ಆರ್ಎಸ್ಎಸ್ ಆಳ ಮತ್ತು ಅಗಲ’ ಪುಸ್ತಕ ಪ್ರಕಟಣೆ ಮತ್ತು ಹಂಚಿಕೆ ಕರ್ನಾಟಕದ ಉದ್ದಗಲಕ್ಕೆ ಆಂದೋಲನವಾಗಿದ್ದರ ಕುರಿತು..ಗುರುಪ್ರಸಾದ್ ಡಿ ಎನ್
[‘ಆರ್ಎಸ್ಎಸ್ ಆಳ ಮತ್ತು ಅಗಲ’ ಪುಸ್ತಕ ಪ್ರಕಟಣೆ ಮತ್ತು ಹಂಚಿಕೆ ಕರ್ನಾಟಕದ ಉದ್ದಗಲಕ್ಕೆ ಆಂದೋಲನವಾಗಿದ್ದರ ಕುರಿತು..ಗುರುಪ್ರಸಾದ್ ಡಿ ಎನ್ ಅವರ ಬರಹ]
ಜಾನ್ ಹರ್ಸೆ ಚೀನಾ ಮೂಲದ ಅಮೆರಿಕ ಪತ್ರಕರ್ತ-ಲೇಖಕ. ಅಮೆರಿಕ ಹಿರೋಶಿಮಾ ಮೇಲೆ ಅಣುಬಾಂಬ್ ಎಸೆದ ಕೆಲವು ತಿಂಗಳುಗಳಲ್ಲಿ, ನ್ಯೂಯಾರ್ಕರ್ ಪತ್ರಿಕೆ ಈ ಮಾನವದುರಂತವನ್ನು ವರದಿ ಮಾಡಲು ಆತನನ್ನು ಜಪಾನ್ಗೆ ಕಳುಹಿಸುತ್ತದೆ. ಸಂತ್ರಸ್ತರನ್ನು ಮಾತನಾಡಿಸಿ ಸುಮಾರು 30 ಸಾವಿರ ಪದಗಳಲ್ಲಿ ಬರೆದ ಆ ವರದಿಯನ್ನು ಇಡಿಯಾಗಿ, ಬೇರೆ ಲೇಖನಗಳನ್ನು ತಡೆಹಿಡಿದು 1946ರ ಆಗಸ್ಟ್ ಕೊನೆ ವಾರದ ಸಂಚಿಕೆಯಲ್ಲಿ ನ್ಯೂಯಾರ್ಕರ್ ಪ್ರಕಟಿಸುತ್ತದೆ. ಒಂದೇ ದಿನದಲ್ಲಿ ಆ ಸಂಚಿಕೆಯ ಎಲ್ಲಾ ಪ್ರತಿಗಳೂ ಬಿಕರಿಯಾಗುತ್ತವೆ. ಅದು ಒಂದು ದೊಡ್ಡ ಸಂಚಲನವುಂಟುಮಾಡಿ ಹೆಚ್ಚಿನ ಪ್ರತಿಗಳಿಗೆ ಬೇಡಿಕೆ ಬರುತ್ತೆ. ವಿಜ್ಞಾನಿ ಐನ್ಸ್ಟೀನ್ ಪತ್ರಿಕೆಯ ಸಾವಿರ ಪ್ರತಿಗಳನ್ನು ಕೊಂಡು ಹಂಚಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಹಲವು ಪತ್ರಿಕೆಗಳು ಅದನ್ನು ಮರುಪ್ರಕಟಮಾಡಲು ಮುಂದಾಗುತ್ತವೆ. ಇದು ನಂತರ ಪುಸ್ತಕದ ರೂಪದಲ್ಲಿಯೂ ಪ್ರಕಟವಾಗಿ ಹತ್ತಾರು ಲಕ್ಷ ಪ್ರತಿಗಳು ಜನರನ್ನು ತಲುಪಿರುವುದಲ್ಲದೆ ಹಲವಾರು ಭಾಷೆಗೆ ಅನುವಾದಗೊಂಡು ಮಾನವ ನಿರ್ಮಿತ ಅಣುದುರಂತದ ಬಗ್ಗೆ ಎಚ್ಚರಿಸುತ್ತಲೇ ಇದೆ.
