋ ಹುದುಗಿ ಹೋಗಿ ಮಾಂಸದ ತುಂಬ ನೋವು ಮರಿಮಾಡುತ್ತಿರುವಂತೆ. ಹೀಗೆ ಮೊಗ್ಗಲು ಬದಲಿಸಿ ಬದಲಿಸಿ ಕಾಲ ನೂಕುವುದರ ಬದಲು ಹೊರಕ್ಕಾದರೂ ಹೋಗಿ ಕೂತುಕೊಳ್ಳಬೇಕೆನಿಸಿ ಎದ್ದು ಹಜಾರಕ್ಕೆ ಬಂದೆ. ಕೊಟ್ಟಿಗೆ ಕಡೆ ಒಂದಿಷ್ಟು ಹಾರಾಡುವ ಪಟಪಟ ಬಡಿದುಕೊಳ್ಳುವ ಕೀಚುಬಾಲದ ಹಕ್ಕಿಗಳು. ಹಜಾರದಲ್ಲಿ ನೇತುಹಾಕಿದ್ದ ಲಾಟೀನು ಗಾಜು ಮಸಿ ತುಂಬಿಕೊಂಡು ಕಪ್ಪುಬೆಳಕನ್ನೆ ಕಕ್ಕುತ್ತಿರುವ ಹಾಗೆ ಕಂಡು ದಿಗಿಲಾಯಿತು. ಹುತ್ತ ಎಕ್ಕದ ಗಿಡ ಇದ್ದ ಕಡೆ ನೋಡಲಾಗಲಿಲ್ಲ. ಒಂದೆರಡು ಕೀಚುಬಾಲದ ಹಕ್ಕಿ ಹತ್ತಿರದಲ್ಲೇ ಹಾರಿ ಹೋಗಿ ಭಯ ಆಯಿತು. ತಕ್ಕನೆ ಲಾಟೀನು ಬತ್ತಿ ಎತ್ತಿ ದೊಡ್ಡದು ಮಾಡಿದೆ. ಧಗಧಗ ಹೊಗೆ ಕಡೆಯತೊಡಗಿತು. ನೇತು ಹಾಕಿದ್ದ ಗಳದಿಂದ ಲಾಟೀನು ಕಸಿದು ಹೊರಕ್ಕೆ ಬಂದೆ. ಅಂಗಳದಲ್ಲಿ ಇರಿಸಿದ್ದ ಸೌದೆಗಳು ತಮ್ಮ ಸುತ್ತ ಕೆಂಡ ಹರಡಿಕೊಂಡು ಅಂಗಳ ಕೆಂಪು ಮಾಡಿದ್ದವು. ಜಗಲಿ ಮೇಲೆ ತಲೆ ಮಾತ್ರ ಕಾಣಿಸುವ ಹಾಗೆ ಹೊದಿಸಿದ್ದ ಬಿಳಿ ಬಟ್ಟೆಯೊಳಗೆ ಅಜ್ಜಿಯ ದೇಹ ಅಡುಗಿತ್ತು, ತಲೆದೆಸೆಯಲ್ಲಿ ಉರಿಯಲು ಸೆಣಸುತ್ತ ಕೈಯೆಣ್ಣೆ ದೀಪ ಉರಿಯುತ್ತಿತ್ತು. ದೀಪದ ಪಕ್ಕದಲ್ಲಿ ಏಳೆಂಟು ಊದುಬತ್ತಿ ಪೊಟ್ಟಣ, ಅವಕ್ಕೆ ಸಿಕ್ಕಿಸಿರುವ ಉರಿದೂ ಉರಿದೂ ಉರಿಯುತ್ತ ಬೂದಿದಾರ ಕೆಳಕ್ಕೆ ಇಳಿಬಿಟ್ಟ ಊದುಕಡ್ಡಿಗಳು, ನೋಡಲಾಗದೆ ಮೇಲಕ್ಕೆ ನೋಡಿದೆ. ಬಚ್ಚಲಲ್ಲಿ ಮಿಸುಕಾಡುವ ಬಿಳಿ ಹುಳಗಳಂತೆ ನಕ್ಷತ್ರಗಳು.
