ಕೊಳ್ಳೇಗಾಲದಲ್ಲಿ, ಜನಜಾಗೃತಿ ಸಭೆಯಲ್ಲಿ-ದೇವನೂರ ಮಹಾದೇವ
[ಜನಾದೋಲನಗಳ ಮಹಾಮೈತ್ರಿಯ ಜನಜಾಗೃತಿ ಜಾಥಾ 2022ರ ಮಾರ್ಚ್ 1 ರಿದ 15ರವರೆಗೆ ರಾಜ್ಯದ ಹಲವು ಭಾಗಗಳಿಂದ ಜಾಗೃತಿ ಜಾಥಾ ನಡೆಸಿದ್ದು, ಜಾಥಾದಲ್ಲಿ ಕೊಳ್ಳೆಗಾಲದಲ್ಲಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹರೂಪ ಇಲ್ಲಿದೆ..]
ನಾನು ಇಲ್ಲಿಗೆ ಯಾಕೆ ಬಂದೆ ಅಂದರೆ, ‘ನೀವು ಇನ್ನಾದರೂ ಮಾತಾಡಬೇಕು, ನೀವು ಮಾತಾಡಲೇ ಬೇಕು’ ಅಂತ ವಿನಂತಿಸುವುದಕ್ಕಾಗಿ ಬಂದೆ.
ಮೊನ್ನೆ ಮೈಸೂರಲ್ಲಿ ಜನಾಂದೋಲನಗಳ ಮಹಾಮೈತ್ರಿ ಜನಜಾಗೃತಿ ಜಾಥಾ ಬಗ್ಗೆ ಒಂದು ಪತ್ರಿಕಾ ಗೋಷ್ಠಿ ಇತ್ತು. ಅಲ್ಲಿ ನಮ್ಮ ಜನಪರ ಹೋರಾಟಗಳ ನಾಯಕರಾದ ಪ.ಮಲ್ಲೇಶ್ ಅವರು ಒಂದು ಮಾತು ಹೇಳಿದರು. ಏನೆಂದರೆ, ‘ಸಮಸ್ಯೆಗಳು ನಿಮ್ಮ ಮನೆ ಬಾಗಿಲಿಗೆ ಬಂದಿವೆ. ಎಷ್ಟು ದಿನ ಅಂತ ಹೀಗೆ ಕೂತಿರ್ತೀರಿ?’ ಅಂತ. ನಾನೂ ಇದನ್ನೇ ಕೇಳೋಕೆ ಬಂದಿರೋದು. ನಾನು ಕೇಳ್ತಾ ಇದ್ದೀನಿ- ಸಮಸ್ಯೆ ನಿಮ್ಮ ಅಡಿಗೆ ಮನೆ ಒಳಕ್ಕೂ ನುಗ್ಗಿಲ್ವ? ಗ್ಯಾಸ್ ಬೆಲೆ ಡಬಲ್ ಆಗ್ತಾ ಇದೆ. ಅಡಿಗೆ ಎಣ್ಣೆ ಬೆಲೆ ಹೆಚ್ತಾನೆ ಇದೆ. ಕಾಳುಕಡ್ಡಿ ಬೆಲೆನೂ ಹೆಚ್ತಾ ಇದೆ. ಉಣ್ಣುವ ತಿನ್ನುವ ಎಲ್ಲಾನೂ ಹೆಚ್ತಾ ಇದೆ. ಬೆಲೆ ಏರಿಕೆ ಬೇಗುದಿಯಲ್ಲಿ ಮನೆ ಬೇಯುತ್ತಾ ಇಲ್ವ? ಇನ್ನು ಮನೆಯಿಂದ ಹೊರಗಡೆ ಬಂದರೆ.. ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ. ಇನ್ನು ಮೇಲೆ ಆಕಾಶದಲ್ಲಿ ಓಡಾಡಬೇಕಷ್ಟೆ. ಮನೆ ಒಳಗೆ, ಬೆಲೆ ಏರಿಕೆ ಬೇಗುದಿಯಲ್ಲಿ ಮನೆ ಬೇಯುತ್ತಿದೆ. ಮನೆ ಹೊರಗಡೆ, ಬೆಲೆ ಏರಿಕೆ ಬೇಗುದಿಯಲ್ಲಿ ಅದೂ ಬೇಯುತ್ತಿದೆ. ಒಟ್ಟಿನಲ್ಲಿ ಜನಜೀವನ ನಿತ್ರಾಣಗೊಂಡು ಕಾಲೆಳೆದುಕೊಂಡು ಏದುಸಿರು ಬಿಡುತ್ತಾ, ಸತ್ತರೆ ಸಾಕಪ್ಪ ಅಂತ ಜೀವಿತ ಕಾಲಾವಧಿಯನ್ನು ಕಳೆಯುತ್ತಿದೆ.
ಹೀಗಿದ್ದೂ ಯಾಕೆ ಮಾತಾಡುತಿಲ್ಲ? ಯಾಕೆ ಕೇಳಬೇಕಾದವರನ್ನು ಕೇಳಿಲ್ಲ? ನನಗೂ ಈ ಪ್ರಶ್ನೆ ನಿಮಗೂ ಈ ಪ್ರಶ್ನೆ.
ಹಾಗಿದ್ದರೆ ಯಾರನ್ನು ಕೇಳಬೇಕು ನಾವು? ನಾವು ಕೇಳಬೇಕಾಗಿರುವವರು ಮುಖ್ಯವಾಗಿ ನಂನಮ್ಮ ಶಾಸಕರನ್ನೇ ಕೇಳಬೇಕು. ಯಾಕೆಂದರೆ ಶಾಸಕರನ್ನು ನಾವು ಆಯ್ಕೆ ಮಾಡಿ ಕಳಿಸಿರುವುದು ಜನಪರವಾದ ಶಾಸನಗಳನ್ನು ಮಾಡಪ್ಪ ಅಂತ. ಅವರು ಶಾಸಕ ಆಗಿರೋದು ಶಾಸನ ಮಾಡಿಸೋಕೆ, ಹೌದಲ್ಲ? ಆದರೆ ಹಾಗಂತ ಬಹುಶಃ ಯಾವ ಶಾಸಕರೂ ಅಂದುಕೊಂಡಿಲ್ಲ, ಅವರನ್ನು ಆಯ್ಕೆ ಮಾಡಿದ ಮತದಾರರೂ ಅಂದುಕೊಂಡಿಲ್ಲ. ಅದಕ್ಕಾಗೇನೇ ಬಹುತೇಕ ಶಾಸಕರು ಜನಪರ ಶಾಸನಗಳನ್ನು ಮಾಡಿಸುತ್ತಿಲ್ಲ. ಬದಲಾಗಿ ಟ್ರಾನ್ಸ್ ಫರ್ ಮಾಡಿಸೋಕೆ ಓಡಾಡುತ್ತಿದ್ದಾರೆ! ಬೇಕಾದವರ ಫೈಲ್ಗೆ ಒಪ್ಪಿಗೆ ರುಜು ಹಾಕಿಸುವುದಕ್ಕೆ, ಅವರ ಒಳವ್ಯವಹಾರಕ್ಕೆ ಇಂಥವೇ ನಡೀತಾ ಇದೆ. ನಿಮ್ಮ ಕ್ಷೇತ್ರದ್ದೆ ಒಂದು ಉದಾಹರಣೆ ಹೇಳ್ತೀನಿ- ನಿಮ್ಮ ಶಾಸಕನ ಹತ್ತಿರ ನೀವು ಹೋಗಿ ‘ನನ್ನ ಮಗಳಿಗೊ ಅಥವಾ ಮಗನಿಗೊ ಬಿಸಿಎಂ ಹಾಸ್ಟಲ್ನಲ್ಲಿ ಸೀಟ್ ಬೇಕು. ದಯವಿಟ್ಟು ಕೊಡಿಸಿ ಕೊಡಿ’ ಅಂತ ಕೇಳಿದರೆ ಆತ ಏನ್ ಹೇಳ್ತಾನೆ? ‘ನೋಡಪ್ಪ ನಾನು ಬರೇ ಶಾಸಕ. ನನ್ ಮಾತು ಎಲ್ಲಿ ನಡೀತದೆ? ನಿನ್ನಂಥವರಿಗೆ ಸಹಾಯ ಮಾಡಾಕಾಗೆ, ಮಂತ್ರಿ ಆಗಕೆ ಕಷ್ಟ ಪಡ್ತ ಇದ್ದೀನಿ’ ಅಂತಾನೆ. ಆ ಸಮಸ್ಯೆ ಹೇಳ್ಕಂಡವರು, ಅಯ್ಯಯ್ಯೋ ಎಷ್ಟು ಕಷ್ಟ ನಮ್ಮ ಎಂ.