ಎಲ್ಲರ ಜೇಬುಗಳಲ್ಲಿರಬೇಕಾದ ಪುಸ್ತಕ -ರಾಜೇಂದ್ರ ಚೆನ್ನಿ
[2020 ಏಪ್ರಿಲ್ ತಿಂಗಳ “ಹೊಸಮನುಷ್ಯ” ಸಮಾಜವಾದಿ ಮಾಸಪತ್ರಿಕೆಯಲ್ಲಿ ದೇವನೂರ ಮಹಾದೇವ ಅವರ ಇತ್ತೀಚಿನ ಕಿರು ಹೊತ್ತಿಗೆ “ಈಗ ಭಾರತ ಮಾತಾಡುತ್ತಿದೆ” ಕುರಿತು ವಿಮರ್ಶಕರಾದ ರಾಜೇಂದ್ರ ಚೆನ್ನಿಯವರು ಬರೆದ ಕಿರು ಪರಿಚಯದ ಪೂರ್ಣಪಾಠ ನಮ್ಮ ಓದಿಗಾಗಿ ಇಲ್ಲಿದೆ…]
ಕರ್ನಾಟಕದ ಸಾರ್ವಜನಿಕ ವಲಯದಲ್ಲಿ ಖಚಿತವಾದ ತಿಳಿವಳಿಕೆ ಹಾಗೂ ನಂಬಿಕೆಗಳೊಂದಿಗೆ, ಅವಶ್ಯಕವಿದ್ದಾಗ ಗಟ್ಟಿದನಿಯಲ್ಲಿ ಮಾತನಾಡುವ ಕೆಲವೇ ಜನರಲ್ಲಿ ದೇವನೂರ ಮಹಾದೇವ ಅವರು ಒಬ್ಬರು. ಇತ್ತೀಚೆಗೆ ಭಾರತೀಯ ಸಂವಿಧಾನವನ್ನು ನಂಬಿಕೊಂಡಿರುವವರು ಮತ್ತು ಸರಕಾರದ ಪೌರತ್ವ ನೀತಿಗಳಿಂದ ತಮ್ಮ ನೆಲೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಜನಾಂಗಗಳು ದೊಡ್ಡ ಪ್ರಮಾಣದಲ್ಲಿ ಭಾರತದ ಉದ್ದಕ್ಕೂ ಪ್ರತಿಭಟನೆ ಮಾಡುತ್ತಿದ್ದಾರೆ. ಅಧಿಕಾರದಲ್ಲಿರುವ ಸರಕಾರವು, ತನ್ನ ಪಕ್ಷ ಹಾಗೂ ಸಂಘಟನೆಗಳ ಬೆಂಬಲದೊಂದಿಗೆ ಪ್ರತಿಭಟಿಸುತ್ತಿರುವವರನ್ನು ಅತ್ಯಂತ ಬರ್ಬರವಾಗಿ ಹತ್ತಿಕ್ಕುತ್ತಿದೆ. ಸಂವಿಧಾನ ಹಾಗೂ ವ್ಯಕ್ತಿ ಸ್ವಾತಂತ್ರ್ಯಗಳಿಗಾಗಿ ಹೋರಾಟ ಮಾಡಬೇಕಾದವರು ಮೌನವಾಗಿದ್ದಾರೆ. ಅಷ್ಟು ಮಾತ್ರವಲ್ಲ ಅನೇಕರು ಪ್ರಭುತ್ವದ ಬೆಂಬಲಕ್ಕೆ ನಿಂತಿದ್ದಾರೆ. ಇಂಥ ಸನ್ನಿವೇಶದಲ್ಲಿ ಮಹಾದೇವರು ಈ ಬಗ್ಗೆ ನಿರಂತರವಾಗಿ ಮಾತನಾಡುತ್ತಾ, ಬರೆಯುತ್ತಾ ಪ್ರತಿಭಟನೆಗಳಲ್ಲಿ ಭಾಗಿಯಾಗುತ್ತಾ ಕ್ರಿಯಾಶೀಲರಾಗಿದ್ದಾರೆ.
