ದೇವನೂರು ಮಹಾದೇವರ ‘ಡಾಂಬರು ಬಂದುದು’-ತೇಜಶ್ರೀ
[ತೇಜಶ್ರೀಯವರು ಆಂದೋಲನ ಪತ್ರಿಕೆಗೆ ಬರೆಯುತ್ತಿದ್ದ ‘ಓದು-ಬರಹ’ ಅಂಕಣದಲ್ಲಿ 2.2.2020 ರಂದು ಬರೆದ ಈ ಬರಹ ನಮ್ಮ ಮರು ಓದಿಗಾಗಿ ಇಲ್ಲಿದೆ.]
‘ಕಥೆ’ ಅಂತ ಹೇಳಲು ಹೋದರೆ ಎರಡು-ಮೂರು ವಾಕ್ಯಗಳಲ್ಲಿ ಮುಗಿಸಿಬಿಡಬಹುದಾದ ಕಥೆ ಇದು. ಹಾಗಾದರೆ ಇಷ್ಟು ದೀರ್ಘಕಾಲ ಕನ್ನಡ ಸಾಹಿತ್ಯಲೋಕದಲ್ಲಿ ಇದು ಉಳಿದಿರುವುದು ಹೇಗೆ ಎಂದು ಮನಸ್ಸು ಗಿರಗಿರನಾಡುವಾಗ, ಕಥೆಯೊಳಗೆ ಮರೆಯಾಗಿ ಕುಳಿತ ಏನೇನೋ ನಿಧಾನಕ್ಕೆ ತೋರತೊಡಗಿತು, ಹೀಗೆ…
‘ಡಾಂಬರು ಬಂದುದು’ ಕಥೆ ಹಿಗ್ಗುವುದು ತನ್ನ ಅ-ಸಾಮಾನ್ಯ ಮತ್ತು ಅ-ಪೂರ್ವ ಭಾಷಾ ಪ್ರಪಂಚದಿಂದ. ಇದರ ಸೂಚನೆ ಕತೆಯ ಶೀರ್ಷಿಕೆಯಲ್ಲೇ ಇದೆ: ‘ಡಾಂಬರು ಬಂದ ಕಥೆ’ ಎನ್ನುವ ರೂಢಿಯ ಪದಗಳು ‘ಡಾಂಬರು ಬಂದುದು’ ಆಗಿ, ‘ಬಂದುದು’ ಪದವು ಏಕಕಾಲಕ್ಕೆ ಗ್ರಾಮ್ಯವಾಗಿಯೂ, ಗ್ರಾಂಥಿಕವಾಗಿಯೂ ‘ಕೇಳು’ತ್ತದೆ. ‘ಟಾರು’ ಪದಕ್ಕೆ ಬದಲಾಗಿ ಬಳಸಿರುವ ‘ಡಾಂಬರು’ ಪದದ ಉಚ್ಚಾರಣೆಯ ಒತ್ತು ಕಥೆಯ ಘಟನಾವಳಿಗಳಿಗೆ ಸೂಕ್ಷ್ಮವಾದ ಹಿನ್ನೆಲೆ ಒದಗಿಸುತ್ತಿದೆಯೇನೋ ಎಂದು ಭಾಸವಾಗುತ್ತದೆ.
ಒಂದು ವಾಕ್ಯದ ಒಳಗಿಂದ ಇನ್ನೊಂದು ಸಹಜವಾಗಿ ರೂಪುಗೊಳ್ಳುವ ಬಗೆ ಈ ಕಥೆಯದ್ದು. ಹಾಗೆಯೇ ವಾಕ್ಯದ ಯಾವುದೋ ಒಂದು ಪದವು ಹಿಂದಿನ ವಾಕ್ಯಕ್ಕೆ ಕೈಮಾಡಿ ತೋರಿಸುತ್ತ, ನಾವು ಹಿಂದಕ್ಕೆ ಮರಳಿಹೋಗಿ ಅದನ್ನು ಮರು ಅವಲೋಕನ ಮಾಡತೊಡಗುತ್ತೇವೆ, ಆ ಮರುಓದು ನಮ್ಮನ್ನು ಹೊಸ ಆಲೋಚನೆಯಲ್ಲಿ ತೊಡಗಿಸುತ್ತದೆ. ಹೀಗಾದಾಗ ಎರಡೂ ವಾಕ್ಯಗಳು ಒಂದರ ಮೇಲಕ್ಕೆ ಮತ್ತೊಂದು ಪರಸ್ಪರ ಬೆಳಕು ಚೆಲ್ಲತೊಡಗುತ್ತವೆ:
ಉದಾಹರಣೆ: 1. “ಅದು ಯಾವುದಕ್ಕೂ ಹೇಳಿಕೊಳ್ಳುವಂಥ ಹಳ್ಳಿ ಅಲ್ಲ… ಎಲ್ಲ ಕಡೆ ಇರುವಂತೆ ಅಲ್ಲಿ ಒಂದು ತುಂಡು ಹೋಟೆಲ್ಲೂ ಇಲ್ಲ. ಇದ ಹಿಡಿದೇ ಊರ ಊಹಿಸಬಹುದು.