ಎಲ್.ಎ.ಗೆ ಅಂದ್ಕತ್ತಾರೆ. ಯಾರೂ ಪ್ರಶ್ನೆ ಮಾಡಲ್ಲ. ಎಂ.ಎಲ್.ಎ. ಆಗೋಕೆ ಮೊದಲು ನಿಮ್ಮ ಸಂಪತ್ತು ಎಷ್ಟಿತ್ತು? ಈಗ ಎಷ್ಟಿದೆ? ಅದು ಎಲ್ಲಿಂದ ಬಂತು? ಯಾರೂ ಪ್ರಶ್ನೆ ಮಾಡಲ್ಲ. ಇದೂ ಇರಲಿ, ‘ಅಲ್ಲಪ್ಪಾ, ಎಂಎಲ್ಎ, ನೀನು ಶಾಸಕ. ಅಂದರೆ ಶಾಸನ ಮಾಡಿಸೋಕೆ ಶಾಸಕ ಆಗಿರೋನು. ಅರ್ಜಿ ಹಾಕುವ ಎಲ್ಲಾ ಹಿಂದುಳಿದ ಮಕ್ಕಳಿಗೂ ಶಿಕ್ಷಣಕ್ಕೆ ಹಾಸ್ಟಲ್ಗೆ ಸೀಟು ಸಿಗಬೇಕು ಅಂತ ಕಾಯ್ದೆ ಶಾಸನ ಮಾಡಿಸೋದು ನಿನ್ನ ಕೆಲಸ ಅಲ್ವಾ?” ಇದನ್ನು ಯಾರೂ ಕೇಳುವುದಿಲ್ಲ. ‘ನೀವು ಮಿನಿಸ್ಟರ್ ಆಗೋಕೆ ಕಷ್ಟಪಡ್ತಾ ಇದ್ದೀರಾ? ಅದೇ, ಶಾಸನ ರೂಪಿಸುವುದಕ್ಕೆ ಯಾಕೆ ಕಷ್ಟಪಡ್ತಾ ಇಲ್ಲ’ ಇದನ್ನು ಯಾರೂ ಕೇಳುತ್ತಿಲ್ಲ.
ಆಯ್ತಪ್ಪ, ನಿಮ್ಮ ಶಾಸಕರು ಮಂತ್ರಿ ಆದ್ರೂ ಅಂತಾನೇ ಇಟ್ಕೊಳ್ಳೋಣ. ಏನಾಗುತ್ತೆ? ಈಗ ಮಿನಿಸ್ಟರ್ಗಳು ಮಾಡ್ತಾ ಇದ್ದಾರಲ್ಲ, ಇವರು ಅದನ್ನೇ ಮಾಡ್ತಾರೆ. ಮತ್ತೇನು ಮಾಡಲು ಸಾಧ್ಯ? ಅದನ್ನೇ ಮಾಡ್ತಾರೆ. ಮಂತ್ರಿ, ಸರ್ಕಾರಗಳು ಬಡಜನರ ಹೊಟ್ಟೆಗೆ ಹೊಡೆದು ಸಂಪತ್ತು ಉಳ್ಳವರ ತಟ್ಟೆಗೆ ಇಡುವ ಕಾಯ್ದೆಗಳನ್ನು ರೂಪಿಸುತ್ತಿದ್ದಾರೆ. ಇವರೂ ಅದನ್ನೆ ಮಾಡ್ತಾರೆ. ಬಾಯಲ್ಲಿ ಬಡವರ ಹೆಸರು, ಬಗಲಲ್ಲಿ ಬಂಡವಾಳಶಾಹಿ ಬಸಿರು. ಹೀಗಿದೆ ಇಂದಿನ ದುರಂತ ಕತೆ.
