ಬಾಪೂ: ಆಳುವವರ ಬೆನ್ನು ಹತ್ತಿದ ಬೇತಾಳ-ಕೆ.ಪಿ.ಸುರೇಶ
ಗಾಂಧಿ ಮತ್ತೆ ಮತ್ತೆ ಚಿಗುರೊಡೆವ ಪರಿ ಬೆರಗು ಹುಟ್ಟಿಸುತ್ತದೆ. ಏನಿದಕ್ಕೆ ಕಾರಣ ಎಂದು ಕಾಲಕಾಲಕ್ಕೆ ಈ ದೇಶ ಮಾತಾಡಿಕೊಂಡಿದೆ.
ಗಾಂಧಿ ತಾತ್ವಿಕತೆಯ ಕೆಲವು ಅಂಶಗಳನ್ನು ಮುಂದಿರಿಸಿಕೊಂಡು ನೋಡಿದರೆ ಯಾಕೆ ಬಾಪೂ ಮತ್ತೆ ನಮ್ಮ ಅಂತಃಸಾಕ್ಷಿಯಾಗಿ, ಆಳುವವರ ಅಂಗಾಲ ಮುಳ್ಳಾಗಿ, ಸೋತವರ ಊರುಗೋಲಾಗಿ ಮರಳುತ್ತಾರೆ ಎಂಬುದು ಅರಿವಿಗೆ ಬರುತ್ತದೆ. 1. ಗಾಂಧೀಯ ಗ್ರಾಮಸ್ವರಾಜ್ಯ ಮತ್ತು ವಿಕೇಂದ್ರೀಕರಣದ ಪರಿಕಲ್ಪನೆ. 2. ಆರ್ಥಿಕ ನೀತಿಯ ತಳಪಾಯವಾದ ಅಸ್ತೇಯ, ಅಪರಿಗ್ರಹ, 3. ಸರ್ವಧರ್ಮ ಸಮಭಾವ- ಇವು ಮೂರೂ ಕಳೆದ 70 ವರ್ಷಗಳಲ್ಲಾದ ಪಲ್ಲಟಗಳ ಪರಿಣಾಮವನ್ನು ಅಳೆಯುವ ಮಾನದಂಡವಾಗಿ ಚಿಗಿತಿವೆ.
ಈ ಮೂರೂ ಬೊಟ್ಟು ಮಾಡುವ ಕ್ಷೇತ್ರಗಳಲ್ಲಿ ‘47ರ ಬಳಿಕ ಆತ್ಯಂತಿಕ ಬದಲಾವಣೆಗಳು ಬಂದಿದ್ದು; ಅದರ ಪರಿಣಾಮ ಇತ್ಯಾತ್ಮಕವಾಗೇನೂ ಇಲ್ಲ.
ನೆಹರೂ ಯುಗದ ಮಾಯಿ-ಬಾಪ್ ಧೋರಣೆ ಸತತವಾಗಿ ಕೇಂದ್ರೀಕರಣದ ಸಂಸ್ಥೆಗಳನ್ನೂ, ನಿರ್ವಹಣೆಯನ್ನೂ ಗಟ್ಟಿಗೊಳಿಸುತ್ತಾ ಬಂದಿತು. ಜನರು ತಮಗೆ ತಾವೇ ನಿರ್ಧರಿಸುವಷ್ಟು ಸಶಕ್ತರಲ್ಲ, ನಾವು ಅವರ ಪರವಾಗಿ ಚಿಂತಿಸಿ ನಿರ್ಧರಿಸಿ ಅನುಷ್ಠಾನಗೊಳಿಸಿ ಅವರ ಬಾಳುವೆ ಹಸನು ಮಾಡಬೇಕು ಎಂಬ ಧೋರಣೆಯ ಆತ್ಯಂತಿಕ ಪರಿಣಾಮವನ್ನು ಇಂದು ನೋಡುತ್ತಿದ್ದೇವೆ. ದೇಶದ ಸಮಸ್ತ ಜನತೆ ಎಲ್ಲದಕ್ಕೂ ಸರ್ಕಾರವನ್ನೇ ಅವಲಂಬಿಸುವ ಮಟ್ಟಿಗೆ ಬಂದಿದೆ. ಕೃಷಿ ಲೋಕದಲ್ಲಂತೂ ಇದು ವಿಕೃತ ಅಂಗೈ ಹುಣ್ಣಿನಂತೆ ಸ್ಪಷ್ಠವಾಗಿದೆ. ಇದರಾಚೆಗೆ ಅಧಿಕಾರದ ಕೇಂದ್ರೀಕರಣದ ವಿಕೃತ ಮಾದರಿಗಳು ನಮ್ಮ ಜನಪ್ರತಿನಿಧಿಗಳ ನಿತ್ಯ ಚರ್ಯೆಯಲ್ಲಿ ಅನಾವರಣವಾಗುತ್ತಲೇ ಇದೆ. ಯೋಜನೆ, ಅನುಷ್ಠಾನಗಳಾಚೆ ಈಗಿನ ಸರ್ಕಾರ ಈ ಕೇಂದ್ರೀಕರಣದ ಕ್ರಮವನ್ನು ವ್ಯಕ್ತಿಗತ ವಿವರಗಳ ಸಂಗ್ರಹಣೆಯ ಕೇಂದ್ರೀಯ ನಿಯಂತ್ರಣಕ್ಕೆ ಹೊರಟಿದೆ.
ಅರ್ಥಾತ್, ಸ್ವರಾಜ್ಯ, ಸ್ವಾಯತ್ತತೆಯ ಪರಿಕಲ್ಪನೆಯನ್ನು ನಿಶ್ಶೇಷಗೊಳಿಸುವ ಯತ್ನ ರಾಜಕೀಯ, ಆರ್ಥಿಕ ರಚನೆಯಿಂದಾಚೆ ವ್ಯಕ್ತಿ ಸ್ವಾತಂತ್ರ್ಯದವರೆಗೂ ಚಾಚಿದೆ. ನೆಹರೂ ಕಾಲದಲ್ಲಿ ಕನಿಷ್ಠ ಈ ಧೋರಣೆಗೆ ಮಾನವೀಯತೆಯಾದರೂ ಇತ್ತು. ಈಗ ಅದೂ ಮಾಯವಾಗಿದೆ. ಬಾಪೂ ಸೇರಿ ಸ್ವಾತಂತ್ರ್ಯ ಪೂರ್ವದ ನಾಯಕರು ಸಮುದಾಯದ ವಿವೇಕ ವಿವೇಚನೆಯ ಮೇಲೆ ಇಟ್ಟಿದ್ದ ನಂಬಿಕೆಯನ್ನು ತದನಂತರ ಆಳುವವರು ಸತತವಾಗಿ ನಿರಾಕರಿಸುತ್ತಾ ಬಂದಿದ್ದಾರೆ.
ಆರ್ಥಿಕ ಆಯಾಮದಲ್ಲಂತೂ ಇದು ಪರಿಸ್ಥಿತಿಯನ್ನು ಬಿಗಡಾಯಿಸುತ್ತಲೇ ಹೋಗಿದೆ. ತೊಂಭತ್ತರ ದಶಕದಲ್ಲಿ ಜಾಗತೀಕರಣ ಉದ್ಘಾಟನೆ ಆದ ಬಳಿಕ ಈ ದೇಶದ ಬೆರಳೆಣಿಕೆ ಸಿರಿವಂತರು ಶೇ 58ರಷ್ಟು ಸಿರಿವಂತಿಕೆಯ ವಾರಸುದಾರರಾಗಿದ್ದಾರೆ. ಬಡತನದ ತೀಕ್ಷ್ಣತೆ ಇನ್ನಷ್ಟು ಹೆಚ್ಚಾಗಿದೆ. ಗ್ರಾಮ ಭಾರತ ಇನ್ನಷ್ಟು ಸಂಕಷ್ಟಕ್ಕೀಡಾಗಿದೆ. ಈ ಪುರಾವೆಗಳೆದುರಲ್ಲಿ ಸರ್ಕಾರವೂ ಇದನ್ನು ನಿಭಾಯಿಸಲು ಕಲ್ಯಾಣ ಕಾರ್ಯಕ್ರಮಗಳಿಗೆ ಸಾವಿರಾರು ಕೋಟಿ ಸುರಿಯುತ್ತಲೇ ಇದೆ. ಆದರೆ, ಈ ಆರ್ಥಿಕ ನೀತಿಗೂ ಬಿಗಡಾಯಿಸುತ್ತಿರುವ ಬಡತನದ ಸ್ಥಿತಿಗೂ ಸಂಬಂಧವಿದೆ ಎನ್ನುವುದನ್ನು ಸರ್ಕಾರ ಒಪ್ಪಿಕೊಳ್ಳಲು ನಿರಾಕರಿಸುತ್ತಿದೆ.
