‘ದೇಮ ಇದ್ದಾರಲ್ಲ ಚಿಂತ್ಯಾಕೆ’- ಬಿ.ಶ್ರೀಪಾದ ಭಟ್

[2024 ಸೆಪ್ಟೆಂಬರ್ 10ರ ತಮ್ಮ ಫೇಸ್ಬುಕ್ ಪುಟದಲ್ಲಿ ಚಿಂತಕ ಬಿ.ಶ್ರೀಪಾದ ಭಟ್ ಅವರು ದೇವನೂರ ಮಹಾದೇವ ಅವರ ಕುರಿತು ಬರೆದುಕೊಂಡಿರುವ ಮಾತುಗಳು ನಮ್ಮ ಮರು ಓದಿಗಾಗಿ… ]
ಲಂಕೇಶ್ ರ ‘ಪುಸ್ತಕಗಳ ದೊಡ್ಡ ಮಾತುಗಳ ಹಿಂದಿನ ಅಪಸ್ವರಗಳನ್ನು, ರಾಜ ಮಹಾರಾಜರುಗಳ ಮೂಲಭೂತ ತಬ್ಬಲಿ ದನಿಯನ್ನು, ಡಂಗುರದ ಬೊಬ್ಬೆಯ ನಿರರ್ಥಕತೆಯನ್ನು ಹಿಡಿದವರು ಮಾತ್ರ ಕವಿಗಳಾಗಿದ್ದಾರೆ’ ಮಾತುಗಳನ್ನು ಓದಿದಾಗಲೆಲ್ಲ ದೇವನೂರ ಮಹಾದೇವ ನೆನಪಾಗುತ್ತಾರೆ.
ಕಳೆದ ಐವತ್ತು ವರ್ಷಗಳ ಮಹಾದೇವ ಅವರ ಬರಹಗಳ ಪ್ರತಿ ಪುಟದಲ್ಲಿ, ಮಾತಿನ ಪ್ರತಿ ಅಕ್ಷರದಲ್ಲಿ ಬಡವರ, ವಂಚಿತ ಸಮುದಾಯಗಳ ಪರವಾದ ಕಾಳಜಿ ಜಿನುಗುತ್ತಿರುತ್ತದೆ. ಮನುಷ್ಯರು ಹೀಗೇಕೆ ವರ್ತಿಸುತ್ತಾರೆ ಎನ್ನುವುದು ದೇಮ ಅವರಿಗೆ ಕುತೂಹಲದ ವಿಷಯವಲ್ಲ, ಆತಂಕದ, ಭಯ ಹುಟ್ಟಿಸುವ ವಿಚಾರ.
ಬೆಂಡಿಗೇರಿ ಮಲ ಪ್ರಕರಣಕ್ಕೆ ಪ್ರತಿಕ್ರಿಯಿಸುತ್ತಾ ದಸಂಸ ಮೂಲಕ ‘ಭಾರತವೇ ನಿನ್ನ ಬಾಯಲ್ಲಿ ಏನಿದೆ’ ಎಂದು ಮಾರ್ಮಿಕವಾಗಿ ಹೇಳಿದ ಮಹಾದೇವ ಅವರು ಕಳೆದ ಐವತ್ತು ವರ್ಷಗಳಿಂದ ಕಾಪಿಟ್ಟುಕೊಂಡು ಬಂದ ಎಚ್ಚರದ ನೈತಿಕ ಪ್ರಜ್ಞೆ ಮತ್ತು ಮನುಕುಲದ ಕುರಿತು ಆಳವಾದ ಕಾಳಜಿ ಕಂಡಾಗಲೆಲ್ಲ ನಾನು ಕರಗಿ ಹೋಗಿದ್ದೇನೆ, ಇದು ಸಾಧ್ಯವೇ ಎಂದು ವಿಸ್ಮಿತನಾಗಿದ್ದೇನೆ.
ಬಹಳ ವರ್ಷಗಳ ಹಿಂದೆ ‘ಎಲ್ಲೋ ಒಬ್ಬ ಕೊಲೆ ಮಾಡಿ ರಾತ್ರಿ ಆ ಹೆಣದ ಪಕ್ಕ ಮಲಗಿ ಬೆಳಿಗ್ಗೆ ಎದ್ದು ಹೋಗುತ್ತಾನಲ್ಲ’ ಎಂದು ಹೇಳಿ ಮನುಷ್ಯರ ಕ್ರೌರ್ಯದ ಕುರಿತು ಬೆಚ್ಚಿ ಬಿದ್ದ ಮಹಾದೇವ ಅವರಿಗೆ 21ನೆ ಶತಮಾನದ ಹಿಂಸೆಯ ಆಳ ಅಗಲ ಕಂಡು ಮತ್ತಷ್ಟು ದಿಗ್ಭ್ರಮೆಗೊಂಡಿದ್ದಾರೆ.
ಮಹಾದೇವ ಅವರ ಒಳ ಮೀಸಲಾತಿ ಕುರಿತಾದ ಮಾತುಗಳು ಹಿಂಜರಿಕೆ, ಗೊಂದಲದಲ್ಲಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಹೊಸ ದಿಕ್ಕು ತೋರಿಸಬಲ್ಲದು, ಸರ್ಕಾರಕ್ಕೆ ಅದರ ಮುಂಗಾಣ್ಕೆಯನ್ನು ಗ್ರಹಿಸುವ ಮನಸ್ಥಿತಿ ಬೇಕಷ್ಟೆ
ಮತ್ತಿಲ್ಲದೆ ‘ದೇಮ ಇದ್ದಾರಲ್ಲ ಚಿಂತ್ಯಾಕೆ’ ಅಂತ ನಾವು ಸುಮ್ಮನೆ ಹೇಳುವುದೇ?