‘ಆರ್ಎಸ್ಎಸ್: ಆಳ ಮತ್ತು ಅಗಲ’- ನೋಟ- ಪ್ರತಿನೋಟ
[“ಆರ್ ಎಸ್ ಎಸ್ ಆಳ ಮತ್ತು ಅಗಲ” ಕುರಿತು 16.7.2022 ಆಂದೋಲನ ಪತ್ರಿಕೆಯ ನೋಟ-ಪ್ರತಿನೋಟದಲ್ಲಿ ಹರ್ಷಕುಮಾರ್ ಕುಗ್ವೆ ಮತ್ತು ಚೇತನ್ ಅಹಿಂಸಾ ಅವರ ಬರಹಗಳು….
ನಾಡಿನ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಇತ್ತೀಚೆಗೆ ಬರೆದ ‘ಆರ್ಎಸ್ಎಸ್: ಆಳ ಮತ್ತು ಅಗಲ’ ಕೃತಿಯು ಹೆಚ್ಚು ಪ್ರಚಾರ ಪಡೆದಿದ್ದು, ಹೆಚ್ಚು ಪ್ರಕಟಣೆಯೂ ಆಗುತ್ತಿದೆ. ಈ ಕೃತಿಯ ಆಳ ಮತ್ತು ಅಗಲದ ಬಗ್ಗೆ ನಾಡಿನಾದ್ಯಂತ ಪರ- ವಿರೋಧ ಚರ್ಚೆಗಳು ಢಾಳಾಗಿ ನಡೆಯುತ್ತಿವೆ. ಅಂತಹದ್ದೆ ವಾದಗಳನ್ನು ಇಬ್ಬರು ಪ್ರಮುಖ ಲೇಖಕರು ತಮ್ಮದೇ ಧಾಟಿಯಲ್ಲಿ ಕೃತಿ ಕುರಿತು ಅಭಿವ್ಯಕ್ತಿಸಿದ್ದಾರೆ.
ದೇಮ ಅವರ ವಿಶಾಲ ಹಿಂದೂ ಸಮಾಜವೇ ಚಾತುರ್ವರ್ಣವಾಗಿದೆ!
– ಚೇತನ್ ಅಹಿಂಸಾ, ನಟ
ಆರ್ಎಸ್ಎಸ್ ಅನ್ನುವುದು ಇನ್ನು ಮೂರು ವರುಷ ಕಳೆದರೆ ಅದು ಶುರುವಾಗಿ ನೂರು ವರುಷಗಳಾಗುತ್ತದೆ. ಅದು ಸಾಮಾಜಿಕ ಮತ್ತು ಸಾಂಸ್ಕೃತಿಕ ಉದ್ದೇಶದೊಂದಿಗೆ ಶುರುವಾದದ್ದು. ಆದರೀಗ ಇಡೀ ದೇಶವನ್ನು ಆಳುತ್ತಿದೆ. ಹೀಗಾಗಿ ಸಾಹಿತಿ ದೇವನೂರ ಮಹಾದೇವ ಅವರ ‘ಆರ್ಎಸ್ಎಸ್: ಆಳ ಮತ್ತು ಅಗಲ’ ಕೃತಿ ಪ್ರಸ್ತುತ ದಿನಗಳಿಗೆ ಬಹಳ ಅಗತ್ಯವಿದೆ ಎನಿಸುತ್ತದೆ. ಯುವಜನರಿಗೆ ಮತ್ತು ಕಲಿಯುವ ಹಂಬಲವಿರುವ ಚಿಂತಕರ ಬಳಗಕ್ಕೆ ಇದು ಅತ್ಯಗತ್ಯ ಕೂಡ. ಒಂದು ಗಂಟೆ ಅವಧಿಯಲ್ಲಿ ಯಾರು ಬೇಕಾದರೂ ಓದಿ ತಿಳಿದುಕೊಳ್ಳಬಹುದಾದ ಕೃತಿ. ಭಾಷೆ ಸರಳವಾಗಿದೆ. ಈ ಪುಸ್ತಕದಲ್ಲಿ ದೇವನೂರ ಮಹಾದೇವ ಅವರು ಗೋಲ್ವಾಲ್ಕರ್ ಮತ್ತು ವಿ.