“ಸಮ್ಮೇಳನಾಧ್ಯಕ್ಷರಾಗಲು ದೇವನೂರು ನಕಾರ”

[‘ಶಿಕ್ಷಣ ಮಾಧ್ಯಮ ಕನ್ನಡ ಆಗುವವರೆಗೆ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲಾರೆ’ ಎಂದು ಘೋಷಣೆ ಮಾಡಿದ ದೇವನೂರ ಮಹಾದೇವ ಅವರ ಮಾತುಗಳ 29.11.2014ರ ವಿಜಯ ಕರ್ನಾಟಕ ವಿಸ್ತೃತ ವರದಿ ನಮ್ಮ ಮರು ಓದಿಗಾಗಿ]  
https://vijaykarnataka.com/…/-/articleshow/45313285.cms
ಶ್ರವಣಬೆಳಗೊಳದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಳ್ಳುವಂತೆ ಹಾಸನ ಜಿಲ್ಲಾ ಕಸಾಪ ನಿಯೋಗ ಮುಂದಿಟ್ಟ ಆಹ್ವಾನವನ್ನು ಸಾಹಿತಿ ದೇವನೂರ ಮಹಾದೇವ ನಯವಾಗಿ ತಿರಸ್ಕರಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ವಿಶೇಷ ಸಂದರ್ಭದಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ದೇವನೂರು ಅವರೇ ಅಧ್ಯಕ್ಷರಾಗುವಂತೆ ಕೋರಲೆಂದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್.ಜನಾರ್ದನ್ ನೇತೃತ್ವದ ಡಾ.ತಿಮ್ಮಯ್ಯ, ಡಾ.ವಿಜೇಂದ್ರ, ಡಾ.ವಿಜಯ್, ಅರಕಲಗೂಡು ಜಯಕುಮಾರ್ ಅವರಿದ್ದ ನಿಯೋಗ, ಶುಕ್ರವಾರ ಮಹಾದೇವ ಅವರನ್ನು ಕುವೆಂಪುನಗರದ ನಿವಾಸದಲ್ಲಿ ಭೇಟಿಯಾಯಿತು. ಹಲವು ರೀತಿಯಲ್ಲಿ ಅವರನ್ನು ಒಪ್ಪಿಸುವ ಜಾಣ್ಮೆಯನ್ನು ನಿಯೋಗದ ಸದಸ್ಯರು ತೋರಿದರಾದರೂ, ಪ್ರಯೋಜನವಾಗಲಿಲ್ಲ. ಅರ್ಧ ಗಂಟೆಗಳ ಕಾಲ, ಕನ್ನಡ ಭಾಷೆಯ ಕುರಿತ ತಮ್ಮ ನಿಲುವು, ಒಲವುಗಳನ್ನು ತಿಳಿಸಿದ ಮಹಾದೇವ ‘‘ಹತ್ತನೇ ತರಗತಿವರೆಗೆ ಮಾತೃಭಾಷೆ ಮಾಧ್ಯಮದಲ್ಲಿಯೇ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಯಾಗುವವರೆಗೆ ಸಮ್ಮೇಳನದ ಅಧ್ಯಕ್ಷತೆ ವಹಿಸುವುದಿರಲಿ, ಭಾಗವಹಿಸುವುದೇ ಇಲ್ಲ ಎಂಬ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ. ಬದಲಿಗೆ, ಇದೇ ಕಾರಣ ಮುಂದಿಟ್ಟು ಸಮ್ಮೇಳನವನ್ನೇ ಮಾಡುವುದಿಲ್ಲ ಎಂಬ ನಿರ್ಧಾರವನ್ನು ಕಸಾಪ ಕೈಗೊಳ್ಳಲಿ. ನಂತರ ಸರಕಾರದ ವಿರುದ್ಧದ ಹೋರಾಟಕ್ಕೆ ನಾನೇ ನೇತೃತ್ವ ವಹಿಸುತ್ತೇನೆ,’’ ಎಂದು ಸ್ಪಷ್ಟಪಡಿಸಿದರು.
ನಿರಾಕರಣೆಗೆ ಸಮರ್ಥನೆಗಳೇನು?
