ದಂತಕಥೆಯ ನಾಯಕ -ದೇವನೂರ ಮಹಾದೇವ
[23.4.2022ರಂದು ಹಾಸನದಲ್ಲಿ, ಬಿ.ವಿ.ಚಂದ್ರಪ್ರಸಾದ್ ತ್ಯಾಗಿ ಹೋರಾಟದ ಕಥನ “ತ್ಯಾಗಿ” ಕೃತಿ ಬಿಡುಗಡೆ ಹಾಗೂ ವಿಚಾರಸಂಕಿರಣ ಕಾರ್ಯಕ್ರಮದಲ್ಲಿ ಬಿಡುಗಡೆಯಾದ ‘ತ್ಯಾಗಿ’ ಪುಸ್ತಕದಲ್ಲಿ ದಾಖಲಾದ ದೇವನೂರ ಮಹಾದೇವ ಅವರ ಬರಹ ನಮ್ಮ ಓದಿಗಾಗಿ…]
ತ್ಯಾಗಿಯ ಜೊತೆ ನಾನು ಒಡನಾಡಿದ್ದು ಬಹಳ ಕಡಿಮೆ. ಆದರೆ ತ್ಯಾಗಿಯ ನಾಡಿಮಿಡಿತ ನನಗೆ ಗೊತ್ತಿತ್ತು. ಅವನು ಶಿವಮೊಗ್ಗ, ಹಾಸನದಲ್ಲಿ ಇದ್ದರೂ ಅಪರೂಪಕ್ಕೆ ನನಗೆ ಸಿಗುತ್ತಿದ್ದ. ತ್ಯಾಗಿ ದಲಿತ ಸಮುದಾಯಕ್ಕೆ ಸೇರಿದವನು ಎನ್ನುವ ವ್ಯಕ್ತಿತ್ವದವನಲ್ಲ. ಆತ ಸಮುದಾಯದ ಸುಪ್ತ ಮನಸ್ಸಿನ ವಿವೇಕದ ಪ್ರತಿರೂಪದಂತೆ ಇದ್ದ. ಅಕಸ್ಮಾತ್ ಆತ ಕೊಳಚೆ ನಿರ್ಮೂಲನಾ ಮಂಡಳಿಯ ಚೇರ್ಮನ್ ಆಗದೇ ಬರಿ ಎಂ.ಎಲ್.ಸಿ ಆಗಿದ್ದಿದ್ದರೆ, ಆತನ ಸಾಮರ್ಥ್ಯ ಏನು ಅಂತ ನಮಗೆ ಅರ್ಥವಾಗುತ್ತಿತ್ತು. ನನಗೆ ಸುಮಾರು ಸಾರಿ ಅನ್ನಿಸಿದೆ ಆತ ಬೋರ್ಡ್ ಚೇರ್ಮನ್ ಆಗಿದ್ದೇ ಎಡವಟ್ಟಾಯಿತು ಅಂತ. ಇದರಿಂದ ತ್ಯಾಗಿ ತನ್ನನ್ನು ಸರಿಯಾಗಿ ಅಭಿವ್ಯಕ್ತಿಸಿಕೊಳ್ಳಲಿಕ್ಕೆ ಸಾಧ್ಯವಾಗಲಿಲ್ಲ. ಇದು ನನಗೆ ತುಂಬಾ ಸಲ ಕಾಡಿದೆ.
