ಹಲ್ ಕಟ್ ಪ್ರಸಂಗ !-ಚಿನ್ನಸ್ವಾಮಿ ವಡ್ಡಗೆರೆ

[ರಾಮುಕಾಕ ಹೊಸ ಹಲ್ಲು ಕಟ್ಟಿಸಿಕೊಂಡಾಗಿನ ದೇಮಾ ಅವರ  ಕೀಟಲೆಯ ನೆನೆಪುಗಳನ್ನು ಆಕರ್ಷಕವಾಗಿ ಕಟ್ಟಿಕೊಟ್ಟಿದ್ದಾರೆ, ತಮ್ಮ facebook page ನಲ್ಲಿ ಚಿನ್ನಸ್ವಾಮಿ ವಡ್ಡಗೆರೆ ಅವರು. ಅದರ ಮರು ಓದು ಮತ್ತು ಚಿತ್ರಗಳು … ನಮಗಾಗಿ….]
https://m.facebook.com/story.php?story_fbid=pfbid0mekz3qB8Vs6iKWzkmuggBKTBX5WoBhLVQ4Mx9Dbyj8SHUVWWadijCu7Mt6TqXxPtl&id=100063619124558&mibextid=Nif5oz
ಮೊದಲೆ ನಿಮಗೆ ಸ್ಪಷ್ಟ ಪಡಿಸಿಬಿಡುತ್ತೇನೆ. ಇದೊಂದು ಹಲ್ ಕಟ್ ಪ್ರಸಂಗ. ನೆನಪಿಸಿಕೊಂಡಾಗೆಲ್ಲಾ ಹಲ್ ಕಿರಿದು ಅಣಕಿಸಿ ನಗುವ ಹೊಸ ಹಲ್ಲುಗಳ ಕಿರಿಕಿರಿಯಿಂದ ಬಿಡುಗಡೆ ಬಯಸಿ ಮತ್ತೆ ಫೇಸ್ ಬುಕ್ ಮಾಯಾಂಗನೆಯ ಸಹವಾಸ ಬಯಸಿಬಂದಿರುವ ಕತೆ. ತಿಂಗಳಿಂದ ಈ ಮಾಯಾಂಗನೆಯ ಸಹವಾಸದಿಂದ ದೂರವಿದ್ದವನು ಮತ್ತೆ ವಕ್ಕರಿಸಿದನಲ್ಲಾ ಅಂತ ಯಾರೂ ಗೇಲಿಮಾಡಿ ಹಲ್ ಕಿರಿದು ನಗಬೇಡಿ. ಇದೊಂದು ಪ್ರಸಂಗವನ್ನು ಹೇಳಿ ಮತ್ತೆ ವಿರಾಮಕ್ಕೆ ಸಲ್ಲುತ್ತೇನೆ. ಕೇಳಿಸಿಕೊಳ್ಳಿ…….‌…
 ಅದು ರಾಜಶೇಖರ ಕೋಟಿಯವರ ಸಂಸ್ಮರಣೆ ಕಾರ್ಯಕ್ರಮ.” ಕೋಟಿ ಓದುಗರ ಆಂದೋಲನ” ಎಂಬ ಪುಸ್ತಕ ಬಿಡುಗಡೆ ಸಮಾರಂಭ. ಮೈಸೂರಿನ ಕಲಾಂದಿರದಲ್ಲಿ ನಡೆದ ಕೋಟಿ ನೆನಪಿನ ಸಮಾರಂಭದಲ್ಲಿ ಕಲಾಮಂದಿರದ ಆಚೆ ಕಡೆ ನಾನು ಎಲ್ಲರ‌ ಪ್ರೀತಿಯ ರಾಮು ಮಾಮ, ಒ.ಎಲ್.ನಾಗಭೂಷಣ ಸ್ವಾಮಿ ನಿಂತಿದ್ದೆವು. ಅದಾಗ ತಾನೇ ತನ್ನ 36 ಹಲ್ಲುಗಳನ್ನು ಹೊಸದಾಗಿ ಕಟ್ಟಿಸಿಕೊಂಡು ಬಂದಿದ್ದ ರಾಮು ಮಾಮ ಹಲ್ಲ್ ಬಿಟ್ಟುಕೊಂಡು ನಗುತ್ತಾ ನಿಂತಿದ್ದರು.
