ಮೈಸೂರಿನ ಧರಣಿಯ ದಿನಗಳು-ಸುರೇಶ್ ಕಂಜರ್ಪಣೆ

[9.12.2018ರ ಆಂದೋಲನ ಪತ್ರಿಕೆಯ ಹಾಡುಪಾಡು ಪುರವಣಿಯ ವಾರದ ಅಂಕಣ ವಿಭಾಗದಲ್ಲಿ ಲೇಖಕ ಸುರೇಶ್ ಕಂಜರ್ಪಣೆಯವರು ಮೂರು-ನಾಲ್ಕು ದಶಕದ ಹಿಂದಿನ ದಲಿತ ಸಂಘರ್ಷ ಸಮಿತಿಯ ಧರಣಿಯ ದಿನಗಳ ನೆನಪಿನಲ್ಲಿ ಇಂದಿನ ಚಳವಳಿಯ ದಿಕ್ಕುದೆಸೆಯ ಅವಲೋಕನ ಮಾಡಿದ್ದಾರೆ. ಅದರಲ್ಲಿ ಆಗ ಲೋಕಸಭಾ ಸದಸ್ಯರಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ದೇವನೂರ ಮಹಾದೇವ ಅವರು ಧರಣಿಯೊಂದರಲ್ಲಿ ಮುಖಾಮುಖಿಯಾದ ಕುರಿತು ಬರೆದಿದ್ದಾರೆ. ಲೇಖನ ನಮ್ಮ ಓದಿಗಾಗಿ ಇಲ್ಲಿದೆ.]
                                                                        
ಸಾಮಾಜಿಕ ಆರ್ಥಿಕ ಬದಲಾವಣೆಗೆ ಹೋರಾಡುವ ವ್ಯಕ್ತಿ/ ಸಂಘಟನೆಗಳಿಗೆ ಒಂದು ಒಳಮುಖದ ಆತ್ಮ ವಿಮರ್ಶೆ ಇರಬೇಕಾಗುತ್ತದೆ. ಈ ಆತ್ಮ ವಿಮರ್ಶೆ ಒಂದು ಸಿದ್ಧಾಂತವನ್ನು, ಹೋರಾಟವನ್ನು, ಬದ್ಧತೆಯನ್ನು ಗಟ್ಟಿಗೊಳಿಸುತ್ತೆ.
78-80ರ ಮಧ್ಯೆ ದಸಂಸ ಕರ್ನಾಟಕದಲ್ಲಿ ಈ ಸಾಮಾಜಿಕ ನ್ಯಾಯ ಮತ್ತು ಜಾತಿ ಅಸಮಾನತೆಯ ವಿರುದ್ಧ  ಸಂಘಟಿತವಾದ ಬಗೆ ಅಪೂರ್ವವಾದದ್ದು. ಅದಕ್ಕೊಂದು ಅಪೂರ್ವ ಆತ್ಮ ವಿಮರ್ಶೆ ಮತ್ತು ಎಲ್ಲರನ್ನೂ ಒಳಗೊಳ್ಳುವ ನೈತಿಕ ಔದಾರ್ಯವೂ ಇತ್ತು.   ನಾವು ಓದುತ್ತಿದ್ದಾಗ ದಸಂಸದ ಕಾರ್ಯಕ್ರಮಗಳ ಈ  ನೈತಿಕ ನಿಚ್ಚಳತೆಯೇ ನಮ್ಮನ್ನು ಬೆಳೆಸಿದ್ದು ಅನ್ನಿಸುತ್ತೆ.