2. ಹತ್ತಿರ ಬಂದರೆ ಅದೇ ಊರ ಜನರು. ಅವರೇ ಮಾತಾಡಿಸಿದರೆ ಅವರೇ ಎಂದು ತಿಳಿಯಬಹುದು. ಹೊರತು ಗುರುತು ಹತ್ತದಷ್ಟು ಅವರ ಯಾಸ ವರಸೆ ಬದಲಿಸಿಬಿಟ್ಟಿದೆ;”
– ಕತೆಯ ಮುಂಚಲನೆ, ವಿಚಾರ ಮತ್ತು ಭಾವ ಮೂರೂ ಒಂದರೊಳಗೊಂದು ಕರಗಿ ಹುಟ್ಟಿರುವ ಈ ಶೈಲಿಯು ಕನ್ನಡಕ್ಕೆ ಹೊಸ ಆಯಾಮ. ಜೊತೆಗೆ, ಆಡುಮಾತಿನಲ್ಲಿ ಬಳಸುವ ಪದ, ಉದ್ಗಾರಗಳು ಕತೆಯಲ್ಲಿ ಸಹಜವಾಗಿ ಸೇರಿಕೊಂಡು ಹೊಸಪದಗಳ ಸೃಷ್ಟಿಯ ಆಟವನ್ನೂ ಆಡುತ್ತಿವೆ. ಇದು ಆಡುಮಾತಿನ ಶಬ್ದಕೋಶವನ್ನು ವಿಭಿನ್ನವಾಗಿ ಬಳಸಿಕೊಳ್ಳುವ ಕಲೆಗಾರಿಕೆಯೇ ಹೊರತು ಅದರ ಮರುಬಳಕೆಯಲ್ಲ. ಕತೆಯ ಆರಂಭದ ಪ್ಯಾರಾದಲ್ಲಿ ಒಂದು ವಾಕ್ಯವಿದೆ: ‘ಹಿಂಗೆ ಸೆಲೆ ಹೊಂಟ ಬೀದಿಯ ಅಕ್ಕಪಕ್ಕ ಒತ್ತೊತ್ತು ಹಟ್ಟಿಗಳು ತಕ್ಕೈಸಿಕೊಂಡಿದ್ದು ಉಸಿರಾಡಲೂ ಅಡಚಣೆ ಮಾಡುವಂತೆ ಮೊದಲ ನೋಟಕ್ಕೆ ಗಕ್ಕ ಕಾಣಬರುತ್ತದೆ’. ಇಲ್ಲಿ ‘ಗಕ್ಕ’ ಪದವು ನಾವು ‘ಗಕ್ಕನೆ’ ಎಂದು ಬಳಸುವ ಪದದ ಸಂಕ್ಷಿಪ್ತ ರೂಪ. ಊರಿನ ವಿನ್ಯಾಸಕ್ಕೂ, ‘ಗಕ್ಕ’ ಪದಕ್ಕೂ ಹತ್ತಿರದ ಸಂಬಂಧವಿದೆ ಎನ್ನುವುದು ಮುಖ್ಯ. ಇಂತಹ ಕೆಲವು ಪದಗಳು ಕತೆಯ ಉದ್ದಕ್ಕೂ ನಮ್ಮನ್ನು ಎಡತಾಕುತ್ತ ಸಾಗುತ್ತವೆ.
