ಮಳೆ ನೀರಿಗೆ ಬ್ರೇಕು ಹಾಕಲು ಲಕ್ಷ ಕೈಗಳು ಸನ್ನದ್ಧ-ಶ್ರೀಪಡ್ರೆ

 

                              ಪಾನಿ ಫೌಂಡೇಶನ್ ಮೂಲಕ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ನಡೆದಿದ್ದ ಶ್ರಮದಾನ

ಸಬ್ಸಿಡಿಯ ಆಮಿಷವಿಲ್ಲದೆ ಜನ ಕೆಲಸ ಮಾಡಲಾರರು ಎಂದವರಾರು? ಹೀಗೆ ಪ್ರತಿಪಾದಿಸುವ ಯೋಜನಾ ಪಂಡಿತರು ಒಮ್ಮೆ ಮಹಾರಾಷ್ಟ್ರಕ್ಕೆ ಭೇಟಿ ನೀಡಬೇಕು. ಅಲ್ಲಿನ ಈ ಸಂಸ್ಥೆ ಹಳ್ಳಿಹಳ್ಳಿಗೆ ಹೋಗಿ ಜಲಾನಯನ ಅಭಿವೃದ್ಧಿ ಮಾಡಲು ಮನವೊಲಿಸುವುದಿಲ್ಲ. ಮಾಡುವವರಿಗೆ ಚಿಕ್ಕಾಸೂ ಕೊಡುವುದೂ ಇಲ್ಲ. ಆದರೂ ನೋಡಿ ಇವರ ಕಮಾಲ್!

ವ್ಯವಸ್ಥಿತ ರೀತಿಯಲ್ಲಿ ಜ್ಞಾನ ಹಂಚುವುದು, ಜತೆಗೆ ಜಲಕಾಯಕದ ಬಗ್ಗೆ ಪ್ರೇರಣೆ, ಆರೋಗ್ಯಕರ ಪೈಪೋಟಿ ಹುಟ್ಟಿಸುವುದು – ಇದುವೇ ಇವರ ತಂತ್ರ. ಈ ಮಾರ್ಗದ ಮೂಲಕ ಬರವನ್ನೇ ಗೆಲ್ಲುವ ಇವರು ಕನಸು ನೂರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಇಷ್ಟರಲ್ಲೇ ಸಾಕಾರವಾಗಿಬಿಟ್ಟಿದೆ.

ನೀರಿಲ್ಲದೆ ಕಂಗೆಟ್ಟ ರಾಜ್ಯದ 1,300 ಹಳ್ಳಿಗಳು ಈಗ ಮಳೆ ನೀರಿನ ಹರಿವಿಗೆ ತಡೆ ಒಡ್ಡಲು ಮೈಕೊಡವಿ ನಿಂತಿವೆ!  ಏಪ್ರಿಲ್ 8ರಿಂದ ಇಷ್ಟೂ ಹಳ್ಳಿಗಳ ಕಾರ್ಯಪಡೆಗಳು ಹಾರೆ, ಬುಟ್ಟಿಗಳನ್ನೆತ್ತಿ ಶ್ರಮದಾನ ಆರಂಭಿಸಲಿವೆ. ಅದೂ ಏಕಕಾಲದಲ್ಲಿ! ಜನ ಉತ್ಸವೋಪಾದಿಯಲ್ಲಿ ಮನೆಮನೆಗಳಿಂದ ಹೊರಬಂದು ಕೆಲಸ ಮಾಡಲಿದ್ದಾರೆ.

ಕನಿಷ್ಠ 50,000 ಮಂದಿಗೆ ಮೇ 22ರವರೆಗೆ ರಜೆಯಿಲ್ಲ. ಹಾಳು ಹರಟೆಯಿಲ್ಲ. ಅವರಿಗೆ ಒಂದೇ ಗುಂಗು. ಬೀಳುವ ಜಾಗದಲ್ಲೇ ಮಳೆ ನೀರನ್ನು ಬಂಧಿಸಲು ಭೂಮಿಯ ಬಾಯಿ ತೆರೆದಿಡುವುದು. ಎರಡು ತಿಂಗಳಿಂದೀಚೆಗೆ ಬರಪೀಡಿತ ಹದಿಮೂರು ಜಿಲ್ಲೆಗಳ 30 ತಾಲ್ಲೂಕುಗಳ ಮನೆಮನೆಗಳಲ್ಲಿ ಒಂದೇ ಚರ್ಚೆ.  ಬೀಳುವ ಮಳೆಯನ್ನು ಅಲ್ಲಲ್ಲೇ ತಡೆಯುವ ಬಗೆ ಹೇಗೆ?

