ಲೋಕಸಭಾ ಕ್ಷೇತ್ರ: ಮರುವಿಂಗಡಣೆಯ ಮರ್ಮ- ದೇವನೂರ ಮಹಾದೇವ
[4.9.2023ರ ಪ್ರಜಾವಾಣಿಯಲ್ಲಿ ದೇವನೂರ ಮಹಾದೇವ ಅವರ ವಿಶ್ಲೇಷಣೆ-ಜನಸಂಖ್ಯೆಗೆ ಅನುಗುಣವಾಗಿ ಲೋಕಸಭಾ ಸದಸ್ಯ ಸ್ಥಾನಗಳನ್ನು ನಿರ್ಧರಿಸುವುದರ ಹಿಂದೆ…-]
ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಜನಸಂಖ್ಯೆಯ ಏರುಪೇರಿಗೆ ಅನುಗುಣವಾಗಿ ಪುನರ್ವಿಂಗಡಣೆ ಮಾಡುವ ಪ್ರಸ್ತಾವದ ಕುರಿತು ನಡೆಯುತ್ತಿರುವ ಚರ್ಚೆಗಳು ಆತಂಕ ಹಾಗೂ ಗಾಬರಿ ಹುಟ್ಟಿಸುವಂತಿವೆ. ಭಾರತ ಸಂವಿಧಾನದ ಪ್ರಥಮ ವಿಧಿಯು ‘ಇಂಡಿಯಾ, ದಟ್ ಈಸ್ ಭಾರತ್, ಶಲ್ ಬಿ ಎ ಯೂನಿಯನ್ ಆಫ್ ಸ್ಟೇಟ್ಸ್’ (ಇಂಡಿಯಾ, ಅಂದರೆ ಭಾರತವು, ರಾಜ್ಯಗಳ ಒಂದು ಒಕ್ಕೂಟ) ಎಂದು ಹೇಳುತ್ತದೆ. ಆದರೆ, ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಇಂದಿನ ಸಮಸ್ಯೆಗೆ ಇದೇ ಮೂಲ ಕಾರಣ ಅನ್ನಿಸುತ್ತದೆ. ಹೀಗಾಗಿ, ಭಾರತದಲ್ಲಿ ಅತ್ಯಂತ ಕಡೆಗಣನೆಗೆ ಒಳಗಾಗಿರುವುದು ಯಾವುದೆಂದರೆ, ಸಂವಿಧಾನದ ಪ್ರಥಮ ವಿಧಿ ಎಂದು ಹೇಳಬಹುದೇನೊ!
ಇಂಡಿಯಾ ಅಂದರೆ ಭಾರತವು ರಾಜ್ಯಗಳ ಒಕ್ಕೂಟವಾಗುವುದಕ್ಕೂ ಮೊದಲು, ಭರತಖಂಡದಲ್ಲಿ ಐನೂರಕ್ಕೂ ಹೆಚ್ಚು ರಾಜಮನೆತನಗಳು ಆಳ್ವಿಕೆ ನಡೆಸುತ್ತಿದ್ದವು. ಅವು ಇಂದಿನ ರಾಜ್ಯಗಳಾಗಿ ಅಸ್ತಿತ್ವ ಪಡೆದು ಭಾರತದ ಒಕ್ಕೂಟವಾಗುವುದರ ಹಿಂದೆ ಬಹಳಷ್ಟು ಕಸರತ್ತು ನಡೆದಿದೆ. ಅನೇಕಾನೇಕ ಸವಾಲುಗಳನ್ನು ಎದುರಿಸಲಾಗಿದೆ. ಕೆಲವು ರಾಜ್ಯಗಳಿಗೆ ಸವಲತ್ತು, ವಿಶೇಷ ಸ್ಥಾನಮಾನ ನೀಡಿ ಒಕ್ಕೂಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇಂದಿನ ರಾಜ್ಯಗಳ ಸ್ವರೂಪದಲ್ಲಿ ವಿವಿಧ ರಾಜರುಗಳ ಆಳ್ವಿಕೆ, ಪಾಳೆಪಟ್ಟು, ಬ್ರಿಟಿಷ್ ಹಿಡಿತದ ಪ್ರಾಂತ್ಯ ಎಲ್ಲವೂ ಮಿಳಿತವಾಗಿವೆ. ಇಂತಿರುವ ರಾಜ್ಯಗಳಿಗೆ ಗಡಿಯನ್ನು ನಿರ್ಧರಿಸುವಾಗ ಭಾಷೆಯ ಎಲ್ಲೆಯನ್ನು ಅಳತೆಗೋಲಾಗಿಸಲಾಗಿದೆ. ಆಗ, ರಾಜ್ಯಗಳಿಗೆ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಜನಸಂಖ್ಯೆ ಆಧರಿಸಿ ಪರಿಗಣಿಸುವಾಗಲೂ ಅದರೊಳಗೆ ಒಂದು ಅನುಪಾತದ ಸೂತ್ರ ಇದೆ ಹಾಗೂ 1976 ಮತ್ತು ತದನಂತರ ಜನಸಂಖ್ಯೆಯ ಹೆಚ್ಚಳಕ್ಕೆ ಅನುಗುಣವಾಗಿ ಲೋಕಸಭಾ ಕ್ಷೇತ್ರಗಳ ಸ್ಥಾನಗಳನ್ನು ಹೆಚ್ಚಿಸದೆ, ಇದುವರೆಗೂ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ಕೈಗೊಂಡ ನಿರ್ಧಾರದಲ್ಲಿ, ಒಕ್ಕೂಟ ವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕೆಂಬ ಬಗ್ಗೆ ಆಳ್ವಿಕೆಗೆ ಇರುವ ಹೊಣೆಗಾರಿಕೆಯನ್ನೂ ಗಮನಿಸಬೇಕು. ರಾಜ್ಯಗಳ ಒಕ್ಕೂಟವಾದ ದೇಶವನ್ನು ಯಾವುದೇ ಒಂದು ಭಾಷೆಯವರು ಅಥವಾ ಒಂದು ಪ್ರದೇಶದವರು ಆಳ್ವಿಕೆ ನಡೆಸುವಂತೆ ಆಗಬಾರದು ಎಂಬ ಅಂತರ್ಗತ ಎಚ್ಚರವೂ ಇದರಲ್ಲಿ ಅಡಕವಾಗಿದೆ.
ಈಗ ಯಾಕೋ ಎಚ್ಚರಿಕೆಯ ಗಂಟೆ ಬಡಿದುಕೊಳ್ಳುತ್ತಿದೆ. ಅದರ ಸದ್ದು ಕೇಳಿಸುತ್ತಿದೆ. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಹಾಗೂ ಸಂವಿಧಾನ ರಚಿಸಿದವರಿಗೆ ಏನಾದರೂ ದುಃಸ್ವಪ್ನ ಬಿದ್ದಿತ್ತೇ?
