ಮಹಾದೇವ ಕಂಡಂತೆ ಗಾಂಧಿ
[‘ದೇವನೂರ ಮಹಾದೇವ ಜೊತೆ ಮಾತುಕತೆ- ಆಯ್ದ ಸಂದರ್ಶನಗಳ ಸಂಕಲನ’ ದಿಂದ ಆಯ್ದ ಎನ್.ಎಸ್.ಶಂಕರ್ ಅವರು ನಡೆಸಿದ ಒಂದು ಸಂದರ್ಶನ… ನಮ್ಮ ಓದಿಗಾಗಿ…]
(ಇದು ದೇವನೂರ ಮಹಾದೇವರ ಪರಿಪೂರ್ಣ ಸಂದರ್ಶನವಲ್ಲ. ಗಾಂಧಿಭವನದ ಆಶ್ರಯದಲ್ಲಿ, ನಾನು 2021ರಲ್ಲಿ ಆಯೋಜಿಸಿದ ‘ಬಾಪೂ’ ಬಹುಮಾಧ್ಯಮ ರಂಗಪ್ರಸ್ತುತಿ, ನಾಟಕವೇನೋ ಹೌದು, ಆದರೆ ಅದು ನಾಟಕವಷ್ಟೇ ಆಗಿರಲಿಲ್ಲ. ನಾಟಕದ ಭಾಗಗಳ ಜೊತೆಜೊತೆಗೇ ನಾಟಕಕ್ಕೆ ಪೂರಕವಾದ ಸಾಕ್ಷ್ಯಚಿತ್ರ ದೃಶ್ಯಾವಳಿ, ಸಂದರ್ಶನಗಳನ್ನೆಲ್ಲ ಒಳಗೊಂಡು ರಂಗದ ಮೇಲೆ ಒಂದು ಸಮಗ್ರ ಅನುಭವ ಸೃಷ್ಟಿಸುವ ಪ್ರಯತ್ನವಾಗಿತ್ತು. ಈ ಕಾಲದ ಸಂಕಟಗಳಿಗೆ ಉತ್ತರವಾಗಬಹುದಾದ ಗಾಂಧಿ ಚಿಂತನೆಯನ್ನು ಪ್ರಸ್ತುತಪಡಿಸುವ ಈ ಪ್ರಯೋಗಕ್ಕಾಗಿ ಮಹಾದೇವರ ಆಲೋಚನೆಗಳನ್ನೂ ಒಳಗೊಳ್ಳುವುದು ನನ್ನ ಉದ್ದೇಶವಾಗಿತ್ತು. ಅದಕ್ಕಾಗಿ ಮೈಸೂರಿನ ಅವರ ಮನೆಯಲ್ಲಿ ಈ ಸಂದರ್ಶನವನ್ನು ದಾಖಲಿಸಿಕೊಂಡಿದ್ದೆವು. ಅವರ ಮಾತುಗಳು ಇಲ್ಲಿವೆ -ಸಂದರ್ಶಕ)
——-
ಗಾಂಧಿ…
• ನನಗೆ ಗಾಂಧಿ ಯಾವ ರೀತಿ ಕಾಣ್ತಾರೆ ಅಂತಂದ್ರೆ, ಪ್ರತಿ ನಿತ್ಯ ಒಂದೊಂದೇ ಹೆಜ್ಜೆ ಇಡ್ತಾ ಮುನ್ನಡೆಯುತ್ತಿರುವವನಂತೆ. ಇದು ಸ್ಪಷ್ಟಪಡಿಸೋದಕ್ಕಾಗಿ ಒಂದು ಉದಾಹರಣೆ: ಒಂದು ದೊಡ್ಡ ಕ್ಯೂ ಇರುತ್ತೆ ಅಂತಿಟ್ಕಳಣ- ಮೈಲುದ್ದ. ಗಾಂಧಿ ಆ ಮೈಲುದ್ದದ ಕ್ಯೂನಲ್ಲಿ ನಡಕೊಂಡು ಹೋಗ್ತಾರೆ. ಅಲ್ಲಿ ಕ್ಯೂನಲ್ಲಿದ್ದ ಪ್ರತಿಯೊಬ್ಬರು ಕೂಡ ಗಾಂಧಿನ ನೋಡ್ತಾರೆ. ಆ ನೋಡಿದೋರೆಲ್ಲ ನಾನು ಗಾಂಧಿನ ನೋಡ್ದೆ ಅಂತ ಹೇಳ್ತಾರೆ. ಮತ್ತು ಆ ನೋಡಿದ ಗಾಂಧಿಗೆ ಕಟ್ಟು ಗಾಜು ಹಾಕಿಸಿ ಇದೇ ಗಾಂಧಿ ಅಂತ ಗೋಡೆಗೆ ನೇತಾಕ್ತಾರೆ. ಇದುವರೆಗೂ ಆಗ್ತಾ ಬಂದಿರೋದು ಇದೇ. ಆದ್ರೆ ಅವರು ಕಟ್ಟು ಗಾಜು ಹಾಕ್ಸಿ ನೇತಾಕಿರ್ತಾರಲ್ಲ ಗೋಡೆಗೆ, ಅದೇ ಗಾಂಧಿನಾ? ಯಾಕಂದ್ರೆ ಗಾಂಧಿ ಮುಂದಕ್ಕೆ ನಡೆದುಬಿಟ್ಟಿರ್ತಾರೆ! ಈ ನಡಿಗೆಯನ್ನ ನಾವು ಅರ್ಥ ಮಾಡ್ಕಳ್ದೆ ಇದ್ರೆ ಗಾಂಧಿ ನಮಗೆ ಅರ್ಥ ಆಗಲ್ಲ. ಇದನ್ನ ಅರ್ಥ ಮಾಡಿಕೊಂಡಾಗಲೇನೇ ನಮಗೆ ಕರ್ಮಠ ಗಾಂಧಿ- ಜಾತಿಭೇದ ಒಪ್ತಾ ಇದ್ರು, ಚಾತುರ್ವರ್ಣ ಒಪ್ತಾ ಇದ್ರು… ಇದೇ ಗಾಂಧಿ ಮುಂದೆ ಅಂತರ್ಜಾತೀಯ ಮದುವೆ ಆದ್ರೆ ಮಾತ್ರ ನಾನು attend ಮಾಡ್ತೀನಿ ಅನ್ನಕ್ಕೆ ಹೇಗೆ ಸಾಧ್ಯ?
ಯಾರು ಯಾರೋ ಯಾವ್ಯಾವುದೋ ಕಟ್ಟು ಗಾಜು ಹಾಕಿಸ್ಕಂಡಿದಾರೆ, ಅದೇ ಸತ್ಯ ಅಂತ ವಾದ ಮಾಡ್ತಿರ್ತಾರೆ. ನಾವು ಅರ್ಥ ಮಾಡಿಕೊಳ್ಳಬೇಕಾದ್ದು ಈ ಗಾಂಧಿಯ ನಡಿಗೆಯನ್ನ ಅನಿಸುತ್ತೆ. So ಗಾಂಧೀನ ಅವರ ಅಂತಿಮ ದಿನದವರೆಗೂವೆ ಗಮನಿಸಿ, ಅವರ ನಡಿಗೆ ಗಮನಿಸಿ edit ಮಾಡಿಕೊಳ್ಳಬೇಕಾಗಿದೆ ನಾವು. ಸಂಪಾದಿಸಿಕೋಬೇಕಾಗಿದೆ ಗಾಂಧಿಯನ್ನ.