ತಣ್ಣಗೆ ಗಾಳಿ ಬೀಸಿಹೋಯಿತು. ಚಾವಡಿಯಲ್ಲಿ ಏನೊ ಗದ್ದಲ. ಯಾರೊ ಒಬ್ಬ ಕೀರಲು ದನಿಯಲ್ಲಿ ಬಡಬಡ ಮಾತಾಡುತ್ತಿದ್ದ. ಕಿವಿಗೊಟ್ಟು ಕೇಳಿದರೂ ಯಾರ ದನಿ ಅಂತ ತಿಳಿದು ಬರಲಿಲ್ಲ. ಸ್ವಲ್ಪ ದೂರ ನಡೆದು ಹೋಗಿ ಆಲಿಸಿದೆ. “ಅದದ್ದು ತಿರುಗಿ ಬರೊಲ್ಲ. ಏನೊ ಆಯ್ತು. ತಪ್ಪು ತಕ್ಕಳವ. ಸತ್ತ ಹೆಣನಾ ಮುಂದು ಮಡಿಕಂಡು ನಮ್ಮ ವೈಮನ್ಸು ಬೇಡ” ಎಂದು ಒಬ್ಬರು. ಅದಕ್ಕೆ ನಾಲ್ಕಾರು ಜನ ಒಟ್ಟಿಗೆ ಮಾತಾಡಿ ಏನೆಂದು ತಿಳೀಲಿಲ್ಲ. ಆದದ್ದು ಆಗುತ್ತೆ, ಯಾಕೆ ಹೀಗೆ ನಿಲ್ಲುವುದು ಅಂದುಕೊಂಡು ಬಂದು ಲಾಟೀನು ಗಾಜಿನ ಮಸಿ ವರಸಿದೆ. ಕಡ್ಡಿ ಗೀರಿ ಲಾಟೀನು ಹಚ್ಚಿ ಆ ಬೆಂಕೀಲೆ ಸಿಗರೇಟು ಹಚ್ಚಿದೆ. ಲಾಟೀನು ಪಳ ಪಳ ಹೊಳೆಯತೊಡಗಿತು. ದೊಡ್ಡಪ್ಪನ ಸುಕ್ಕುಗಟ್ಟಿದ ಯೋಚನೆಗಳು ತಲೆಗೆ ಬಂದವು.
…ಜಗತ್ತು ಗೆದ್ದವನಂತೆ ದಾಪುಗಾಲು ಹಾಕುತ್ತ ಬಂದ ದೊಡ್ಡಪ್ಪ “ಎಲ್ಲ ಮುಗೀತು. ದೇವರ ದಯ” ಅಂದ. ಸಂಕಟ ಆಯಿತು. ಕಮಲಿ ಒಪ್ಪಿಕೊಂಡ್ಲಾ ಅಂದೆ. ದೊಡ್ಡಪ್ಪ ಹುಬ್ಬೇರಿಸಿ ನಕ್ಕು “ಒಪ್ಪದೆ? ಅಷ್ಟಕ್ಕೂ ನಾಯೇನ ತಪರನಾ? ಒಪ್ಪಿದ್ರು. ಅವ್ರು ಬೇರೆ ಜಾತಿಯವರಾದ್ದರಿಂದ ಅವರಿಗೂ ಅವಮಾನ ನೋಡು” ಎಂದು ನಿರಾಯಾಸ ಅಂದು ಒಳಕ್ಕೆ ಹೋದ. ಬಾಗಿಲಲ್ಲಿ ನಿಂತಿದ್ದ ದೊಡ್ಡವ್ವ ತಾನೂ ಸರಕ್ಕನೆ ಒಳಹೋದಳು. ದೇವರಿಗೆ ತುಪ್ಪದ ದೀಪ ಹಚ್ಚುವುದಕ್ಕೆ ಇರಬೇಕು. ನೆಲ ಸಿಡಿಯತೊಡಗಿತು. ಬಹಳ ಹೊತ್ತು ಹೀಗೆ. “ಚಳೀಲಿ ಯಾಕೆ ಕುಂತಿದ್ದಿ. ಬಾ ಒಳಕ್ಕೆ” ಎಂದು ಮತ್ತೆ ಬಂದು ದೊಡ್ಡಪ್ಪ ಅಂದು ಮಲಗಲು ಹೋದ. ಹೊಟ್ಟೆಯೊಳಗೆ ಸಿಗರೇಟಿನ ಹೊಗೆ ಬೆಂಕಿ ಹಚ್ಚುತ್ತಿರುವ ಹಾಗೆ. ಸಣ್ಣಕ್ಕೆ ಎರಚಲು ಮಳೆ ಸುರುವಾಯಿತು. ಗವಗುಟ್ಟುವ ಕತ್ತಲಲ್ಲಿ ಕಾಲಿಟ್ಟೆ. ಹಟ್ಟಿ ಕಂಟಕ ಕಳೆದ ಹಾಗೆ ನಿರಾಳ ಮಲಗಿತ್ತು.
