‘ಎದೆಗೆ ಬಿದ್ದ ಅಕ್ಷರ’ ಎಂಬ ಅಂತಃಕರಣದ ಮಾತು -ಡಾ.ಅಪ್ಪಗೆರೆ ಸೋಮಶೇಖರ್
[ಡಾ.ಅಪ್ಪಗೆರೆ ಸೋಮಶೇಖರ್ ಅವರು ಈ ಹಿಂದೆ ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕುರಿತು ಬರೆದ ಲೇಖನ ನಮ್ಮ ಮರು ಓದಿಗಾಗಿ… ]
“ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೇಲ್ಜಾತಿಯ ಜನ ತಿಂದುಂಡುಬಿಟ್ಟ ಎಂಜಲ ಎಲೆಯ ಮೇಲೆ ಕೇಳ ಜಾತಿಯ ಜನ ಉರುಳು ಸೇವೆ ಮಾಡಿದರು ಅವರ ರೋಗ ವಾಸಿಯಾಗುತ್ತದೆ, ಅಂದುಕೊಂಡಿದ್ದು ನೆರವೇರುತ್ತದೆ ಎಂಬ ಕಂದಾಚಾರದ ‘ಮಡೆಮಡೆಸ್ನಾನ’ ಆಚರಣೆಯಲ್ಲಿದ್ದು; ಅಕ್ಷರವಂತರೆ ಅದನ್ನು ಸಮರ್ಥಿಸಿಕೊಳ್ಳುತ್ತಿರುವಾಗ; ರಾಣಿಬೆನ್ನೂರು ತಾಲ್ಲೋಕಿನ ತಿರುಮಲ ದೇವರಕೊಪ್ಪ ಗ್ರಾಮದ ಭೂಮಾಲೀಕ ತಾನು ಕಟ್ಟಿಸಿದ ಹೊಸಮನೆಯ ವಾಸ್ತು ಸರಿಯಿಲ್ಲ ಎಂದು ತನ್ನ ಮನೆಯಲ್ಲಿ ಜೀತಕ್ಕಿದ್ದ ಅದೇ ಗ್ರಾಮದ ದಲಿತ ಯುವಕ ಕಡೆಮನೆ ಬಸವರಾಜನನ್ನು ಜೀವಂತವಾಗಿ ಬಲಿಕೊಟ್ಟ ನರಬಲಿ ದುರಂತ ನಡೆದಿರುವಾಗ; ಮಂಡ್ಯ, ಪಿರಿಯಾಪಟ್ಟಣದಲ್ಲಿ ಮೇಲ್ಜಾತಿಯ ಹೆಣ್ಣು ಮಕ್ಕಳು ಕೆಳಜಾತಿಯ ವಿದ್ಯಾವಂತ ಯುವಕರನ್ನು ಪ್ರೀತಿಸಿ ಮದುವೆಯಾದ ಕಾರಣ, ಅವರನ್ನು ಹೆತ್ತವರೆ, ಒಡಹುಟ್ಟಿದವರೆ ನಮ್ಮ ಜಾತಿ ಕಡಿಸಿದಳೆಂದು ಕೊಂದು ತಮ್ಮ ಕೊಲೆಯ ಕ್ರೌರ್ಯಕ್ಕೆ ‘ಮರ್ಯಾದ ಹತ್ಯೆ’ ಎಂಬ ಹಣೆಪಟ್ಟಿಕಟ್ಟಿರುವ ಅಮಾನವೀಯ ಪ್ರಸಂಗ ನಮ್ಮ ಕಾಲದಲ್ಲೆ ಜರುಗಿರುವಾಗ; ನಮ್ಮನ್ನಾಳುವ ಸರ್ಕಾರಗಳೆ ಸರ್ಕಾರಿ ಶಾಲೆ, ಹಾಸ್ಟಲ್ಗಳನ್ನು ಮುಚ್ಚಿ ಸಾರ್ವಜನಿಕರ ತೆರಿಗೆ ಹಣವನ್ನು ಯಾವುದೇ ಮುಜುಗರವಿಲ್ಲದೆ ಜಾತಿ ಮಠಗಳಿಗೆ ದೇಣಿಗೆ ನೀಡುತ್ತಿರುವ ಈ ಹೊತ್ತಿನಲ್ಲಿ; ರೈತರು ತಮ್ಮ ಭೂಮಿ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿನಾಶಕಾರಿ ಬೆಳವಣಿಗೆಯ ಈ ಹಂತದಲ್ಲಿ…” –ದೇವನೂರರ ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಓದು, ಅಧ್ಯಯನ, ಚರ್ಚೆ ಹೆಚ್ಚು ಪ್ರಸ್ತುತ ಎಂದೆನಿಸುತ್ತದೆ.
