ನಿರ್ಮಲಾ ಕೋಟಿ- ಸೋತು ಗೆದ್ದಾಕೆ!- ಪ್ರೊ.ಕೆ.ಸುಮಿತ್ರಾಬಾಯಿ
ಮೈಸೂರು ಜಿಲ್ಲೆಯಲ್ಲಿ ಮನೆ ಮಾತಾಗಿರುವ ಆಂದೋಲನ ಪತ್ರಿಕೆಯ ಸಂಪಾದಕರಾದ ರಾಜಶೇಖರ ಕೋಟಿಯವರ ಪರಿಚಯದ ಹೊಸತು. ಅವರು ನೋಡಲು ಸದಾ ಹಸನ್ಮುಖಿ. ಆದರೆ ಆಂತರ್ಯದಲ್ಲಿ ಸ್ಟೋಟಿಸುವ ನಿಷ್ಠುರತೆ ಅವರಲ್ಲಿ ಇರುವುದನ್ನು ಕ್ರಮೇಣ ಗುರುತಿಸಿದೆನು. ಕೋಟಿಯವರು ದೂರ್ವಾಸನ ಸಂತತಿಗೆ ಸೇರಿರಬೇಕೆಂದು ಒಮ್ಮೆ ದೇಮ (ದೇವನೂರ ಮಹಾದೇವ) ನಿಗೆ ಹೇಳಿದೆ. “ಅಯ್ಯೋ…ಮಿತ್ರೀ ಹಾಗಂತ ಎಲ್ಲಾದ್ರು ಹೇಳ್‍ಗಿಳೀಯ… ಕೋಟಿ ಸೂಕ್ಷ್ಮ, ಸಂಕೋಚದ ಸ್ವಭಾವದವರು, ನೊಂದುಕೊಳ್ಳುತ್ತಾರೆ” ಎಂದು ಹೆದರಿಕೆ ಹುಟ್ಟಿಸಿದನು. ಆಮೇಲೊಂದು ದಿನ, ದೇಮ ಮನೆಗೆ ಬಂದವನೆ, ಈ ದಿನ ಕೋಟಿಯವರಿಗೆ ಹುಡುಗಿ ನೋಡಲು ಹೋಗಬೇಕು ಬಾ ಎಂದನು. ಅವರ್ಯಾರು? ಏನು? ಎತ್ತ? ಏನೊಂದು ತಿಳಿಯದೆ ಹೇಗೆ ಹೋಗೋದು ಎಂದು ಅನುಮಾನಿಸಿದೆ. ನೀ ಸುಮ್ಮನೆ ನನ್ ಜೊತೆ ಬಾ… ಅದ್ನೆಲ್ಲ ಕೇಳ್ಕಂಡಿದ್ದೀನಿ ಎಂದನು. ನಾವು ಯಾವುದೇ ಊರಿನ ಯಜಮಾನರಲ್ಲ ಮತ್ತು ತಲೆ ಹಣ್ಣಾದ ಹಿರಿಯರೂ ಆಗಿರಲಿಲ್ಲ. ಇಷ್ಟೆಲ್ಲ disqualificationsಗಳಿದ್ದರೂ ಸಹ ಹುಡುಗಿಯನ್ನು ನೋಡಿ ಬರಲು ಹೊರಟೆವು. ಆಗ ನಾವು ಮದುವೆಯಾಗಿ ಸೀನಿಯರ್ ಆಗಿದ್ದೆವು ಎಂಬುದೇ ನಮ್ಮ ಅರ್ಹತೆಯಾಗಿತ್ತು. ಈ ಮದುವೆ ಪ್ರಸ್ತಾಪವನ್ನು ನಮ್ಮ ಮುಂದಿಟ್ಟ ಗುಂಡ್ಲುಪೇಟೆಯ ಶಂಕರಲಿಂಗೇಗೌಡ ಹಾಗೂ ಪ್ಲೋರ್ ಮಿಲ್‍ವಾಸು ಜೊತೆಗಿದ್ದರು. ನಮ್ಮನ್ನು ಹುಡುಗಿಯ ಚಿಕ್ಕ ಸಹೋದರನು ಮನೆಯೊಳಕ್ಕೆ ಕರೆದೊಯ್ದನು.