ಚೀನಾದ ಮಾದರಿಯನ್ನು ಸರ್ಕಾರ ಹೇಳುತ್ತಿರುತ್ತದೆ. ಆದರೆ ಚೀನಾ ತನ್ನ ದೇಶದ ಯುವ ಕೈಗಳಿಗೆ ಕೆಲಸ ಕೊಟ್ಟಿದೆ, ಕೌಶಲ್ಯವನ್ನೂ ನೀಡಿದೆ. ನಮ್ಮ ಸರ್ಕಾರ ಗ್ರಾಮೀಣ ಬಿಕ್ಕಟ್ಟಿಗೆ ಬೆಚ್ಚಿ ಬಿದ್ದು ಗ್ರಾಮೀಣ ಜೀವನೋಪಾಯ ಸಂವರ್ಧನೆ ಎಂಬ ಕಾರ್ಯಕ್ರಮಕ್ಕೆ ಹಣ ಸುರಿಯುತ್ತಿದೆ. ಅದು ಮೂಲತಃ ಗಾಂಧೀಯ ಪರಿಕಲ್ಪನೆಯ ಒಂದು ರೂಪುರೇಶೆ ಎಂಬುದೂ ಅರ್ಥವಾಗದಂತೆ ಸರ್ಕಾರವಿದೆ. ಇದು ಪಕ್ಕಕ್ಕಿರಲಿ, ದೇಶದ ಉದ್ದಗಲಕ್ಕೂ ಹಲವು ವಲಯಗಳಿಂದ ಸ್ಫೋಟಗೊಳ್ಳುತ್ತಿರುವ ಅಸಮಾಧಾನ ಮತ್ತು ಹಕ್ಕೊತ್ತಾಯಗಳು ಮೂಲತಃ ಈ ಆರ್ಥಿಕ ನೀತಿಯ ವಿರುದ್ಧವೇ ಇವೆ. ಕೆಲವು ನೇರವಾಗಿ ಕಾಣಿಸಿಕೊಂಡರೆ ಇನ್ನು ಕೆಲವು ಪ್ರಚ್ಛನ್ನವಾಗಿ ಅನಾವರಣಗೊಳ್ಳುತ್ತಿವೆ.
ಗಾಂಧಿ ಹೇಳಿದ ಅಸ್ತೇಯ ಮತ್ತು ಅಪರಿಗ್ರಹ ವೈಯಕ್ತಿಕ ನೈತಿಕ ಮೌಲ್ಯಗಳಂತೆ ನಾವು ಸ್ವೀಕರಿಸಿದ್ದೇವೆ. ಬಸವಣ್ಣ ಹೇಳಿದ್ದು ಇದನ್ನೇ. ಕಳಬೇಡ ಕೊಲಬೇಡ ಎಂದಾಗ ಅದೇನೋ ವ್ಯಕ್ತಿಗತ ಉಪದೇಶವೆಂಬಂತೆ ನಾವು ನಟಿಸಿ ಸ್ವೀಕರಿಸುತ್ತಿದ್ದೇವೆ. ಆದರೆ ಇದು ಮೂಲತಃ ಒಂದು ಪ್ರಜಾಸತ್ತೆಯ ಪ್ರಭುತ್ವ ಮತ್ತು ಸಮುದಾಯಗಳ ಸ್ವಭಾವದ ವಿರೂಪದ ಬಗ್ಗೆ ಎಂಬುದನ್ನು ಒಪ್ಪಿಕೊಳ್ಳಲೂ ನಿರಾಕರಿಸುತ್ತಿದ್ದೇವೆ. ನಮ್ಮ ಸಂಪನ್ಮೂಲಗಳೆಲ್ಲಾ ಸಮುದಾಯದ ಆಸ್ತಿಗಳಾಗಿ ಸುಸ್ಥಿರ ಸ್ಥಳೀಯ ಉತ್ಪಾದನೆಯ ಉಪಾಧಿಗಳಾಗದೇ, ಯಾವುದೋ ಕಾರ್ಪೋರೇಟ್ ಸ್ವತ್ತಾದಾಗ ಏನಾಗುತ್ತದೆ ಎಂಬ ಪುರಾವೆ ಕಣ್ಣೆದುರೇ ಅನಾವರಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲೇ ಗಾಂಧೀಯ ಮೌಲ್ಯಗಳು ಮತ್ತೆ ಜನಾಭಿಪ್ರಾಯ, ಪ್ರತಿರೋಧದ ರೂಪಗಳಲ್ಲಿ ಚಿಗಿತುಕೊಳ್ಳುತ್ತಿದೆ. ಗಾಂಧೀಯ ಗ್ರಾಮ ಸ್ವರಾಜ್ಯ, ವಿಕೇಂದ್ರೀಕರಣಕ್ಕೂ ಗ್ರಾಮ ಕೇಂದ್ರಿತ/ ಸಮುದಾಯ ಕೇಂದ್ರಿತ ಉತ್ಪಾದನಾ ವಿಧಾನಕ್ಕೂ ಸಂಬಂಧವಿದೆ. ಒಂದು ಇನ್ನೊಂದನ್ನು ಪೋಷಿಸುತ್ತದೆ.
ಕೈಗಳಿಗೆ ಕೆಲಸ ಮತ್ತು ಕೈಗಳಿಂದಾದ ಉತ್ಪನ್ನಗಳಿಗೆ ಆದ್ಯತೆ ಎಂಬುದು ಒಂದು ರೋಮ್ಯಾಂಟಿಕ್ ಕಲ್ಪನೆ ಎಂಬಂತೆ ನಮ್ಮ ಅರ್ಥಶಾಸ್ತ್ರಜ್ಞರು ನಡೆದುಕೊಳ್ಳುತ್ತಿದ್ದಾರೆ. ಆದರೆ ನಮ್ಮ ಸಂಸ್ಕೃತಿ ನಿಷ್ಠ ಬೇಕು-ಬೇಡಗಳನ್ನು ಗಮನಿಸಿದರೆ, ಪೊರಕೆಯಿಂದ ಹಿಡಿದು ಮಡಕೆಯವರೆಗೆ, ಕೈಮಗ್ಗದಿಂದ ಹಿಡಿದು ಕಂಬಳಿವರೆಗೆ ಇದೊಂದು ನಾಗರಿಕತೆಯ ಪರ್ಯಾಯವೆಂಬುದು ಅರ್ಥವಾಗುತ್ತದೆ. ಪ್ರಸನ್ನ ಅವರು ತಮ್ಮ ಜಿಎಸ್ ಟಿ ವಿರುದ್ಧದ ಪಾದಯಾತ್ರೆಯಲ್ಲಿ ಅಕ್ಷರಶಃ ಇದನ್ನು ಎತ್ತಿ ತೋರಿದ್ದಾರೆ.
ಸ್ವಾತಂತ್ರ್ಯೋತ್ತರ ರಾಜಕಾರಣದ ಆರ್ಥಿಕ ನೀತಿಯ ಅನುಷ್ಠಾನ ಹೇಗಿದೆಯೆಂದರೆ ಕಾಂಗ್ರೆಸ್ಸಿನಿಂದ ಹಿಡಿದು ಎಲ್ಲಾ ಸರ್ಕಾರಗಳೂ ಗಾಂಧೀಯ ಚೌಕಟ್ಟನ್ನು ಅವಾಸ್ತವ ಎಂದು ಬಿಂಬಿಸುತ್ತಾ ಸಂಪತ್ತಿನ ಕ್ರೋಢೀಕರಣದ ಅಂತರವನ್ನು ಹೆಚ್ಚಿಸಿದವು. ಮಂತ್ರದಂಡವೆಂದು ಝಳಪಿಸಿದ್ದ ಈ ಮುಕ್ತ ಆರ್ಥಿಕತೆಯೂ ಸರ್ಕಾರದ ಭರವಸೆಗಳನ್ನು ಈಡೇರಿಸುವ ಶಕ್ತಿ ಕಳಕೊಂಡು ಸರ್ಕಾರವನ್ನೇ ಬಿಕ್ಕಟ್ಟಿಗೆ ಈಡು ಮಾಡಿದೆ. ಸಾಲ ತೀರಿಸಲು ಮತ್ತೆ ಸಾಲ ನೀಡುವುದಕ್ಕೇ ಪುನರ್ರಚನೆ ಎಂದು ಹೆಸರಿಟ್ಟ ಆರ್ಥಿಕ ನೀತಿಯ ಆತ್ಮ ವಂಚನೆಯೇ ಸರ್ಕಾರದ ಮಾರ್ಗ ಸೂಚಿ ಆಗಿರುವಂತಿದೆ.
ಆದ್ದರಿಂದಲೇ ಗಾಂಧೀಯ ಸೂಚಿಗಳು ವಾಸ್ತವದ ಪರೀಕ್ಷೆಯ ಮಾನದಂಡದಂತಾಗಿ ಪ್ರಭುತ್ವವನ್ನು ಚಿಂತೆಗೀಡು ಮಾಡುತ್ತಿರುವುದು.
ಈಗಿನ ಸರ್ಕಾರ ಹಿಂದಿನವರು ಮಾಡಿದ ಅನಾಹುತಗಳನ್ನೇ ಬೊಟ್ಟು ಮಾಡಿ ತೋರುತ್ತಾ ಮತ್ತೆ ಅದನ್ನೇ ಮುಂದುವರಿಸುವ ಉಮೇದಿನಲ್ಲಿ ಏದುಸಿರು ಬಿಡುತ್ತಿರುವುದೂ ನಮ್ಮ ಕಾಲದ ಪರಮ ವಿರೋಧಾಭಾಸ.
ಇದಷ್ಟೇ ಸಾಲದೆಂಬಂತೆ, ಅರುವತ್ತು ವರ್ಷಗಳ ರಾಜಕೀಯ ಸಾಂಸ್ಥಿಕ ಸ್ವರೂಪ; ಆರ್ಥಿಕ ನೀತಿಗಳ ವಿರೂಪಗಳ ಬಳಿಕ ಇಂದು ನಮ್ಮ ದೇಶದ ಸಾಮಾಜಿಕ ಸಾಮರಸ್ಯದ ಸಾಂವಿಧಾನಿಕ ಲಕ್ಷ್ಮಣ ರೇಖೆಯನ್ನೇ ಅಳಿಸಿ ಹಾಕುವ ರಣೋತ್ಸಾಹದಲ್ಲಿ ಆಳುವ ಪಕ್ಷದ ಮಹಾರಥಿಗಳಿದ್ದಾರೆ. ಈ ನಾಜೂಕು ಗೆರೆಯನ್ನು ಎಗ್ಗಿಲ್ಲದೇ ಉಲ್ಲಂಘಿಸುವ ಸೈದ್ಧಾಂತಿಕ ಚೌಕಟ್ಟಿಗೆ ಮಣೆ ಹಾಕುವಂತಿದೆ. ಇದು ಮೂಲತಃ ಬಹುಸಂಖ್ಯಾತ ಯಜಮಾನಿಕೆಗೆ ಅಧಿಕೃತ ಮುದ್ರೆ ಒತ್ತುವ ಕೆಲಸ. ಈ ದೇಶವಷ್ಟೇ ಅಲ್ಲ. ಎಲ್ಲಾ ಪ್ರಜಾತ್ತಾತ್ಮಕ ದೇಶಗಳೂ ಈ ಸಮೂಹ ಸನ್ನಿಯ ಚರ್ಯೆಗೆ ಸೈದ್ಧಾಂತಿಕ ಮತ್ತು ಪ್ರಜಾಸತ್ತಾತ್ಮಕ ಮುದ್ರೆ ಹಾಕಲು ನಿರಾಕರಿಸಿವೆ. ವಿಶ್ವ ಸಂಸ್ಥೆ ಸ್ಥಾಪನೆಯಾದ ಬಳಿಕ ಹಂತಹಂತವಾಗಿ ರೂಪುಗೊಂಡ ಮತ್ತು ಜಾಗತಿಕವಾಗಿ ಒಪ್ಪಿತವಾದ ಸನ್ನದುಗಳನ್ನು ಗಮನಿಸಿದರೆ ಇದು ಗೊತ್ತಾಗುತ್ತದೆ.