ಕಮಲಿ ಕಂಡವಳೆ ಮುಖ ಮುಚ್ಚಿಕೊಂಡಳು. ಸುಮಾರು ಹೊತ್ತು ಬಿಕ್ಕಳಿಸುತ್ತ ಇದ್ದು ಆಮೇಲೆ ತಲೆ ಎತ್ತಿ ದಿಟ್ಟಿಸಿ ನೋಡಿದಳು. ಮೈಮೇಲೆ ಬಂದಂತೆ “ಹೋಗಿ ಹೋಗಿ ಬರ್ಬೇಡಿ” ಎಂದು ಸಿಡಿದು ನಿಂತಳು. ಮೈ ತುಂಬ ಕೂದಲು ಸಿಕ್ಕ ಸಿಕ್ಕ ಕಡೆ ಹರಡಿಕೊಂಡಿತ್ತು. ಅತ್ತೂ ಅತ್ತು ಆದ ಕೆಂಪು ಕಣ್ಣಲ್ಲಿ ದೊಳ ದೊಳ ಕಣ್ಣೀರು ಸುರಿಸುತ್ತ ನೋಡಿದಳು. ಮೆಲ್ಲಗೆ “ಕಮಲೀ” ಅಂದೆ. ತುಟಿಯಲ್ಲಿ ಕಿಚ್ಚು ನಗೆ ತಂದುಕೊಂಡು “ನಾನು ಬದ್ಕಿದ್ದೀನಿ ಅಂತ ನೋಡೋಕೆ ಬಂದಿದ್ದೀರಾ” ಅಂದಳು. ‘ಶ್’ ಅಂದೆ. “ನಂಗೆ ಹುಚ್ಚು ಹಿಡಿಸಬೇಡಿ. ನಿಮ್ಮ ದಮ್ಮಯ್ಯ ಹೋಗಿ” ಅನ್ನುತ್ತ ಕಾಲು ಹಿಡಿಯಲು ಚಾಚಿದಳು. ಅವಳ ಕೈಗಳೆರಡನ್ನು ಭದ್ರವಾಗಿ ಹಿಡಿದುಕೊಂಡೆ. ದೀನವಾಗಿ ಆಂತು ನೋಡಿದಳು. ಎದೆ ಹತ್ತಿರಕ್ಕೆ ಅವಳ ಕೈ ತಂದುಕೊಂಡು “ನಡೀ ಮತ್ತೆ, ಹೋಗುವಾ” ಅಂದೆ. ಬೆಚ್ಚಿ ಕೈ ಕೊಸರಿ ದುರದುರ ನೋಡಿದಳು. ಅವಳ ನಾಲಿಗೆ ತುಟಿಗಳು ಒದ್ದಾಡಿದವು. “ನಾನಿರುವಲ್ಲೆ ನೀನೂವೆ, ಹೆಚ್ಗೆ ಮಾತೇ ಬೇಡ” ಎಂದು ಅವಳ ಕೈಗಳನ್ನು ಬಿಗಿ ಹಿಡಿದು ಹೊರಬಂದೆ. ಕತ್ತಲು ಸರಿದು ಹಾದಿ ಮಾಡಿಕೊಡುತ್ತಿರುವಂತಿತ್ತು. ಹೇಗೂ ತಡವಿಕೊಂಡು ಟಾರುರಸ್ತೆಗೆ ಬಂದಾಗ ಅದೃಷ್ಟಕ್ಕೆ ಟ್ಯಾಕ್ಸಿ ಸಿಕ್ಕಿತು. ಕಾರು ಬೆಳಕಿಗೆ ಕಾಣುವ ಕಪ್ಪು ಟಾರುರಸ್ತೆಯಲ್ಲಿ ದೃಷ್ಟಿನೆಟ್ಟು ಕಮಲಿ ಮಿಸುಕಾಡದೆ ಕೂತಳು. ರೋಡಿನುದ್ದಕ್ಕೂ ಆಕಾಶ ಮರೆ ಮಾಡಿದ ಮರಗಳು. ಗವಿಯಲ್ಲಿ ಹೋದಹಾಗೆ. ಹೆದರಿಕೆಯಾಗುತ್ತ ಕಮಲಿ ಅಂದೆ. ದೃಷ್ಟಿ ಕಿತ್ತು ನನ್ನ ಕಣ್ಣಿಗೆ ನೆಟ್ಟಳು. ನೀನು ಏನೇ ಹೇಳು, ನಾನು ಮಾಡಿದ್ದು ಸರಿ ಅನ್ಸುತ್ತೆ ಅಂದೆ. ಸುಮ್ಮನೆ ನೋಡಿದಳು…
ಚಳಿಯಾಗತೊಡಗಿತು. ಚಲನೆ ಕಳೆದುಕೊಂಡ ಅಜ್ಜಿಯ ದೇಹದ ಕಡೆ ನೋಡಿದೆ. ಹಾಗೇ ಕೊರಡಿನ ಹಾಗೆ ಚೂರು ಬದಲಿಲ್ಲ. ಊದುಬತ್ತಿ ಉರಿದು ಕೊನೆ ಕಂಡಿತ್ತು. ಕೆಂಡಕ್ಕೆಲ್ಲ ಬೂದಿ ಮುಚ್ಚಿಕೊಂಡು ಅಂಗಳವೆಲ್ಲ ಮಸುಕಾಗಿತ್ತು. ಹೋಗಿ ಕೆಂಡ ಕೆದಕಿ ಮತ್ತಷ್ಟು ಸೌದೆ ಸೀಳು ಹಾಕಿ ಬಂದು ಹಾಗೆ ಕೂತೆ. ನ್ಯಾಯ ಮುಗಿದಂತೆ ಕಾಣಲಿಲ್ಲ. ಹೊಗೆಯನ್ನು ಹೊಮ್ಮಿಸುತ್ತಿದ್ದ ಸೌದೆ ಹೊತ್ತಿಕೊಳ್ಳುವುದ ನೋಡತೊಡಗಿದೆ.
….ವಾರ ಕಳೆಯುವುದರೊಳಗೆ ಅಜ್ಜಿಯಿಂದ ಕಾಗದ ಬಂತು. ನೀನು ಮಾಡಿದ ಕೆಲಸಕ್ಕೆ ಇಲ್ಲಿ ನ್ಯಾಯ ಮಾಡಿ ನನ್ನನ್ನು ಕಟ್ಟು ಮಾಡಿ ಈಗ ನೀರು ಬೆಂಕಿಗೇ ತೊಂದರೆ. ಸರಿಯಾಗಿ ಕಣ್ಣು ಕಾಣಿಸದ ನಾನು ಏನು ಮಾಡಬೇಕು? ನಿನ್ನ ದೊಡ್ಡಪ್ಪನಂತೂ ಕೆಂಡ ಕಾರುತ್ತಾನೆ. ಕೊಡಬೇಕಾಗಿದ್ದ ಸಾಲ ಅಂತ ನಿನ್ನ ಹೊಲಾನ ಉಳ್ತಾನಂತೆ. ತನ್ನ ಮೊಮ್ಮಗಳ ಮದ್ವೇ ಆಗಲಿಲ್ಲವಲ್ಲ ಅಂತ ಅವನ ಕಿಚ್ಚು. ಈ ಕಿಚ್ಚಿನ ಮಧ್ಯೆ ನಾನು ಹೆಂಗಿರಲಿ ಹೇಳು. ಸಾಯೋಕಾಲದಲ್ಲಿ-ಹೀಗೆಲ್ಲ ಏನೆಲ್ಲ ಕಾಗದ ತುಂಬ. ಅಜ್ಜಿ ಕರೆದುಕೊಂಡು ಹೋಗಲು ಧೈರ್ಯ ಮಾಡಿ ಊರಿಗೆ ಬಂದರೆ ಊರೆ ಮುನಿಸಿನಿಂದ ನೋಡಿ ಮಾತಾಡಿಸದೇ ಹೋದಾಗ ನಗು ಬಂತು…