ಈ ದುರಂತ ಕತೆಯ ಇತ್ತೀಚಿನ ಒಂದು ಉದಾಹರಣೆ ಅಂದರೆ – 1. ಕರ್ನಾಟಕ ಭೂ ಸುಧಾರಣಾ (ತಿದ್ದುಪಡಿ 2020) ಕಾಯಿದೆ. 2. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ನಿಯಂತ್ರಣ ಅಭಿವೃದ್ಧಿ) ಕಾಯಿದೆ 2020 ಹಾಗೂ 3. ಕರ್ನಾಟಕ ಜಾನುವಾರು ಹತ್ಯಾ (ನಿಷೇಧ ಮತ್ತು ಸಂರಕ್ಷಣೆ) ಕಾಯಿದೆ 2020 – ಈ ಕಾಯ್ದೆಗಳ ಒಳಹೊಕ್ಕು ನೋಡಿದರೆ, ಕಾಣೋದೇನು? ಭೂಸುಧಾರಣೆ ಅಂತ ಹೇಳಿ ಈ ಕಾಯಿದೆ ಭೂ ಧ್ವಂಸ ಮಾಡುತ್ತಿದೆ. ಇನ್ನೊಂದು- ಜಾನುವಾರು ಹತ್ಯಾ ನಿಷೇಧ ಅಂತ ಹೇಳಿ, ಹತ್ಯಾ ನಿಷೇಧವನ್ನೇನೋ ಮಾಡ್ತು, ಆದರೆ ಸಂರಕ್ಷಣೆ ಮಾಡ್ತ ಇಲ್ಲ. ಈ ಕಾಯ್ದೆಯಿಂದ ಸಮಾಜದಲ್ಲಿ ದ್ವೇಷ ಹೆಚ್ಚಾಗಿ ಆರ್.ಎಸ್.ಎಸ್. ಮತ್ತು ಬಿಜೆಪಿ ಸರ್ಕಾರದ ಸಂರಕ್ಷಣೆ ಆಗ್ತಾ ಇದೆ. ಹಾಗೇ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ‘ನಿಯಂತ್ರಣ ಮತ್ತು ಅಭಿವೃದ್ಧಿ’ ಅಂತ ಹೇಳಿ, ಮೊದಲು ಎಪಿಎಂಸಿ ಮೂಲಕ ಇದ್ದ ನಿಯಂತ್ರಣವನ್ನು ಕಿತ್ತು ಬಿಸಾಕಿ ರೈತರು ಕಣ್ಣು-ಬಾಯಿ ಬಿಡುವಂತೆ ಮಾಡಿದೆ. ಅಭಿವೃದ್ಧಿ ಅಂತ ಹೇಳಿ ಹಣ ಉಳ್ಳವರ ಅಭಿವೃದ್ಧಿ ಮಾಡುತ್ತಿದೆ.
ಹೀಗಿರುವಾಗ, ನಮ್ಮ ಸುತ್ತಮುತ್ತ, ಜರುಗುತ್ತಿರುವುದರ ಆಳಕ್ಕೆ ಇಳಿದು ನೋಡಿ. ಅನ್ನಿಸಿದ್ದನ್ನು ಮಾತಾಡಿ. ಎಲ್ಲರೂ ಒಟ್ಟಾಗಿ ಸೇರಿ ಮಾತಾಡಿ. ನೀವು ಮಾತಾಡಿದ್ದನ್ನು ಇಡೀ ಸಮಾಜ ಜಾಗೃತವಾಗಿ ಕೂಗಿ ಹೇಳಬೇಕು. ಆಗ ಮಾತ್ರವೇ ನಮ್ಮ ಬದುಕಲ್ಲಿ ಬದಲಾವಣೆ ಚಿಗುರೊಡೆಯುತ್ತದೆ. ಅದಕ್ಕಾಗಿ ಈ ಜನಾಂದೋಲನಗಳ ಮಹಾಮೃತ್ರಿ ಜಾಥಾ.
