“ಚೌಕಿದಾರ್ ಚೋರ್ ಅಲ್ಲದಿರಲೂಬಹುದು”-ದೇವನೂರ ಮಹಾದೇವ
[16.4.2019ರ ಪ್ರಜಾವಾಣಿಯಲ್ಲಿ ಪ್ರಕಟವಾದ ದೇವನೂರ ಮಹಾದೇವ ಅವರ ಲೇಖನ, ನಮ್ಮ ಮರು ಓದಿಗಾಗಿ…]
“ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ” ಎಂಬ ಮಾತಿದೆಯಲ್ಲಾ ಇದು ಇಂದಿನ ಜಾಗತೀಕರಣದ ಮಾಯಾಜಿಂಕೆ ಅನ್ನಿಸಿಬಿಡುತ್ತದೆ. ಪ್ರಧಾನಮಂತ್ರಿ ಮೋದಿಯವರು “ತಮ್ಮ ಸರ್ಕಾರ ಅನುಕೂಲ ಮಾಡಿಕೊಡುವ ವ್ಯವಸ್ಥಾಪಕನಂತೆ ಕಾರ್ಯ ನಿರ್ವಹಿಸುತ್ತದೆ, ತಮ್ಮ ಸರ್ಕಾರದ ಗಮನವೆಲ್ಲಾ- ಕನಿಷ್ಠ ಸರ್ಕಾರ ಗರಿಷ್ಠ ಆಡಳಿತದತ್ತ” ಎನ್ನುತ್ತಾರೆ. ವಾಣಿಜ್ಯ ಉದ್ಯಮ ನಡೆಸುವುದು ಸರ್ಕಾರದ ಉಸಾಬರಿಯಲ್ಲ ಎಂಬರ್ಥದಲ್ಲಿ “I believe government has no business to do business. The focus should be on Minimum Government but Maximum Governance” ಎಂದು ಘೋಷಿಸುತ್ತಾರೆ.
ಈ ಮಾತುಗಳನ್ನು ಕೇಳುವುದಕ್ಕೆ ಮೋಹಕ. ಈ ನುಡಿಗಳ ಆಳದಲ್ಲಿ ಭಯಾನಕ ಪಾತಾಳ ಲೋಕವಿದೆ; ಭೂಗತ ಜಗತ್ತಿನ ವ್ಯಾಪಾರ ವ್ಯವಹಾರಗಳು ಜರಗುತ್ತಿರುವುದು ಅಲ್ಲಿ ಗೋಚರಿಸುತ್ತದೆ. ಇದಕ್ಕೊಂದು ಉದಾಹರಣೆ- ಮೈಸೂರಿನಲ್ಲಿ 2017ರ ಮೇ ತಿಂಗಳಿನಲ್ಲಿ ಬಿಇಎಂಎಲ್ ಅನ್ನು ಖಾಸಗಿಕರಣ ಮಾಡಕೂಡದೆಂದು ಒಂದು ಚಳುವಳಿಯಾಯಿತು. ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಬಿಇಎಂಎಲ್ ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದಲ್ಲಿರುವ ಒಂದು ಪ್ರಮುಖ ಉದ್ದಿಮೆ. ಕರ್ನಾಟಕದ ಬೆಂಗಳೂರು, ಕೆಜಿಎಫ್, ಮೈಸೂರು, ಹಾಗೂ ಕೇರಳದ ಪಾಲಕ್ಕಾಡ್ನಲ್ಲಿ ಇದರ ಘಟಕಗಳಿವೆ. ಈ ಉದ್ದಿಮೆ, ಸತತವಾಗಿ ಲಾಭದಾಯಕವಾಗಿ ನಡೆದುಕೊಂಡು ಬರುತ್ತಿದೆ. ಬಿಇಎಂಎಲ್ ಘಟಕಗಳು, ಸುಮಾರು 4500 ಎಕರೆ ಭೂಮಿ ಹೊಂದಿದೆ. ಇದರ ಮಾರುಕಟ್ಟೆ ಬೆಲೆ ಲಕ್ಷಕೋಟಿಗೂ ಹೆಚ್ಚಾಗುತ್ತದೆ. ಈ ಬಿಇಎಂಎಲ್ಗೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಿ ಆರ್ಡರ್ ಪಡೆದುಕೊಳ್ಳುತ್ತದೆ ಎಂಬ ಹೆಗ್ಗಳಿಕೆಯೂ ಇದೆ.