ಗಾಂಧಿ ಮತ್ತು ಅಂಬೇಡ್ಕರ್…
• ಸಾಮಾನ್ಯವಾಗಿ ಗಾಂಧಿ ಜೊತೆಗೆ ಅಂಬೇಡ್ಕರ್ ಹೆಸರನ್ನೂ ನಾವು ಹೇಳ್ತಾ ಇರ್ತೀವಿ. ವಿರೋಧ ಇರಬಹುದು, ಪರಸ್ಪರ ವಿರೋಧಿಗಳು ಅಂತ ಇರಬಹುದು, ಏನೇ ಇರಬಹುದು. ಅವೆರಡು ಹೆಸರೂವೆ ಬರುತ್ತೆ ಸಾಮಾನ್ಯವಾಗಿ. ನಾನೊಂದು ಊಹೇನ ಮುಂದೆ ಇಡ್ತೀನಿ. ಏನಪ್ಪ ಅಂದ್ರೆ ಆ ಕಾಲದಲ್ಲಿ ಜಾತಿ ಅನ್ನೋದೇ ಧರ್ಮ ಆಗಿಬಿಟ್ಟಿತ್ತು. ಧರ್ಮ ಅನ್ನೋದು ಇರಲಿಲ್ಲ. ಅಸ್ಪೃಶ್ಯತೆ ಅನ್ನೋದು ಹಸಿಹಸಿಯಾಗಿತ್ತು. ಸಿಕ್ಕಾಪಟ್ಟೆ, ಸಿಕ್ಕಾಪಟ್ಟೆ ಹಸಿಹಸಿಯಾಗಿತ್ತು. ಅಷ್ಟೊಂದು ಕ್ರೂರವಾದ ಸಮಾಜ ಆಗಿತ್ತು. ಕಟ್ಟುಪಾಡನ್ನ ಉಲ್ಲಂಘಿಸಿದರೆ ಸಾವೇ ಗತಿ ಅನ್ನುವಂಥ ಕ್ರೂರ ಸಮಾಜ ಆಗಿತ್ತು. ಇಂಥ ಸಮಾಜದಲ್ಲಿ ಗಾಂಧಿ ಇಲ್ಲದೆ ಇದ್ರೆ, ಗಾಂಧಿಯ ಸುಧಾರಣೆ ಮತ್ತು ಉದಾರತೆಯ ವಾತಾವರಣ ಇಲ್ಲದೆ ಇದ್ರೆ, ಅಸ್ಪೃಶ್ಯರಾದ ಅಂಬೇಡ್ಕರ್ ಎಂಬ ಧೀಮಂತ ವ್ಯಕ್ತಿಯನ್ನು ಸಹಿಸಿಕೊಳ್ಳುತ್ತಿತ್ತೆ? ಉಳಗೊಡಿಸುತ್ತಿತ್ತಾ? ಆ ಗ್ಯಾರಂಟಿ ಇದೆಯಾ? ನನಗೆ ಅನುಮಾನ ಇದೆ.
ಹಾಗೇನೇ ಗಾಂಧಿಯವರನ್ನ ಅಂಬೇಡ್ಕರ್ ವಿರೋಧಿಸ್ತಾರೆ. ಟಾಂಗ್ ಕೊಡ್ತಾರೆ. ಈ ಟಾಂಗ್ ಕೊಟ್ಟಾಗಲೆಲ್ಲ ಗಾಂಧಿ ತನ್ನ ಒಳಗಡೆನೇ ಅವಲೋಕಿಸಿಕೊಂಡು ಕಟ್ಟಕಡೆಯವನ ಕಡೆಗೆ ಬದಲಾಗ್ತಾ ಇರ್ತಾರೆ. ಇಲ್ಲಿ ನಾವು ನೋಡಬೇಕಾದ್ದು, ಅಂಬೇಡ್ಕರ್ ಇಲ್ಲದೆ ಇದ್ರೆ, ಆ ಕರ್ಮಠ ಗಾಂಧಿ ಕ್ರಾಂತಿಕಾರಿ ಗಾಂಧಿ ಆಗಿಬಿಡ್ತಾರಲ್ಲ, ಈ ಬದಲಾವಣೆ, ಈ ಪರಿವರ್ತನೆ ಸಾಧ್ಯ ಆಗ್ತಿತ್ತಾ? ಅವರಿಬ್ಬರೂ ಸಮಕಾಲೀನರಾಗದಿದ್ರೆ ಇದು ಸಾಧ್ಯ ಆಗ್ತಿತ್ತಾ? ಈ ಪ್ರಶ್ನೆಯನ್ನ ನಾವು ಸ್ವಲ್ಪ ಅಂದಾಜಿಸಿಕೊಂಡ್ರೆ ಗಾಂಧಿ ಮತ್ತು ಅಂಬೇಡ್ಕರ್ ಇಬ್ರುವೆ ಪರಸ್ಪರ ಬದಲಾವಣೆ ಕಡೆಗೆ, ಪ್ರಗತಿ ಕಡೆಗೆ ನಡಿಗೆನಲ್ಲಿ ಪರಸ್ಪರ ಸಂಬಂಧಿಗಳಾಗಿ ಕಾಣಿಸ್ತಾರೆ. ನಾವು ಇದನ್ನ ನೋಡಬೇಕಾಗಿದೆ. ಈ ಸಂಬಂಧವನ್ನ ನಾವು ಕಾಣಬೇಕಾಗಿದೆ.
ಈವತ್ತಿಗೆ ಗಾಂಧಿ?
