ಒಂದ್ಹೊತ್ತಿನ ಸಾರಿಗೆ ಸಾವಿರ ಮೂಲಂಗಿ. -ಸುಮಿತ್ರಾಬಾಯಿ
[ದೇವನೂರ ಮಹಾದೇವ ಅವರ ಪತ್ನಿ ಪ್ರೊ.ಸುಮಿತ್ರಾಬಾಯಿ ಅವರು ಬಹಳ ಹಿಂದೆ ಬರೆದ ಈ ಲೇಖನ ದೇಮ ಸಾಹಿತ್ಯ ಕುರಿತ ಸಂಕಲನ “ಯಾರ ಜಪ್ತಿಗೂ ಸಿಗದ ನವಿಲುಗಳು” ಸಂಕಲನದಲ್ಲಿ ದಾಖಲಾಗಿದೆ.]
ಮಾದೇವ್ ನಿಯೋ ಬೇಸಾಯಗಾರರಾದ ನಂತರ ತರಕಾರಿ, ಹಣ್ಣು, ಕಾಡು, ಗಿಡ, ಮರಬಳ್ಳಿ, ಹೂವು, ಕಾಯಿ, ಅಣಬೆ, ರೇಷ್ಮೆ
ಕಡ್ಡಿ ಮತ್ತು ಹುಳು, ಬೇರು, ನಾರು ಮುಂತಾಗಿ.., ಮುಂತಾಗಿ… ಈ ಎಲ್ಲವುಗಳ ಬಗ್ಗೆ ಲಭ್ಯವಿರುವ ಸಣ್ಣ-ದೊಡ್ಡ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿರುವ ಗ್ರಂಥಗಳನ್ನೆಲ್ಲ ಹಗಲೂ ರಾತ್ರಿ ಸುಮಾರು ಎರಡು ತಿಂಗಳುಗಳ ಕಾಲ ಅಭ್ಯಸಿಸಿದರು. ಅನಂತರ ಮೂರು ಮುಖ್ಯ ವಿಷಯಗಳನ್ನು ಮನನ ಮಾಡಿಕೊಳ್ಳಲಾಯಿತು.
1.ಕಡಿಮೆ ಶ್ರಮದಿಂದ ಹೆಚ್ಚು ಲಾಭ ಗಳಿಸುವುದು ಅಂದರೆ ಮಹಾ ಸೋಮಾರಿಯಾಗೇ ಉಳಿದುಕೊಳ್ಳುವ ತಂತ್ರ
2.ಕಡಿಮೆ ಅವಧಿಯಲ್ಲಿ, ಕನಿಷ್ಠ ಖರ್ಚಿನಲ್ಲಿ ಕೈಗೆ ಬರುವ ತರಕಾರಿಗಳ ಆಯ್ಕೆ- ಏಕೆಂದ್ರೆ ಬೀಡಿ, ಸಿಗರೇಟು ವಗೈರೆಗಳ ಬಗ್ಗೆ ಕಾಳಜಿ ವಹಿಸಲು,
3. ಯಾವ ಯಾವ ತರಕಾರಿಗಳಿಗೆ ಯಾವ ಕಾಲದಲ್ಲಿ ಹೆಚ್ಚು ಬೆಲೆ ಸಿಗುತ್ತದೆ ಎಂಬ ಬಗ್ಗೆ ಸುಮಾರು ಅಂಗಡಿಗಳಿಗೆ ಅಲೆದು,
ಒಂದು ಸಮೀಕ್ಷೆಯನ್ನೇ ನಡೆಸಲಾಯಿತು- ಕಾರಣ ದಿಢೀರನೆ ದೊಡ್ಡ (ತೂತು) ಜೇಬುಗಳನ್ನು ತುಂಬಿಸಲು,
