ದುಡಿಮೆಯೆಂದರೆ ದುಡ್ಡಷ್ಟೇ ಅಲ್ಲ- ಡಾ. ಭಾರತೀ ದೇವಿ ಪಿ.
“ದಿನದಲ್ಲಿ ಒಂದು ಗಂಟೆ ಮಗುವಿನೊಂದಿಗೆ ಕಳೆದು ಕೆಲಸಕ್ಕೆ ಧಾವಿಸುವುದು ನನಗಿಷ್ಟವಿಲ್ಲ. ಹೀಗೆಂದಲ್ಲಿ ನಾನು ಈ ಕಾಲದ ಮಹಿಳೆ ಅಲ್ಲ ಎಂದು ಅರ್ಥವಲ್ಲ. ನೀವು ಆಧುನಿಕರಾಗಲು ಸಂಪ್ರದಾಯ ಹಾಗೂ ಆದರ್ಶಗಳ ಜೊತೆ ರಾಜಿ ಮಾಡಕೊಳ್ಳಬೇಕಾಗಿಲ್ಲ. ಹೀಗೆ ಓಡುವುದಾದರೆ ನಾನು ಆಕೆಗೆ ಜನ್ಮ ನೀಡಿಯೂ ಏನು ಪ್ರಯೋಜನ? ನೋಡಿ, ಮಗು ಆಟದ ಗೊಂಬೆಯಲ್ಲ. ನಾನು ಆಕೆಯ ಅಮ್ಮನಾಗಿ ಅವಳ ಬಳಿಯಲ್ಲಿ ಇರಲು ಬಯಸುತ್ತೇನೆ. ಆಕೆ ಬೆಳೆಯುತ್ತಿರುವ ಖುಷಿಯನ್ನು ಬಣ್ಣಿಸಲು ಸಾಧ್ಯವಿಲ್ಲ.”
2017ರ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಿಡ್ ಡೇ ಬಾಂಬೆಯವರು ಆಯೋಜಿಸಿದ ಕಾರ್ಯಕ್ರಮದಲ್ಲಿ ನಡೆದ ಸಂದರ್ಶನದಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಪತ್ನಿ ಮೀರಾ ರಜಪೂತ್ ಹೇಳಿದ ಈ ಮಾತುಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. “ನಾನು ಗೃಹಿಣಿ ಮತ್ತು ಈ ಹೆಸರನ್ನು ನಾನು ಖುಷಿಯಿಂದ ಒಪ್ಪಿಕೊಳ್ಳುತ್ತೇನೆ ಹಾಗೂ ಸಬಲೀಕರಣಗೊಂಡ ಮಹಿಳೆಯಾಗಿ ಇದು ನನ್ನ ಆಯ್ಕೆ” ಎಂಬ ಮೀರಾ ಅವರ ಮಾತನ್ನು ಯಾರೂ ತಳ್ಳಿಹಾಕುವುದು ಸಾಧ್ಯವಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಹಾಗಾದರೆ ದುಡಿಯುವ ಮಹಿಳೆಯರು ಮಗುವಿನ ಬಗ್ಗೆ ಆದರ, ಕಾಳಜಿ ಇಲ್ಲದೆ ನಿರ್ದಯವಾಗಿ ತೆರಳುತ್ತಾರೆ ಎಂಬ ಅರ್ಥವನ್ನು ಈ ಮಾತುಗಳು ಧ್ವನಿಸುತ್ತಿವೆಯಲ್ಲ ಎನಿಸುತ್ತದೆ. ಇದು ಅನೇಕರನ್ನು ಕೆರಳಿಸಿದೆ.ಜೊತೆಗೆ ದುಡಿಯುವ ಮಹಿಳೆ ಸುತ್ತ ಹಬ್ಬಿಕೊಂಡಿರುವ ಅನೇಕ ತಪ್ಪು ಕಲ್ಪನೆ, ಆಗ್ರಹ ಮುಂತಾದವುಗಳ ಬಗ್ಗೆ ಚಿಂತಿಸಲು ಇವು ನಮ್ಮನ್ನು ಹಚ್ಚುತ್ತವೆ.