ಅಲ್ಲಿಗೆ  ದೇವನೂರು ಮಹಾದೇವ ಬಂದರು ತಕ್ಷಣ ರಾಮು ಮಾಮ ಹಲ್ಲು ಕಿರಿದು ನಕ್ಕರು.
ಆಗ ಮಹಾದೇವ ‘ಏನೋ ರಾಮು ಹುಡುಗನ್ ಥರ ಕಾಣ್ತೀಯಲ್ಲ ಇನ್ ಮೇಲೆ ನಿನ್ ಹೆಸರು ‘ಹಲ್ ಕಟ್ ರಾಮ’ ಎಂದರು. ಅಲ್ಲಿದ್ದವರೆಲ್ಲ ದೇಮ ಜೋಕ್ ಗೆ ಗೊಳ್ ಎಂದು ನಕ್ಕರು.
‘ತಾಳು ಇಲ್ಲಿ ಒಂದ್ ಸಿಗರೇಟ್ ಸೇದ್ಕಡ್ ಬರ್ತಿನಿ’ ಎಂದ‌ ದೇಮ ನನ್ನ ಹೆಗಲ‌ ಮೇಲೆ ಕೈಹಾಕಿಕೊಂಡು ಆ ಕಡೆ ಕರೆದುಕೊಂಡು ಹೋದರು. ನನಗೊ ಗಾಬರಿ. ‘ಇದೆನಪ್ಪಾ ಇದು ಸಿಗರೇಟ್ ಸೇದಕಾ’ ಅಂತ ಹೇಳಿ. ನನ್ ಹೆಗಲ್ ಮೇಲ್‌ ಕೈ ಹಾಕಂಡು ಕರ್ಕಂಡ್ ಹೋಗ್ತಾ ಅವರಲ್ಲ ನಮ್ಮ ದೇಮ ಅಂತ ಆಶ್ಚರ್ಯ ಆಯ್ತು.
ಅಲ್ ನೋಡ್ದರೆ ಮೆಲ್ಲಗೆ ನನ್ನಕಿವಿಯಲ್ಲಿ ‘ನೇತ್ರರಾಜುನ್ ಕರ್ದು ರಾಮುಗೆ ಗೊತ್ತಾಗ್ದಂಗೆ ಅವನ ಪೋಟೋ ತಗೆಯೊಕೆ ಹೇಳಿ’ ಅಂದ್ವರೆ ಕಣ್ಮರೆಯಾದರು. ನೇತ್ರ ಅಷ್ಟೊತ್ತಿಗಾಗಲೇ ಅಲ್ಲಿಂದ ಜಾಗ ಖಾಲಿ ಮಾಡಿದ್ದರಿಂದ ಹಲ್ ಕಟ್ ರಾಮು ಪೋಟೊ ತೆಗೆಯಲು ಆಗಲೇ ಇಲ್ಲ.
ಮತ್ತೆ ದೇಮ ಪೋನ್  ಮಾಡಿ ‘ರೀ ರಾಮು ಪೋಟೋ ತೆಗೆಸಿದ್ರಾ’ ಅಂದ್ರು. ‘ಸರ್ ನೇತ್ರ ಇಲ್ಲಿಲ್ಲ. ಆಗಲಿಲ್ಲ‌ಸಾ’ ಅಂದೆ. ‘ಸರಿ ಬಿಡಿ’ ಅಂದು ಸುಮ್ಮನಾದರು.
ನಾನು ರಾಮು ಅವರನ್ನು ಮನೆಗೆ ಬಿಡಲು ಸರಸ್ವತಿಪುರಂನ ಅವರ ಮನೆಗೆ ಕರೆದುಕೊಂಡು ಹೋದೆ.
ನಂತರ ಮಾಮೂಲಿಯಂತೆ ಅಲ್ಲಿಗೂ ಬಂದ ದೇಮ ತಮ್ಮದೆ ಮೊಬೈಲ್ ನಲ್ಲಿ ರಾಮು ಹಲ್ಲು ಕಿರಿಸಿ ವಿವಿಧ ಭಂಗಿಯಲ್ಲಿ ಪೊಟೊ ತೆಗೆದರು.