ಹೌದು, ಭಾಷೆಯ ಎಲ್ಲೆಗೊಳಪಡಿಸಿ ರಾಜ್ಯಗಳನ್ನಾಗಿಸಿ, ಆ ರಾಜ್ಯಗಳ ಲೋಕಸಭೆ ಸ್ಥಾನಗಳ ಪ್ರಮಾಣವನ್ನು ಈಗ ಜನಸಂಖ್ಯೆಗೆ ಅನುಗುಣವಾಗಿ ನಿಗದಿಪಡಿಸುವುದಾದರೆ ಭಾರತ ಎನ್ನುವ ಪರಿಕಲ್ಪನೆಗೇ ಇದು ಒಂದು ದುಃಸ್ವಪ್ನ. ಯಾಕೆಂದರೆ, ಈಗ ಕೇಳಿಬರುತ್ತಿರುವ ಸುದ್ದಿಗಳಂತೆ, ಜನಸಂಖ್ಯೆಗೆ ಅನುಗುಣವಾಗಿ 800ಕ್ಕೂ ಹೆಚ್ಚು ಲೋಕಸಭಾ ಸದಸ್ಯ ಸ್ಥಾನಗಳ ಸಂಖ್ಯೆ ನಿಗದಿ ಆಗುವುದಾದರೆ ಏನಾಗುತ್ತದೆ? ಉತ್ತರದ ರಾಜ್ಯಗಳ ಜನಸಂಖ್ಯೆ ಹೆಚ್ಚಳವು ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ ಭಾರಿ ಅಧಿಕವಿರುವುದರಿಂದ ಬರೀ ಮೂರು ಮತ್ತೊಂದು ಹಿಂದಿ ಭಾಷೆಯ ರಾಜ್ಯಗಳಷ್ಟೇ ಕೂಡಿಕೊಂಡು ಕೇಂದ್ರದಲ್ಲಿ ಬಹುಮತ ಗಳಿಸಿಕೊಳ್ಳಲೂಬಹುದು! ಆಗ ಹಿಂದಿ ಭಾಷೆಯು ಭಾರತದ ಉಳಿದೆಲ್ಲ ಶ್ರೀಮಂತ ಭಾಷೆಗಳ ಮೇಲೆ ಸವಾರಿ ಮಾಡಬಹುದು. ಈ ರೀತಿಯಾದರೆ ದೇಶದ ಉಳಿದೆಲ್ಲ ರಾಜ್ಯಗಳು ಸಾಮಂತ ರಾಜ್ಯಗಳಾಗಿಬಿಡುತ್ತವೆ. ಉತ್ತರದ ಹಿಂದಿ ಚಕ್ರವರ್ತಿಗೆ ಕಪ್ಪ ಒಪ್ಪಿಸುತ್ತಿರಬೇಕಾಗುತ್ತದೆ. ಆಗ ಭಾರತವು ಭಾರತವಾಗಿ ಉಳಿದಿರುವುದಿಲ್ಲ. ಉತ್ತರ ಭಾರತದ ಮೂರ್ನಾಲ್ಕು ರಾಜ್ಯಗಳ ಆಳ್ವಿಕೆಗೆ ಉಳಿದೆಲ್ಲ ಪ್ರದೇಶಗಳು ಒಳಪಟ್ಟು, ಭಾರತ ದೇಶದೊಳಗೇ ವಸಾಹತುಶಾಹಿ ಆಳ್ವಿಕೆ ಬಂದಂತೆ ಆಗುತ್ತದೆ. ಅದಕ್ಕಾಗಿಯೇ ಎಚ್ಚರಿಕೆಯ ಗಂಟೆ ಬಡಿದುಕೊಳ್ಳುತ್ತಿರಬೇಕು.