ಮೇಲಕ್ಕೆ ಆಂತು ನಕ್ಷತ್ರಗಳನ್ನಾದರೂ ನೋಡಬೇಕು. ಆದರೆ ಭಯ, ಹಾಳು ಬಚ್ಚಲ ಹುಳು ನೆನಪಿಗೆ ಬರುತ್ತವೆ. ಮಿಲಮಿಲ ಒದ್ದಾಡುತ್ತವೆ. ಕಕ್ಕಾವಿಕ್ಕಿ ಮಾಡುತ್ತವೆ. ಉಸಿರು ಕಟ್ಟಿಸುತ್ತವೆ. ಜೊತೆ ಜೊತೆಗೆ ಬರುವ ದೊಡ್ಡಪ್ಪನ ಸುಕ್ಕುಕಟ್ಟಿದ ಯೋಚನೆಗಳು. ಅಸಹನೆಯಿಂದ ಅಜ್ಜಿಯ ದೇಹದ ಕಡೆ ನೋಡಿದೆ. ಕನಿಕರವೆನಿಸಿತು. ನನ್ನ ಬಗ್ಗೊ ಹೆಣದ ಬಗ್ಗೊ. ಅಜ್ಜಿ ಹೀಗೆ ಮಾಡಬಾರದಿತ್ತು. ಹನ್ನೆರಡು ವರ್ಷ ಕಮಲಿ ಜೊತೆಗೇ ಹೊಂದಿಕೊಂಡು ಬದುಕಿದವಳು, ಸಾಯೋಕಾಲದಲ್ಲಿ ಸತ್ತರೆ ನನ್ನ ನೆಲದಲ್ಲೆ ಸಾಯೋದು ಅಂತ ಪಟ್ಟು ಹಿಡಿಯಬಾರದಿತ್ತು. ಅನ್ನ ನೀರು ಬಿಟ್ಟು ಕಾಣದ ಕಣ್ಣಲ್ಲಿ ಏನೇನೋ ಕಾಣುತ್ತ ಕೂತದ್ದು ಕಂಡು ಕಮಲಿ ತಾನೂ ಏನನ್ನು ಮುಟ್ಟದೆ, ‘ಕೊನೆ ಆಸೆ, ಕರೆದುಕೊಂಡುಹೋಗಿ’ ಎಂದು ತುದಿಗಾಲಲ್ಲಿ ನಿಂತಳು.
ಈಗ ಹನ್ನೆರಡು ವರ್ಷದ ಕಟ್ಟ ಬಿಟ್ಟುಕೊಡಲ್ಲ ಅಂತ ಯಾರೋ ಪಟ್ಟು ಹಿಡಿದಿರಬೇಕು. ದೊಡ್ಡಪ್ಪನ ಮಾತುಕತೆ ಹೇಗಿರಬಹುದೆಂದು ಕುತೂಹಲ ಬಂತು. ಇದೊಂದು ಕೊನೆಗಾಣದ ನ್ಯಾಯವಾಗಿ ಬಿಟ್ಟರೆ ಅಂತ ತಲೆಗೆ ಯೋಚನೆ. ಮೇಲಕ್ಕೆ ಎದ್ದು ಚಳಿಗೆ ಮೈಕೊಡವಿ ಲಾಟೀನು ಬತ್ತಿ ಏರಿಸಿ ಹಜಾರಕ್ಕೆ ಬಂದೆ. ಹಟ್ಟಿಯೊಳಗಿನ ಕಾಡನ್ನು ಲಾಟೀನು ಬೆಳಕು ಸ್ಪಷ್ಟ ಮಾಡಿತು. ನೋಡುವುದಕ್ಕಾಗದೆ ಲಾಟೀನನ್ನು ಗುಳವಿಗೆ ಸಿಕ್ಕಿಸಿ ರೂಮಿಗೆ ಬಂದು ಮೊಗ್ಗಲು ಕೊಟ್ಟೆ. ಮತ್ತೆ ನೆನಪುಗಳು ಕಿತ್ತು ತಿನ್ನ ತೊಡಗಿದವು.
