ನೋಡಿದಷ್ಟೂ ತನ್ನೊಳಕ್ಕೆ ಸೆಳೆದುಕೊಳ್ಳುವ ‘ಫೋಟೋ’ -ದೇವನೂರ ಮಹಾದೇವ

(20.4.2024ರಂದು ಆಂದೋಲನ ಪತ್ರಿಕೆಯಲ್ಲಿ “ಫೋಟೋ” ಚಲನಚಿತ್ರ ಕುರಿತು ದೇವನೂರ ಮಹಾದೇವ ಅವರ ಕಿರು ಟಿಪ್ಪಣಿ)
ಸಾಮಾನ್ಯವಾಗಿ ನಾನು ಯಾವ ಸಿನಿಮಾವನ್ನು ಎರಡು ಸಲ ನೋಡುವುದಿಲ್ಲ. ಆದರೆ, ‘ಫೋಟೋ’ ಎಂಬ ಸಿನಿಮಾವನ್ನು ಮೂರು ಸಲ ನೋಡಿದೆ. ನೋಡಿದಷ್ಟೂ ಅದು ನನ್ನನ್ನು ತನ್ನೊಳಕ್ಕೆ ಸೆಳೆದುಕೊಳ್ಳುತ್ತಿತ್ತು. ಅಲ್ಲಿ ಯಾರೂ ಅಭಿನಯಿಸಿಲ್ಲ. ಪಾತ್ರಗಳಲ್ಲಿ ಜೀವಿಸಿದ್ದಾರೆ. ಕೊರೊನಾ ಮಹಾಮಾರಿ ಅಪ್ಪಳಿಸಿದಾಗ ಜೀವನ ಪ್ರವಾಹದ ತಲ್ಲಣಗಳು ಇಲ್ಲಿ ಉಸಿರಾಡುತ್ತವೆ. ಮೌನವು ಕೂಡ ಇಲ್ಲಿ ಮಾತಾಡುತ್ತದೆ. ಸುತ್ತಮುತ್ತಲಿನ ಶಬ್ದಗಳೆಲ್ಲಾ ಕರುಳಿನ ಹಾಡುಪಾಡಾಗುತ್ತದೆ. ಇಂತಹದೊಂದು ಸಿನಿಮಾವನ್ನು ಸೃಷ್ಟಿಸಿದ ಬಿರುಬಿಸಿಲಿನ ರಾಯಚೂರು ಸೀಮೆಯ ಅದ್ಭುತ ಪ್ರತಿಭೆ ಉತ್ಸವ್ ಗೋನ್ವಾರ್. ಸಂಕಲನ: ನಮ್ಮ ಚಾಮರಾಜನಗರ ಜಿಲ್ಲೆಯ ಶಿವರಾಜ್ ಮೇಹು, ಹಾಗೆಯೇ ಶಿಲ್ಪ ಮೂಡಬಿ ಹಾಡಿದ ಹಾಡೊಂದು ಭೂಮಿ ಒಡಲು ಹಾಡಿದಂತೆ ಹಿಂಬಾಲಿಸುತ್ತದೆ. ಇನ್ನೂ ಒಂದೆರಡು ಸಲ ಫೋಟೋ ಸಿನಿಮಾ ನೋಡಬೇಕೆಂದಿರುವೆ.