ದೇವನೂರ ಮಹಾದೇವ ಅವರು ಕಳೆದ ನಾಲ್ಕು ದಶಕಗಳಲ್ಲಿ ಮಾಡಿದ ಭಾಷಣ, ಪತ್ರಿಕೆಗಳಿಗೆ ಬರೆದ ಪತ್ರ, ಲೇಖನಗಳು ಸಂಕಲನಗೊಂಡು ‘ಎದೆಗೆ ಬಿದ್ದ ಅಕ್ಷರ’ವಾಗಿವೆ. ಇಡೀ ಕೃತಿ, ಕರ್ನಾಟಕದ ಕಳೆದ ನಲವತ್ತು ವರ್ಷಗಳ ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃ ತಿಕ ಹಾಗೂ ಸಾಹಿತ್ಯಕ ಸಂದರ್ಭದ ಸಾಕ್ಷಿಪ್ರಜ್ಞೆಯಂತಿದೆ. ಇಲ್ಲಿನ ಪ್ರತಿಯೊಂದು ಬರಹವನ್ನು ಓದುತ್ತಾ ಹೋದಂತೆ, ಕರ್ನಾಟಕದ ‘ಸಾಮಾಜಿಕ ಆತ್ಮಕಥನ’ ಹೇಗೋ; ಹಾಗೆಯೇ ಪ್ರತಿಯೊಬ್ಬ ಪ್ರಾಮಾಣಿಕ ಓದುಗನ ಆತ್ಮಕಥನವೇನೋ ಎಂದೆನಿಸುತ್ತವೆ. ಮೂರು ಸಾಲಿನ ಬರಹದಿಂದಿಡಿದು, ಹದಿನಾಲ್ಕು ಪುಟಗಳ ದೀರ್ಘ ಲೇಖನವನ್ನೂ ಒಳಗೊಂಡಿರುವ ಈ ಮಹತ್ವದ ಕೃತಿಗೆ ಕಾವ್ಯ ಗುಣವಿದೆ. ಪ್ರತಿಯೊಂದು ಬರಹವನ್ನೂ ಓದುತ್ತಾ ಹೋದಂತೆ ಯಾವುದೋ ಜನಪದ ಕಥೆ, ಝೆನ್ ಕಥೆ, ತತ್ತ್ವಪದಗಳನ್ನ ಓದಿದ ಅನುಭವವಾಗುತ್ತದೆ. ಜೀವ ಕೇಂದ್ರಿತ ಕಾಳಜಿಯುಳ್ಳ ಇಲ್ಲಿನ ಬರಹಗಳಿಗೆ ಓದುಗನನ್ನು ಆತ್ಮಾವಲೋಕನಕ್ಕೆ ಒಳಗುಮಾಡುವ; ತನ್ನ ಅಂತಃಕರಣವನ್ನು ತಾನೇ ಕಂಡುಕೊಳ್ಳುವ; ತನ್ನ ವಿರುದ್ಧ ತಾನೇ ಬಂಡೇಳುವ; ಹಾಗೆಯೇ ಹಲವು ಬಗೆಯ ಮುಖವಾಡಗಳನ್ನು ಬಯಲು ಮಾಡುವ ಚಿಕಿತ್ಸಕ ಗುಣವಿದೆ. ಜಾತ್ಯಾತೀತ, ಧರ್ಮಾತೀತ, ಲಿಂಗ ಸಮಾನತೆಯ; ಅಂತರಂಗ-ಬಹಿರಂಗಗಳು ಒಂದೇ ಆಗಿರುವ; ಶೋಷಣೆ-ದೌರ್ಜನ್ಯ ರಹಿತ ಸಮಸಮಾಜದ ತುಡಿತವಿದೆ. ಎಲ್ಲವೂ ದಿಕ್ಕೆಟ್ಟು ಅತಂತ್ರಗೊಂಡಿರುವ; ಮಾತುಗಳು ಮೌಲ್ಯ ಕಳೆದುಕೊಂಡಿರುವ; ಸ್ವಾರ್ಥ ವಿಜೃಂಭಿಸುತ್ತಿರುವ; ಅಂತಃಸಾಕ್ಷಿಗಳೆ ಕಳೆದು ಹೋಗಿರುವ ಈ ಹೊತ್ತಿನಲ್ಲಿ ‘ಎದೆಗೆ ಬಿದ್ದ ಅಕ್ಷರ’ ಮದ್ದಾಗಬಲ್ಲದು.
ದೇವನೂರರು ತಮ್ಮ ಒಡಲಾಳ, ಕುಸುಮಬಾಲೆ ಹಾಗೂ ಕಥೆಗಳನ್ನ ಹದವಾಗಿ ಕುದಿಸಿ, ಬೇಯಿಸಿ ಭಟ್ಟಿ ಇಳಿಸಿದ ಜೀವಜಲದಂತೆ ಈ ‘ಎದೆಗೆ ಬಿದ್ದ ಅಕ್ಷರ’. ಸಮಾನತೆ, ಸ್ವಾತಂತ್ರ್ಯ, ಸಹೋದರತೆ, ಸಾಮಾಜಿಕ ನ್ಯಾಯ ಹಾಗೂ ಬುದ್ಧ ಹೇಳಿದ ಸಮತೆ, ಮೈತ್ರಿ, ಕರುಣವನ್ನು ಉಸಿರಾಡುವ, ಕನಸು ಕಾಣುವ, ಈ ಕನಸನ್ನು ನನಸು ಮಾಡಲು ಹಪಹಪಿಸುವ ಮನಸ್ಸುಗಳಿಗೆ ಮಾತ್ರ ‘ಎದೆಗೆ ಬಿದ್ದ ಅಕ್ಷರ’ಗಳು ಅರ್ಥವಾಗಲಿಕ್ಕೆ ಸಾಧ್ಯ. ‘ಸಮಾನತೆಯ ಉಸಿರಾಡುವ ಜೀವಿಗಳ ಪಾದಗಳಿಗೆ’ ಅರ್ಪಿತಗೊಂಡಿರುವ ಈ ಕೃತಿಯು :
ಭೂಮಿಗೆ ಬಿದ್ದ ಬೀಜ
ಎದೆಗೆ ಬಿದ್ದ ಅಕ್ಷರ
ಇಂದಲ್ಲ ನಾಳೆ ಫಲ ಕೊಡುವುದು
-ಎಂಬ ಆಶಾವಾದಿ ಭಾವನೆಗಳಿಂದ ಆರಂಭಗೊಂಡು, “…ಮಕ್ಕಳ ಶಿಕ್ಷಣದಲ್ಲಿ ಭಿನ್ನಭೇದ ತೊಡೆದು ಸಮಾನ ಶಿಕ್ಷಣ ಪದ್ಧತಿಯ ಮೂಲಕ ಸಂವಿಧಾನದ ಆಶಯಗಳಿಗೆ ತಕ್ಕಂತೆ ಪಠ್ಯ ರಚಿಸಿ ನಾಳಿನ ಭಾರತ ಕಟ್ಟಬೇಕಾಗಿದೆ.” ಎಂಬ ಸಂವಿಧಾನಾತ್ಮಕ ಆಶಯಗಳನ್ನ ಮುಂದಿಡುತ್ತ ಮುಕ್ತಾಯವಾಗುತ್ತದೆ. “ಕೇವಲ ಮನುಷ್ಯನಾಗುವುದೆಂದರೆ; ಅಸ್ಪೃಶ್ಯವಾಗುವುದೆಂದರೆ; ಅಹಿಂಸೆಯ ಹುಡುಕುತ್ತಾ; ಬುದ್ಧನೆಡೆಗೆ ಒಂದು ನಡಿಗೆ; ಬಂಡೆಗಳ ಮೇಲೆ ಚಿಗುರೊಡೆಯಬೇಕಾಗಿದೆ; ದನಿ ಇಲ್ಲದೆ ಮಲಗಿರುವವರ ದನಿಯಾಗಿಯೂ; ಹುಟ್ಟುತ್ತ ವಿಶ್ವಮಾನವ; ಮಾನವೀಯತೆ ಅಂತಾರಲ್ಲ-ಅದರ ಬಗ್ಗೆ; ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ” –ಎಂಬ ಕೆಲವು ಬರಹದ ಶೀರ್ಷಿಕೆಗಳೇ ಒಟ್ಟು ಕೃತಿ ಹಾಗೂ ಕೃತಿಕಾರನ ಧೋರಣೆಯನ್ನು ಸಾಬೀತುಪಡಿಸುತ್ತವೆ. ಇಲ್ಲಿನ ಬರಹಗಳಿಗೆ ಸಾಹಿತ್ಯಕ ಗುಣ ಮಾತ್ರ ಇರದೆ, ಸಾಮಾಜಿಕ ರಾಜಕೀಯ ಧಾರ್ಮಿಕ ಆರ್ಥಿಕ ಜಿಜ್ಞಾಸೆಯ ಒಳನೋಟಗಳಿವೆ.
