ಕಾ ಎಂಬ ಅಪಶಕುನ, ಎನ್‍ಆರ್‍ಸಿ, ಎನ್‍ಪಿಆರ್ ಎಂಬ ಸಂಚು- ದೇವನೂರ ಮಹಾದೇವ

[`ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)’ ಹಾಗೂ `ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ)’ ವಿರೋಧಿಸಿ ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆ ಗಳ ವತಿಯಿಂದ ಮೈಸೂರಿನ ಪುರಭವನದ ಆವರಣದಲ್ಲಿ  24.12.2019ರ ಮಂಗಳವಾರ ಬೃಹತ್ ಪ್ರತಿಭಟನಾ ಸಭೆ ನಡೆಸಿದ್ದು, ಅದನ್ನು ಉದ್ದೇಶಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತ್ರತ ರೂಪ ನಮ್ಮ ಮರು ಓದಿಗಾಗಿ ಇಲ್ಲಿದೆ.]

ಇಂದು ‘CAA… ಕಾ’ ಕೂಗಿಗೆ ದೇಶ ಬೆಚ್ಚಿ ಬಿದ್ದಿದೆ. ಭಾರತೀಯ ಸುಪ್ತ ಮನಸ್ಸಲ್ಲಿ, ಗತಿಸಿದ ಪಿತೃಗಳು ತಿಥಿಯ ಸಂದರ್ಭದಲ್ಲಿ ಕಾಗೆಯ ರೂಪದಲ್ಲಿ ಬಂದು ಆಹಾರ ಸೇವಿಸುತ್ತಾರೆ ಎಂಬ ನಂಬಿಕೆ ಇದೆ. ಹಾಗೆಯೇ ಕಾಗೆಯು ಮುಂಬರುವ ಕೇಡು-ಅಪಶಕುನದ ಸೂಚನೆ ನೀಡಲು `ಕಾ…ಕಾ’ ಶಬ್ಧ ಮಾಡಿ ಎಚ್ಚರಿಸುತ್ತದೆ ಎಂದು ಭಾರತದ ಸುಪ್ತ ಮನಸ್ಸು ಭಾವಿಸುತ್ತದೆ. ಈ ಪೌರತ್ವ ತಿದ್ದುಪಡಿ ಕಾಯ್ದೆ CAA ಎಂಬುದು ಕಾಗೆಯ ‘ಕಾ’ ಕೂಗಿನಂತೂ ಕೇಳಿಸುತ್ತಾ, ಅದು ಏನೋ ಅಪಶಕುನ, ಏನೋ ಕೇಡಿನ ಸೂಚನೆ ನೀಡುತ್ತಿದೆ ಎಂದು ಭಾರತದ ಅಂತರಾತ್ಮಕ್ಕೆ ಅನ್ನಿಸತೊಡಗಿದೆ.

ಈಗ ನೋಡಿ, ನಮ್ಮ ಸಂವಿಧಾನಕ್ಕೆ ಒಂದು ಚರಿತ್ರೆ ಇದೆ. ಹಾಗೇನೆ ಒಂದು ಚಾರಿತ್ರ್ಯ ಕೂಡ ಇದೆ. ಚಾರಿತ್ರ್ಯ ಎಂದರೆ ಶೀಲ. ಬುದ್ಧನ ಪಂಚಶೀಲದಂತೆ ನಮ್ಮ ಸಂವಿಧಾನಕ್ಕೂ ಪಂಚಶೀಲಗಳಿವೆ. ಅವು- ಸಾರ್ವಭೌಮತ್ವ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯ. ಸಂವಿಧಾನದ ಶೀಲಗಳಲ್ಲಿ ಒಂದಾದ Secular ಅಂದರೆ ಜಾತ್ಯಾತೀತ/ಮತಧರ್ಮ ನಿರಪೇಕ್ಷ ಮೌಲ್ಯವು, ಆಳ್ವಿಕೆಗೆ ಜಾತಿ ಮತ ಧರ್ಮಗಳ ವಾಂಛೆ ಇರಬಾರದು ಎನ್ನುತ್ತದೆ. ಜಾಗತಿಕವಾಗಿ ಭಾರತದ ಗೌರವವನ್ನು ಹೆಚ್ಚಿಸಿದ ಮೌಲ್ಯ ಇದು. ಆದರೆ ಇಂದು ಈ ‘ಪೌರತ್ವ ತಿದ್ದುಪಡಿ ಕಾಯ್ದೆ’ಯು ಸಂವಿಧಾನವನ್ನು ನೇರವಾಗಿ ವಿರೋಧಿಸದೆ ಸಂವಿಧಾನದ ಬೇರುಗಳನ್ನು ಕತ್ತರಿಸುತ್ತದೆ. ಇದು ಭಾರತಕ್ಕೆ ಕೇಡು, ಅಪಶಕುನ ಎರಡೂ ಹೌದು.
ಈಗ ಎನ್‍ಪಿಆರ್ ಮಾಡ ಹೊರಟಿದ್ದಾರೆ. ಇದರೊಳಗೆ ಎನ್‍ಆರ್‍ಸಿ ಬಚ್ಚಿಟ್ಟಿದ್ದಾರೆ. ಸಿಎಎ ಎಂಬ ವಿಷದ ಹಾವೂ ಹೆಡೆಯಾಡಿಸುತ್ತಿದೆ. ಇದನ್ನು ವಾರ್ತಾಭಾರತಿ ಸಂಪಾದಕರಾದ ಎ.ಎಸ್. ಪುತ್ತಿಗೆ ಅವರು ಸರಳವಾಗಿ ಸ್ಪಷ್ಟವಾಗಿ ವಿವರಿಸಿದ್ದಾರೆ:

ಮೊದಲ ಹಂತ:
ಎನ್‍ಪಿಆರ್ ನವೀಕರಣದ ಭಾಗವಾಗಿ ಸರ್ಕಾರದ ಪ್ರತಿನಿಧಿಗಳು ಮನೆಮನೆಗೆ ಬಂದು ಮನೆಯ ಪ್ರತಿಯೊಬ್ಬರ ತಂದೆತಾಯಿಗಳು ಹುಟ್ಟಿದ ಜಾಗ ಮತ್ತು ದಿನಾಂಕದ ಮಾಹಿತಿ ಕೇಳುತ್ತಾರೆ. ಇದು ನೇರವಾಗಿ ಪೋಷಕರ ನಾಗರಿಕತ್ವವನ್ನು ಪರಿಶೀಲಿಸುವ ಪ್ರಶ್ನೆಯಾಗಿದ್ದು, ಇದಕ್ಕೆ ಸರಿಯಾದ ಉತ್ತರ ಕೊಡದವರ ಮಾಹಿತಿ ಪ್ರತಿಯ ಮುಂದೆ “ಅನುಮಾನಾಸ್ಪದ” ಎಂದು ನಮೂದಿಸಲಾಗುವುದು.

ಎರಡನೇಹಂತ:
ಈ ಹಂತದಲ್ಲಿ 2003ರ ನಾಗರಿಕತ್ವ ನಿಯಮಾವಳಿ ಉಪನಿಯಮ 5, 6 ಮತ್ತು 7ರಲ್ಲಿ ನಿರ್ದೇಶಿಸಿರುವಂತೆ “ಅನುಮಾನಾಸ್ಪದ” ಎಂದು ಗುರುತು ಮಾಡಿದ ಕುಟುಂಬಗಳಿಗೆ ಸ್ಥಳೀಯ ರಿಜಿಸ್ಟ್ರಾರ್ ಅವರು ನೋಟಿಸ್ ನೀಡಿ 30 ದಿನಗಳೊಳಗೆ ಸೂಕ್ತ ದಾಖಲೆ ಪತ್ರಗಳನ್ನು ನೀಡಿ ನಾಗರಿಕತ್ವವನ್ನು ಸಾಬೀತು ಮಾಡಲು ಆದೇಶಿಸುತ್ತಾರೆ. ಅವಧಿಯೊಳಗೆ ಸಾಬೀತು ಮಾಡಲು ವಿಫಲವಾದಲ್ಲಿ ಅವರ ಹೆಸರುಗಳನ್ನು ಹೊರಗಿಟ್ಟು ಸ್ಥಳೀಯ ನಾಗರಿಕರ ಪಟ್ಟಿಯನ್ನು ಘೋಷಿಸುತ್ತಾರೆ. ಹಾಗೆ ಹೊರಗುಳಿದವರು ಜಿಲ್ಲಾ ರಿಜಿಸ್ಟ್ರಾರ್ ಮೊರೆ ಹೋಗಬಹುದು. ಆಗ ಜಿಲ್ಲಾ ರಿಜಿಸ್ಟ್ರಾರ್ “ಅನುಮಾನಾಸ್ಪದ”ರಿಗೆ ದಾಖಲೆ ತೋರಿಸಲು 90 ದಿನಗಳ ಅವಕಾಶ ಕೊಡಬಹುದು. ಆಗಲೂ ಸಾಬೀತು ಮಾಡಲು ವಿಫಲವಾದಲ್ಲಿ ಆ ಅನುಮಾನಾಸ್ಪದರನ್ನು “ಅಕ್ರಮ ವಲಸಿಗ” ಎಂದು ಪರಿಗಣಿಸಿ “ಘೋಷಿತ ವಿದೇಶೀಯ” ಎಂದು ಘೋಷಿಸುತ್ತಾರೆ.