• ಈವತ್ತಿಗೆ ಗಾಂಧಿ? ಈ ಪ್ರಶ್ನೆ! ಈವತ್ತು ಭೂಮಿ ಮೇಲೆ ದಾಳಿ ಮಾಡ್ತಿರೋದು ಅನ್ಯಗ್ರಹದ ಜೀವಿಗಳಲ್ಲ. ಬದಲಾಗಿ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಅಂತ ಇದಾವಲ್ಲ, ಈ ತ್ರಿವಳಿಗಳು- ಇವು ದಾಳಿ ಮಾಡ್ತಾ ಇವೆ. ಜೊತೆಗೆ ಈ ಅಭಿವೃದ್ಧಿ ಅನ್ನೋ ಪರಿಕಲ್ಪನೆ. ಈವತ್ತು ಆಗ್ತಾ ಇದೆಯಲ್ಲ ಜಾಗತೀಕರಣ, ಇದು ಬಂಡವಾಳಶಾಹಿ ಕಂಪನಿಗಳ ಜಾಗತೀಕರಣ ಇದು, ಹಣದ ಜಾಗತೀಕರಣ ಇದು, ಜನರದ್ದಲ್ಲ. ಆಗಬೇಕಾದ್ದು ಯಾವ ಜಾಗತೀಕರಣ? ಜೀವಸಂಕುಲದ ಜಾಗತೀಕರಣ. ಆದರೆ ಈವತ್ತು ಜನರನ್ನ ತುಳಿದು ಅಪ್ಪಚ್ಚಿ ಮಾಡಿ ಕುಣಿಯುತ್ತಿರುವ ಹಣದ ಜಾಗತೀಕರಣ ಕಾಣಿಸ್ತಾ ಇದೆ. ಇದರ ಪರಿಣಾಮವಾಗಿ ಏನಾಗಿದೆ ಅಂದ್ರೆ, ಪರಾವಲಂಬನೆ ಎಲ್ಲ ಕಡೆನೂವೆ. ನಿರುದ್ಯೋಗ ಎಲ್ಲ ಕಡೆ. ಮತ್ತೆ ಆತಂಕದ ಬದುಕು ಎಲ್ಲ ಕಡೆ. ಹಾಗಾಗಿ ಈವತ್ತು ದ್ವೇಷ ಮತ್ತು ಅಸಹನೆಯ ಸಮಾಜ ಉಂಟಾಗ್ತಾ ಇದೆ. ಇದಕ್ಕೆ ಮದ್ದು ಅಂದ್ರೆ ಬಹುಶಃ ಗಾಂಧಿನೇ. ಗಾಂಧಿಯ ಸ್ವಾವಲಂಬನೆ, ಉದ್ಯೋಗ ಮತ್ತು… ಸಹನೆ ಮತ್ತು ಪ್ರೀತಿನೇ ನನ್ನ ಧರ್ಮ ಅಂತಾರೆ ಕೊನೆಕೊನೆಗೆ ಅವರು. ಧರ್ಮ ಅಂದ್ರೆ ಏನಪ್ಪ ಅಂದ್ರೆ ಸಹನೆ ಮತ್ತು ಪ್ರೀತಿ ಅಂತ ಹೇಳ್ತಾರೆ. ಇದನ್ನ ತಮ್ಮ ಬದುಕಿನ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ತಾರೆ ಅವರು. ಇದಿದೆಯಲ್ಲ, ಈ ಪ್ರಯೋಗಗಳಿವೆಯಲ್ಲ? ಇವು ಮದ್ದು ಅನಿಸುತ್ತೆ. ಇದನ್ನೇ ಶುಮಾಕರ್ Small is beautifulನಲ್ಲಿ ಬೌದ್ಧಧರ್ಮದ vision ಮತ್ತು ಗಾಂಧೀಜಿಯ ಪ್ರಯೋಗಗಳನ್ನ ಭಾಳಾ ಮುಖ್ಯವಾಗಿ ಗುರುತಿಸ್ತಾರೆ, ನಾವಿದನ್ನ ಗಮನಿಸಬೇಕು. ನಾನೊಂದು ಕಡೆ ಹೇಳಿದ್ದೆ- ಗಾಂಧಿ ಅಂದ್ರೆ ದೂಧ್- ಹಾಲು ಅಂತ. ಲೋಹಿಯಾ ಅಂತಂದ್ರೆ ದೂಧ್ ಪೇಡಾ ಅಂತ. ಹಾಲಿನಿಂದಾದ ಸಾಂದ್ರಿತ ಉತ್ಪನ್ನ. ಲೋಹಿಯಾ ಒಂದು ಕಡೆ ಹೇಳ್ತಾರೆ. ಸಮಾನತೆ ಮತ್ತು ಸಂಪದಭಿವೃದ್ಧಿ ಒಂದು ರಥದ ಎರಡು ಚಕ್ರಗಳು ಅಂತ. ಇದು ಸಮತೋಲನದ ಅಭಿವೃದ್ಧಿ. ಈ ಹಿನ್ನೆಲೆಯಲ್ಲಿ ನೋಡಿದಾಗ ನಾವು ಚಲಿಸ್ತಾ ಇದೀವಾ, ಕುಸೀತಾ ಇದೀವಾ ಅನ್ನೋ ಆತಂಕ ನಮಗೆ ಎದುರಾಗ್ತಾ ಇದೆ.