ಸೂಕ್ಷ್ಮ ಬರಹಗಾರ, ಚಿಂತಕನೊಬ್ಬನಿಗೆ; ಭೂತ ಕಾಲದ ಸಂಗತಿಗಳ ಸಾಕ್ಷಿಪ್ರಜ್ಞೆಯೊಟ್ಟಿಗೆ ವರ್ತಮಾನವನ್ನು ಗ್ರಹಿಸುತ್ತಾ ಭರವಸೆಯ ಭವಿಷ್ಯತ್ತನ್ನು ಮುಂಗಾಣಿಸುವ ದರ್ಶನ ಗುಣವಿರುವುದನ್ನು ಈ ಕೃತಿ ಸ್ಪಷ್ಟಪಡಿಸುತ್ತದೆ. ದೇವನೂರರು ಸಮಾಜದ ನಡುವೆಯೇ ನಿಂತು, ಸಮಾಜದಲ್ಲಿನ ಹಸಿವು, ಬಡತನ, ದುಃಖ, ಅವಮಾನ, ಅಸಮಾನತೆಯ ಜೊತೆಗೆ ಅನುಸಂಧಾನ ಮಾಡುತ್ತ ವಾಸ್ತವವಾದಿಯಾಗಿ ಚಿಂತಿಸುತ್ತಾ ವೈಜ್ಞಾನಿಕ ಹಾಗೂ ವೈಚಾರಿಕ ಮಾರ್ಗೋಪಾಯಗಳನ್ನು ಸೂಚಿಸುವ ಕಾರಣದಿಂದಾಗಿ ಇದು ಮಹತ್ವದ ಕೃತಿ ಎಂದೆನಿಸುತ್ತದೆ. ಮನೆ ಇಲ್ಲದವರು ಮಾತನಾಡಿದಾಗ ‘ನನ್ನ ಭಕ್ತರಾದ ನಿಮ್ಮೆಲ್ಲರಿಗೂ ಮನೆಯಾಗುವವರೆಗೂ ನನಗೆ ಗುಡಿ ಬೇಡ’ ಎಂದ ಮನೆಮಂಚಮ್ಮನ ಕಥನ ಸಾಮಾಜಿಕ ವಿವೇಕದ ಕಣ್ಣಾಗಬಲ್ಲದು. “ದಿನ ಸವೆಯುತ್ತಿದೆ. ದಿನ ಮುಗಿಯುವ ಕೊನೆಯಲ್ಲಿ ಎಲ್ಲವೂ ಮುಗಿದ ಮೇಲೆ ಭಾವನೆ ಮೀರಿದ ಇಥಿಯೋಪಿಯಾದ ಮಕ್ಕಳು ಬರುತ್ತವೆ. ಕ್ಷಾಮದ ಬಿಳಿ ಹಲ್ಲುಗಳು ಅವುಗಳನ್ನು ತಿನ್ನುತ್ತವೆ. ಅವುಗಳು ನನ್ನನ್ನು ತಿನ್ನುತ್ತವೆ…” –ಎಂದು ಹೇಳುವ ದೇವನೂರರು ಆ ಮೂಲಕ ಓದುಗನ ಎದೆಯಾಳದಲ್ಲಿ ಹಸಿವಿನ ಸಂಕಟದ ತೀವ್ರತೆಯನ್ನು ಜಾಗೃತಗೊಳಿಸುತ್ತಲೇ ಜಗತ್ತಿನೆಲ್ಲಾ ಹಸಿದವರ ಬಗೆಗೆ ಚಿಂತಿಸುವಂತೆ ಮಾಡುತ್ತಾರೆ. ಈ ಕೃತಿಯಲ್ಲಿನ ಲೇಖಕನ ಸಂಕಟವನ್ನು ಓದುಗರ ಅಂತರಾಳಕ್ಕೆ ವರ್ಗಾಯಿಸುವ ಗುಣ ಇಲ್ಲಿನ ಬರಹಕ್ಕಿದೆ. ಹಾಗಂತ ಸಂಕಟಗಳು ಕೇವಲ ವೇದನೆಗಳು ಮಾತ್ರವಾಗಿರದೆ; ಚಿಂತನೆಗೆ ಹಚ್ಚಬಲ್ಲ ಜೀವಂತಿಕೆ ಇಲ್ಲಿನ ಅಕ್ಷರಗಳಿಗಿವೆ.
