ನಂಜುಂಡಸ್ವಾಮಿಯವರ ಸ್ಮರಣೆಯೆಂದರೆ… -ದೇವನೂರ ಮಹಾದೇವ
(13.2.2019ರಂದು ನಡೆದ ಪ್ರೊ.ನಂಜುಂಡಸ್ವಾಮಿಯವರ ಜನ್ಮದಿನ ಸಂಸ್ಮರಣೆಯ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ)
ಹೌದು, ಇಂದು ಪ್ರೊ.ನಂಜುಂಡಸ್ವಾಮಿಯವರು ಹುಟ್ಟಿದ ದಿನ. ಅವರು ಬದುಕಿದ್ದರೆ 84 ತುಂಬಿ 85 ನಡೆಯುತ್ತಿತ್ತು. ಮುವ್ವತ್ತು ವರ್ಷಗಳ ಹಿಂದೆ WTO ಹಾಗೂ ಕಾರ್ಪೊರೇಟ್ ಕಂಪನಿಗಳ ಬಗ್ಗೆ ನಂಜುಂಡಸ್ವಾಮಿಯವರು ಆಡುತ್ತಿದ್ದ ಮಾತುಗಳನ್ನು ಇಂದು ಇಡೀ ದೇಶ ಮಾತಾಡುತ್ತಿದೆ. ಹಳ್ಳಿಗಾಡಿನ ಅನಕ್ಷರಸ್ಥರೂ ಕೂಡ ಮಾತಾಡುತ್ತಿದ್ದಾರೆ. ಒಬ್ಬ ವ್ಯಕ್ತಿ ಬದುಕಿರಲಿ ಅಥವಾ ಕಾಲವಶನಾಗಿರಲಿ ಇದಕ್ಕಿಂತ ದೊಡ್ಡ ಗೌರವ, ಇದಕ್ಕಿಂತ ಸ್ಮರಣೆ ಬಹುಶಃ ಬೇರೊಂದಿಲ್ಲವೇನೋ.
ನನಗೆ ಸುಮ್ಮನೆ ಒಂದು ಕುತೂಹಲ ಅಷ್ಟೇ- ಪ್ರೊ.ನಂಜುಂಡಸ್ವಾಮಿಯವರು ಬದುಕಿದ್ದರೆ ಈಗ ಎಲ್ಲಿರುತ್ತಿದ್ದರು? ಅಮೃತಭೂಮಿ? ಡೆಲ್ಲಿ ಗಡಿಗಳಲ್ಲಿ ರೈತರೊಡನೆ? ನನಗನ್ನಿಸುತ್ತದೆ ಬಹುಶಃ ಅವರಿಗೆ ಈ ಅವಕಾಶವೇ ಸಿಗುತ್ತಿರಲಿಲ್ಲ. ನನಗೆ ಗ್ಯಾರಂಟಿ ಇದೆ. UAPA ಅಂದರೆ- Unlawful Activities [Prevention] Act ಅಂದರೆ ‘ಕಾನೂನುಬಾಹಿರ ಚಟುವಟಿಕೆ [ತಡೆ] ಕಾಯ್ದೆ’ ಅಂತಾರಲ್ಲ, ಈ ಕಾಯ್ದೆಯಡಿ ಪ್ರಕರಣ ಜಡಾಯಿಸಿಕೊಂಡು, ವಿಚಾರಣೆಯೂ ಇಲ್ಲದೇ ಬಂಧನದಲ್ಲಿರುತ್ತಿದ್ದರು! ಜೊತೆಗೆ ‘ದೇಶದ್ರೋಹಿ’ ಅಂತಲೂ ಅನ್ನಿಸಿಕೊಳ್ಳುತ್ತಿದ್ದರು!. ಇಂದು ನಂಜುಂಡಸ್ವಾಮಿ ರೀತಿಯ ಪ್ರಖರ ಚಿಂತಕರು, ಹೋರಾಟಗಾರರು ‘ದೇಶದ್ರೋಹಿ’ಗಳು ಎಂದು ಕರೆಸಿಕೊಳ್ಳುತ್ತಾ ‘ಕಾನೂನುಬಾಹಿರ ಚಟುವಟಿಕೆ [ತಡೆ] ಕಾಯ್ದೆ’ ಅನ್ವಯ ವಿಚಾರಣೆ ಇಲ್ಲದೇ ಬಂಧನದಲ್ಲಿರುವುದನ್ನು ನೋಡಿದಾಗ ಇದನ್ನಿಸುತ್ತದೆ. ಇಂದು ಗಾಂಧಿ, ಅಂಬೇಡ್ಕರ್, ಜಯಪ್ರಕಾಶ್ ನಾರಾಯಣ್ ಬದುಕಿದ್ದರೂ ಕೂಡ ಅವರ ಗತಿಯೂ ಇದಕ್ಕಿಂತ ಭಿನ್ನವಾಗಿರುತ್ತಿತ್ತು ಎಂದು ಹೇಳುವ ಧೈರ್ಯ ನನಗಿಲ್ಲ.
