ಗೋಪಾಲಕೃಷ್ಣ ಅಡಿಗರೊಂದಿಗೆ ಮಾತುಕತೆ -ಸಂದರ್ಶನ: ಡಿ.ವಿ.ಪ್ರಹ್ಲಾದ್
[1992 ರ ಸಂಚಯ ಸಾಹಿತ್ಯ ಪತ್ರಿಕೆಯ ವಿಶೇಷಾಂಕ ‘ಬಗೆ ತೆರೆದ ಬಾನು’ ವಿನಲ್ಲಿ ಗೋಪಾಲಕೃಷ್ಣ ಅಡಿಗರೊಂದಿಗೆ ಒಂದು ಮಾತುಕತೆ ನಡೆಸಿದ್ದಾರೆ ಪತ್ರಿಕೆಯ ಸಂಪಾದಕರೂ ಕವಿಯೂ ಆದ ಡಿ.ವಿ.ಪ್ರಹ್ಲಾದ್ ಅವರು. ಸಂದರ್ಶನದ ಮರು ಓದು, ಅಡಿಗರ ಕುರಿತ ನಮ್ಮ ಗ್ರಹಿಕೆಯ ವಿಸ್ತರಣೆಗಾಗಿ ಹಾಗೂ ದೇವನೂರರ, ಕುಸುಮಬಾಲೆ ಕುರಿತ ಅಭಿಪ್ರಾಯಕ್ಕಾಗಿ……]
ನಿಮ್ಮ ಕಾವ್ಯವನ್ನು ಒಂದು ನಿರಂತರವಾದ ರಾಜಕೀಯ ಪ್ರತಿಕ್ರಿಯೆ ಎಂದು ಗುರುತಿಸುತ್ತಾರೆ. ಜೊತೆಗೆ ನೀವೂ ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಿ ಆಸಕ್ತರಾಗಿದ್ದೀರಿ. ಇವತ್ತಿನ ರಾಜಕೀಯ ಪರಿಸ್ಥಿತಿ ಕುರಿತು ನಿಮ್ಮ ಅನಿಸಿಕೆ ಏನು?
ನಮ್ಮಲ್ಲಿ ಪ್ರಜಾತಂತ್ರ ಬಂತು, ಈ ಕಾಲಕ್ಕೆ ಹೇಳಿ ಮಾಡಿಸಿದ್ದು. ಅತ್ಯಂತ ಅನುಗುಣವಾದ ರಾಜಕೀಯ ವ್ಯವಸ್ಥೆ. ಆದರೆ ಅದು ಯಶಸ್ವಿಯಾಗಬೇಕಾದರೆ ಪ್ರಜೆಗಳಲ್ಲಿ ವಿವೇಕ ಬೇಕು. ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಯೋಗ್ಯ ಯಾವುದು ಅಯೋಗ್ಯ ಎನ್ನೊದನ್ನ ಜಾತಿ ಮತ ಇತ್ಯಾದಿಗಳನ್ನ ಯೋಚನೆ ಮಾಡದೆ, ಸರಿಯಾದ ಶ್ರೇಷ್ಠ ಮನುಷ್ಯರನ್ನ ಆರಿಸೋ ಶಕ್ತಿಬೇಕು. ಯಾಕೆಂದರೆ ಪ್ರಜಾತಂತ್ರದಲ್ಲಿ ಸಾರ್ವಭೌಮತ್ವ ಇರೋದು ಪ್ರಜೆಗಳಲ್ಲಿ. ಆದರೆ ಎಲ್ಲರಿಗೂ ರಾಜ್ಯಭಾರ ಮಾಡೋಕಾಗಲ್ಲ, ಅದಕ್ಕೆ ಶಿಕ್ಷಣದ ಜೊತೆಗೆ ವ್ಯವಸ್ಥಾತ್ಮಕವಾಗಿ ಜನಗಳನ್ನ ಒಂದುಗೂಡಿಸೋ ಶಕ್ತಿಬೇಕು. ಇಂಥಾ ಜನ ಎಲ್ಲಾ ಜಾತಿಗಳಲ್ಲಿ ಎಲ್ಲಾ ಕಾಲದಲ್ಲೂ ಇರ್ತಾರೆ, ಅದನ್ನು ಗುರುತಿಸಬೇಕು. ಇದಕ್ಕೆ ಎಂಥಾ ಶಿಕ್ಷಣಬೇಕು ಅಂದ್ರೆ ಜಾತಿ ಮತಗಳನ್ನು ಬಿಟ್ಟು ಯೋಚಿಸುವಂಥಾದ್ದು. ವಸ್ತುನಿಷ್ಠ ವಿಚಾರಶಕ್ತಿ; ಇದು ಬರುತ್ತೆ ಅಂತ ತಿಳಿದುಕೊಂಡು ನಾನೂ ಆ ಕಾಲದಲ್ಲಿ ರಾಜಕೀಯದಲ್ಲಿ ಆಸಕ್ತಿ ತೋರಿಸಿದೆ. ಆದರೆ ಇವತ್ತು ಪ್ರಜಾಪ್ರಭುತ್ವ ಕೂಡಾ ಯಶಸ್ವಿಯಾಗಿಲ್ಲ ಇದು ಪ್ರಜಾತಂತ್ರವಾಗಿಲ್ಲ. ಅತಂತ್ರ ಸ್ಥಿತಿಯೊಂದು ಬರ್ತಾ ಇದೆ.
ಹಾಗಿದ್ದರೆ ಇದಕ್ಕೆ ಪರ್ಯಾಯ ಏನನ್ನ ಯೋಚಿಸಬಹುದು?
