ದಂಧೆಯೊಳಗೆ ಉಳಿಯುವಂತೆ ಮಾಡುವುದೂ ಅಪರಾಧವಲ್ಲವೇ?-ರೂಪ ಹಾಸನ


ಅಕ್ಟೋಬರ್ 2015ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಇಡೀ ದೇಶದಲ್ಲೇ ಮೊದಲ ಬಾರಿಗೆ ಲೈಂಗಿಕ ವೃತ್ತಿನಿರತರ ಸ್ಥಿತಿಗತಿ ಅಧ್ಯಯನಕ್ಕಾಗಿ ವಿಧಾನ ಪರಿಷತ್ ಸದಸ್ಯೆ ಜಯಮಾಲ (ಈಗ ಸಚಿವೆ) ಅವರ ಅಧ್ಯಕ್ಷತೆಯಲ್ಲಿ 21 ಜನ ಸದಸ್ಯರನ್ನೊಳಗೊಂಡ ಸಮಿತಿಯೊಂದನ್ನು ನೇಮಿಸಿತ್ತು. ರಾಜ್ಯದಲ್ಲಿ ತಳಹಂತದ ವೇಶ್ಯಾವೃತ್ತಿಯಲ್ಲಿರುವವರ ಸ್ಥಿತಿಗತಿಗಳನ್ನು ನಿಖರವಾಗಿ ಗುರುತಿಸುವುದು, ಅವರಿಗೆ ಸರ್ಕಾರದಿಂದ ಅಗತ್ಯ ಸೌಲಭ್ಯಗಳನ್ನು ನೀಡುವುದು, ಪುನರ್ವಸತಿ ಕಲ್ಪಿಸುವುದು, ಅವರ ಮಕ್ಕಳಿಗೆ ಶಿಕ್ಷಣ ನೀಡುವುದು ಸೇರಿದಂತೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿ ರಚಿಸಿಲಾಗಿದ್ದ ಈ ಸಮಿತಿಯಲ್ಲಿ ವೇಶ್ಯಾವಾಟಿಕೆಯ ಜಾಲದಲ್ಲಿ ಬಿದ್ದವರನ್ನು ಪುನರ್ವಸತಿಗೊಳಿಸುವಲ್ಲಿ ತೊಡಗಿಸಿ ಕೊಂಡಿರುವ ಹಾಸನದ ಸಾಮಾಜಿಕ ಕಾರ್ಯಕರ್ತೆ, ಲೇಖಕಿ ರೂಪ ಹಾಸನ ಅವರು ಸಹ ಒಬ್ಬ ಸದಸ್ಯೆಯಾಗಿ ಸಕ್ರಿಯರಾಗಿ ಕೆಲಸ ಮಾಡಿದ್ದರು.
ಈ ಸಮಿತಿಯು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕೂಲಂಕಷ ಅಧ್ಯಯನ ಮಾಡಿ ಸರ್ಕಾರಕ್ಕೆ 2017ರ ಫೆಬ್ರವರಿಯಲ್ಲೇ ವರದಿ ಸಲ್ಲಿಸಿದೆ. ಆದರೆ ವರದಿ ಅನುಷ್ಠಾನದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿರುವ ರೂಪ ಹಾಸನ ಅವರೊಂದಿಗೆ ‘ದಿ ಸ್ಟೇಟ್’ ನಡೆಸಿರುವ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ:-

ದಿ ಸ್ಟೇಟ್: ಅಧ್ಯಯನ ಸಮಿತಿ ಶಿಫಾರಸುಗಳೇನು, ಸರ್ಕಾರ ಯಾವ ಕ್ರಮ ಕೈಗೊಂಡಿದೆ?