ಡಿ.ಸಾವರ್ಕರ್ ಅವರ ಸಾಕಷ್ಟು ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ. ಮರಾಠಿ, ಇಂಗ್ಲಿಷ್ ಭಾಷೆಗಳಲ್ಲಿ ಬರೆದಿರುವ ಇವರೀರ್ವರ ಮಾತುಗಳನ್ನು ಕನ್ನಡದಲ್ಲಿ ಅವರ ವಾದಗಳಿಗೆ ದೇವನೂರರು ಉತ್ತರವಾಗಿ ಬರೆದಿದ್ದಾರೆ. ಪುಸ್ತಕದ ಕುರಿತು ನನಗಿರುವ ಸೈದ್ಧಾಂತಿಕ ಭಿನ್ನಾಭಿಪ್ರಾಯವೆಂದರೆ- ಪ್ರಾರಂಭದ ೨೫ ಪುಟಗಳಲ್ಲಿ ಚಾತುರ್ವರ್ಣ ಎನ್ನುವುದೇ ಆರ್ಎಸ್ಎಸ್ ಎಂದು ಒತ್ತಿ ಹೇಳಿದ್ದಾರೆ. ಅಂದರೆ ಪುಸ್ತಕದ ೨೦ನೇ ಪುಟದಲ್ಲಿ ‘ಭಾರತದಲ್ಲಿ ಹುಟ್ಟಿದ ಜೈನ, ಬೌದ್ಧ, ಸಿಖ್,ಲಿಂಗಾಯತ ಮುಂತಾದ ಚಾತುರ್ವರ್ಣ ನಿರಾಕರಿಸುವ ಧರ್ಮಗಳ ಹಲ್ಲು, ಉಗುರು ಕಿತ್ತು, ಚಾತುರ್ವರ್ಣ ಪದ್ಧತಿಗೆ ಧಕ್ಕೆಯಾಗದಂತೆ ಉಳಿಸಿಕೊಳ್ಳಲು ಆರ್ಎಸ್ಎಸ್ ನೋಡುತ್ತದೆ’ ಎಂದು ಬರೆದಿದ್ದಾರೆ. ಹೌದು. ಬೌದ್ಧ, ಸಿಖ್, ಲಿಂಗಾಯತ, ಜೈನ ಧರ್ಮಗಳೆಲ್ಲವೂ ಚಾತುರ್ವರ್ಣವನ್ನು ಧಿಕ್ಕರಿಸಿವೆ ಎನ್ನುವುದನ್ನು ನಾನು ಕೂಡ ಒಪ್ಪುತ್ತೇನೆ. ಏಕೆಂದರೆ ಈ ನಾಲ್ಕು ಧರ್ಮಗಳು ಕೂಡ ಸಾಮಾಜಿಕ, ಆರ್ಥಿಕ ಮತ್ತು ಲಿಂಗದ ಸಮಾನತೆಯ ಮೇಲೆ ನಿಂತಿರುವ ಧರ್ಮಗಳೇ ಆಗಿವೆ. ಆದರೆ, ಆರ್ಎಸ್ಎಸ್ ಚಾತುರ್ವರ್ಣವನ್ನು