‘ಊರ ಮೇಲುನೋಟ’, ‘ರೋಡು ಮಾಡಲು ಆರ್ಡರು’, ‘ಊರ ಮುಂದಲು’ ಇತ್ಯಾದಿಗಳು ಕತೆಯಲ್ಲಿ ಉಪಶೀರ್ಷಿಕೆಗಳು. ಶಾಲೆಯಲ್ಲಿ ಪ್ರಬಂಧ ಬರೆಯುವ ಮಾದರಿಯಂತೆ-ಪೀಠಿಕೆ, ವಿವರಣೆ, ಮುಕ್ತಾಯ- ಬಗೆಯದ್ದಾಗಿ ಇದು ಕಣ್ಣಿಗೆ ಕಾಣುತ್ತದೆ. ಕಥೆಯಲ್ಲಿ ಹಲವು ಬಗೆಯ ನಿರೂಪಣಾಶೈಲಿಗಳು ಬಳಕೆಯಾಗಿವೆ. ಇಡೀ ಕಥೆಯೇ ಪತ್ರಿಕಾವರದಿಯಂತೆಯೋ, ವೀಕ್ಷಕ ವಿವರಣೆಯಂತೆಯೋ ಕಂಡರೂ ಅದರಲ್ಲಿ ಒಳ-ವೈವಿಧ್ಯಗಳಿವೆ. ‘ವಾಚಕರ ಓಲೆ’ಯ ಶಿಷ್ಟ ಶೈಲಿಯೊಂದು ಇಲ್ಲಿದೆ: “ಸ್ವಾಮಿ, ನಮ್ಮೂರಿಗೆ ರೋಡು ಆಗಬೇಕೆಂದು ದೊಡ್ಡ ಮನಸು ಮಾಡಿ ಸರ್ಕಾರ ನಡೆಸಿಕೊಡುತ್ತಿರುವುದೂ ಈಗ ರೋಡು ಆಗುತ್ತಿರುವುದೂ ಸರಿಯಷ್ಟೆ. .. .. .. .. ಇದು ಸರ್ಕಾರಿ ಹಣದ ದುರುಪಯೋಗ. ಇಂತಹದು ಆಗದಂತೆ ತಡೆಗಟ್ಟಬೇಕೆಂದು ನಾವು ಸಂಬಂಧಪಟ್ಟವರಲ್ಲಿ ಪ್ರಾರ್ಥಿಸುತ್ತೇವೆ- ನೊಂದವರು”. ಅಂತೆಯೇ ನಾಟಕದ ರೂಪದಲ್ಲಿಯೇ ಇರುವ ನಾಟಕೀಯತೆಯೂ ಇದೆ, ಊರಿನ ಜನರ ಮಾತು ನಟ-ಭಾಗವತರಂತೆ ಕಾಣುತ್ತದೆ:
ಒಬ್ಬ: ಸುರು ಮಾಡ್ರಪ್ಪೊ.
ಇನ್ನೊಬ್ಬ: ಎಲ್ಲರ್ಗು ಗೊತ್ತಿರೋದೆ ಅದು. ಇನ್ನೇನ್ನ ಸುರುಮಾಡೋದು? ಪೂಜ ಮಾಡೋದ ಬಿಟ್ಟು. ಇತ್ಯಾದಿ…
ಈ ಪಂಚಾಯತಿ ಮುಗಿದ ನಂತರ ಕಥೆಗಾರ ನೀಡುವ ಕ್ರಿಯೆಯ ವರ್ಣನೆ ಹೀಗಿದೆ- “..ಪಟೇಲರು ಕೈ ಬಿಗಿ ಹಿಡಿದುಕೊಂಡು ತಟಕ್ಕ ಎದ್ದು ನಿಂತರು. ಆ ರಭಸಕ್ಕೆ ಲಾಟೀನಿಗೆ ತಲೆ ಬಡಿದು ಗಾಜು ಒಡೆದು ಟಳ ಟಳ ನೆಲಕ್ಕೆ ಉದುರಿತು. ಲಾಟೀನ ಬೆಳಕು ಹಾರಾಡಿ ಹಾರಾಡಿ ಕೊನೆಗೆ ಜೀವ ಹೋಗಿ ಕತ್ತಲು ಅಮರಿಕೊಂಡಿತು.”