ಆಗ ಸ್ವಾತಂತ್ರ್ಯಪೂರ್ವದಲ್ಲಿ ಭಾರತದಲ್ಲಿ ಒಂದು ಕಂಪನಿ ಸರ್ಕಾರದ ಆಳ್ವಿಕೆ ಇತ್ತು. ಇಂದು ಅಂಬಾನಿ, ಅದಾನಿ ಮತ್ತಿತರ ಹತ್ತಾರು ಕಂಪನಿ ಸರ್ಕಾರಗಳ ಆಳ್ವಿಕೆ ನಡೆಯುತ್ತಿದೆಯೇನೋ ಅನ್ನಿಸುತ್ತಿದೆ. ಜನರಿಂದ ಆಯ್ಕೆಯಾದ ಯಾವ ಲಕ್ಷಣವೂ ಮೋದಿಶಾರ ಆಳ್ವಿಕೆಯಲ್ಲಿ ಕಾಣುತ್ತಿಲ್ಲ. ಯಾಕೆಂದರೆ, ಕಳೆದ ಎರಡೂವರೆ ತಿಂಗಳಿನಿಂದಲೂ ಲಕ್ಷಾಂತರ ಜನರು ರಾಜಧಾನಿ ದೆಹಲಿ ಗಡಿಯ ಸುತ್ತಲೂ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ, ಪ್ರಾಣವನ್ನು ಪಣಕ್ಕಿಟ್ಟು ಕುಳಿತಿದ್ದರೂ ಆ ಧರಣಿ ಸ್ಥಳದಲ್ಲಿ ನೂರಾರು ಜನರು ಸತ್ತಿದ್ದರೂ ಇಡೀ ದೇಶವೇ ಒಕ್ಕೊರಲಿನಿಂದ ಅದೇ ಬೇಡಿಕೆಗಳನ್ನು ಕೂಗಿ ಕೂಗಿ ಹೇಳುತ್ತಿದ್ದರೂ ಮೋದಿಶಾರು ಕಲ್ಲು ಹೃದಯದವರಾಗಿದ್ದಾರೆ. ಅವರ ನಡೆನುಡಿಗಳಲ್ಲಿ ಜನರಿಂದ ಆಯ್ಕೆಯಾದ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಅಂಬಾನಿ, ಅದಾನಿ, ಬಂಡವಾಳಶಾಹಿ ಕಂಪನಿಗಳ ಸರ್ಕಾರದಿಂದ ನೇಮಕಗೊಂಡವರಂತೆ ವರ್ತಿಸುತ್ತಿದ್ದಾರೆ.
ಜೊತೆಗೆ ಇದೆಂತಹ ವಂಚಕ ರಾಜಕಾರಣವೆಂದರೆ, ರಾಜ್ಯಸಭೆಯಲ್ಲಿ ಪ್ರಧಾನಮಂತ್ರಿ ಮೋದಿಜಿಯವರು ಕನಿಷ್ಠ ಬೆಂಬಲ ಬೆಲೆ ಬಗ್ಗೆ ಮಾತನಾಡುತ್ತಾ- “ಎಂಎಸ್ಪಿ ಥಾ, ಹೈ, ರಹೇಗಾ” ಅಂದರೆ “ಕನಿಷ್ಠ ಬೆಂಬಲ ಬೆಲೆ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತೆ” ಅಂತ ಪ್ರವಾದಿಯಂತೆ ಭೂತ, ವರ್ತಮಾನ, ಭವಿಷ್ಯತ್ ಕಾಲ ನುಡಿಯುವವರಂತೆ ಗಂಭೀರವಾದ ಧ್ವನಿಯಲ್ಲಿ ಹೇಳುತ್ತಾರೆ. ಆಯ್ತು. ಹಾಗಾದರೆ ಡೆಲ್ಲಿ ಸುತ್ತಲೂ ಲಕ್ಷಾಂತರ ಜನರು ಮನೆ ಮಠ, ಕೆಲಸ ಕಾರ್ಯ ತೊರೆದು, ನೂರಾರು ಜನರು ಅಲ್ಲೇ ಸತ್ತರೂ, ಅದನ್ನೂ ನುಂಗಿಕೊಂಡು, ಸರ್ಕಾರ+ ಪೊಲೀಸ್+ ಬಿಜೆಪಿ ಸದಸ್ಯರು ಜೊತೆಗೂಡಿ ಕೊಡುತ್ತಿರುವ ಕಷ್ಟ ಕೋಟಲೆಗಳನ್ನೂ ಸಹಿಸಿಕೊಂಡು ಜೀವನ್ಮರಣದ ಪ್ರಶ್ನೆ ಎಂಬಂತೆ ಕೂತಿರುವುದಾದರೂ ಯಾಕೆ? ಆ ಮೂರು ಕೃಷಿ ಕಾಯ್ದೆಗಳು ಕರಾಳ ಶಾಸನಗಳೆಂದು ಇಡೀ ದೇಶ ಒಕ್ಕೊರಲಿನಿಂದ ಕೂಗುತ್ತಿರುವುದಾದರೂ ಯಾಕೆ? ಅವರು ಕೇಳುತ್ತಿರುವುದು ಇಷ್ಟೇ: ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಶಾಸನ ಮಾಡಿ ಎಂದಷ್ಟೇ. ಇದನ್ನು ಮಾಡದಿದ್ದರೆ, ಅದು ಇದ್ದರೂ ಸತ್ತಂತೆ.
ಹಾಗಾಗಿ ಪ್ರಧಾನಿ ಮೋದಿಯವರಿಗೆ ಒಂದು ಪ್ರಾರ್ಥನೆ ಮಾಡುತ್ತೇನೆ- “ನೀವು ಬೇರೆ ಯಾರ ಮಾತನ್ನೂ ಕೇಳಿಸಿಕೊಳ್ಳುವುದಿಲ್ಲ. ಒಂದು ಮಾತು, ಅದು ನಿಮ್ಮದೇ ಮಾತು. ಅದನ್ನಾದರೂ ಕೇಳಿಸಿಕೊಳ್ಳುವಿರಾ? ಇಸವಿ 2011. ನೀವು ಆಗ ಗುಜರಾತ್ ಮುಖ್ಯಮಂತ್ರಿಗಳು. ಯುಪಿಎ ಸರ್ಕಾರವು ಕೃಷಿ ಮಾರುಕಟ್ಟೆ ಸುಧಾರಣಾ ಸಮಿತಿಗೆ ನಿಮ್ಮನ್ನೇ ಅಧ್ಯಕ್ಷರನ್ನಾಗಿ ಮಾಡಿರುತ್ತದೆ. ಆಗ ನೀವು ವರದಿ ಕೊಡುತ್ತೀರಿ- ಏನಂತಾ?- ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿ ಕಡ್ಡಾಯಗೊಳಿಸಬೇಕು-ಅಂತ! ಈಗ ಎಲ್ಲರೂ ಕೇಳುತ್ತಿರುವುದು ಇದನ್ನೇ. ಆದರೆ ನೀವು ಕೇಳಿಸಿಕೊಳ್ಳುತ್ತಿಲ್ಲ. ಇದಕ್ಕೆ ಏನೆನ್ನಬೇಕು? ಪದಗಳು ಸಿಗುತ್ತಿಲ್ಲ.