ರೂಪ ಹಾಸನ: ಕರ್ನಾಟಕ ರಾಜ್ಯ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿಯ ಮೂಲಕ ಸರ್ಕಾರಕ್ಕೆ ಸಲ್ಲಿಸಿದ ವರದಿಯಂತೆ 72% ದಮನಿತ ಹೆಣ್ಣುಮಕ್ಕಳು ಈ ದಂಧೆಯಿಂದ ಹೊರಬರಲು ಇಚ್ಛಿಸಿದ್ದಾರೆ. ಇವರ ಪುನರ್ವಸತಿಗಾಗಿ ವಿವಿಧ ಯೋಜನೆಗಳ ಮೂಲಕ ಅನುಷ್ಠಾನಕ್ಕಾಗಿ ವಾರ್ಷಿಕ 733 ಕೋಟಿಗಳನ್ನು ವಿನಿಯೋಗಿಸಲು ಶಿಫಾರಸ್ಸಿನಲ್ಲಿ ಸೂಚಿಸಲಾಗಿತ್ತು. ಆದರೆ ವರದಿ ಸಲ್ಲಿಕೆಯ ಆನಂತರ ಮಂಡನೆಯಾದ ಮೂರೂ ಆಯವ್ಯಯದಲ್ಲಿ ಐದುಪೈಸೆಯನ್ನೂ ಪ್ರತ್ಯೇಕವಾಗಿ ಈ ಕೆಲಸಕ್ಕಾಗಿ ತೆಗೆದಿರಿಸಿಲ್ಲ! ಇದು ಏನನ್ನು ಸೂಚಿಸುತ್ತದೆ? ಸಮಿತಿ ರೂಪಿಸಿ, ಎಷ್ಟೆಲ್ಲ ಜನರ ಶ್ರಮ, ಸಮಯ ಸರ್ಕಾರದ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ವರದಿ ಪಡೆಯುವುದು, ಆನಂತರ ಅದನ್ನು ಧೂಳು ಹಿಡಿಸುವುದು. ಇದು ಮೊದಲೇ ನೊಂದ ಹೆಣ್ಣುಮಕ್ಕಳ ಬದುಕಿನಲ್ಲಿ ಹೊಸ ಆಸೆ ಹುಟ್ಟಿಸಿ ಚೆಲ್ಲಾಟವಾಡಿದಂತಲ್ಲವೇ? ಸಮಿತಿಯು ವರದಿ ನೀಡುವ ಮೂರು ವರ್ಷಗಳ ಮೊದಲಿನಿಂದಲೇ ದಮನಿತರ ಪುನರ್ವಸತಿಗಾಗಿ ಸರ್ಕಾರ ‘ಚೇತನಾ’ ಎಂಬ ಯೋಜನೆಯಡಿ, ಪ್ರತಿ ವರ್ಷ ರಾಜ್ಯಾದ್ಯಂತದ 1000 ದಮನಿತರಿಗೆ 20,000 ಸಹಾಯಧನ ನೀಡುವ ಮೂಲಕ ಪುನರ್ವಸತಿ ಕಲ್ಪಿಸಲು ಪ್ರಯತ್ನಿಸಿತ್ತು. ಅಧ್ಯಯನ ಸಮಿತಿಯ ವರದಿಯು ಈ ಚೇತನಾ ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನು ವಾರ್ಷಿಕ 10,000ಕ್ಕೆ ಏರಿಸಿ, ಸಹಾಯಧನವನ್ನು ಒಂದು ಲಕ್ಷಕ್ಕೆ ಹೆಚ್ಚಿಸಬೇಕೆಂದು ಶಿಫಾರಸ್ಸು ಮಾಡಿತ್ತು. ವಿಪರ್ಯಾಸವೆಂದರೆ ವರದಿ ಸಲ್ಲಿಕೆಯಾದ ನಂತರ ಕಳೆದ ವರ್ಷ 1000 ಫಲಾನುಭವಿಗಳ ಗುರಿಯನ್ನು 325ಕ್ಕೆ ಇಳಿಸಲಾಗಿದೆ! ಅಂದರೆ 2/3 ಭಾಗದಷ್ಟು ಇಳಿಕೆ! ಈ ವರ್ಷ 403 ಮಂದಿಗೆ ಮಾತ್ರ ಈ ಯೋಜನೆಯಡಿ ಪುನರ್ವಸತಿ ಕಲ್ಪಿಸಲು ಯೋಜಿಸಲಾಗಿದೆಯಂತೆ! ಇದು ಕ್ರೂರತೆಯ ಪರಮಾವಧಿ. ಈ ಯೋಜನೆಯ ಮೂಲಕ 25000 ಸಹಾಯಧನ, 25000 ಸಾಲವನ್ನು ನೀಡಲಾಗುತ್ತದೆ. ಇದು ಎಲ್ಲ ರೀತಿಯಲ್ಲೂ ಅಸಮರ್ಪಕವಾದುದಾಗಿದೆ. ಕರ್ನಾಟಕ ರಾಜ್ಯ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿಯ ವರದಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಎಲ್ಲ ರೀತಿಯಲ್ಲೂ ಉಲ್ಲಂಘಿಸಿದೆ ಮತ್ತು ಅವಮಾನಿಸಿದೆ.