ಕಥೆಯ ವಿವರಗಳಿಂದಲ್ಲದೆ ಹೀಗೆ ಕಥನದ ಮೂಲಕವೇ ಬೆಳೆಯುವ ಕಥೆ ಇದು. ಕತ್ತಲು-ಬೆಳಕು, ಕತ್ತಲಿನಂತಹ ಡಾಂಬರು, ಆಸರೆ ನೀಡುವ/ಕತ್ತಲು ಮಾಡುವ ಮರಗಳು, ಸಮುದಾಯದ ಹಿತಕ್ಕೆ ಕಾರಣವಾಗುವ, ಆದರೆ ಅದರಿಂದ ದೂರ ಕರೆದೊಯ್ಯುವ ವಿದ್ಯಾಭ್ಯಾಸ ಮುಂತಾದ ಸಂಕೇತಗಳು ಕಥನದ ಆಶಯಕ್ಕೆ ಪೂರಕವಾಗಿವೆ ಬೆಳೆಯುತ್ತವೆ.
*
ಪಟೇಲರು ಹಳ್ಳಿಗೆ ಡಾಂಬರು ರಸ್ತೆ ಮಾಡಿಸಲು ಹಣ ಮಂಜೂರು ಮಾಡಿಸಿಕೊಂಡು, ಆ ಕೆಲಸ ಮೊದಲಾಗುತ್ತದೆ. ರಸ್ತೆಯ ಕೆಲಸದಲ್ಲಿ ಹಣ ಉಳಿಸಿ ಊರಿನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಳಸುವುದನ್ನು ವಿರೋಧಿಸಿ ಹಲವು ಜಾತಿಗಳ ವಿದ್ಯಾವಂತ ಯುವಕರಾದ ಲಕುಮ, ರಾಜಪ್ಪ, ಮಾದು, ಶಂಭು ಪತ್ರಿಕೆಗೆ ಪತ್ರ ಬರೆಯುತ್ತಾರೆ. ಪಟೇಲರು ಪಂಚಾಯತಿ ಕರೆಯುತ್ತಾರೆ. ಮಾತಿಗೆ ಮಾತು ಬೆಳೆದು ಅಲ್ಲಿ ಏನೂ ತೀರ್ಮಾನವಾಗುವುದಿಲ್ಲ. ಮರುದಿನ, ಟಾರಿನ ಡ್ರಮ್ಮುಗಳು ಊರಿನ ಗುಂಡಿಯಲ್ಲಿ ಟಾರು ಕಕ್ಕುತ್ತಾ ಮಲಗಿರುತ್ತವೆ. ಪಟೇಲರು ಪೋಲಿಸ್ ಸ್ಟೇಷನ್ನಿಗೆ ಹೋಗುತ್ತಾರೆ. ರಂಗಪ್ಪನ ಬೆಪ್ಪು ಮಗ ಸ್ಕೂಲಿಗೆಂದು ಹೋದವನು ಎಲ್ಲೂ ಕಾಣದೆ ಆ ರಾತ್ರಿ ಕಳೆಯುತ್ತದೆ. ಮಾರನೆ ದಿನ ಬಂದ ಪೋಲೀಸರೊಂದಿಗೆ ಊರಿನ ಎಲ್ಲರೂ ಟಾರುಗುಂಡಿಯ ಹತ್ತಿರ ಬಂದು, “…ನೋಡಿ, ನೋಡಿದಾಕ್ಷಣ ಚಕ್ಕ ನಿಂತುಬಿಟ್ಟರು. ರಂಗಪ್ಪನ ಹೈದನ ಕಾಲನ್ನು ಗುಂಡಿಗೆ ಇಳಿದಿದ್ದ ಟಾರು ಹಿಡಿದುಕೊಂಡಿತ್ತು. ಎರಡೂ ಕೈಗಳನ್ನು ಟಾರಿನ ಡ್ರಮ್ಮು ಕಚ್ಚಿಕೊಂಡಿತ್ತು. ಮಯ್ಯಿ ಕಯ್ಯಿ ಮೊಖ ಅನ್ನದೆ ಟಾರು ಟಾರಾಗಿತ್ತು. ಮತ್ತೂ ಹತ್ತಿರದಿಂದ ನೋಡಿದರೆ ಆ ಹೈದನ ಮಯ್ಯೊಳಗ ಇನ್ನೂ ಜೀವ ಆಡುತ್ತಿತ್ತು.” ಎನ್ನುವಲ್ಲಿಗೆ ಕತೆ ನಿಲ್ಲುತ್ತದೆ.