….ಊರು ಹತ್ತಿರವಾಗುತ್ತಿದ್ದಂತೆ ಊರ ಹತ್ತಿರದ ನೆನಪುಗಳು. ಅಜ್ಜಿಯ ತಲೆ ನನ್ನ ಹೆಗಲಿಗೆ ಜೋತು ಜೋಕಾಲಿಯಾಡುತ್ತಿತ್ತು. ಎಳೆಕೂಸಿನ ಹಾಗೆ ಅಜ್ಜಿ ಅಸಂಬದ್ಧ ಕನವರಿಸುತ್ತಿದ್ದಳು. ಊರು ಮೈಲು ಇದೆ ಅನ್ನುವಾಗ ತಳಕ್ಕನೆ ಕಳಸ ಬಿದ್ದಂತೆ ಅಜ್ಜಿ ತಲೆ ನನ್ನ ಮಂಡಿಗೆ ಬಿತ್ತು. ದಿಕ್ಕೆಟ್ಟಂತಾಯಿತು. ಅಜ್ಜಿ ತಣ್ಣಗಾಗತೊಡಗಿದಳು. ಹಿಂದಕ್ಕೆ ಕಾರು ತಿರುಗಿಸಲು ಹೇಳಿದರೆ ಹೇಗೆ ಎಂದು ಯೋಚನೆ ಬಂತು. ಹೇಳುವುದಕ್ಕೆ ಏನೊ ತಡೆ. ಕಾರು ನಿಧಾನ ಚಲಿಸುತ್ತಿತ್ತು. ಊರು ಮುಂದಲು ಬಂದಾಗ ಅಲ್ಲೆ ನಿಂತಿದ್ದ ಚಕ್ರ ಚಿಕ್ಕಣ್ಣನಿಗೆ ಗುರುತು ಹೇಳಿಕೊಳ್ಳಬೇಕಾಯಿತು. ಹಣ್ಣು ಹಣ್ಣಾಗಿದ್ದ ಅವನಿಗೆ ನಾನು ಅಂತಲೆ ಕುಣಿಯುವುದು ಬಾಕಿ. ವಿಷಯ ತಿಳಿದ ಬೆಪ್ಪಗೆ ನಿಂತ. ಅಜ್ಜಿ ಹಾಗೆ ಹೀಗೆ ಅಂತ ಹೊಗಳ ತೊಡಗಿದ. ದೊಡ್ಡಪ್ಪನಿಗೆ ಸಮಾಚಾರ ತಿಳಿಸಲು ಹೇಳಿದೆ. ಬಂಧುಗಳು ಬಹಳ ವರ್ಷ ಕಾಣದಿದ್ದರೆ ಪೂಜೆ ಮಾಡಿಸಿ ಎಣ್ಣೆಯಲ್ಲಿ ಮೊದಲು ಮೊಖ ನೋಡಬೇಕೆಂದು ತಿಳಿಹೇಳಿದ. ಮೊದಲು ಸುದ್ದಿ ಹೇಳಿಬರಲು ಕಳಿಸಿದೆ…
ಹೊರಗೆ ಯಾರೊ ಕೆಮ್ಮುತ್ತ ನಡೆದು ಬರುವಂತಿತ್ತು. ನ್ಯಾಯ ಮುಗಿದಿರಬೇಕು. ಏನು ಸುದ್ದಿಯೊ. ತವಕದಿಂದ ಗಕ್ಕನೆ ಕೂತೆ. ಹೊರಗಿನಿಂದ “ನೋಡಪ್ಪಾ” ಅಂದರು. ಹೊರಕ್ಕೆ ಬಂದಾಗ ಯಜಮಾನ ಸಿದ್ದಪ್ಪ ನಿಂತಿದ್ದರು. ಗಾಬರಿಯಿಂದ ಏನಾಯಿತು ಅಂದೆ. ಕೈ ಅಲ್ಲಾಡಿಸಿ “ನಾನೂನು ಬೇಕಾದಷ್ಟು ಯತ್ನ ಮಾಡ್ಡೆ ಸರಿ ಹೊಂದ್ಲಿಲ್ಲ. ಊರ ಮಾನ ತೆಗೆದವನೆ ಅವ. ವಿಷದ ಹಾವ ಎಲ್ಲಾರು ಸೇರಿಸಿಕೊಳ್ಳೋದು ಉಂಟಾ ಅಂತಾನೇ ಪಟ್ಟು ಕುಂತುಬಿಟ್ಟರು. ನಿಮ್ಮ ದೊಡ್ಡಪ್ಪನಂತೂ ಗುಂಡುಕಲ್ಲಿನ ಹಾಗೆ ಮುಗಿಯೊವರ್ಗೊ ಸುಮ್ನೆ ಕುಂತಿದ್ದ. ಏನೂ ಮಾಡಕ್ಕಾಗಲಿಲ್ಲ.” ಎಂದು ಸತ್ತು ಮಲಗಿದ್ದ ಅಜ್ಜಿ, ಉರಿಯುತ್ತಿದ್ದ ಬೆಂಕಿ, ಆಮೇಲೆ ಮೇಲಕ್ಕೆ ನೋಡಿದರು. “ಮನುಷ್ಯರಾ ನೀವು? ತೊಲಗಿ ಇಲ್ಲಿಂದ” ಅಂತ ಚೀರಿದೆ. ಸಿದ್ದಪ್ಪ ಕಣ್ಣು ದೊಡ್ಡದು ಮಾಡಿ ಮೇಲಿಂದ ಕೆಳಕ್ಕೆ ನೋಡಿ “ತೊಲಗುವುದು ಯಾರ?” ಅಂದು ಉರಿಗಣ್ಣಲ್ಲಿ ನೋಡಿದರು. ಆಮೇಲೆ ಉಸಿರು ಬಿಟ್ಟು ಸಣ್ಣಕ್ಕೆ ನಕ್ಕು ಬರಬರ ಹೋಗಿಬಿಟ್ಟರು.