1. ರಾಜ್ಯದಲ್ಲಿ 10ನೇ ತರಗತಿವರೆಗೂ ಮಾತೃಭಾಷೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಯಾಗುವವರೆಗೂ ಸಾಹಿತ್ಯ ಸಮ್ಮೇಳನದ ಸಂಭ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ನಿಲುವು ತೆಗೆದುಕೊಂಡಿದ್ದೇನೆ. 1980ರಲ್ಲಿಯೇ ಸಮ್ಮೇಳನ ಅಧ್ಯಕ್ಷನಾಗಬೇಕು ಎನ್ನುವ ಕೋರಿಕೆ ಬಂದಿತ್ತು, ನಿರಾಕರಿಸಿದ್ದೆ. ಬಳಿಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನೂ ಸ್ವೀಕರಿಸಲಿಲ್ಲ. ನೃಪತುಂಗ ಪ್ರಶಸ್ತಿಯನ್ನೂ ಪಡೆದಿಲ್ಲ. ಕನ್ನಡ ಮಾಧ್ಯಮ ಜಾರಿಗೆ ಆಗ್ರಹಿಸುವ ನಿಟ್ಟಿನಲ್ಲಿ ನಾನು ತೆಗೆದುಕೊಂಡಿರುವ ಕಠಿಣ ನಿಲುವು ಇದು; ನನ್ನದೊಂದು ದನಿ ಇರಲಿ. ತುಮಕೂರಿನಲ್ಲಿ ನಡೆದ ರಾಜ್ಯ ಸಮ್ಮೇಳದಲ್ಲೂ ಅಧ್ಯಕ್ಷನಾಗು ಎಂದರು. ಆಗಲೂ ಇದನ್ನೇ ಹೇಳಿದ್ದೆ.
2. ಮಾತೃಭಾಷಾ ಮಾಧ್ಯಮ ಜಾರಿಯಾಗುವವರೆಗೂ ಕನ್ನಡ ಭಾಷೆ ಕೋಮಾ ಸ್ಥಿತಿಯಲ್ಲಿಯೇ ಇರುತ್ತದೆ. ಇಂಥ ಸಂದರ್ಭದಲ್ಲಿ ಸಮ್ಮೇಳನ ಎನ್ನುವ ಮೈದಾನಕ್ಕೆ ನಾನು ಬಂದರೆ, ನನ್ನ ನಿಲುವು ಅರ್ಧ ಸತ್ತಂತಾಗಿ ಬಿಡುತ್ತದೆ. ನಾನು ಭಾಗವಹಿಸಿದರೆ ಮೇಲಕ್ಕೆ ಉಗಿದು ಮುಖದ ಮೇಲೆ ಬೀಳಿಸಿಕೊಂಡಂತಾಗುತ್ತದೆ. ಅರ್ಧ ಜೀವ ಹೊರಟು ಹೋಗುತ್ತದೆ. ನಾನು ಆ ದೃಷ್ಟಿಯಿಂದ ನೋಡುತ್ತಿದ್ದೇನೆ. ಒತ್ತಡ ಹಾಕಬೇಡಿ; ಮುಜುಗರ ಮಾಡಬೇಡಿ.
3. ಸರಕಾರದ ಹಿತಾಸಕ್ತಿ ಖಾಸಗಿ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಪರವಿದೆ. ಎಲ್ಲರೂ ಹೇಳ್ತಿದ್ದಾರೆ ಅಷ್ಟೆ. ಕನ್ನಡದ ವಿಷಯದಲ್ಲಿ ಯಾರೂ ಏನೂ ಮಾಡುತ್ತಿಲ್ಲ.