ಬಸವಣ್ಣನವರ ’ಕಲಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ’ ಸೇರಿದಂತೆ ಸರಳವಾಗಿ ಮನಮುಟ್ಟುವ ಶರಣ ಸಾಹಿತ್ಯದ ವಚನಗಳನ್ನು ಓದದ-ಕೇಳದ ಕನ್ನಡ ಮನಸ್ಸು ಇರುವುದು ಅತಿ ವಿರಳ. ಕುವೆಂಪು ಅವರ ’ನೂರು ದೇವರನೆಲ್ಲಾ ನೂಕಾಚೆ ದೂರ.. ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು’, ’ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎಂಬಂತಹ ಅವರ ಪದ್ಯಗಳ ನೂರಾರು ಸಾಲುಗಳು ಎಷ್ಟೋ ಲಕ್ಷಾಂತರ ಜನರಲ್ಲಿ ವೈಚಾರಿಕತೆಯ ಬೀಜವನ್ನು ಬಿತ್ತಿವೆ. ಸಿದ್ದಲಿಂಗಯ್ಯನವರ, ’ಇಕ್ರಲಾ ವದಿರ್ಲಾ, ಈ ನನ್ಮಕ್ಳ ಚರ್ಮ ಎಬ್ರಲಾ’, ’ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಎಂಬ ಸಾಲುಗಳು ಕೂಡ ದಮನಿತರ ನೋವನ್ನು ಪ್ರತಿನಿಧಿಸಿ, ಘನತೆಯನ್ನು ಪ್ರತಿಪಾದಿಸಿ ಕನ್ನಡಿಗರನ್ನು ಎಚ್ಚರಿಸಿದ ಅತಿ ಸರಳ ಸಾಲಿನ ಪದ್ಯಗಳು.
ಒಂದು ವರದಿ, ಒಂದು ವಚನ, ಕೆಲವು ಪದ್ಯಗಳ ಸಾಲುಗಳನ್ನು ಇಲ್ಲಿ ಉದಾಹರಿಸಿದ್ದಕ್ಕೆ ಕಾರಣವಿದೆ. ಇವೆಲ್ಲವನ್ನು ಬೆಸೆಯುವ ಸಾಮಾನ್ಯ ಸಂಗತಿ ಅವು ಸರಳವಾಗಿದ್ದು ಜನರಿಗೆ ಸುಲಭವಾಗಿ ಮನದಟ್ಟಾಗುವಂತಹ ಶೈಲಿಯಲ್ಲಿ ನಿರೂಪಣೆಗೊಂಡಿರುವುದು. ದೇವನೂರ ಮಹಾದೇವ ಅವರ ಕಿರು ಹೊತ್ತಿಗೆ ’ಆರ್ಎಸ್ಎಸ್ ಆಳ ಮತ್ತು ಅಗಲ’ (ಸುಮಾರು 5000 ಪದಗಳ ಪ್ರಬಂಧ) ಕರ್ನಾಟಕದ ಪುಸ್ತಕ ಲೋಕದಲ್ಲಿ ಹಿಂದೆಂದೂ ಕಂಡರಿಯದಂತಹ ದಾಖಲೆ ಮಾರಾಟ ಕಾಣುತ್ತಿರುವುದಕ್ಕೆ ಅದರ ಸರಳ ನಿರೂಪಣಾ ಶೈಲಿ ಕೂಡ ಪ್ರಮುಖ ಕಾರಣ.
