ದೇವನೂರರ “ಎದೆಗೆ ಬಿದ್ದ ಅಕ್ಷರ” ಓದು ಸರಣಿ -17 //ಎಚ್.ಎನ್.ನಿಶಾಂತ್ //
[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “‘ಇಂಥ ಪರಿಸ್ಥಿತಿ ಬರಬಾರದಾಗಿತ್ತು’.” ಬರಹದ ವಾಚನ ಎಚ್.ಎನ್.ನಿಶಾಂತ್ ಅವರಿಂದ.]
‘ಇಂಥ ಪರಿಸ್ಥಿತಿ ಬರಬಾರದಾಗಿತ್ತು’
‘ದ್ವೇಷ ಬಿಟ್ಟು ದೇಶ ಕಟ್ಟು’ ಆಂದೋಲನಕ್ಕಾಗಿ ಇಂದು ಮೈಸೂರಿನ ಹಿರಿಯ ಜೀವಿಗಳು ಅಂದರೆ ಮೈಸೂರಿನ ವಿವೇಕ ಇಲ್ಲಿ ಸೇರಿದೆ. ಈ ಹಿರಿಯ ಜೀವಿಗಳು ಒಕ್ಕೊರಲಿನಿಂದ ಎಲ್ಲ ಜಾತಿ ಧರ್ಮಗಳ ಜನರೂ ಸಹನೆ ಪ್ರೀತಿಯ ಸಹಬಾಳ್ವೆ ಮಾಡುವಂತೆ ಕೈ ಮುಗಿದು ಕೇಳಿವೆ.
ಇಂಥ ಪರಿಸ್ಥಿತಿ ಬರಬಾರದಿತ್ತು- ಅಂದರೆ ದೊಡ್ಡವರು ಹೀಗೆ ಕೈ ಮುಗಿದು ಕೇಳಿಕೊಳ್ಳುವಂತಹ ಪರಿಸ್ಥಿತಿಯನ್ನು ಯುವಜನತೆ ಹಾಗೂ ನಾಗರಿಕರು ತಂದುಕೊಳ್ಳಬಾರದಿತ್ತು. ಇಂದು ಕುಣಿಯುತ್ತಿರುವ ಮತಾಂಧತೆ- ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಅಥವಾ ಯಾವುದೇ ಜಾತಿ ಜನಾಂಗದ್ದೇ ಇರಲಿ- ಇವುಗಳೆಲ್ಲ ಒಂದೇ ತಾಯಿಯ ಸಂತಾನ. ಇವುಗಳ ಬಹಿರಂಗ ಬೇರೆ ಬೇರೆಯಾಗಿ ಕಾಣಬಹುದು. ಆದರೆ ಇವುಗಳ ಅಂತರಂಗ ಒಂದೇ. ಯಾರದೇ ಮತಾಂಧತೆಯು ತಿಂದು ಹಾಕುವುದು ಮಾನವತೆಯನ್ನು ಮಾತ್ರ. ಹಿಡಿಯಷ್ಟು ಇರುವ ಮತಾಂಧತೆಗೆ ಸುಮ್ಮನೆ ವೀಕ್ಷಕರಾಗಿರುವ ಬಹುಸಂಖ್ಯಾತ ಜನ ಸಮುದಾಯ ಬೆಚ್ಚಿ ಅಸಹಕಾರ ತೋರಿದರೆ ಮಾತ್ರ ಈಗ ಉಳಿಗಾಲವಿದೆ. ಇಲ್ಲದಿದ್ದರೆ ಯಾವುದೇ, ಯಾರದೇ ಮತಾಂಧತೆಯು ಮೊದಲು ಮಾಡುವುದು ತನ್ನವರ, ತನಗೆ ಸೇರಿದವರ ಕಣ್ಣುಗಳನ್ನು ಕಿತ್ತು ಅಂಧರನ್ನಾಗಿಸುವುದು. ಆಮೇಲೆ ಮಿದುಳು ಕಿತ್ತು ವಿವೇಕಶೂನ್ಯರನ್ನಾಗಿಸುವುದು. ನಂತರ ಹೃದಯ ಕಿತ್ತು ಕ್ರೂರಿಗಳನ್ನಾಗಿಸುವುದು. ಆಮೇಲೆ ನರಬಲಿ ಕೇಳುವುದು. ಇಂದು ಇದು ಹೆಚ್ಚುತ್ತಿದೆ.
ಬಹಳ ತುರ್ತಾಗಿ ನಮ್ಮ ಮಕ್ಕಳ ಕಣ್ಣು ಹೃದಯ ಮಿದುಳುಗಳನ್ನು ಮತಾಂಧತೆಯ ದವಡೆಯಿಂದ ರಕ್ಷಿಸಬೇಕಾಗಿದೆ. ಇಂಥ ಸಂದರ್ಭದಲ್ಲಿ ಇಲ್ಲಿ ಸೇರಿರುವ ದೊಡ್ಡಜೀವಗಳ ತುಡಿತಕ್ಕೆ ಕೃತಜ್ಞತೆ ಸಲ್ಲಿಸುವೆ.