“ಈಗ ಭಾರತ ಮಾತಾಡುತ್ತಿದೆ” ಎನ್ನುವ 51 ಪುಟಗಳ ಸಣ್ಣ ಹೊತ್ತಿಗೆಯಲ್ಲಿ ಪೌರತ್ವ ಕಾಯಿದೆಗಳ ಕುರಿತು ಬರೆದಿರುವ ಟಿಪ್ಪಣಿಗಳು, ಲೇಖನಗಳು ಸಂಕಲಿತವಾಗಿವೆ. ಹೊತ್ತಿಗೆಗೆ ಪೀಠಿಕೆಯಾಗಿ ರಹಮತ್ ತರೀಕೆರೆ ಅವರು ಸಂವಿಧಾನದ ಪೀಠಿಕೆಯ ಬಗ್ಗೆ ಬರೆದ ಸರಳ ಸುಂದರ ಲೇಖನವಿದೆ. ಒಂದು ಕಲಾಕೃತಿಯನ್ನು ವಿವರಿಸುವಂತೆ ಸಂವಿಧಾನದ ಪೀಠಿಕೆಯನ್ನು ವಿವರಿಸುತ್ತಾ ರಹಮತ್ ಮೆಲುದನಿಯಲ್ಲಿ ಅದರಲ್ಲಿ ಅಡಕವಾದ ಮೌಲ್ಯಗಳನ್ನು ಇಂದು ಅಧಿಕಾರದಲ್ಲಿರುವ ಶಕ್ತಿಗಳು ದುರ್ಬಲಗೊಳಿಸುತ್ತಿರುವುದರ ಬಗ್ಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದಾರೆ.
ಎಂದಿನಂತೆ ಮಹಾದೇವರು ಧ್ವನಿಪೂರ್ಣವಾದ ರೂಪಕಗಳನ್ನು, ನಾಣ್ಣುಡಿಗಳನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಾ ಸಂವಿಧಾನ ವಿರೋಧಿ ಶಕ್ತಿಗಳ ಬಗ್ಗೆ ಕಟುವಾಗಿಯೇ ವಿಮರ್ಶೆ ಮಾಡಿದ್ದಾರೆ. ಮೋದಿಯವರನ್ನು ‘ಸಿಲ್ಲಿ ಲಲ್ಲಿ’ಗೆ ಹೋಲಿಸಿ ಅವರು ಜನರ ನಂಬುಗೆಗೆ ಮಾಡಿರುವ ಮೋಸವನ್ನು ವಿವರಿಸುತ್ತಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಇತ್ಯಾದಿಗಳಿಂದ “ಮತ್ತಷ್ಟು ಆರ್ಥಿಕ ಕುಸಿತ, ಮತ್ತಷ್ಟು ಉದ್ಯೋಗ ನಾಶ, ಮತ್ತಷ್ಟು ಬೆಲೆ ಏರಿಕೆ…… ಗುಂಪು ಥಳಿತ ಇತ್ಯಾದಿ, ಇತ್ಯಾದಿ ನರಕಕ್ಕೆ ನಮ್ಮನ್ನು ಕರೆದೊಯ್ಯುತ್ತವೆ”. ಇದು ಆಗಬಾರದೆಂದರೆ ಮೋದಿಯವರು ಹದ್ದಾಗುವ ಬದಲು ಹಂಸವಾಗಬೇಕೆಂದು ಮಹಾದೇವರು ಸಲಹೆ ಕೊಡುತ್ತಾರೆ. ಈ ಲೇಖನಗಳಲ್ಲಿ ಬಹುತೇಕ ವಾದಗಳು, ಅಂಕಿ ಸಂಖ್ಯೆಗಳು