ದಿ ಸ್ಟೇಟ್: ಲೈಂಗಿಕ ವೃತ್ತಿನಿರತರ ಸ್ಥಿತಿ ಹೇಗಿದೆ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರದಿಂದ ಪ್ರಯತ್ನ ನಡೆಯುತ್ತಿಲ್ಲವೇ?
ರೂಪ ಹಾಸನ: ರಾಜ್ಯ ಆರೋಗ್ಯ ಇಲಾಖೆಯಡಿ ಒಂದು ಘಟಕವಾಗಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯಲ್ಲಿ ಏಡ್ಸ್ ನಿಯಂತ್ರಣದ ಹೆಸರಿನಲ್ಲಿ 18-20 ವರ್ಷಗಳಿಂದ ರಾಜ್ಯಾದ್ಯಂತ ಕಾಂಡೋಂ ವಿತರಿಸಲು, 96,878 ಮಂದಿ ತಳಹಂತದ ಲೈಂಗಿಕ ವೃತ್ತಿನಿರತರನ್ನು ನೋಂದಾಯಿಸಿಕೊಳ್ಳಲಾಗಿದೆ. ಹೀಗೆ ಯಾವುದೇ ಹೆಣ್ಣುಮಕ್ಕಳನ್ನು ಕಾಂಡೋಂ ವಿತರಣೆಗಾಗಿ ನೋಂದಾಯಿಸಿಕೊಳ್ಳುವುದೇ ಎಲ್ಲ ರೀತಿಯಲ್ಲೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇದೊಂದು ರೀತಿ ಸರ್ಕಾರಿ ಪ್ರಾಯೋಜಿತ ವೇಶ್ಯಾವಾಟಿಕೆ ಎಂದರೂ ತಪ್ಪಾಗಲಾರದು. ಈ ನೋಂದಾಯಿತರಲ್ಲಿ ಸಾವಿರಾರು ಅಪ್ರಾಪ್ತರೂ, 1800ಕ್ಕೂ ಹೆಚ್ಚು ಅಂಗವಿಕಲರೂ, 8000ದಷ್ಟು ಹೆಚ್‍ಐವಿ ಸೋಂಕಿತರೂ ಇದ್ದು, ಇದು ಮಕ್ಕಳ ಹಕ್ಕುಗಳ, ಮಹಿಳಾ ಹಕ್ಕುಗಳ, ಅಂಗವಿಕಲರ ಹಕ್ಕುಗಳನ್ನೊಳಗೊಂಡು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ದೂರು ಸಲ್ಲಿಸಲಾಗಿದೆ. ಲೈಂಗಿಕ ದಮನಿತರನ್ನು ನೋಂದಾಯಿಸಿಕೊಂಡು ಜಾಲ ರೂಪಿಸಿ ಅವರಿಂದ ಕಾಂಡೋಂ ಹಂಚಿಸುತ್ತಾ, ಹೆಚ್ಚೆಚ್ಚು ಜನರನ್ನು ದಂಧೆಯೊಳಗೆ ಸೆಳೆಯುತ್ತಾ ಯಥಾಸ್ಥಿತಿಯಲ್ಲೇ ಜಾಲದೊಳಗೇ ಅವರು ಬಿದ್ದಿರಬೇಕಾದ ಪರಿಸ್ಥಿತಿಯು ಒಂದು ರೀತಿಯ ಆಧುನಿಕ ಜೀತಪದ್ಧತಿಯಾಗಿದೆ. ಮತ್ತು ಇವರನ್ನು ಕಾಂಡೋಂ ಹಂಚಿಕೆಯ ಜಾಲದಿಂದ ಶಾಶ್ವತವಾಗಿ ಹೊರ ತೆಗೆಯದಿದ್ದರೆ ಅವರನ್ನು ಪುನರ್ವಸತಿಗೊಳಿಸುವ ಯಾವುದೇ ಕ್ರಮ ಹಾಸ್ಯಾಸ್ಪದವೆನಿಸುತ್ತದೆ.