ಇನ್ನೊಂದು ಕಾಯ್ದೆ- ‘ಸಾರ್ವಜನಿಕ ಮಂಡಿಯೂ ಇರುತ್ತೆ; ಖಾಸಗಿಗೂ ಅವಕಾಶ ಇರುತ್ತೆ’ ಎಂಬ ಕಾನೂನು. ನಮ್ಮ ಕಣ್ಣೆದುರಿಗೆ ಸರ್ಕಾರಿ ಶಾಲೆ ಸ್ಥಿತಿ, ಖಾಸಗಿ ಶಾಲೆ ಎದುರು ಏನಾಯ್ತು? ಸಾರ್ವಜನಿಕ ಬಿಎಸ್ಎನ್ಎಲ್, ಖಾಸಗಿ ಜಿಯೋ ಎದುರು ತೆವಳುತ್ತಿಲ್ಲವೇ? ಸರ್ಕಾರವೇ ಬಿಎಸ್ಎನ್ಎಲ್ ಕತ್ತು ಹಿಸುಕುತ್ತಿಲ್ಲವೇ? ಇನ್ನೂ ಒಂದು ಉದಾಹರಣೆ; ಮೊದಲು ಕಾಫಿ ನಿಯಂತ್ರಿತ ಮಾರುಕಟ್ಟೆ ಮಾತ್ರ ಇತ್ತು. ಕಾಫಿಯನ್ನು ಖಾಸಗಿ ಮಾರುಕಟ್ಟೆಗೆ ಅವಕಾಶ ಕೊಟ್ಟ ಕಾರಣಕ್ಕೆ, ಈಗ ಕಾಫಿ ನಿಯಂತ್ರಿತ ಮಾರುಕಟ್ಟೆ ಹೆಸರಿಗೆ ಮಾತ್ರವಿದೆ. ಖಾಸಗಿ ದಲ್ಲಾಳಿಗಳ ಬಂಡವಾಳಿಗರ ಬಿಗಿ ಹಿಡಿತಕ್ಕೆ ಕಾಫಿ ಬೆಳೆಗಾರ ಕಣ್ಣು ಬಾಯಿ ಬಿಡುತ್ತಿದ್ದಾನೆ. ಬಂಡವಾಳಿಗರ ಬಂಡವಾಳ ಹೆಚ್ಚುತ್ತಿದೆ. ರಾತ್ರಿ ಕಂಡ ಬಾವಿಗೆ ಹಗಲಲ್ಲೇ ಬೀಳಿಸುವ ಕಾನೂನುಗಳಾಗುತ್ತಿವೆ. ಇವಕ್ಕಿರುವ ಒಕ್ಕಣೆಗಳೋ ಮೋಹಕವಾಗಿವೆ. ನೋಡಿ ‘ಪ್ರಚಾರ ಮತ್ತು ಸೌಲಭ್ಯ’ ಅಂತೆ. ‘ಸಬಲೀಕರಣ ಮತ್ತು ಸಂರಕ್ಷಣೆ’ಯಂತೆ! ಬಣ್ಣಬಣ್ಣದ ಮಾತುಗಳು ಜನಸಾಮಾನ್ಯರಿಗೆ; ಬಂಡವಾಳ ಮಾತ್ರ ಅಂಬಾನಿ ಅದಾನಿಯಂಥವರಿಗೆ! ಕೋವಿಡ್ ಹಾವಳಿಯ ಜರ್ಜರಿತವಾದ ಕಾಲಮಾನದಲ್ಲೇ ಕೇವಲ ನೂರು ಜನ ಶತಕೋಟ್ಯಾಧೀಶರು ಹನ್ನೆರಡೂವರೆ ಲಕ್ಷ ಕೋಟಿ ಲಾಭ ಗಳಿಸಲು ಹೇಗೆ ಸಾಧ್ಯ?
ಲಂಗು ಲಗಾಮು ಇಲ್ಲದ ಈ ಕಾನೂನುಗಳು ಜಾರಿಯಾದರೆ ಈರುಳ್ಳಿ, ಬೇಳೆ ಬೆಲೆಗಳನ್ನು ಸುಗ್ಗಿಯಲ್ಲಿ ಇಳಿಸಿ, ಗೋಡೋನ್ನಲ್ಲಿ ತುಂಬಿಟ್ಟು ಕೃತಕ ಅಭಾವ ಸೃಷ್ಟಿಸಿ, ಬೆಲೆ ಗಗನಕ್ಕೇರಿಸುವಂತೆ ಎಲ್ಲಾ ದವಸ ಧಾನ್ಯಗಳಿಗೂ ಆಗುತ್ತದೆ. ಇದರಿಂದ ಏನಾಗುತ್ತದೆ? ಇಂದಿನ ಮಧ್ಯಮ ವರ್ಗವು ಮುಂದೆ ಬಡತನದತ್ತ ದೂಕಲ್ಪಡುತ್ತದೆ. ಇಂದಿನ ಬಡವರು ಮುಂದೆ ಹಸಿವಿನ ದವಡೆಗೆ ಸಿಲುಕುತ್ತಾರೆ. ನುಡಿಯಲ್ಲಿ ಸ್ವರ್ಗ ಕಾಣಿಸಿ, ನಡೆಯಲ್ಲಿ ಪಾತಾಳ ಕಾಣಿಸುತ್ತಿರುವ ಇಂದಿನ ಆಳುವ ಪಕ್ಷದ ನಾಯಕತ್ವ ಇರುವುದರಿಂದ ಬಹುಶಃ ಇದಲ್ಲದೆ ಬೇರೇನೂ ಆಗುವುದಿಲ್ಲ. ಇದಕ್ಕೆ ಆಯ್ಕೆ ಮಾಡಿದ ಮತದಾರರೇ ಉತ್ತರ ಹೇಳಬೇಕಾಗಿದೆ.