ಸುಮಾರು ಇನ್ನೂರು ವರ್ಷಗಳ ಹಿಂದೆ ತ್ಯಾಗಿ ಹುಟ್ಟಿದ್ದರೆ ಏನಾಗುತ್ತಿತ್ತು? ಆತ ಮಾಡಿದ ಹೋರಾಟಗಳು, ಆತ ಆಡುತ್ತಿದ್ದ ಮಾತುಗಳು, ಆತನ ಸಂಬಂಧಗಳು, ಹೇಗಿರುತ್ತಿದ್ದೋ? ಇದು ಕುತೂಹಲಕ್ಕೆ ಆಗಾಗ ನನ್ನ ಮನಸ್ಸಿಗೆ ಬರುತ್ತದೆ. ತ್ಯಾಗಿ ಇನ್ನೂರು ವರ್ಷಗಳ ಹಿಂದೆ ಹುಟ್ಟಿ, ಐವತ್ತು ಅರವತ್ತು ವರ್ಷ ಬದುಕಿ ಸತ್ತಿದ್ದರೆ, ಆತನ ಮೇಲೆ ಲಾವಣಿಗಳು, ಕಥೆಗಳು ಹುಟ್ಟಿಕೊಳ್ಳುತ್ತಿದ್ದೋ. ಅಂದರೆ, ಲೆಜೆಂಡ್ ಹೀರೋ ಥರ, ದಂತಕತೆಯ ನಾಯಕನ ಥರ ತ್ಯಾಗಿಯ ಮೇಲೆ ಕಥೆಗಳು ಹುಟ್ಟಿಕೊಳ್ಳುತ್ತಿದ್ದೋ. ನೆನಪಿನ ಕಾರ್ಯಕ್ರಮ ರೂಪಿಸಿದಾಗ ನಾನು ಗೆಳೆಯರಿಗೆ “ಈ ಥರದ ಸಮಾರಂಭ ಮಾಡಬೇಡಿ. ನಮ್ಮ ಹತ್ತಿರ ಮಾತಾಡಿಸಬೇಡಿ. ಇದಕ್ಕೆ ಬದಲು ತ್ಯಾಗಿ ಮಾಡಿದ ಹೋರಾಟ, ಆ ಸಂದರ್ಭದಲ್ಲಿ ಆತ ಅನುಭವಿಸಿದ ಅವನ ಕಥೆಗಳನ್ನು ಸಂಗ್ರಹಿಸಿ ಆತನ ಕೆಲವು ವಿಶೇಷ ಫೋಟೋಗಳನ್ನು ಸಂಗ್ರಹಿಸಿ, ಆತನ ಮೇಲೆ ಲಾವಣಿ ಕಟ್ಟಿ ಹಾಡಿಸೋಣ, ದಯಮಾಡಿ ತ್ಯಾಗಿ ಬಗ್ಗೆ ಒಂದು ಪುಸ್ತಕ ತನ್ನಿ” ಅಂತ ಹೇಳಿದೆ. ಯಾಕೆಂದರೆ ತ್ಯಾಗಿ ಸಾಯುವಂತಹ ಚೇತನ ಅಲ್ಲ.
ವಾಸ್ತವವಾಗಿ ತ್ಯಾಗಿ ಇಲ್ಲ ಎಂಬುದನ್ನು ನಾನು ಯೋಚಿಸುವುದಕ್ಕೆ ಇಷ್ಟಪಡಲ್ಲ. ತ್ಯಾಗಿ ಕೊನೆಕೊನೆಗೆ ಎಂತಹ ಯಾತನೆಯನ್ನು ಅನುಭವಿಸುತ್ತಿದ್ದ ಅಂದರೆ, ಈ ಹಿಂಸೆ, ಯಾತನೆಯನ್ನು ಅನುಭವಿಸುವುದಕ್ಕಿಂತ ತ್ಯಾಗಿ ಸತ್ತರೆ ಸಾಕಪ್ಪ ಅನಿಸುತ್ತಿತ್ತು. ಅದನ್ನು ನೆನಪಿಸಿಕೊಳ್ಳಲಿಕ್ಕೆ ಇಷ್ಟಪಡಲ್ಲ. ಅವನು ಮೈಸೂರು ಆಸ್ಪತ್ರೆಗೆ ಬಂದಾಗ ನನಗೆ ಅನ್ನಿಸಿದ್ದು, ‘ನಾನು ಸತ್ತರೆ ಮೈಸೂರಲ್ಲೇ ಸಾಯುವೆ. ಇಲ್ಲ ಬದುಕಿದರೆ ಹಾಸನಕ್ಕೆ ಹೋಗುವೆ’ ಅಂತ ನಿರ್ಧರಿಸಿಕೊಂಡು ಬಂದಿದ್ದಾನೇನೊ ಅನ್ನುವ ಅನುಮಾನದ ಎಳೆ ನನ್ನ ಮನಸ್ಸಿಗೆ ಬಂತು.
