ದೇವನೂರರ “ಎದೆಗೆ ಬಿದ್ದ ಅಕ್ಷರ” ಓದು ಸರಣಿ -4 //ಅಭಿಲಾಷ್ ದೇವನೂರ್//
[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ, “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “ಒಂದು ಪತ್ರಿಕಾಗೋಷ್ಠಿ” ಬರಹದ ವಾಚನ ಅಭಿಲಾಷ್ ದೇವನೂರ್ ಅವರಿಂದ.]
“ಒಂದು ಪತ್ರಿಕಾಗೋಷ್ಠಿ“
ಈಗ ನಮ್ಮ ಮುಂದೆ ಇರುವ ಚುನಾವಣೆ ನಿರ್ಣಾಯಕವಾಗಿದೆ. ಯಾಕೆಂದರೆ, ಪ್ರಭುತ್ವ ಜನರ ಕೈಲಿರಬೇಕೋ ಅಥವಾ ಮಾಫಿಯಾಗಳ ಕೈಲಿ ಇರಬೇಕೋ ಎಂಬುದನ್ನು ಈ ಚುನಾವಣೆ ನಿರ್ಧರಿಸುತ್ತದೆ. ಈ ಹಿಂದೆಯೂ ಲಾಬಿ ಅಂದರೆ ಹೆಂಡ, ಸಕ್ಕರೆ, ಕೈಗಾರಿಕೆ, ವಿದ್ಯಾಸಂಸ್ಥೆ ಇತ್ಯಾದಿಗಳ ಲಾಬಿ ಇತ್ತು. ಆದರೆ ಅವು ಹಿನ್ನೆಲೆಯಲ್ಲಿದ್ದು ರಾಜಕೀಯ ವ್ಯಕ್ತಿ ಪಕ್ಷಗಳಿಗೆ ಹಣ ಸರಬರಾಜು ಮಾಡಿ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುತ್ತಿದ್ದವು. ಈಗ? ಯಾವಾಗ ಬಿಜೆಪಿ ಜೆಡಿಎಸ್ ಪಕ್ಷಗಳು ಜನಸಾಮಾನ್ಯರಿಗೆ ಚುನಾವಣಾ ಸಂದರ್ಭದಲ್ಲಿ ಕೊಟ್ಟಿದ್ದ ವಚನವನ್ನು ತಾವೇ ತುಳಿದು ಹಾಕಿ ಸಂಚಿನಿಂದ ಅಧಿಕಾರ ಹಿಡಿದವೋ ಆವಾಗಲಿಂದ ಗಣಿ ಮತ್ತು ರಿಯಲ್ ಎಸ್ಟೇಟ್ ಮಾಫಿಯಾ ರಾಜಕಾರಣಕ್ಕೆ ಲಗ್ಗೆ ಹಾಕಿತು. ಹಿಂದೆ ಲಾಬಿ ಪರೋಕ್ಷ ರಾಜಕಾರಣ ಮಾಡುತ್ತಿದ್ದರೆ ಈಗ ಈ ಮಾಫಿಯಾ ಪ್ರತ್ಯಕ್ಷ ರಾಜಕಾರಣಕ್ಕೇ ಇಳಿದಿದೆ. ಮಾಫಿಯಾದವರೇ ರಾಜಕಾರಣಿಗಳಾಗುತ್ತಿದ್ದಾರೆ. ರಾಜಕೀಯ ಪಕ್ಷಗಳು ಎಂದರೆ ಈ ಮಾಫಿಯಾಗಳ ಮುಖವಾಡದಂತೆ ಆಗಿಬಿಟ್ಟಿವೆ. ವಿಧಾನಸೌಧದ ನೆತ್ತಿ ಮೇಲೆ ಮಾಫಿಯಾ ಕತ್ತಿ ತೂಗಾಡುತ್ತಿದೆ. ಕೇಂದ್ರ ಗುಪ್ತಚರ ಇಲಾಖೆಯು ಈ ಚುನಾವಣೆಯಲ್ಲಿ ಸಹಸ್ರಾರು ಕೋಟಿ ಗಣಿ ಹಣ ಹರಿಯುವುದು ಎಂಬ ವರದಿ ಮಾಡಿದೆ. ಈ ಹಣ ಹರಿದ ಕಡೆಗೆಲ್ಲಾ ರಕ್ತ ಮತ್ತು ಕಣ್ಣೀರು ಹರಿಯುತ್ತದೆ, ನೆನಪಿರಲಿ.
ಈ ಮಾಫಿಯಾಗಳೇ ನೇರ ರಾಜಕಾರಣಕ್ಕೆ ಬಂದರೆ ನಾಳೆ ಏನಾಗಬಹುದು? ಕ್ರಿಕೆಟ್ನಲ್ಲಿ ಈಗ ಆಟಗಾರರನ್ನು ಹರಾಜು ಹಾಕಿ ಕೊಂಡುಕೊಳ್ಳುತ್ತಿರುವಂತೆ ಶಾಸಕರನ್ನು ಮಾಫಿಯಾದವರು ಹರಾಜಿನಿಂದ ಕೊಂಡುಕೊಳ್ಳುವ ಸ್ಥಿತಿ ಬರಬಹುದು. ಈ ಮಾಫಿಯಾಗಳು ಗೆದ್ದರೆ ರಾಜ್ಯದ ನೈಸರ್ಗಿಕ ಸಂಪತ್ತನ್ನು ತಮ್ಮ ಖಾಸಗಿ ಮಾಡಿಕೊಂಡು ಜನರಿಗೆ ಅದು ಉಚಿತ ಇದು ಉಚಿತ ಎಂದು ಬಿಸಾಕಿ ಸಾಮಾನ್ಯ ಜನರಲ್ಲಿ ದೈನ್ಯತೆ, ಅಸಹಾಯಕತೆ, ನಿರುದ್ಯೋಗ, ಪರಾವಲಂಬನೆ ಹೆಚ್ಚಿಸಬಹುದು. ಬಡವ-ಬಲ್ಲಿದರ ನಡುವೆ ಅಂತರ ಮತ್ತೂ ಹೆಚ್ಚಬಹುದು. ಇದು ನಾಳೆ, ನಾಡು ನುಡಿ ನೆಲ ಜಲದ ಜೊತೆಗೇ ಚುನಾವಣೆ ವ್ಯವಸ್ಥೆಯನ್ನೂ ಪ್ರಜಾಪ್ರಭುತ್ವವನ್ನೂ ಬುಡಮೇಲು ಮಾಡುವ ಆತಂಕ ಉಂಟುಮಾಡಿದೆ. ರಾಜಕೀಯ ಪಕ್ಷಗಳೂ ಪಕ್ಷಗಳಾಗಿ ಉಳಿಯಲಾರವು. ಈ ಸುಳಿಯಿಂದ ತಪ್ಪಿಸಿಕೊಂಡು ರಾಜಕೀಯ ಪಕ್ಷಗಳೂ ಉಳಿಯಬೇಕಾಗಿದೆ.