ಜನಪ್ರಿಯ ಸಂಸ್ಕೃತಿಯ ಚೌಕಟ್ಟಿನಲ್ಲಿ ಮೂಡುವ ಸಿನಿಮಾ ಆಗಲಿ, ಸಾಹಿತ್ಯ ಕೃತಿ ಅಥವಾ ಹಾಡು-ಹಸೆಯಾಗಲೀ ಅದು ಜನಸಾಮಾನ್ಯರನ್ನು ತಲುಪುವ ಸಾಧ್ಯತೆಯೇ ಅಂತಹದ್ದು. ಅಂತಹ ಕಲಾಕೃತಿಯೊಂದು ಶೋಷಿತ ಅಥವಾ ದಮನಿತ ಸಮುದಾಯದಿಂದ, ಅಂತಹ ಸಮುದಾಯದ ವ್ಯಕ್ತಿಯಿಂದ ಮೂಡಿಬಂದಾಗ ಅದು ಯಾಜಮಾನ ಸಂಸ್ಕೃತಿಯ ವಿರುದ್ಧ, ಶೋಷಣೆಯ ವ್ಯವಸ್ಥೆಯ ವಿರುದ್ಧ ಎಂದಿಗೂ ಗುದ್ದಾಡುತ್ತದೆ. ಅಲ್ಲದೆ ಅದು ಅಥೆಂಟಿಕ್ ಮತ್ತು ಆರ್ಗಾನಿಕ್ ಅನ್ನಬಹುದಾದ ಸ್ವರೂಪವನ್ನು ಪಡೆದಿರುತ್ತದೆ. ವಚನಗಳು ಮಾಡಿದ್ದು ಅಂತಹ ಚಳವಳಿಯನ್ನೇ. ಆಡುಭಾಷೆಯಲ್ಲಿ ಬರೆದ ಸರಳ ಸಾಲುಗಳು ವೈದಿಕ ಧರ್ಮದ ವಿರುದ್ಧ ತಿರುಗಿಬಿದ್ದು ಸಮ ಸಮಾಜ ನಿರ್ಮಿಸುವತ್ತ ಕೆಲಸ ಮಾಡಲು ಪ್ರೇರೇಪಿಸಿದವು. ಮಂಟೇಸ್ವಾಮಿ ಗಾಯನದಲ್ಲಿ ’ನಾವು ಮಾಡಿದ ದೇವ್ರ ಸಾಲಾಗಿ ನಿಲಿಸ್ಬುಟ್ಟು ಹೂನೀರಾ ಹಾಕ್ಬಿಟ್ಟು ಮಾತಾಡಿಸ್ತಿವಿ, ಮಾತಾಡ್ದ ದೇವ್ರ ಎದೆಗ್ ಗುದ್ದು ಮಾತಾಡಿಸ್ತಕ್ಕಂತ ಬ್ರಹ್ಮ ಪಂಚಾಲದವರು’ ಎಂದು ಹಾಡುವಾಗ ವೈದಿಕ ಸಂಪ್ರದಾಯದ ವಿರುದ್ಧ ಸರಳ ಮಾತುಗಳಲ್ಲಿ ಪ್ರತಿಭಟನೆ ಇದೆ.
ದೇವರನ್ನು ಕಾಣುವಲ್ಲಿ ಪುರೋಹಿತಶಾಹಿಯ ಅಗತ್ಯವನ್ನು ನಿರಾಕರಿಸುವ ಇಂತಹ ಪ್ರತಿಭಟನಾ ಪರಂಪರೆಯ ವಾರಸುದಾರರು ದೇವನೂರ ಮಹಾದೇವರು. ಅವರು ಬರೆದ ಸೃಜನಶೀಲ ಸಾಹಿತ್ಯ ಕೂಡ ಅಲ್ಲಿಯವರೆಗೂ ಶಿಷ್ಟ ಭಾಷೆಯಲ್ಲಿ ಬರೆಯಲಾಗುತ್ತಿದ್ದ ಕನ್ನಡ ಸಾಹಿತ್ಯಕ್ಕೆ ಸೆಡ್ಡುಹೊಡೆದು ನಿಂತಿತ್ತು. ’ಒಡಲಾಳ’ವಾಗಲೀ, ’ಕುಸುಮಬಾಲೆ’ಯಾಗಲೀ ತಾನು ಬಳಸಿದ ಭಾಷೆಯಿಂದಲೇ ಕನ್ನಡ ಸಾಹಿತ್ಯ ಲೋಕವನ್ನು