ವ್ಯಕ್ತಿ ಸ್ವಾತಂತ್ರ್ಯ, ಸಮುದಾಯಗಳ ಸ್ವಾತಂತ್ರ್ಯಗಳ ವಿವರಗಳನ್ನು ಮಾನವಹಕ್ಕುಗಳ ಚೌಕಟ್ಟಿನಲ್ಲಿ ಇಟ್ಟು ಸ್ವೀಕರಿಸಿದ ರೀತಿ ಇದು. ನಮ್ಮ ಸಂವಿಧಾನವೂ ಈ ಆಶಯಗಳನ್ನು ಕಾಲಕಾಲಕ್ಕೆ ಅಂತರ್ಗತಗೊಳಿಸುತ್ತಾ ಬಂದಿದೆ. ಕಾನೂನು ಕಟ್ಟಳೆಗಳು ಈ ದಿಕ್ಕಿನಲ್ಲಿ ರೂಪಿತವಾಗಿವೆ. ಸ್ವಾತಂತ್ರ್ಯಪೂರ್ವದ ಬಹುತೇಕ ಧೀಮಂತರು ಈ ನಾಗರಿಕ ಸನ್ನದನ್ನು ಪ್ರಜಾಸತ್ತೆಯ ಅಡಿಪಾಯವೆಂದು ಗ್ರಹಿಸಿ ಮುನ್ನೆಲೆಗೆ ತಂದಿದ್ದರು. ಈ ಸ್ವಾತಂತ್ರ್ಯವೆಂಬುದು ಕೇವಲ ವಸಾಹತುಶಾಹಿ ನೊಗಕ್ಕೆ ಸಂಬಂಧಿಸಿದ್ದಲ್ಲ; ಆಂತರಿಕ ಪಾಳೇಗಾರಿಕೆಯನ್ನು ನಿಯಂತ್ರಿಸುವ ಅಸ್ತ್ರವೆಂದೂ ಅರಿತಿದ್ದರು.
ಗಾಂಧಿಯ ಸತತವಾಗಿ ತಮ್ಮ ನಿತ್ಯ ನೈಮಿತ್ತಿಕಗಳಲ್ಲಿ ಇದನ್ನು ಎತ್ತಿ ತೋರಿದರು. ಅವರ ಪ್ರಾರ್ಥನೆಯಲ್ಲಿದ್ದ ಸರ್ವ ದೇವ ವಂದನೆ ಆ ಕಾಲಕ್ಕೇ ವಿಚಿತ್ರ ಸೃಷ್ಟಿ. ಸರ್ವೋದಯ ಪ್ರಾರ್ಥನೆ ಇಂದಿಗೂ ನನಗೆ ಸೋಜಿಗ ಹುಟ್ಟಿಸುತ್ತದೆ. ಸಂಸ್ಕೃತ ಎಂಬಂತೆ ತೋರಿದರೂ ಅಲ್ಲಿ ಎಲ್ಲಾ ನಂಬಿಕೆಗಳ ದೇವರೂ ಇದ್ದಾರೆ. ಸ್ವತಃ ಗಾಂಧೀ ದಲಿತರಿಗೆ ಪ್ರವೇಶವಿಲ್ಲದ ಶ್ರದ್ಧಾ ಕೇಂದ್ರಗಳಿಗೆ ಹೋಗಲು ನಿರಾಕರಿಸಿದ್ದರು. ತಮ್ಮ ಆಶ್ರಮದಲ್ಲೇ ಅಂತರ್ಜಾತೀಯ ವಿವಾಹಗಳಿಗಷ್ಟೇ ಅವಕಾಶ ನೀಡಿದ್ದರು. ಅಷ್ಟೇಕೆ ತಾವು ಸೃಷ್ಟಿ ನಿಯಾಮಕನಲ್ಲಿ ನಂಬಿಕೆ ಇರುವಾತ ಎಂದು ಘೋಷಿಸಿಕೊಂಡಾಗಲೂ ಪರಮ ನಾಸ್ತಿಕ ಗೋರಾ ಅವರ ಜೊತೆ ದಶಕಗಳ ಕಾಲ ಪ್ರೀತಿಯ ಸಂಬಂಧ ಹೊಂದಿದ್ದರು. ಆಹಾರದ ಬಗ್ಗೆ ಅದೊಂದು ಸಹಜ ಪ್ರವೃತ್ತಿ ಎಂದು ಪ್ರತಿಕ್ರಿಯಿಸಿದ್ದರು.