ಬುದ್ಧ, ಪಂಪ, ಬಸವ, ವ್ಯಾಸ, ಕುಮಾರವ್ಯಾಸ, ಪರಮಹಂಸ, ಬೇಂದ್ರೆ, ಕುವೆಂಪು, ಗಾಂಧಿ, ಅಂಬೇಡ್ಕರ್, ಮಾರ್ಕ್ಸ್, ಲೋಹಿಯಾ, ಸುಭಾಸ್ ಪಾಳೇಕಾರ್, ಧರ್ಮಾನಂದ ಕೋಸಂಬಿ, ಐನ್ಸ್ಟೈನ್, ಟಾಲ್ಸ್ಟಾಯ್, ಶೇಕ್ಸ್ಪಿಯರ್, ಚಿನುವಾ ಅಚಿಬೆ -ಮುಂತಾದವರ ಚಿಂತನೆಗಳು ಇಲ್ಲಿ ಜೀವ ಪಡೆದುಕೊಂಡು, ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿವೆ. “ಗಾಂಧಿ-ಕಾಠಿಣ್ಯದ ತಂದೆಯಂತೆ; ಜೆಪಿ-ಅಸಹಾಯಕ ತಾಯಿ; ವಿನೋಬಾ-ಮದುವೆಯಾಗದ ವ್ರತನಿಷ್ಠ ಅಕ್ಕನಂತೆ; ಲೋಹಿಯಾ-ಊರೂರು ಅಲೆಯುವ ಮನೆ ಸೇರದ ಅಲೆಮಾರಿ ಮಗ; ಅಂಬೇಡ್ಕರ್-ತಾರತಮ್ಯಕ್ಕೆ ಒಳಗಾಗಿ ಮುನಿಸಿಕೊಂಡು ಮನೆ ಹೊರಗೆ ಇರುವ ಮಗ. ಇದು ನಮ್ಮ ಕುಟುಂಬ. ನಾವು ಇಲ್ಲಿನ ಸಂತಾನ” –ಎಂದು ಹೇಳುವ ದೇವನೂರರು, ಇವತ್ತಿನ ತಲೆಮಾರು ಈ ಎಲ್ಲಾ ಸಮಾಜ ಚಿಂತಕರ ಹೋರಾಟವನ್ನು ಕ್ರಿಯಾಶೀಲಗೊಳಿಸುತ್ತಾ; ಅವರೆಲ್ಲಾ ತತ್ತ್ವ-ಆದರ್ಶಗಳನ್ನು ಬದುಕಾಗಿಸಬೇಕಾಗಿರುವ ತುರ್ತನ್ನು ಎಚ್ಚರಿಸುತ್ತಾರೆ. ದೇವನೂರರು ಉಡುಪಿ ಮಠದ ಕನಕನ ಕಿಂಡಿಯ ಸಂಗತಿಯನ್ನು ಚರ್ಚಿಸುತ್ತಲೇ, ಜಾತಿ ತಾರತಮ್ಯದ ಕುರುಡುತನವನ್ನು ಖಂಡಿಸುತ್ತಾ; ಈ ಜಾತಿನಿಷ್ಠ ಸಮಾಜದಲ್ಲಿ ‘ಮನುಷ್ಯನಾಗಿ ಹುಟ್ಟಿದ ಮನುಷ್ಯ-ಮನುಷ್ಯನಾಗೇ ಉಳಿಯುವುದು ಎಷ್ಟು ಕಷ್ಟ’ ಎಂಬುದನ್ನು ಕುರಿತು ವಿವೇಚಿಸುತ್ತಾರೆ. ಈ ಹಿನ್ನೆಲೆಯಲ್ಲೆ ಆಫ್ರಿಕಾದ ಚಿನುವಾ ಅಚಿಬೆಯವರು ಮೈಸೂರಿಗೆ ಬಂದ ಸಂದರ್ಭದಲ್ಲಿ ಹಳ್ಳಿಯೊಂದನ್ನು ನೋಡಿ ಆಡಿದ ಮಾತನ್ನು ಹೀಗೆ ದಾಖಲಿಸುತ್ತಾರೆ : “ನಿಮ್ಮ ಹಳ್ಳಿಯ ಅಸ್ಪೃಶ್ಯರನ್ನು ಕಂಡೆ. ಇಂದಿನಿಂದ ನಾನು ಹೆಚ್ಚು ದುಃಖಿತನಾದೆ. ನಮ್ಮ ಆಫ್ರಿಕಾದಲ್ಲೂ ‘ಗಾಡ್ ಚಿಲ್ಡ್ರನ್’(ದೇವರ ಮಕ್ಕಳು) ಎಂಬ ಜನ ಇದ್ದಾರೆ. ಅಲ್ಲಿ ಅವರ ರಕ್ತ ಭೂಮಿಗೆ ಬಿದ್ದರೆ ಪಾಪ ಬರುತ್ತೆ. ಇಲ್ಲಿ ಈ ಹರಿಜನರ ರಕ್ತ ಭೂಮಿಗೆ ಬಿದ್ದರೆ ಪುಣ್ಯ ಬರುತ್ತೆ.” ಜೊತೆಗೆ, ಅಚಿಬೆಯವರ ಈ ಮಾತುಗಳಲ್ಲಿನ ದುಃಖ ಪ್ರತಿಯೊಬ್ಬ ಭಾರತೀಯನ ದುಃಖವಾಗಬೇಕೆಂದು ಹಾಗೂ ಆ ಮೂಲಕ ಎಲ್ಲಾ ಜಾತಿ ಜನರ ದುಃಖದ ಬಗೆಗೆ ಪ್ರತಿಯೊಬ್ಬರೂ ಚಿಂತಿಸುವಂತಾಗಬೇಕೆಂದು ಬಯಸುತ್ತಾರೆ.
