ಹಲಾಲ್, ಜಟ್ಕಾ ವಿವಾದದ ಸುಳಿಯಲ್ಲಿ – ದೇವನೂರ ಮಹಾದೇವ
[ಹಲಾಲ್ ಕಟ್ ಮಾಂಸ ಖರೀದಿಸದಂತೆ, ನಿಷೇಧಕ್ಕೆ ಹಿಂದೂ ಸಂಘಟನೆಗಳು ನೀಡಿದ್ದ ಕರೆಯನ್ನು ವಿರೋಧಿಸಿ ದೇವನೂರ ಮಹಾದೇವ ಮತ್ತು ಸಂಗಡಿಗರು 3.4.2022 ರಂದು ಮಾಂಸ ಖರೀದಿಸಿದ ನಂತರ ಆಡಿದ ಮಾತುಗಳ ಬರಹ ರೂಪ]
ಇಂದು, ಮಾಂಸವನ್ನು ಎಂದೂ ತಿನ್ನದ ಪ.ಮಲ್ಲೇಶ್ ಅವರು ಹಲಾಲ್ ಮಾಂಸ ಕೊಂಡುಕೊಂಡಿದ್ದಾರೆ! ಇದು ನಿಜಕ್ಕೂ ಚಾರಿತ್ರಿಕ. ಮಲ್ಲೇಶ್ ಇಂದಿನ ವಿಷಮಯ ವಾತಾವರಣ ಕಂಡು ಜಿಗುಪ್ಸೆಗೊಂಡು ಈ ರೀತಿ ಅಭಿವ್ಯಕ್ತಿ ವ್ಯಕ್ತ ಪಡಿಸಿದ್ದಾರೆ. ನೊಂದವರಿಗೆ ಏನೋ ಒಂದಿಷ್ಟು ಸಾಂತ್ವಾನ ನೀಡಿದ್ದಾರೆ. ಇದು ಸಣ್ಣ ಕ್ರಿಯೆಯಾದರೂ ಅದು ಹಣತೆಯ ಬೆಳಕಿನಂತೆ.
ನಮ್ಮ ಹಳ್ಳಿ ಕಡೆ ಒಂದು ಮಾತಿದೆ – “ಆಯ್ದುಕೊಂಡು ತಿನ್ನೋ ಕೋಳಿಗೆ ಕಾಲು ಮುರಿಯಬಾರದು” ಅಂತ. ಹಾಗೇ ಇನ್ನೊಂದು ಮಾತೂ ಇದೆ – “ಹೊಟ್ಟೆಗೆ ಹೊಡೆಯಬಾರದು, ಅದು ಅಧರ್ಮ, ಪಾಪ” ಅಂತ. ಇಂದು ನಮ್ಮ ಸುತ್ತಮುತ್ತ ಇವೇ ಆಗುತ್ತಿವೆ. ಒಂದು ಉದಾಹರಣೆ – ಹಳೇಪೇಪರ್, ಖಾಲಿಬಾಟಲ್, ಹಾಲಿನ ಕವರ್ ಮಾರಲು ನಾನು ಕಾಯುತ್ತಿದ್ದೇನೆ. ಕೊಂಡುಕೊಳ್ಳುವವರು ಯಾರೊಬ್ಬರೂ ಕಾಣುತ್ತಿಲ್ಲ. ಕಲುಷಿತ ವಾತಾವರಣದಿಂದ ನಿಶ್ಯಬ್ಧರಾಗಿದ್ದಾರೆ. ಎಲ್ಲಿದ್ದಾರೋ ಏನು ಮಾಡುತ್ತಿದ್ದಾರೊ ಗೊತ್ತಿಲ್ಲ.