ಅದನ್ನ ಸಮಯವೇ ನಮಗೆ ತಿಳಿಸಬೇಕು. ಕಾಲಕ್ರಮೇಣ, ಈಗ ಎಲ್ಲವೂ ಅತ್ಯಂತ ನಿಕೃಷ್ಟ ಸ್ಥಿತಿಗೆ ಬರುತ್ತಿದೆ. ಒಳ್ಳೆಯವರ ಸಂಖ್ಯೆ ಬಹಳ ಕಡಿಮೆ ಆಗ್ತಾ ಇದೆ. ಕಳವು, ಕೊಲೆ, ಮೋಸ, ತಟವಟ, ವಂಚನೆ, ಲಂಚ… ಇವುಗಳಿಗೆ ಆದಿ-ಅಂತ್ಯಗಳಿಲ್ಲ. ಇಂಥಾ ಪರಿಸ್ಥಿತಿ ಹಿಂದೆ ಕೂಡಾ ಬಂದಿತ್ತು. ನಮ್ಮಲ್ಲಿ ಇಂಥಾ ಕಾಲಕ್ಕೆ ದೇವರು ಅವತಾರ ತಾಳುತ್ತಾನೆ, ಲೋಕೋದ್ಧಾರ ಮಾಡುತ್ತಾನೆ ಎಂದು ನಂಬಿದ್ದರು. ಆದರೆ ಈಗ ಅಂಥಾ ಒಬ್ಬ ಮನುಷ್ಯನ ಅಗತ್ಯ ಇದೆ. ಅವನು ನಮ್ಮೆಲ್ಲರ ಪ್ರತಿನಿಧಿಯಾಗಿ ಬರಬೇಕು. ದೇವರೆ ಆದರೂ ಮನುಷ್ಯನಾಗಿಯೇ ಬರಬೇಕಲ್ಲವೆ? ಯಾವ ವ್ಯವಸ್ಥೆಯೂ ಪರಿಪೂರ್ಣವಲ್ಲ. ಆದರ್ಶವೆನ್ನಿಸಿದ್ದ ವ್ಯವಸ್ಥೆಯ ನಾನಾ ಕೊರತೆಗಳು ಕ್ರಮೇಣ ಗೋಚರವಾಗುತ್ತದೆ. ಆಗ ಜನ ಬದಲಾವಣೆಯನ್ನು ಬಯಸಿ ಹಳೆಯದೇ ಆದರೂ ಹೊಸದಾಗಿ ಕಾಣುವ ಇನ್ನೊಂದು ವ್ಯವಸ್ಥೆ ಬಯಸುತ್ತಾರೆ.
ನಿಮ್ಮ ಕಾವ್ಯದ ಉದ್ದಕ್ಕೂ ಕಂಡುಬರೋ ನಾಯಕ ಈ ಗುಣಗಳನ್ನು ಹೊಂದಿದ್ದಾನೆಯೆ? ಅಥವಾ ನಿಮ್ಮ ಪುರುಷೋತ್ತಮನ ಕಲ್ಪನೆ ಇಂಥಾ ನಾಯಕನದ್ದೇ?
ಕಲ್ಪನೆಯನ್ನೇನೋ ಇಟ್ಟುಕೊಂಡು ಬಂದಿದ್ದೇನೆ. ಏನು ಮಾಡೋದು ಬಂದಿಲ್ಲ. ನಾವೇ ಎಲ್ಲಾ ಆಗೋಕೆ ಸಾಧ್ಯವಿಲ್ಲ. ನಮ್ಮೆಲ್ಲರ ಪ್ರತಿನಿಧಿಯಾಗಿ ಅಂಥವನೊಬ್ಬ ಬರಬೇಕು. ಅವನ ಮಾತನ್ನ ನಾವು ಕೇಳಬೇಕು. ಗಾಂಧಿಯಂಥವನಾದರೂ ಆಗಬೇಕು. ಆದರೆ ಇವತ್ತಿಗೆ ಗಾಂಧಿ ಸಾಕಾಗೋದಿಲ್ಲ ಎನಿಸುತ್ತದೆ. ನಿಮ್ಮ ಮೇಲೆ ನಿತ್ಯವೂ ದೌರ್ಜನ್ಯ ನಡೆಯತೊಡಗಿ, ಕ್ರಿಸ್ತ ಹೇಳಿದ ಹಾಗೆ ಒಂದು ಕೆನ್ನೆಗೆ ಹೊಡೆದಾಗ ಮತ್ತೊಂದು ಕೆನ್ನೆ ತೋರಿಸಿದರೆ, ಮತ್ತೊಂದು ಕೆನ್ನೆಗೂ ಹೊಡೆದು ಬೆನ್ನ ಮೇಲೂ ಒಂದು ಕೊಡುತ್ತಾರೆ. ನಿತ್ಯವೂ ಅಂಥಾ ದೌರ್ಜನ್ಯ ಸಹಿಸಕೊಳ್ಳಬೇಕೆ? ದೌರ್ಜನ್ಯವನ್ನ ಪ್ರತಿಭಟಿಸಲೇ ಬೇಕು. ಆ ಕಾಲಕ್ಕೆ ಗಾಂಧಿಯಂಥವರ ನಾಯಕತ್ವ ನಮಗೆ ಸಾಕಾಗಿತ್ತು. ಬ್ರಿಟಿಷರಲ್ಲೂ ಸ್ವಲ್ಪ ನ್ಯಾಯ ಬುದ್ಧಿ ಇತ್ತು, ಕೊನೆಗೂ ನಾವು ಗೆಲ್ಲಲು ಸಾಧ್ಯವಾಯ್ತು. ಆದರೆ ಈ ಕಾಲದಲ್ಲಾದರೆ ಅಧಿಕಾರದಲ್ಲಿದ್ದವನು ಕೊಲೆ ಮಾಡಿದರೂ ಏನೂ ಮಾಡಕ್ಕಾಗಲ್ಲ.