ಸದಾ ಸರ್ಕಾರದ ವಿರುದ್ಧ ಮೇಲ್ಜಾತಿಯವರ ವಿರುದ್ಧ ಕೂಗಿ ಕೂಗಿ ರೇಗುತ್ತಿದ್ದಾಗ, ದೇವನೂರು ಮಹಾದೇವ ಮತ್ತು ಅವರ ಸಂಗಾತಿಗಳು ಒಂದು ಅಪೂರ್ವ ಕಾರ್ಯಕ್ರಮ ಸಂಘಟಿಸಿದ್ದರು. ನಮ್ಮ ಕಷ್ಟ ಸಂಕಷ್ಟಗಳನ್ನು ಮುಂದಿಡಲು ನಮ್ಮ ಪ್ರತಿನಿಧಿಗಳೇ ಸಾಕಷ್ಟು ಇದ್ದಾರೆ; ಅವರು ಅಧಿಕಾರ, ಪಕ್ಷದ ಹಂಗಿನಲ್ಲಿ ಮೈ ಮರೆತಿದ್ದಾರೆ.  ಆದ್ದರಿಂದ ನಮ್ಮ ಪ್ರತಿಭಟನೆ ಅವರ ವಿರುದ್ಧವೂ ಇರಬೇಕು ಎಂಬುದು ಈ ಕಾರ್ಯಕ್ರಮದ ಸ್ಥೂಲ ನಿಲುವು. “ದಲಿತ ಮಂತ್ರಿ-ಶಾಸಕರ ಮನೆ ಎದುರು ಧರಣಿ” ಹುಟ್ಟಿಕೊಂಡದ್ದು ಹೀಗೆ.  ಇದೊಂದು ಅಪೂರ್ವ ಆತ್ಮ ವಿಮರ್ಶೆಯ ನಿಲುವು. ಮನೆಮಂದಿಯೇ ಮನೆಯಾತನ ವಿರುದ್ಧ ತಣ್ಣಗಿನ ಪ್ರತಿಭಟನೆ ಮಾಡುವ ಪರಿ ಇದು.
 ಈಗಿನಂತೆ ಆಗಲೂ ಮೈಸೂರು ಚಾಮರಾಜನಗರಗಳ ಬಹುತೇಕ ಶಾಸಕರು ಮೈಸೂರಿನಲ್ಲೇ ಮನೆ ಮಾಡಿಕೊಂಡಿದ್ದರು. ವೆಂಕಟರಮಣ, ಟಿ.ಎನ್ ನರಸಿಂಹಮೂರ್ತಿ ಹೀಗೆ ದಲಿತ ಮೀಸಲಾತಿ ಕಾರಣಕ್ಕಾಗಿ ಶಾಸಕರಾದವರು ಇದ್ದರು. ಶ್ರೀನಿವಾಸ್ ಪ್ರಸಾದ ಆಗ ಲೋಕಕಸಭಾ ಸದಸ್ಯರಾಗಿದ್ದರು.
 ಎಷ್ಟು ಜನ ಶಾಸಕರಿದ್ದಾರೆ ಎಂಬ ತಲೆ ಲೆಕ್ಕ ಹಾಕಿ ಒಬ್ಬೊಬ್ಬರ ಮನೆ ಎದುರೂ ಇಂತಿಷ್ಟು ಜನ ದಸಂಸ ಕಾರ್ಯಕರ್ತರು ಬ್ಯಾನರ್ ಕಟ್ಟಿ ಧರಣಿ ಕೂರುವುದ ಎಂದು ದಸಂಸದ ಮೈಸೂರು ಕಾರ್ಯಕರ್ತರು ನಿರ್ಧರಿಸಿ  ಕಾರ್ಯಕರ್ತರನ್ನು ಹಂಚಿ ಹಾಕಲಾಯಿತು. ದೇವನೂರು   ಎಲ್ಲೆಲ್ಲಿ  ಹೇಗೆ ನಡೆಯುತ್ತಿದೆ ಎಂಬ  ಮಾಹಿತಿ ಪಡಕೊಂಡು ಅವಶ್ಯ ಬಿದ್ದಲ್ಲಿ  ಮಾರ್ಗದರ್ಶನ  ಕೊಡುವ ಕೆಲಸ ವಹಿಸಿಕೊಂಡಿದ್ದರು. ಇದೊಂತರಾ ಬೂತ್ ಗಳಿಗೆ  ಭೇಟಿ ಕೊಟ್ಟ ಹಾಗೆ.
 ಶ್ರೀನಿವಾಸ್ ಪ್ರಸಾದ ಮನೆ ಎದುರು ಕೂರುವ ತಂಡದಲ್ಲಿ ನಾನೂ  ಇದ್ದೆ. ಇಂದುಧರ ಹೊನ್ನಾಪುರ ಅವರ ಭಾವ ಕೂಡಾ ಇದ್ದರು.  ಅವರ ಹೆಸರು ಸಹಿತ ಇನ್ನೊಂದಷ್ಟು ಗೆಳೆಯರ ಹೆಸರು ಈಗ ನೆನಪಿಲ್ಲ.
 ಸರಿ,  ಅಶೋಕಪುರಂನ ಶ್ರೀನಿವಾಸ ಪ್ರಸಾದ ಮನೆ ಎದುರು ಒಂದು ಬ್ಯಾನರ್ ತಗುಲಿ ಹಾಕಿ ಪ್ಲಾಸ್ಟಿಕ್ ಗೋಣಿ ಹೊಲಿದ ಹಚ್ಚಡದ  ತರದ ಒಂದನ್ನು ಶಾಮಿಯಾನಾ ತರ ಕಟ್ಟಿ ಕೂತದ್ದಾಯಿತು. ಎಳನೀರು ಮಾರುವವರು ಹರಕು ಗೋಣಿ ಕಟ್ಟಿ ನೆರಳಲ್ಲಿ ಕೂತ ಹಾಗೆ ಈ ವ್ಯವಸ್ಥೆ. ಕೂತರೆ ಸುಮ್ಮನಿರಲಾಗುತ್ತದೆಯೇ..? ಹೋರಾಟದ ಹಾಡುಗಳು ಶುರುವಾಯಿತು.  ಕಪ್ಪುಕಪ್ಪು ಮೋಡದಲಿ.. ಯಾರಿಗೆ ಬಂತು ಎಲ್ಲಿಗೆ ಬಂತು.. ಹೀಗೆ…
 ಆ ದಿನ  ಪ್ರಸಾದ್ ಮನೆಯಲ್ಲಿ ಏನೋ ಪೂಜೆ ಇಟ್ಟುಕೊಂಡಿದ್ದರು. ನಮಗೆ ಗೊತ್ತಿರಲಿಲ್ಲ.  ಹಾಡಿನ ವರಸೆ ಕೇಳುತ್ತಿದ್ದಂತೆ, ಕೆರಳಿದ ಪ್ರಸಾದ್ ಅವರ ಕೆಲವು  ಅನುಯಾಯಿಗಳು ಹೊರಗೆ ಬಂದು, “ಏನು ಧರಣಿ ಕೂರ್ತೀರಾ? ನಡೀರಾಚೆ” ಎಂದಿದ್ದೇ, ನಮ್ಮ ಹುಲು ಶಾಮಿಯಾನಾವನ್ನು ಕಿತ್ತು ನಮ್ಮನ್ನೆಲ್ಲಾ ಕತ್ತು ಪಟ್ಟಿ ಹಿಡಿದು ತಳ್ಳಿದರು. ಅಲ್ಲೇ ಇದ್ದರೆ ಇನ್ನೂ ರಾದ್ಧಾಂತವಾಗುತ್ತದೆ ಎಂದು ಅಲ್ಲಿಂದ ಬಂದು ರಸ್ತೆ ಮೂಲೆಯಲ್ಲಿ ಸುಮ್ಮನೆ ಅನಾಥರ ಹಾಗೆ ನಿಂತೆವು. ನಮ್ಮ ತಂಡದ ಒಂದಿಬ್ಬರು ಸೈಕಲ್ ಹಾಕಿಕೊಂಡು ದೇವನೂರ ಅವರಿಗೆ ವಿಷಯ ತಿಳಿಸಿದರು. ದೇವನೂರು ಒಂದೈದು ನಿಮಿಷ ಸುಮ್ಮನೆ ಕೂತಿದ್ದವರು, “ನಾನೇ ಬರ್ತೀನಿ” ಅಂದವರು,  ಹತ್ತೇ  ನಿಮಿಷದಲ್ಲಿ  ಪ್ರಸಾದ್ ಮನೆ ಎದುರು  ಹಾಜರಾಗಿ ನಾವು ಕೂತಲ್ಲೇ, ನಮ್ಮೊಂದಿಗೆ  ಕೂತರು.  ಉರಿ ಬಿಸಿಲು. ಶಾಮಿಯಾನಾ ಎಂಬ ಹರಕು ತುಂಡು ಕಿತ್ತೊಗಿತ್ತಲ್ಲ.