4. ಇನ್ನು ಮುಂದೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಿಲ್ಲ ಎಂದು ಘೋಷಿಸಿದರೆ ಖಂಡಿತವಾಗಿಯೂ ಸರಕಾರಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ದೊಡ್ಡ ಆಘಾತವೇ ಆಗುತ್ತದೆ. ಆಗ ಒಂದು ಆಂದೋಲನವೇ ಸೃಷ್ಟಿಯಾಗುತ್ತದೆ. ಅಸಾಧಾರಣ ಕ್ರಮವಾಗುತ್ತದೆ. ಇಲ್ಲವಾದಲ್ಲಿ ಪ್ರತಿ ವರ್ಷ ಇನ್ನೂ ಹೆಚ್ಚಿನ ಅನುದಾನ ದೊರೆಯುತ್ತದೆ; ಜೋರಾಗಿ ಸಮ್ಮೇಳನ ನಡೆಯುತ್ತಾ ಹೋಗುತ್ತಿರುತ್ತದೆ ಅಷ್ಟೆ. ಒಂದು ಮನೆಯಲ್ಲಿ ಉಪವಾಸ ಮಾಡ್ತೀನಿ ಅಂತ ಕುಂತ್ಕೊಂಡ ಮೇಲೆ ಊಟ ಮಾಡೊಕ್ಕಾಗುತ್ತೇನ್ರೀ? ಮಾತೃಭಾಷೆ ಶಿಕ್ಷಣ ಕನಿಷ್ಠ 10ನೇ ತರಗತಿವರೆಗೆ ಇಲ್ಲದಿದ್ದರೆ ಕನ್ನಡ ಎಂದು ಹೇಗೆ ಹೇಳುತ್ತೀರಿ? ನನಗೆ ಅರ್ಥವೇ ಆಗುತ್ತಿಲ್ಲ.
5. ಸಾಹಿತ್ಯ ಸಮ್ಮೇಳನ ಮಾಡುವುದಿಲ್ಲ ಎಂಬ ನಿರ್ಧಾರ ತೆಗೆದುಕೊಂಡರೆ ನಂತರದ ನೇತೃತ್ವ ನಾನೇ ತಗೋತೀನಿ. ಮಾತೃಭಾಷೆಯಲ್ಲಿ ಶಿಕ್ಷಣ ಎನ್ನುವುದನ್ನು ಮಾಡದಿದ್ದರೆ ಸರಕಾರ ಉರುಳಿ ಹೋಗುತ್ತದೆ ಎನ್ನುವ ವಾತಾವರಣ ಇದ್ದಿದ್ದರೆ ಇಲ್ಲಿವರೆಗಾಗಲೇ ಸರಕಾರವೇ ಮಾಡುತ್ತಿತ್ತು. ಆ ಸ್ಥಿತಿ ಇಲ್ಲವಲ್ಲಾ? ರಾಜ್ಯ ಭಾಷೆಯನ್ನು ಕತ್ತು ಹಿಸುಕಿ ಸಾಯಿಸಲಾಗುತ್ತಿದೆ. ಯಾವುದೇ ಸ್ವತಂತ್ರ ದೇಶವಿರಲಿ ಅಲ್ಲಿ ಮಾತೃಭಾಷೆ ಶಿಕ್ಷಣ ಮಾಧ್ಯಮವಾಗಿರಬೇಕು. ಎಲ್ಲಿ ಗುಲಾಮಗಿರಿಗೆ ಒಳಪಟ್ಟಿದ್ದೆವೋ ಅಂಥ ಕಡೆ ಆಗ ಆಡಳಿತ ಮಾಡಿದವರ ಭಾಷೆ ಮಾಧ್ಯಮವಾಗಿದೆ. ಮಾತೃಭಾಷೆಗೆ ಮಾನ್ಯತೆ ದೊರೆತರೆ ಮಾತ್ರ ನಾವು ಸ್ವತಂತ್ರರಾದಂತೆ. ಇದು ನಮ್ಮ ಮೂಲ ಅಳತೆಗೋಲಾಗಬೇಕು. ಅಲ್ಲಿವರೆಗೂ ಗುಲಾಮಗಿರಿಯಿಂದ ಕನ್ನಡಿಗರು, ರಾಜಕಾರಣಿಗಳು ಇನ್ನೂ ಇದರಿಂದ ಹೊರಗೆ ಬಂದಿಲ್ಲವೆಂದೇ ಅರ್ಥ.