ಇಷ್ಟೆಲ್ಲ ಚಿಂತನೆಯ ನಂತರ, ಹಲವಾರು ಅಂಗಡಿಗಳಲ್ಲಿ ವಿಚಾರಿಸಿ “The Best’ ಎಂದು ಪ್ರಥಮವಾಗಿ ಮೂಲಂಗಿ, ಹಲಸಂದೆ ಮತ್ತು ಹುರುಳಿಕಾಯಿ ಬೀಜಗಳನ್ನು ತಂದರು. ನಾನು ಮತ್ತು ಮಕ್ಕಳು ತುಂಬಾ ಉತ್ಸಾಹದಿಂದ ಇವರ ಕಾರ್ಯಕ್ರಮಗಳನ್ನೆಲ್ಲ ಸ್ವಾಗತಿಸಿದೆವು. ‘ನೋಡ್ರೋ… ನಾಳೇನೇ ಈ ಬಿತ್ತನೆಲ್ಲ ನೆಡುಸ್ತೀನಿ, ನೀವೆಲ್ಲ ಎರಡು ವಾರ ಬಿಟ್ಕಂಡ್ ಜಮೀನಿಗೆ ಬನ್ನಿ’ ಎಂದು ಹುಸಿ ನಗೆ ಸೂಸಿ ಜಮೀನಿಗೆ ಹೊರಟರು. ನಾವೆಲ್ಲರೂ ಬಹಳ ಕಾತರದಿಂದ ಎರಡು ವಾರಗಳನ್ನು ಯುಗಗಳಂತೆ ಕಳೆದೆವು. ಅಂತೂ ಜಮೀನಿಗೆ ಹೊರಡುವ ದಿನ ಬಂದೇಬಿಟ್ಟಿತು. ನಾನು (ಮಕ್ಕಳಿಗಿಂತ first ನೋಡಲು) ದೇಮಾ ಜೊತೆ ಲೂನಾದಲ್ಲಿ ಹೊರಟೆ, ನಮ್ಮ ಮನೆಯಿಂದ ಜಮೀನು ೧೨ ಕಿ.ಮೀ. ದೂರದಲ್ಲಿದ್ದು, ಅರ್ಧ ಗಂಟೆಯಲ್ಲಿ ತಲುಪಬಹುದು. ದಾರಿಯುದ್ದಕ್ಕೂ ತರಕಾರಿ ಗಿಡಗಳದ್ದೇ ಕನಸು. ಎಷ್ಟುದ್ದ ಬೆಳೆದಿರಬಹುದು? ಹೆಂಗೆ ಕಾಣ್ತಿರಬಹುದು? …ನೆಲವೇ ಕಾಣಿಸದಷ್ಟು ಹಸುರಾಗಿರಬಹುದೇ?… ಎಂಬಿತ್ಯಾದಿಯಾಗಿ ಯೋಚಿಸುತ್ತಾ… “ಮಾದೇವ್… ಬೀಜಗಳೆಲ್ಲಾ ಚೆನ್ನಾಗಿ ಮೊಳೆತಿದ್ದಾವಾ? ಎಷ್ಟೆಲೆ ಇಕ್ಕವೆ (ಹುಟ್ಟಿದೆ)’ ಎಂದು ಕೇಳುವ ನನ್ನ ಪ್ರಶ್ನೆಗಳಿಗೆ, ದೇಮಾ.. “ಓ ಫಸ್ಟ್ ಕ್ಲಸ್ ಆಗದೆ, ನಿಮ್ಮನ್ನೆಲ್ಲಾ ತಲೆಕುಣಿಸ್ಕೊಂಡು ಕೇಳ್ತಿದ್ದಾವಪ್ಪಾ…’ ಎಂದು ನನ್ನ ಕುತೂಹಲವನ್ನು ಇಮ್ಮಡಿಗೊಳಿಸುವಷ್ಟರಲ್ಲಿ ಜಮೀನು ಬಂದೇಬಿಟ್ಟಿತು! ನೋಡಾಡ್ತಾ ಓಡಿಕೋತಾ.. ಮೂಲಂಗಿ ಹೊಲವನ್ನು ಹುಡುಕಾಡಿದೆ.