                                                                  
 ಒಂದೈದು ನಿಮಿಷ ವಿಚಿತ್ರ ಮೌನ. ಅಸಹನೀಯ ಕುತೂಹಲ.
ಪ್ರಸಾದ್ ಮನೆಯೊಳಗಿಂದ  ಬಂದರು. (ಪ್ರಸಾದ ಮತ್ತು ದೇವನೂರರ ಸಹೋದರ ಸ್ನೇಹ ವಿಶ್ವಾಸ ಗೊತ್ತಿದ್ದವರಿಗೆ ಈ ಸನ್ನಿವೇಶ ಅರ್ಥವಾದೀತು)  ಬಂದಿದ್ದೇ ದೇವನೂರರ ಹತ್ತಿರ ಏರುದನಿಯಲ್ಲಿ ವಾದಕ್ಕೆ ನಿಂತರು. ನಾವು ದಂಗು ಬಡಿದು ಹೋಗಿದ್ದೆವು. ನಾವೆಲ್ಲಾ ನೋಡಿದ ಶಾಸಕ,  ಎಂ.ಪಿಗಳು ಡೊಳ್ಳು ಹೊಟ್ಟೆ ಹೊತ್ತು ದೇಶಾವರಿ ಮಾತಿನ ವರಸೆಯಲ್ಲಿ ಇರುತ್ತಿದ್ದವರೇ ಹೊರತು, ರಕ್ತಮಾಂಸ ತುಂಬಿದ ಮನುಷ್ಯರ ಹಾಗೆ ವರ್ತಿಸಿದ್ದು ನಾವು ನೋಡಿರಲಿಲ್ಲ.
 “ನಾನು ಕೆಲಸ ಮಾಡಿಲ್ವಾ? ನನ್ನ ಕೈಲಾದಷ್ಟು ನಾನು ದಲಿತ ಹಿತಾಸಕ್ತಿ ಬಗ್ಗೆ ಶಕ್ತಿ ಮೀರಿ ದುಡೀತಿಲ್ವಾ?” ಎಂಬುದು ಅವರ ವಾದ. ಮಾತಾಡುತ್ತಾ ಮಾತಾಡುತ್ತಾ ಪ್ರಸಾದ್ ದನಿ ಗದ್ಗದವಾಯಿತು.ಎಂಥಾ ಏರುದನಿಯಾದರೂ ಅಳು ಬೆರೆತ ದನಿ ಅದು. ದೇವನೂರ ಶಾಂತವಾಗಿ ಅವರ ಬೆನ್ನು ಸವರಿ, “ನಮ್ಮ ಹುಡುಗರ ಮೇಲೆ ಹಲ್ಲೆ ಆಗಿದೆ. ಇದು ಸಾಂಕೇತಿಕ ಧರಣಿ. ಇದರ ಉದ್ದಿಶ್ಯ ನಿನಗೆ ಅರ್ಥವಾಗಬೇಕಿತ್ತು. ವ್ಯಕ್ತಿಗತವಾಗಿ ಒಬ್ಬ ಶಾಸಕನ ಬಗ್ಗೆ ಆಗಿದ್ದರೆ ಅದು ಬೇರೆ. ಇದು ಚಳವಳಿಯ ಭಾಗ” ಎಂದು ಸ್ಪಷ್ಠನೆ ಕೊಡುತ್ತಾ ಹೋದರು.
 ಟವೆಲ್ ಒಂದರಲ್ಲಿ ಕಣ್ಣಿರು ಒರೆಸಿಕೊಂಡ ಪ್ರಸಾದ್ “ನನ್ನನ್ನು ನಿಮ್ಮೋನು ಅಂತ ಕಾಣಲಿಲ್ಲ ಅನ್ನೊದೇ ಬೇಜಾರು” ಎಂದು ಶಕ್ತಿ ಉಡುಗಿ ನಿಂತರು. ನಾವೆಲ್ಲಾ ಮಾತು ಕಡಿದು ನಿಂತಿದ್ದೆವು. ನಾವಷ್ಟೇ ಅಲ್ಲ;  ಇಡೀ ಲೊಕಾಲಿಟೀನೆ ಸ್ತಬ್ಧವಾಗಿತ್ತು.
