ಶಿಳ್ಳೆ (ವಿಷಲ್) ಗುಂಪನ್ನು ಹುಟ್ಟು ಹಾಕಬೇಕಾಗಿದೆ-ದೇವನೂರ ಮಹಾದೇವ
[3.5.2018ರಂದು ಬೆಂಗಳೂರಿನಲ್ಲಿ ನಡೆದ ಸ್ವರಾಜ್ ಇಂಡಿಯಾ ಕರ್ನಾಟಕ ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ.]
ಈಗ ಚುನಾವಣೆ ನಮ್ಮ ಮುಂದಿದೆ. ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ದೊಡ್ಡ ದೊಡ್ಡ ನಾಯಕರು ಆಡುವ ಮಾತುಗಳನ್ನು ಕೇಳಿದರೆ, ಚುನಾವಣೆ ಅಂದರೆ ನಾಡು ಕಟ್ಟುವ ಕೆಲಸ ಎಂದು ನಮ್ಮ ದೊಡ್ಡದೊಡ್ಡ ನಾಯಕರು ಅಂದುಕೊಂಡಿಲ್ಲ ಅನ್ಸುತ್ತೆ. ಅವರು ಚುನಾವಣೆ ಎಂದರೆ ರಣರಂಗ ಅಂದ್ಕೊಂಡಿದ್ದಾರೆ. ಅದಕ್ಕಾಗಿ ಠೇಂಕಾರದ ಭಾಷೆಯಲ್ಲಿ ಮಾತಾಡ್ತಾರೆ. ಜೊತೆಗೆ- ಜಾದೂ ಭಾಷೇಲಿ ಮಾತಾಡ್ತಾರೆ, ಮೋಡಿ ಭಾಷೇಲಿ ಮಾತಾಡ್ತಾರೆ, ಹಾರಾಜು ಹಾಕುವ ಭಾಷೇಲಿ ಮಾತಾಡ್ತಾರೆ. ಒಟ್ಟಿನಲ್ಲಿ ಇವರೆಲ್ಲ ಮರಳಲ್ಲಿ ಮನೆ ಕಟ್ಟುತ್ತಿರುವವರಂತೆ ಕಾಣಿಸ್ತಾರೆ.
ಒಂದೇ ಉದಾಹರಣೆ ಸಾಕು- ಬಿಜೆಪಿ ಪದೇ ಪದೇ ಹೇಳ್ತಾ ಇದೆ- ನಾವು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡ್ತೇವೆ ಅಂತ. ಇದಕ್ಕೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ಕೂಡ ಹೇಳ್ತಾ ಇದೆ- `ನಾವು ಬಿಜೆಪಿ ಮುಕ್ತ ಕರ್ನಾಟಕ ಮಾಡ್ತೇವೆ’ ಅಂತ. ಇವರು ಏನನ್ನು ಮುಕ್ತ ಮಾಡ್ತಾ ಇದ್ದಾರೆ? ತಾನು ನಿಂತ ಮರದ ಕೊಂಬೆಯನ್ನೇ ಕತ್ತರಿಸುವವನ ಮೂರ್ಖತನವಲ್ಲವೆ ಇದು? ಜನತಂತ್ರ ವ್ಯವಸ್ಥೆಯನ್ನೆ ಬುಡಮೇಲು ಮಾಡುವ ವಿಧ್ವಂಸಕ ಕೃತ್ಯವಲ್ಲವೆ ಇದು?- ಇದು ಹೊಣೆಗೇಡಿ ರಾಜಕಾರಣ.
ನಾಡಿಗೆ ತುರ್ತಾಗಿ ಬೇಕಾಗಿರುವುದು ಬರಮುಕ್ತ ಕರ್ನಾಟಕ, ನಿರುದ್ಯೋಗ ಮುಕ್ತ ಕರ್ನಾಟಕ. ನಾವು ಈ ಹೊಣೆಗೇಡಿ ರಾಜಕಾರಣಕ್ಕೆ ಇದನ್ನು ನೆನಪಿಸಬೇಕಾಗಿದೆ.