ಇಂತಹ ಒಂದು ಸಾರ್ವಜನಿಕ ಉದ್ದಿಮೆಯನ್ನು ಖಾಸಗಿ ಕಂಪೆನಿಯೊಂದಕ್ಕೆ ವಹಿಸಿಕೊಡುವ ಹುನ್ನಾರಕ್ಕಾಗಿ ಕೇಂದ್ರಸರ್ಕಾರವು ತನ್ನ ಶೇಕಡ 54ರಷ್ಟು ಇರುವ ಶೇರುಗಳಲ್ಲಿ 26ರಷ್ಟು ಶೇರುಗಳನ್ನು ಅನಿಲ್ ಅಂಬಾನಿಯವರ ರಿಲಯೆನ್ಸ್ ಕಂಪೆನಿಗೆ ಮಾರುವ ವ್ಯವಹಾರ ಕುದುರಿಸುತ್ತಿತ್ತು. ಈ ಖಾಸಗೀಕರಣದ ಸಂಚಿನ ವಿರುದ್ಧ ಬಿಇಎಂಎಲ್ ಕಾರ್ಮಿಕರ ಧರಣಿ ಮೆರವಣಿಗೆಗಳು ನಡೆಯುತ್ತಿರುವಾಗ ಸಾರ್ವಜನಿಕ ಅಭಿಪ್ರಾಯವನ್ನು ಗಮನಿಸುತ್ತಾ ಹೋದೆ. “ಏನೋ ಕಾರ್ಖಾನೆ ನಷ್ಟದಲ್ಲಿರಬೇಕು. ಕಾರ್ಖಾನೆ ಮುಚ್ತಾ ಇರಬೇಕು. ಕೆಲಸ ಹೋಗುತ್ತೆ ಅಂತ ಕೂಗಾಡುತ್ತಿದ್ದಾರೆ” – ಇದೇ ಸುಮಾರು ಜನರ ಅಭಿಪ್ರಾಯವಾಗಿತ್ತು. ಕಾರ್ಮಿಕರು ಸಾರ್ವಜನಿಕ ಸಂಪತ್ತನ್ನು ಸಾರ್ವಜನಿಕವಾಗೇ ಉಳಿಸುವುದಕ್ಕಾಗಿ ಹೋರಾಡುತ್ತಿದ್ದಾರೆ ಅಂದುಕೊಂಡ ಒಬ್ಬನೇ ಒಬ್ಬ ಸಾರ್ವಜನಿಕನೂ ನನಗೆ ಕಂಡುಬರಲಿಲ್ಲ! ಸಾರ್ವಜನಿಕ ಸಂಪತ್ತನ್ನು ಸಾರ್ವಜನಿಕರು ತಮ್ಮದು ಎಂದುಕೊಂಡಿಲ್ಲ. ಇಲ್ಲೇ ಭಾರತದ ದುರಂತ ಇರುವುದು ಅನ್ನಿಸಿಬಿಟ್ಟಿತು.
ಈಗಲೂ ಬಿಇಎಂಎಲ್ ತಲೆಯ ಮೇಲೆ ಕತ್ತಿ ತೂಗುತ್ತಿದೆ. ಇದು ಒಂದು ಉದಾಹರಣೆ ಮಾತ್ರ.
ಹೀಗೆಯೇ ಜಾಗತಿಕರಣ ಆರಂಭ ಆದಾಗಿನಿಂದ ಸಾರ್ವಜನಿಕ ಸಂಪತ್ತನ್ನು ಖಾಸಗೀ ಕಂಪೆನಿಗಳಿಗೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಲೇ ಬಂದಿದೆ. ಇದು ಮೋದಿಯವರ ಆಡಳಿತzಲ್ಲಿ ಉಲ್ಪಣಗೊಂಡಿತು. ಮೋದಿಯವರು ಎದೆಯುಬ್ಬಿಸಿ ಇದೊಂದು ಸಾಧನೆ ಎಂಬಂತೆ ಯಾವ ಎಗ್ಗೂ ಇಲ್ಲದೆ ಸಾರ್ವಜನಿಕ ಸಂಪತ್ತನ್ನು ಖಾಸಗಿ ಕಂಪೆನಿಗಳ ಪದತಳಕ್ಕೆ ಒಪ್ಪಿಸ ತೊಡಗಿದರು. ಇದನ್ನು ಧೈರ್ಯ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ದಡ್ಡನಿಗೆ ಧೈರ್ಯ ಜಾಸ್ತಿಯೆಂಬ ಹಳ್ಳಿಗಾಡಿನ ನುಡಿಗಟ್ಟನ್ನು ಅವರು ನೆನಪಿಸಿಕೊಳ್ಳುವುದು ಒಳಿತು. ಇದು ನೆನಪಿನಲ್ಲಿದ್ದಿದ್ದರೆ ನೋಟು ಅಮಾನ್ಯೀಕರಣ ಮಾಡಿ ನೂರಾರು ಜನರ ಸಾವಿಗೂ, ಉದ್ಯೋಗನಷ್ಟಕ್ಕೂ ತಾವು ಕಾರಣರಾಗದೇ ಇರಬಹುದಿತ್ತು. ಆರ್ಭಟಿಸುವ ಅವರಿಂದ ಯಾವುದನ್ನೂ ನಿರೀಕ್ಷಿಸುವಂತಿಲ್ಲ.