ಈವತ್ತು ಗಾಂಧಿ ಅನ್ನೋದಿಕ್ಕೆ ಕೊನೆಗೆ ನನ್ನ ಉತ್ತರ ಇಷ್ಟೇ: ಇತ್ತೀಚೆಗೆ ಪೌರತ್ವದ ಸಮಸ್ಯೆ ಭುಗಿಲೇಳ್ತಲ್ಲ, ಆಗ ಕಂಡಿದ್ದು ನಮಗೆ ಗಾಂಧಿ ಮತ್ತು ಅಂಬೇಡ್ಕರ್ ಚಿತ್ರಗಳು ಹಾಗೂ ಭಾರತದ ಸಂವಿಧಾನ. ನೋಡಿದ ಕಡೆಯೆಲ್ಲ ಗಾಂಧಿ ಚಿತ್ರ ಇತ್ತು, ಅಂಬೇಡ್ಕರ್ ಚಿತ್ರ ಇತ್ತು. ಆವಾಗ ಅನಿಸ್ತು ನನಗೆ- ಇವರಿಬ್ರೂ ಸತ್ತಿಲ್ಲ, ಬದುಕಿದಾರೆ ಅನಿಸ್ತು.
ಕರ್ನಾಟಕದಲ್ಲಿ ಬಹಳ ಮುಖ್ಯವಾಗಿ ಗುರುತಿಸೋದು ಅಂದ್ರೆ ಒಂದು ರೈತ ಚಳವಳಿ, ಇನ್ನೊಂದು ದಲಿತ ಚಳವಳಿ. ಎರಡು ಕೂಡ ಅಹಿಂಸೆಯನ್ನ ಬಹಳ ಮನಃಪೂರ್ವಕವಾಗಿ ಒಪ್ಪಿಕೊಂಡವು. ಈಗ ದಲಿತ ಚಳವಳಿ, ಅಹಿಂಸೆಯನ್ನು ಒಪ್ಪಿಕೊಂಡ ಹಿನ್ನೆಲೆ ಬಗ್ಗೆ, ಅದರ ಧ್ಯೇಯ ಏನು ಅಂತ…
• ತುಂಬ ಕಷ್ಟಪಟ್ಟುಕೊಂಡು ದಲಿತ ಸಂಘರ್ಷ ಸಮಿತಿ ಅಹಿಂಸೆಯನ್ನ ಒಪ್ಪಿಕೊಂಡಿದೆ. ಇದನ್ನ ಒಪ್ಪಿಸೋದಿಕ್ಕೆ ನಾನು, ಗೋವಿಂದಯ್ಯ, ಇಂದೂಧರ- ಏಳು ಕೆರೆ ನೀರು ಕುಡೀತಾರೆ ಅಂತಾರಲ್ಲ, ಅಷ್ಟು ಕಷ್ಟಪಟ್ಟಿದೀವಿ. ಸರಳವಾದದ್ದಿದು- ನಾವು ಯಾವ ಸಮಾಜ ಕಟ್ಟಬೇಕೂಂತಿದೀವಿ, ಯಾವ ಸಂಸ್ಕೃತಿಯನ್ನ ಸ್ಥಾಪಿಸಬೇಕು ಅಂತಿದೀವಿ, ಮನುಷ್ಯ ಮನುಷ್ಯರ ನಡುವೆ ಸಂಬಂಧ ಹೇಗಿರಬೇಕು ಅಂತ ಅಂದುಕೊಂಡಿದೀವಿ ಅಂತ ಹೇಳ್ತೀವೋ, ಅದು ನಮ್ಮ ಗುರಿಯಾದ್ರೆ- ಆ ದಿಕ್ಕಲ್ಲಿ ನಮ್ಮ ಹೆಜ್ಜೆನೂ ಇರಬೇಕು. ಇಲ್ಲದೆ ಇದ್ರೆ ನಮ್ಮ ಮಾರ್ಗ ಅದಕ್ಕೆ ವಿರುದ್ಧ ಇದ್ದು ಆ ಗುರಿಯನ್ನ ತಲುಪ್ತೀವಿ ಅನ್ನುವ ಮಾತು ಅನುಮಾನಾಸ್ಪದ. ನಮ್ಮ ಜೀವಿತ ಕಾಲದಲ್ಲಿ ಗುರಿಗೆ ವಿರುದ್ಧವಾದದ್ದನ್ನ ಮಾಡಿ ನಾವು ಸತ್ತ ಮೇಲಾದರೂ ಆ ಗುರಿ ತಲುಪ್ತೀವಿ ಅನ್ನೋದು ಇದೆಯಲ್ಲ, ಅದು ಅನುಮಾನಾಸ್ಪದ. ಈ ಕಾರಣಕ್ಕಾಗಿ ದಲಿತ ಸಂಘರ್ಷ ಸಮಿತಿ ಅಹಿಂಸೆಯನ್ನ ಒಪ್ಪಿಕೊಂತು. ಜೊತೆಗೆ ಇನ್ನೊಂದು- ಅಂಬೇಡ್ಕರ್ ಒಪ್ಪೋದು ಯಾವುದು? ಬೌದ್ಧಧರ್ಮ. ಬೌದ್ಧಧರ್ಮದ core- ಸಂದೇಶ ಅಂತ ಹೇಳ್ತಾರಲ್ಲ, ಅದು ಯಾವುದು? ಅಹಿಂಸೇನೇ.
ಸ್ವಾತಂತ್ರ್ಯೋತ್ಸವಕ್ಕೆ. ನೀವು ಅದೇ ದಿಕ್ಕಲ್ಲಿ ‘ಒಂದು ಗುಟುಕು ನೀರು’ಅನ್ನೋ ಕಾರ್ಯಕ್ರಮವನ್ನ ಪ್ಲಾನ್ ಮಾಡಿದಿರಿ- ಒಂದು ಅದರ ಹಿನ್ನೆಲೆ…?
• ಇಲ್ಲಿ ಇಷ್ಟೇ. ಒಂದು ಹೆಜ್ಜೆ ಸಾಕು ಅಂತ ಇದೆಯಲ್ಲ, ಅದು ಗುರಿ ಮತ್ತು ಮಾರ್ಗಗಳನ್ನ ಹತ್ತಿರ ತರುತ್ತೆ ಅದು. ತುಂಬ ದೂರ ಇದ್ರೆ, ಸಾವಿರಾರು ವರ್ಷದಲ್ಲಿ ಬದಲಾವಣೆ ಆಗುತ್ತೆ ಅನ್ನೋ ಥರ ಇದ್ರೆ, ಗುರಿಗೂ ಮಾರ್ಗಕ್ಕೂ ತಾಳಮೇಳ ಇರಲ್ಲ.
ಈಗ ಒಳಗೊಳ್ಳಬೇಕಾಗಿದೆ ನಾವು. ಬೆರೆತು ಉಣ್ಣಬೇಕಾಗಿದೆ. ಈ ದಿಕ್ಕಲ್ಲಿ ಒಂದು ಹೆಜ್ಜೆ- ಅಂದ್ರೆ again ನಮಗೆ ಯಾವ ಸಂಸ್ಕೃತಿ ಬೇಕು, ಯಾವ ಸಮಾಜ ಬೇಕು ಅನ್ನೋದಿಕ್ಕೆ ಒಂದು testing dose ಥರ ‘ಒಂದು ಗುಟುಕು ನೀರು’ ಕಾರ್ಯಕ್ರಮ ರೂಪಿಸಿದೆವು. ಅದು ಸುಮಾರು ಕಡೆಗಳಲ್ಲಿ ಆಯ್ತು. ಸುಮಾರು ಜನ ಒಳ್ಳೆ ಪ್ರತಿಕ್ರಿಯೆಯನ್ನೇ ತೋರಿಸಿದರು. ಇದು ಒಂದು ಸಣ್ಣ ಬದಲಾವಣೆ, ಆ ದಿಕ್ಕಲ್ಲಿ ಒಂದು ಹೆಜ್ಜೆ.
