ಮಾದೇವನ ಜತೆ-ಜಯಂತ್ ಕಾಯ್ಕಿಣಿ
[2020 ರ ಸುಧಾ ಯುಗಾದಿ ವಿಶೇಷಾಂಕದಲ್ಲಿ ಮಹಾದೇವ ಅವರ ಕುರಿತು ಜಯಂತ ಕಾಯ್ಕಿಣಿ ಅವರು ಬರೆದ ಕವಿತೆ ಪ್ರಕಟವಾಗಿದ್ದು…. ನಮ್ಮ ಓದಿಗಾಗಿ ಇಲ್ಲಿದೆ.]
[ಯುದ್ಧ ನೌಕೆಗಳಂತೆ ಕಾಣುವ ಧಡೂತಿ ಲಾರಿಗಳು,ಟ್ಯಾಂಕು ಹೊತ್ತುಕೊಂಡು ಊರ ಕಡೆ ಹೋಗುವುದನ್ನು ಮರಗಳ ಮಧ್ಯೆ ನಿಂತು ನೋಡುವಳು ವನದೇವತೆ, ಮಾದೇವನ ಜತೆ -ಜಯಂತ ಕಾಯ್ಕಿಣಿ]
ದೇವನೂರಿನಿಂದ ಹೊರಟ ಮಾದೇವ ಬಸ್ಸು ತಪ್ಪಿತೆಂದು
ಸೀದಾ ನಡೆದುಕೊಂಡೇ ಬಂದ, ಜೇಬಲ್ಲಿ ಕಡ್ಲೆ ಕಾಯಿ, ಬೆಲ್ಲದ ಚೂರು,
ದಾರಿಯಲ್ಲಿ ಸೇರಿಕೊಂಡವು ಬೆಕ್ಕು ನಾಯಿ ಅಳಿಲು ಪುಟ್ಟ ಮಕ್ಕಳು
ಅವರ ಮುಂದೆ ಮಂಡಿಯೂರಿ ಕೂತು ಕೇಳಿದ ‘ನಾನ್ಯಾರು?”
ಹಾದು ಹೋದ ಕೆಂಪು ಬಸ್ಸಿನ ದೂಳು ಡ್ರೀಮ್ ಸಿಕ್ವೆನ್ಸಿನ ಹೊಗೆಯಂತೆ
ಆವರಿಸಿ ಸರಿಯುತ್ತಿದ್ದಾಗ ಆತನ ಕಣ್ಣಲ್ಲೊಂದು ಆಕಾಶದ ತೇವ
ಬಾಡಿಗೆ ಸೈಕಲ್ ಅಂಗಡಿ ಬೆಂಚಲ್ಲಿ ಕೂತು
ಕೈಲಿದ್ದ ಸಣ್ಣ ಸಿಗರೇಟನ್ನು ತದೇಕ ಚಿತ್ತನಾಗಿ ನೋಡುತ್ತ ಸೇದುವ
ಗಂಗೋತ್ರಿಗೆ ಹೋದರೆ ಮೇಷ್ಟ್ರುಗಳ ಕಾಟ, ಗೆಳೆಯರ ಹಾಸ್ಟೆಲ್‌ನಲ್ಲಿ
ಕರಪತ್ರ ಪೋಸ್ಟರುಗಳ ಜತೆ ಊಟ, ಮ್ಯಾಟಿನಿ ನೋಡಿಕೊಂಡು ಅಪವೇಳೆಯಲ್ಲಿ
ಬೀದಿಪಾಲಾದರೆ ಊರು ತನ್ನೆಡೆ ನೋಡುವುದೆ ಇಲ್ಲ
ಕಡ್ಡಿ ಖಾಲಿಯಾದ ಬೆಂಕಿಪಟ್ಟದಲ್ಲಿ ರೇಷಿಮೆ ಹುಳ
ರಿಲೀಸ್ ಪಿಕ್ಚರ್ ಬಗ್ಗೆ ಹೇಳ್ತಾರಲ್ಲಾ ಹಾಗೆ ಇವನೂ ಏಕ ಕಾಲಕ್ಕೆ
ನಾನಾ ಊರಿನಲ್ಲಿ ನಾನಾ ಜಾಗದಲ್ಲಿ ಜನರಿಗೆ ಕಂಡಿದ್ದ ಕಾಣುತ್ತಿದ್ದ
ಪವಾಡ ಪುರುಷ. ಅವನ ಕಣ್ಣಿಗೆ ಬಿದ್ದುದೆಲ್ಲ ಹನಿಯಾಗಿ ಬಿಡುತ್ತಿತ್ತು
ಅಥವಾ ಇಸ್ತ್ರಿಯ ಹಂಗಿಲ್ಲದ ದನಿಯಾಗುತ್ತಿತ್ತು.