ಕತೆಯನ್ನು ಓದಿ ಮುಗಿಸಿದ ಮೇಲೆ…ಪಂಚಾಯತಿಯ ನಂತರ ಕತೆಯಲ್ಲಿ ಕಾಣಸಿಗದ ನಾಲ್ಕು ಜನ ಯುವಕರು ಏನಾದರು? ‘ಹೊಸೂರ ಹೊಸ ಮಾತು’ ಭಾಗದಲ್ಲಿ ‘ಮಕ್ಕಳು ಪಾಳೇಗಾರಿಕೆ ಮಾಡ್ತಾ ಇದ್ವು, ಗತಿ ಕಂಡ್ವು” ಎನ್ನುವ ಮಾತು ಆ ಹುಡುಗರ ಸಾವು/ಕೊಲೆಯನ್ನು ಸೂಚಿಸುತ್ತದೆಯೇ? ಅದು ನಿಜವಾದರೆ, ಟಾರು ಡಬ್ಬಗಳನ್ನು ಗುಂಡಿಗೆ ನೂಕಿದವರು ಯಾರು? ಪಂಚಾಯತಿಯಲ್ಲಿ ಊರಿನ ಹುಡುಗರನ್ನು ಸಮರ್ಥಿಸಿಕೊಳ್ಳುವ ಶಂಭು ಎನ್ನುವ ಹುಡುಗನ ತಂದೆಯಂಥವರು ಇದನ್ನು ಮಾಡಿರಬಹುದೆ? ಎನ್ನುವ ಪ್ರಶ್ನೆಗಳು ಮೂಡುತ್ತವೆ. ಇಂಥ ಪ್ರಶ್ನೆಗಳಿಗೆ ಕಥೆಯು ಸೂಚಿಸುವ ಅಸ್ಪಷ್ಟ ಉತ್ತರಗಳಿಂದ ಕಥೆಯ ಆಶಯ ಮಬ್ಬಾಯಿತೇ! ಅನ್ನಿಸುವ ಹೊತ್ತಿಗೇ ಇಷ್ಟೆಲ್ಲವನ್ನು ತನಗಿರುವ ಮೂಲದ್ರವ್ಯವಾದ ಭಾಷೆ/ಶಿಲ್ಪದ ಗಾರುಡಿಯಲ್ಲಿಯೇ ಕಥೆಗಾರ ಕಟ್ಟಿಕೊಟ್ಟಿರುವುದು ಕಲೆಯ ಗೆಲುವು.
‘ಡಾಂಬರಿನಂತಹ’ ಆಧುನಿಕತೆಯು ಏಕಕಾಲದಲ್ಲಿ ಜನೋಪಯೋಗಿಯೂ, ಜನವಿರೋಧಿಯೂ ಆಗುವುದನ್ನು ಹೇಳುವ ಕತೆಯು ‘ಫ್ಯೂಡಲ್’ ವ್ಯವಸ್ಥೆಯನ್ನು ಸಮರ್ಥಿಸುವುದಿಲ್ಲ. ಜೀವಸಂಬಂಧಗಳು ನಾಗರಿಕತೆಯ ಹುದುಲಿನೊಳಗೆ ಸಿಲುಕಿ ಪೂರ್ಣ ಸಾಯದೆ ಅಥವಾ ಪೂರ್ಣ ಬದುಕದೆ, ರಂಗಪ್ಪನ ಮುಗ್ಧ ಮಗುವಿನ ಜೀವದ ಹಾಗೆ ಸುಮ್ಮನೆ ‘ಆಡುತ್ತ’ ಇರುವಂತಹ ಬಗೆ ಸಾಂಕೇತಿಕವಾದದ್ದು. ಇಂದಿಗೂ ದಿಟವಾದ ಇದುವೆ ಈ ಕತೆಯ ಜೀವ ಮತ್ತು ಇದೇ ಕತೆಯ ಮಬ್ಬಿನ ತಾಳಿಕೆಗೆ ಕಾರಣ…
ಅಂದ ಹಾಗೆ ಈ ಕತೆಗೀಗ 48ರ ನಡುವಯಸ್ಸು!
*
19.8.2019/21.1.20
ಹಾಸನ