ನಮ್ಮ ದೇಶ ಒಂದು ರೀತಿಯ ಸಂಕ್ರಮಣ ಸ್ಥಿತಿಯಲ್ಲಿರೋದರಿಂದ, ಹಳೇ ಮೌಲ್ಯಗಳನ್ನು ಒಪ್ಪಿಕೊಳ್ಳಲಾಗದೆ ಹೊಸದರ ಅನ್ವೇಷಣೆ ಸಾಧ್ಯವಾಗದೇ, ಇರೋದು ಕಂಡುಬರುತ್ತಿದೆ. ಈ ಸ್ಥಿತಿಯಲ್ಲಿ ಮೌಲ್ಯಗಳಿಗೆ ಬದ್ಧರಾದ ಒಂದು ಪೀಳಿಗೆಯನ್ನ ನಿರೀಕ್ಷಿಸುವುದು ಎಷ್ಟರ ಮಟ್ಟಿಗೆ ಸೂಕ್ತ?
ಆದರ್ಶವಾದ ಅನ್ನೊದಕ್ಕಿಂತಾ ವಾಸ್ತವವಾದಿಗಳ ಸಂಖ್ಯೆ ಜಾಸ್ತಿಯಾಗಬೇಕು. ಆಮೇಲೆ ಆದರ್ಶ, ನಾವು ಮೊದಲಿನಿಂದಲೂ ಭಾರಿ ಭಾರಿ ಘೋಷಣೆಗಳನ್ನು ಭಾಷಣಗಳನ್ನು ಮಾಡಿದೆವು. ಈಗಲೂ ಮಾಡೋಲ್ವೇ? ನಮ್ಮ ರಾಜಕೀಯಸ್ಥರೆಲ್ಲಾ ತುಂಬಾ ಚೆನ್ನಾಗಿ ಮಾಡುತ್ತಾರೆ (ವ್ಯಂಗ್ಯವಾಗಿ). ನಮ್ಮಲ್ಲಿ ಹಿಂದೆ ತ್ರಿಕರಣಶುದ್ದಿ ಎನ್ನುತ್ತಿದ್ದರು. ಅದು ಉಳ್ಳಂಥಾ ಜನ ಬರಬೇಕು. ಮಾತಲ್ಲೇನಿದೆಯೋ ಅದೇ. ಕೃತಿಯಲ್ಲಿ. ಇಂಥಾ ಜನ ಬರಬೇಕು. ಸಾಹಿತ್ಯ, ಕಾವ್ಯಕ್ಕೂ ಅನ್ವಯಿಸೋ ಮಾತಿದು. ಬರೇ ದೊಡ್ಡ ದೊಡ್ಡ ಮಾತಿನ ಶಬ್ದದ ಜನ ನಮ್ಮಲ್ಲಿ ಬಹಳ ಇದ್ದಾರೆ. ಅವರಿಗೆ ಅನುಭವಕ್ಕೆ ಬಂದಿರೋದೇ ಇಲ್ಲ. ಆದರೂ ಬರೀತಾರೆ. ದೊಡ್ಡ ದೊಡ್ಡ ಶಬ್ದಗಳಿದ್ದರೆ ನಮ್ಮ ಜನ ಆದರ್ಶದ ಗುಂಗಿನಲ್ಲಿ ಎಲ್ಲವನ್ನೂ ಮರೀತಾರೆ. ಅದು ಹೋಗಬೇಕು. ಈ ಜನ ವಾಸ್ತವವಾದಿಗಳಾಗಬೇಕು. ಅನಂತರ ಆದರ್ಶ. ಇಲ್ಲಿ ಯಾವ ವ್ಯವಸ್ಥೆ ಬರುತ್ತೆ ಅನ್ನೊಕಾಗಲ್ಲ. ಇಲ್ಲಿ ಯಾವ ವ್ಯವಸ್ಥೆಯೂ ಸ್ಥಿರವಾದದ್ದಲ್ಲ. ಕಮ್ಯೂನಿಸಮ್ಮಿಗೆ ಯಾವ ಗತಿ ಬಂದಿದೆ ನೋಡಿ…
ಸರ್, ಹಾಗಿದ್ದರೆ ರಷ್ಯದ ರಾಜಕೀಯ ಪತನವನ್ನು ನಾವು ಕಮ್ಯೂನಿಸಮ್ಮಿನ ತತ್ವದ ಸೋಲು ಅಂತ ಪರಿಗಣಿಸಕ್ಕೆ ಹೇಗೆ ಸಾಧ್ಯ?
ಯಾಕೆಂದರೆ ಒಂದು ಅತಿ ಅದು. ಗಾಂಧಿ ಹೇಳಿದ ಅಹಿಂಸೆ, ಕಮ್ಯುನಿಸ್ಟರು ಹೇಳಿದ ಬಡತನ ಇಲ್ಲದ ಹಾಗೆ ಮಾಡುತ್ತೇವೆನ್ನುವ ಮಾತುಗಳೂ ಅತಿಯಾದದ್ದು. ಎಲ್ಲ ಜನಗಳೂ ಒಂದೇ ಎನ್ನುತ್ತಾ ಒಳ್ಳೆಯ ಮಾತುಗಳಲ್ಲೇ ಜನಗಳ ದಮನ ಮಾಡಲಾರಂಭಿಸಿದರು. ಅದು ಆಗಬಾರದು. ಇಲ್ಲೂ ಹಾಗೇ ಆಗುತ್ತಿದೆ. ಟ್ರೇಡ್ ಯೂನಿಯನ್‍ಗಳ ಹೆಸರಲ್ಲಿ ಅನೇಕ ದುರಾಚಾರ ನಡೆಯುತ್ತಿದೆ. ಇದು ಯಾವ ಅತಿಯೂ ನಡೆಯಲಾರದೆನ್ನುವುದು ತೋರಿಸುತ್ತದೆ. ಕಮ್ಯೂನಿಸಮ್ಮೂ ಮತ್ತೆ ಮುಂದೆ ಗ್ರಾಹ್ಯವೂ ಆನಂತರ ಅಗ್ರಾಹ್ಯವೂ ಆಗಬಹುದು.