ಮತ್ತೆ ನನ್ನ ಕಿವಿಯಲ್ಲಿ ‘ಈ ಪೋಟೋಗಳನೆಲ್ಲ ನಿಮ್ಮ ಮೊಬೈಲ್ ಗೆ ಕಳಸ್ಕೊಂಡು ಫೇಸ್ ಬುಕ್ ಗೆ ಹಾಕಿ’ ಎಂದು ಪಿಸುಗುಟ್ಟಿದರು.
ರಾಮು ಮಾಮನಿಗೆ ಏನೋ ಡೌಟು. ‘ಏನ್ ಅದು ಗುಸುಗುಸು’ ಅಂದ್ರು.
ಅದಕ್ಕೆ ದೇಮ‌ ‘ಏನಿಲಪ್ಪಾ ಎನೋ ನಮ್ಮ ಕಷ್ಟಸುಖ ಮಾತಡ್ ಕಂಡ್ವಿ ‘ ಅಂದ್ರು.
ನಾನು ದೇಮಗೆ ‘ಸಾ ನಾನು ಈ ಫೇಸ್ ಬುಕ್ಕು ಗೀಸ್ ಬುಕ್ಕು ಅಂತ ಬಿಟ್ಟು ಒಂತಿಂಗಳ್ ಮೇಲ್ ಆಯ್ತು ಸಾ. ಅದನ್ ಬಳಸ್ತಾ ಇಲ್ಲ. ಸುಮ್ಮನೆ‌ ಅದೆಲ್ಲಾ ಬರಿ ತರ್ಲೆ ಕೆಲಸ’ ಅಂದೆ. ಅದಕ್ಕೆ ದೇಮ ‘ಇಲ್ಲರೀ ವಿಶೇಷ ಸಂದರ್ಭಗಳಲ್ಲಿ ಅದನ್ನೆಲ್ಲ ಬಳಸಬೇಕಾಯ್ತದೆ.ತಿಂಗಳಿಂದ ಕೃಷಿ ಚಟುವಟಿಕೆಲಿ  ಬ್ಯುಸಿ ಆಗಿದ್ದೆ  ಮತ್ತೆ ಬಂದಿದ್ದೇನೆ ಅಂತ ಹೇಳಿ  ಈ ಪೋಟೋಗಳನ್ನೆಲ್ಲಾ ಹಾಕ್ ಬಿಡಿ’ ಅಂದ್ರು. ನಾನು ನಕ್ಕು ಸುಮ್ಮನಾದೆ.
ಮತ್ತೆ ಸಂಜೆ ದೇಮ ಪೋನು. ‘ಅಯ್ಯೋ ಇದೆನಪ್ಪಾ ದೇಮ ಮತ್ತೆ ನನಗೆ ಪೋನ್ ಮಾಡ್ತಾ ಅವರಲ್ಲಾ’ ಅಂತ ಭಯದಿಂದಲೇ ಪೋನ್ ಎತ್ತ್ ದ್ರೆ ‘ಫೇಸ್ ಬುಕ್ಗೆ ಪೋಟೋ ಹಾಕದ್ರ’ ಅಂದ್ರು. ನನಗೆ ಏನ್ ಹೇಳ್ ಬೇಕು ಅಂತನೇ ಹೊಳಿಲಿಲ್ಲ. ಸಧ್ಯ ನಾನು ರಾಮು ಮನೆಲೇ ಮಹಡಿ ಮೇಲೆ ರಾಮು ಮಾಡಿರುವ ಚಿಕ್ಕ ತರಕಾರಿ ಹಣ್ಣಿನ ತೋಟ ನೋಡ್ತಾ ಇದ್ದೆ. ‘ಇಲ್ಲ ಸಾ ಇಲ್ಲೆ ಅವ್ನಿ ರಾಮು ಮನೆಲಿಯಾ ಅಮೇಲ್ ಹಾಕ್ತೀನಿ’ ಅಂತ ತಪ್ಪಿಸಿಕೊಂಡೆ.
ರಾಮು ಬೆಳಗ್ಗೆಯಿಂದ ಸಂಜೆವರೆಗೂ ಹಲ್ಲು ಕಿರಿಯುತ್ತಾ, ಹಲ್ಲು ಗಿಂಜುತ್ತಾ ತನ್ನನ್ನೇ ತಾನು ಗೇಲಿ ಮಾಡಿಕೊಳ್ಳುತ್ತಾ ಹೊಸದಾಗಿ ಹಲ್ಲು ಬಂದ ಮಕ್ಕಳು ಖುಷಿಪಡುವ ಹಾಗೆ ನಗುತ್ತಾ ನಗಿಸುತ್ತಾ ನನ್ನ ಜೊತೆಗೆ ಇದ್ದರು.