ಬೆಚ್ಚಿಬೀಳಿಸಿತ್ತು. ಜನಸಾಮಾನ್ಯರ ಆಡುಭಾಷೆಯನ್ನೇ ತನ್ನ ನಿರೂಪಣೆಯಲ್ಲಿ ಒಳಗೊಂಡು, ಕನ್ನಡ ಸಾಹಿತ್ಯಲೋಕದ ಕಣ್ಣುತೆರೆಸಿತ್ತು. ಒಡಲಾಳ ನೀಳ್ಗತೆಯನ್ನು ತೆಗೆದುಕೊಂಡರೆ, ಅದು ಭಾಷಾ ದೃಷ್ಟಿಯಿಂದಷ್ಟೇ ಕ್ರಾಂತಿಕಾರಿಯಾಗಿದ್ದಲ್ಲದೆ, ಅದು ಕಟ್ಟಿಕೊಟ್ಟ ತಿಳಿವಳಿಕೆ ಪ್ರಭುತ್ವದ ಕ್ರೌರ್ಯದ-ದಬ್ಬಾಳಿಕೆಯ ವಿರುದ್ಧವಾಗಿತ್ತು. ನೈತಿಕತೆಯ ಬಗ್ಗೆ ಓದುಗರಿಗೆ ಬೇರೆಯದ್ದೇ ಆದ ಮತ್ತು ಸಾಪೇಕ್ಷವಾದ ದೃಷ್ಟಿಕೋನವನ್ನು ಕಟ್ಟಿಕೊಟ್ಟು, ಹೀಗೂ ಬರೆಯಬಹುದೇ ಮತ್ತು ಹೀಗೂ ಇರಬಹುದಲ್ಲವೇ ಎಂಬ ಬೆರಗು ಮೂಡಿಸಿತ್ತು. ಅದು ಅವರ ಇತರ ಕಥೆಗಳು, ಕುಸುಮಬಾಲೆ ಕಾದಂಬರಿ ಹಾಗೂ ನಾನ್-ಫಿಕ್ಷನ್ ಬರಹಗಳಲ್ಲೂ ಎದ್ದುಕಾಣುವ ಅಂಶ. ಹೀಗೆ ಓದುಗರ ಎದೆಯನ್ನು ತಾಕುವಂತೆ ಬರೆಯುವ ಮಹಾದೇವರ ’ಆರ್ಎಸ್ಎಸ್ ಆಳ ಮತ್ತು ಅಗಲ’ ಕಿರು ಹೊತ್ತಿಗೆ ಜನಸಾಮಾನ್ಯರನ್ನು ಈ ಪರಿ ಸೆಳೆದಿದ್ದೇಕೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ.
ಈ ಪುಸ್ತಕದ ಬಗ್ಗೆ ವಿಮರ್ಶೆ ಮಾಡುತ್ತಾ, ‘ಬಹಳ ಸರಳವಾಗಿದೆ, ಮತ್ತು ಗೊತ್ತಿರುವ ವಿಷಯಗಳನ್ನೇ ಹೇಳಿದೆ’ ಎಂಬ ವಾದ ಮಾಡುತ್ತಿರುವರು ಯಜಮಾನ್ಯ ಸಂಸ್ಕೃತಿಯ-ಪ್ರಭುತ್ವದ ಪಾಠಗಳನ್ನೇ ಗಿಳಿಪಾಠದಂತೆ ಒಪ್ಪಿಸುತ್ತಿರುವುದು ದುಃಖದ ಸಂಗತಿ. ಊರುಗಳಲ್ಲಿ ಹಲವು ಸಮುದಾಯಗಳು ಸೇರಿ ಕಲೆತು ಮಾಡುವ ಭಜನೆಯಲ್ಲಿ, ರಾಗ ಮತ್ತು ಶೃತಿಯ ಬಗ್ಗೆ ವಿಮರ್ಶೆ ಮಾಡಲು ಕುಳಿತವರಿಗೆ ಜನಪ್ರಿಯ ಸಂಸ್ಕೃತಿಯ ಸಾಧ್ಯತೆಗಳು ಮತ್ತು ಮಹತ್ವದ ಬಗ್ಗೆ ಅರಿವಿನ ಕೊರತೆ ಎಂದೇ ಹೇಳಬೇಕು. ಬ್ರೆಕ್ಟ್, ನೆರೂಡಾರ ಪದ್ಯವಾಗಲೀ, ಟಾಲ್ಸ್ಟಾಯ್, ಕುವೆಂಪುರವರ ಕಥೆ, ಕಾದಂಬರಿ, ಪ್ರಬಂಧ ಬರಹಗಳಾಗಲೀ, ಅವೆಂದೂ ಸರಳವಾಗಿದ್ದುಕೊಂಡೇ ಯಜಮಾನ್ಯ ವ್ಯವಸ್ಥೆಗಳ ವಿದುದ್ಧ, ಕರಾಳ ಪ್ರಭುತ್ವಗಳ ವಿರುದ್ಧ ಮಾತಾಡಿದ್ದವು ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಇನ್ನು ದೇವನೂರರು ಮಂಡಿಸಿರುವ ಸರಳ ಮತ್ತು ಮನತಟ್ಟುವ ವಾದಕ್ಕೆ ಸಂಘಪರಿವಾರದವರು ಉತ್ತರಿಸಲು ಇನ್ನೂ ಸಾಧ್ಯವಾಗಿಲ್ಲ. ಅಂದರೆ ಬರೆದಿರುವುದೆಲ್ಲಾ ಸತ್ಯ ಎಂದು ಸ್ಪಟಿಕದಷ್ಟೇ ಸ್ಪಷ್ಟ. ಸತ್ಯವನ್ನು ಒಪ್ಪಿಕೊಳ್ಳಲಾರದೆ ಸಂಘ ಪರಿವಾರದವರು ನಲುಗುತ್ತಿದ್ದಾರಷ್ಟೇ.
ಸುಳ್ಳನ್ನು ಅತಿರಂಜಿತವಾಗಿ ಮನಮುಟ್ಟುವಂತೆ ಜನರಿಗೆ ಹೇಳಿ ಮರಳು ಮಾಡಿದ್ದು ಆರ್ಎಸ್ಎಸ್ ಮತ್ತು ಅದರ ಮರಿ ಸಂತಾನ. ಇದು ಗೋಳ್ವಾಲ್ಕರ್, ಹೆಡಗೇವಾರ್ರಿಂದ ಪ್ರಾರಂಭವಾಗಿ ಇಂದಿನ ರೋಹಿತ್ ಚಕ್ರತೀರ್ಥ, ಚಕ್ರವರ್ತಿ ಸೂಲಿಬೆಲೆಯವರೆಗೆ ಮುಂದುವರೆದಿದೆ. ಇಂದಿನ ಭಾರತದ ಫೇಕ್ ನ್ಯೂಸ್ ಎಕೋಸಿಸ್ಟಮ್ಗೆ ಈ ಸಂಘಪರಿವಾರದ ಕೊಡುಗೆ ಏನೆಂಬುದನ್ನು ಮಹಾದೇವರು ಈ ಕಿರುಹೊತ್ತಿಗೆಯಲ್ಲಿ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ. ಹಲವು ಕಥೆಗಳು ಮತ್ತು ರೂಪಕಗಳ ಮೂಲಕ ಆರ್ಎಸ್ಎಸ್ ಎಂಬ ಭಯಾನಕ ಮಾಯಾವಿ ಸಂಘಟನೆ ಪ್ರಸಕ್ತದಲ್ಲಿ ಎಂತಹ ಭಾರತವನ್ನು ಕಟ್ಟಲು ಹೊರಟಿದೆ ಎಂಬುದನ್ನು ಮಂಡಿಸಿ ಎಚ್ಚರಗೊಳಿಸಲು ಪ್ರಯತ್ನಿಸಿದ್ದಾರೆ. ಸಂವಿಧಾನವನ್ನು ನಿಜ ಅರ್ಥದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಿರುಹೊತ್ತಿಗೆ ನೀಡಿರುವ ಎಚ್ಚರವನ್ನು ಪರಿಗಣಿಸಿ ಅದನ್ನು ಕರಪತ್ರ ಎಂದು ಕೂಡ ಕರೆದವರಿದ್ದಾರೆ. ಜನಪರವಾದ ಕರಪತ್ರಗಳು ಹಲವು ಕಾಲಘಟ್ಟಗಳಲ್ಲಿ ಬಿತ್ತಿರುವ ವಿವೇಕಕ್ಕೆ ದೊಡ್ಡ ಇತಿಹಾಸವೇ ಇದೆ. ಸುಳ್ಳಷ್ಟೇ ಜನಪ್ರಿಯವಾಗುವುದಿಲ್ಲ, ಬದಲಿಗೆ ಸತ್ಯವನ್ನೂ ಕೂಡ ಜನಪ್ರಿಯಗೊಳಿಸಬಹುದೆಂದು ದೇವನೂರರು ಈ ಪ್ರಬಂಧದ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಎಚ್ಚರಿಕೆಯಲ್ಲಿ ಕೆಲಸ ಮಾಡುವಾಗ ಐಕ್ಯತೆಯಲ್ಲಿ ಕೆಲಸ ಮಾಡುವ ಮಹತ್ವವನ್ನು ಮನಗಾಣಿಸಿದ್ದಾರೆ. ಅದು ಕೇವಲ ಮಾತುಗಳಿಂದಷ್ಟೇ ಅಲ್ಲ; ಅದಕ್ಕೆ ದಾರಿಯನ್ನೂ ಕಾಣಿಸಿದ್ದಾರೆ. ಆ ದಾರಿಯಲ್ಲಿ ಒಂದು, ಹಲವು ಪ್ರಕಾಶಕರು ಒಟ್ಟಿಗೆ ಸೇರಿ, ಜನಸಾಮಾನ್ಯರು ಒಗ್ಗೂಡಿ ಈ ಪುಸ್ತಕವನ್ನು ಪ್ರಕಟಿಸಿ ಮಾರಬಹುದೆಂಬ ಕಲ್ಪನೆ; ಅದರಿಂದ ಯಾವುದೇ ಲಾಭಾಪೇಕ್ಷೆಯನ್ನು ನಿರಾಕರಿಸುವುದರ ಮೂಲಕ ಕೂಡ.
ಹಕ್ಕುಸ್ವಾಮ್ಯ ಬಿಟ್ಟುಕೊಟ್ಟು ಹಲವು ಪ್ರಕಾಶಕರು ಒಟ್ಟಿಗೆ ಪುಸ್ತಕವನ್ನು ಮುದ್ರಿಸಿ ಓದುಗರಿಗೆ ಒದಗಿಸಬಹುದೆಂಬ ಈ ವಿಶಿಷ್ಟ ಮಾಡೆಲ್ ಹಲವು ಕಾರಣಕ್ಕೆ ಇಂದು ಮಹತ್ವವಾಗಿ ಕಾಣುತ್ತಿದೆ. ಇಂದು ಮುಖ್ಯವಾಹಿನಿ ಮಾಧ್ಯಮಗಳಿಗೆ ಎದುರಾಗಿ ಈಜುತ್ತಿರುವ ಯಾವುದೇ ಸ್ವತಂತ್ರ ಮಾಧ್ಯಮವಾಗಲೀ, ಪ್ರಕಾಶನವಾಗಲೀ ವಿತರಣೆ ಜಾಲವನ್ನು ಬೇಧಿಸಲು ಹರಸಾಹಸ ಪಡುವಂತಹ ವಾತಾವರಣ ಸೃಷ್ಟಿಯಾಗಿದೆ. ಡಿಜಿಟಲ್ ಮಾಧ್ಯಮದಲ್ಲಿ ಕೂಡ ಯಾವುದೇ ವಿಚಾರವನ್ನು ತಲುಪಿಸಲು ಇಂದು ನಾವು ಕಾರ್ಪೊರೆಟ್ ದೈತ್ಯರ ಸಾಮಾಜಿಕ ಜಾಲತಾಣಗಳು ಮತ್ತು ಮೆಸೆಂಜರ್ಗಳನ್ನು ನಂಬಿಕೊಂಡು, ಅವರ ಸೆನ್ಸಾರ್ಗಳಿಗೆ ಒಳಪಟ್ಟು ನಲುಗುತ್ತಿರುವ ಪರಿಸ್ಥಿತಿ ಎದುರಾಗಿದೆ.