ಧಾರವಾಡದ ಸುಭಾಷ್‌ರೋಡಿನ ಹೋಟಲಲ್ಲಿ ಬಶಿಯಿಂದ ದಪ್ಪ ಕೇಟೀ
ಸೊರಸೊರ ಹೀರುತ್ತಿರುವಾಗಲೇ ಗಂಗಾವಳಿ ತೀರದಲ್ಲಿ ಇವನೆೇ
ಹುಲಿವೇಷ ಹಾಕಿಕೊಂಡೇ ನೀರಿಗೆ ಕಾಲುಬಿಟ್ಟು ಕೂತಿದ್ದ
ಹುಲಿಯ ಬಣ್ಣ ಮೆಲ್ಲಗೆ ನೀರಲ್ಲಿ ಕರಗಿ ಹರಿಯುತ್ತಿತ್ತು
ತಕ್ಷಣ ರಿವೈಂಡ್ ಮಾಡ್ತ ರಿವರ್ಸಿನಲ್ಲಿ ನೋಡಿದರೆ ನೀರಿಂದಲೇ
ಬಣ್ಣಗಳು ಒಂದು ಮೈಸೇರಿ ತಾನು ರೂಪುಗೊಂಡಿದ್ದೇನೆ
ಅನಿಸುತ್ತಿತ್ತು. ಪುಟಗೌರಿ ಬಿಡಿಸಿದ ನವಿಲು ನೀರಿನದು
ಪುಟಗೌರಿಯೂ ನೀರಿಂದಲೇ ಆದವಳು….
ಆರುವ ಕೆರೆಯ ಅಂಚಿನಲ್ಲೇ ಕುಂಬಾರನ ಡೇರೆ, ಆವೆಯ ಆ
ಮಣ್ಣಿನಿಂದಲೇ ಮೂಡಬೇಕು ಮಡಕೆ, ಅದರಲ್ಲೇ ಕುದಿಯಬೇಕು ಮತ್ತೆ
ನೀರು ಎಸರಿಗೆ, ಯುದ್ಧನೌಕೆಗಳಿಂತೆ ಕಾಣುವ ದಡೂತಿ ಲಾರಿಗಳು
ಟ್ಯಾಂಕುಗಳನ್ನು ಹೊತ್ತುಕೊಂಡು ಊರ ಕಡೆಗೆ ಹೋಗುವುದನ್ನು
ಮರಗಳ ಮಧ್ಯೆ ನಿಂತು ನೋಡುವಳು ವನದೇವತೆ
ಮಾದೇವನ ಜತೆ ಕಾಡಿಲಿ ಒಂದು ಹೆಣ್ಣಾನೆ ಗರ್ಭವತಿಯಾಗಿದ್ದರೆ
ಆಸುಪಾಸು ಇರುವ ಇತರ ಹೆಣ್ಣಾನೆಗಳಿಗೂ ತುಂಬುವುದಂತೆ ಕೆಚ್ಚಲು
ಪ್ರಸವದಲಿ ತಾಯಿ ಅಸುನೀಗಿದರೆ ಮರಿಗೆ ಹಾಲುಣಿಸಲು