6. ಕನ್ನಡ ಭಾಷಾ ಮಾಧ್ಯಮ ಜಾರಿ, ಸಾಹಿತ್ಯ ಸಮ್ಮೇಳನ ಬಿಟ್ರೆ ಆಗುತ್ತೆ; ಇಟ್ಕೊಂಡ್ರೆ ಆಗುವುದಿಲ್ಲ. ಕುವೆಂಪು ಕಾಲದಿಂದಲೂ ನೋಡಿಕೊಂಡು ಬನ್ನಿ. ಹಾ.ಮಾ.ನಾಯಕರು ಒಂದು ಮಾತು ಹೇಳಿದ್ದರು- ‘ಕನ್ನಡ ಮಾಧ್ಯಮ ಆಗಬೇಕು ಎಂದು ನಾನು ಚಿಕ್ಕ ಹುಡುಗನಾಗಿದ್ದಾಗ ಫ್ಲೇಕಾರ್ಡ್ ಹಿಡ್ಕೊಂಡು ಹೇಳ್ತಿದ್ದೆ. ಈಗ ವಯಸ್ಸಾಗಿದೆ, ಕೋಲಿಡ್ಕೊಂಡು ಅದನ್ನೇ ಹೇಳುತ್ತಿದ್ದೇನೆ’ ಎಂದಿದ್ದರು. ಹೀಗೆ ಯಾವುದೇ ವ್ಯತ್ಯಾಸವೂ ಇರುವುದಿಲ್ಲ. ಸಮ್ಮೇಳನ ಬಿಟ್ಟರೆ ಆಂತರಿಕ ಶಕ್ತಿ ಬರುತ್ತದೆ. ಹೊಸ ರೂಪ ಬರುತ್ತದೆ. ಕನ್ನಡ ಮಾಧ್ಯಮ ಘೋಷಣೆಯಾದರೆ ಸರಕಾರದಿಂದ ಅನುದಾನ ತಗೊಂಡು ಪರ್ಯಾಯ ಸಮ್ಮೇಳನ ನಡೆಸೋಣ. ಆಗ ಸಾಹಿತ್ಯ ಪರಿಷತ್ತಿಗೆ ನಾನೂ ಬರುತ್ತೇನೆ. ಸಮ್ಮೇಳನ ನಡೆಸಿಕೊಂಡು ಹೋಗುತ್ತಾ, ಈ ಕೆಲಸ ಮಾಡುವುದಕ್ಕೆ ಆಗುವುದಿಲ್ಲ.
7. ‘ಹತ್ತನೇ ತರಗತಿವರೆಗೆ ರಾಜ್ಯ ಭಾಷೆಯಲ್ಲಿ ಶಿಕ್ಷಣ ಇರಬೇಕು; ಅಲ್ಲಿವರೆಗೂ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಿಲ್ಲ’ ಎನ್ನುವ ಒಂದೇ ನಿರ್ಣಯವನ್ನು ಈ ಸಮ್ಮೇಳನದಲ್ಲಾದರೂ ತೆಗೆದುಕೊಂಡು ಬನ್ನಿ, ನಂತರದ ಕಾರ್ಯಕ್ರಮಗಳಲ್ಲಿ ಎಷ್ಟೇ ಕಷ್ಟವಾದರೂ ಭಾಗವಹಿಸುತ್ತೇನೆ. ನಾಯಕನಾಗಬೇಕು ಎನ್ನುವ ಪರಿಕಲ್ಪನೆ ಬೇಡ. ಕನ್ನಡದ ಅಭಿಮಾನ ಎಲ್ಲರಲ್ಲಿಯೂ ಬರಬೇಕು.