ಈ ಹಿಂದೆ ವಾಜಪೇಯಿಯವರ ಆಡಳಿತದಲ್ಲಿ ಸಾರ್ವಜನಿಕ ಸಂಪತ್ತನ್ನು ಖಾಸಗಿ ಕಂಪೆನಿಗಳಿಗೆ ವಹಿಸುವ ಕೃತ್ಯಕ್ಕಾಗಿಯೇ ‘ಹೂಡಿಕೆ ಹಿಂತೆಗೆತ ಇಲಾಖೆ’ಯೊಂದನ್ನು ಹುಟ್ಟುಹಾಕಲಾಗಿತ್ತು. ಆಮೇಲೆ ಈ ಪ್ರಕ್ರಿಯೆಯನ್ನು ಸುಲಲಿತಗೊಳಿಸುವ ಸಲುವಾಗಿ ಪ್ರತ್ಯೇಕ ‘ಹೂಡಿಕೆ ಹಿಂತೆಗೆತ ಸಚಿವ ಸಮಿತಿ’ ಬಂತು. ಮುಂದೆ 2014ರಲ್ಲಿ ಮೋದಿಯವರು ಅಧಿಕಾರಕ್ಕೆ ಬಂದಮೇಲೆ ಯೋಜನಾ ಆಯೋಗವನ್ನು ಬಿಸಾಕಿ ಅದರ ಬದಲು ನೀತಿ ಆಯೋಗವನ್ನು ಚಲಾವಣೆಗೆ ತರುತ್ತಾರೆ. ಇದರ ಪ್ರಮುಖ ಕಾರ್ಯವೆಂದರೆ – ಕೇಂದ್ರದ ಸಾರ್ವಜನಿಕ ಆಡಳಿತದಲ್ಲಿರುವ ಉದ್ದಿಮೆ ಸಂಸ್ಥೆಗಳನ್ನು ಮಾರಾಟ ಮಾಡುವುದು ಅಥವಾ ಸರ್ಕಾರಿ ಷೇರುಗಳನ್ನು ಹಿಂತೆಗೆದುಕೊಳ್ಳುವುದು. ಈ ನೀತಿ ಆಯೋಗ 76 ಸಾರ್ವಜನಿಕ ಆಡಳಿತದ ಉದ್ದಿಮೆ ಸಂಸ್ಥೆಗಳನ್ನು ಖಾಸಗಿ ಕಂಪೆನಿಗಳ ಪದತಳಕ್ಕೆ ಒಪ್ಪಿಸಲು ಟೊಂಕಕಟ್ಟಿ ನಿಂತಿದೆ.
ಇಷ್ಟೇ ಅಲ್ಲ, ಸರ್ಕಾರಿ ಉದ್ದಿಮೆ ಸಂಸ್ಥೆಗಳನ್ನು ಮಾರಲೋಸುಗ ನೀತಿ ಆಯೋಗ ರಣಹದ್ದಿನಂತೆ ಹಾರಾಡುತ್ತಿದೆ. ಈ ಖಾಸಗಿಗೊಳಿಸುವ ಪ್ರಕ್ರಿಯೆಯನ್ನು ಶೀಘ್ರವಾಗಿ ನೆರವೇರಿಸಲು ರಿಲೆಯನ್ಸ್ ಮ್ಯೂಚುಯಲ್ ಫಂಡ್ ಮ್ಯಾನೇಜರುಗಳನ್ನು ನೇಮಕಮಾಡಿಕೊಳ್ಳಲಾಗಿದೆ! ಈಗ ಸರ್ಕಾರ ತನ್ನ ಬಿಎಸ್ಎನ್ಎಲ್ ಸಂಸ್ಥೆಯ ಕುತ್ತಿಗೆಯನ್ನು ತಾನೇ ಹಿಸುಕಿ ಅದರ ಉಸಿರುಗಟ್ಟಿಸಿ ಖಾಸಗಿ ಕಂಪೆನಿಗೆ ಒಪ್ಪಿಸಲು ತಯಾರಿ ನಡೆಸುತ್ತಿದೆ. ಇದೇ ಗತಿ ರೈಲ್ವೆಗೂ ಕಾದಿದೆ. ಅರಣ್ಯ ಅಷ್ಟೇ ಯಾಕೆ ನದಿಗಳೂ ಖಾಸಗೀಕರಣದ ದವಡೆಗೆ ಸಿಲುಕುವ ಭೀತಿಯಿದೆ.