ಈ ರೀತಿಯ ಹಿಂಸೆ ಮತ್ತು ಶೋಷಣೆಗಳೂ ಬೇರೆ ಬೇರೆ ರಾಜ್ಯವ್ಯವಸ್ಥೆಗಳ ಹುಟ್ಟು ಮತ್ತು ಸ್ಥಾಪನೆಗಳ ಸಂದರ್ಭದಲ್ಲೂ ಕಂಡುಬರುತ್ತದೆ. ಹಾಗಾದರೆ ಕಮ್ಯುನಿಸ್ಟರಿಗೆ ಮಾತ್ರ ಇದು ಹೇಗೆ ಅನ್ವಯಿಸೀತು?
ಇದು ಕಮ್ಯೂನಿಸಂಗೆ ಮಾತ್ರವಲ್ಲ ಎಲ್ಲ ವ್ಯವಸ್ಥೆಗೂ ಅನ್ವಯಿಸುವ ಮಾತು. ಹಾಗಾದರೆ ಅದೊಂದು ಅಮೂರ್ತ ಸ್ಥಿತಿಯಾಗುತ್ತೆ. ಅಮೂರ್ತ ಸ್ಥಿತಿಯಲ್ಲಿ ಎಲ್ಲವೂ ಸರಿಯೇ. ಮೂರ್ತವಾಗಿ ಬಂದಾಗ ಅದು ದಿಕ್ಕು ತಿಳಿಯುತ್ತೆ. ಯಾವತ್ತೂ ಒಂದು ವ್ಯವಸ್ಥೆ ಪರಿಪೂರ್ಣ ಅಲ್ಲ. ಒಂದರ ಕೊನೆಯಾದ ನಂತರ ಮತ್ತೊಂದು ಬರುತ್ತೆ. ಕೊನೆಯ ಮಾತಾಗಿ ಇದನ್ನು ಕುರಿತು ಏನನ್ನೂ ಹೇಳಲು ಸಾಧ್ಯವಿಲ್ಲ. ಆ ರೀತಿ ಹೇಳಲೂ ಬಾರದು.
ಗಾಂಧೀಜಿ ಧರ್ಮವನ್ನು ಕೇಂದ್ರವಾಗಿಟ್ಟುಕೊಂಡು, ರಾಮರಾಜ್ಯದ ಕಲ್ಪನೆಯಲ್ಲಿ ರಾಜಕೀಯ ಬದಲಾವಣೆಗೆ ಹೊರಟರು. ಹಾಗೇ ಇವತ್ತಿಗೆ ಧರ್ಮವನ್ನು ಕೇಂದ್ರವಾಗಿಟ್ಟುಕೊಂಡು ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೆ?
ಹಾಗೆ ಹೇಳೋದು ಸಾಧ್ಯವಿಲ್ಲ. ಧರ್ಮದ ಕಲ್ಪನೆ ಏನು? ಯಾವುದು ಧರ್ಮ ಎನ್ನೋದು ಮುಖ್ಯ. ಧರ್ಮದ ಹೆಸರಲ್ಲಿ ಅನೇಕರು ಸೋಮಾರಿಗಳೂ, ವಂಚಕರೂ ಆಗುತ್ತಾರೆ. ಧರ್ಮದ ನಿಜವಾದ ಕಲ್ಪನೆ ಏನಿದೆ? ಒಬ್ಬರಿಗೊಬ್ಬರು ಸರಿಯಾಗಿದ್ದು, ಸಾಮಾಜಿಕವಾಗಿ ಸರಿಯಾಗಿ ಬದುಕೋದು ಧರ್ಮ. “ಧಾರಣಾತ್ ಧರ್ಮ ಇತ್ಯಾಹುಃ”. ಎಲ್ಲರನ್ನೂ ಕೂಡಿಸುವಂಥಾದ್ದು ಧರ್ಮ. ಕೇವಲ ಪೂಜೆ, ಭಜನೆಗಳು ಧರ್ಮ ಆಗಲಾರವು ಅದು ಕಂದಾಚಾರ. ಪುನರುಚ್ಛಾರದ ವಾಗ್ವಿಲಾಸ.
ಹಾಗಿದ್ದರೆ ಒಂದು ಧರ್ಮದ ಜನ ತಮ್ಮ ಧರ್ಮವನ್ನು ಕೇಂದ್ರವಾಗಿಟ್ಟುಕೊಂಡು ಅದರ ಒಳಿತಿಗಾಗಿ ಸಂಘಟಿತರಾಗೋದು ಎಷ್ಟು ಸೂಕ್ತ?
ವಿಭಜನೆ ಮಾಡುವಂಥಾದ್ದು ಧರ್ಮವೇ ಅಲ್ಲ. ಅಂಥಾ ಧರ್ಮ ನಾಶವಾಗಬೇಕು. ನಮ್ಮದೇ ಬೇರೆ, ಅದೇ ನಿಜವಾದದ್ದು. ಇತರರದ್ದು ಅಲ್ಲ. ನಮ್ಮ ದೇವರು ಮಾತ್ರವೇ ದೇವರು ಮುಂತಾಗಿ ಹೇಳೋದು, ನಮ್ಮ ಆಚರಣೆಗಳನ್ನೇ ಅನುಸರಿಸಬೇಕೆನ್ನುವುದು ಸರಿಯಾದ ಧರ್ಮ ಅಲ್ಲ. ಉದಾಹರಣೆಗೆ ಕ್ರಿಶ್ಚಿಯನ್ ಧರ್ಮ ಆಧುನಿಕ ಕಾಲದಲ್ಲಿ ಅನೇಕ ಬದಲಾವಣೆ ವಿರೋಧಗಳಿಗೆ ಒಳಗಾಗಬೇಕಾಗಿ ಬಂದಿತು. ಭಾರತೀಯ ಧರ್ಮದ ಕಲ್ಪನೆಯಿದೆಯಲ್ಲಾ ಅದು ಸರಿಯಾದದ್ದು. ತಾತ್ವಿಕವಾಗಿ ಆಚರಣೆಗೂ ತತ್ವಕ್ಕೂ ಸಂಬಂಧ ತಪ್ಪಿದರೆ ಸಂಕಷ್ಟ.
ನೀವು ಕ್ರಿಶ್ಚಿಯನ್ ಧರ್ಮದಲ್ಲಿ ಗುರುತಿಸಿದ ಹಾಗೇ ಭಾರತೀಯ (ಹಿಂದೂ) ಧರ್ಮದಲ್ಲೂ ಅನೇಕ ಮಿತಿ ದೋಷಗಳಿವೆಯಲ್ಲ? ಜಾತಿ ಸಮಸ್ಯೆ ಮನುಷ್ಯನನ್ನು ಕೀಳಾಗಿ ಕಾಣುವ ಪ್ರವೃತ್ತಿ ಮುಂತಾದವು ಅನೇಕ ಇವೆಯಲ್ಲ?
ಅದು ತಪ್ಪು. ನಮ್ಮ ಧರ್ಮದ ಮೂಲದಲ್ಲಿ ಆ ರೀತಿ ಇಲ್ಲ. ಅದೆಲ್ಲಾ ಇರಬೇಕು ಅಂತ ಅದು ಹೇಳೋದಿಲ್ಲ. ಇಂದಿನ ಧರ್ಮದ ಕಂದಾಚಾರಗಳನ್ನು ನಾವು ನೀವು ವಿರೋಧಿಸಿಯೂ ಬದುಕಲು ಸಾಧ್ಯ.
ಹಾಗಿದ್ದರೆ ಇವತ್ತು ಧರ್ಮವನ್ನು ಮೂಲವಾಗಿಟ್ಟುಕೊಂಡು ಹೊರಟ ರಾಜಕೀಯ ಪ್ರಕ್ರಿಯೆಗಳು ಎಷ್ಟರಮಟ್ಟಿಗೆ ಸೂಕ್ತವಾಗುತ್ತದೆ? ಬಿ.ಜೆ.ಪಿ. ಮುಂತಾದ ಅನೇಕ ಸಂಘಟನೆಗಳ ಮೂಲ ಉದ್ಧೇಶ ಧರ್ಮದ ಪುನರುತ್ಥಾನದ ಹಿನ್ನೆಲೆ ಹೊಂದಿದೆಯಲ್ಲ?
ಇದನ್ನು ತಾತ್ಕಾಲಿಕವಾಗಿ ಮತ್ತು ಸಾರ್ವಕಾಲಿಕವಾಗಿ ಯೋಚನೆ ಮಾಡಬೇಕು. ಸಾರ್ವಕಾಲಿಕವಾಗಿ ಯೋಚಿಸಿದಲ್ಲಿ ಇವು ಸರಿಲ್ಲ. ತಾತ್ಕಾಲಿಕವಾಗಿ ಯೋಚಿಸಿದರೆ ಅನೇಕ ವರ್ಷಗಳಿಂದ ಒಂದು ಧರ್ಮದ ಜನ ಮತ್ತೊಂದು ಧರ್ಮದವರ ಮೇಲೆ ದೌರ್ಜನ್ಯ ನಡೆಸುವದನ್ನ ಸಹಿಸುವುದು ತಪ್ಪಾಗುತ್ತದೆ. ಅದಕ್ಕೆ ವಿರುದ್ದವಾದದ್ದು ಹುಟ್ಟಿಕೊಳ್ಳುತ್ತದೆ. ಅದು ತಾತ್ಕಾಲಿಕವಾಗಿ ಕ್ಷಮ್ಯ, ಸಾರ್ವಕಾಲಿಕವಾಗಿ ತಪ್ಪು. ಸಾರ್ವಕಾಲಿಕವಾದದ್ದನ್ನು ಅದರಲ್ಲೇ ಹುಡುಕಿ ತೆಗೆಯಬೇಕು.
ಈಗಿನ ಮನುಷ್ಯ ನಿಮಗೆ ಹೇಗೆ ಕಾಣುತ್ತಾನೆ? ಹೆಚ್ಚು ನಾಗರೀಕವಾಗಿ ಪ್ರಗತಿಯತ್ತ ಸಾಗುತ್ತಿದ್ದಾನೋ ಅಥವಾ ಅವನ ಅಧಃಪತನವಾಗುತ್ತಿದೆ ಎನ್ನಿಸುತ್ತಿದೆಯೆ?