ಮೀರಾ ರಜಪೂತ್ ಏನೋ ಶ್ರೀಮಂತ ಕುಟುಂಬದಮಹಿಳೆ, ಬದುಕು ನಡೆಸಲು ಆಕೆ ಹೊರಗೆ ಹೋಗಿ ಕೆಲಸ ಮಾಡುವ ಅಗತ್ಯವಿಲ್ಲ. ಆದರೆನಮ್ಮ ದೇಶದಲ್ಲಿ ಹೆಚ್ಚಿನ ಮಹಿಳೆಯರು ಈ ಅನುಕೂಲವನ್ನು ಪಡೆದುಬಂದಿಲ್ಲ. ಹೀಗಾಗಿ ಇವರಿಗೆ ಆಯ್ಕೆಗಳಿಲ್ಲ. ಅದರರ್ಥ ಅವರು ಮಗುವನ್ನು ಒಂದು ಗಂಟೆ ಆಡಿಸಿ ಆಟದ ಸಾಮಾನಿನಂತೆ ಎಸೆದು ಬರುತ್ತಾರೆ ಎಂದೂ, ಅವರ ಬದುಕಿನಲ್ಲಿ ಮಗುವಿಗೆ ಪ್ರಮುಖ ಸ್ಥಾನ ಇಲ್ಲ ಎಂದೂ ಅಲ್ಲ. ಸಂಸಾರವನ್ನು ಸರಿದೂಗಿಸಲು ಗಾರ್ಮೆಂಟಿನಲ್ಲಿ ದಿನವೊಂದಕ್ಕೆ ಹತ್ತು ಗಂಟೆ ದುಡಿಯಬೇಕಾದ ಸಂದರ್ಭದಲ್ಲೂ ಮಹಿಳೆ ತನ್ನ ಮಗುವಿಗೆ ಬೇಕಾದ ಎಲ್ಲ ಅನುಕೂಲಗಳನ್ನು ಮಾಡಿಟ್ಟು ಪರಿಚಿತರ ಮನೆಯಲ್ಲೋ, ಸಂಬಂಧಿಕರ ಮನೆಯಲ್ಲೋ ಬಿಟ್ಟು ಹೋಗುವಾಗಲೂ ಅವಳ ಮನಸ್ಸು ಮಗುವಿನೆಡೆಗೆ ತುಡಿಯುತ್ತಿರುತ್ತದೆ. ಈ ತಾಯಿಯ ತುಡಿತವನ್ನು ಬಗ್ಗೆ ನಾವು ಕೇವಲವಾಗಿ ನೋಡುವ ಅಗತ್ಯವಿಲ್ಲ.
ಮೀರಾಳ ಮಾತನ್ನು ದುಡಿಯುವ ಮಹಿಳೆಯರು ಒಪ್ಪುವುದಾದರೆ ಅವರಲ್ಲಿ ಇದು ಅಪರಾಧಿ ಮನೋಭಾವವನ್ನು ಮೂಡಿಸುತ್ತದೆ. ಆದರೆ ಮಹಿಳೆಯನ್ನೂ ಸಮಾನ ಹಕ್ಕುಳ್ಳ ನಾಗರಿಕಳಾಗಿರುವ ಸಂದರ್ಭದಲ್ಲಿ ಮಗುವಿನ ಹೊಣೆಯ ಭಾರವನ್ನು ಅವಳೊಬ್ಬಳ ಹೆಗಲಿಗೆ ಹಾಕಿ ಆಕೆಯಲ್ಲಿ ಅಪರಾಧಿ ಪ್ರಜ್ಞೆಯನ್ನು ಮೂಡಿಸುತ್ತಿರುವ ನಮ್ಮ ವ್ಯವಸ್ಥೆಯ ಬಗ್ಗೆ ನಾವು ವಿಮರ್ಶೆ ಮಾಡಬೇಕಾಗುತ್ತದೆ. ದೊಡ್ಡ ದೊಡ್ಡ ಸ್ಥಾನಗಳನ್ನು ಅಲಂಕರಿಸಿರುವ ಮಹಿಳೆಯರೂ ಒತ್ತಡದ ಸಂದರ್ಭಗಳಲ್ಲಿ ‘ನಾವು ಹಿಂದಿನಂತೆ ಮನೆಯಲ್ಲೇ ಇದ್ದು ಗೃಹಕೃತ್ಯ ನೋಡಿಕೊಂಡು ಇದ್ದಲ್ಲಿ ಎಷ್ಟೋ ನೆಮ್ಮದಿಯಿಂದ ಇರಬಹುದಾಗಿತ್ತು, ಅಲ್ಲೂ ನ್ಯಾಯ ಸಲ್ಲಿಸಲಾಗುತ್ತಿಲ್ಲ’ ಎಂಬ ಅಭಿಪ್ರಾಯಗಳನ್ನು ಉಸುರುವಾಗ ಇವರ ಮನಸ್ಸಿನ ಅಪರಾಧಿ ಪ್ರಜ್ಞೆಯನ್ನು ಸಮಾಜ ಎಷ್ಟು ಆಳವಾಗಿ ಬೇರೂರಿಸಿದೆ ಎಂಬುದು ಅರಿವಿಗೆ ಬರುತ್ತದೆ.
ಜೊತೆಗೆ, ಮಹಿಳೆಯರು ಎಲ್ಲ ಸಂದರ್ಭಗಳಲ್ಲೂ ಅನಿವಾರ್ಯವಾಗಿ ಆರ್ಥಿಕ ಕಾರಣಗಳಿಗಾಗಿಯೇ ದುಡಿಯಲು ಹೊರಬರುತ್ತಾರೆ ಎಂದೂ ಅಲ್ಲ. ಪ್ರತಿಯೊಂದು ವ್ಯಕ್ತಿಯೂ ತನ್ನ ಸಂಪೂರ್ಣ ಸಾಮಥ್ರ್ಯವನ್ನು ಕಂಡುಕೊಳ್ಳುವ, ವಿನಿಯೋಗಿಸುವ ಅವಕಾಶ ಹೊಂದಿರುತ್ತಾನೆ/ಹೊಂದಿರುತ್ತಾಳೆ. ಸಮಾಜಜೀವಿಯಾಗಿ ಪ್ರತಿಯೊಂದು ವ್ಯಕ್ತಿಗೂ ಒಂದು ಸಾಮಾಜಿಕ ಹೊಣೆಗಾರಿಕೆ ಇರುತ್ತದೆ. ಅದನ್ನು ಕುಟುಂಬದ ಚೌಕಟ್ಟಿನಾಚೆಗೂ ನಿಭಾಯಿಸುವ ಅವಕಾಶ ಎಲ್ಲರಿಗೂ ಇರಬೇಕಾಗುತ್ತದೆ. ಅತ್ಯದ್ಭುತವಾದ ನಾಯಕತ್ವ ಗುಣ ಹೊಂದಿರುವ ಮಹಿಳೆ, ಹೆಚ್ಚು ಹೆಚ್ಚನ್ನು ತಿಳಿಯುವ ಹಂಬಲವುಳ್ಳ ಮಹಿಳೆ ನಾಲ್ಕು ಗೋಡೆಗಳೊಳಗೆ ಬಂಧಿಯಾದರೆ ಅದು ಆಕೆಯ ವ್ಯಕ್ತಿತ್ವಕ್ಕೆ ಮಾಡುವ ಅಪಚಾರ, ಸಮಾಜಕ್ಕಾಗುವ ನಷ್ಟ. ಪತಿಯಾಗಲೀ, ತಂದೆಯಾಗಲೀ ಧನಿಕರಾದರೂ ಆಕೆ ತನ್ನತನವನ್ನು ಸ್ಥಾಪಿಸಿಕೊಳ್ಳುವ ತುಡಿತ ಹೊಂದಿರುತ್ತಾಳೆ, ಇದನ್ನು ಕೇವಲ ಹಣದಲ್ಲಿ ಅಳೆಯುವುದು ಸಾಧ್ಯವಿಲ್ಲ. ಎಲ್ಲಕ್ಕೂ ಮುಖ್ಯ, ಆಕೆ ಒಂದು ವ್ಯಕ್ತಿ.