ಇಂತಹ ವಾತಾವರಣದಲ್ಲಿ ಒಂದು ಪುಸ್ತಕ ಇವನ್ನೆಲ್ಲಾ ಬೇಧಿಸಿ ಒಂದು ಕೊ-ಆಪರೆಟಿವ್ ಆದ ಉತ್ಪಾದನಾ ಮತ್ತು ವಿತರಣ ಜಾಲವನ್ನು ಸೃಷ್ಟಿಸಿಕೊಂಡು ಹದಿನೈದು ದಿನಗಳಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ಪ್ರತಿಗಳನ್ನು (ಸುಮಾರು 10ಕ್ಕೂ ಹೆಚ್ಚು ಜನ ಪ್ರಕಾಶಕರೊಂದಿಗೆ) ಓದುಗರಿಗೆ ತಲುಪಿಸಲು ಸಾಧ್ಯವಾಗಿರುವುದು ಸೋಜಿಗ ಮತ್ತು ಈ ದಿನಕ್ಕೆ ಆಶಾವಾದದಂತೆ ಕಾಣುತ್ತದೆ. ಈ ಸಂಖ್ಯೆ ತಿಂಗಳ ಕೊನೆಗೆ ಕಡಿಮೆ ಎಂದರೂ ಒಂದು ಲಕ್ಷ ದಾಟುವುದು ಶತಸಿದ್ಧ!
ಒಂದೇ ಜಾತಿಯವರು ವಾಸಿಸಲು ಅಪಾರ್ಟ್ಮೆಂಟ್ ಕಟ್ಟುವ ವಿದ್ಯಮಾನವನ್ನು ವಿರೋಧಿಸಿದ್ದಾಗಲೀ, ಸಿಎಎ-ಎನ್ಆರ್ಸಿ ಜಾರಿ ಮಾಡಿದ ಆಡಳಿತವನ್ನು ಪ್ರಶ್ನಿಸಿದ, ದೇಶದಲ್ಲಿ ಬೆಳೆಯುತ್ತಿದ್ದ ಅಸಹಿಷ್ಣುತೆಯ ವಿರುದ್ಧ ಪ್ರಶಸ್ತಿಯನ್ನು ಹಿಂದಿರುಗಿಸಿದ, ಪಠ್ಯ ಪುಸ್ತಕ ಹಗರಣದ ವಿರುದ್ಧ ಸೆಟೆದು ನಿಂತ – ಹೀಗೆ ದೇಶಕ್ಕೆ ಒದಗಿದ ಯಾವುದೇ ಕೆಡುಕಿನ ವಿರುದ್ಧ ವಿವಿಧ ಬಗೆಯ ಪ್ರತಿರೋಧವನ್ನು ದಾಖಲಿಸುತ್ತಲೇ ಬಂದಿರುವ ದೇವನೂರರ ಬಗೆ ಯಾವುದೇ ಲೇಖಕನಾಗಲೀ, ಇಂಟಲೆಕ್ಚುಯಲ್ ಆಗಲೀ ಸಮಕಾಲೀನಕ್ಕೆ ಸ್ಪಂದಿಸಬೇಕಾದ ಅಗತ್ಯವನ್ನು ಮನಗಾಣಿಸುತ್ತದೆ. ಇಂದು ಬರೆಯುತ್ತಿರುವವರಿಗೆ ಮತ್ತು ಜನಸಾಮಾನ್ಯರಿಗೆ ಮಹಾದೇವರು ಟವರಿಂಗ್ ಫಿಗರ್ ಆಗಿ, ಈ ನಾಡಿನ ಸಾಕ್ಷಿ ಪ್ರಜ್ಞೆಯಾಗಿ ಕಾಣಿಸಿಕೊಳ್ಳುತ್ತಿರುವುದು ಈ ಕಾರಣಗಳಿಗಾಗಿಯೇ. ಇದೂ ಕೂಡ ಅಪಾರ ಜನರಿಗೆ ಪುಸ್ತಕವನ್ನು ಓದುವ ಮತ್ತು ಅದನ್ನು ಇತರಿರಿಗೆ ಓದಿಸುವ ಹಂಬಲವನ್ನು ಹೆಚ್ಚಿಸಿದೆ.