ಹಿಂದೆ ಒಂಥರಾ ಶಾಂತಿ ಇತ್ತು; ಸಮಾಧಾನ ಇತ್ತು. ಯಾಕೇಂದ್ರೆ ಆಸೆಗಳು ಅಪರಿಮಿತವಾಗಿ ಇರಲಿಲ್ಲ. ನಾನು ಚಿಕ್ಕವನಾಗಿದ್ದಾಗ ಕಾಣುತ್ತಿದ್ದ ಸಾಮರಸ್ಯ ಈಗ ಕಾಣುವುದಿಲ್ಲ. ಈಗ ವ್ಯಕ್ತಿತ್ವ ಮತ್ತು ವ್ಯಕ್ತಿಹಿತ ಬಹಳ ಮುಖ್ಯವಾಗುತ್ತಿದೆ.
ನೀವು ಸಾಹಿತ್ಯದಲ್ಲಿ ಶ್ರೇಷ್ಠತೆ ಕುರಿತು ಅನೇಕ ಸಲ ಹೇಳಿದ್ದೀರಿ. ಹಾಗಿದ್ದರೆ ಈ ಶ್ರೇಷ್ಠತೆಯ ಕಲ್ಪನೆಯೇ ಕಾಲಕಾಲಕ್ಕೂ ಬದಲಾಗೋದಲ್ವೇ? ಪ್ರತಿಯೊಬ್ಬ ಶ್ರೇಷ್ಠ ಲೇಖಕ ಹುಟ್ಟಿದಾಗಲೂ ಅವನು ತನ್ನ ಬರವಣಿಗೆಯ ಮೂಲಕ ಶ್ರೇಷ್ಠತೆಗೆ ಹೊಸ ವ್ಯಾಖ್ಯೆ ಕೊಡಬಹುದಲ್ಲವೆ?
ಸಾಹಿತ್ಯದಲ್ಲಿ ಮುಖ್ಯವಾಗಿ ಅದನ್ನ ಓದಿದ ತಕ್ಷಣ ಇಂಥವನೇ ಬರೆದದ್ದು ಅನ್ನಿಸಬೇಕು. ಅವನ ವ್ಯಕ್ತಿತ್ವ ಅಲ್ಲಿ ಪಡಿಮೂಡಬೇಕು. ಎರಡನೇದಾಗಿ ಆತ ತನ್ನ ಮನಸ್ಸಿನಲ್ಲಿರೋದನ್ನೇ ಅಲ್ಲಿ ಹೇಳುತ್ತಾ ಇದ್ದಾನೆ ಅಂಥ ಅನ್ನಿಸಬೇಕು. ಅವನು ತನ್ನ ಮನಸ್ಸಿನಲ್ಲಿ ಇಲ್ಲದೇ ಇರೋದನ್ನ ಎಂದೂ ಹೇಳಲಾರ ಅನ್ನಿಸಬೇಕು. ಹೇಳೋ ಶಕ್ತಿ ಇರಬೇಕು, ಭಾಷೆ ಮುಂತಾದ ತಂತ್ರದ ಬಳಕೆ ಸಿದ್ಧಿಸಿರಬೇಕು.
ಇವತ್ತಿನ ನಮ್ಮ ಕನ್ನಡ ಸಾಹಿತ್ಯ ಕುರಿತು ನಿಮಗೇನನ್ನಿಸುತ್ತೆ?
ಇತ್ತೀಚೆಗೆ ಬಹಳ ಅಧಃಪತನಕ್ಕೆ ಬರುತ್ತಿದೆ. ಬರೆಯೋರ ಸಂಖ್ಯೆ ಜಾಸ್ತಿಯಾಗಿದೆ ಸರಿ, ಆದರೆ ಚೆನ್ನಾಗಿ ಬರೆಯೋರ ಸಂಖ್ಯೆ ಕಡಿಮೆ ಆಗಿದೆ. ಬಹುಶಃ ಪ್ರಜಾತಂತ್ರ ಹೇಗೆ ವಿಫಲವಾಗುತ್ತಿದೆಯೋ ಹಾಗೆ ಸಾಹಿತ್ಯ ಕೂಡಾ ಕೆಳಕೆಳಕ್ಕೆ ಇಳೀತಾ ಇದೆ.
ಇತ್ತೀಚೆಗೆ ಬೇರೆ ಬೇರೆ ವರ್ಗಗಳ ಲೇಖಕರು ತಮ್ಮ ಅನುಭವಕ್ಕೆ ಮಾತಿನ ರೂಪ ಕೊಡಲು ಆರಂಭಿಸಿದ್ದಾರೆ. ಒಂದಷ್ಟು ದಿನಗಳು ಹಿಂದಿನ ಲೇಖಕರು ಬರೆದ ಹಾಗೆ ಬರೆಯಲು ಸಾಧ್ಯವಾಗದೇ ಹೋದರೂ ಇವರು ಶ್ರೇಷ್ಠ ಸಾಹಿತ್ಯದ ಕಲ್ಪನೆಗೇ ಹೊಸ ವ್ಯಾಖ್ಯೆ ಕೊಡಲು ಸಾಧ್ಯ, ಅಲ್ಲವೆ? ಉದಾಹರಣೆಗೆ: ದೇವನೂರ ಮಹಾದೇವರ ಕುಸುಮಬಾಲೆ ತಗೊಳ್ಳಿ. ಈ ಹಿಂದೆ ನೀವೂ ಕವಿತೆಗಳನ್ನ ಬರೆದಾಗ ಇದೇ ಥರ ಅರ್ಥವಾಗದ್ದು ಎನ್ನೋ ಆರೋಪಕ್ಕೆ ಒಳಗಾಗಿತ್ತು.
