‘ಸೀರಿಯಲ್ ಸುಬ್ಬ!’ -ಎನ್.ಎಸ್.ಶಂಕರ್
[ದೇವನೂರ ಮಹಾದೇವ ಅವರಿಗೆ 75 ವರ್ಷಗಳು ತುಂಬಿದ ನೆವದಲ್ಲಿ ಅವರ ಮಿತ್ರರಾದ ಎನ್.ಎಸ್.ಶಂಕರ್ ಅವರು 10.6.2023ರಂದು ತಮ್ಮ ಫೇಸ್ಬುಕ್ ನಲ್ಲಿ ಹಂಚಿಕೊಂಡ ಬರಹ]
‘ನೀವು ಆತ್ಮಕಥೆ ಬರೀರಿ ಮಾದೇವ್’ ಅಂದೆ.
ಅವರಿಗೆ ಮುಂಚೆಯೂ ಒಮ್ಮೆ ಈ ಸಲಹೆ ಕೊಟ್ಟಿದ್ದೆ. ಮುಂಚೆ ಆ ಮಾತು ಯಾಕೆ ಬಂದಿತ್ತೆಂದರೆ ‘ಕುಸುಮಬಾಲೆ’ ಬರೆದು ಸಾಕಷ್ಟು ಕಾಲವಾಗಿದ್ದರೂ ದೇವನೂರ ಮಹಾದೇವ ಏನೂ ಬರೆದಿರಲಿಲ್ಲ. ಆಗಷ್ಟೇ ಅಲ್ಲ, ಅವರು ಈಗಲೂ ಬರೆದಿಲ್ಲ! ಆದರೆ ಮಹಾದೇವ ಈಗ ಕೊನೆ ಪಕ್ಷ ತಮ್ಮ ಬಾಳಿನ ಹಿನ್ನೋಟವನ್ನಾದರೂ ಕೊಡಲಿ, ಆ ಮೂಲಕ ಒಂದು ಕಾಲಘಟ್ಟವೇ ನಮ್ಮ ಕಣ್ಣ ಮುಂದೆ ಬರಲಿ, ಇಡೀ ಸಮಾಜದ ಹೊಯ್ದಾಟಗಳು ಅವರ ನೋಟದಲ್ಲಿ ಹರಳುಗಟ್ಟಲಿ ಎಂಬ ಆಸೆ ನನಗಿತ್ತು.
ಆದ್ದರಿಂದ ಮೊನ್ನೆ (2023, ಜೂನ್ 6 ಮಂಗಳವಾರ) ಅವರನ್ನು ಕಾಣಲು ಮೈಸೂರಿಗೆ ಹೋಗಿದ್ದಾಗ ಮತ್ತೆ ಅದೇ ಪ್ರಸ್ತಾಪ ಮಾಡಿದೆ. ಆದರೆ ಅವರು ಹ್ಞೂಂ ಅನ್ನಲಿಲ್ಲ.
‘ನಾನು ಬರೆಯುವುದು ಹಾಗಲ್ಲ, ಮೊದಲು ಕಂಟೆಂಟ್ ಕಣ್ಣ ಮುಂದಿರಬೇಕು, ಅದಕ್ಕೆ ಭಾಷೆ ಕೂಡಿಸುವುದು ಹೇಗೆ ಅಂತ ಹೆಣಗುತ್ತೇನೆ. ಬರವಣಿಗೆಯಾದರೂ ಅಷ್ಟೇ, ಭಾಷಣ ಮಾಡಿದರೂ ಅಷ್ಟೇ….’ ಅಂದರು.
ನಾನು ಪಟ್ಟು ಬಿಡಲಿಲ್ಲ.
‘ಅದೇನೂ linear ಆಗಿರಬೇಕಿಲ್ಲ. ನಿಮಗೆ trigger ಆಗುವ ಯಾವುದೋ ಪಾಯಿಂಟ್ ನಿಂದ ಆರಂಭಿಸಿ, ಎಲ್ಲಿಗೆ ಒಯ್ಯುತ್ತೋ ಹಾಗೇ ಬರೆದುಕೊಂಡು ಹೋಗಬಹುದಲ್ಲ?’
‘ನಿಮಗೆ narrative skill ಇದೆ, ನೀವು ಬರೀಬಹುದು. ನನಗೆ ಆ ಥರ ಆಗಲ್ಲ’ ಅಂದರು.
‘ನಾನು ಜೀವಮಾನದಲ್ಲಿ ಆತ್ಮಕಥೆ ಬರೆಯಲ್ಲ’ ಅಂತ ನಾನಂದೆ.
‘ಮತ್ತೆ ಜೀವಮಾನ ಮುಗಿದ ಮೇಲೆ ಬರೀತೀರಾ?’!