ಇಡೀ ದೇಶವೇ ದ್ವೇಷದ ಮತ್ತು ಛಿದ್ರತೆಯ ಸಿದ್ಧಾಂತವನ್ನು ಒಪ್ಪಿಕೊಂಡಿದೆ ಎಂದು ಕೆಲವು ಮಾರಿಕೊಂಡ ಮಾಧ್ಯಮಗಳು ಬಿಂಬಿಸುತ್ತಿರುವಾಗ, ಸುಮಾರು 15 ದಿನಗಳಲ್ಲಿ ದೇವನೂರರ ಹೊಸ ಪುಸ್ತಕದ ಸುಮಾರು 70 ಸಾವಿರ ಪ್ರತಿಗಳನ್ನು ಜನ ಕೊಂಡು ಓದಿದ ಪರಿಸ್ಥಿತಿ ನಿರ್ಮಾಣವಾದದ್ದೇಕೆ? ಅಂದರೆ ಜನರನ್ನು ಪೋಲರೈಸ್ ಮಾಡುವ ದ್ವೇಷ ಸಿದ್ಧಾಂತದ ವಿರುದ್ಧ ಇರುವ ಜನಸಂಖ್ಯೆ ಇಂದಿಗೂ ಮೆಜಾರಿಟಿ. ಅವರನ್ನು ತಲುಪುವ, ಅವರನ್ನು ಬೆಸೆಯುವ ಕೆಲವು ಮಾರ್ಗಗಳನ್ನು ಪ್ರಭುತ್ವ ಮತ್ತು ಪ್ರಭುತ್ವವನ್ನು ನಿಯಂತ್ರಿಸುವ ಕೆಲವು ಕಾರ್ಪೊರೆಟ್ ಸಂಸ್ಥೆಗಳು ತೆಕ್ಕೆಗೆ ತೆಗೆದುಕೊಂಡು ಬೀಗುತ್ತಿವೆ. ಅದನ್ನೂ ಬೇಧಿಸಲು ಸಾಧ್ಯ ಎಂದು ’ಆರ್ಎಸ್ಎಸ್ ಆಳ ಮತ್ತು ಅಗಲ’ ಪುಸ್ತಕ ಪ್ರಕಟಣೆ, ಹಂಚಿಕೆ ಮತ್ತು ಓದು’ ಅಭಿಯಾನ ಆಂದೋಲನವಾಗಿ ರೂಪುಗೊಂಡಿರುವುದು ತೋರಿಸುತ್ತದೆ.
ಇದು ಆರ್ಎಸ್ಎಸ್ ಮತ್ತು ಅದರ ಸಿದ್ಧಾಂತಿಗಳು ಆತ್ಮಾವಲೋಕನ ಮಾಡಿಕೊಳ್ಳಲು ಸಕಾಲ. ಇನ್ನಾದರು ಮನುಧರ್ಮದ ಚಾತುರ್ವಣ್ಯವನ್ನು ತೊರೆದು, ಸಂವಿಧಾನ ಪ್ರತಿಪಾದಿಸುವ ಸಮಾನತೆಯನ್ನು ಎದೆಗೆ ಇಳಿಸಿಕೊಳ್ಳುವ ಮತ್ತು ಪ್ರಾತಿನಿಧ್ಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಸಂಘಪರಿವಾರ ಮುಂದಾಗಬೇಕು. ಛಿದ್ರತೆಯನ್ನು ಬಿಟ್ಟು ಐಕ್ಯತೆಯನ್ನು ಧ್ಯೇಯವಾಗಿಸಿಕೊಂಡು ಮುನ್ನಡೆಯುವತ್ತ ಚಿಂತಿಸಬೇಕು. ಅದಕ್ಕೆ ಅನುವು ಮಾಡಿಕೊಡಲು ಕನ್ನಡಿಗರು ಮುಂದಾಗಿದ್ದಾರೆ.