ಪ್ರತಿಪಾದಿಸುತ್ತದೆ ಎಂದು ಹೇಳುತ್ತಾರೆ. ನಂತರ ಪುಟ ೨೮ರಲ್ಲಿ ‘ವಿಶಾಲವಾದ ಹಿಂದು ಸಮಾಜದಲ್ಲಿ ಇರುವ ಅಲ್ಪಸಂಖ್ಯಾತವಾದ ಈ ಗೋಮುಖ ವ್ಯಾಘ್ರದಂತಹ ಚಾತುರ್ವರ್ಣದ ಹಿಂದೂ ಪ್ರಭೇದದ ಇಂಥೆಲ್ಲಾ ಅಮಾನುಷ ಕೃತ್ಯಗಳನ್ನು ನೋಡಿಕೊಂಡು ಸುಮ್ಮನಿರದೆ, ವಿಶಾಲ ಹಿಂದೂ ಸಮಾಜ ಈ ಸಂಕಷ್ಟ ಕಾಲದಲ್ಲಿ ಮಾತಾಡಬೇಕಿದೆ’ ಎಂದು ತಿಳಿಸಿದ್ದಾರೆ. ಇಲ್ಲಿ ದೇಮ ಅವರ ಪ್ರಕಾರ ಚಾತುವರ್ಣ ಎನ್ನುವುದನ್ನು ಆರ್ಎಸ್ಎಸ್ ಪ್ರತಿಪಾದನೆ ಮಾಡುತ್ತದೆ. ಅದರಿಂದ ಸಮಾಜ ಹೊರಬರಬೇಕಾದರೆ ವಿಶಾಲವಾದ ಹಿಂದೂ ಸಮಾಜ ಮಾತನಾಡಬೇಕು ಎಂದು ತಿಳಿಸಿದ್ದಾರೆ. ಆದರೆ, ನನ್ನ ಪ್ರಕಾರ ಈ ವಿಶಾಲವಾದ ಹಿಂದೂ ಸಮಾಜವೇ ಚಾತುರ್ವರ್ಣವಾಗಿದೆ.
ಇಲ್ಲಿ ಆರ್ಎಸ್ಎಸ್ನ ಪ್ರಮುಖ ಉದ್ದೇಶವೇ ಮುಸಲ್ಮಾನರು ಮತ್ತು ಸಿಖ್ ಧರ್ಮೀಯರನ್ನು ದ್ವೇಷಿಸುವುದು. ಅವರ ಧರ್ಮಗಳು ಭಾರತೀಯ ಧರ್ಮವಲ್ಲದಿರುವ ಕಾರಣಕ್ಕೆ ಅವರನ್ನೂ ಸರಿಸಮನಾದ ಭಾರತೀಯರಲ್ಲ ಎಂದು ಪರಿಗಣಿಸಲು ಆರ್ಎಸ್ಎಸ್ ಪ್ರಯತ್ನಿಸುತ್ತಿದೆ. ಆದರೆ ಆರ್ಎಸ್ಎಸ್ ಚಾತುರ್ವರ್ಣ ಅಲ್ಲ. ಆರ್ಎಸ್ಎಸ್ ಚಾತುರ್ವರ್ಣ ಎನ್ನುವುದನ್ನು ಇನ್ನೊಂದು ರೀತಿಯಲ್ಲಿ ಕಡಿಮೆ ಮಾಡಿಕೊಳ್ಳುತ್ತದೆಯೇ ಹೊರತು ಹೆಚ್ಚು ಮಾಡಿಕೊಳ್ಳುವುದಿಲ್ಲ. ಏಕೆಂದರೆ ಅದು ಚಾತುವರ್ಣವನ್ನು ಕಡಿಮೆ ಮಾಡಿಕೊಂಡಷ್ಟು ಅವರಲ್ಲಿನ ಒಗ್ಗಟ್ಟು ಕಡಿಮೆಯಾಗುತ್ತದೆ. ಜೊತೆಗೆ ಮುಸ್ಲಿಂ, ಕ್ರಿಶ್ಚಿಯಾನಿಟಿ ಇವರ ವಿರುದ್ಧ ಸಂಪೂರ್ಣವಾಗಿ ತಿರುಗಿ ಬೀಳುವ ಸಾಧ್ಯತೆ ಇರುತ್ತದೆ. ವಿಶಾಲವಾದ ಹಿಂದೂ ಸಮಾಜದಲ್ಲಿ ಆರ್ಎಸ್ಎಸ್ನವರು ಮುಸ್ಲಿಮರೊಂದಿಗೆ ಇದ್ದು ಚಾತುರ್ವರ್ಣವನ್ನು ಉಳಿಸಿಕೊಳ್ಳುತ್ತಿದ್ದಾರೆ. ಜಿಲೇಬಿ ಸಮುದಾಯಗಳ (ಗೌಡ, ಲಿಂಗಾಯತ ಬ್ರಾಹ್ಮಣ)ಗಂಡಸರು ಇವತ್ತಿಗೂ ಆಳುತ್ತಿದ್ದಾರೆಯೇ ಹೊರತು ಅಲೆಮಾರಿಗಳು, ಹಿಂದುಳಿದ ವರ್ಗಗಳಲ್ಲ. ಇಲ್ಲಿ ಮುಖ್ಯವಾಗಿ ಮಾತನಾಡಬೇಕಾಗಿರುವುದು ಅಂಬೇಡ್ಕರ್ ವಾದಿಗಳು, ಪೆರಿಯಾರ್, ಫುಲೆ ವಾದಿಗಳು, ಸಮಾನತಾವಾದಿಗಳು, ಬುದ್ಧವಾದಿಗಳು, ಜಾತಿ ಭೇದ-ಲಿಂಗ ಭಾವನೆ ಇಲ್ಲದಿರುವವರು ಮಾತನಾಡಬೇಕಿದೆ. ಇವರ ಹೊರತಾಗಿ ವಿಶಾಲವಾದ ಹಿಂದು ಸಮಾಜವಲ್ಲ, ಹಿಂದು ಸಮಾಜ ಮಾತನಾಡಿದರೆ ಚಾತುರ್ವರ್ಣ ಇನ್ನೂ ಪ್ರಚಾರಕ್ಕೆ ಬರುತ್ತದೆಯೇ ಹೊರತು ಆರ್ಎಸ್ಎಸ್ಗೆ ಠಕ್ಕರ್ ಕೊಡಲು ಸಾಧ್ಯವಿಲ್ಲ.
ದೇಮ ಆರ್ಎಸ್ಎಸ್ ಬೇರಿಗೆ ಕೈ ಹಾಕಿದ್ದಾರೆ
– ಹರ್ಷಕುಮಾರ್ ಕುಗ್ವೆ, ಲೇಖಕ.
ಹಿರಿಯ ಸಾಹಿತಿ ದೇವನೂರ ಮಹಾದೇವ ಅವರ ‘ಆರ್ಎಸ್ಎಸ್: ಆಳ ಮತ್ತು ಅಗಲ’ ಪುಸ್ತಕದ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ಪುಸ್ತಕ ನಾಡಿನಾದ್ಯಂತ ಒಂದು ವೈಚಾರಿಕ ಸಂಚಲನವನ್ನೇ ಉಂಟು ಮಾಡಿದೆ. ಇದಕ್ಕೆ ಕಾರಣವೇನಿರಬಹುದು ಎಂದು ನೋಡಿದರೆ, ಅದು ಪುಸ್ತಕದ ಸಾರ ಮತ್ತು ಅದು ಹೊರಬಂದಿರುವ ಸಂದರ್ಭ ಎರಡೂ ಪ್ರಮುಖ ಕಾರಣಗಳಾಗಿವೆ.