ಈ ಹೊಣೆಗೇಡಿ ರಾಜಕಾರಣದ ಜೊತೆಗೆ ಅಪ್ರಬುದ್ಧ ರಾಜಕಾರಣವೂ ವಿಜೃಂಭಿಸುತ್ತಿದೆ. ಉದಾಹರಣೆಗೆ ನೋಡಿ- `ವಿಶ್ವೇಶ್ವರಯ್ಯ ಹೆಸರು ಉಚ್ಚಾರಣೆ ಮಾಡೋಕೆ ಅವರಿಗೆ ಬರಲ್ಲ ಅಂತ’ ಇವರು ಹೇಳೋದು, “ಇವರಿಗೆ ಬಳ್ಳಾರಿ ಹೆಸರು ಉಚ್ಚಾರಣೆ ಮಾಡೋಕೆ ಬರಲ್ಲ’’ ಅಂತ ಅವರು ಹೇಳೋದು! ಇಂಥವೇ ಮಾತುಗಳು. ನನಗೆ ಉಚ್ಚಾರಣೆ ಬರಲ್ಲಪ್ಪ, ಏನೀಗ? ಚುನಾವಣೆ ಸಂದರ್ಭದಲ್ಲಿ ಆಡುವ ಮಾತುಗಳೇನು ಇವು? ಇದೇನು ಘನಂಧಾರಿ ಚರ್ಚೆಯೆ? ಇಂಥವರಿಗೆ ಏನೆಂದು ಹೇಳಬೇಕು? `ನಿಮಗೆಲ್ಲ ವಯಸ್ಸಾಗಿದೆ, ನಿಜ. ಆದರೆ ನೀವು ಪ್ರೈಮರಿ ಶಾಲೆಯಲ್ಲಿ ಇರಬೇಕಾದವರು ಎಂದು ಹೇಳಬೇಕಾಗಿದೆ. ಮಾಧ್ಯಮಗಳು ಇಂಥ ಕ್ಷುಲ್ಲಕವನ್ನೆಲ್ಲಾ ಚರ್ಚಿಸಬಾರದು, ದಯವಿಟ್ಟು.
ಮೊನ್ನೆ ಮೊನ್ನೆ ತಾನೇ ಮೈಸೂರಿನಲ್ಲಿ- `ಉದ್ಯೋಗಕ್ಕಾಗಿ ಯುವಜನರು’ ಸಂಘಟನೆಯವರು ಪ್ರವಾಸದಲ್ಲಿದ್ದ ನಮ್ಮ ಪ್ರಧಾನಿಗೆ ಒಂದು ಪ್ರಶ್ನೆ ಕೇಳಿದರು- `ಕಳೆದ ಲೋಕಸಭಾ ಚುನಾವಣೆಯಲ್ಲಿ ವರ್ಷಕ್ಕೆ ಒಂದು ಕೋಟಿ ಉದ್ಯೋಗ ನೀಡುತ್ತೇನೆ ಎಂದು ಭರವಸೆ ನೀಡಿದ್ದೀರಿ. ಕಿಂಚಿತ್ತೂ ಈಡೇರಲಿಲ್ಲ. ಈ ಬಗ್ಗೆ ಮಾತಾಡಿ’ ಅಂತ. ಇದಕ್ಕೆ ಉತ್ತರಿಸಬೇಕಾದ್ದು ಮಾತು ಕೊಟ್ಟ ಪ್ರಧಾನಿಯವರ ಹೊಣೆಗಾರಿಕೆ. ಆದರೆ ಅವರು ಉತ್ತರಿಸಲಿಲ್ಲ. ಬದಲಾಗಿ, ಮುಂದಿನ ಸಭೆಯಲ್ಲಿ ಅವರು ಆಡಿದ ಮಾತುಗಳು ಏನು ಗೊತ್ತೆ?- `ನಾವು ಕಾಮ್‍ದಾರಿಗಳು, ಅವರು (ಅಂದರೆ ವಿರೋಧ ಪಕ್ಷದವರು) ನಾಮ್‍ದಾರಿಗಳು’ ಅಂತ! ಇದು ದ್ರೋಹವಲ್ಲವೆ? ಇದು ಮಹಾದ್ರೋಹ. ಇವರು ನಾಡನ್ನು ಕಟ್ಟುತ್ತಿದ್ದಾರೊ ಅಥವ ಪದಗಳನ್ನು ಕಟ್ಟುತ್ತಿದ್ದರೊ? ಈ ರಾಜಕಾರಣ ನೋಡುತ್ತಿದ್ದರೆ ಜಿಗುಪ್ಸೆಯಾಗುತ್ತದೆ. ಭಯವೂ ಆಗುತ್ತದೆ.