ಅರ್ಧ ಲಕ್ಷ ಹಳ್ಳಿಗರ ಈ ಸ್ವಯಂಸೇವೆ ಜನಶಕ್ತಿಯ ವಿಶ್ವದಾಖಲೆ ಬರೆಯುವುದು ನಿಶ್ಚಯ. ಜನರಿಗೆ ಹೀಗೆ ನೀರ ನೆಮ್ಮದಿಯ ದಾರಿ ತೋರುತ್ತಿರುವುದು ‘ಪಾನಿ ಫೌಂಡೇಶನ್’. ಇದು ಲಾಭೋದ್ದೇಶರಹಿತ ಸೇವಾಸಂಸ್ಥೆ. ಇದರ ರೂವಾರಿಗಳು ಹಿಂದಿಯ ಜನಪ್ರಿಯ ನಟ ಆಮಿರ್ ಖಾನ್ ಮತ್ತವರ ಪತ್ನಿ ಕಿರಣ್ ರಾವ್.

‘ಬರಮುಕ್ತ ಮಹಾರಾಷ್ಟ್ರ’ವೇ ಅಂತಿಮ ಧ್ಯೇಯ. ಪಾನಿ ಫೌಂಡೇಶನ್ ಈ ಅಭಿಯಾನ ಆರಂಭಿಸಿದ್ದು ಕಳೆದ ವರ್ಷ. ಇಷ್ಟರಲ್ಲಿ ಸಂಸ್ಥೆ ಜಲಸಂರಕ್ಷಣೆಯ ಪ್ರೇರಣೆ ಮತ್ತು ತಿಳಿವಳಿಕೆ ಕೊಡುವ ಎಪ್ಪತ್ತು ಕಿರುಚಿತ್ರ ನಿರ್ಮಿಸಿದೆ. ಪ್ರತಿವರ್ಷ ಆಯ್ದ ಬರಪೀಡಿತ ತಾಲ್ಲೂಕುಗಳಲ್ಲಿ ‘ಸತ್ಯಮೇವ ಜಯತೆ ವಾಟರ್ ಕಪ್’ ಸ್ಪರ್ಧೆ ನಡೆಸುತ್ತಿದೆ. ಗೆದ್ದ ಹಳ್ಳಿಗಳಿಗೆ ನಗದು ಬಹುಮಾನ ಕೊಡುತ್ತಿದೆ. ಪ್ರಥಮ ಬಹುಮಾನ ₹ 50 ಲಕ್ಷ. ದ್ವಿತೀಯ ಮತ್ತು  ತೃತೀಯ ಬಹುಮಾನ ಕ್ರಮವಾಗಿ ₹ 20 ಲಕ್ಷ ಹಾಗೂ ₹ 10 ಲಕ್ಷ.

ಟ್ರಸ್ಟ್ ಹುಟ್ಟುಹಾಕಿ ಇಂಧನ ತುಂಬುವುದರಲ್ಲೇ ಆಮಿರ್ ಖಾನ್ ತೃಪ್ತಿ ಪಟ್ಟಿಲ್ಲ. ಅವರು ಎಂಥವರಿಗೂ ಮನದಟ್ಟು ಮಾಡುವಷ್ಟು ಜಲಾನಯನ ಅಭಿವೃದ್ಧಿ ಎಂದರೇನು, ಅದಕ್ಕಾಗಿ ಏನೇನು ಮಾಡಬೇಕು ಎನ್ನುವ ತಿಳಿವಳಿಕೆ ಹೊಂದಿದ್ದಾರೆ. ತಮ್ಮ ಸಮಯದ ಒತ್ತಡದ ನಡುವೆಯೂ ಈ ಸಂಬಂಧದ ಟಿ.ವಿ ಕಾರ್ಯಕ್ರಮ, ವಿಡಿಯೋ ನಿರ್ಮಾಣಗಳಲ್ಲಿ ಹುಮ್ಮಸ್ಸಿನಿಂದ ಪಾಲ್ಗೊಳ್ಳುತ್ತಿದ್ದಾರೆ.

ಈ ಸಾಲಿನ ವಾಟರ್ ಕಪ್‌ಗಾಗಿ 2024 ಹಳ್ಳಿಗಳು ನೋಂದಾಯಿಸಿದ್ದವು. ನೋಂದಾಯಿಸಿದ  ಪ್ರತಿ ಹಳ್ಳಿ ಜಲಾನಯನ ತರಬೇತಿಗಾಗಿ ಐವರು ಪ್ರತಿನಿಧಿಗಳನ್ನು ಕಳಿಸಬೇಕು. ಅವರಲ್ಲಿ ಇಬ್ಬರು ಹೆಣ್ಣುಮಕ್ಕಳು ಇರಬೇಕು. ಪಾನಿ ಫೌಂಡೇಶನ್ ಇಪ್ಪತ್ತು ಕೇಂದ್ರಗಳಲ್ಲಿ ನಾಲ್ಕು ದಿನಗಳ ಜಲಾನಯನ ತರಬೇತಿ ನಡೆಸುತ್ತದೆ. ತರಬೇತಿ ಪಡೆದ ಹಳ್ಳಿ ಮಾತ್ರ ಸ್ಪರ್ಧೆಯಲ್ಲಿ ಉಳಿಯುತ್ತದೆ. ಈ ಬಾರಿ ಉಳಿದವು 1,300 ಹಳ್ಳಿಗಳು.

‘ಕಳೆದ ವರ್ಷ ಅತ್ಯುತ್ತಮ ಅಂಕ ಪಡೆದ ಇಪ್ಪತ್ತು ಹಳ್ಳಿಗಳಲ್ಲೇ ತರಬೇತಿ ಕೇಂದ್ರ ತೆರೆದಿದ್ದೇವೆ. ಅಲ್ಲಿನ ಅನುಭವಿಗಳಿಂದ ನಲವತ್ತು ಹಳ್ಳಿಗರನ್ನು ಮಾಸ್ಟರ್ ಟ್ರೈನರ್ ಆಗಿ ತಯಾರುಗೊಳಿಸಿದ್ದೇವೆ. ಇವರಾರೂ ಎಂಜಿನಿಯರಿಂಗ್ ಓದಿಲ್ಲ. ಆದರೆ ಎಂಜಿನಿಯರುಗಳಿಗಿಂತ ಚೆನ್ನಾಗಿ ಕೆಲಸ ಮಾಡಬಲ್ಲರು, ಕಲಿಸಬಲ್ಲರು. ತಮ್ಮ ಊರಿನ ಜಲಾನಯನ ಕಾರ್ಯಕ್ರಮದ ಮಾಸ್ಟರ್ ಪ್ಲಾನಿಂಗ್ ಮತ್ತು ಅನುಷ್ಠಾನ ಮಾಡುವವರು ಇವರ ಶಿಷ್ಯರಾಗುವ ಪ್ರತಿ ಹಳ್ಳಿಯ ಐವರು. ಫೆಬ್ರುವರಿಯಲ್ಲಿ ಆರಂಭವಾದ ತರಬೇತಿ ಮುಗಿದು ಈಗ ಮುಂದಿನ ಘಟ್ಟ ತಲುಪಿದ್ದೇವೆ’ ಎಂದು ಪಾನಿ ಫೌಂಡೇಶನ್ನಿನ ಟ್ರಸ್ಟಿಗಳಲ್ಲೊಬ್ಬರಾದ ಡಾ.ಅವಿನಾಶ್ ಪೋಲ್ ತಿಳಿಸುತ್ತಾರೆ.

ಪಾನಿ ಫೌಂಡೇಶನ್ ಹಳ್ಳಿಗರಿಗೆ ನೀರ ಪಾಠ ಕಲಿಸಲು ಅತ್ಯಾಧುನಿಕ ಸಂವಹನ ತಂತ್ರಗಳನ್ನೂ ಬಳಸುತ್ತಿದೆ. ಗೂಗಲ್‌ ಪ್ಲೇಸ್ಟೋರ್‌ನಿಂದ ಸಂಸ್ಥೆಯ ಆ್ಯಪ್ ಇಳಿಸಿಕೊಂಡರೆ ಯಾರೂ ನೆಲಜಲ ಸಂರಕ್ಷಣೆಯ ಸಚಿತ್ರ ಪಾಠ ನೋಡಿ ಕಲಿಯಬಹುದು. ಸ್ಪರ್ಧೆಯ ಅವಧಿಯಲ್ಲಿ ಬೇರೆ ಬೇರೆ ಊರುಗಳಲ್ಲಿ ನಡೆದ ಕೆಲಸಗಳ ಚಿತ್ರಗಳು ಇದೇ ಆ್ಯಪ್ ಮೂಲಕ ಫೌಂಡೇಶನ್ನಿನ ಸರ್ವರ್‌ನಲ್ಲಿ ದಾಖಲಾಗುತ್ತವೆ.