{ದಲಿತ ಚಳವಳಿಯ ಸ್ವರೂಪವನ್ನು ಅರಿಯಲು ಒಂದೇ ಒಂದು ಕಾರ್ಯಕ್ರಮದ ಉದಾಹರಣೆ ಸಾಕು: ಉದ್ದಕ್ಕೂ ಅನಿವಾರ್ಯವಾಗಿ ಭೂಹೋರಾಟಗಳು ಮತ್ತು ದೌರ್ಜನ್ಯದ ವಿರುದ್ಧ ಪ್ರತಿಭಟನೆಯಲ್ಲೇ ಜೀವ ಸವೆಸಿದ ದಸಂಸ, ರಾಜ್ಯದಲ್ಲಿ ಒಮ್ಮೆ ಸ್ವಾತಂತ್ರ್ಯೋತ್ಸವಕ್ಕೆ ಆಯೋಜಿಸಿದ ಕಾರ್ಯಕ್ರಮವದು. (ಸಂಘರ್ಷ ಸಮಿತಿಯ ಭೂಹೋರಾಟಗಳಿಂದಾಗಿ, ದಲಿತರೂ ಸೇರಿದಂತೆ ರಾಜ್ಯದಲ್ಲಿ ಎಲ್ಲ ಜಾತಿಯ ಭೂಹೀನರ ಒಡೆತನಕ್ಕೆ ಸಿಕ್ಕಿದ ಒಟ್ಟು ಜಮೀನು- ನಾಲ್ಕು ಲಕ್ಷ ಎಕರೆ!) ಅಂದು ಊರೂರುಗಳಲ್ಲಿ ದಲಿತ ಕೇರಿಯ ಪ್ರವೇಶದಲ್ಲಿ ಒಂದು ಗಡಿಗೆ ತುಂಬ ನೀರು ಇಟ್ಟುಕೊಂಡ ದಲಿತರು, ‘ನಾವು ಇನ್ನೇನೂ ಕೊಡಲಾರೆವು. ನಮ್ಮದೊಂದು ಲೋಟ ನೀರು ಕುಡಿದು ಹೋಗಿ’ ಎಂದು ಊರಿನ ಎಲ್ಲ ಜಾತಿ ಸಮುದಾಯಗಳನ್ನು ಆಹ್ವಾನಿಸಿದರು! ‘ದಲಿತ ಚಳವಳಿ- ಬ್ರಾಹ್ಮಣರಿಗೂ ಬಿಡುಗಡೆ ಕೊಡುವಂತಿರಬೇಕು’ ಎನ್ನುತ್ತ ದೇವನೂರರು ರೂಪಿಸಿದ ಆ ಕಾರ್ಯಕ್ರಮದ ಮೂಲಕ ಗಾಂಧಿಯ ತುಣುಕೊಂದು ಮತ್ತೆ ಹುಟ್ಟಿ ಬಂದಂತಾಗಿತ್ತು. ನನ್ನ ಕಣ್ಣಲ್ಲಿ ನೀರು ತರಿಸಿದ ಏಕೈಕ ಸ್ವಾತಂತ್ರ್ಯೋತ್ಸವವದು.
-ಚಳವಳಿ ಕುರಿತ ನನ್ನ ‘ಈಗ ಅಳುವವರೂ ಇಲ್ಲ’ ಹೊತ್ತಗೆಯಿಂದ.}
ಗಾಂಧಿ ಹತ್ಯೆ ಬಗ್ಗೆ ಮಾತಾಡೋದಾದರೆ- ಗಾಂಧಿ ಹತ್ಯೆಯನ್ನ ನಾವು ಭಾರತೀಯರು ಹೇಗೆ ತಗೋಬೇಕು? ಹತ್ಯೆ ಆದ ಟೈಮಲ್ಲಿ ನಿಂತು ಯೋಚನೆ ಮಾಡಿದರೆ, ಅಮೂಲ್ಯವಾದ್ದೊಂದು (ಗಾಂಧೀಜಿ) ನಮ್ಮ ಕೈಯಲ್ಲಿದೆ, ಅದನ್ನೇ ಕೆಳಗೆ ಬಿಸಾಕಿ ಒಡೆದು ಹಾಕಿದಂಗಾಗಲಿಲ್ವಾ?