ಹಾಗೆ ಕಣ್ಣು ದೊಡ್ಡತು ಮಾಡಿ ಏನೂ ಕಾಣದಿದ್ದರೂ ನಿಂತೆ. ಹೀಗೆ ಬಹಳ ಹೊತ್ತು ಕಳೆದರೂ ಹೀಗೆ. ಜೋರು ಉಸಿರು ಬಿಟ್ಟು ಅಜ್ಜಿಯ ಕಡೆ ನೋಡಿದೆ. ಅಂಗಳದಲ್ಲಿ ಬೆಂಕಿ ಬೆಳಕು. ಅಷ್ಟಗಲ ಬಿಟ್ಟು ಊರ ಕವುಚಿರುವ ಕತ್ತಲು. ಅಂಗಳದಲ್ಲಿ ಅಡ್ಡಾದಿಡ್ಡಿ ಬಿದ್ದಿದ್ದ ಸೌದೆ ಸೀಳುಗಳನ್ನು ಬೆಂಕಿಗೆ ಜೋಡಿಸಿದೆ. ಹಜಾರಕ್ಕೆ ಬಂದು ಕಣ್ಣುಗಿಳಿಯುವ ಹಾಗೆ ಎಲ್ಲವನ್ನು ಒಂದು ಸಲ ನೋಡಿದೆ. ನೇರ ಚಣಿಗೆ ಹತ್ತಿರಕ್ಕೆ ಬಂದು ಅದರ ಮೇಲೆ ಹತ್ತಿ ಜೀವ ಕೈಲಿಡಿದು ನೇತು ಹಾಕಿಕೊಂಡಿದ್ದ ಗಳುಗಳನ್ನು ಹಿರಿದಿರಿದು ಕೆಳಕ್ಕೆ ಒಗಾಯಿಸತೊಡಗಿದೆ. ಕಣ್ಣು ತುಂಬುವಷ್ಟು ಕಂಡಾಗ ಕೆಳಕ್ಕೆ ಇಳಿದು ಗಳಗಳನೆಲ್ಲ ಒಕ್ಕಡೆ ಜೋಡಿಸಿ ತಬ್ಬು ಮಾಡಿದೆ. ನಾಲ್ಕಾರು ಸಲ ಒಳಗಿನಿಂದ ಅಂಗಳಕ್ಕೆ ಅವನೆಲ್ಲ ಸಾಗಿಸುವುದರೊಳಗೆ ಬೆವರಿಳಿದುಹೋಯಿತು. ಮೈಕೈಗೆಲ್ಲ ದೂಳು ತುಂಬಿ ಕಪ್ಪು ಹಿಡಿಯಿತು. ಅಜ್ಜಿ ಬೆಂಕಿ ಎಲ್ಲ ಹಾಗೆ ಹಾಗೆ.