ದಿ ಸ್ಟೇಟ್: ದಮನಿತ ಹೆಣ್ಣುಮಕ್ಕಳನ್ನು ರಕ್ಷಿಸಲು ಪೊಲೀಸ್ ಇಲಾಖೆಯಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲವೇ?
ರೂಪ ಹಾಸನ: ಹೆಣ್ಣುಮಕ್ಕಳ ಮಾರಾಟ ಮತ್ತು ಕಳ್ಳಸಾಗಾಣಿಕೆಯ ಜೊತೆಗೆ ಹೆಣ್ಣುಮಕ್ಕಳ ನಾಪತ್ತೆ ಪ್ರಕರಣವು ದಿನ ನಿತ್ಯ ಯಾವುದೇ ಎಗ್ಗಿಲ್ಲದೇ ರಾಜ್ಯಾದ್ಯಂತ ನಡೆಯುತ್ತಿದ್ದು, ಪೊಲೀಸ್ ಇಲಾಖೆಯು ಈ ಪ್ರಕರಣಗಳ ಕುರಿತು ಯಾವುದೇ ಗಂಭೀರ ಕ್ರಮವನ್ನು ವಹಿಸುತ್ತಿಲ್ಲ. ಮಾನವ ಕಳ್ಳಸಾಗಣಿಕೆಯಲ್ಲಿ ಕರ್ನಾಟಕ ಮೂರನೆಯ ದೊಡ್ಡ ರಾಜ್ಯವೆಂದು ದಾಖಲಾಗಿದೆ. ಕರ್ನಾಟಕ ರಾಜ್ಯ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿಯ ವರದಿಯಂತೆ ಆರೋಗ್ಯ ಇಲಾಖೆಯಡಿ ನೊಂದಾಯಿತರಾದ 45.9% ರಷ್ಟು ದಮನಿತರನ್ನು ಕದ್ದೊಯ್ದು ಈ ದಂಧೆಗೆ ನೂಕಲಾಗಿದೆ ಎಂಬ ಅಂಶವೇ ಹೆಣ್ಣುಮಕ್ಕಳಿಗೆ ನಮ್ಮ ರಾಜ್ಯ ಎಷ್ಟು ಅಸುರಕ್ಷಿತವಾಗಿದೆ ಎಂಬುದರ ಸೂಚನೆಯಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಕಣ್ಮರೆಯಾದ 16,367 ಬಾಲಕಿಯರಲ್ಲಿ 1499 ಬಾಲಕಿಯರು ಪತ್ತೆಯೇ ಆಗಿಲ್ಲ. ಹಾಗೇ ಕಾಣೆಯಾದ 38,120 ಮಹಿಳೆಯರಲ್ಲಿ 4199 ಮಹಿಳೆಯರಿನ್ನೂ ಪತ್ತೆಯಾಗಬೇಕಿದೆ. ಇವು ದಾಖಲಾದ ಅಂಕಿಅಂಶಗಳಷ್ಟೇ. ಮರ್ಯಾದೆಗಂಜಿ ದಾಖಲಾಗದವುಗಳ ಸಂಖ್ಯೆ ಇದರ ಮೂರರಷ್ಟಿರುವ ಸಾಧ್ಯತೆಯಿದೆ. ಪೊಲೀಸ್ ಇಲಾಖೆಯ ‘ಮಾನವ ಕಳ್ಳಸಾಗಾಣಿಕೆ ನಿಯಂತ್ರಣ ಸೆಲ್’ಗಳು ಯಾವುದೇ ರೀತಿಯಲ್ಲೂ ಕೆಲಸ ಮಾಡುತ್ತಿಲ್ಲ. ನಾಪತ್ತೆ, ಕಳ್ಳಸಾಗಣೆ ನಿಯಂತ್ರಣಕ್ಕೆ ಸಶಕ್ತ ಕ್ರಮಗಳನ್ನು ಇನ್ನಾದರೂ ಕೈಗೊಳ್ಳಬೇಕು.