ಮನೆ ನಿಃಶಬ್ದವಾಗಿತ್ತು. ಹುಡುಗಿಯ ಭಾವನವರು ತುಂಬ ಬಿಗುಮಾನದಿಂದ ಬಂದು ನಮ್ಮನ್ನು ಮಾತನಾಡಿಸಿದರು. ಆನಂತರ ಹುಡುಗಿಯ ತಮ್ಮನು ನಮ್ಮ ಮುಂದೆ ಬಂದು ಕೂತುಕೊಂಡು-ಪ್ರಪ್ರಥಮವಾಗಿ ‘ಕೋಟಿ’ ಅಂದ್ರೆ ಏನು? ಯಾಕೆ ಹಂಗೆ ಹೆಸರಿಟ್ಟುಕೊಂಡಿದ್ದಾರೆ? ಎಂದು ಕೇಳಿದನು. ಕೋಟಿ ಎಂಬುದು ಅವರ ಕುಟುಂಬದ ವಂಶಾವಳಿಯ ಹೆಸರು-ಸರ್‍ನೇಮ್ ಇದ್ದಹಾಗೆ ಎಂದು ದೇಮ ಹೇಳಿದನು. ಈ ಉತ್ತರ ಹುಡುಗನಿಗೆ ಸಮಾಧಾನ ತರಲಿಲ್ಲ. ಆಗ ನಾನು ಅವನ ಗೊಂದಲವನ್ನು ನಿವಾರಿಸಲು “ಲಿಂಗಾಯತರು ಧಾರವಾಡದ ಕಡೆ ಹೀಗೆ ತಮ್ಮ ಹೆಸರಿನ ಮುಂದೆ ಇಟ್ಕೋತಾರೆ” ಎಂದು ಹೇಳಿ, “ಬ್ರಿಟಿಷರು ಭಾರತಕ್ಕೆ ಬಂದಾಗ ಪ್ರಥಮವಾಗಿ ಕೋಠಿಗಳನ್ನು ಸ್ಥಾಪಿಸಿದರೆಂದು ಓದಿದ್ದೇವೆ. ಆ ‘ಕೋಠಿ’ ಅಲ್ಲ, ಇದು ಚಿಕ್ಕ ‘ಟ’ ಗುಡಿಸು… ಬೇಕಾದ್ರೆ ಯಾರನ್ನಾದರೂ ಕೇಳಿ ಈ ವಿಚಾರವನ್ನು ತಿಳಿದುಕೊಳ್ಳಿ” ಎಂದು ವಿರಾಮ ಹಾಕಿದೆ. ಹೀಗೆ ‘ಕೋಟಿ’ ಪದಕ್ಕೆ ಪಾಠ ಹೇಳುವಷ್ಟರಲ್ಲಿ ಮನೆಯೊಳಗಿಂದ ಆ ಹುಡುಗನಿಗೆ ಬುಲಾವ್ ಬಂದದ್ದರಿಂದ ಅವನು ಎದ್ದು ಮನೆಯೊಳಗೆ ಹೋದನು.
ಕೊಂಚ ಸಮಯದ ನಂತರ ಹುಡುಗಿಯು ಚೀಣಾಮಣ್ಣಿನ ಸಾಸರ್‍ನಲ್ಲಿ ಕಾಫಿ ಹಿಡಿದುಕೊಂಡು ನಮ್ಮ ಮುಂದೆ ಸಂಕೋಚದಿಂದ ಬಂದಳು. ನಮ್ಮ ಕಡೆ ಒಂದು ಸಲ ನೋಡಿ ತಲೆ ತಗ್ಗಿಸಿಕೊಂಡು ಕಾಫಿಯನ್ನು ನಮಗೆ ನೀಡಲು ಹತ್ತಿರ ಬಂದಾಗ ಏನೋ ಟಕ ಟಕ ಸದ್ದು! ಗಮನಿಸಿ ನೋಡಿದಾಗ ಆ ಸಾಸಾರ್ ಮೇಲೆದ್ದ ಕಪ್‍ಗಳು ಕಂಪನ ನೃತ್ಯ ಮಾಡುತ್ತಿದ್ದವು. ಹುಡುಗಿಯ ಕೈಕಡೆ ನೋಡಿದೆ. ಅವೂ ಕಂಪನ! ಈ ಕಂಪನಕ್ಕೆ ಟಕ ಟಕ ಸದ್ದು! ನನಗೆ ನಗು ಒತ್ತರಿಸಿ ಬಂದರೂ ತಡೆದುಕೊಂಡೆನು. ಆಗ ದೇಮ ಕಡೆ ನೋಡಿದೆ. ಅವನ ಕಣ್ಣುಗಳು ಥರಥರನೆ ನಡುಗುತ್ತಿದ್ದ ಸಾಸರ್ ಹಿಡಿದ ಕೈಗಳನ್ನು