ಪ್ರಜಾಸತ್ತಾತ್ಮಕ ಸಮಸಮಾಜ ನಿರ್ಮಾಣಕ್ಕಾಗಿ ದಲಿತ ಚಳವಳಿ, ರೈತ ಚಳವಳಿ ಹಾಗೂ ಪ್ರಗತಿಪರ ಚಳವಳಿಗಳು ಒಗ್ಗೂಡುವ ಮೂಲಕ ದಲಿತರನ್ನೂ ಒಳಗೊಂಡಂತೆ ಎಲ್ಲಾ ಜಾತಿಯ ಬಡವರು, ಶೋಷಿತರು, ನೊಂದವರನ್ನು ಸಂಘಟಿಸಿ ಈ ಸಮಾಜದ ಅನಿಷ್ಟಗಳಾದ ಜಾತಿ, ಅಸ್ಪೃಶ್ಯತೆ, ಅಸಮಾನತೆ, ಬಡತನ, ಅನಕ್ಷರತೆ, ಶೋಷಣೆ-ದೌರ್ಜನ್ಯಗಳ ವಿರುದ್ಧ ಅಹಿಂಸಾತ್ಮಕ ಹೋರಾಟವನ್ನು ಕಟ್ಟಬೇಕಿದೆ ಎಂಬುದಾಗಿ ದೇವನೂರರು ಒತ್ತಾಯಿಸುತ್ತಾರೆ. ಮೇಲು-ಕೀಳು, ಶ್ರೇಷ್ಠ-ಕನಿಷ್ಠ ಎಂಬ ತರತಮ ಭೇದವನ್ನು ಕಂಡು ಸಿಡಿಮಿಡಿಗೊಳ್ಳುವ ದೇವನೂರರು ಜಾತಿಯ ಮೇಲರಿಮೆ(ಅಹಂಕಾರ) ಹಾಗೂ ಕೀಳರಿಮೆಗಳನ್ನ ನಿಷ್ಠೂರವಾಗಿ ಖಂಡಿಸುತ್ತಾ : “ಮೇಲು-ಕೀಳು ರೋಗವನ್ನೇ ಸಂಸ್ಕೃತಿಯೆಂದುಕೊಂಡಿರುವವರಿಗೆ ಸಾಂಸ್ಕೃತಿಕ ಚಿಕಿತ್ಸೆ; ತಾರತಮ್ಯದ ಕಟ್ಟುಪಾಡುಗಳನ್ನೇ ಸಂಪ್ರದಾಯ ಎಂದುಕೊಂಡಿರುವವರಿಗೆ ಸಾಮಾಜಿಕ ಚಿಕಿತ್ಸೆ; ಬಡತನದಿಂದ ಎದ್ದುನಿಲ್ಲಲು ತ್ರಾಣವಿಲ್ಲದ ತಳಸಮುದಾಯಕ್ಕೆ ಆರ್ಥಿಕ ಚಿಕಿತ್ಸೆ” ನೀಡಬೇಕಾಗಿದೆ ಎಂದು ಹೇಳುತ್ತಾರೆ.
ಇಲ್ಲಿನ ಬರಹದುದ್ದಕ್ಕೂ ಸಾಮಾಜಿಕ ಪರಂಪರೆಯ ಸಾಕ್ಷಿಪ್ರಜ್ಞೆಯೊಂದು ಜಾಗೃತಗೊಂಡಿರುವುದನ್ನು ಕಾಣಬಹುದು. ಜಾತಿ-ಉಪಜಾತಿಗಳನ್ನ ‘ಜಾತಿ’ ಎಂದು ಗುರುತಿಸದೆ ‘ಗುಂಪು’ ಎಂದು ಗುರುತಿಸುವ ಮೂಲಕ ಜಾತಿಪ್ರಜ್ಞೆಯನ್ನು ನಾಶ ಮಾಡಿ ಭಿನ್ನ ಅನುಭವ ಸಮುದಾಯಗಳನ್ನಾಗಿ ನೋಡುವ ವಿವೇಕವನ್ನು ಬಿತ್ತಬೇಕಿದೆ ಎಂದು ಪ್ರತಿಪಾದಿಸಿದ್ದಾರೆ. ಪ್ರತಿಯೊಂದು ಸಮುದಾಯವೂ ತನ್ನ ಅವಿವೇಕದ ವಿರುದ್ಧ ತಾನೇ ಬಂಡೇಳುವ ಆಂತರಿಕ ಬಂಡಾಯದ ಮಹತ್ವವನ್ನು ಕುರಿತು ಹೀಗೆ ಹೇಳುತ್ತಾರೆ: -“ಬುದ್ಧ, ಬಸವ, ಅಲ್ಲಮ, ಗಾಂಧಿಯಂಥವರು ತಮ್ಮ ಶತ್ರು ತಮ್ಮ ಒಳಗೂ ಇದ್ದಾನೆ ಎಂದು ಭಾವಿಸಿ ಹೆಣಗುತ್ತಿದ್ದರು. ಆಸೆ, ದ್ವೇಷ, ಅಸೂಯೆ, ನಾನತ್ವ ಇಂಥವು ತಮ್ಮ ಒಳಗಿನ ಶತ್ರು ಎಂದು ಭಾವಿಸುತ್ತಿದ್ದರು. ಆದರೆ ಸಮಾನತೆಗಾಗಿ ಹೋರಾಡುವ ಸಂಘಟನೆಗಳು ತಮ್ಮ ಶತ್ರು ಹೊರಗೆ ಇದ್ದಾನೆ ಎಂದು ಮಾತ್ರ ಹೋರಾಡುತ್ತಿವೆ.” ಇದು ಕೇವಲ ಸಂಘಟನೆಗಳಿಗೆ ಸಂಬಂಧಿಸಿದ ಮಾತು ಮಾತ್ರವಾಗಿರದೆ, ಪ್ರತಿಯೊಬ್ಬನ ಅಂತಃಸಾಕ್ಷಿಗೆ ಸಂಬಂಧಿಸಿದ ಮಾತಾಗಿಯೇ ಪರಿಗಣಿಸಬೇಕಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಜರ್ಮನ್ ಲೇಖಕ ‘ಗುಂತರ್ ಗ್ರಾಸ್’ ಹೇಳುವ ಹಾಗೆ : “ಬರಹಗಾರರು ತಮ್ಮ ತಮ್ಮ ಕೇರಿಗಳನ್ನು ಅಡ್ರೆಸ್ ಮಾಡಿ ಬರೆಯಬೇಕು” ಎಂಬ ಮಾತಿಗೆ ಪ್ರಮಾಣವಾಗಿರುವ ದೇವನೂರರು ತಮ್ಮೆಲ್ಲಾ ಬರವಣಿಗೆಯಲ್ಲಿ ಸಮುದಾಯದ ಅನುಭವವನ್ನು ಉಸಿರಾಡುತ್ತಾರೆ. ಅವರೇ ಹೇಳಿಕೊಂಡಿರುವ ಹಾಗೆ : “ನಾನು ಕತ್ತಲ ರಾಜ್ಯದಿಂದ ಬಂದಂಥವನು. ನಾನು ಇದುವರೆಗೆ ಬರೆದಿರುವುದು ನಮ್ಮ ರಾಜ್ಯದ ಮನುಷ್ಯನ ಆರೇಳು ಬೆರಳುಗಳು, ಹೆಚ್ಚೆಂದರೆ ಒಂದು ಹಸ್ತ ಇದ್ದೀತು. ಅದಷ್ಟೆ ಕನ್ನಡ ಸಾಹಿತ್ಯದ ಗತಿಯನ್ನು ತನ್ನ ಪ್ರಮಾಣಕ್ಕಿಂತ ಹೆಚ್ಚಾಗಿ ಅಲ್ಲಾಡಿಸಿದೆ. ಕತ್ತಲ ರಾಜ್ಯದ ಇಡೀ ಮನುಷ್ಯ ಮಾತಾಡುವುದಾದರೆ? ಒಂದು ಸಮುದಾಯವೇ ಮಾತಾಡಿದಂತಾಗಬಹುದು.”