ಈಗಾಗಲೇ ಸುಪರಿಚಿತವಾಗಿಬಿಟ್ಟಿವೆ. ಮಹಾದೇವರ ವಿಶಿಷ್ಟತೆಯೆಂದರೆ ನಮ್ಮೆದುರಿಗಿರುವ ಸಂವಿಧಾನಾತ್ಮಕ, ಸಾಂಸ್ಕೃತಿಕ, ರಾಜಕೀಯ ಅಪಾಯಗಳ ಬಗ್ಗೆ ಎಚ್ಚರವಾಗಿದ್ದುಕೊಂಡೇ ಈ ಕಾಯಿದೆಗಳ ವಿರುದ್ಧದ ಪ್ರತಿಭಟನೆಗಳು ಹುಟ್ಟುಹಾಕಿರುವ ಕ್ರಿಯಾಶೀಲತೆ, ಸಾಮುದಾಯಿಕ ಪ್ರಜ್ಞೆ, ಮಹಿಳೆಯರ ಅಪಾರ ತಿಳಿವಳಿಕೆ ಹಾಗೂ ಧೈರ್ಯಗಳ ಬಗ್ಗೆ ತುಂಬಾ ಆಶಾವಾದಿಯಾಗಿದ್ದಾರೆ. ಹೀಗಾಗಿ 99% ಭಾರತೀಯರು v/s 1% ಕೋಮುವಾದಿಗಳು ಲೇಖನದಲ್ಲಿ ಭವ್ಯ ಹೀಗೆ ಹೇಳಿದ್ದನ್ನು ಮೆಚ್ಚಿಕೊಳ್ಳುತ್ತಾರೆ. ಆದರೆ ಇದೇ ಲೇಖನದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಅವರು ಅಭಿವ್ಯಕ್ತಿಸಿದ ಆತಂಕವು ಈ ಆಶಾವಾದವನ್ನು ಪ್ರಶ್ನಿಸುತ್ತದೆ. “ಭಾರತೀಯರು ದೇಶವನ್ನು ತಮ್ಮ ಮತಧರ್ಮಗಳಿಗಿಂತ ಮುಖ್ಯವೆಂದು ಭಾವಿಸುತ್ತಾರೋ ಅಥವಾ ಅವರಿಗೆ ತಮ್ಮ ದೇಶಕ್ಕಿಂತ ತಮ್ಮ ಮತಧರ್ಮಗಳೇ ಹೆಚ್ಚು ಮುಖ್ಯವಾಗುತ್ತದೋ?” ಹೀಗಾಗಿ ಬಿಟ್ಟರೆ “ನಮ್ಮ ಸ್ವಾತಂತ್ರ್ಯಕ್ಕೆ ಎರಡನೇ ಬಾರಿ ಗಂಡಾಂತರ ಬಂದಂತೆ” ಎಂದು ಅಂಬೇಡ್ಕರ್ ಅವರು ಹೇಳುತ್ತಾರೆ. ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಹಾಗೂ ಮಹಿಳೆಯರಲ್ಲಿ ಉಕ್ಕಿ ಬಂದಿರುವ ಯುಗದ ಉತ್ಸಾಹ ಮತ್ತು ಕ್ರಮೇಣವಾಗಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವಗಳನ್ನು ಕಳೆದುಕೊಳ್ಳುತ್ತಿರುವ ವಿಷಾದಗಳ ಮಧ್ಯ ಭಾರತವು ಈಗ ತೂಗುತ್ತಿದೆ. ವೈಯಕ್ತಿಕವಾಗಿ ನನಗೆ ಈ 99% ಭಾರತೀಯರು” ಲೆಕ್ಕಾಚಾರದಲ್ಲಿ ನಂಬಿಕೆ ಇಲ್ಲ.