ಹಳೇಪೇಪರ್, ಹಾಲಿನ ಕವರ್, ಖಾಲಿ ಬಾಟಲ್ ಮಾರಾಟದಿಂದಾಗಿ ಇವುಗಳ ಪುನರ್ ಬಳಕೆಯಾಗುತ್ತಿತ್ತು. ಈಗ ಈ ಕಾಯಕ ನಿಂತಿದೆ. ಇದರಿಂದಾಗಿ, ಪೇಪರ್ ಗಾಗಿ ಮರ ಕಡಿಯುವುದು ಹೆಚ್ಚುತ್ತದೆ. ಪರಿಣಾಮವಾಗಿ ಬಿಸಿಲು ಏರುತ್ತದೆ. ಕಾರ್ಬನ್ ಡೈಆಕ್ಸೈಡ್ ಹೆಚ್ಚುತ್ತದೆ. ಭೂಮಿ ಬೇಯುತ್ತದೆ. ಪ್ಲಾಸ್ಟಿಕ್ ತ್ಯಾಜ್ಯ ಭೂಮಿಗೆ ಸೇರುವುದರಿಂದಲೂ ಭೂಮಿ ಅನಾರೋಗ್ಯವಾಗುತ್ತದೆ. ಇದನ್ನು ಸ್ವಲ್ಪಮಟ್ಟಿಗೆ ತಪ್ಪಿಸುತ್ತಿದ್ದ ಹಳೆಪೇಪರ್ ಮಾರಾಟದ ಕಾಯಕ ಜೀವಿಗಳು ಮಾಡುತ್ತಿದ್ದುದು ನಿಜಕ್ಕೂ ಭೂಮಿ ಸೇವೆ. ಇದೇ ದೇಶಸೇವೆ. ಇದು ಬಹುಶಃ ಆ ಕಾಯಕ ಜೀವಿಗಳಿಗೂ ಗೊತ್ತಿಲ್ಲ. ಸಮಾಜಕ್ಕೂ ಗೊತ್ತಿಲ್ಲ. ಇದು ದುರಂತ. ಆಯ್ತು, ಕಾವಿ ಬಟ್ಟೆ ತೊಟ್ಟು, ಇಂದು ಆರ್ಭಟಿಸುತ್ತಿರುವ ಮಠಮಾನ್ಯ ಸಂಘಟನೆಗಳು ತಮ್ಮ ಮರಿಗಳಿಂದ ‘ಅಹಂಕಾರ ನಿರಸನ ಕ್ರಿಯೆ’ಗಾಗಿ ಈ ಕಾಯಕ ಮಾಡಿಸಬಹುದಲ್ಲ?
ದ್ವೇಷ ಅಸಹನೆಯ ಕುಸಂಸ್ಕೃತಿಯ ರಂಗಪ್ರವೇಶವು ‘ಹಿಜಾಬ್ ನಿಷೇಧವಾಗಬೇಕು’ ಎಂಬ ದಾಂಧಲೆಯಿಂದ ಆರಂಭವಾಗುತ್ತದೆ. ಯಾರಿಗೊ ಒಬ್ಬರಿಗೆ ಕೋರ್ಟ್ ತೀರ್ಪು ವಿರುದ್ಧವಾದಾಗ ಆ ವ್ಯಕ್ತಿ ಹಾಗೂ ಆ ಕುಟುಂಬದವರು ಸಂಭ್ರಮಿಸಬೇಕಿತ್ತೆ? ಅವರು ತಮ್ಮ ದುಃಖಕ್ಕೆ ತಮ್ಮ ಮನೆ ಬಾಗಿಲು ಮುಚ್ಚಿಕೊಂಡು ಮೌನವಾದರು ಎಂದಿಟ್ಟುಕೊಳ್ಳೋಣ. ಇದು ನ್ಯಾಯಾಂಗದ ಆದೇಶ ಉಲ್ಲಂಘನೆಯಾಗುತ್ತದೆಯೆ? ಇಲ್ಲೂ ಇದೇ ರೀತಿ ಆಯ್ತು. ಹಿಜಾಬ್ ವಿರುದ್ಧ ಕೋರ್ಟ್ ತೀರ್ಪು ವಿರುದ್ಧವಾದಾಗ- 17-03-2022ರಂದು ಬಂದ್ ಸತ್ಯಾಗ್ರಹಕ್ಕೆ ಮುಸ್ಲಿಂ ಸಂಘಟನೆಗಳ ಒಕ್ಕೂಟ ಕರೆ ನೀಡುತ್ತದೆ. ಮುಸ್ಲಿಂ ಸಂಘಟನೆಗಳ ಒಕ್ಕೂಟ ತಮ್ಮ ಕರಪತ್ರದಲ್ಲಿ ಹೀಗೆ ಹೇಳುತ್ತಾರೆ – “ಇಂದು ನಡೆಯುತ್ತಿರುವ ಬಂದ್ ಯಾರ ವಿರುದ್ಧವಾದುದೂ ಅಲ್ಲ. ಯಾರಿಗೂ ತೊಂದರೆ ಕೊಡುವಂಥದ್ದೂ ಅಲ್ಲ. ‘ಉಪವಾಸ ಸತ್ಯಾಗ್ರಹ’ದ ರೀತಿ ನಾವು ‘ಬಂದ್ ಸತ್ಯಾಗ್ರಹ’ ನಡೆಸುತ್ತಿದ್ದೇವೆ ಅಷ್ಟೆ. ನಾವು ನಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆಯದೆ ನಮಗಾಗಿರುವ ನೋವನ್ನು ಅಭಿವ್ಯಕ್ತಿ ಪಡಿಸುತ್ತಿದ್ದೇವೆ. ಯಾರಿಗೂ ಬಲವಂತ ಮಾಡುತ್ತಿಲ್ಲ. ಬೀದಿಗೆ ಇಳಿಯುತ್ತಿಲ್ಲ. ಘೋಷಣೆಯನ್ನೂ ಹಾಕುತ್ತಿಲ್ಲ. ನಾವು ಬಹಳ ಬಹಳ ನೊಂದಿದ್ದೇವೆ ಎಂದಷ್ಟೆ ಎಲ್ಲಾ ಧರ್ಮದ ಬಂಧುಗಳಿಗೆ ಹೇಳಬಯಸುತ್ತೇವೆ” – ಇದಿಷ್ಟೇ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಮಾತುಗಳು. ಹಾಗೆ ನೋಡುವುದಾದರೆ ಈ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಬಂದ್ ನಾಗರೀಕವಾದ ಒಂದು ಘನತೆಯ ಮಾದರಿಯನ್ನು ಸೃಷ್ಟಿಸಿದೆ. ಆದರೆ ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎಂಬಂತೆ ಕೆಲವರಿಗೆ ಕಂಡಿದೆ! ಹಾಗಾಗಿ ಈ ಬಂದ್ ನೆಪಮಾಡಿಕೊಂಡು ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಕ್ಕೆ ತಗಾದೆ ತೆಗೆದರು. ಇಂದು ಆ ಗುಂಪೇ ಹಲಾಲ್ ಮಾಂಸಕ್ಕೆ ಮುಗಿಬಿದ್ದಿದ್ದಾರೆ. ಮಾಂಸ ತಿನ್ನದವರೇ ಹೆಚ್ಚಾಗಿ ಹಲಾಲ್ ಮಾಂಸಕ್ಕೆ ಯಕ್ಷಗಾನ, ನಾಟಕ ಮಾಡುತ್ತಿದ್ದಾರೆ. ಧರ್ಮದ ಮುಖವಾಡದಲ್ಲಿ ಅದರೊಳಗೆ ಅಧರ್ಮ, ದ್ವೇಷ ಕುಣಿದು ಕುಪ್ಪಳಿಸುತ್ತಿದೆ. ಯಾಕಾಗಿ? ಹಿಂದು-ಮುಸ್ಲಿಂ ಸಹಬಾಳ್ವೆಯ ಖಂಡುಗ ಹಾಲಿಗೆ ಒಂದು ಸೊಲಗ ವಿಷದ ಹೆಪ್ಪು ಹಾಕಿ ಸಮಾಜ ಛಿದ್ರಗೊಳಿಸಿ, ಧರ್ಮ ಕೋಮು ಧೃವೀಕರಣದ ಓಟು ಬ್ಯಾಂಕ್ ರಾಜಕಾರಣದ ಗೆಲುವಿಗಾಗಿ. ಇದಕ್ಕಾಗಿ ಅಧರ್ಮವೇ ಧರ್ಮದ ಮುಖವಾಡದಲ್ಲಿ ದ್ವೇಷ ಅಸಹನೆಯನ್ನು ಬಿತ್ತಿ, ಬೆಳೆದು, ಕೊಂದು, ಉಂಡು, ತಿಂದು ಕೊಬ್ಬುತ್ತಿದೆ. (ಇದನ್ನೆಲ್ಲಾ ನೋಡಿದಾಗ ಕುವೆಂಪು ಅವರು ಹೇಳಿದ ಒಂದು ರೂಪಕ ನೆನಪಾಗುತ್ತಿದೆ – “ಲಂಗೋಟಿ ಕಟ್ಟಿಕೊಂಡು ಕುಸ್ತಿ ಮಾಡುವವರೊಟ್ಟಿಗೆ ಕುಸ್ತಿ ಮಾಡಬಹುದು. ಆದರೆ ಲಂಗೋಟಿ ಬಿಚ್ಚಿ ಕುಸ್ತಿ ಮಾಡುವವರ ಜೊತೆ ಹೇಗೆ ಕುಸ್ತಿ ಮಾಡುವುದು? ನಾವು ಆ ನಿರ್ಲಜ್ಜ ಅಖಾಡಕ್ಕೆ ಹೋಗಲೇಬಾರದು”.) ಇಂದು ಲಂಗೋಟಿ ಇಲ್ಲದೆ, ನಿರ್ಲಜ್ಜವಾಗಿ ಕುಸ್ತಿ ಆಡುವವರೇ, ಎತ್ತ ನೋಡಿದರೂ ಕಾಣಿಸುತ್ತಿದ್ದಾರೆ. ನಾವು ಕುಸ್ತಿ ಆಡುವುದೆಂತು?
ನಾವು ಈ ಸರ್ಕಾರಕ್ಕೆ ಇದಿಷ್ಟನ್ನಾದರೂ ಕೇಳಬೇಕು – “ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ” ಇದೆಯಾ? ಇಲ್ಲವೇ ಇಲ್ಲ, ಬಿಲ್ಕುಲ್ ಕಾಣುತ್ತಿಲ್ಲ. ಛೂಬಿಟ್ಟ ಗುಂಪು, ತಾವೆ ಕಾನೂನು ಕೈಗೆತ್ತಿಕೊಂಡು, ತಾವೇ ನ್ಯಾಯಾಧೀಶರಂತೆ ಪೊಲೀಸ್ರಂತೆ ವರ್ತಿಸುತ್ತಿವೆ. ಆಯ್ತು, ಸರ್ಕಾರವಾದರೂ ಇದೆಯಾ? ನನಗಂತು ಇದೆ ಅಂತ ಅನ್ನಿಸುತ್ತಿಲ್ಲ. ಅಥವಾ ಬಜರಂಗದಳ, ಶ್ರೀರಾಮಸೇನೆ, ಕೆಲ ಮಠಗಳಿಗೆ ಸರ್ಕಾರವೇ ಕಣ್ಸನ್ನೆ ಮಾಡಿ ಲಾ & ಆರ್ಡರ್ ಹದಗೆಡಿಸಲು ಛೂ ಬಿಟ್ಟಿದಿಯಾ? ಇದಲ್ಲದೆ ಇನ್ನೇನು? ಬಜರಂಗದಳದ ಅಮಾಯಕ ಹುಡುಗರಿಗೆ ಉದ್ಯೋಗ ನೀಡಿದ್ದರೂ ಇಷ್ಟೆಲ್ಲಾ ಗಲಭೆ ಆಗುತ್ತಿರಲಿಲ್ಲ. ಈಗ ಇನ್ನೊಂದು ಪಿಶಾಚಿ ಇಣುಕುತ್ತಿದೆ – ಅದೇ ಪ್ರಾಣಿವಧೆ ಮಾಡುವಾಗ ಅದನ್ನು ಹೇಗೆ ಕೊಲ್ಲಬೇಕು ಅಂತ, ಕೆಲವರು ಮಾನವೀಯತೆಯಿಂದ ಕೊಲ್ಲಬೇಕು ಅಂತ ಅನ್ನುತ್ತಿದ್ದಾರೆ. ಪ್ರಾಣಿ ಕೊಲ್ಲುವುದೇ ಅದರ ಮಾಂಸ ತಿನ್ನುವುದಕ್ಕಾಗಿ. ಇದರಲ್ಲಿ ‘ಮಾನವೀಯತೆ’ ಪದಬಳಕೆ ಯಾಕೆ? ಪ್ರಾಣಿವಧೆ ಹೇಗೆ ಮಾಡಬೇಕೆಂಬ ಈ ವಿವಾದ ಹೆಚ್ಚಿದರೆ, ನೆನಪಿರಲಿ, ಅದರೊಳಗೆ ಮನುಷ್ಯ ವಧೆ ಬಚ್ಚಿಟ್ಟುಕೊಂಡಿದೆ. “ಒಂದು ಹಿಂದೂ ಹೆಣಬಿದ್ದರೆ ಅಲ್ಲಿ ಬಿಜೆಪಿ ಗೆಲುವು ಗ್ಯಾರಂಟಿ” ಎಂಬ ಮನಸ್ಥಿತಿ ಇರುವಾಗ ಯಾವುದು ಅಸಾಧ್ಯ? ಮಾಂಸಾಹಾರಿಗಳು ಪ್ರಾಣಿವಧೆ ಮಾಡುತ್ತಿದ್ದರೆ ಸರ್ಕಾರ ನರಬಲಿ ಕೇಳುತ್ತಿದೆ, ತನ್ನ ಗೆಲುವಿಗಾಗಿ.
ಬೇಲಿಯೇ ಎದ್ದು ಹೊಲ ಮೇಯುತ್ತಾ ಇರುವಾಗ ಯಾರನ್ನು ಕೇಳುವುದು? ಉಳಿದಿರುವುದು ಒಂದೇ ದಾರಿ. ನಾಡಿನ ಯಾವುದೇ ಮೂಲೆಗೆ ಹೋದರೂ, ಯಾವುದೇ ಹಳ್ಳಿಗೆ ಹೋದರೂ ಸಕಲ ಹದಿನೆಂಟು ಜಾತಿ ಧರ್ಮಕ್ಕೆ ಸೇರಿದ ಸಹಬಾಳ್ವೆ ಬಯಸುವ ಮನುಷ್ಯರು ಸಿಕ್ಕೇ ಸಿಗುತ್ತಾರೆ. ನಾವೀಗ ಅವರ ಕಡೆ ನೋಡಬೇಕಿದೆ. ಎಲ್ಲಡೆಯೂ ‘ಸಕಲೆಂಟು ಜಾತಿ/ಮತ ಸಹಬಾಳ್ವೆ ಸಂಘ’ ಚಿಗುರಬೇಕಾಗಿದೆ. ನಾಡು ಉಳಿಯಬೇಕಾದರೆ ಅದು ಕ್ರಿಯಾಶೀಲವಾಗಬೇಕಾಗಿದೆ.