ಮೊದಲ ಹೆಜ್ಜೆಯಾಗಿ, ನಾವು ಮಾಡಬೇಕಿರುವುದು ಇಷ್ಟೆ: ಒಂದು ಊರಲ್ಲಿ 5 ಜನ ವಿವೇಕ ವಿವೇಚನೆ ಇರುವ ಹಿರಿಯರು ಸಿಗಲಾರರೆ? ಅವರು ಮೊದಲು ಒಟ್ಟಿಗೆ ಸೇರಬೇಕು. ಚಿಂತನಾ ಸಭೆ ಮಾಡಿಕೊಂಡು ದೇಶದ ಆಗುಹೋಗುಗಳನ್ನು ಮಾತಾಡಬೇಕು, ಚರ್ಚಿಸಬೇಕು. ಏನು ಬೇಕು ಏನು ಬೇಡ ಮಾತಾಡಬೇಕು. ಹಾಗೇನೆ 5 ಜನ ಮಹಿಳೆಯರೂ ಕೂಡ. 5 ಜನ ವಿದ್ಯಾರ್ಥಿಗಳೂ ಕೂಡ. ಒಂದು ಹಳ್ಳಿಗೆ ಕೇವಲ 15 ಜನ ಮಾತ್ರ. ಇಲ್ಲಿ ಎಲ್ಲಾ ಸಮುದಾಯದವರು ಸಿಗುವುದು ಕಷ್ಟವೆ? ಇದು ಸಾಧ್ಯವಾದರೆ ಎಲ್ಲವೂ ಸಾಧ್ಯವಾಗುತ್ತದೆ. ಹಳ್ಳಿಯಾದ ಮೇಲೆ ಹೋಬಳಿ, ತಾಲ್ಲೂಕು, ಜಿಲ್ಲಾ… ಹೀಗೆ ಹೀಗೆ ರಾಜ್ಯಕ್ಕೆ ಹಬ್ಬಿದರೆ ಜನಸಮುದಾಯಗಳು ಎಚ್ಚರಗೊಂಡರೆ, ಈ ಎಚ್ಚೆತ್ತ ಸಮುದಾಯಗಳ ಮಾತು ಶಾಸನ ಆಗುತ್ತವೆ. ಅದಕ್ಕಾಗಿ ಈಗ ಇಂದಿನ ಜನವಿರೋಧಿ ಕಾಯ್ದೆಗಳಿಗೆ ನಂನಮ್ಮ ಶಾಸಕರನ್ನು ಜವಾಬ್ದಾರರನ್ನಾಗಿಸಬೇಕು. ಶಾಸನ ಆಗದಿದ್ದರೆ, ‘ಜನಪರ ಶಾಸನಗಳನ್ನು ಮಾಡಪ್ಪ ಅಂತ ಶಾಸನ ಸಭೆಗೆ ಕಳಿಸಿದರೆ ನೀನು ಒಳ ವ್ಯವಹಾರ ಮಾಡ್ತಾ ಇದ್ದೀಯಲ್ಲಾ, ಶಾಸಕನಾಗಲು ನೀನು ಅನರ್ಹ, ಅರ್ಹತೆ ಇಲ್ಲದವನು’ ಅಂತ ಸಮುದಾಯ ಒಕ್ಕೊರಲಿನಿಂದ ಕೂಗಿ ಹೇಳಿದರೆ ಅಂದು ಆ ಶಾಸಕ ಜನಪರ ಶಾಸಕನಾಗಿ ಬದಲಾಗುತ್ತಾನೆ. ಇಲ್ಲದಿದ್ದರೆ ಜನಾಕ್ರೋಶದ ಎದುರು ನಿಲ್ಲಲಾಗದೆ ಮನೆಗೆ ಹೋಗುತ್ತಾನೆ. ಇದಾಗದಿದ್ದರೆ ಆ ಶಾಸಕ ಹಣಪರ ಶಾಸಕನಾಗಿ ಜನರ ಪ್ರಾಣ ಹಿಂಡುವ ಕಾಯ್ದೆಗಳಿಗೆ ಕೈಯೆತ್ತುತ್ತಾ, ಕಾಲವ್ಯಯ ಮಾಡುತ್ತಾ ದಂದೆಗಳಲ್ಲಿ ಮುಳುಗುತ್ತಾನೆ. ಹಾಗಾಗಿ ಎಲ್ಲರೂ ಜಾಗೃತರಾಗುವುದು ಈಗ ಅಳಿವು ಉಳಿವಿನ ಪ್ರಶ್ನೆ. ಈ ಕಾಲಮಾನ ಜನ ಜಾಗೃತಿಯನ್ನು ಕೇಳ್ತಾ ಇದೆ.