ಹಾಗಾದರೆ ಒಬ್ಬ ವ್ಯಕ್ತಿ, ಒಂದು ಮೌಲ್ಯ, ಒಂದು ವೋಟು ಎಂಬ ಮೌಲ್ಯವನ್ನು ಕಡೆಗಣಿಸಬೇಕೆ? ‘ವಯಸ್ಕ ಮತದಾನ ಬೇಕೇ ಬೇಡವೇ’ ಎಂಬ ಸಂದರ್ಭದಲ್ಲಿ ಇದು ಮಹತ್ವದ ಮೌಲ್ಯ. ಆದರೆ, ಇಲ್ಲಿ ಚರ್ಚಿತವಾಗುತ್ತಿರುವುದು ಒಕ್ಕೂಟ ದೇಶವೊಂದರ ರಾಜ್ಯಗಳ ಪ್ರಾತಿನಿಧ್ಯದ ಸಮಸ್ಯೆ. ಈಗ, ಅಮೆರಿಕದ ಪ್ರಜಾಪ್ರಭುತ್ವದ ಬಗ್ಗೆ ಎಲ್ಲರೂ, ಅದರಲ್ಲೂ ಹೆಚ್ಚಾಗಿ ಯುವಜನ ಸಂಭ್ರಮಿಸುತ್ತಾರೆ. ಅಮೆರಿಕದ ಮೇಲ್ಮನೆ ಸೆನೆಟರ್ಗಳ ಆಯ್ಕೆಯನ್ನು ಗಮನಿಸುವುದಾದರೆ, ಅಲ್ಲಿ ಪ್ರತಿ ರಾಜ್ಯಕ್ಕೂ ಇಬ್ಬರು ಸೆನೆಟರ್ಗಳ ಸಂಖ್ಯೆಯನ್ನು ಸಮಸಮ ನಿಗದಿಪಡಿಸಲಾಗಿದೆ. ಇಲ್ಲಿ ಸೆನೆಟರ್ಗಳನ್ನು ರಾಜ್ಯಗಳ ಜನಸಂಖ್ಯೆಯ ಆಧಾರದ ಮೇಲೆ ನಿಗದಿಪಡಿಸಲಾಗಿಲ್ಲ! ರಾಜ್ಯಗಳ ಲೆಕ್ಕದಲ್ಲಿ ನಿಗದಿಪಡಿಸಲಾಗಿದೆ. ಇದು ರ್ಯಾಡಿಕಲ್ ಬದಲಾವಣೆ ಅನ್ನಿಸಿಕೊಂಡಿದೆ.
ಇಂತಹ ಆಶಯಗಳು ಭಾರತಕ್ಕೇ ಹೆಚ್ಚು ಅಗತ್ಯ. ವೈವಿಧ್ಯ ಕಡಿಮೆ ಪ್ರಮಾಣದಲ್ಲಿ ಇರುವ ಅಮೆರಿಕದಂತಹ ದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ನಿರ್ಧರಿಸಿದರೂ ನಡೆಯುತ್ತದೆ. ಆದರೆ ವೈವಿಧ್ಯಗಳಿಂದ ತುಂಬಿ ತುಳುಕುತ್ತಿರುವ ಭಾರತದಲ್ಲಿ ಇದು ಸಲ್ಲದು.
ಜೊತೆಗೆ, ಭಾರತದ ಒಕ್ಕೂಟದೊಳಗೆ ಬಹುತೇಕ ರಾಜ್ಯಗಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜನಸಂಖ್ಯೆ 20 ಲಕ್ಷದ ಆಸುಪಾಸಿನಲ್ಲಿದ್ದರೂ, ಬರೀ 64 ಸಾವಿರ ಜನಸಂಖ್ಯೆ ಇರುವ ಲಕ್ಷದ್ವೀಪಕ್ಕೆ, ಎರಡೂ ಮುಕ್ಕಾಲು ಲಕ್ಷ ಜನಸಂಖ್ಯೆ ಇರುವ ಲಡಾಕ್ ಕೇಂದ್ರಾಡಳಿತ ಪ್ರದೇಶಕ್ಕೆ ಲೋಕಸಭೆಯ ಸದಸ್ಯತ್ವ ಸ್ಥಾನ ನೀಡಿ ಸಮಾನ ಅವಕಾಶ ಕಲ್ಪಿಸಿರುವುದರಲ್ಲಿ, ಒಳಗೊಳ್ಳುವ ಒಕ್ಕೂಟ ತತ್ವದ ಪ್ರಜಾಪ್ರಭುತ್ವದ ವಿವೇಕ ಇರುವುದನ್ನೂ ನಾವು ಗಮನಿಸಬೇಕು.