ಪ್ರಸಾದ್ ಸಾವರಿಸಿಕೊಂಡು, “ ಊಟಕ್ಕೆ ಬನ್ನಿ , ಊಟ ಮಾಡ್ಕೊಂಡು  ಹೋಗಿ” ಎಂದರು.
 ದೇವನೂರು ತಣ್ಣಗೆ ನಿರಾಕರಿಸಿದರು. ಇಲ್ಲೇ ಕೂತಿರ್ತೇವೆ ಎಂದರು.  ಆ ಉರಿಬಿಸಿಲಿಗೆ ಅಲ್ಲೊಂದು ಶಾಮಿಯಾನಾ ಹಾಕಲೂ ಬಿಡಲಿಲ್ಲ. ಉರಿಬಿಸಿಲಲ್ಲಿ ದೇವನೂರು. ಮನೆ ಒಳಗೆ  ಮುನಿಸು, ಸಂತಾಪದಲ್ಲಿ ಪ್ರಸಾದ್.  ನಮ್ಮ ಧರಣಿ ಪೂರ್ವ ನಿರ್ಧಾರದಂತೆ  ಮತ್ತೊಂದಷ್ಟು ಹೊತ್ತಿಗೆ  ಬರ್ಕಾಸ್ತಾಯಿತು.
 ಆ ದಿನ ಪ್ರಸಾದ್ ಮನೆಯಲ್ಲೂ ಯಾರೂ ಉಣಲಿಲ್ಲ ಎಂದು ಆಮೇಲೆ ಗೊತ್ತಾಯಿತು. ಪ್ರಸಾದ್ ತೀವ್ರ ದುಃಖ ಆಕ್ರೋಶದಲ್ಲಿ ಏನೂ ತಿನ್ನದೇ ಕೂತಿದ್ದರಂತೆ. ಇನ್ನು ಮನೆಯವರು, ನೆಂಟರು ತಿನ್ನುತ್ತಾರೆಯೇ?
ನಾವು ಈ ಕಡೆ ಬಂದು ಏನು ತಿಂದೆವು ನೆನಪಿಲ್ಲ. ಆದರೆ  ಆ ದಿನ ದಸಂಸದ ನೈತಿಕ ನಿಷ್ಠುರತೆ ಅನಾವರಣಗೊಂಡ ರೀತಿ   ಕಾದ ಕಬ್ಬಿಣದಲ್ಲಿ ಬರೆ ಇಟ್ಟಂತೆ ನನ್ನಲ್ಲಿ ಇಂದೂ ಉಳಿದುಕೊಂಡಿದೆ.
 ದೇವನೂರ ಮಹಾದೇವ ಅವರ ನೈತಿಕ ನಾಯಕತ್ವದ ಬಿಗಿ ನಮ್ಮಂತವರನ್ನು ಬೆಳೆಸಿದ ರೀತಿಗೆ ಇದೊಂದು ನೆನಪಿನ ಉದಾಹರಣೆ. ಅಂದು  ಭಾವಾವೇಶದಲ್ಲಿ ನಡುಗಿದ್ದ ಪ್ರಸಾದ್ ಇಂದಿಗೂ ಕಾಡುತ್ತಾರೆ. ಇಬ್ಬರಿಗೂ ಎಷ್ಟು ವಯಸ್ಸು? 30ರ ಮುಂದೆ ಇನ್ನೊಂದಷ್ಟು ವರ್ಷ ಇರಬಹುದು.