ಮಹಿಳೆಯನ್ನು ವ್ಯಕ್ತಿಯನ್ನಾಗಿ ನೋಡುವುದಕ್ಕೇ ಪುರುಷರಿಗೆ ಮತ್ತು ಪುರುಷ ನೋಟದ ಮಹಿಳೆಯರಿಗೂ ಪೂರ್ವ ಶಿಕ್ಷಣ ಬೇಕು. ಪ್ರತೀ ವ್ಯಕ್ತಿಯ ಆತ್ಮವಿಕಾಸ, ಅರಳುವಿಕೆಗೆ ಆಂತರಿಕ, ಕೌಟುಂಬಿಕ ಮತ್ತು ಸಾಮಾಜಿಕ ಆಯಾಮಗಳು ಇದ್ದೇ ಇರುತ್ತವೆ. ಅಂದಮೇಲೆ ಹೊರಗೆ ದುಡಿಯುವುದು ಎಂದರೆ ಅದು ಕೇವಲ ಮನೆಯಲ್ಲಿರುವ ಆರ್ಥಿಕ ಸಂಕಷ್ಟಕ್ಕಷ್ಟೇ ಅಲ್ಲ. ಬದಲಾಗಿ ಬದುಕಿನ ಅರಿವಿಗಾಗಿಯೂ ಇರುತ್ತದೆ ಅಲ್ಲವೆ.
ಹಾಗಾದರೆ ಅಡುಗೆ, ಮನೆಯ ಸ್ವಚ್ಛತೆ, ಮಗುವಿನ ಪಾಲನೆ ಎಲ್ಲ ಸಾಂಪ್ರದಾಯಿಕ ಹೊಣೆ ನಿಭಾಯಿಸಿದ ಬಳಿಕವೇ ಆಕೆ ತನ್ನ ವ್ಯಕ್ತಿತ್ವದ ಇನ್ನಿತರ ಸಾಧ್ಯತೆಗಳನ್ನು ಶೋಧಿಸಲು ಹೋಗಬೇಕೆಂಬ ಒತ್ತಾಯವನ್ನು ಸಮಾಜ ಹೇರುತ್ತದೆ. “ನೀವು ಕುಟುಂಬ ಹಾಗೂ ವೃತ್ತಿ ಎರಡರ ಹೊಣೆಯನ್ನೂ ಹೇಗೆ ನಿಭಾಯಿಸಿದಿರಿ?”ಎಂಬ ಪ್ರಶ್ನೆಯನ್ನು ಮಹಿಳಾ ಸಾಧಕಿಯರಿಗೆ ಕೇಳಿದಂತೆ ಪುರುಷರ ಬಳಿ ಕೇಳುವುದಿಲ್ಲ. ಅದರರ್ಥ ಮಹಿಳೆಯ ಪ್ರಾಥಮಿಕ ಸಾಧನಾ ಕ್ಷೇತ್ರ ಏನಿದ್ದರೂ ಮನೆಯೇ ಎಂಬ ದೃಷ್ಟಿಕೋನ. ಒಂದು ಕುಟುಂಬದ ಸದಸ್ಯರ ‘ಕಂಫರ್ಟ್ ಫೀಲಿಂಗ್’ ಗಾಗಿ ಮಹಿಳೆ ತನ್ನ ಆಸೆಗಳನ್ನು ಎರಡನೇ ಹಂತಕ್ಕೆ ತಳ್ಳಬೇಕಾಗಿದೆ.