ಇದೆಲ್ಲಕ್ಕಿಂತಲೂ ತನ್ನಿಂದ ಸ್ಫೂರ್ತಿ ಪಡೆದ ಮಂದಿ ಮಾಡುವ ಎಲ್ಲಾ ಸಾರ್ವಜನಿಕ ನಡಾವಳಿಗಳಿಗೂ ತಾನು ಜವಾಬ್ದಾರ ಎಂದು ಭಾವಿಸಿದ್ದರು. ವ್ಯಕ್ತಿ/ಸಮೂಹ ನಡೆಸುವ ಅತಿರೇಕಗಳಿಗೆ ತಾನು ನೈತಿಕವಾಗಿ ಜವಾಬ್ದಾರ ಎಂದು ಭಾವಿಸಿದ್ದರು. ಬಾಪೂ ಹುಟ್ಟಿದ ದಿನದಂದೇ ಜನಿಸಿದ ಲಾಲ್ ಬಹಾದೂರ್ ಶಾಸ್ತ್ರಿ ಕೂಡಾ ಇಂದು ನಮಗೆ ನೆನಪಿರುವುದು ಇಂಥಾ ಜವಾಬ್ದಾರಿ ಪ್ರಜ್ಞೆಯ ರೂಪಕವಾಗಿ.
ಇಂದು ಬಹುಸಂಖ್ಯಾತ ಯಜಮಾನಿಕೆಯನ್ನು ಅದೊಂದು ಸಂಸ್ಕೃತಿ ಜನ್ಯ ಏಕರೂಪೀ ಸತ್ಯವೆಂಬಂತೆ ಬಿಂಬಿಸಿ ಅದನ್ನು ಒಪ್ಪಿಕೊಳ್ಳಿ ಎಂಬ ದಬಾವಣೆ ಎಲ್ಲೆಡೆ ನಡೆಯುತ್ತಿದೆ. ತಮ್ಮನ್ನುಳಿದು ಇತರ ಎಲ್ಲರನ್ನೂ ಹಿಂದೂ ವಿರೋಧೀ ಎಂದು ಕಿರುಚುವುದರಲ್ಲಿ ಇದರ ಪರಮ ಆತ್ಮವಂಚನೆ ಮತ್ತು ವಿರೋಧಾಭಾಸ ಗೋಚರಿಸುತ್ತಿದೆ. ಅಸಹನೆಯ ಅತಿರೇಕದಲ್ಲಿ ನಿಗ್ರಹಿಸುವ, ಅವಶ್ಯವೆಂದು ಕಂಡಾಗ ಪ್ರಾಣ ತೆಗೆಯುವ ಪ್ರವೃತ್ತಿ ಎಲ್ಲಾ ಸರ್ವಾಧಿಕಾರಿ ಸಂಘಟನೆಗಳಲ್ಲೂ ಇದೆ. ಬಿಂಧ್ರನ್ವಾಲೆಯಿಂದ ಹಿಡಿದು, ಪ್ರಭಾಕರನ್ ವರೆಗೆ ನಿಯಂತ್ರಣದ ಅಮಲು ಹತ್ತಿಸಿಕೊಂಡ ಎಲ್ಲಾ ವಿಕೃತ ನಾಯಕರು ಇದೇ ಕೆಲಸ ಮಾಡಿದ್ದಾರೆ. ಆದರೆ ಅದೊಂದು ದೂರ ನಿಯಂತ್ರಣದ ತಾತ್ವಿಕತೆಯಾಗಿರುವುದು ಈ ಕಾಲದಲ್ಲಿ. ಇಂದು ಸರ್ವೋಚ್ಛ ನಾಯಕ ಹತ್ಯೆ, ದಮನದ ಆದೇಶ ನೀಡಬೇಕಿಲ್ಲ; ಅದರ ಧ್ಯೇಯವನ್ನು ಮೆದುಳಲ್ಲಿ ತುಂಬಿಕೊಂಡ ಒಬ್ಬ ಮಾಡಬಹುದಾದ ಸ್ಥಿತಿ ಇದೆ.