• ವಿಚಿತ್ರಾಪ್ಪ. ನನ್ನ ಪ್ರಕಾರ ಈ ಹತ್ಯೆಯು ಗಾಂಧಿಯನ್ನ ಹೆಚ್ಚಿಗೆ ಕಾಲ ಬದುಕಿಸಿದೆ! ಕ್ರಿಸ್ತನ್ನ ಹೆಂಗೆ ಶಿಲುಬೆಗೇರಿಸಿದ್ದು ಸಹಸ್ರಾರು ವರ್ಷ ಕಾಲ ಬದುಕಿಸಿದೆಯೋ, ಅದೇ ಥರ ಗಾಂಧಿಯನ್ನು ಕೂಡ (ಹತ್ಯೆ) ಹೆಚ್ಚಿಗೆ ಬದುಕಿಸುತ್ತೆ ಅಂತನೇ ನನಗನಿಸುತ್ತೆ. ನಟರಾಜ್ ಹುಳಿಯಾರ್ ಸಂಪಾದಿಸಿರುವ ‘ಲೋಹಿಯಾ ಕಂಡ ಗಾಂಧೀಜಿ’ನಲ್ಲಿ, ಲೋಹಿಯಾ ತಮ್ಮ ದುಃಖ ಹಂಚಿಕೊಂಡಿದ್ದಾರೆ- ಒಂದು ಕಡೆ. ರೈಲು ಹೋಗ್ತಾ ಇದೆ (ಬಾಪೂ) ಚಿತಾಭಸ್ಮ ತಗೊಂಡು- ಲೋಹಿಯಾ ಬರೆಯೋದಿದು; ಅಲ್ಲಿಯ ಜನ, ಸುತ್ತ ನಿಂತಿದ್ದ ಜನ ಚಿತಾಭಸ್ಮಕ್ಕೆ ಸಾಷ್ಟಾಂಗ ನಮಸ್ಕಾರ ಮಾಡ್ತಾರೆ. ಲೋಹಿಯಾ (ಗಾಂಧಿ ಸತ್ತಾಗ) ಅತ್ತಿರಲ್ಲ, ಈಗ ಸಿಕ್ಕಾಪಟ್ಟೆ ಅತ್ತುಬಿಡ್ತಾರೆ. ಸಿಕ್ಕಾಪಟ್ಟೆ ದುಃಖ ಆಗಿಬಿಡುತ್ತೆ ಅವರಿಗೆ. ಇಂಥ ಒಂದು ಗಾಂಧಿ ಇದಾರಲ್ಲ, ಇದು ಹೆಂಗೆ ಅಂತ ಲೋಹಿಯಾರನ್ನು ಕೇಳಿದಾಗ, ಗಾಂಧಿ ಸಾಂತ್ವನವನ್ನೂ ಕೊಡ್ತಾ ಇದ್ದ. ಗಾಂಧಿ, ಜನಕ್ಕೆ ಸಮಾಧಾನವನ್ನೂ ಕೊಡ್ತಾ ಇದ್ದ. ಆ ಗಾಂಧಿ ಕಳೆದುಕೊಂಡು ನಾವೆಲ್ಲ ತಬ್ಬಲಿ ಆದೆವು ಅನ್ನೋ ಭಾವನೆ ಉಂಟಾಯ್ತು ಎನ್ನುತ್ತಾರೆ. ಈಗ ನೋಡಿದಾಗ- ಹೇಗೆ ಕ್ರಿಸ್ತನ್ನ ಶಿಲುಬೆಗೇರಿಸಿದ್ದು ಆತನನ್ನ ಸಹಸ್ರಾರು ವರ್ಷ ಜೀವಂತ ಇರಿಸಕ್ಕೆ ಕಾರಣ ಆಯ್ತೋ, ಅದೇ ರೀತಿ ಗಾಂಧಿ ಹತ್ಯೆ ಆಗಿದ್ದೂ ಕೂಡ ಅವರನ್ನ ಹೆಚ್ಚಿಗೆ ಕಾಲ ಬದುಕಿಸುತ್ತೆ ಅನಿಸುತ್ತೆ.