ಮೂರನೆ ಹಂತ:
ಆನಂತರ ಈ ರೀತಿ “ಅಕ್ರಮ ವಲಸಿಗ”ರೆಂದು ಘೋಷಿತರಾದವರನ್ನು ಡಿಟೆನ್ಷನ್ ಸೆಂಟರ್-ಬಂದೀಖಾನೆಗಳಿಗೆ ದೂಡಲಾಗುತ್ತದೆ.

ಹೀಗಿದೆ ಎನ್‍ಪಿಆರ್, ಎನ್‍ಆರ್‍ಸಿ, ಸಿಎಎ ಕಾಯಿದೆಗಳ ನಿಗೂಢ ಹೆಜ್ಜೆಗಳು. ಈ ಸಂದರ್ಭದಲ್ಲಿ ಛತ್ತೀಸ್‍ಘಡದ ಮುಖ್ಯಮಂತ್ರಿ ಭೂಪೇಶ ಬಾಘೆಲ್ ಅವರ ಮಾತುಗಳನ್ನು ನಾವು ಕೇಳಿಸಿಕೊಳ್ಳಬೇಕಾಗಿದೆ. ಅವರು ಹೇಳುತ್ತಾರೆ- “ಛತ್ತೀಸ್‍ಘಡದ ಅರ್ಧಕ್ಕೂ ಹೆಚ್ಚಿನ ಜನರಿಗೆ ಪೌರತ್ವ ಸಾಬೀತು ಅಸಾಧ್ಯ. ಎನ್‍ಆರ್‍ಸಿ ಜಾರಿಗೊಳಿಸಿದರೆ ರಾಜ್ಯದ ಶೇಕಡ 50ಕ್ಕೂ ಜನರು ಭೂಮಿ ಅಥವಾ ಭೂ ದಾಖಲೆ ಹೊಂದಿಲ್ಲ. ಅವರಿಗೆ ತಮ್ಮ ಪೌರತ್ವ ಸಾಬೀತು ಪಡಿಸಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿ ಆಮೇಲೆ ಅವರು ಹೇಳುತ್ತಾರೆ- “1906ರಲ್ಲಿ ದಕ್ಷಿಣಾ ಆಫ್ರಿಕಾದಲ್ಲಿ ಬ್ರಿಟಿಷರು ತಂದಿದ್ದ ಗುರುತು ಯೋಜನೆಯನ್ನು ಗಾಂಧೀಜಿ ವಿರೋಧಿಸಿದ ರೀತಿಯಲ್ಲೆ ಎನ್‍ಆರ್‍ಸಿ ಪ್ರಕ್ರಿಯೆ ವಿರೋಧಿಸುತ್ತೇನೆ. ಎನ್‍ಆರ್‍ಸಿ ಜಾರಿಗೊಂಡರೆ ಅದರ ದಾಖಲೆಗೆ ಸಹಿ ಹಾಕದ ಮೊದಲ ವ್ಯಕ್ತಿ ನಾನೇ ಆಗಲಿದ್ದೇನೆ” ಎನ್ನುತ್ತಾರೆ.
ಈ ಕರಾಳ ಕಾಯಿದೆಗಳಿಂದ ಉದ್ಭವಿಸಬಹುದಾದ ಒಂದು ಯಾತಾನಾಮಯವಾದ ದೃಶ್ಯವನ್ನು ನೆನಪಿಸಿಕೊಳ್ಳುವುದಕ್ಕೂ ನನಗೆ ಕಷ್ಟವಾಗುತ್ತಿದೆ. ಅದು ಮೂಲನಿವಾಸಿಗಳ ಪಾಡು. ಭಾರತದಲ್ಲಿ ಶೇಕಡ 8ರಷ್ಟು ಜನರು ಮಾತ್ರ ಮೂಲನಿವಾಸಿಗಳು, ಉಳಿದವರೆಲ್ಲಾ ವಲಸೆಗಾರರು ಎಂದು ಸುಪ್ರೀಂಕೋರ್ಟ್ ಹೇಳಿದೆ. ಮೂಲನಿವಾಸಿಗಳು ಈಗಲೂ ಬಹುತೇಕ ಅರಣ್ಯವಾಸಿಗಳು. ಇವರು ಅಲ್ಲೇ ಹುಟ್ಟಿ ಅಲ್ಲೇ ಮಣ್ಣಾಗುತ್ತ ಬಂದವರು. ಈಗ ಎನ್‍ಪಿಆರ್, ಎನ್‍ಆರ್‍ಸಿ ಬಂದರೆ ಏನಾಗುತ್ತದೆ? ಭಾರತಕ್ಕೆ ವಲಸೆ ಬಂದವರೇ ಅಧಿಕಾರ ಹಿಡಿದು ಈಗ ಮೂಲನಿವಾಸಿಗಳಿಗೆ ‘ನೀವು ಇಲ್ಲಿಯವರು ಎನ್ನುವುದನ್ನು ಸಾಬೀತುಪಡಿಸಿ’ ಎಂದು ಕೇಳಿದಂತಾಗುತ್ತದೆ. ಇದಕ್ಕೆ ಮೂಲನಿವಾಸಿಗಳು ಏನು ತಾನೇ ಹೇಳಿಯಾರು? “ನೀವು ಬರುವುದಕ್ಕೂ ಮೊದಲಿನಿಂದಲೂ ಇಲ್ಲೇ ಹುಟ್ಟೀ ಇಲ್ಲೇ ಸಾಯುತ್ತಿದ್ದೀವಪ್ಪ. ಬೇಕಾದರೆ ಮರ ಕೇಳು, ಬೆಟ್ಟ ಕೇಳು, ನದಿ ಕೇಳು, ಕಾಡಲ್ಲಿರುವ ಪ್ರಾಣಿಗಳನ್ನ ಕೇಳು… ಅವಕ್ಕೆಲ್ಲಾ ನಾವು ಗೊತ್ತಿದೆ. ಇದನ್ನು ಬಿಟ್ಟರೆ ನಮ್ಮ ಬಳಿ ಏನೂ ಇಲ್ಲ” ಎಂದು ಅರಣ್ಯರೋದನ ಮಾಡಬೇಕಾಗುತ್ತದೆ. ಇವರ ಜೊತೆಗೆ ನೆಲೆ ಇಲ್ಲದೆ ಅಲೆಯುತ್ತಿರುವ ಅಲೆಮಾರಿಗಳು, ದಲಿತರು, ಅತಂತ್ರರಾದ ಹಿಂದುಳಿದ ಸಮೂಹಗಳು, ಅಲ್ಪಸಂಖ್ಯಾತರು ಗ್ರಾಮೀಣ ಜನತೆ ಕಣ್ಣುಬಾಯಿ ಬಿಡಬೇಕಾಗುತ್ತದೆ.