ಬಿಜೆಪಿ- ಸಂಘ ಪರಿವಾರದ ತಾತ್ವಿಕತೆ ಹೇಳುವ ‘ಕನ್ನಡಿಗ’ರೊಬ್ಬರು ಬರೆದ ಯಾವುದಾದರೂ ಪುಸ್ತಕ ಇದೇ ಎಂದು ನೋಡಿದರೆ ನಾಲ್ಕೆ ದು ದಶಕಗಳ ಹಿಂದೆ ಎ.ಕೆ.ಸುಬ್ಬಯ್ಯ ಅವರು ಬರೆದ ‘ಆರ್ಎಸ್ಎಸ್ನ ಅಂತರಂಗ’ ಕೃತಿ ಮಾತ್ರ. ಈಗ ಸಮಕಾಲೀನ ಸಂಗತಿಗಳನ್ನು ಇಟ್ಟುಕೊಂಡು ಆರ್ಎಸ್ಎಸ್ನ ಬೇರಿಗೆ ಕೈ ಹಾಕುವ ಕೆಲಸವನ್ನು ದೇಮ ಅವರು ಮಾಡಿದ್ದಾರೆ. ಆರ್ಎಸ್ಎಸ್ ಎಂದರೆ ಒಂದು ಸಾಂಸ್ಕೃತಿಕ ಸಂಘಟನೆ, ದೇಶಸೇವೆ ಮಾಡುವ ಸಂಘಟನೆ ಎಂಬಂತೆ ಸಂಘ ಪರಿವಾರ ಜನರೆದುದು ಬಿಂಬಿಸಿಕೊಂಡು ಬಂದಿದ್ದರೆ, ಅದರ ವಿರೋಧಿಗಳು ಅದೊಂದು ಕೋಮುವಾದಿ ಸಂಘಟನೆ ಎಂದಷ್ಟೇ ಮಾತಾಡಿಕೊಂಡು ಬಂದಿದ್ದಾರೆ. ದೇಮ ಅವರ ಪುಸ್ತಕದ ಹೆಗ್ಗಳಿಕೆ ಇರುವುದೇ ಇಲ್ಲಿ. ಅವರು ಆರ್ಎಸ್ಎಸ್ ಕುರಿತು ಈ ಕೋಮು-ಹಿಂದೂ-ಹಿಂದುತ್ವ ನೆಲೆಯ ಚರ್ಚೆ ನಡೆಸದೇ ಅದರ ಎರಡನೇ ಸರಸಂಘಚಾಲಕ ಮಾ.ಸ.ಗೋಲ್ವಲ್ಕರ್ ಬರೆದಿರುವ ಕೃತಿಗಳನ್ನೇ ಉಲ್ಲೇಖಿಸಿ ಆಧಾರಸಹಿತವಾಗಿ ಆರ್ಎಸ್ಎಸ್ನ ತಾತ್ವಿಕತೆಯನ್ನು ಸರಳವಾಗಿ ವಿವರಿಸಿದ್ದಾರೆ. ಇಲ್ಲಿ ಕರಾರುವಾಕ್ಕಾದ ಸಂಗತಿಗಳನ್ನು ಬಹಳ ಸರಳವಾಗಿ ಹಾಗೂ ಉತ್ತಮ ರೂಪಕಗಳೊಂದಿಗೆ ಪರಿಣಾಮಕಾರಿಯಾಗಿ ನಿರೂಪಿಸಿರುವುದು ಮುಖ್ಯವಾಗುತ್ತದೆ. ದೇಮರಂತಹ ಅತ್ಯಂತ ಜನಪ್ರಿಯ ಸಾಹಿತಿ, ಲೇಖಕರು ತೀರಾ ಬೇರಿಗೇ ಇಳಿದು ‘ಇದೋ ನೋಡಿ ಇಲ್ಲಿದೆ ಆರ್ಎಸ್ಎಸ್ ಏಳು ಸಮುದ್ರದ ಆಚೆಗೆ ಕೀಳು