ಮತ್ತೆ ಮತ್ತೆ ಹೇಳುವೆ- ಈ ತತ್ವವನ್ನು ಕೈಬಿಟ್ಟರೆ ಭಾರತವು ವಸಾಹತುಶಾಹಿ ದೇಶವಾಗಿಬಿಡುತ್ತದೆ. ನೆನಪಿಟ್ಟುಕೊಳ್ಳೋಣ- ಜೀವನ ಅಂಕಗಣಿತ ಅಲ್ಲ, ರಾಜಕಾರಣವೂ ಅಂಕಗಣಿತ ಅಲ್ಲ. ಅಂಕಗಣಿತ ಎಂಬಂತೆ ಪರಿಗಣಿಸುವ ಆಳ್ವಿಕೆಯು ಬೇಜವಾಬ್ದಾರಿಯ ಅಂಧ ದರ್ಬಾರ್ ಮಾತ್ರ. ಆದ್ದರಿಂದ, ದೇಶದ ಉಳಿವಿಗಾಗಿ, ರಾಜ್ಯಗಳಿಗೆ ನಿಗದಿಪಡಿಸಿರುವ ಹಾಲಿ ಲೋಕಸಭಾ ಸಂಖ್ಯೆಯನ್ನು ಸದಾ ಕಾಯ್ದುಕೊಳ್ಳುವುದು ಕ್ಷೇಮಕರ. ಭಾರತವು ತನ್ನ ನೆಲದ ಜಾಯಮಾನಕ್ಕೆ ಅನುಗುಣವಾಗಿ ವರ್ತಿಸಬೇಕಾಗಿದೆ.
ಇದೆಲ್ಲದರ ನಡುವೆ, ಲೋಕಸಭಾ ಸದಸ್ಯರ ಸಂಖ್ಯೆಯನ್ನು ಹೆಚ್ಚು ಮಾಡಬೇಕೆನ್ನುವ ಉಮೇದನ್ನು ಮತ್ತೊಮ್ಮೆ ಮುಂದಕ್ಕೆ ಹಾಕಿದರೆ ಅದರಿಂದ ತೊಂದರೆಯೇನೂ ಆಗದು. ಈಗ ಲೋಕಸಭೆಯ 543 ಸದಸ್ಯರು ನಡೆಸುವ ಗದ್ದಲವನ್ನೇ ದೇಶವು ತಡೆದುಕೊಳ್ಳಲಾಗದೆ ತತ್ತರಿಸುತ್ತಿದೆ. ಇನ್ನು ಈ ಸದಸ್ಯರ ಸಂಖ್ಯೆ ಎಂಟುನೂರನ್ನು ಮೀರಿದರೆ ಗದ್ದಲ ಡಬಲ್ ಆಗಬಹುದಷ್ಟೇ! ಇದು ಯಾವ ಪುರುಷಾರ್ಥಕ್ಕೆ?
ಇನ್ನು ಲೋಕಸಭೆಯ ಕಲಾಪದ ಗುಣಮಟ್ಟವನ್ನು ಪರಿಶೀಲಿಸುವುದಾದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಆಧಾರದ ಮೇಲೆ ನಮ್ಮ ಲೋಕಸಭಾ ಸದಸ್ಯರ ಸಂಖ್ಯೆ ನಿಜವಾಗಿಯೂ ಇರುವುದು ಎಷ್ಟೆಂದು ಅಂದಾಜಿಸೋಣ. ನನ್ನ ಪ್ರಕಾರ, ಆಡಳಿತಾರೂಢ ಬಿಜೆಪಿ ಸಂಸದರ ಸಂಖ್ಯೆ- ಬರೀ ಒಂದು. ಈ ಪಕ್ಷಕ್ಕೆ ಸೇರಿದ ಉಳಿದ ಸಂಸತ್ ಸದಸ್ಯರೆಲ್ಲ ಜೈಜೈ ಎನ್ನುವವರು. ಹೀಗೆಯೇ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಲ್ಲಿ ಒಂದಿಷ್ಟು ಭಿನ್ನಮತವಾದರೂ ಇರುವುದರಿಂದ, ವಿರೋಧ ಪಕ್ಷಗಳ ಲೋಕಸಭಾ ಸದಸ್ಯರ ಸಂಖ್ಯೆ ಹೆಚ್ಚೆಂದರೆ ತಲಾ ಮೂರ್ನಾಲ್ಕು ಇರಬಹುದು. ಹೀಗಿದೆ ನಮ್ಮ ಲೋಕಸಭೆ!