ಇದರಲ್ಲೊಂದು ಸಂಚಿನ ವಾಸನೆಯೂ ಇದ್ದಂತಿದೆ. ಮೂಲನಿವಾಸಿಗಳನ್ನು ಎನ್‍ಆರ್‍ಸಿ ನೆಪದಲ್ಲಿ ಅರಣ್ಯದಿಂದ ಸಂಪೂರ್ಣವಾಗಿ ಎತ್ತಂಗಡಿ ಮಾಡುವ ಸಂಚೂ ಇಲ್ಲಿ ಇರಬಹುದು. ಆಗ-ಅರಣ್ಯನಾಶ, ಗಣಿಗಾರಿಕೆ ಮಾಡಿ ಭೂಮಿ ಧ್ವಂಸ ಮಾಡಲು ಕಾರ್ಪೋರೇಟ್ ಕಂಪನಿಗಳಿಗೆ ಹಬ್ಬವಾಗುತ್ತದೆ. ಹೀಗೆಲ್ಲಾ ಆದರೆ ದೇಶವನ್ನೆ ಖಾಸಗಿ ಕಂಪನಿಗಳಿಗೆ ಮಾರಿದಂತಾಗಿಬಿಡುತ್ತದೆ. ನಮ್ಮ ಪೂರ್ವಿಕರು ಕಟ್ಟಿ ಬೆಳೆಸಿ ಉಳಿಸಿಕೊಂಡು ಬಂದಿದ್ದ ಸಂಸ್ಥೆ ಆಸ್ತಿಪಾಸ್ತಿಗಳನ್ನು ಖಾಸಗಿಗೆ ಮಾರಿಕೊಂಡು ಜೀವನ ದೂಡುತ್ತಿರುವ ಸರ್ಕಾರಕ್ಕೆ ಅರಣ್ಯ ನದಿ, ಬೆಟ್ಟ ಮಾರುವುದು ಸಹಜವೇ ಇರಬಹುದು. ಆಗ, ಕಂಪನಿ ಸರ್ಕಾರದ ವಿರುದ್ಧ ಹೋರಾಡಿ ದೇಶ ಸ್ವಾತಂತ್ರ್ಯ ಪಡೆಯಿತು. ಈಗ, ಪಡೆದ ಸ್ವಾತಂತ್ರ್ಯವನ್ನು ಕಂಪನಿಗಳಿಗೆ ಮರುಮಾರಾಟ ಮಾಡಿದಂತಾಗಿ ಬಿಡುತ್ತದೆ. ಉಳಿಗಾಲ ಉಂಟೆ?