ಇಂದು ಹರಿಹಂಚಾಗಿರುವ ದಲಿತ ನಾಯಕತ್ವ, ಅದರೊಳಗಿನ ಒಡಕುಗಳು, ಅದರ ಲಾಭ ಪಡೆಯುತ್ತಿರುವ ಹಿಂದುತ್ವ ನಾಯಕತ್ವ ಎಲ್ಲಾ ನೋಡಿದರೆ, ಬಿದಿರು ಬೆಳೆದು ಅಳಿದ ಹಾಗೆ ಈ ಚಳವಳಿಗಳು ಅನ್ನಿಸುತ್ತೆ. ಮತ್ತೆ ಮತ್ತೆ ಹುಟ್ಟಿ ಬೆಳೆಯುವುದು, ಮಾಸಿ ಹೋಗುವುದು. ನೆನಪುಗಳನ್ನು ಕೆದಕಿ ಮತ್ತೆ ಗಟ್ಟಿಗೊಳಿಸಲು ನೋಡುವುದು ಇದು ಪ್ರತೀ ತಲೆಮಾರಿನ ಭಾರ.
 ಈಗ ಇದನ್ನು ನೆನಪಿಸಿಕೊಳ್ಳುವುದು ಹೆಚ್ಚು ಆಪ್ತ ಅನ್ನಿಸಿದೆ. ದಲಿತ ಚಳವಳಿಯಷ್ಟೇ ಅಲ್ಲ; ಇತರ ಚಳವಳಿಗಳು  ತಮ್ಮವರೆನ್ನಿಸಿಕೊಂಡವರೊಂದಿಗೆ ನಿಷ್ಠುರ ಸಂಬಂಧವನ್ನೂ ಸಾಧಿಸಲಾಗದೇ ಹೋಗಿದ್ದಾರೆ. ಪಕ್ಷ ರಾಜಕೀಯದ ದೊಂಬರಾಟದಲ್ಲಿ ಅತ್ತಿಂದಿತ್ತ ಜಿಗಿಯುವ ನಾಯಕರ ಕಂಡು ದಿಗ್ಭ್ರಮೆಗೊಳ್ಳುವ ಸಾದಾ ಹಿಂಬಾಲಕರ ದುಗುಡಗಳೆಲ್ಲಾ ಚಳವಳಿಯ ವೇಗ ಕಸಿದುಕೊಳ್ಳುವುದನ್ನು ನೋಡುತ್ತಿದ್ದೇವೆ.
ಮತ್ತೆ ಇಂಥಾ ತೀವ್ರ ಆತ್ಮ ವಿಮರ್ಶೆಯ ದಿನಗಳು ಮರುಕಳಿಸಿದರಷ್ಟೇ ಹೊಸ ತಲೆಮಾರು ಹೋರಾಟದ ಹೆಜ್ಜೆ -ಹಾದಿ ಬಗ್ಗೆ ಸ್ಪಷ್ಠತೆ ಪಡೆಯಬಹುದೇನೋ. ನನ್ನಂತವರು ಈಗಲೂ  ದಿಕ್ಕೆಡದೇ, ಹುಂಬ ಆತ್ಮವಿಶ್ವಾಸನ್ನೂ ತೋರದೇ ಆ  ಧಿರೋದಾತ್ತ ಚಳವಳಿಯ ಭಾಗವಾಗಲು ಕಾಯುತ್ತಿದ್ದೇವೆ. ವಯಸ್ಸು ಎಂಬುದು ಒಂದು ಸಂಖ್ಯೆ ಅಷ್ಟೇ.
ಬಾಬಾಸಾಹೇಬರ ಪರಿನಿರ್ವಾಣದ ದಿನ ಕಳೆಯಿತು. ಈ ಅರುವತ್ತು ವರ್ಷದಲ್ಲಿ ಅವರಿಲ್ಲದ ಅನಾಥ ಪ್ರಜ್ಞೆಯಿಂದಾಚೆ ಹೊಸ ದಿಗಂತದ ಕಡೆ ಹೆಜ್ಜೆ ಇಡಬೇಕಲ್ಲ. ಒಬ್ಬೊಬ್ಬರು ಒಂದೊಂದು ತಂಗುದಾಣ ಅರಸಿ ವಿಶ್ರಮಿಸಿಕೊಳ್ಳುತ್ತಿರುವ ಕಾಲದಲ್ಲಿ ನಾವಿದ್ದೇವಾ?