‘ಇಲ್ಲ, ನನಗೆ ಬರೆಯೋ ಉದ್ದೇಶನೇ ಇಲ್ಲ.’
‘ನನಗೂ ಅಷ್ಟೇ’.
ಅಲ್ಲಿಗೆ ಆತ್ಮಕಥೆಯ ಕಥೆ ಮುಗಿಯಿತು!
*****
ಇನ್ನೊಂದಿಷ್ಟು ಮಾತುಕತೆ ಆಗುವುದರೊಳಗೆ ಮಹಾದೇವ ಎರಡು ಸಿಗರೇಟು ಸೇದಿದ್ದರು. ನಾನು ಸಿಗರೇಟು ತ್ಯಜಿಸಿದವನ ಹಮ್ಮಿನಲ್ಲಿ ‘ನಿಮ್ಮ ದೇಹ ಹೆಂಗೆ ತಡೆಯುತ್ತೆ ಸಿಗರೇಟನ್ನ?’ ಅಂತ ಕೆಣಕಿದೆ. ಮಹಾದೇವ ನಕ್ಕು ‘ಶಿವಲೀಲೆ’ ಅಂದರು. ಅಷ್ಟು ಹೊತ್ತಿಗೆ ಮಾತಿಗೆ ಕೂಡಿಕೊಂಡ ಸುಮಿತ್ರಾ ಮೇಡಂ ‘ಈ ಕುರ್ಚಿಲೇ ಇವರ ಜೀವನ. ಬರೀ ಸೀರಿಯಲ್ ನೋಡೋದು- ಸೀರಿಯಲ್ ಸುಬ್ಬ ಆಗೋಗಿದಾರೆ’ ಅಂದರು! ನನಗೆ ಆಶ್ಚರ್ಯವಾಗಿಹೋಯಿತು.
‘ನೀವು ಸೀರಿಯಲ್ ನೋಡ್ತೀರಾ? ಆಶ್ಚರ್ಯ ಮಾದೇವ್’ ಅಂತ ಉದ್ಗರಿಸಿದೆ.
‘ಇಲ್ಲ, ಪತ್ತೇದಾರಿ ಅಂಶ ಇರುತ್ತಲ್ಲ, ಅದು ಎಳಕೊಂಡುಬಿಡುತ್ತೆ. ಎಲ್ಲಿವರೆಗೆ ಕುತೂಹಲ ಇರುತ್ತೋ, ಅಲ್ಲಿವರೆಗೂ ನೋಡ್ತೀನಿ. ಎಳೆಯಕ್ಕೆ ಶುರು ಮಾಡ್ತಾರಲ್ಲ, ಆವಾಗ ಬಿಟ್ಟುಬಿಡ್ತೀನಿ’ ಅಂತ ವಿವರಿಸಿದರು.
ಅಂತೂ ದೇವನೂರ ಮಹಾದೇವ ಕನ್ನಡ ಧಾರಾವಾಹಿಗಳಿಗೆ ಅಂಟಿಕೊಂಡಿರುವುದು ಜಗತ್ತಿನ ಎಂಟನೆಯದೋ, ಒಂಬತ್ತನೆಯದೋ ಅದ್ಭುತವಾಗಿ ಕಂಡಿತು ನನಗೆ.
ಸಾಕಷ್ಟು ಮಾತುಕತೆಯಾಗಿ ಹೊರಡುವ ಮುನ್ನ ತಮ್ಮ ತೋಟದಲ್ಲಿ ಬೆಳೆದಿದ್ದ ಮಾವಿನ ಹಣ್ಣು ಕವರ್ ಗೆ ಹಾಕಿ ಕೈಗಿತ್ತರು. ‘ಬಣ್ಣ ಹಸಿರಿದೆ ಅಂತ ಮೋಸ ಹೋಗಬೇಕಿಲ್ಲ, ಒಳಗೆ ಚೆನ್ನಾಗಿ ಹಣ್ಣಾಗಿದೆ’ ಅಂದರು.
ಇಂದು ಅವರ ಜನ್ಮದಿನ ಅಂತ ಎಲ್ಲ ಶುಭ ಹಾರೈಸುತ್ತಿದ್ದಾರೆ. ಆದರೆ ಅವರ ನಿಜವಾದ ಹುಟ್ಟಿದ ದಿನಾಂಕ ಯಾರಿಗೂ ಗೊತ್ತಿಲ್ಲ. ಅವರಿಗೂ. ಹಾಗಾಗಿ ನಾನು ಶುಭಾಶಯ ಹೇಳುತ್ತಿಲ್ಲ. ಬದಲಿಗೆ ನಮ್ಮಿಬ್ಬರ ಒಂದು ಪುರಾತನ ಫೋಟೋ ಲಗತ್ತಿಸುತ್ತಿದ್ದೇನೆ.