ಆದರೀಗ, ಎನ್‍ಪಿಆರ್, ಎನ್‍ಆರ್‍ಸಿ, ಸಿಎಎ ವಿರೋಧಿ ಆಂದೋಲನ ಸರಿಯಾದ ಜಾಗಕ್ಕೆ, ಅಂದರೆ ವಿದ್ಯಾರ್ಥಿಗಳ ಅಂಗಳಕ್ಕೆ ಬಂದಿದೆ. ಭಾರತೀಯತೆ ಮತ್ತು ಸಂವಿಧಾನವನ್ನು ಉಳಿಸಿಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳು ಪಣ ತೊಟ್ಟು ನಿಂತಿದ್ದಾರೆ. ಭಾರತಕ್ಕೆ ಕಷ್ಟ ಬಂದ ಕಾಲದಲ್ಲಿ ಕಾಪಾಡಬಲ್ಲ ಶಕ್ತಿ ಯುವಜನತೆಗೆ ಇದೆ ಎಂದು ಋಜುವಾತು ಮಾಡುತ್ತಿದ್ದಾರೆ. ಪ್ರತಿಭಟನೆಯನ್ನು ತುಂಬಾ ಹೊಣೆಗಾರಿಕೆಯಿಂದಲೂ ನಿಭಾಯಿಸುತ್ತಿದ್ದಾರೆ. ಆದರೂ ಚಳುವಳಿಯನ್ನು ದಾರಿತಪ್ಪಿಸಲು ನಾನಾರೀತಿಯ ಪ್ರಯತ್ನಗಳು ನಡೆಯಬಹುದು. ಹಾಗೂ ವಿದ್ಯಾರ್ಥಿ ಚಳವಳಿ ಒಳಕ್ಕೆ ಸಮಾಜಘಾತಕ ಶಕ್ತಿಗಳು ನುಸುಳಲೂಬಹುದು. ಉದಾಹರಣೆಗೆ ಮುಸ್ಲಿಮರ ಸೋಗಿನಲ್ಲಿ ರೈಲಿಗೆ ಕಲ್ಲು ಎಸೆಯುತ್ತಿದ್ದ ಐದಾರು ಜನ ಬಿಜೆಪಿಯವರು ಸಿಕ್ಕಿಬಿದ್ದಿದ್ದಾರೆ. ಇದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‍ನಲ್ಲಿ ನಡೆದಿದೆ. ಚಳವಳಿಗೆ ಈ ಎಚ್ಚರಿಕೆ ಇರಬೇಕು. ಹಾಗೇ ಗುಜರಾತ್‍ನ ಅಹಮದಾಬಾದ್‍ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಸಿಕ್ಕಿಹಾಕಿಕೊಂಡ ನಾಲ್ವರು ಪೊಲೀಸರನ್ನು ಮುಸ್ಲಿಂ ಯುವಕರ ಗುಂಪೊಂದು ರಕ್ಷಿಸಿದೆ. ಇಂಥ ಹೊಣೆಗಾರಿಕೆಯೂ ಚಳವಳಿಗೆ ಬೇಕಾಗಿದೆ. ಜೊತೆಗೆ ಒಂದು ಚಳುವಳಿಯ ಅಂತಃಸತ್ವ ಅದರ ಅಹಿಂಸಾ ನಡೆನುಡಿಗಳಲ್ಲಿದೆ ಎಂಬುದನ್ನು ಯಾವಾಗಲೂ ನೆನಪಿಟ್ಟುಕೊಳ್ಳೋಣ. ಹಾಗೂ ಇಂಥಹ ಸಂದರ್ಭಗಳಲ್ಲೆ ಹೆಚ್ಚುತ್ತಿರುವ ನಿರುದ್ಯೋಗ, ಕುಸಿಯುತ್ತಿರುವ ಆರ್ಥಿಕತೆ, ಏರುತ್ತಿರುವ ಬೆಲೆ ಏರಿಕೆ ಇಂಥವುಗಳ ಬಗ್ಗೆ ಹೆಚ್ಚೆಚ್ಚು ಮಾತಾಡಬೇಕಾಗಿದೆ.