ಹಳ್ಳಿಗರನ್ನು ಈ ಮಹಾಕಾರ್ಯಕ್ಕೆ ಮಾನಸಿಕವಾಗಿ ರೂಪುಗೊಳಿಸಲು ಸಂಸ್ಥೆ ಉಪಗ್ರಹದ ಸಹಾಯ ಪಡೆದು ವಿಡಿಯೋ ಕಾನ್ಫರೆನ್ಸಿಂಗ್ ನಡೆಸುತ್ತಿದೆ. ಡಾ. ಅವಿನಾಶ್ 15 ದಿನಗಳ ಕಾಲ ರಾತ್ರಿ ಒಂದು ಗಂಟೆ ಸಾವಿರಾರು ಹಳ್ಳಿಗರ ಜತೆ ಗ್ರಾಮ ಸಭೆ ನಡೆಸಲಿದ್ದಾರೆ. ಅವರ ನೂರಾರು ಪ್ರಶ್ನೆಗೆ ಉತ್ತರಿಸುತ್ತಾರೆ. ಊರ ಜನ ಒಮ್ಮನಸ್ಸಿನಿಂದ ಹೊರಟರೆ ಹೇಗೆ ಸಂಪನ್ಮೂಲ ಒಗ್ಗೂಡಿಸಲು ಸಾಧ್ಯ ಎನ್ನುವ ಸಲಹೆ ಕೊಡುತ್ತಾರೆ.

ಗ್ರಾಮ ಸಭಾದ ಪ್ರತಿ ಕಂತಿನಲ್ಲೂ ಅವಿನಾಶ್ ಜತೆ ಒಬ್ಬ ಪ್ರಸಿದ್ಧ ಸಿನಿಮಾ ಅಥವಾ ರಂಗಭೂಮಿ ನಟ ಪಾಲ್ಗೊಳ್ಳುತ್ತಾರೆ. ‘ಪ್ರತಿ ರಾತ್ರಿ ಎಂಟು ಗಂಟೆಯಿಂದ ಒಂದು ತಾಸು ನಾವು ಹತ್ತರಿಂದ 25,000 ಜನರೊಡನೆ ಊರ ಅಭಿವೃದ್ಧಿಯ ತೆರೆದ ಸಂವಾದ ನಡೆಸಲಿದ್ದೇವೆ’ ಎನ್ನುತ್ತಾರೆ ಡಾ. ಅವಿನಾಶ್. ಈ ಆನ್‌ಲೈನ್  ಜ್ಞಾನಪ್ರಸಾರಕ್ಕೆ ಟಾಟಾ ಟ್ರಸ್ಟ್ ಮತ್ತು ಯುನೈಟೆಡ್ ಫಿಲ್ಮ್ ಆರ್ಗನೈಸೇಶನ್ ಸಹಕಾರ ಕೊಡುತ್ತಿವೆ. ಹದಿನೈದು ದಿನಗಳ ಆನ್‌ಲೈನ್ ಗ್ರಾಮಸಭೆ ಈಗ ಜಾರಿಯಲ್ಲಿದೆ.

ಹಳ್ಳಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲು ನೂರು ಅಂಕಗಳ ಮಾನದಂಡ ಇದೆ. ಶ್ರಮದಾನಕ್ಕೆ 35, ಜನರ ಸಹಭಾಗಿತ್ವಕ್ಕೆ 10, ವಿನೂತನ ಆಲೋಚನೆಗಳಿಗೆ 5 – ಹೀಗೆ ಪ್ರತ್ಯೇಕ ಅಂಕಗಳಿವೆ. ಒಟ್ಟು ಎಷ್ಟು ಮಳೆ ಸುರಿಯುತ್ತದೆ, ಅದರಲ್ಲಿ ಯಾವ ಬೆಳೆಗೆ ಎಷ್ಟು ನೀರು ಬೇಕು, ಜನ-ಜಾನುವಾರಿಗೆ ಎಷ್ಟು ಬೇಕು ಎಂಬ ನೀರಿನ ಬಜೆಟ್‌ ಸಿದ್ಧಪಡಿಸುವುದನ್ನು ಊರಿನವರು ಕಲಿಯಬೇಕು. ಇದಕ್ಕೂ ಹತ್ತು ಅಂಕಗಳಿವೆ. ಜನರನ್ನು ಜಲಸಾಕ್ಷರರಾಗಿಸಲು ಇವರು ಏನೇನು ಮಾರ್ಗ ಸ್ವೀಕರಿಸಿದ್ದಾರೆ ಎನ್ನುವುದಕ್ಕೆ ಇದು ಒಂದು ಉದಾಹರಣೆ ಮಾತ್ರ.