ಆಯ್ತು, ಪೂರ್ವಿಕರು ಕಷ್ಟಪಟ್ಟು ಕಟ್ಟಿ ಬೆಳೆಸಿ ಉಳಿಸಿಕೊಂಡು ಬಂದಿದ್ದ ಆಸ್ತಿಪಾಸ್ತಿಗಳನ್ನು ಮಾರಾಟ ಮಾಡಿ ಮನೆ ನಡೆಸುವ ಮಗನನ್ನು ಏನೆಂದು ಕರೆಯುತ್ತೇವೆ? ಮನೆಹಾಳ ಅಥವಾ ಕೇಡುಗ ಅನ್ನುತ್ತೇವೆ. ಹಾಗೇನೇ ಪೂರ್ವಿಕರು ಕಟ್ಟಿ ಬೆಳೆಸಿ ಉಳಿಸಿಕೊಂಡು ಬಂದಿದ್ದ ದೇಶದ ಸಂಪತ್ತನ್ನು ಮಾರಾಟ ಮಾಡುತ್ತಾ ‘ದೇಶವನ್ನು ನಡೆಸುವವ’ನನ್ನು ಏನೆನ್ನಬೇಕು? ಮಹಾನ್ ಮನೆ ಹಾಳ ಅಥವಾ ಮಹಾಕೇಡುಗ ಅನ್ನಬೇಕಾಗುತ್ತದೆ.
ಆದರೆ ಪ್ರಧಾನಮಂತ್ರಿಯವರು ತಮ್ಮನ್ನು ಕೇಡುಗ ಅಥವಾ ಮನೆಹಾಳ ಎಂದುಕೊಂಡಿಲ್ಲ. ದೇಶದ ಸಂಪತ್ತನ್ನು ಮಾರುವುದನ್ನು ಒಂದು ಸುಂದರ ಸ್ವಪ್ನ ಎಂದುಕೊಂಡಿದ್ದಾರೆ. ಇದನ್ನೇ ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ ಎಂದುಕೊಂಡಿದ್ದಾರೆ. ಜನತಂತ್ರ ಸರ್ಕಾರವೇನೋ ಕನಿಷ್ಠ ಆಗುತ್ತಿದೆ, ನಿಜ. ಆದರೆ ಹಣತಂತ್ರದ ಕಂಪೆನಿ ಸರ್ಕಾರಗಳ ಆಡಳಿತ ಗರಿಷ್ಠವಾಗುತ್ತಿದೆ. ದೇಶದ ಸಂಪತ್ತಿನ 70ರಷ್ಟು ಭಾಗ ಶೇಕಡ ಒಂದರಷ್ಟು ಜನರ ಕೈ ಸೇರಿದೆ. ನಿಜವಾದ ಆಳ್ವಿಕೆ ಹಣತಂತ್ರದ ಕಂಪೆನಿಗಳ ಸರ್ಕಾರದ ಕೈವಶವಾಗುತ್ತಿದೆ. ಇದರ ಪರಿಣಾಮವಾಗಿ ಚುನಾವಣಾ ಆಯೋಗ, ಕೋರ್ಟು, ಮಾಧ್ಯಮ ಇತ್ಯಾದಿ ಎಲ್ಲಾ ಕ್ಷೇತ್ರಗಳು ತಮ್ಮ ಸ್ವಭಾವವನ್ನು, ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿದೆ. ಇಂತಲ್ಲಿ ಚುನಾವಣಾ ವ್ಯವಸ್ಥೆ ನ್ಯಾಯಸಮ್ಮತವಾಗಿ ಇರುತ್ತದೆಯೇ? ಇನ್ನು ಜನತಂತ್ರದ ಪ್ರಜಾಪ್ರಭುತ್ವ?
