“ಆ ಪಾಯಿಗೆ ಹೊಟ್ಟೆ ತುಂಬಾ ಊಟ ಕೊಟ್ಟೀಯೋ ಇಲ್ವೋ!”

(ಪ್ರೊ.ಕೆ.ಸುಮಿತ್ರಾಬಾಯಿಯವರ ಬಾಳ ಕಥನ “ಸೂಲಾಡಿ ಬಂದೋ ತಿರುತಿರುಗೀ” ಕೃತಿಯು, 2018ರಲ್ಲಿ ಮೈಸೂರಿನ ಅಭಿರುಚಿ ಪ್ರಕಾಶನದಿಂದ ಮುದ್ರಣಗೊಂಡಿದ್ದು, ಅದರಲ್ಲಿಯ “ನಮ್ಮತ್ತೆ ಮಾವರ ಸೊಮ್ಮು” ಎಂಬ ಅಧ್ಯಾಯದಿಂದ ಆಯ್ದ ಬರಹ ನಮ್ಮ ಓದಿಗಾಗಿ…)
ಮೂರನೆ ಕ್ಲಾಸಿನವರೆಗೆ ಕವಲಂದೆಯಲ್ಲಿ ಓದಿದ ದೇಮಾ ಮುಂದೆ ಅಪ್ಪನ ಬೆಸೆಯಲ್ಲಿ ಹುಣಸೂರು, ಹೊಮ್ಮರಗಳ್ಳಿ, ಒಂದು ತಿಂಗಳು ದೇವನೂರಲ್ಲಿ ಹೈಸ್ಕೂಲ್‌ಗೆ ಸೇರಿ ಆಮೇಲೆ ಅದೇ ವರ್ಷ ಸಾಲಿಗ್ರಾಮದ ಹೈಸ್ಕೂಲ್‌ಗೆ ಸೇರಿ ಅಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸುತ್ತಾನೆ. ಮುಂದೆ ಯುವರಾಜ ಕಾಲೇಜಿನಲ್ಲಿ ಸೈನ್ಸ್ ತಕ್ಕಂಡು ಎರಡು ವರ್ಷ ದಂಡಯಾತ್ರೆ ಆಗಲೇ ಬೀಡಿ ಸೇದುವುದನ್ನು ಕಲಿತನಂತೆ. ಮೊದಲು ಅವರಪ್ಪ ಸೇದಿ ಬಿಸಾಡುತ್ತಿದ್ದ ಮೋಟು ಬೀಡಿ, ಆಮೇಲೆ ಹೊಸ ಬೀಡಿಗೆ ಬಡ್ತಿ, ಈಗ ಸಿಗರೇಟಿಗೆ ಮುಂಬಡ್ತಿಯಾಗಿದೆ. ಓದದೆ, ಕಥೆ ಓದುವ, ಬರೆಯುವ ಇವನ ಖಯಾಲನ್ನು ಕಂಡು ಅವರ ಅಪ್ಪ ಆಗಾಗ್ಗೆ ಬೈಯುತ್ತಿದ್ದರಂತೆ. ಅಪ್ಪ ಅಂದರೆ ದೇಮಾನಿಗೆ ಸಕತ್ ಭಯ. ಮಾವನವರ ಫೋಟೋ ನೋಡಿದರೂ ನಮ್ಮಾವ ಜಬರದಸ್ತ್ ಅನಿಸುತ್ತದೆ. ಮಗ ಕಥೆ ಬರೀತಾನೆ ಅಂತ ಆ ಪೋಲಿಸ್ ಅಪ್ಪ ಮಗನನ್ನು ಲಾಕಪ್‌ಗೆ ಹಾಕಿದರೆ ಈ ಮಗ ಲಾಕಪ್ಪನಲ್ಲೇ ಒಂದು ಕಥೆ ಬರೆದಿದ್ದ!
