ಪಠ್ಯ ಪುಸ್ತಕ ರಚನೆಗೆ ಸ್ವಾಯತ್ತ ಸಂಸ್ಥೆ ಇರಬೇಕು: ಸಾಹಿತಿ ದೇವನೂರು ಮಹಾದೇವ
[1.6.2023ರಂದು ಪ್ರಕಟವಾದ ಈ ಟಿವಿ ಭಾರತ್ ಸಂದರ್ಶನ…ಪಠ್ಯ ಪುಸ್ತಕ ಸಲಹಾ ಸಮಿತಿ ರಚನೆ ಮಾಡಿ ಆಗಿರುವ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ತಿಳಿಸಿದ್ದಾರೆ. ಸಂದರ್ಶನ ವೀಕ್ಷಿಸಲು ಕೊಂಡಿ ಅನುಸರಿಸಿ]
ಮೈಸೂರು : ಪಠ್ಯ ಪುಸ್ತಕ ರಚನೆಗೆ ಸ್ವಾಯತ್ತ ಸಂಸ್ಥೆ ಇರಬೇಕು. ಇದರಲ್ಲಿ ಯಾರ ಹಸ್ತಕ್ಷೇಪವೂ ಇರಬಾರದು. ಕಳೆದ ಬಾರಿ ಪಠ್ಯ ಪುಸ್ತಕ ರಚನಾ ಸಮಿತಿಯಲ್ಲಿ ಯಾರೂ ಶಿಕ್ಷಣ ತಜ್ಞರಿರಲಿಲ್ಲ. ಆದ್ದರಿಂದ ಆ ಸಮಿತಿ ರಚಿಸಿರುವ ಪಠ್ಯ ಪುಸ್ತಕಗಳನ್ನು ಈಗಾಗಲೇ ವಿತರಣೆ ಮಾಡಲಾಗಿದೆ. ಸರ್ಕಾರ ವಿತರಣೆ ಆಗಿರುವ, ಪಠ್ಯದಲ್ಲಿ ಇರುವ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಪಠ್ಯಗಳನ್ನು ಪರೀಕ್ಷೆಗೆ ಪರಿಗಣಿಸದಂತೆ ಸುತ್ತೋಲೆ ಹೊರಡಿಸಬೇಕು ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ತಿಳಿಸಿದರು. ಇನ್ನೂ ಆರು ತಿಂಗಳಿನೊಳಗೆ ಸೂಕ್ತ ತಜ್ಞರನ್ನು ಒಳಗೊಂಡ ಪಠ್ಯ ಪುಸ್ತಕ ಸಲಹಾ ಸಮಿತಿಯನ್ನು ರಚನೆ ಮಾಡಿ ಸೂಕ್ತ ಪಠ್ಯಗಳಲ್ಲಿ ಕೊರತೆ ಉಂಟಾಗದಂತೆ, ಆಗಿರುವ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಈಟಿವಿ ಭಾರತ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದರು.
ದೇವನೂರು ಮಹಾದೇವ ಅವರು ಕಳೆದ ಸರ್ಕಾರದಲ್ಲಿ ರಚನೆಯಾದ ಪಠ್ಯ ಪುಸ್ತಕ ರಚನಾ ಸಮಿತಿಯಲ್ಲಿ ತಮ್ಮ ಪಾಠವನ್ನು ಬೋಧಿಸದಂತೆ ಅಥವಾ ಪಠ್ಯ ಪುಸ್ತಕದಿಂದ ಕೈ ಬಿಡುವಂತೆ ಹಿಂದಿನ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಈಗ ಸರ್ಕಾರ ಬದಲಾಗಿದ್ದು, ಮುಖ್ಯಮಂತ್ರಿಗಳನ್ನು ಸಾಹಿತಿಗಳು ಭೇಟಿಯಾಗಿ, ಹಿಂದೆ ರಚನೆಯಾಗಿದ್ದ ಪಠ್ಯ ಪುಸ್ತಕ ರಚನಾ ಸಮಿತಿಯನ್ನು ರದ್ದುಪಡಿಸಿ, ಅವರು ಅಳವಡಿಸಿರುವ ಸಂವಿಧಾನದ ಆಶಯಕ್ಕೆ ವಿರುದ್ಧವಾದ ಪಠ್ಯಗಳನ್ನು ತೆಗೆದುಹಾಕಬೇಕು. ಸ್ವಾಯತ್ತ ಪಠ್ಯ ಪುಸ್ತಕ ರಚನಾ ಸಮಿತಿ ರಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಈಗಾಗಲೇ ಮಕ್ಕಳಿಗೆ ಪಠ್ಯ ಪುಸ್ತಕಗಳ ವಿತರಣೆ ಆಗಿದ್ದು, ಪಠ್ಯದಲ್ಲಿ ಇರುವ ಕೆಲವು ಸಂವಿಧಾನದ ಆಶಯಗಳಿಗೆ ವಿರುದ್ಧವಾದ, ಜೊತೆಗೆ ಹಿಂದುತ್ವವನ್ನು ಒತ್ತಿ ಹೇಳುವ ಪಠ್ಯಗಳನ್ನು ಪರೀಕ್ಷೆಗಳಿಗೆ ಪರಿಗಣಿಸುವುದಿಲ್ಲ ಎಂದು ಸರ್ಕಾರ ಸುತ್ತೋಲೆಗಳನ್ನು ಹೊರಡಿಸಬೇಕು. ಇನ್ನು ಆರು ತಿಂಗಳಲ್ಲಿ ಸೂಕ್ತವಾದ, ಪರಿಣಿತರನ್ನು ಹೊಂದಿರುವ ಪಠ್ಯ ಪುಸ್ತಕ ರಚನಾ ಸಮಿತಿಯನ್ನು ರಚನೆ ಮಾಡಿ, ಆಗಿರುವ ತಪ್ಪುಗಳನ್ನು ಸರಿಪಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಗ್ಯಾರಂಟಿಗಳು ಗಂಭೀರವಾಗಿವೆ: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಹೇಳಿ ಅಧಿಕಾರಕ್ಕೆ ಬಂದಿದ್ದು, ಈ ಯೋಜನೆಗಳನ್ನು ಜಾರಿ ಮಾಡಲು ಸರ್ಕಾರ ಗಂಭೀರವಾಗಿ ಚಿಂತನೆ ಮಾಡುತ್ತಿದೆ. ಇದನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಆದರೆ ಬಿಜೆಪಿಯವರು ಆತುರ ತೋರಿಸುತ್ತಿದ್ದಾರೆ. ಜೆಡಿಎಸ್ ಅವರು ಸಹ ಆತುರ ಪಡುತ್ತಿದೆ. ಇವರಿಗೆ ಆತ್ಮಸಾಕ್ಷಿ ಇದೆಯೇ?. ಗ್ಯಾರಂಟಿ ಜಾರಿ ಮಾಡಲು ಸ್ವಲ್ಪ ಸಮಯಾವಕಾಶ ಕೊಡಬೇಕು ಎಂದರು.
ಕಳೆದ ಸರ್ಕಾರದಲ್ಲಿ ಸಾಹಿತಿಗಳು ಹಾಗೂ ಹೋರಾಟಗಾರರ ಮೇಲೆ ಹಾಕಿರುವ ಪ್ರಕರಣಗಳನ್ನು ಸರ್ಕಾರ ಪರಿಶೀಲನೆ ನಡೆಸಿ, ನಿಜವಾಗಿದ್ದರೆ ವಾಪಸ್ ತೆಗೆದುಕೊಳ್ಳಲಿ. ಈ ಬಗ್ಗೆ ಸರಿಯಾಗಿ ಪರಿಶೀಲನೆ ಮಾಡುವುದು ಅಗತ್ಯ ಎಂದು ತಿಳಿಸಿದರು.
ಕ್ರೀಡಾಪಟುಗಳ ಮೇಲಿನ ದೌರ್ಜನ್ಯ ತಲೆತಗ್ಗಿಸುವಂಥದ್ದು: ಕೇಂದ್ರ ಸರ್ಕಾರ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಜೊತೆ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಕರುಳು ಕಿವುಚಿದ ಹಾಗೆ ಆಗುತ್ತದೆ. ಷೇಮ್ ಲೆಸ್, ಇವತ್ತಿನ ನಾಯಕರುಗಳನ್ನು ನೋಡಿದರೆ ನಾಚಿಕೆಯಾಗುತ್ತದೆ. ಇವರಿಗೆ ಮನುಷ್ಯತ್ವವೂ ಇಲ್ಲ, ನಾಚಿಕೆಯೂ ಇಲ್ಲ ಪ್ರಜಾಪ್ರಭುತ್ವ ಇರುವ ದೇಶದಲ್ಲಿ ಈ ರೀತಿ ನಡೆದಿರುವುದು ಎಲ್ಲರೂ ತಲೆ ತಗ್ಗಿಸುವಂಥದ್ದು ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.