ಚೌರಿ ಚೌರಾದ ಹಿಂಸಾಚಾರದ ಬಳಿಕ ಗಾಂಧಿ “ಎಲ್ಲೊ ತಪ್ಪಾಗಿದೆ, ಜನ ತಪ್ಪಾಗಿ ಗ್ರಹಿಸಿದ್ದಾರೆ” ಎಂದು ಜವಾಬ್ದಾರಿ ಹೊತ್ತಿದ್ದನ್ನು ನೆನಪಿಸಿಕೊಂಡರೆ ಸದ್ಯದ ನಾಯಕರ ಅಂತಸಾಕ್ಷಿಯ ಮಟ್ಟ ಏನು ಎಂಬುದು ಸ್ಪಷ್ಠವಾಗುತ್ತದೆ.!!
ಗಾಂಧಿ ಮತ್ತೆ ಎದೆಯೊಳಗೆ ಇಳಿದ ಮುಳ್ಳಾಗುವುದು ಹೀಗೆ.
ಗಾಂಧಿಯನ್ನು ಹವಣಿಕೆಯಲ್ಲಿ ಬಳಸುವ ಪ್ರಯತ್ನ ಮಾಡಿದಾಗೆಲ್ಲಾ ಅದು ವಿಫಲವಾಗಿವೆ. ಬಾಪೂವನ್ನು ಸ್ವಚ್ಛತೆಗಷ್ಟೇ ಸೀಮಿತಗೊಳಿಸಿ ಪೋಸ್ಟರುಗಳಲ್ಲಿ ನೇತು ಹಾಕಿದರೆ ಗಾಂಧಿಯ ಇತರ ಆದರ್ಶಗಳು ಇನ್ನಷ್ಟು ಪ್ರಖರವಾಗಿ ಹೊಳೆಯತೊಡಗುತ್ತವೆ. ನೋಟುಗಳಲ್ಲಿ ಅಚ್ಚು ಹಾಕಿದರೆ ಅದು ಆರ್ಥಿಕ ನೀತಿಯನ್ನು ಕಾಡತೊಡಗುತ್ತದೆ. ಸರ್ಕಾರೀ ಕಛೇರಿಗಳಲ್ಲಿ ನೇತು ಹಾಕಿದರೆ ಅಲ್ಲಿನ ಅನೈತಿಕ ಚಟುವಟಿಕೆಗಳಿಗೆ ಬೆಳಕು ಚೆಲ್ಲುವ ಟಾರ್ಚ್ ಲೈಟಿನ ತರ ಬಾಪೂ ಕಾಣಿಸತೊಡಗುತ್ತಾರೆ.
ಅದೆಲ್ಲಕ್ಕಿಂತ ಹೆಚ್ಚಾಗಿ ಸೈದ್ಧಾಂತಿಕವಾಗಿ ಒಪ್ಪದವರಿಗೂ ಬಾಪೂ ಸಂಗಾತಿಯಾಗುತ್ತಾರೆ. ಈ ಪವಾಡ ಅನ್ಯಾದೃಶ. ಬಾಪೂ ಒಂದರ್ಥದಲ್ಲಿ ಈ ದೇಶದ ಬಾಧೆಗಳನ್ನೆದುರಿಸಲು ಒದಗಿದ ತಾಯಿತ. ಆಳುವವರ ಬೆನ್ನು ಹತ್ತಿದ ಭೇತಾಳ.