‘ಏ ಮಾದೇವ್… ನೀವೆಲ್ರೀ ಮೂಲಂಗಿ ನೆಟ್ಟಿರೋದು’ ಎಂದು ದನಿ ಏರಿಸಿದೆ. ‘ಅದೋ ನಿನ್ ಮುಂದ್ದಡೇನೇ ಅವಲ್ಲ, ಕಾಣಾಕಿಲ್ವೇನು?’ ಎಂದು ರೇಗಿದರು. ಆಗ ನಾನು ಕಣ್ಣು ಕೀಲಿಸಿ ನೆಲವನ್ನು ನೋಡಿದೆ- ಅಲ್ಲೇನಿದೆ? ಹುಳು ಹಿಡಿಯಲು ರೆಡಿಯಾದ ಒಂದೊಂದು ಎಲೆಯ ಗಿಡಗಳು ಅಕ್ಕಕ್ಕಲಾಗಿ (ದೂರ ದೂರಕ್ಕೆ) ನಿಂತಿದ್ದವು!! ಇದ್ಯಾವ ಮೂಲಂಗಿ ಗಿಡವಪ್ಪಾ ಇಂಥವುನ್ನ ನಾಕಂಡೇ ಇಲ್ವಲ್ಲಾಂತ ಅಚ್ಚರಿಪಡುತ್ತಾ… ‘ಇದ್ಯಾಕ್ ಹಿಂಗವಲ್ಲಾ?’ ಅಂತ ಮಂಡ್ಯ ಧಾಟಿಯಲ್ಲಿ ರಾಗವೆಳೆದೆ. ‘ಅದಾ …ಬೀಜ ಸರ್ಯಾಗಿ ಹುಟ್ಟಿಲ್ಲ. ಯಾಕೋ ನನ್ಮಗಂದು ಕೈಕೊಡ್ತು’ ಅಂತ ಅಂದ ಕೂಡ್ಲೆ ನನಗಂತೂ ಕ್ವಾಪ್ ಉಕ್ಕಿ… ‘ಅದ್ಯಾವೋನು ಮೂಲಂಗಿಯ ಹಿಂಗೆ ನೆಡು ಅಂದೋನು’ ಅಂತ ಅಂದೆ. ‘ಇನ್ನೆಂಗ್ ಹಾಕಾರೂ ಉತ್ತಾದ್ಮೇಲೆ ಜ್ವಾಳಾ ಚೆಲ್ವಂಗೆ (ಚೆಲ್ಲುವಂತೆ) ಚೆಲ್ಲುಸ್ ಬುಟ್ಟಿ’ ಅಂದರು! ಈ ಮಾತ್ಗೆ ರಂಗ್ ಮಂಗ್ಳಿಡಿದಂಗಾಗಿ (ಏನು ತೋಚದೆ) ಉಳಿದವಾದ್ರೂ ಚೆನ್ನಾಗಿರಬಹುದು ಎಂದು ಸಂತೈಸಿಕೊಂಡು, ಅಲ್ಲೇ ಪಕ್ಕಕ್ಕೆ ಕಣ್ಣು ಹೊರಳಿಸಿದರೆ, ಎರಡೆರಡು ಕೊಂಬುಗಳ ಥರ ಕಡ್ಡಿಗಳು ಕಾಣ್ತಿದ್ದವು. ಅವೇನು ಅಂತ ಬಗ್ಗಿ ನೋಡಿದ್ರೆ ‘ಹೈಬ್ರಿಡ್’ ತಗಣೀ ಕಾಯ್ದಳು. ಎರಡೆರಡು ಎಲೆಗಳ ಮೇಲೆ ಎರಡು ತಗಣೀ ಚೊಟ್ಟುಗಳು ನೆಟ್ಟಗೆ ಆಕಾಶ ನೋಡ್ತ ನಿಂತಿದ್ದೋ, ನನಗಂತೂ ಎಲ್ಲಿಲ್ಲದ ನಗು ಬಂದೋಯ್ತು, ದೇಮಾ ಕಕ್ಕಾಬಿಕ್ಕಿಯಾಗಿ ಇದೇನಾಯ್ತು ಇವಳಿಗೆ ಎಂದು ವಿಸ್ಮಯದಿಂದ ನೋಡಿದರು. ಅಂತೂ ಹಸಿ ತಗಣಿ ಕಾಳಿನ ರುಚಿ ನೋಡ್ಲಿಲ್ಲ ಅನ್ನಿ, ಆದ್ರೆ ಮೂಲಂಗಿಗಳು ಮಾತ್ರ ಒಂದು ಸಣ್ಣ ಮೂಟೆಯಲ್ಲಿ ಮನೆಗೆ ಬಂದವು. ನಮ್ಮ ಸ್ನೇಹಿತರ ಮನೆಗಳಿಗೆಲ್ಲಾ ಖುಷಿಯಿಂದ ಮೂಲಂಗಿ ಬೇರುಗಳ ರವಾನೆಯಾಯ್ತು. ದೇಮಾರವರ ತಮ್ಮ.. ಸ್ನೇಹಿತ ಗೋವಿಂದಯ್ಯನ ಜೊತೆ… ‘ನಮ್ಮಣ್ಣ ಮೂಲಂಗ್ಯ ಬೆಳೆದವ್ನೆ… ಇನ್ಯಾಕ.. ನಮ್ಮನೆ ಒಂದೊತ್ತಿನ್ ಸಾರಿಗೆ ಒಂದ್ಸಾವ್ರ ಬೇಕಾಯ್ತೆ ಕಯ್ಯೋ… ಒಂದ್ಸಾವ್ರೇ’ (1೦೦೦) ಎಂದು ನಗಾಡಿದರಂತೆ!!