ದಿ ಸ್ಟೇಟ್: ಸರ್ಕಾರಕ್ಕೆ ನಿಮ್ಮ ಒತ್ತಾಯವೇನು?
ರೂಪ ಹಾಸನ: ಈ ದಂಧೆಯೊಳಗೆ ಬಿದ್ದಿರುವ 36.8% ಹೆಣ್ಣುಮಕ್ಕಳು ಪರಿಶಿಷ್ಟ ಜಾತಿಗೆ ಸೇರಿದವರು, 6.8% ಪರಿಶಿಷ್ಟ ಪಂಗಡಕ್ಕೆ ಸೇರಿದವರು, 18.2%ರಷ್ಟು ಹಿಂದುಳಿದ ವರ್ಗದವರು, ಇತರೆ 38.2%ರಷ್ಟು ಹೆಣ್ಣುಮಕ್ಕಳು ಈ ದಂಧೆಯೊಳಗೆ ಬಿದ್ದಿದ್ದಾರೆ. ಈ ಅಂಕಿಅಂಶಗಳೇ ಅವರ ಹೀನಾಯ ಸಾಮಾಜಿಕ ಸ್ಥಿತಿ ಮತ್ತು ದಂಧೆಗೆ ಬೀಳಬೇಕಾದ ಪರಿಸ್ಥಿತಿಯ ಸೂಚಕವಾಗಿದೆ.
ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯಡಿ ನೊಂದಣಿಯಾದ ಇಂತಹ 96,878 ದಮನಿತರಲ್ಲಿ 18 ವರ್ಷಕ್ಕಿಂತಾ ಕಡಿಮೆಯಿರುವ ಅಪ್ರಾಪ್ತರಾದ 459 ಮಂದಿಯನ್ನು ದಾಖಲಿಸಲಾಗಿದೆ! ಇನ್ನು ದಾಖಲಾದ 18 ರಿಂದ 24 ವಯೋಮಾನದವರು 12,185 ಜನರು. ಆದರೆ ಇವರಲ್ಲೂ ಹೆಚ್ಚಿನವರು ಅಪ್ರಾಪ್ತರು ಮತ್ತು ಬಾಲೆಯರಾಗಿದ್ದಾಗಲೇ ದಂಧೆಗೆ ಬಿದ್ದವರು. ಆದ್ದರಿಂದ ಸರ್ಕಾರ ಪ್ರಥಮ ಆದ್ಯತೆಯಾಗಿ ದಂಧೆಯೊಳಗೆ ಬಿದ್ದಿರುವ ಸಾವಿರಾರು ಅಪ್ರಾಪ್ತ, ಅಂಗವಿಕಲ ಹೆಣ್ಣುಮಕ್ಕಳನ್ನು ರಕ್ಷಿಸಲು ತಕ್ಷಣವೇ ವಿಶೇಷ ಯೋಜನೆ ರೂಪಿಸಬೇಕು. ವೇಶ್ಯಾವಾಟಿಕೆಯಿಂದ ಹೊರಬರಲು ಬಯಸುತ್ತಿರುವ ಎಲ್ಲಾ 72% ಹೆಣ್ಣುಮಕ್ಕಳಿಗೆ ಸಶಕ್ತ ಪುನರ್ವಸತಿ ಕಲ್ಪಿಸಬೇಕು. ಎಲ್ಲಕ್ಕೂ ಮೊದಲು ಕಾಂಡೋಂ ಹಂಚಿಕೆಗಾಗಿ ಮಾಡಿಕೊಂಡಿರುವ ದಾಖಲೀಕರಣದ ಜಾಲದಿಂದ ಇವರನ್ನು ಹೊರತೆಗೆಯಬೇಕು!