ವಕೀಲ ಪ್ರೊ. ರವಿವರ್ಮಕುಮಾರ್ ಅವರು ಹೇಳಿದ ಮಾತು ನನಗೆ ನೆನಪಾಗುತ್ತಿದೆ- ‘ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚು ಮಹತ್ವ ಕೊಟ್ಟಿರುವ ಸಂವಿಧಾನವನ್ನು ಹೊಂದಿರುವ ಭಾರತದಲ್ಲಿ ನಮ್ಮ ಲೋಕಸಭಾ ಸದಸ್ಯರ ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಥಿತಿಗತಿ ದಯನೀಯವಾಗಿದೆ’- ಈ ನಿಜಕ್ಕೆ ನಾವು ಬೆಚ್ಚಬೇಕಾಗಿದೆ. ಎಚ್ಚೆತ್ತವರು ಇತ್ತಲೂ ತಮ್ಮ ಚಿತ್ತಹರಿಸಿ ಧಾವಿಸಬೇಕಾಗಿದೆ.
ಮತ್ತೂ ನೆನಪಿಟ್ಟುಕೊಳ್ಳೋಣ; ಎಲ್ಲಾ ರಾಜ್ಯಗಳ ರಾಜಧಾನಿಗಳ ಜನಸಂಖ್ಯೆಯು ಲಂಗುಲಗಾಮಿಲ್ಲದೆ ಬೆಳೆಯುತ್ತಿದೆ. ಮುಂದೊಂದು ದಿನ ರಾಜಧಾನಿ, ಅದನ್ನು ಒಳಗೊಂಡ ಜಿಲ್ಲೆ ಹಾಗೂ ಅಕ್ಕಪಕ್ಕದ ಮೂರ್ನಾಲ್ಕು ಜಿಲ್ಲೆಗಳ ಜನಸಂಖ್ಯೆಯೇ ರಾಜ್ಯದ ಅರ್ಧದಷ್ಟು ಜನಸಂಖ್ಯೆ ಆಗಿಬಿಡಲೂಬಹುದು. ರಾಜಧಾನಿಯ ಸುತ್ತಮುತ್ತಲ ಜಿಲ್ಲೆಗಳೇ ವಿಧಾನಸಭೆಯಲ್ಲಿ ಬಹುಮತ ಪಡೆದು ಆಳ್ವಿಕೆ ನಡೆಸುವ ಪರಿಸ್ಥಿತಿ ಬರಲೂಬಹುದು. ಇದಾಗಬಾರದು. ನಗರ ಮತ್ತು ಗ್ರಾಮಾಂತರ ಪ್ರದೇಶದ ವಿಧಾನಸಭಾ ಕ್ಷೇತ್ರಗಳಿಗೆ ಜನಸಂಖ್ಯೆಯನ್ನು ನಿರ್ಧರಿಸುವಾಗಲೂ ಸಮತೋಲನದ ಸೂತ್ರವೊಂದನ್ನು ಕಂಡುಕೊಂಡು, ರಾಜ್ಯದೊಳಗಿನ ಎಲ್ಲಾ ಜಿಲ್ಲೆಗಳ ಹಿತವನ್ನು ರಕ್ಷಿಸಿಕೊಳ್ಳಬೇಕಾದ ಹೊಣೆಗಾರಿಕೆಯೂ ನಮ್ಮ ಮೇಲಿದೆ.