ಮಗ ಲಾಯರ್ ಆಗಬೇಕು ಎಂದು ಕನಸು ಕಾಣುತ್ತಿದ್ದ ಅಪ್ಪನಿಗೆ ಪಿಯುಸಿ ಫೇಲಾಗಿ ಮನೆಯಲ್ಲಿ ಕೂತ ಮಗನನ್ನು ಕಂಡು ಸಿಟ್ಟು ಬಂದು, ಒಂದು ಸಲ ಮನೆ ಬಿಟ್ಟು ಹೋಗು ಎಂದರಂತೆ. ಅಷ್ಟಕ್ಕೇನೆ ದೇಮಾ- ಅಷ್ಟೇಯಾ… ನಾ ಹೊಯ್ತಿನಿ ಬಿಡು ಎಂದು ಬಿರಬಿರನೆ ಊರು ಬಿಟ್ಟು ಮೈಸೂರಿಗೆ ಟಿಕೆಟ್ ಇಲ್ಲದೆ ರೈಲು ಹತ್ತಿದನಂತೆ. ಆಗ ಭೇರ್ಯದಲ್ಲಿ ಇದ್ದದ್ದು. ದೇಮ ಮನೆ ಬಿಟ್ಟು ಹೊರಟ ಕೂಡಲೆ ನಮ್ಮತ್ತೆ ಗೊಳೋ ಎಂದು ನೆಲದ ಮೇಲೆ ಉರುಳಾಡಿಕೊಂಡು ಬೆಳಗಾನ ಅಳುತ್ತಿದ್ದರಂತೆ. ಇವರ ಗೋಳಾಟ ನಿಲ್ಲದೆ ಮಾವನಿಗೆ ತಲೆ ಚಿಟ್ಟಾಗಿ- ‘ಸುಮ್ಮಿರು ಎಲ್ಲೋದಾನು… ಬತ್ತನೆ’ ಎಂದರೂ ಅಳು ನಿಲ್ಲಿಸದಿದ್ದಾಗ ಸಿಟ್ಟಿನಿಂದ “ನಂಜೀ (ಅತ್ತೆಯವರಿಗೆ) ನಿಂಗ… ಮಗ ಬೇಕೋ… ನಾ ಬೇಕೋ ಹೇಳು” ಎಂದು ಕೇಳಿದಾಗ, “ನಂಗಾ ನನ್ನ ಮಗ ಬೇಕು” ಎಂದರಂತೆ. ಆಗ ಮಾವನು ಹಿಂದು ಮುಂದು ಯೋಚಿಸದೆ ಮಗನನ್ನು ಹಿಂಬಾಲಿಸಿ ಮೈಸೂರಿಗೆ ಹೊರಟರಂತೆ, ಯಾವುದೋ ಹೋಟೆಲ್‌ನಲ್ಲಿ ಟೀ ಕುಡಿದು ಬುಸ್ ಬುಸ್ ಅಂತ ಹೊಗೆ ಬಿಡುತ್ತಾ ನಿಂತಿದ್ದ ದೇಮಾ ಬಾಗಿಲ ಕಡೆ ನೋಡಿದರೆ ಎದುರಿಗೆ ಧುತ್ ಅಂತ ಇವರ ಅಪ್ಪ! ದೇಮಾ ಗಾಬರಿ ಬಿದ್ದನಂತೆ. ಅದ್ದೆಂಗ್ ಗೊತ್ತಾಯ್ತು ನಮ್ಮಪ್ಪಂಗೆ ಎಂದು ದೇಮಾಗೆ ಈಗಲೂ ಆಶ್ಚರ್ಯ. ಅವರ ಪೊಲೀಸ್ ಬುದ್ಧಿಗೆ ತಮ್ಮ ಮಗ ಇಷ್ಟೊತ್ತಿಗೆ ಎಷ್ಟು ದೂರ, ಯಾವ ಜಾಗಕ್ಕೆ ಬಂದಿರಬಹುದೆಂಬ ಅಂದಾಜು ಸಿಕ್ಕಿರಬಹುದೆಂದು ಊಹಿಸಿದೆ. ಮಾವನವರು ಒಂದೂ ಮಾತಾಡದೆ ಮಗನ ಮುಂದೆ ನಿಂತು ಗತ್ತಿನಿಂದ, ‘ಬಡಾ… ಊರ್‌ಗೆ ನಡೈ…’ ಅಂದರಂತೆ! ಇವನು ಯಾವ ಪ್ರತಿರೋಧವಿಲ್ಲದೆ ಬಹುವಿಧೇಯನಾಗಿ ತನ್ನಪ್ಪನನ್ನು ಹಿಂಬಾಲಿಸಿದನಂತೆ. ನಮ್ಮತ್ತೆ ಮುಂದೆ ಮಗನನ್ನು ನಿಲ್ಲಿಸಿ, “ನಂಜೀ ಇಲ್ನೋಡು ನಿನ್ ಮಗನ್ ಕರ್ಕ ಬಂದಿವ್ನಿ” ಎಂದು ಹೇಳಿ ಬಿರಬಿರನೆ ಕಡ್ದು dutyಗೆ ಹೊರಟು ಹೋದರಂತೆ. ಇದನ್ನೆಲ್ಲಾ ಅತ್ತೆಯವರು ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ತಾಯಿಯ ಸಂವೇದನೆ ತಂದೆಗಿಂತ ಭಿನ್ನ, ಮಗ ಎಲ್ಲೋದ್ರೂ ವಾಪಸ್ ಬರ್ತಾನೆ ಅಂತ ತಂದೆಗೆ ಭರವಸೆ. “ಒಂಬತ್ತು ತಿಂಗಳು ಒಂಬತ್ತು ದಿನ ಹೆರಿಗೆ ನೋವು ತಿಂದಿರೋಳ್ಗೇ ತಾಯಿಯ ಕಷ್ಟ ಗೊತ್ತಿರೋದು ಕವ್ವಾ” ಎಂದು ಅಂದು ನಮ್ಮತ್ತೆ ನನಗೂ ಚುರುಕು ಮುಟ್ಟಿಸಿದರು.