ಗಮನಿಸುತ್ತಿದ್ದವು. ಹುಡುಗಿ ಗಾಬರಿಗೊಂಡಿರುವುದನ್ನು ಕಂಡು ದೇಮಾ- ಬನ್ನಿ…ಬನ್ನಿ ಕುಳಿತುಕೊಳ್ಳಿ ಎಂದು ಸಮಾಧಾನಿಸಲು ಪ್ರಯತ್ನಿಸಿದನು. ನಮ್ಮ ಕೈಗೆ ಬಂದ ಕಾಫಿಯನ್ನು ಕುಡಿಯುತ್ತ ಹುಡುಗಿಯನ್ನು ಏನೇನು ಪ್ರಶ್ನೆ ಕೇಳಬಹುದೆಂದು ಯೋಚಿಸುವಷ್ಟರಲ್ಲಿ ಹುಡುಗಿ ಮಾಯ…! ನಮಗೆ ಈ ಗುಂಗುರುಗೂದಲಿನ ಹುಡುಗಿ ಇಷ್ಟವಾದಳು. ತೋರಿಸಿಕೊಳ್ಳದಿದ್ದರೂ ಕೋಟಿಯವರಿಗೂ ಒಳಗೊಳಗೆ ಖುಷಿಯಾಗಿರುವಂತೆ ಕಂಡಿತು. ಒಟ್ಟಿನಲ್ಲಿ ನಿರ್ಮಲಾಗೆ ನಮ್ಮ ಕೋಟಿಯವರ ಕೋಪತಾಪಗಳನ್ನು ಸಮತೋಲನ ಮಾಡುವ ಛಾತಿ ಇರುವಂತೆ ಭಾಸವಾಯಿತು.
ಆನಂತರ ಶೀಘ್ರವಾಗಿ ಕೋಟಿ ಮತ್ತು ನಿರ್ಮಲಾರವರ ವಿವಾಹ ತುಂಬ ಸರಳವಾಗಿ ಮೈಸೂರಿನ ಇಂಜಿನಿಯರ್ಸ್ ಸಭಾಂಗಣದಲ್ಲಿ ನಡೆಯಿತು. ಮದುವೆಯ ದಿನದಂದು, ವಧುವಿನ ಮನೆಯವರ ಮುಖಗಳಲ್ಲಿದ್ದ ಆತಂಕ-ಗಾಬರಿಯನ್ನು ಎಷ್ಟು ಹೇಳಿದರೂ ಸಾಲದು. ಕೋಟಿಯವರ ಸ್ನೇಹಿತರು, ನೆಂಟರಿಷ್ಟರು ವೇಳೆಗೆ ಸರಿಯಾಗಿ ಬಂದಿದ್ದರು. ವಧುವನ್ನು ಕರೆತರುವುದಷ್ಟೇ ಬಾಕಿಯಿತ್ತು. ಆದರೆ ಎಷ್ಟು ಹೊತ್ತಾದರೂ ವೇದಿಕೆಗೆ ವಧು ಬರಲಿಲ್ಲ. ದೇಮಾ ನನ್ನ ಬಳಿ ಬಂದು ಮೆಲ್ಲನೆ “ನೀನು ಒಂದು ನಿಮಿಷ ಹುಡುಗಿ ಇರುವ ಕಡೆ ಹೋಗಿ, ಅವರ ಸಮಸ್ಯೆ ಏನೆಂದು ತಿಳಿದು ಬಾ” ಎಂದನು. ಎದ್ದು ಹುಡುಗಿ ಇದ್ದ ಕೊಠಡಿಯ ಕಡೆ ಹೋಗಿ ಒಳಗೆ ಇಣುಕಿದೆ. ಅಲ್ಲಿ ವಧುವಿನ ತಾಯಿ ಮತ್ತು ಬಂಧುಗಳು ಹುಡುಗಿಗೆ ಸೀರೆ ಉಡಿಸುತ್ತಿದ್ದರು! “ಇದೇನು ಈಗ ಸೀರೆ ಉಡಿಸುತ್ತಿದ್ದೀರಿ? ಲೇಟಾಯ್ತ ಬೇಗ ಹೊರಡಿ” ಎಂದು ವರನ ಕಡೆಯವರ ಜಬರ್‍ದಸ್ತಿನಲ್ಲಿ ಹೇಳಿದೆ. “ಹುಡುಗಿಯನ್ನು ಮೊದಲೇನೆ ಸಿಂಗರಿಸಿ ರೆಡಿಮಾಡಿದ್ವಿ, ಆದರೆ ಮದುವೆ ಹುಡುಗ ಬಂದು ಇಷ್ಟು ಗ್ರ್ಯಾಂಡ್ ಆಗಿರುವ ರೇಷ್ಮೆಸೀರೆ ಉಡೋದು