ಜಾತಿ ಸಂಕರ, ಅಂತರ್ ಜಾತಿ ವಿವಾಹ ವಿರೋಧಿ ಸಂಕಥನವಾದ ಮಾರಮ್ಮನಿಗೆ ಕೋಣ ಬಲಿಕೊಡುವ ಜಾನಪದ ಕಥನವನ್ನು ದಾಖಲಿಸಿರುವ ದೇವನೂರರು; ಜಾತಿವಾದಿಗಳು ವ್ಯವಸ್ಥಿತವಾಗಿ ದಲಿತರಲ್ಲೆ ಇರುವ ಹೊಲೆಯ-ಮಾದಿಗ ಎಂಬ ಒಳಪಂಗಡಗಳ ನಡುವೆ ದ್ವೇಷ ಬಿತ್ತುವ, ವಿಘಟಿಸುವ ಹುನ್ನಾರಗಳು ಹೇಗೆ ನಡೆಸುತ್ತಿವೆ ಎಂಬುದನ್ನು ‘ಗಂಡಭೇರುಂಡ ಪಕ್ಷಿ’ ಕಥೆಯ ಮೂಲಕ ಹೀಗೆ ದಾಖಲಿಸಿದ್ದಾರೆ : “ಒಂದು ಗಂಡಭೇರುಂಡ ಪಕ್ಷಿಯು ನದಿಯ ದಡದಲ್ಲಿ ಕುಳಿತಿರುತ್ತದೆ. ನದಿಯಲ್ಲಿ ತೇಲಿ ಬಂದ ಹಣ್ಣೊಂದನ್ನು ಮೊದಲ ತಲೆಯು ತಿನ್ನಬೇಕೆನ್ನುವಾಗ :
ಎರಡನೆ ತಲೆ : ನಿಲ್ಲು ತಿನ್ನಬೇಡ
ಮೊದಲನೆ ತಲೆ : ಯಾಕೆ ತಿನ್ನಬಾರದು?
ಎರಡನೆ ತಲೆ : ಯಾಕೆ ಅಂದರೆ? ನಾನು ತಿನ್ನಬಾರದೆ?
ಮೊದಲನೆ ತಲೆ : ಮೊದಲು ನೋಡಿದ್ದು ನಾನಲ್ಲವೆ?
ಎರಡನೆ ತಲೆ : ನಮ್ಮ ದೇಹ ಒಂದೇ ಅಲ್ಲವೆ?
ಮೊದಲನೆ ತಲೆ : ದೇಹ ಒಂದೇ ಆದರೂ ತಿನ್ನುವ ಬಾಯಿ ಬೇರೆ ಬೇರೆ ಅಲ್ಲವೇ?
-ಹೀಗೆ ವಾಗ್ವಾದ ನಡೆದು ಮೊದಲ ತಲೆಯೆ ಇಡೀ ಹಣ್ಣನ್ನು ತಿಂದುಕೊಳ್ಳುತ್ತದೆ. ಅದನ್ನು ನೋಡಲಾಗದೆ ಎರಡನೆ ತಲೆ ಕಣ್ಣು ಮುಚ್ಚಿಕೊಳ್ಳುತ್ತದೆ. ಸ್ವಲ್ಪ ಸಮಯದ ನಂತರ ಕಣ್ಣು ತೆರೆದು ನೋಡಿದಾಗ ಅದೇ ನದಿಯಲ್ಲಿ ಮತ್ತೊಂದು ಹಣ್ಣು ತೇಲಿ ಬರುತ್ತಿರುವುದನ್ನು ಕಂಡು ತಿನ್ನಲು ಎತ್ತಿಕೊಳ್ಳುತ್ತದೆ.
ಮೊದಲನೆ ತಲೆ : ಅದನ್ನು ತಿನ್ನಬೇಡ ವಿಷಫಲ
ಎರಡನೆ ತಲೆ : ನನ್ನ ಬಾಯಿ ನನ್ನ ತಲೆ, ನಾನು ತಿಂತೇನೆ ನಿಂಗೇನು?
ಮೊದಲನೆ ತಲೆ : ನೀನೇ ತಿಂದರೂ ನಮ್ಮ ದೇಹ ಒಂದೇ ಅಲ್ಲವೇ?
ಎರಡನೆ ತಲೆ : ದೇಹ ಒಂದಾದರೂ ತಿನ್ನುವ ಬಾಯಿ ಬೇರೆ ಬೇರೆ ಅಲ್ಲವೆ?
ಎಂದು ಹೇಳಿ ಹಣ್ಣನ್ನು ನಿನ್ನುತ್ತದೆ. ವಿಷದ ಹಣ್ಣಾದ ಕಾರಣ ಗಂಡಭೇರುಂಡ ಪಕ್ಷಿ ಸಾಯುತ್ತದೆ.