ನಿಜ, ಈ ರೀತಿ ಸಾಧ್ಯವಿದೆ. ಆದರೆ ನಾನು ಹಿಂದೆ ಹೇಳಿದ ಹಾಗೆ ದೇವನೂರು ಮಹಾದೇವ ನಿಜವಾಗಿ ತನ್ನ ಮನಸ್ಸಿನಲ್ಲಿರೋದನ್ನ ಬರೀತಾನೆ, ತನ್ನ ವ್ಯಕ್ತಿತ್ವವನ್ನು ತನ್ನ ಬರಹದ ಮೂಲಕ ತೋರಿಸುತ್ತಾನೆ. ತನಗೆ ಪ್ರಿಯವಾದದ್ದನ್ನ ಸಾಮಾಜಿಕವಾಗಿ ನ್ಯಾಯ ಅನ್ನಿಸಿದನ್ನ ಹೇಳುತ್ತಾನೆ ಒಪ್ಪಬೇಕಾದ್ದು. ಆದರೆ ಅಂಥೋರ ಸಂಖ್ಯೆ ಬಹಳ ಕಡಿಮೆ.
ಹಾಗಿದ್ದರೆ ನೀವು ಹೇಳಿದ ಸಾಹಿತ್ಯ ಅಧಃಪತನಕ್ಕೆ ಇಳಿಯುತ್ತದೆ ಎನ್ನುವ ಮಾತನ್ನು ಒಪ್ಪಲು ಸಾಧ್ಯವಿಲ್ಲ.
ಅಲ್ರೀ, ದಶಕಂಠನೂ ಹಾಡಲು ಪ್ರಾರಂಭಿಸಿದರೆ ಏನು ಮಾಡೋದು? ಇದು ಒಂದು ಕಲೆ, ಇದರ ಬಳಕೆ ಸರಿಯಾಗಿ ಸಾಧ್ಯವಾಗಬೇಕು. ಸರಿಯಾದ ಸಿದ್ಧತೆ-ಶಕ್ತಿ ಬೇಕು. ಅಂಥೋರ ಸಂಖ್ಯೆ ಬಹಳ ಕಡಿಮೆ. ಅಲ್ಲಲ್ಲಿ ಕೆಲವರು ಚೆನ್ನಾಗಿ ಬರೆಯುತ್ತಾರೆ. ಅವರು ಬರೆಯಬೇಕು. ಬರೆದದ್ದು ಗಟ್ಟಿಯಾದರೆ ಹೊಸಸೃಷ್ಟಿ. ಇದೂ ಜೀವನದ ಹಾಗೆ.
ಸಾಹಿತ್ಯದಲ್ಲಿ ಕಾವ್ಯವನ್ನ ಬಿಟ್ಟು ಇತರೆ ಪ್ರಕಾರಗಳಲ್ಲಿ ಉಪಭಾಷೆಯ ಬಳಕೆ ಎಷ್ಟು ಸೂಕ್ತ?
ಉಪಭಾಷೆ ಎಷ್ಟು ದೊಡ್ಡದು ಅಂತ ನೋಡಿಕೊಳ್ಳಬೇಕಾಗುತ್ತೆ. ಹೆಚ್ಚು ಜನಕ್ಕೆ ತಲುಪಬೇಕೆಂದು ಬರೆಯೋದು. ನಾನು ನಮ್ಮೂರಿನ ಭಾಷೆಯಲ್ಲಿ ಬರೆದರೆ ಹೆಚ್ಚು ಜನಕ್ಕೆ ಅರ್ಥವಾಗೋಲ್ಲ. ಹೆಚ್ಚು ಜನಗಳಿಗೆ ಅನ್ವಯಿಸೋ ಹಾಗೆ ಬರೀಬೇಕಲ್ವೇ! ಉಪಭಾಷೆಯ ಬಳಕೆಯಿಂದ ಕೆಲವರಿಗೆ ಸಂತೋಷವಾಗುತ್ತೆ. ಅದನ್ನ ಸ್ವಲ್ಪ ಸ್ವಲ್ಪ ಬಳಸಲೂಬಹುದು.
ನವ್ಯ ಲೇಖಕರು ಸ್ತ್ರೀಯನ್ನು ಕಾಮದ ವಸ್ತುವಾಗಿ ಪರಿಗಣಿಸಿದರು ಅನ್ನೋ ಆರೋಪ ಇದೆ. ಇವತ್ತು ಸ್ತ್ರೀವಾದಿಪ್ರಜ್ಞೆ ಹೊತ್ತ ಅನೇಕ ಲೇಖಕಿಯರು ಬರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಮುಖ ನವ್ಯ ಲೇಖಕರಾಗಿ ನಿಮಗೇನನಿಸುತ್ತದೆ?
ಇದೊಂದು ಒಳ್ಳೆಯ ಬೆಳವಣಿಗೆಯೋ ಏನೋ ಗೊತ್ತಿಲ್ಲ. ಕೊನೆಗೆ ನಮ್ಮ ಹೆಂಗಸರೂ ಯುರೋಪಿಯನ್ನರ ಹಾಗಾಗಬೇಕೆ? ಸ್ವಲ್ಪ ನಿಯಮ ನೀತಿ ಬಿಡದ ಹಾಗೆ ನಡೆದುಕೋಬೇಕು. ಅವರು ಮುಂದೆ ಬರಬೇಕಾದ್ದು ನಿಜ. ಇದೊಂದು ಒಳ್ಳೆಯ ಬೆಳವಣಿಗೆ ಅನ್ನಿಸುತ್ತೆ. ಅವರು ನಮ್ಮ ಬದುಕಿಗೆ, ನಮ್ಮ ಪರಂಪರೆಗೆ ಸೇರಿದವರು. ಹಾಗೆ ಬರೆಯಬೇಕು. ಪಾಶ್ಚಾತ್ಯರ ರೀತಿ ಉಡುಪು, ಆಚರಣೆಯ ಅನುಕರಣೆಯಿಂದ ಹೆಂಗಸಾಗಲೀ ಗಂಡಸಾಗಲೀ ಉತ್ತಮ ಲೇಖಕ ಆಗುವುದು ಸಾಧ್ಯವಿಲ್ಲ. ಹಸನಾಗಬೇಕು, ಕೇವಲ ವಿಕಾರವಲ್ಲ, ಕೇವಲ ಅನುಕೃತ ಅಲ್ಲ.