ನಾನು ‘ಕುಸುಮಬಾಲೆ’ಯಲ್ಲಿ ತ್ಯಾಗಿ ಬಗ್ಗೆ ಒಂದೆರಡು ವಾಕ್ಯ ಬರೆದಿದ್ದೇನೆ. ದಲಿತ ಸಂಘರ್ಷ ಸಮಿತಿ ಜೀತ ವಿಮೋಚನೆ ಬಗ್ಗೆ ಮಾರಿಗುಡಿಯಲ್ಲಿ ಸಭೆ ಮಾಡುತ್ತಿರುತ್ತದೆ. ಆ ಸಭೆಗೆ ದಸಂಸದ ನಾಯಕರೆಲ್ಲ ಒಬ್ಬೊಬ್ಬರಾಗಿ ಬೇರೆಬೇರೆ ಊರುಗಳಿಂದ ಬಂದು ಸೇರುತ್ತಿರುತ್ತಾರೆ. ನಾನು, ತ್ಯಾಗಿ ಬಗ್ಗೆ ಏನು ಬರೆದಿದ್ದೇನೆ, ಅದು ಈ ರೀತಿ ಇದೆ: ‘ದಾನದಾನಕ್ಕಿಂತ ಹೆಚ್ಚಾದ ನಿಧಾನದಲ್ಲೇ ತ್ಯಾಗಪ್ಪನವರು ಹಾಸನದಿಕ್ಕಿಂದ ಮಾರಿಗುಡಿಗೆ ಬಂದಿಳಿಯುತ್ತಲೇ ಅಲ್ಲೊಂದು ದೊಡ್ಡ ತಂಬಿಟ್ಟಿನ ಮುದ್ದೆ ಇಟ್ಟಂತಾಯಿತಲ್ಲ’ ಅಂತ ಬರೆದಿದ್ದೇನೆ. ತ್ಯಾಗಿನ ತಂಬಿಟ್ಟಿನ ಮುದ್ದೆ ಅಂತ ಬರೆದಿದ್ದೇನೆ. ತಂಬಿಟ್ಟಿನ ಮುದ್ದೆ ದೇವರಿಗೆ ಅರ್ಪಣೆಯ ವಸ್ತು ಮತ್ತು ತಂಪಾದದ್ದು. ಜೊತೆಗೆ ಸಮುದಾಯದ ಆಚರಣೆಗೆ ಸೇರಿದ್ದು. ವಿಚಿತ್ರ ಅನ್ನಿಸುತ್ತೆ. ಇದನ್ನು ನಾನು ಹೇಗೆ ಬರೆದೆ ಅಂತ. ಇಷ್ಟೆಲ್ಲಾ ಗುಣಗಳು ತ್ಯಾಗಿಯಲ್ಲಿದ್ದೋ. ಮುಂದೆ ಇನ್ನೊಂದು ವಾಕ್ಯ ಬರುತ್ತೆ: ‘ಅವರ ಅಕ್ಕಪಕ್ಕದಲ್ಲಿದ್ದವರಿಗೆ ಹುಲಿ ಭಯ ಹುಟ್ಟಿಸ್ತ ಕೋಟೆಯ ಹುಲಿ ಬೆಟ್ಟಯ್ಯ, ತ್ಯಾಗಿಯ ಪಕ್ಕದಲ್ಲಿ ಮೂಗುಬಸಪ್ಪನ ತರ ರಾಕೆ ಕುಳಿತಿದ್ದರು’ ಅಂತ ಬರೆಯುತ್ತೇನೆ. ತ್ಯಾಗಿಯ ಪಕ್ಕದಲ್ಲಿ ಎರಡು ವಿರುದ್ಧಗಳನ್ನು ಕೂರಿಸಿದ್ದೇನೆ. ಅಂದರೆ ಒಂದು ಹುಲಿ, ಇನ್ನೊಂದು ಹಸು. ಏಕೆಂದರೆ ತ್ಯಾಗಿಗೆ ಎರಡು ವಿರುದ್ಧಗಳನ್ನು ಸಮತೋಲನ ಮಾಡುವ ಮತ್ತು ಸಾಮರಸ್ಯಕ್ಕೆ ತರುವ ಶಕ್ತಿ ಇತ್ತು. ಒಟ್ಟಿನಲ್ಲಿ ತ್ಯಾಗಿ ದಲಿತ ನಾಯಕ ಮಾತ್ರವಲ್ಲ. ಸಮುದಾಯದ ಮನಸ್ಸಿನ ವಿವೇಕ.
[ಮೈಸೂರಿನ ಕಲಾಮಂದಿರದಲ್ಲಿ 28.5.2006ರಂದು ನಡೆದ ತ್ಯಾಗಿಯವರ ನೆನಪಿನ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಅಕ್ಷರ ರೂಪ]