-ಪ್ರಿಯ ಸ್ನೇಹಿತರೇ ಕೇಳಿ, ಅಸ್ಪೃಶ್ಯತೆಗೆ ದೇಹ ಒಂದೇ ಆದರೂ ತಲೆ ನೂರೆಂಟು. ಎಡಗೈ, ಬಲಗೈ, ಈ ಎಡಗೈ ಹೆಬ್ಬೆರಳು, ಕಿರುಬೆರಳು, ಬಲ ಹೆಬ್ಬೆರಳು, ಕಿರುಬೆರಳು ಹೀಗೆ ನೂರೆಂಟು. ಸ್ವಾರ್ಥ ದಲಿತ ರಾಜಕಾರಣಿಗಳು ಹೊಣೆಗೇಡಿ ದಲಿತ ನೌಕರರು ತಮ್ಮ ಅಹಂ, ಅಧಿಕಾರಕ್ಕಾಗಿ ಇರುವ ಭಿನ್ನತೆಯನ್ನು ಹೆಚ್ಚಿಸುತ್ತಿರುವರು. ಆದರೆ ನೆನಪಿರಲಿ, ಗಂಡಭೇರುಂಡ ಪಕ್ಷಿಯಂತೆ ಸಾಯುವವರು ಒಟ್ಟಿಗೆ ದೇಹವಾದ ನಾವು.” ತಮ್ಮನ್ನು ತಾವೇ ಒಡೆದುಕೊಳ್ಳುತ್ತಿರುವ ಶೋಷಿತ ಸಮುದಾಯಕ್ಕೆ ಈ ರೂಪಕ ಎಚ್ಚರಿಕೆಯ ಸಂಕೇತವಾಬೇಕಿದೆ. ಒಡೆದು ಆಳುವವರಿಗೆ ಒಗ್ಗಟ್ಟಿನ ಪಾಠ ಹೇಳಿಕೊಡಬೇಕಿದೆ. ಬಾಬರಿ ಮಸೀದಿಯನ್ನು ಕೆಡವಿದ್ದು; ಮತಾಂತರ ಹಾಗೂ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೊಳಿಸುವ ಬ್ರಾಹ್ಮಣಶಾಹಿ ಹುನ್ನಾರ; ಪೇಜಾವರರ ಹುಸಿ ದಲಿತ ಕೇರಿಯ ಪಾದಯಾತ್ರೆ –ಈ ಎಲ್ಲಾ ಸಂಗತಿಗಳ ಆಳದಲ್ಲಿರುವ ಕಪಟತನವನ್ನು ಬಿಚ್ಚಿಟ್ಟಿರುವ ದೇವನೂರರು : “ಜಾತಿ ಪದ್ಧತಿಯ ರೋಗವು ನಮ್ಮ ಅಂತಃಸಾಕ್ಷಿಯನ್ನು ತಿಂದುಹಾಕಿಬಿಟ್ಟಿದೆ. ಅದಕ್ಕೇ ಇಲ್ಲಿ ಪ್ರೀತಿ ಸಮಾನತೆಗಳು ತಬ್ಬಲಿಗಳಾಗಿವೆ” ಎಂದು ಹೇಳಿರುವ ಮಾತು ಅಕ್ಷರಶಃ ಸತ್ಯವಾಗಿದೆ.
ಪ್ರೊ. ಎಲ್. ಬಸವರಾಜ್, ಪ್ರೊ. ಕೆ. ರಾಮದಾಸ್, ಪಿ. ಲಂಕೇಶ್, ಪ್ರೊ. ಎಂ. ಡಿ. ನಂಜುಂಡಸ್ವಾಮಿ, ಕಡಿದಾಳ್ ಶಾಮಣ್ಣ, ತೇಜಸ್ವಿ, ಯು. ಆರ್. ಅನಂತಮೂರ್ತಿ, ಆಲನಹಳ್ಳಿ ಕೃಷ್ಣ, ಡಿ. ಆರ್. ನಾಗರಾಜ್, ಬಿ.ಕೃಷ್ಣಪ್ಪ, ಸಿದ್ಧಲಿಂಗಯ್ಯ, ಚದುರಂಗ, ಖಾಸನೀಸ –ಮುಂತಾದವರೊಟ್ಟಿಗಿನ ಚಿಂತನಾತ್ಮಕವಾದ ಒಡನಾಟದ ವಿವರಗಳ ಮೂಲಕ ಅನೇಕ ತಾತ್ವಿಕ ವಿಚಾರಗಳನ್ನು ಇಲ್ಲಿ ಮಂಡಿಸಿರುವ ದೇವನೂರರು; ಸಂವಿಧಾನ, ಮೀಸಲಾತಿ, ಪ್ರಜಾಪ್ರಭುತ್ವಕ್ಕೆ ಬಂದೊದಗಿರುವ ಕಂಟಕವನ್ನು ಕುರಿತು ಚರ್ಚಿಸಿದ್ದಾರೆ. ಗಾಂಧಿ-ಅಂಬೇಡ್ಕರ್ ಅವರ ಹೋರಾಟ, ವ್ಯಕ್ತಿತ್ವ, ಚಿಂತನೆಗಳನ್ನು ತಾತ್ವಿಕವಾಗಿ ಗ್ರಹಿಸಿರುವ ದೇವನೂರರು, ಗಾಂಧಿ ಅವರ ಮಿತಿ ಮೌಲ್ಯ, ಹಂತಹಂತವಾಗಿ ಬದಲಾದ ವ್ಯಕ್ತಿತ್ವವನ್ನು ದಾಖಲಿಸುತ್ತ ಆ ಎರಡು ವ್ಯಕ್ತಿತ್ವಗಳನ್ನು ಹೀಗೆ ಕಟ್ಟಿಕೊಟ್ಟಿದ್ದಾರೆ : “ಹಿಂದೂ ಧರ್ಮ ಎಂಬ ಮನೆಯೊಳಗೆ ಭಿನ್ನಭಾವ ಜಾತಿ ತಾರತಮ್ಯದ ಕಂಬಗಳನ್ನು ಒಳಗೊಳಗೇ ಕೊಯ್ಯುವವನಂತೆ ಗಾಂಧಿ ಕಾಣಿಸುತ್ತಾರೆ. ಅದೇ ಅಂಬೇಡ್ಕರ್ ಹೊರಗಿನಿಂದ ಆ ಅಸಮಾನತೆಯ ಮನೆಗೆ ಕಲ್ಲೆಸೆಯುವವನಂತೆ ಕಾಣಿಸುತ್ತಾರೆ. ಈ ಪ್ರಕ್ರಿಯೆಯಿಂದಾಗಿ ಅಂಬೇಡ್ಕರ್ ಎಸೆದ ಕಲ್ಲು ಒಳಗಿದ್ದ ಗಾಂಧಿಗೂ ಬಿದ್ದು ರಕ್ತ ಚೆಲ್ಲಿರಬಹುದು. ಇದನ್ನು ಕಂಡು ಹೊರಲೋಕವು ಗಾಂಧಿಗೂ, ಅಂಬೇಡ್ಕರ್ಗೂ ಮಾರಾಮಾರಿ ಹೊಡೆದಾಟ ಎನ್ನಬಹುದು. ಆದರೆ ಇಬ್ಬರೂ ಮಾಡುತ್ತಿದ್ದುದು ಹೆಚ್ಚೂಕಮ್ಮಿ ಒಂದೇ ಕೆಲಸವನ್ನಲ್ಲವೇ?”
“ಬ್ರಾಹ್ಮಣ ಮುಸ್ಲಿಂ ಆಗಲೂಬೇಕಾಗುತ್ತದೆ. ಮುಸ್ಲಿಂ ಬ್ರಾಹ್ಮಣನಾಗಲೂಬೇಕಾಗುತ್ತದೆ. ದಲಿತ ಮತ್ತೊಬ್ಬನೂ ಆಗಲೇಬೇಕಾಗಿದೆ. ಊರಾಚೆಯವನ ಕತೆ ಬರೆಯಲು ಹೊರಟ ಊರೊಳಗಿನ ಇತರೆಯವನು, ಅಸ್ಪೃಶ್ಯರನ್ನು ತನ್ನ ಒಳಬಿಟ್ಟುಕೊಳ್ಳಬೇಕಾಗುತ್ತದೆ.” –ಎಂದು ಹೇಳುತ್ತಾ, ಲಂಕೇಶರು ಹೇಳಿರುವ “ನಾನು ಮಡಿಬಿಟ್ಟೆ, ಮೈಲಿಗೆಯಾದೆ ಹಾಗಾಗಿ ಲೇಖಕನಾದೆ” ಎಂಬ ಮಾತನ್ನು ಉಲ್ಲೇಖಿಸುತ್ತಾ; ಜಾತಿಯ ಅಹಂಕಾರವನ್ನು ಮೀರಲು ಸಾಧ್ಯವಿದೆ ಎಂಬುದನ್ನು ದೇವನೂರರು ಎರಡು ಘಟನೆಗಳ ಮೂಲಕ ಹೀಗೆ ದಾಖಲಿಸಿದ್ದಾರೆ:
ಘಟನೆ-1 : ಬ್ರಾಹ್ಮಣ ಉಪಾಧ್ಯಾಯ ಹೇಳಿದ ಮಾತು :
“ಒಡಲಾಳದ ಸಾಕವ್ವನ ಬಗ್ಗೆ ಮೈಸೂರಿನ ಶಾರದಾ ವಿಲಾಸ ಕಾಲೇಜಿನ ಬ್ರಾಹ್ಮಣ ಉಪಾಧ್ಯಾಯರೊಬ್ಬರು ಹೇಳಿದ್ದು : ‘ನಾನು ತುಂಬಾ ಸಂಪ್ರದಾಯಸ್ಥ. ಯಾರೊಬ್ಬ ಅಸ್ಪೃಶ್ಯನನ್ನೂ ಮುಟ್ಟಿಸಿಕೊಂಡಂಥವನಲ್ಲ. ಒಡಲಾಳ ಓದಿದೆ. ಆ ಸಾಕವ್ವ, ನನ್ನ ಅಜ್ಜಿ ಅನಿಸಿಬಿಟ್ಟಳು. ನನ್ನೊಳಗೆ ನೆಲೆಸಿಬಿಟ್ಟಳು.’ಮುಟ್ಟುವುದೆಂದರೆ ಬಹುಶಃ ಇದೇ ಅಲ್ಲವೇ?”
ಘಟನೆ-2 : ಕುವೆಂಪು ಹೇಳಿದ ಮಾತು :
“ದಲಿತರ ಮನೆಯಲ್ಲಿ ಊಟ ಮಾಡಿದ ಒಕ್ಕಲಿಗ ಹುಡುಗರಿಗೆ ಕೆಲವು ಮತಾಂಧ ಒಕ್ಕಲಿಗರು ಆ ಹುಡುಗರ ತಲೆ ಬೋಳಿಸಿ ನಾಲಿಗೆ ಸುಟ್ಟು ಗಂಜಲ ಕುಡಿಸಿದ್ದನ್ನು ಕುವೆಂಪು ಪ್ರಸ್ತಾಪಿಸಿ ‘ಆ ಮತಾಂಧ ಒಕ್ಕಲಿಗರಿಗೆ ಪೊಲೀಸ್ ಕೇಸು ಮಾತ್ರ ಹಾಕಿ ನಿಲ್ಲಿಸಬಾರದು. ಆ ಮತಾಂಧರಿಗೂ ತಲೆ ಬೋಳಿಸಿ ನಾಲಿಗೆ ಸುಟ್ಟು ಗಂಜಲ ಕುಡಿಸಿ ಮೂಢರಾ ಶುದ್ಧರಾಗಬೇಕಾದವರು ನೀವು’ ಎಂದು ತಿಳಿಹೇಳಬೇಕು ಅಂತಾರೆ.”
-ಒಟ್ಟಾರೆ ‘ಸಂಬಂಜ ಅನ್ನೋದು ದೊಡ್ಡದು ಕನಾ…’ ಎಂಬ ಮೂಲ ಆಶಯವನ್ನೆ ಉಸಿರಾಡುವ ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಮೂಲಕ ದೇವನೂರರು ಕನ್ನಡದ ಪಾರಂಪರಿಕವಾದ ಮನುಷ್ಯಪರವಾದ ವೈಚಾರಿಕ, ಮಾನವೀಯ ತಾತ್ವಿಕ ಪರಿಧಿಯನ್ನು ವಿಸ್ತರಿಸಿದ್ದಾರೆ. ದೇವನೂರರೆ ಹೇಳುವ ಹಾಗೆ: “ನಾವು ನಮ್ಮ ಜನರ ಹೃದಯದ ಒಳಗೆ ಅಡಗಿರುವ ಪುಟ್ಟ ಪುಟ್ಟ ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್ ಅವರನ್ನು ಹುಡುಕೀಹುಡುಕೀ ಉದ್ದೀಪನಗೊಳಿಸಬೇಕಾಗಿದೆ.” ಎಂಬ ಈ ಮಾತು ಎಲ್ಲಾ ಜಾತಿ, ಮತ, ಧರ್ಮದ ಯುವ ಮನಸ್ಸುಗಳ ಎದೆಗಳಲ್ಲಿ ಸಾಮಾಜಿಕ ಜವಾಬ್ದಾರಿಯಾಗಿ ಮಿಡಿಯಬೇಕಿದೆ.