ಈ ಲೇಖನಗಳಲ್ಲಿ ಪೌರತ್ವ ಕಾಯ್ದೆಯ ಜೊತೆಗೆ ಬ್ಯಾಂಕ್ಗಳ ಕುಸಿತ, ಹಿಂಸೆ ಇವುಗಳ ಬಗ್ಗೆಯೂ ಮಹಾದೇವರ ಟಿಪ್ಪಣಿಗಳಿವೆ. ಸ್ಥೂಲವಾಗಿ ಹೇಳುವುದಾದರೆ ಸಾಮಾಜಿಕ ನೈತಿಕ ಪ್ರಜ್ಞೆಯಾಗಿರುವ ಬಹು ಮುಖ್ಯ ಲೇಖಕರು ನಮ್ಮ ದಿನನಿತ್ಯದ ಸರಳ ಆದರೆ ಅಪಾಯಕಾರಿಯಾದ ವಿದ್ಯಮಾನಗಳ ಬಗ್ಗೆ ಆಪ್ತವಾಗಿ ಬರೆದಿರುವ ಪುಸ್ತಕವಿದಾಗಿದೆ. ನಮ್ಮೆಲ್ಲರ ಜೇಬುಗಳಲ್ಲಿ, ವಿದ್ಯಾರ್ಥಿಗಳ ಬ್ಯಾಗ್ಗಳಲ್ಲಿ, ತರಕಾರಿ ಚೀಲಗಳಲ್ಲಿ, ವ್ಯಾನಿಟಿ ಬ್ಯಾಗ್ಗಳಲ್ಲಿ, ಸ್ಕೂಟರ್ ಬಾಕ್ಸ್ಗಳಲ್ಲಿ ಈ ಪುಟ್ಟ ಹೊತ್ತಿಗೆಯನ್ನು ಇಟ್ಟುಕೊಂಡು ಒಬ್ಬರೇ ಸಮಾಧಾನವಾಗಿ, ಸಹಮನಸ್ಕರು ಸಿಕ್ಕರೆ ಜೊತೆಯಾಗಿ ಓದುವುದು ನಮ್ಮೆಲ್ಲರ ಆರೋಗ್ಯಕ್ಕೆ ಒಳ್ಳೆಯದು.
ನಾವು ಪ್ರಜಾಪ್ರಭುತ್ವದ ಮೂಲಗಳನ್ನು ಕಳೆದುಕೊಳ್ಳುತ್ತಿರುವುದಕ್ಕೂ ಸಾಮುದಾಯಿಕವಾಗಿ ವಿವೇಕಪೂರ್ಣವಾಗಿ ಹಾಗೂ ಪ್ರಾಮಾಣಿಕವಾಗಿ ಮಾತನಾಡುವುದನ್ನು ಮರೆತಿರುವುದಕ್ಕೂ ನೇರವಾದ ಸಂಬಂಧಗಳಿವೆ. ಅಲ್ಲದೆ ಪ್ರಭುತ್ವವು ಜನರೊಂದಿಗೆ ಮಾತನಾಡುವುದನ್ನು ಮರೆತು ಆದೇಶಗಳನ್ನು ಮಾತ್ರ ಕೊಡತೊಡಗಿದಾಗ ನಾವು ಪರಸ್ಪರ ಮಾತನಾಡಲೇ ಬೇಕು. ಈ ಪುಸ್ತಕದ ಲೇಖನಗಳು ಅಂಥ ಸಂವಾದಗುಣವನ್ನು ಹೊಂದಿವೆ. ಇಲ್ಲದಿದ್ದರೆ ಇಲ್ಲಿಯ ಒಂದು ಲೇಖನದಲ್ಲಿ ಮಹಾದೇವ ಹೇಳುವ ಹಾಗೆ ನೈಸರ್ಗಿಕ (ಜೈವಿಕ) ಸಂತಾನಕ್ಕಿಂತ ದತ್ತು ಮಕ್ಕಳೇ ಹೆಚ್ಚು ಅಧಿಕಾರದಿಂದ ಮಾತನಾಡಿದಂತೆ “doubtful” ದೇಶಭಕ್ತರೇ ಗಟ್ಟಿದನಿಯಲ್ಲಿ ಮಾತನಾಡುತ್ತಾರೆ.