ಹೌದು, ವಿದ್ಯಾರ್ಥಿ ಯುವಜನತೆ ಹೆಚ್ಚೆಚ್ಚು ಮಾತಾಡಬೇಕಾಗಿದೆ. ಯಾಕೆಂದರೆ ಜನರನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳ ಬಗ್ಗೆ ಮಾತಾಡಬೇಕಾದ ಶಾಸನ ಸಭೆ, ಸಂಸತ್ ಸಭೆ ಕಡೆ ನೋಡಿದರೆ, ಯಾವ ಭರವಸೆಯೂ ಕಾಣುತ್ತಿಲ್ಲ. ಇದನ್ನೆಲ್ಲಾ ಪ್ರಶ್ನಿಸಬೇಕಾದ ಸಂಸತ್‍ನಲ್ಲಿ ಅಪರಾಧಿಗಳು, ಕೋಟ್ಯಾಧಿಪತಿಗಳು ಹೆಚ್ಚಾಗಿದ್ದು ಸಂಸತ್‍ನಿಂದ ಏನನ್ನೂ ನಿರೀಕ್ಷಿಸಲಾಗದು ಎನ್ನುವಂತಾಗಿದೆ. ಹಾಗೂ ರಾಜಕೀಯ ಪಕ್ಷಗಳ ಸ್ಥಿತಿಗತಿಯೂ ದಯನೀಯವಾಗಿದೆ. ಕಮ್ಯುನಿಸ್ಟರು ಸ್ಥಗಿತಗೊಂಡಿದ್ದಾರೆ. ಆಮ್‍ಆದ್ಮಿ, ಸ್ವರಾಜ್‍ಇಂಡಿಯಾದಂತಹ ಪ್ರಯೋಗಶೀಲ ಪಕ್ಷಗಳು ವ್ಯಾಪಕವಾಗುತ್ತಿಲ್ಲ. ಮೋದಿಶಾ ಆಡಳಿತವು ಕಾಂಗ್ರೆಸ್ ಮತ್ತು ಇನ್ನಿತರ ಪಕ್ಷಗಳನ್ನು ತೆವಳುವಂತೆ ಮಾಡಿಬಿಟ್ಟಿದೆ. ವಿಪರ್ಯಾಸವೆಂದರೆ ಈ ಮೋದಿಶಾ ಆಡಳಿತವು ಸ್ವತಃ ತನ್ನ ಪಕ್ಷ ಬಿಜೆಪಿಯನ್ನೇ ಧ್ವಂಸ ಮಾಡಿಬಿಟ್ಟಿದೆ. ಅತಿ ದೊಡ್ಡ ಪಕ್ಷ ಎನಿಸಿಕೊಂಡಿರುವ ಬಿಜೆಪಿಗೆ ಒಂದು ರಾಜಕೀಯ ಪಕ್ಷಕ್ಕೆ ಇರಬೇಕಾದ ಯಾವ ಚಹರೆಯೂ ಇಂದು ಉಳಿದಿಲ್ಲ. ಜೀವ ಇಲ್ಲದ ಸತ್ತ ದೇಹದಂತೆ ಇದೆ. ಬಿಜೆಪಿ ಪಕ್ಷದ ಹೆಸರಿನಲ್ಲಿ ಮೋದಿಶಾ ಗ್ಯಾಂಗ್ ಆಡಳಿತ ನಡೆಸುತ್ತಿದೆ.

ಇಂತಹ ಸಂಕಷ್ಟದ ಸಮಯದಲ್ಲಿ, ಹೌದು, ವಿದ್ಯಾರ್ಥಿ ಯುವಜನತೆ ದೇಶವನ್ನು ಮುನ್ನಡೆಸಬೇಕಾಗಿದೆ.