ಅಡುಗೆ, ಪಾಲನೆ, ಶುಚಿತ್ವ ಎಲ್ಲ ಕೆಲಸಗಳೂ ಮನೆಯವರೆಲ್ಲರೂ ಜೊತೆಗೆ ಮಾಡಬೇಕಾದ ಕೆಲಸಗಳು. ಮಗು ಕೇವಲ ಆಕೆಯೊಬ್ಬಳದೇ ಅಲ್ಲ, ದೇಶದ ಆಸ್ತಿ. ಅದು ಆರೋಗ್ಯಕರವಾಗಿ ಬೆಳೆಯುವುದಕ್ಕೆ ಪೂರಕವಾದ ಸಾಮಾಜಿಕ ವ್ಯವಸ್ಥೆ ರೂಪುಗೊಳ್ಳಬೇಕು. ಮಹಿಳೆಯರು ದುಡಿಯುವ ಪರಿಸರದ ಹತ್ತಿರದಲ್ಲೇ ಶಿಶುಪಾಲನಾ ಕೇಂದ್ರಗಳಿರಬೇಕು. ಮುಂದುವರಿದ ಯುರೋಪ್, ಅಮೆರಿಕಾದ ದೇಶಗಳು ಒಟ್ಟು ಸಾಮಾಜಿಕ ವಿನ್ಯಾಸದಲ್ಲೇ ಇಂತಹ ಮಾರ್ಪಾಟುಗಳನ್ನು ಮಾಡಿಕೊಂಡಿವೆ. ಅಲ್ಲಿನ ಮಹಿಳೆಯರು ಬಹಳ ದೊಡ್ಡ ಪ್ರಮಾಣದಲ್ಲಿ ದೇಶದ ಆರ್ಥಿಕತೆಗೆ ತಮ್ಮ ಕೊಡುಗೆ ನೀಡುತ್ತಿದ್ದಾರೆ.
ನಮ್ಮ ಸಮಾಜ ಸಂಸಾರ ಸರಿತೂಗಿಸಲು ಮಹಿಳೆ ಅನಿವಾರ್ಯವಾಗಿ ದುಡಿಯಬೇಕಾದ ಒತ್ತಡವನ್ನೇನೋ ಸೃಜಿಸಿದೆ. ಆದರೆ ಬದಲಾದ ಸಂದರ್ಭದಲ್ಲಿನ ಅಸಮತೋಲನವನ್ನು ಸರಿತೂಗಿಸಲು ಬೇಕಾದ ಇನ್ನಿತರ ಬದಲಾವಣೆಗಳ ಕಡೆಗೆ ಗಮನ ಕೊಡದೇ ಮಹಿಳೆಯರಲ್ಲಿ ಅಪರಾಧಿ ಮನೋಭಾವ ಮೂಡಿಸುವ ಮಟ್ಟದಲ್ಲೇ ನಮ್ಮ ಚಲನೆ ನಿಂತಿದೆ. ಹೆಚ್ಚೆಂದರೆ ಮಗು ನೋಡಿಕೊಳ್ಳುವ ಭಾರವನ್ನು ಅಜ್ಜನಿಗೋ ಅಜ್ಜಿಗೋ ವರ್ಗಾಯಿಸಿ ಅವರ ಸಂಧ್ಯಾಕಾಲದ ನಿರಾಳ ಬದುಕನ್ನು ಕಟ್ಟಿ ಹಾಕಿದೆ.
ನಮ್ಮ ಮೇಲೆ ಹೊರಿಸಿರುವ ಹೆಚ್ಚಿನ ಭಾರವನ್ನು ಅನಿವಾರ್ಯವಾಗಿ ನಾವು ಕೆಳಗಿಳಿಸಿಕೊಳ್ಳಬೇಕಾಗಿ ಬಂದದ್ದಕ್ಕೆ ಅಥವಾ ಇನ್ರ್ನೆಂದು ಹೊಣೆ ಹೊರಬೇಕಾಗಿ ಬಂದದ್ದಕ್ಕೆ ನಾವು ಅಪರಾಧಿ ಪ್ರಜ್ಞೆಯ ಹೆಚ್ಚಿನ ಭಾರವನ್ನು ಹೊತ್ತುಕೊಳ್ಳಬೇಕಾಗಿಲ್ಲ. ಈಗ ನಮ್ಮ ಗಮನ ಹರಿಯಬೇಕಾಗಿರುವುದು ದುಡಿಯುವ ಮಹಿಳೆಗೆ ಪೂರಕವಾಗಿ ಸಮಾಜವನ್ನು ವಿನ್ಯಾಸಗೊಳಿಸುವ ಕಡೆಗೆ. ಮಹಿಳೆಯರ ಉದ್ಯೋಗಸ್ಥಳದ ಬಳಿ ಶಿಶುಪಾಲನಾ ಕೇಂದ್ರಗಳ ಸ್ಥಾಪನೆ, ಮಗು ಎದೆಹಾಲು ಕುಡಿಯುವ ಸಂದರ್ಭದಲ್ಲಿ ಆಕೆಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಮುಂತಾದವುಗಳ ಕಡೆಗೆ ನಮ್ಮ ಗಮನ ಹರಿಯಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳ ಪಾಲನೆ ಪೋಷಣೆಯ ಹೊಣೆ ಮನೆಯ ಎಲ್ಲರದ್ದೂ ಹೌದು ಎಂಬುದನ್ನು ಎಲ್ಲರೂ ಅರಿಯಬೇಕು.
ಮಹಿಳೆ ಮನೆಯಿಂದ ದುಡಿಯಲು ಹೊರಬಿದ್ದ ತಕ್ಷಣ ಇದುವರೆಗೆ ಆಕೆ ಆವರಿಸಿಕೊಂಡಿದ್ದ ಸ್ಪೇಸ್ ಒಂದು ಹಾಗೆಯೇ ಉಳಿಯುತ್ತದೆ. ಅದನ್ನು ಆಕೆಯೊಬ್ಬಳೇ ನಿಭಾಯಿಸುವುದು ಕಷ್ಟವಾಗುತ್ತದೆ. ಇಂದಿನ ವಿಭಕ್ತ ಕುಟುಂಬಗಳಲ್ಲಿ ಕುಟುಂಬ ಎಂದರೆ ಬಹುತೇಕ ಗಂಡ, ಹೆಂಡತಿ, ಮಗು ಇಷ್ಟೇ ಆಗಿರುತ್ತದೆ. ಹೀಗಾಗಿ ಹೆಣ್ಣಿನ ಹೊರಲಾರದ ಹೊರೆಗೆ ಹೆಗಲು ಕೊಡಬೇಕಾದವನು ಆಕೆಯ ಗಂಡ. ಮಗುವಿನ ಪಾಲನೆ, ಮನೆಯ ನಿರ್ವಹಣೆಗೆ ಆತ ಜೊತೆಯಾಗಬೇಕಾಗುತ್ತದೆ. ಹೀಗಾಗದೇ ಇದ್ದಾಗ ಕೆಲಸ ಮಾಡುವ ಕಡೆಗಳಲ್ಲಿ ಆಕೆ ಪದೇ ಪದೇ ಬೇಗ ಹೋಗಲು ಅನುಮತಿ ಕೇಳುವುದು, ರಜೆ ಹಾಕುವುದು, ಬೈಸಿಕೊಳ್ಳುವುದು ಮುಂತಾದವು ಹೆಣ್ಣಿನಲ್ಲಿ ‘ನಾನು ಇಲ್ಲೂ ನ್ಯಾಯ ಸಲ್ಲಿಸುತ್ತಿಲ್ಲ, ಅಲ್ಲೂ ನ್ಯಾಯ ಸಲ್ಲಿಸುತ್ತಿಲ್ಲ’ ಎಂಬ ಬಗೆಯಲ್ಲಿ ಇನ್ನಷ್ಟು ಅಪರಾಧೀ ಮನೋಭಾವದ ಕೂಪಕ್ಕೆ ತಳ್ಳಬಹುದು. ಪತಿ ಆಕೆಗೆ ಸಾಥ್ ನೀಡಿದರಷ್ಟೆ ಇದರಿಂದ ಹೊರಬರಬಹುದು. ಆತ ಕಚೇರಿಯಿಂದ ಬಂದ ಬಳಿಕ ಪ್ರತಿನಿತ್ಯ ಸ್ನೇಹಿತರೊಂದಿಗೆ ಹರಟುವುದೋ, ಕಾಫಿಹೌಸ್ನಲ್ಲಿ ಕಾಲಕಳೆಯುವುದೋ ಸಾಧ್ಯವಾಗದೇ ಹೋಗಬಹುದು, ಅವನೂ ಕೆಲಸಕ್ಕೆ ರಜೆ ಹಾಕಬೇಕಾಗಬಹುದು, ಬೇಗ ಮನೆಗೆ ಧಾವಿಸಬೇಕಾಗಬಹುದು. ಈ ಬದಲಾವಣೆಗೆ ಪುರುಷ ಸಂಗಾತಿಗಳು ತೆರೆದುಕೊಳ್ಳಬೇಕಾಗುತ್ತದೆ.