ಹೀಗಿರುವಾಗ ಜನತಂತ್ರದ ಕನಿಷ್ಠ ಸರ್ಕಾರದ ಪ್ರಧಾನಮಂತ್ರಿ ಮೋದಿಯವರು ತನ್ನನ್ನು ‘ಚೌಕಿದಾರ್’ ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿಯವರು ‘ಚೌಕಿದಾರ್ ಚೋರ್ ಹೈ’ ಅನ್ನುತ್ತಿದ್ದಾರೆ. ಚೌಕಿದಾರ್ ಚೋರ್ ಅಲ್ಲದಿರಲೂಬಹುದು. ಅವರು ನಿಜವಾದ ಚೌಕಿದಾರ್ ಆಗಿರಲೂಬಹುದು. ಆದರೆ ಯಾರಿಗೆ? ಜನತಂತ್ರದ ಪ್ರಧಾನಿಯೊಬ್ಬರು ಹಣತಂತ್ರದ ಕಂಪೆನಿ ಸರ್ಕಾರಗಳ ಸಂಪತ್ತನ್ನು ಕಾಯುವ ಚೌಕಿದಾರ್ ಆಗಿಬಿಟ್ಟರೆ? ಉಡಾಳ ಭೂಮಾಲಿಕನೊಬ್ಬ ತನ್ನ ಕುಟುಂಬ ನಿರ್ವಹಣೆಗಾಗಿ ತನ್ನ ಆಸ್ತಿ ಪಾಸ್ತಿಗಳನ್ನು ಸಿರಿವಂತನೊಬ್ಬನಿಗೆ ಮಾರಿ ಕೊನೆಗೆ ಆ ಸಿರಿವಂತನ ಮನೆ ಕಾಯುವ ಚೌಕಿದಾರ್ ಆಗಿಬಿಟ್ಟರೆ? ಆ ಕಾವಲುಗಾರ ತನ್ನ ಕೆಲಸ ಉಳಿಸಿಕೊಳ್ಳಲು ತನ್ನ ಮಾಲಿಕನ ಕಾಳದಂಧೆಗೆಲ್ಲ ಶಾಮೀಲಾಗಬೇಕಾಗುತ್ತದೆ ಅಷ್ಟೆ. ಆ ಚೌಕಿದಾರ್ಗೂ ಈ ಚೌಕಿದಾರ್ಗೂ ವ್ಯತ್ಯಾಸವಿದೆಯೇ? ಜನತಂತ್ರ ವ್ಯವಸ್ಥೆಯ ಪ್ರಧಾನಿಯೊಬ್ಬ ಹಣತಂತ್ರ ಕಂಪೆನಿ ಸರ್ಕಾರಗಳ ಸಂಪತ್ತು ಕಾಯುವ ಚೌಕಿದಾರ್ ಆಗಿಬಿಡುವುದನ್ನು ಕಲ್ಪಿಸಿಕೊಳ್ಳಲು ಸಂಕಟವಾಗುತ್ತಿದೆ
ಹೀಗೆ ದೇಶದ ಸಂಪತ್ತನ್ನು ಮಾರುತ್ತಿರುವ ವ್ಯಕ್ತಿಯನ್ನೇ “ದೇಶಕ್ಕಾಗಿ ಮೋದಿ” ಎಂದು ವ್ಯವಸ್ಥಿತವಾಗಿ ಪ್ರಚಾರ ಮಾಡಲಾಗುತ್ತಿದೆ. ಅನೇಕಾನೇಕ ಮುಗ್ಧರೂ ನಂಬಿಕೆಯಿಂದಲೇ “ದೇಶಕ್ಕಾಗಿ ಮೋದಿ” ಎನ್ನುತ್ತಿದ್ದಾರೆ. ದೇಶದ ಸಂಪತ್ತನ್ನು ಮಾರುವಾತನನ್ನೇ ‘ದೇಶಕ್ಕಾಗಿ ಮೋದಿ’ ಎಂದು ಮುಗ್ಧ ಜನತೆ ಭಾವಿಸುತ್ತಿರುವುದು ಅತ್ಯಂತ ಯಾತನಾಮಯವಾಗಿದೆ. ಯಾಕೆಂದರೆ ಭಾರತದಲ್ಲಿ ನಂಬಿಕೆಯಿಂದ ಜಡ ಕಲ್ಲೂ ದೇವರಾಗಿ ವರ್ತಿಸುತ್ತದೆ. ಜನ ತಮ್ಮ ಉದ್ದಾರಕನೆಂದು ಬಹಳವಾಗಿ ನಂಬಿರುವ ಜೀವಂತ ವ್ಯಕ್ತಿಯೊಬ್ಬ ಕಲ್ಲಾಗಿಬಿಟ್ಟ. ಇದಾಗಬಾರದಿತ್ತು, ಇದಾಗಬಾರದಿತ್ತು.