ಬೇಡ… ಬೇರೆ ಯಾವುದಾದರು ಸಿಂಪಲ್ ಆಗಿರುವುದನ್ನು ಉಡಿಸಿರಿ… ಹಾಗೇ ಹೆಚ್ಚು ಶೃಂಗಾರಬೇಡ” ಎಂದರೆಂದು ಅಲ್ಲಿದ್ದ ಹುಡುಗಿಯ ತಾಯಿ ಸಾವಧಾನದಿಂದ ನುಡಿದರು. ಕೋಟಿಯವರ ಆ ಮಾತಿನಿಂದಾಗಿ ಮನೆಯವರು ಪೆಚ್ಚಾಗಿ, ಕೂಡ್ಲೆ ವಧುವಿಗೆ ತೊಡಿಸಿದ್ದ ಎಲ್ಲವನ್ನೂ ಬದಲಾಯಿಸಿ, ತಲೆಗೆ ಒಂದಿಷ್ಟು ಹೂ ಮುಡಿಸಿ ಬಿಂದಿ ಇಟ್ಟು ಬಿನ್ನಿಮಿಲ್ಸ್ ಫುಲ್ ವಾಯಿಲ್ ಸೀರೆಯೊಂದನ್ನು ಉಡಿಸಿ, ದಿನಂಪ್ರತಿ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯಂತೆ ಕಾಣುತ್ತಿದ್ದ ವಧುವನ್ನು ಕರೆತಂದು ಸಭಿಕರ ಮುಂದೆ ನಿಲ್ಲಿಸಿದರು!
ಸಭಿಕರ ನಡುವೆ ಗುಸುಗುಸು ಆರಂಭವಾಯಿತು. ನನ್ನ ಹಿಂದಿನಿಂದ…ಉದ್ಗಾರಗಳು! ಹಿರಿಯ ಮಹಿಳೆಯೊಬ್ಬರು… ರಾಮ ರಾಮ! ಹುಡುಗಿಗೆ ಒಂದು ಒಳ್ಳೆಯ ಸೀರೆನಾದ್ರೂ ಉಡಿಸಬಾರದಿತ್ತಾ ಎಂದು ರಾಗ ಎಳೆದದ್ದು ಕೇಳಿಸಿತು. ಇದೂ ಒಂದು ಮದುವೇನಾ? ಮುಂತಾದ ಪಿಸುಮಾತುಗಳು ಬರುತ್ತಿದ್ದವು. ಈ ಮಾತುಗಳನ್ನು ಸಹಿಸದವರೊಬ್ಬರು, ಅಯ್ಯೋ ಸುಮ್ನಿರಿ… ಅದೆಲ್ಲ ಹುಡುಗನಿಗೆ ಇಷ್ಟವಿಲ್ಲವಂತೆ ಎಂದಾಗ ಎಲ್ಲರೂ ಸುಮ್ಮನಾದರು. ಆಮೇಲೆ ವಧೂವರರು ಸಭಿಕರ ಮುಂದೆ ಜೊತೆಯಾಗಿ ನಿಂತುಕೊಂಡರು. ಕೋಟಿಯವರು ಎಂದಿನಂತೆ ಜುಬ್ಬಾ, ಪ್ಯಾಂಟ್ ಧರಿಸಿ ಮಾಮೂಲಿಯಾಗೇ ಬಂದಿದ್ದರು. ಕೋಟಿಯವರ ಡ್ರೆಸ್ ಕೋಡ್ ಅದೇ ಆಗಿದ್ದುದರಿಂದ ನಮಗದು ಸಹಜವಾಗಿತ್ತು. ಮತ್ತೆ ಮಾತಿನ ಬಾಣಗಳು ಹಿಂದಿನವರಿಂದ ಶುರುವಾದವು. ಈಗ ಅವರ ಗಮನ ಹುಡುಗನ ವೇಷಭೂಷಣದ ಕಡೆ ನೆಟ್ಟಿತ್ತು. ಮದ್ವೆ ಗಂಡ್ಯಾಕೆ ಗಡ್ಡ ಮೀಸೆ ತೆಗೆಸಿಕೊಂಡಿಲ್ಲ? ಇತ್ಯಾದಿ. ನಾನೊಂದು ಸಲ ದುರುಗುಟ್ಟಿಕೊಂಡು ನೋಡಿದ ಮೇಲೆ ಗುಸುಗುಸು ಪಿಸುಪಿಸು ಸ್ತಬ್ಧವಾಯ್ತ. ವೇದಿಕೆಯ ಮೇಲಿದ್ದ ನಿರ್ಮಲಾರನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರ ಇಡೀ ದೇಹ ನಡಗುತ್ತಿರುವಂತೆನಿಸಿತು. ಬಹುಶಃ ತನ್ನ ವಿವಾಹದ ಪರಿಯನ್ನು ನೋಡಿ ಜನರು ಏನೆಂದುಕೊಂಡರೊ ಎಂಬ ಆತಂಕವಿರಬಹುದು ಅಥವಾ ಮದುವೆಗೆ ಮುಂಚೇನೆ ಕೋಟಿಯವರು ಹೀಗೆ ಅದು ಬೇಡ ಇದು ಬೇಡ ಅಂದ್ರೆ ಹೇಗಪ್ಪಾ ಎಂಬ ಗಾಬರಿಯೂ ಇರಬಹುದು ಅಥವಾ ಅವರ ಗಡ್ಡ ಮೀಸೆಗಳೂ ಕಾರಣವಿರಬಹುದು! ಇರಲಿ, ಕೋಟಿ-ನಿರ್ಮಲಾರು ಗಂಡಹೆಂಡಿರಾದರು. ವಿವಾಹ ನಂತರ ಕೆ.ಜಿ.ಕೊಪ್ಪಲಿನಲ್ಲಿ ಕೋಟಿಯವರು ಮೊದಲೇ ಇಟ್ಟುಕೊಂಡಿದ್ದ ಪ್ರೆಸ್ ಕಂ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರು.
ಒಂದು ದಿನ ಬಲ್ಲಾಳ್ ಸರ್ಕಲ್‍ನಲ್ಲಿರುವ ಅಮೃತ್ ಬೇಕರಿ ಹತ್ತಿರ ನಿರ್ಮಲಾ ಯಾರೋ ಹುಡುಗನ ಜೊತೆ ನಿಂತಿರುವುದು ಕಂಡಿತು. ಮಾತಾಡಿಸಿದಾಗಲೇ ತಿಳಿದಿದ್ದು ಆ ಹುಡುಗ ಕೋಟಿಯವರು ಎಂದು! ನಾನು ಕೋಟಿಯವರ ಮುಖದಲ್ಲಿದ್ದ ಉದ್ದನೆಯ ಗಡ್ಡ ಮೀಸೆ ಮತ್ತು ಉದ್ದಕ್ಕೆ ಬೆಳೆಸಿಕೊಂಡಿದ್ದ ತಲೆಗೂದಲನ್ನು ಕಾಣದೆ ಮೊದಲ ನೋಟದಲ್ಲಿ ಅವರನ್ನು ಗುರುತಿಸಲಾರದೆ ಹೋಗಿದ್ದೆ! ತತ್‍ಕ್ಷಣ ದೇಮಾ ಹಾಗೂ ನಾನು ಆಶ್ಚರ್ಯದಿಂದ ನಕ್ಕೆವು. ಕೋಟಿಯವರಿಗೆ ಸಂಕೋಚವಾಗಿ ಸುಮ್ಮನೆ ಹಸನ್ಮುಖರಾದರು. ‘ಟಕಟಕ’ ಎಂದು ನಿರ್ಮಲಾರನ್ನು ಛೇಡಿಸುತ್ತಿದ್ದ ದೇಮಾ ಅಲ್ಲೇ ನಿರ್ಮಲಾರಿಗೆ “ಸೋತು ಗೆದ್ದವಳು” ಎಂಬ ಬಿರುದನ್ನು ನೀಡಿದನು!
(ನಾನು ಬರೆಯುತ್ತಿರುವ, ‘ಕಂಡುಂಡ ತುಣುಕು’ಗಳಲ್ಲಿ ಈ ಭಾಗವೂ ಬರುತ್ತದೆ. ವರ್ಷದ ಹಿಂದೆಯೇ ಇದನ್ನು ಬರೆದಿದ್ದೆ. ಪುಸ್ತಕ ಪೂರ್ತಿಯಾಗದೇ ಇದ್ದುದರಿಂದ ಇದನ್ನು ಪ್ರಕಟಿಸಿರಲಿಲ್ಲ. ಈಗ ಕೋಟಿಯವರು ಇದನ್ನು ಓದಲಿಲ್ಲವಲ್ಲ ಎಂಬ ವ್ಯಥೆ ನನ್ನೊಳಗೆ ಉಳಿದುಕೊಂಡಿತು-ಲೇಖಕಿ)