ಅಡುಗೆ ಎಂದರೆ ಮಹಿಳೆಯರಿಗೆ ಮಾತ್ರ ಸೀಮಿತವಾದ ಕ್ಷೇತ್ರ ಎನ್ನುವ ಅಭಿಪ್ರಾಯ ಇತ್ತೀಚೆಗೆ ಬಹಳ ಮಟ್ಟಿಗೆ ಕಡಿಮೆಯಾಗಿದೆ. ಮನೆಯ ಪುರುಷರೂ ಕೈ ಜೋಡಿಸುವ, ನೇತೃತ್ವ ವಹಿಸುವ ಉದಾಹರಣೆಗಳೂ ನಮ್ಮ ಮುಂದಿವೆ. ಸಂಸಾರದ ರಥವನ್ನು ಇಬ್ಬರೂ ಸೇರಿ ನಿಭಾಯಿಸುವ ಈ ಸುಂದರ ಉದಾಹರಣೆಗಳನ್ನು ಗಮನಿಸಬೇಕು. ಮೀರಾ ಅವರ ಹೇಳಿಕೆಯು, ಹೀಗೆ ಜೊತೆಯಾಗಿ ಸಾಗುವ ಸಂಸಾರಗಳನ್ನು ಕೂಡ ಅವಮಾನಿಸಿದಂತಲ್ಲವೇ.
ಒಂದು ವ್ಯಕ್ತಿಯಾಗಿ ತನ್ನತನವನ್ನು ಶೋಧಿಸಿಕೊಂಡ ಆತ್ಮವಿಶ್ವಾಸ ಹೊಂದಿದ ತಾಯಿ ಮಕ್ಕಳ ಪಾಲಿಗೆ ಅದ್ಭುತವಾದ ಮಾದರಿಯಾಗಬಲ್ಲಳು. ಆಕೆಯ ಆರ್ಥಿಕ ಬಲ, ಧೈರ್ಯ, ಮಕ್ಕಳಿಗೆ ಕೊಡುವ ಗುಣಮಟ್ಟದ ಸಮಯ ಎಲ್ಲವೂ ಮಕ್ಕಳಲ್ಲಿ ಹೊಸಬಗೆಯ ವಿಶ್ವಾಸ ನೀಡಬಲ್ಲವು. ಜೊತೆಗೆ ಇದರಿಂದ ಮನೆಯ ಕೆಲಸಗಳಲ್ಲಿ, ಆರ್ಥಿಕವಾಗಿ ಜೊತೆಯಾಗುವ ಅಪ್ಪ-ಅಮ್ಮ ಮಕ್ಕಳಿಗೆ ಲಿಂಗಸಮಾನತೆಯ ಆದರ್ಶವನ್ನು ತಮ್ಮ ಬದುಕಲ್ಲೇ ತೋರುವಂತಾಗುತ್ತದೆ. ಇದು ಖಂಡಿತವಾಗಿಯೂ ಆರೋಗ್ಯಕರ ಸ್ತ್ರೀಪುರುಷ ಸಂಬಂಧಕ್ಕೆ ತಳಹದಿಯಾಗುತ್ತದೆ. ಜೊತೆಗೆ ಈ ಮಕ್ಕಳು ಇತರರೊಂದಿಗೂ ಚೆನ್ನಾಗಿ ಬೆರೆಯುವ ಗುಣವನ್ನು ಬೆಳೆಸಿಕೊಂಡಿರುವುದು ಸಕಾರಾತ್ಮಕ ಅಂಶವೇ ಅಲ್ಲವೇ?