ಶ್ರಮದಾನಕ್ಕೆ ಇಷ್ಟು ಒತ್ತು ಏಕೆ? ‘ಲೋಗ್ ಜಬ್ ತಕ್ ಇಕಠ್ಠೆ ನಹೀಂ ಹೋತೆ, ತಬ್ ತಕ್ ಕಾಮ್ ಠೀಕ್ ತರಹ್ ಸೆ ನಹೀಂ ಬಢೇಗೀ. ಶ್ರಮದಾನ್ ಕರ್ತೇ ಕರ್ತೇ ಲೋಗ್ ಪಾನಿ, ಮಿಟ್ಟಿ ಔರ್ ಜಂಗಲ್ ಕೆ ಬಾರೆ ಮೇಂ ಸೋಚ್ನಾ ಶುರು ಕರ್ತೇ ಹೈಂ’ ಎಂದು ಡಾ. ಅವಿನಾಶ್ ವಿಶ್ಲೇಷಿಸುತ್ತಾರೆ. “ಮಹಾತ್ಮ ಗಾಂಧಿ ಉಪ್ಪಿನ ಸತ್ಯಾಗ್ರಹ ಆರಂಭಿಸಿದ್ದೂ ಹೀಗೆಯೇ. ಅದು ಸ್ವಾತಂತ್ರ್ಯ ತಂದೀತು ಅಂತ ಅಲ್ಲ. ಜನರನ್ನು ಒಗ್ಗೂಡಿಸಲು ಅದು ಒಂದು ದಾರಿ, ಅಷ್ಟೇ” ಎನ್ನುತ್ತಾರೆ ಅವರು.

ಕಳೆದ ವರ್ಷದ ಸ್ಪರ್ಧೆ ಸತಾರಾ ಜಿಲ್ಲೆಯ ಮೂರು ತಾಲ್ಲೂಕುಗಳಿಗೆ ಸೀಮಿತವಾಗಿತ್ತು. ಒಟ್ಟು 116 ಹಳ್ಳಿಗಳು ಭಾಗವಹಿಸಿದ್ದವು. ಈ ಹಳ್ಳಿಗಳು ನಿರ್ಮಿಸಿದ ಮಳೆನೀರು ತಡೆ ರಚನೆಗಳ ಒಟ್ಟು ಸಾಮರ್ಥ್ಯ ಎಷ್ಟು ಗೊತ್ತೇ? 1,368 ಕೋಟಿ ಲೀಟರ್. ಅಂದರೆ, 13,68,000 ಟ್ಯಾಂಕರ್‌ ನೀರು. ಬೆಲೆ ಕೊಟ್ಟು ಕೊಳ್ಳಲು ಇಷ್ಟು ನೀರಿಗೆ ₹ 272 ಕೋಟಿ ಬೇಕು.

ಕಳೆದ ವರ್ಷದ ಯಶಸ್ಸಿನ ಆಧಾರದ ಮೇಲೆ ಹೇಳುವುದಾದರೆ 2017ರಲ್ಲಿ ಮಹಾರಾಷ್ಟ್ರದ 1,300 ಗತಿಗೆಟ್ಟ ಹಳ್ಳಿಗಳ ಭವಿಷ್ಯವೇ ಬದಲಾಗಲಿದೆ. ಅಲ್ಲಲ್ಲ, ಊರ ಜನ ತಮ್ಮ ನೀರ ಸಂಕಟಕ್ಕೆ ಎಳ್ಳುನೀರು ಬಿಟ್ಟು ಬದುಕು ಹಸನಾಗಿಸಲಿದ್ದಾರೆ.