*****
ಟಿಪ್ಪಣಿ
ಗೋಪಾಲಕೃಷ್ಣ ಅಡಿಗ ಕನ್ನಡ ಕಾವ್ಯ ಪಡೆದ ಒಬ್ಬ ವಿಶಿಷ್ಟ ಕವಿ. ತಮ್ಮ ಬರಹಗಳಿಂದ ಕನ್ನಡ ಕಾವ್ಯದ ದಿಕ್ಕನ್ನ ಅಡಿಗರು ಬದಲಾಯಿಸಿದರಾದರೂ, ಅನೇಕ ವಿವಾದಾತ್ಮಕ ನಿಲುವುಗಳನ್ನೂ ಹೊಂದಿದವರು. ತಮ್ಮ ನಂಬಿಕೆ ಮತ್ತು ಕಾವ್ಯದ ಕಾರಣಕ್ಕಾಗಿ ಅಡಿಗರು ಕಟು ಟೀಕೆ, ವಿಮರ್ಶೆಗಳನ್ನು ಎದುರಿಸಿಯೂ ತಮ್ಮತನ ಉಳಿಸಿಕೊಂಡವರು. ಒಡೆಯುತ್ತಿರುವ ವ್ಯವಸ್ಥೆಯನ್ನು ಕುರಿತಾದ ಅವರ ಕಾಳಜಿಯ ಜೊತೆಗೆ ಜೀವನ, ಮನುಷ್ಯ, ಸಮಾಜದ ಬಗ್ಗೆ; ಭೂತ, ವರ್ತಮಾನ, ಭವಿಷ್ಯತ್ತುಗಳ ಬಗ್ಗೆ ಅವರಲ್ಲಿ ಉತ್ತರ ಸಿಕ್ಕಿದೆ ಎನ್ನುವ ಧೋರಣೆ ಕಾಣುವುದಿಲ್ಲ. ಇನ್ನೂ ಹುಡುಕುವ ಹೊಸದನ್ನ ಶೋಧಿಸುವ ಮನೋಭಾವ ಕಂಡುಬರುತ್ತದೆ. ಪ್ರತಿಗಾಮಿ, ಬಲಪಂಥೀಯ ಎನ್ನುವ ಅವರ ಅನೇಕ ನಿಲುವುಗಳಲ್ಲೂ ನಿಜವಾದ ಪ್ರಾಮಾಣಿಕತೆ ಇದೆ. ಈ ಸಂದರ್ಶನದಲ್ಲಿ ಅನೇಕ ಕಡೆ ಅಡಿಗರು ಪರಸ್ಪರ ವೈರುಧ್ಯ ಎನ್ನಿಸುವ ಮಾತುಗಳನ್ನಾಡಿದ್ದರೂ, ಅವುಗಳಲ್ಲಿ ಎದ್ದು ಕಾಣುವುದು ಅವರ ಅಚಲವಾದ ನಂಬಿಕೆಗಳು. ಅಡಿಗರು ಹೆಚ್ಚು ಮಾತಾಡಿರುವುದು ಕಾವ್ಯದ ಮೂಲಕವೇ ಆದರೂ ಅವರ ನಿಲುವುಗಳು ಮತ್ತೆ ಮತ್ತೆ ಚರ್ಚೆ-ವಿವಾದಗಳಿಗೆ ಒಳಗಾಗಿವೆ. ಅಡಿಗರಿಗೆ ಸಮಾಜದ ರಾಜಕೀಯದ ಟೊಳ್ಳು, ಕಪಟ, ಮೋಸಗಳ ಮೇಲೆ ಕ್ರೋಧವಿದೆ. ಬರಿ ಮಾತಿನ ನಿಷ್ಕ್ರಿಯ ಜಡವ್ಯವಸ್ಥೆಯ ಬಗ್ಗೆ ಅತೃಪ್ತಿ ಅಸಮಾಧಾನಗಳಿವೆ. ತಾವು ನಂಬಿದ್ದ ಕನಸು, ಕಂಡಿದ್ದ ಮೌಲ್ಯವ್ಯವಸ್ಥೆಯಿಂದ ದೂರ ಸರಿಯುತ್ತಿರುವ ಸಮಾಜವನ್ನು ಕುರಿತು ಅಸಮಾಧಾನವಿದೆ. ಇವುಗಳೆಲ್ಲದರ ಮಧ್ಯೆ, ಮನುಷ್ಯನ ಬದುಕು ಹಸನಾಗಬೇಕೆನ್ನುವ ತಣ್ಣನೆಯ ಕಾಳಜಿಯೂ ನಿರಂತರವಾಗಿದೆ.
[ಈ ಸಂದರ್ಶನಕ್ಕೆ ನೆರವು ನೀಡಿದವರು : ನ. ರವಿಕುಮಾರ್, ಶ್ರೀನಿವಾಸ್]