ದೇಮಾನ ತಂದೆಯವರ ಅಕಾಲ ಮರಣದಿಂದಾಗಿ, ಅನುಭವಿಸಿದ ಬದುಕಿನ ಕಷ್ಟಕೋಟಲೆಗಳಿಗೆ ಮುಕುಟಪ್ರಾಯದಂತೆ ‘ಹಸಿವು’ ಇವರ ಸಂಸಾರವನ್ನು ಕೆಲವು ಕಾಲ ಆಳಿತ್ತು. ದೇಮಾನಿಗೆ ಹಸಿದುಕೊಂಡಿರುವುದು ಒಂದು ಸಮಸ್ಯೆಯಾಗಿ ಕಾಡಿದ್ದನ್ನು ಎಂದೂ ಕಂಡಿಲ್ಲ. ಊಟಕ್ಕೆ ತೊಂದರೆಯಾಗಿದ್ದ ಕಾಲದಲ್ಲಿ ಹೇಗಿದ್ದನೋ, ಎಲ್ಲವೂ ದೊರಕಿರುವ ಈಗಿನ ಸಂದರ್ಭದಲ್ಲೂ ಅದೇ ಮನಃಸ್ಥಿತಿಯೇ ಇವನದು. ಹೊತ್ತಿಗೆ ಸರಿಯಾಗಿ ಊಟ ಮಾಡದೆ ಹಸಿಯುವುದರಿಂದ ಮಾನಸಿಕವಾಗಿ ಅವನಲ್ಲಿ ಅದಮ್ಯ ಚೈತನ್ಯವೇನಾದರೂ ಉಕ್ಕುತ್ತಿರಬಹುದೇ ಎಂಬ ಗುಮಾನಿ ನನಗಿದೆ! ದೇಮಾನಿಗೆ ಊಟೋಪಚಾರ ಇಂತಹುದ್ದೇ ಅಡಿಗೆ ಆಗಬೇಕು ಆಗಬಾರದು ಹೊತ್ತೊತ್ತಿಗೆ ಸರಿಯಾಗಿ ಊಟ ಮಾಡಬೇಕೆಂಬ ನಿಯಮಗಳು ಅನನ್ವಯ. ಅಕ್ಕರಾಸ್ತೆಯಿಂದ ರುಚಿಯಾಗಿ ಮಾಡುತ್ತಿದ್ದ ನನ್ನ ಅಡಿಗೆ ವೈವಿಧ್ಯ ಇವನಿಂದಾಗಿ ಮರೆಯತೊಡಗಿತು. ಅಮ್ಮನು ದೇಮಾನ ಸ್ವಭಾವಗಳನ್ನು ಗಮನಿಸಿ, ‘ತಾಯಿ… ನಿಮ್ಮೆಜಮಾನರು ನಿದ್ದೇಲಿ ಭೂಪ… ಮತ್ತೆ ಊಟದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದೆ ಸಿಕ್ಕಸಿಕ್ಕಂಗೆ ಈಚಾಳ್ ಪಾಚಾಳ್ ತಿನ್ನದಿರುವುದರಿಂದ ದೇವನೂ‌ರ್ ಆರೋಗ್ಯ ಚೆನ್ನಾಗಿದೆ’ ಎಂದು ಪ್ರಶಂಸೆ ಮಾಡುತ್ತಿದ್ದರು. ಇದ್ದರೂ ಇರಬಹುದು. ಆದರೆ ನನ್ನಜ್ಜಿ ದೇಮಾನನ್ನು ನೋಡಿದಾಗಲೆಲ್ಲ ‘ದೊಡ್ಡ ತಾಯೀ… ಹಿರಿಯೋಳೆ… ಆ ಪಾಯಿಗೆ ಹೊಟ್ಟೆ ತುಂಬ ಊಟ ಕೊಟ್ಟಿಯೊ ಇಲ್ವೋ? ವಟ್ಟೆಕಳೆಲ್ಲ ಎಂಗೆ ಬೆನ್ನಿಗೆ ಅತ್ತಂಡದೆ ನೋಡು’ ಎಂದು ಲಘುವಾಗಿ ಬೈದು ಛೇಡಿಸುತ್ತಿದ್ದರು. ಕುಕ್ಕರಹಳ್ಳಿಯ ಡಾ.ಲಕ್ಷ್ಮೀನಾರಾಯಣ ಅವರು ಮನೆಗೆ ಬಂದಿದ್ದಾಗ, “ಮಾದೇವಾ ನಿನ್ನ ದೇಹವನ್ನು ಓಪನ್ ಮಾಡಿದರೆ ಬರೇ ಸಿಗರೇಟ್ ಹೊಗೆ ಮತ್ತು ಪೀಪಾಯಿಗಟ್ಟಲೆ ಟೀ ತೆಗೆಯಬಹುದು” ಎಂದು ರೇಗಿಸಿದ್ದರು. ಹಸಿವನ್ನು ಗೆಲ್ಲಬೇಕೆಂಬ ಪ್ರಯತ್ನವನ್ನೇನು ಈ ಸೋಮಾರಿ ಮಾಡಿದಂತಿಲ್ಲ. ಇವನೊಳಗೆ ಹಸಿವೋ ಹಸಿವಿನೊಳಗೆ ಇವನೋ ಎಂದು ಒಂದೊಂದು ಸಲ ಅನ್ನಿಸುತ್ತದೆ.