ಯಾವ ದಿಕ್ಕೂ ಬಿಡದೆ ನಾಲಿಗೆ ಚಾಚುತ್ತಿದ್ದ ಬೆಂಕಿಸುತ್ತೂ ಗಳುಗಳು ಹರಡಿದೆ. ಅವು ಹೊತ್ತಿ ಉರಿಯತೊಡಗಿ ದಿಗಿಲಾಗುವಷ್ಟು ಬೆಳಕಾಯಿತು. ಅಜ್ಜಿಯ ಹತ್ತಿರಕ್ಕೆ ನಿಧಾನ ಹೆಜ್ಜೆಹಾಕಿದೆ. ಒಂದು ಕ್ಷಣ ನಿಂತು ಆಮೇಲೆ ಅಜ್ಜಿ ತಲೆದೆಸೆಯ ದುಪ್ಪಟಿ ಸರಿಸಿದೆ. ಒಂದಿಷ್ಟು ಸುಕ್ಕುಗಳು ಕೂಡಿ ಕೂಡಿ ಆದಂತೆ. ನಿಧಾನತೆಗೆ ಮೊದಲಿನ ಹಾಗೆ ದುಪ್ಪಟಿ ಸರಿಸಿ ಮತ್ತೂ ಹತ್ತಿರಕ್ಕೆ ಹೋಗಿ ಕೈಗಳನ್ನು ಚಳಿ ಕೊರೆಯುವ ಅಜ್ಜಿ ದೇಹಕ್ಕೆ ಬಳಸುಹಾಕಿ ಬಿಮ್ಮಗೆ ಬಿಗಿ ಹಿಡಿದು ಮೇಲಕ್ಕೆ ಜಗ್ಗಿಸಿದೆ. ಎತ್ತಲು ಆಗದಷ್ಟು ಭಾರ. ಕೈಗಳು ತೊಡೆಗಳು ಗಡಗಡ ಒದರತೊಡಗಿದವು. ಕ್ಷಣ ಹೊತ್ತು ಹಾಗೆ ಇರಿಸಿಕೊಂಡಿದ್ದು ಆವೇಶ ಬಂದಂತೆ ಕಣ್ಣು ಮುಚ್ಚಿ ಮೇಲಕ್ಕೆ ಚಿಗಿಸಿದೆ. ಅಜ್ಜಿಯ ದೇಹ ನನ್ನ ಎದೆಗೆ ಆತುಕೊಂಡು ಅಲ್ಲಾಡಿಸತೊಡಗಿತು. ತೂರಾಡುತ್ತ ಬೆಂಕಿಯ ಮೇಲಕ್ಕೆ ತಂದು ಕೈ ಬಿಟ್ಟಾಗ ಭುಗಿಲ್ಲೆಂದಿತು. ಭೂಮಿ ಒಂದು ಸಲ ಗರ್ರನೆ ತಿರುಗಿ ಟಕ್ಕಂತ ನಿಂತ ಹಾಗೆ. ತಲೆ ಕಣ್ಣಿನೊಳಕ್ಕೆ ಕಪ್ಪು ಬೆಳಕು ತುಂಬಿ ಚಿಮ್ಮಿದ ಹಾಗೆ, ಬೆಂಕಿ ಚಾಚಿ ನನ್ನನ್ನೂ ಸೆಳಕೊಂಡ ಹಾಗೆ. ಚೇತರಿಸಿಕೊಂಡು ಹಿಂದಕ್ಕೆ ಚಿಗಿದು ಕುಸಿದು ಕೂತೆ. ಕಣ್ಣಿಗೆ ಕತ್ತಲು ಕವಿದುಕೊಂಡು ಕಣ್ಣು ಬಿಟ್ಟರೆ ಅಜ್ಜಿಯನ್ನು ಆವರಿಸಿಕೊಂಡ ಬೆಂಕಿ ಚಾಚುತ್ತ ಹತ್ತಿರ ಹತ್ತಿರ… ಹಿಂದಕ್ಕೆ ಜಿಗಿದು ನಿಂತೆ. ಸುತ್ತು ಇನ್ನಷ್ಟು ಗಳು ಬಿದ್ದಿದ್ದವು. ಅವೆಲ್ಲ ಮುಗಿಯುವವರೆಗೂ ಆಳುದ್ದಕ್ಕೆ ಇದ್ದ ಉರಿಗೆ ಎಸೆದೆ. ಬೆಂಕಿ ಹಿಗ್ಗತೊಡಗಿತು. ಹಿಗ್ಗಿ ಹಿಗ್ಗಿ…. ನಿಲ್ಲುವುದಕ್ಕಾಗಲಿಲ್ಲ. ತಡಬಡಾಯಿಸಿಕೊಂಡು ಸಿಕ್ಕ ಸಿಕ್ಕ ಕಡೆ ಓಡತೊಡಗಿದೆ. ಊರಿಗೆ ಊರೇ ನನ್ನ ಹಿಂದೆ ಬರುತ್ತಿರುವಂತೆ. ಇದ್ದ, ಇದ್ದ ಬಲವನ್ನೆಲ್ಲ ಒಟ್ಟಾಯಿಸಿ ಓಡಿದೆ. ಕಾಲು ಸೋತುಹೋಗುವವರೆಗೂ, ಕಣ್ಣಿಗೆ ಕತ್ತಲು ಹಿಡಿಯುವವರೆಗೂ, ಸುತ್ತ ಕೆನೆಗಟ್ಟಿದ್ದ ದಟ್ಟ ಗಟ್ಟಿ ಕಪ್ಪು ಕತ್ತಲು ಕಾಣದಾಗುವರೆಗೂ.