ಬಹಳ ವರ್ಷಗಳ ನಂತರ ರಾಮು ಮಾಮನ ಸಾನಿಧ್ಯ ನನಗೊಂಥರಾ ವಿಚಿತ್ರ ನೆಮ್ಮದಿ ಖುಷಿ ನೀಡಿದ್ದರಿಂದ ನಾನು ಅವರೊಂದಿಗೆ ಇಡೀ ದಿನ ಇದ್ದು ಸಂಜೆ ಪಿ.ಓಂಕಾರ್, ಸಚ್ಚು, ರಾಮು ಅವರೊಂದಿಗೆ ಸುತ್ತೂರು ಮಠಕ್ಕೆ ಹೋಗಿ  ಟಿ.ಎಂ.ಕೃಷ್ಣ ಅವರ ಬೆಳದಿಂಗಳ ಸಂಗೀತ ಕೇಳಿಸಿಕೊಂಡು ಮನೆಗೆ ಬಂದು ಮಲಗಿದೆ.
ಆದರೂ ದೇಮ ಮಾತು ತಲೆಯಲ್ಲಿ ಕೊರೆಯುತ್ತಲೇ ಇತ್ತು.
ಸರಸ್ವತಿ ಪುರಂನ ರಾಮು ಮನೆಯಲ್ಲಿ ಕುಳಿತ ದೇಮ ಮೊಬೈಲ್ ನಲ್ಲಿ  ರಾಮು ಪೋಟೋ ತೆಗೆದು ಅವರ ಮೊಬೈಲನ್ನು ನನಗೆ ಕೊಟ್ಟು ‘ಈ ಪೋಟೋಗಳನ್ನು ನಿಮ್ಮ ಮೊಬೈಲ್ ಗೆ ಕಳಿಸಿಕೊಳ್ಳಿ’ ಎಂದದ್ದು. ನಂತರ ಅದೇ ಪೋಟೋಗಳನ್ನು ಮತ್ತಿಬ್ಬರ ನಂಬರ್ಗೆ ವಾಟ್ಸ್ ಅಫ್ ಮಾಡಿಸಿ ಸಧ್ಯ ‘ಇಂದಿನ ನನ್ನ ಕೆಲಸ ಇಲ್ಲಿಗೆ ಮುಗಿಯಿತು’ ಅಂತ ನಿರಾಳವಾಗಿ ಒಂದು ಸಿಗರೇಟ್ ಅಚ್ಚಿ ಧಮ್ ಎಳೆದರು. ಇದಲ್ಲವನ್ನು ನೋಡಿ ನನಗೊ ಒಂಥರಾ ರೋಮಾಚನ ಖುಷಿ.
‘ಫೇಸ್ ಬುಕ್ಗೆ ರಾಮು ಪೋಟೋ ಹಾಕದ್ರಾ’ ಎಂಬ ದೇಮ ಮಾತು ತಲೆಯಲ್ಲಿ ಒಕ್ಕ ಗುಂಗಿ ಹುಳವಾಗಿ ಕೊರೆಯುತ್ತಲೇ ಇತ್ತು. ಕೊನೆಗೂ ಇದನ್ನು ಇಲ್ಲಿ ಹಾಕದಿದ್ದರೆ ಇದರಿಂದ ನನಗೆ ಬಿಡುಗಡೆ ಸಾಧ್ಯವಿಲ್ಲ ಅಂತ ದೇಮ ತೆಗೆದ ರಾಮು ಪೋಟೋಗಳೊಂದಿಗೆ ನಾನು ತೆಗೆದ ರಾಮು, ದೇಮ, ಒಎಲ್ಎನ್ ಅವರ ಪೋಟೋಗಳನ್ನು ಹಾಕಿದ್ದೇನೆ.
ದೇಮ ಮಾತಿನ ಗುಂಗಿನಿಂದ ಬಿಡುಗಡೆಯಾಗಿ ನಿರಾಳವಾಗುತ್ತಿದ್ದೇನೆ…..