ಇಂದು ನಾಡಿಗೆ ಹೊಸ ರಾಜಕಾರಣ ಬೇಕಾಗಿದೆ-ದೇವನೂರ ಮಹಾದೇವ
[2.5.2018ರಂದು ಪಾಂಡವಪುರದಲ್ಲಿ ನಡೆದ ಸ್ವರಾಜ್ ಇಂಡಿಯಾ ಪಕ್ಷದ ‘ಪರ್ಯಾಯ ರಾಜಕಾರಣವನ್ನು ಬೆಂಬಲಿಸಲು ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ.]
ಜಿಗ್ನೇಶ್ ಮೆವಾನಿಯವರು ಗುಜರಾತ್ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾಗ, ನಾನು ದಿನದಿನವೂ ಅಲ್ಲಿನ ಚುನಾವಣಾ ವಿದ್ಯಮಾನ ಗಮನಿಸುತ್ತಿದೆ. ದಿನಕ್ಕೊಂದು ಸಲವಾದರೂ ಇವರು ಗೆಲ್ಲಲಿ ಗೆಲ್ಲಲಿ ಎಂದು ಪ್ರಾರ್ಥಿಸುತ್ತಿದ್ದೆ. ಇವರು ಗೆದ್ದಾಗ ನಾನೇ ಗೆದ್ದೆ ಎಂಬಷ್ಟು ಸಂಭ್ರಮಿಸಿದೆ.
ಇದೇ ರೀತಿ- ದರ್ಶನ್ ಪುಟ್ಟಣ್ಣಯ್ಯನವರ ಚುನಾವಣಾ ಸ್ಪರ್ಧೆಯನ್ನೂ ಕೂಡ ರಾಜ್ಯದ, ದೇಶದ, ವಿದೇಶದ ಮೂಲೆ ಮೂಲೆಗಳಲ್ಲೂ ಗಮನಿಸುತ್ತಿರುವ ಅಸಂಖ್ಯ ಜನರಿದ್ದಾರೆ. ದರ್ಶನ್ ಗೆಲ್ಲಲಿ ಗೆಲ್ಲಲಿ ಎಂದು ಪ್ರತಿದಿನವೂ ಪ್ರಾರ್ಥನೆ ಮಾಡುತ್ತಿದ್ದಾರೆ. ಯಾಕೆಂದರೆ ದರ್ಶನ್ ಗೆದ್ದರೆ, ಇಡೀ ಜನಸಮುದಾಯ ಗೆದ್ದಂತೆ ಆಗುತ್ತದೆ. ಈ ಗೆಲುವು ನಮಗೆ ಬೇಕಾಗಿದೆ. ಯಾಕೆಂದರೆ ಇಂದು ನಾಡಿಗೆ ಹೊಸ ರಾಜಕಾರಣ ಬೇಕಾಗಿದೆ. ಹೊಸ ರಾಜಕಾರಣಕ್ಕೆ ಹೊಸ ಮುಖ ಬೇಕಾಗಿದೆ. ಅದರಲ್ಲೂ ಯುವ ಮುಖ ಬೇಕಾಗಿದೆ. ನಾನು ತುಂಬಾ ಗಮನಿಸಿ ಈ ಹಿಂದೆಯೇ ಹೇಳಿದ್ದೆ- ದರ್ಶನ್ಗೆ ಬೆಂಬಲವಾಗಿ ಯುವಕ-ಯುವತಿಯರು ಪಕ್ಷಾತೀತವಾಗಿ ಚಿಲುಮೆಯಂತೆ ಉಕ್ಕುತ್ತಿದ್ದಾರೆ ಅಂತ. ಒಕ್ಕೊರಲಿನಿಂದ ಯುವಜನತೆ ದರ್ಶನ್ಗೆ ಹೇಳುತ್ತಿದ್ದಾರೆ- “ನಾವೂ ನಿಮ್ಮ ಜೊತೆಗಿದ್ದೇವೆ’’ ಇದೊಂದು ದೊಡ್ಡ ಬೆಳವಣಿಗೆ.