8. ನೃಪತುಂಗ ಪ್ರಶಸ್ತಿಯನ್ನು ಕೆಎಸ್‌ಆರ್‌ಟಿಸಿ ನೌಕರರು ಕೊಟ್ಟಿದ್ರೆ ಪಡೆಯುತ್ತಿದ್ದೆ. ಪ್ರಶಸ್ತಿ ಹಣವನ್ನು ಪೂರ್ತಿ ತಗೊಂಡರೂ ಸರಿಯಲ್ಲ; ತೆಗೆದುಕೊಳ್ಳದಿದ್ದರೂ ಸರಿ ಇಲ್ಲ. ಅರ್ಧ ಭಾಗ ಅವರಿಗೇ ಕೊಡುತ್ತಿದ್ದೆ. ಕೆಎಸ್‌ಆರ್‌ಟಿಸಿ ನೌಕರರ ಬರೆಯುವ ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಧಿಗೆ ಬಳಸಿಕೊಳ್ಳಿ ಎನ್ನುತ್ತಿದ್ದೆ. ಆದರೆ, ಕಸಾಪದವರೂ ಅಲ್ಲಿ ಸೇರಿರುವುದರಿಂದ ಆ ಪ್ರಶಸ್ತಿ ಸ್ವೀಕರಿಸಲಿಲ್ಲ.
9. ಸಾಹಿತ್ಯ ಪರಿಷತ್ತು ಇಂಥದೊಂದು ನಿಲುವನ್ನು ತೆಗೆದುಕೊಳ್ಳಬೇಕು. ಮುಜುಗರ ಮಾಡಬೇಡಿ. 31 ವರ್ಷ ಇದೇ ನಿಲುವು ಇಟ್ಟುಕೊಂಡು ಬರುತ್ತಿದ್ದೇನೆ. ಇನ್ನೊಂದು 10 ವರ್ಷ ಬದುಕಬಹುದಾ! ಅಲ್ಲಿವರೆಗೂ ನಿಲುವು ಬದಲಾಯಿಸುವುದಿಲ್ಲ.
10. ಪ್ರಸ್ತುತ ಕನ್ನಡ ಭಾಷೆಯ ಪರಿಸ್ಥಿತಿ ಬಹಳ ಕಷ್ಟದಲ್ಲಿದೆ. ಕನ್ನಡಕ್ಕೆ ಸಂಬಂಧಿಸಿ ಕಟುವಾದ ನಿಲುವು ತಗೊಂಡಿದ್ದೇನೆ. ಆ ಥರದ ಒಂದು ನಿಲುವು ಕನ್ನಡಕ್ಕೆ ಬೇಕು. ನನ್ನದೂ ಒಂದು ದನಿ ಎಂದುಕೊಳ್ಳಿ. ವ್ಯಕ್ತಿತ್ವ, ಘನತೆ ಸಿಗಬೇಕು ಎಂದರೆ, ಸಮ್ಮೇಳನ ನಡೆಸುವುದನ್ನು ನಿಲ್ಲಿಸಬೇಕು. ಕನ್ನಡಿಗರಿಗೇ ಕನ್ನಡ ಬೇಕಾಗಿಲ್ಲ. ಹಿತಾಸಕ್ತಿಗಳು ಬದಲಾಗಿವೆ. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದಿಟ್ಟವಾದ, ಘನತೆಯ, ಸ್ವಾಭಿಮಾನದ ನಿಲುವು ತಗೋಬೇಕು. ಎಷ್ಟು ಸಮ್ಮೇಳನ ಆಗಿದೆ. ನನ್ನ ಭಾಷಣವೂ ಒಂದಾಗಿ ಸೇರುತ್ತದೆ ಅಷ್ಟೆ. ಏನೂ ಆಗುವುದಿಲ್ಲ. ನಮಗೆ ಸಾಲ ಕೊಡ್ತಾರಲ್ಲಾ ಆ ಡಬ್ಲ್ಯುಟಿಒದವರು, ಅವರ ಒಕ್ಕಣೆಗೆ ಇಲ್ಲಿನವರು ಹೆಬ್ಬೆಟ್ಟು ಒತ್ತುತ್ತಾರೆ ಅಷ್ಟೆ. ಸಮ್ಮೇಳನ ಮಾಡುವುದನ್ನು ನಿಲ್ಲಿಸಿದ ನಂತರವೂ ಸರಕಾರ ಏನೂ ಕ್ರಮ ಕೈಗೊಳ್ಳದಿದ್ದರೂ ನಮ್ಮ (ಕನ್ನಡಿಗರ) ಮಾನ ಮರ್ಯಾದೆಯಾದರೂ ಉಳಿಯುತ್ತದೆ.