ಇನ್ನೊಂದು ರಾಜಕಾರಣದ ಮಾತಿನ ಠೇಂಕಾರ: “ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ, ಭ್ರಷ್ಟರನ್ನೆಲ್ಲಾ ಜೈಲಿಗೆ ಅಟ್ಟುತ್ತೇವೆ.’’ ಈ ಮಾತಿಗೆ ನಮ್ಮ ಕೆ.ಎಸ್.ಪುಟ್ಟಣ್ಣಯ್ಯ ಹೇಳ್ತಾ ಇದ್ದರು: “ವಿಧಾನಸೌಧದ ಬಾಗಿಲಿಗೆ ಒಂದು `ಭ್ರಷ್ಟ ತಡೆ ಮಿಷಿನ್’ ಇಟ್ಟುಬಿಡೋಣ. ಭ್ರಷ್ಟರು ಬಂದರೆ ಆ ಬಾಗಿಲು ಆಟೋಮ್ಯಾಟಿಕ್ ಮುಚ್ಕೊಬೇಕು- ಅಂಥದ್ದು. ಆ ಮಿಷಿನ್ನು ಲಂಚ ಈಸ್ಕಂಡು ಒಳಿಕೆ ಬಿಡ್ದೇ ಇದ್ದರೆ- ವಿಧಾನ ಸೌಧದ ಒಳೀಕೆ ಎಷ್ಟು ಜನರಪ್ಪ ಹೋಗೌರು?’’ ಅಂತಿದ್ದರು. ಇದು ರಾಜಕಾರಣದ ಇಂದಿನ ಪರಿಸ್ಥಿತಿ. ವ್ಯವಸ್ಥೇನೆ ಭ್ರಷ್ಟಗೊಂಡಿದೆ.
ಇಂಥ ದುರಂತ ರಾಜಕಾರಣದ ಸಂದರ್ಭದಲ್ಲಿ- ಸ್ವರಾಜ್ ಇಂಡಿಯಾ ತನ್ನ ಪ್ರಣಾಳಿಕೆ ಬಿಡುಗಡೆ ಮಾಡ್ತಾ ಇದೆ. `ಕೆಲವರಿಗೆ ಅಲ್ಲ; ಸಮುದಾಯಕ್ಕೆ ಎಲ್ಲಾ’ ಎಂಬ ಆಶಯದ ಸಸಿ ನೆಡುತ್ತಿದೆ. ಹಾಗೇ ಈ ಸ್ವರಾಜ್ ಪ್ರಣಾಳಿಕೆಗೆ ಕಾಪಿರೈಟ್ ಇಲ್ಲ. ಯಾರೇ ಪ್ರಕಟಿಸಬಹುದು. ದಯವಿಟ್ಟು ಚರ್ಚಿಸಿ. ಟೀಕೆ ಮಾಡಿ, ಸಲಹೆ, ಸೂಚನೆ, ಟಿಪ್ಪಣಿ ಕಳಿಸಿ. ಇದು ಮುಕ್ತವಾಗಿದೆ.
ಕೊನೆಯದಾಗಿ, ನಾಡಿನ ಜಾಗೃತ ಪ್ರಜ್ಞೆಗೆ ಒಂದು ವಿನಂತಿ ಮಾಡುವೆ. ಅದೇನೆಂದರೆ, ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು, ರಾಜಕಾರಣಿಗಳು ನೀಡುವ ಭರವಸೆಗಳು ಪ್ರಣಾಳಿಕೆಯ ಆಶ್ವಾಸನೆಗಳು ಇವುಗಳನ್ನೆಲ್ಲಾ ನೆನಪಿಸುವ- ಒಂದು ಶಿಳ್ಳೆ (ವಿಷಲ್) ಗುಂಪನ್ನು ಹುಟ್ಟು ಹಾಕಬೇಕಾಗಿದೆ. ರಾಜ್ಯಕ್ಕೆ ಹತ್ತು ಜನ ಸಾಕು. ಜಿಲ್ಲೆಗೆ ಮೂರು ಜನ. ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ಹಾಗೂ ರಾಜಕಾರಣಿಗಳು ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಆಡಿದ ಮಾತುಗಳನ್ನು ತಿಂಗಳಿಗೊಮ್ಮೆ ಅವರವರ ಮೂತಿಗೆ ಹಿಡಿಯುವ ಒಂದು ಶಿಳ್ಳೆ ಗುಂಪು ಅತ್ಯಗತ್ಯವಾಗಿದೆ. ಇದರಿಂದ ಹೊಣೆಗೇಡಿ ರಾಜಕಾರಣಕ್ಕೆ ಸ್ವಲ್ಪವಾದರೂ ಹೊಣೆಗಾರಿಕೆ ಬರಬಹುದು. ರಾಜಕಾರಣಕ್ಕೆ ನಾಚಿಕೆ, ಮಾನ ಮರ್ಯಾದೆ ತಂದುಕೊಡುವ ದಿಕ್ಕಲ್ಲಿ ಇದು ಮೊದಲ ಹೆಜ್ಜೆಯಾಗಬಹುದು.