ಈಗಾಗಲೇ ಈ ಭಾವನೆ ಇಡೀ ಕ್ಷೇತ್ರದ ತುಂಬಾ ಇದೆ. ನಾನು ಹೋಗಿ ಬಂದ ಕಡೆಗೆಲ್ಲ ಇದನ್ನೆ ಕಾಣುತ್ತಿದ್ದೇನೆ. ಒಂದು ಉದಾಹರಣೆ ಮೂಲಕ ಹೇಳುವುದಾದರೆ- ರಾಗಿಮುದ್ದನಹಳ್ಳಿಯಲ್ಲಿ ದರ್ಶನ್ ಬೆಂಬಲಿಸಿ ಒಂದು ಸಭೆ ಇತ್ತೀಚಿಗೆ ಆಯ್ತು. ಸುಮಾರು ಐದು ಸಾವಿರ ಜನ ಸೇರಿದ್ದರು. ಆ ಸಭೆಗಳಲ್ಲಿ ಅರಳುಕುಪ್ಪೆಯ ಪರಶಿವಮೂರ್ತಿ ಅವರಾಡಿದ ಮಾತು ಕೇಳಿ ನಾನು ಮೂಕನಾದೆ. ಅವರು ಈ ಹಿಂದೆ ಕೆಲಕಾಲ ಬಿಜೆಪಿಯಲ್ಲಿ ಇದ್ದರಂತೆ ಆಮೇಲೆ ಜೆಡಿಎಸ್ನಲ್ಲಿ ಇದ್ದರು. ಯಾವಾಗ ಕೆ.ಎಸ್.ಪುಟ್ಟಣ್ಣಯ್ಯ ಕಾಲವಶರಾದರೋ- ಆ ಗಳಿಗೆಯಲ್ಲೆ ಅವರ ಹೃದಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿ ಅವರು ತಮ್ಮ ಪಕ್ಷ ಬಿಟ್ಟು, ಜೊತೆಗೆ ಕೆಲಸವನ್ನು ಬಿಟ್ಟು ದರ್ಶನ್ ಗೆಲುವಿಗಾಗಿ ಕಂಕಣಬದ್ಧರಾಗಿ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಅವರು ನಿದ್ದೆ ಮಾಡಿದಂತೆ ಕಾಣುವುದಿಲ್ಲ. ಪರಶಿವಮೂರ್ತಿ ತುಂಬಿದ ಸಭೆಯಲ್ಲಿ ಹೇಳಿದರು- “ಪುಟ್ಟಣ್ಣಯ್ಯನವರು ನಮ್ಮ ನಡುವೆ ಇಲ್ಲ ಅಂದಾಕ್ಷಣವೇ- ಪುಟ್ಟಣ್ಣಯ್ಯ ನನ್ನ ಆತ್ಮಕ್ಕೆ ಬಂದು ಕೂತುಬಿಟ್ಟರು. ಮೇಲುಕೋಟೆ ಕ್ಷೇತ್ರಕ್ಕೆ ನೀರು ಬರುವಂತಾಗಲು ಪುಟ್ಟಣ್ಣಯ್ಯ ಕಣ್ಣೀರಿಟ್ಟಿದ್ದರು. ಅವರು ಸುರಿಸಿದ ಕಣ್ಣೀರು ಬೆವರಿನಿಂದ ನಾವು ಇಂದು ಒಳ್ಳೆಯ ನೀರು ಕುಡಿಯುತ್ತಿದ್ದೇವೆ. ಅವರು ನಮಗೆ ನೀರು ತಂದುಕೊಟ್ಟ ಪುಣ್ಯಾತ್ಮ. ಪುಟ್ಟಣ್ಣಯ್ಯನವರ ಋಣ ತೀರಿಸಬೇಕು’’ ಅಂದರು. ಇದು ಪರಶಿವಮೂರ್ತಿಯವರೊಬ್ಬರದೇ ಹೃದಯದ ಮಿಡಿತ ಅಲ್ಲ; ಇದೇ ಮೇಲುಕೋಟೆ ಕ್ಷೇತ್ರದ ಹೃದಯದ ಮಿಡಿತವೂ ಹೌದು. ಅದಕ್ಕೆ ಇರಬೇಕು ಮೇಲುಕೋಟೆ ಕ್ಷೇತ್ರದ ಹೃದಯ ಮಿಡಿತ ದರ್ಶನ್ ದರ್ಶನ್ ಅಂತಿದೆ!
ಕೊನೆಯದಾಗಿ, ನಾನು ಎಲ್ಲರಲ್ಲೂ ಪದೇ ಪದೇ ಮಾಡುವ ವಿನಂತಿ ಒಂದೇ ಒಂದು- ಎಲ್ಲಿದ್ದೀರೊ ಅಲ್ಲೇ ಪ್ರಚಾರ ಮಾಡಿ. ನಮ್ಮ ಬೂತ್ ಮತಕಟ್ಟೆಯೇ ನಮಗೆ ಸರ್ವಸ್ವ ಎಂದಾಗಲಿ. ಮಂಡಲದಾಚೆ ಕಾಲಿಡದೆ ಮಂಡಲದೊಳಗೆ ಪ್ರಚಾರ ಮಾಡಿ. ಹಾಗೂ ಚುನಾವಣೆಗೆ ನಿಂತಿರುವುದು ನಾನೇ ಎಂದುಕೊಂಡು ಪ್ರಚಾರ ಮಾಡಿ. ದಯವಿಟ್ಟು ಇಷ್ಟು ಮಾಡಿ. ಇದನ್ನೆ ಮತ್ತೆ ಮತ್ತೆ ಒತ್ತಿ ಹೇಳುತ್ತಿರುವೆ. ಈ ನನ್ನ ಪ್ರಾರ್ಥನೆಯನ್ನು ಚುನಾವಣೆ ಮುಗಿಯುವವರೆವಿಗೂ ದಿನಕ್ಕೊಂದು ಸಲ ನೆನಪಿಸಿಕೊಳ್ಳಿರಿ ಎಂದು ವಿನಂತಿಸುವೆ.