ಸಮುದ್ರದಲ್ಲಿ ಬಚ್ಚಿಟ್ಟುಕೊಂಡಿರುವ ಪ್ರಾಣ’ ಎಂದು ತೋರಿಸಿದ ಕೂಡಲೇ ಇಂತಹದ್ದೊಂದನ್ನು ನಿರೀಕ್ಷಿಸಿ ಇರದ ಆರ್ಎಸ್ಎಸ್ ನಿಜಕ್ಕೂ ಕುಮುಟಿ ಬಿದ್ದಿದೆ. ದೇಮ ಅವರ ಪುಸ್ತಕ ವಿರೋಧಿಸಿ ಸಂಘದ ಕಾರ್ಯಕರ್ತರು ನೀಡಿರುವ ಪ್ರತಿಕ್ರಿಯೆ ಅದಕ್ಕೆ ಸಾಕ್ಷಿಯಾಗಿವೆ. ಸಂಸದ ಪ್ರತಾಪ್ ಸಿಂಹ ಅವರಂತೂ ಹುಚ್ಚುಚ್ಚಾಗಿ ಹೇಳಿಕೆ ನೀಡುತ್ತಿದ್ದಾರೆ. ದೇಮ ಅವರು ಎಷ್ಟರ ಮಟ್ಟಿಗೆ ಅಪ್ಡೇಟ್ ಆಗಿ ಈ ಪುಸ್ತಕ ಬರೆದಿದ್ದಾರೆ ಎಂದರೆ ಆರ್ಎಸ್ಎಸ್ ಪ್ರತಿಪಾದಿಸುತ್ತಾ ಬಂದಿರುವ ಆರ್ಯನ್ ತಳಿ ಶ್ರೇಷ್ಠತೆ ಬಗ್ಗೆ ಉಲ್ಲೇಖಿಸುತ್ತಲೇ ಇತ್ತೀಚೆಗೆ ನಡೆದಿರುವ ತಳಿ ಸಂಶೋಧನೆಗಳು ರಾಖಿಗಡಿ ಸಂಶೊಧನೆ ಮೂಲಕ ಹರಪ್ಪಾ ನಾಗರಿಕತೆಯಲ್ಲಿ ಆರ್ಯನ್ ವಂಶಾವಳಿ ಇರಲೇ ಇಲ್ಲ ಎಂಬ ಸಂಗತಿಯನ್ನು ವೈಜ್ಞಾನಿಕವಾಗಿ ನಿರೂಪಿಸಿರುವುದನ್ನೂ ಪುಸ್ತಿಕೆಯಲ್ಲಿ ತಿಳಿಸಿದ್ದಾರೆ. ಬಹಳ ಮುಖ್ಯವಾಗಿ, ಆರ್ಎಸ್ಎಸ್ ಎಂಬುದು ಹಿಂದೂಗಳೆಲ್ಲರ ಪ್ರತಿನಿಧಿಯಲ್ಲ, ಹಿಂದೂ ಧರ್ಮದ ಪ್ರತಿನಿಧಿಯಾಗಲೀ, ಭಾರತೀಯ ಬಹುಸಂಖ್ಯಾತರ ಪ್ರತಿನಿಧಿಯಂತೂ ಅಲ್ಲವೇ ಅಲ್ಲ. ಬದಲಿಗೆ ಅದು ವರ್ಣಾಶ್ರಮ ಸಿದ್ಧಾಂತವನ್ನು ಸಮರ್ಥಿಸಿಕೊಳ್ಳುವ ಅತ್ಯಂತ ಅಲ್ಪಜನರ ಸಂಘಟನೆಯಾಗಿದೆಯಲ್ಲದೇ ಅದರ ಇಸ್ಲಾಂ, ಕ್ರೈಸ್ತ ಧರ್ಮಗಳ ವಿರೋಧಗಳೂ ಇದೇ ಚಾತುರ್ವರ್ಣ ಮತದ ನೆಲೆಯಿಂದಲೇ ಬಂದದ್ದು ಎಂಬುದನ್ನು ಸೊಗಸಾಗಿ ವಿವರಿಸಿದ್ದಾರೆ.